varthabharthiಕರಾವಳಿ

`ಗಾಂಧಿ ನಡಿಗೆ' ಸಮಾಲೋಚನಾ ಸಭೆ

ಭಾರತಕ್ಕೆ ಮಹಾತ್ಮ ಗಾಂಧೀಜಿಯಿಂದ ಮಹೋನ್ನತ ಕೊಡುಗೆಯಿದೆ: ಹರೀಶ್ ಕುಮಾರ್

ವಾರ್ತಾ ಭಾರತಿ : 23 Sep, 2019

ಪುತ್ತೂರು: ಭಾರತ ಇಂದು ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಮೂಡಿಬರುವಲ್ಲಿ  ಮಹಾತ್ಮಾ ಗಾಂಧೀಜಿ ಅವರ ಮಹೋನ್ನತ ಕೊಡುಗೆ ಇದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಹೇಳಿದರು.

ಗಾಂಧೀಜಿ ಅವರ 150ನೇ ಜನ್ಮ ವರ್ಷಾಚರಣೆಯ ಪ್ರಯುಕ್ತ ಅ.2ರಂದು ಮಂಗಳೂರಿನಲ್ಲಿ ಕಾಂಗ್ರೆಸ್ ವತಿಯಿಂದ  ನಡೆಯಲಿರುವ `ಗಾಂಧಿ ನಡಿಗೆ' ಪೂರ್ವಬಾವಿಯಾಗಿ ಸೋಮವಾರ ಪುತ್ತೂರು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸ್ವತಂತ್ರ ಭಾರತದ ನಿರ್ಮಾಣದಲ್ಲಿ ಗಾಂಧೀಜಿ ಅವರು ನೀಡಿದ ಕೊಡುಗೆಯನ್ನು ನಾವು ಯಾರೂ ಮರೆಯಲು ಸಾಧ್ಯವಿಲ್ಲ. ಗಾಂಧೀಜಿ ಅವರ ನಿರೀಕ್ಷೆಯನ್ನು ಮೀರಿ ನಾವಿಂದು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ ಎಂದು ಅವರು ಹೇಳಿದರು. 

ಮಂಗಳೂರಿನ ಮಹಾತ್ಮಾ ಗಾಂಧಿ ರಸ್ತೆಯಿಂದ ಗಾಂಧಿ ನಡಿಗೆ ಅಪರಾಹ್ನ 3 ಗಂಟೆಗೆ ಆರಂಭಗೊಳ್ಳಲಿದೆ. 2.30ಕ್ಕೆ ಎಲ್ಲ ಬ್ಲಾಕ್‍ಗಳಿಂದಲೂ ಕಾರ್ಯಕರ್ತರು ಆಗಮಿಸಲಿದ್ದಾರೆ. ಎಲ್ಲರೂ ಬಿಳಿ ಬಟ್ಟೆ ಧರಿಸಲಿದ್ದು, ಎಲ್ಲರ ಕೈಯ್ಯಲ್ಲೂ ಚರಕ ಚಿಹ್ನೆ ಇರುವ ಬಾವುಟ ಕಂಗೊಳಿಸಲಿದೆ. ಶಿಸ್ತು ಬದ್ಧ ನಡಿಗೆಯು ಎಂ.ಜಿ. ರಸ್ತೆ, ಪಿವಿಎಸ್, ಜ್ಯೋತಿ ಅಂಬೇಡ್ಕರ್ ವೃತ್ತದ ಮೂಲಕ ಹಾದು ಹಂಪನಕಟ್ಟೆಯಲ್ಲಿ ಪುರಭವನದ ಅಂಗಳ ತಲುಪಲಿದೆ. ಅಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು.

ಜಿಲ್ಲೆಯ ಪ್ರತೀ ಬ್ಲಾಕ್‍ನಿಂದ ಕನಿಷ್ಠ 250 ಕಾಂಗ್ರೆಸಿಗರು ಬಿಳಿ ಉಡುಪು ಧರಿಸಿ ಗಾಂಧಿ ನಡಿಗೆಯಲ್ಲಿ ಭಾಗವಹಿಸಬೇಕು. ಬೆಳ್ತಂಗಡಿ ತಂಡ ಜಾಥಾದ ಮುಂಚೂಣಿಯಲ್ಲಿ ನಡೆಯಲಿದೆ. ಪುತ್ತೂರು ತಂಡ 4ನೇ ಸಾಲಿನಲ್ಲಿ ನಡೆಯಲಿದೆ. ಕೊನೆಯ ಸಾಲಿನಲ್ಲಿ ಮಂಗಳೂರು ತಂಡ ಇರಲಿದೆ. ಶಿಸ್ತುಬದ್ಧವಾಗಿ ನಡೆಯುವ ತಂಡಗಳಿಗೆ ಬಹುಮಾನ ನೀಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು. 

ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿಶಾಲಾಕ್ಷಿ ಬನ್ನೂರು, ನಗರ ಕಾಂಗ್ರೆಸ್ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ, ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ  ಉಮಾನಾಥ ಶೆಟ್ಟಿ ಪೆರ್ನೆ, ಮುಖಂಡರಾದ ಧನಂಜಯ ಅಡ್ಪಂಗಾಯ, ಎಂ.ಬಿ. ವಿಶ್ವನಾಥ ರೈ, ಜೋಕಿಂ ಡಿಸೋಜ, ಸುಬೋಧ್ ಆಳ್ವಾ, ಯಾಕೂಬ್ ಹಾಜಿ ದರ್ಬೆ ಮತ್ತಿತರರು ಉಪಸ್ಥಿತರಿದ್ದರು. 

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಅಮಳ ರಾಮಚಂದ್ರ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಕೃಷ್ಣ ಪ್ರಸಾದ್ ಆಳ್ವಾ ಕಾರ್ಯಕ್ರಮ ನಿರೂಪಿಸಿದರು. 
 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)