varthabharthi

ಕರಾವಳಿ

ಸೆ.30ರಂದು ಕಡಲಕೆರೆ ಶಾಲೆ ನೂತನ ಕಟ್ಟಡ ಲೋಕಾರ್ಪಣೆ

ವಾರ್ತಾ ಭಾರತಿ : 23 Sep, 2019

ಮೂಡುಬಿದಿರೆ : ಎಂಆರ್‍ಪಿಎಲ್ ವತಿಯಿಂದ ರೂ. ಒಂದು ಕೋಟಿ ವೆಚ್ಚದಲ್ಲಿ ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಕಡಲಕೆರೆಯಲ್ಲಿರುವ 96 ವರ್ಷಗಳ ಇತಿಹಾಸವುಳ್ಳ  ಸಂತ ಇಗ್ನೇಶಿಯಸ್‍ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ 8,000 ಚದರಡಿಯ ಎಂಟು ತರಗತಿ ಕೋಣೆಗಳ ನೂತನ ಕಟ್ಟಡವನ್ನು ನಿರ್ಮಿಸಲಾಗಿದ್ದು, ಸೆ. 30ರಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಉದ್ಘಾಟಿಸಲಿದ್ದಾರೆ ಎಂದು ಶಾಲೆಯ ಆಡಳಿತವನ್ನು ಹೊಂದಿರುವ ಸೇವಾಂಜಲಿ ಎಜ್ಯುಕೇಶನ್ ಟ್ರಸ್ಟ್‍ನ ಸಂಚಾಲಕ, ಪ್ರೇರಣಾ ಸೇವಾ ಟ್ರಸ್ಟ್ ನ ಅಧ್ಯಕ್ಷ  ಪ್ರೊ.ಎಂ. ವಾಸುದೇವ ಭಟ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸರಕಾರ್ಯವಾಹ ಮುಕುಂದ ಶುಭಾಶಂಸನೆಗೈಯಲಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಸುರೇಶ್‍ಕುಮಾರ್, ಮುಜರಾಯಿ, ಬಂದರು, ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್‍ಕುಮಾರ ಕಟೀಲು, ಶಾಸಕ ಉಮಾನಾಥ ಕೋಟ್ಯಾನ್, ಎಂ.ಆರ್.ಪಿ. ಎಲ್.  ಆಡಳಿತ ನಿರ್ದೇಶಕ ವೆಂಕಟೇಶ ಎಂ., ಹಾಗೂ ಉಪಸ್ಥಿತರಿರುವರು. 

ಲ್ವದೋರ್ ಡಿಸೋಜ ಅವರು ಊರ ಮಕ್ಕಳ ಶಿಕ್ಷಣಕ್ಕಾಗಿ 1923ರಲ್ಲಿ  ತೆರೆದ ಈ ಶಾಲೆ ಸಾಲು ಮಾಸ್ತರರ ಶಾಲೆ ಎಂದೇ ಪ್ರಸಿದ್ಧಿ ಪಡೆದಿದೆ. ಮುಳಿಹುಲ್ಲಿನ ಈ ಶಾಲೆಯು ಇಲ್ಲೇ ಕಲಿತು ಮುಂದೆ ಇಲ್ಲೇ ಶಿಕ್ಷಕರಾಗಿಯೂ ಇದ್ದ  ಮಕ್ಕಳ ಸಾಹಿತಿ ಪಳಕಳ ಸೀತಾರಾಮ ಭಟ್ ಹಾಗೂ ಒಡನಾಡಿಗಳ ಪರಿಶ್ರಮದಿಂದ 1983ರಲ್ಲಿ ಈಗಿರುವ ಹಂಚಿನ ಕಟ್ಟಡ ಎದ್ದುನಿಂತಿತು. ಸದ್ಯ ಪ್ರೇರಣಾ  ಸೇವಾ ಟ್ರಸ್ಟ್ ಕೂq 2017ರ ಎಪ್ರಿಲ್1ರಿಂದ ಶಾಲಾಡಳಿತ ಸೂತ್ರ ಹಿಡಿದಿರುವ ಸೇವಾಂಜಲಿ ಎಜ್ಯುಕೇಶನ್‍ಟ್ರಸ್ಟ್ ನೊಂದಿಗೆ ಪ್ರೇರಣಾ ಟ್ರಸ್ಟ್ ಕೂಡ ಕೈಜೋಡಿಸಿದೆ. ಒಟ್ಟು 1.86 ಎಕ್ರೆಯಷ್ಟು ರಮ್ಯ ಪ್ರಾಕೃತಿಕ ತಾಣದಲ್ಲಿರುವ ಈ ಶಾಲೆಯನ್ನು  ಪ್ರಾಚೀನ ಗುರುಕುಲದ ವೇದ, ವಿಜ್ಞಾನ, ಯೋಗ, ಕೃಷಿ, ಕಲಾ ಕೌಶಲ ಎಂಬ ಪಂಚಮುಖೀ ಶಿಕ್ಷಣ ಪದ್ದತಿಯೊಂದಿಗೆ ವರ್ತಮಾನದ  ಅವಶ್ಯಕತೆಗೆ ತಕ್ಕಂತೆ ಆಧುನಿಕ ಶಿಕ್ಷಣ ಒದಗಿಸುವ ಆದರ್ಶ ಕನ್ನಡ ಮಾಧ್ಯಮ ಶಿಕ್ಷಣ ಕೇಂದ್ರವಾಗಿ ರೂಪಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಸೇವಾಂಜಲಿ ಟ್ರಸ್ಟ್  ಈ ಹಿಂದೆಯೇ ತರಗತಿಗೊಬ್ಬ ಶಿಕ್ಷಕರನ್ನು ನಿಯೋಜಿಸಿದ್ದು ಮುಖ್ಯಶಿಕ್ಷಕ ಸೇರಿ 8 ಮಂದಿ ಇದ್ದಾರೆ. 4 ಶಾಲಾ ವಾಹನಗಳು, ಎಲ್ಲರಿಗೂ ಉಚಿತ ಸಮವಸ್ತ್ರ, ಬರೆಯುವ ಪುಸ್ತಕ, ಆಂಗ್ಲಭಾಷಾ ಶಿಕ್ಷಣ, ಸ್ಪೋಕನ್ ಇಂಗ್ಲಿಷ್, ಕುಡಿಯುವ ನೀರಿಗಾಗಿ ಬೋರ್‍ವೆಲ್, ಹೊಸ ಶೌಚಾಲಯ ನಿರ್ಮಾಣ, ಹೊಸ ಕಂಪ್ಯೂಟರ್‍ಗಳ ಒದಗಣೆ, ಯೋಗ, ಪ್ರಾಣಾಯಾಮ, ಭಗವದ್ಗೀತೆ, ಸಂಸ್ಕೃತ ಸುಭಾಷಿತಗಳ ಬೋಧನೆ, ಕರಾಟೆ, ಸಂಗೀತ, ಕಡಿಮೆ ಸಾಮಥ್ರ್ಯವಿರುವ ವಿದ್ಯಾರ್ಥಿಗಳ ಬೆಳವಣಿಗೆಗಾಗಿ ವಿಶೇಷ ಗಮನ, ಹಬ್ಬಹರಿದಿನಗಳ ಆಚರಣೆ ಅಲ್ಲದೆ,  ಮೂರರಿಂದ ಆರು ವರ್ಷದೊಳಗಿನ ಮಕ್ಕಳಿಗಾಗಿ ಭಾರತೀಯ ಸಂಸ್ಕಾರ ಶಿಕ್ಷಣ ನೀಡಲು ನೂತನ  ಪ್ರೇರಣ ಶಿಶುಮಂದಿರ ಈಗಾಗಲೇ ತೆರೆದಿದ್ದು ನೂತನ ಕಟ್ಟಡ ನಿರ್ಮಾಣ ಅಂತಿಮಹಂತದಲ್ಲಿದೆ ಎರಡು ವರ್ಷಗಳ ಹಿಂದೆ 56 ಮಕ್ಕಳಷ್ಟೇ  ಇದ್ದ ಈ ಶಾಲೆಯಲ್ಲಿ ಸೇವಾಂಜಲಿಯ ಪ್ರಯತ್ನಗಳಿಂದಾಗಿ 160 ವಿದ್ಯಾರ್ಥಿಗಳು, ಶಿಶುಮಂದಿರದಲ್ಲಿ 60 ವಿದ್ಯಾರ್ಥಿಗಳಿದ್ದಾರೆ.

ಸೇವಾಂಜಲಿ ಟ್ರಸ್ಟ್ ಅಧ್ಯಕ್ಷ ಚೇತನ್ ಕುಮಾರ್ ಶೆಟ್ಟಿ, ಮುಖ್ಯ ಶಿಕ್ಷಕ ಬಿ. ಜಯರಾಮ ರಾವ್, ಸೇವಾಂಜಲಿ ಎಜ್ಯುಕೇಶನ್ ಟ್ರಸ್ಟ್  ಉಪಾಧ್ಯಕ್ಷ ರಾಜೇಶ್ ಬಂಗೇರ, ಕೋಶಾಧಿಕಾರಿ ಎಸ್.ಎನ್. ಬೋರ್ಕರ್, ಕಾರ್ಯದರ್ಶಿ ಎಂ. ಶಾಂತರಾಮ ಕುಡ್ವ, ಪ್ರೇರಣಾ ಟ್ರಸ್ಟ್ ಉಪಾಧ್ಯಕ್ಷ ಮೂ.ವೆ. ಚಂದ್ರಹಾಸ, ಕಾರ್ಯದರ್ಶಿ ಲೇಶವ ಹೆಗ್ಡೆ , ಪುರಸಭಾ ಸದಸ್ಯ ಪ್ರಸಾದ್ ಕುಮಾರ್ ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)