varthabharthi

ರಾಷ್ಟ್ರೀಯ

ಇಂಗ್ಲೀಷ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದ 83ರ ವೃದ್ಧ

ವಾರ್ತಾ ಭಾರತಿ : 23 Sep, 2019

ಹೋಶಿಯಾರ್‌ಪುರ, ಸೆ. 23: ಜಲಾಂಧರ್ ವಿಶ್ವವಿದ್ಯಾನಿಲಯದಿಂದ ಕಳೆದ ತಿಂಗಳು ಇಂಗ್ಲೀಷ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆಯುವ ಮೂಲಕ 83ರ ಹರೆಯದ ವೃದ್ಧರೊಬ್ಬರು ಅಚ್ಚರಿ ಮೂಡಿಸಿದ್ದಾರೆ.

ಹೊಶಿಯಾರ್‌ಪುರದ ನಿವಾಸಿ ಸೋಹನ್ ಸಿಂಗ್ ಗಿಲ್ ಎರಡು ದಶಕಗಳ ಹಿಂದೆ ಹೋಶಿಯಾರ್‌ಪುರ ಜಿಲ್ಲೆಯ ಮಹಿಲ್‌ಪುರದ ಕಾಲೇಜೊಂದರಲ್ಲಿ ಪದವಿ ಪೂರ್ಣಗೊಳಿಸಿದ್ದರು. ಪದವಿ ಪೂರ್ಣಗೊಳಿಸಿದ ಬಳಿಕ ಕಾಲೇಜಿನ ಉಪ ಪ್ರಾಂಶುಪಾಲರ ಸಲಹೆಯಂತೆ ಇಂಗ್ಲೀಷ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಬಯಸಿದ್ದರು. ಆದರೆ, ಅವರು 1958ರಲ್ಲಿ ವಿವಾಹವಾಗಿ ಪತ್ನಿಯೊಂದಿಗೆ ಕೆನ್ಯಾಕ್ಕೆ ತೆರಳಿದ್ದರು.

‘‘ಕೆನ್ಯಾದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಅಲ್ಲಿ ಮಕ್ಕಳಿಗೆ ವಿವಿಧ ವಿಷಯಗಳ ಬಗ್ಗೆ ಪಾಠ ಮಾಡುತ್ತಿದ್ದೆ’’ ಎಂದು ಗಿಲ್ ಹೇಳಿದ್ದಾರೆ. 1991ರಲ್ಲಿ ಗಿಲ್ ಭಾರತಕ್ಕೆ ಹಿಂದಿರುಗಿದ್ದರು. ‘‘ಉಪ ಪ್ರಾಂಶುಪಾಲರ ಸಲಹೆಯಂತೆ 2018ರಲ್ಲಿ ಇಂಗ್ಲೀಷ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ನಿರ್ಧರಿಸಿದೆ’’ ಎಂದು ಅವರು ಹೇಳಿದ್ದಾರೆ. ಕೊನೆಗೂ ಜಲಾಂಧರ್‌ನ ಲವ್ಲಿ ವೃತ್ತಿಪರ ವಿಶ್ವವಿದ್ಯಾನಿಲಯದಿಂದ ಇಂಗ್ಲೀಷ್ ಸ್ನಾತಕೋತ್ತರ ಪದವಿ ಪಡೆಯುವಲ್ಲಿ ಗಿಲ್ ಯಶಸ್ವಿಯಾಗಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)