varthabharthi

ಸಂಪಾದಕೀಯ

ಟ್ರಂಪ್ ಪರ ಪ್ರಚಾರ ಶಿಷ್ಟಾಚಾರಕ್ಕೆ ಅಪಚಾರ

ವಾರ್ತಾ ಭಾರತಿ : 24 Sep, 2019

 ಕರ್ನಾಟಕ ಸೇರಿದಂತೆ ಭಾರತದ ಹಲವು ರಾಜ್ಯಗಳಲ್ಲಿ ನೆರೆ ಹಾವಳಿ, ವರ್ಷ ಧಾರೆಯಿಂದ ಜನ ಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಆ ಜಲಪ್ರಳಯದಲ್ಲಿ ಮನೆ ಮಾರು ಕಳೆದುಕೊಂಡವರು ದುರಂತ ಸಂಭವಿಸಿದ ಎರಡು ತಿಂಗಳ ನಂತರವೂ ಇನ್ನೂ ಯಾವ ಸೌಕರ್ಯವೂ ಇಲ್ಲದ ಕಾಳಜಿ ಕೇಂದ್ರಗಳೆಂಬ ಅವ್ಯವಸ್ಥೆಯ ತಾಣಗಳಲ್ಲಿ ನರಕ ಯಾತನೆ ಅನುಭವಿಸುತ್ತಿದ್ದಾರೆ. ಈ ನೊಂದ ಜೀವಿಗಳನ್ನು ಭೇಟಿ ಮಾಡಿ ಸಂತೈಸಲು ಸಮಯವಿಲ್ಲದ ನಮ್ಮ ಪ್ರಧಾನ ಮಂತ್ರಿ ಅಮೆರಿಕಕ್ಕೆ ಹೋಗಿ ಆ ದೇಶದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಅವರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದಾರೆ. ನರೇಂದ್ರ ಮೋದಿಯವರು ದೇಶದ ಪ್ರಧಾನಿ ಎಂಬುದನ್ನು ಮರೆತು ಇನ್ನೊಂದು ದೇಶದ ಅಧ್ಯಕ್ಷ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡಿರುವ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

ಅಮೆರಿಕದ ಹ್ಯೂಸ್ಟನ್‌ನಲ್ಲಿ ನಡೆದ ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಆ ದೇಶದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಪಾಲ್ಗೊಂಡ ಮೋದಿ ‘‘ಭಾರತದಲ್ಲಿ ಎಲ್ಲವೂ ಸುಭಿಕ್ಷವಾಗಿದೆ, ಎಲ್ಲ ಸರಿಯಾಗಿದೆ’’ ಎಂದು ಹಿಂದಿ, ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ಹೇಳಿದರೆಂದು ವರದಿಯಾಗಿದೆ. ಆದರೆ ಮುಚ್ಚಿಹೋದ ಸಾವಿರಾರು ಉದ್ಯಮಗಳಿಂದ ಬೀದಿಪಾಲಾದ ಲಕ್ಷಾಂತರ ಕಾರ್ಮಿಕರು, ಗುಂಪು ದಾಳಿಗಳಲ್ಲಿ ಕೊಲ್ಲಲ್ಪಟ್ಟ ನೂರಾರು ಅಮಾಯಕರು, ಜಲಪ್ರಳಯದಲ್ಲಿ ಬೀದಿಗೆ ಬಿದ್ದ ಸಾವಿರಾರು ಸಂತ್ರಸ್ತರು, ಪಾತಾಳಕ್ಕೆ ಕುಸಿದು ಹೋದ ಜಿಡಿಪಿ, ಹದಗೆಟ್ಟ ಆರ್ಥಿಕ ವ್ಯವಸ್ಥೆ ಇದನ್ನು ಹೊರತು ಪಡಿಸಿ ಎಲ್ಲವೂ ಸುಖಕರವಾಗಿದೆ ಎಂದು ಅವರು ಹೇಳಿದ್ದರೆ ಒಪ್ಪಿ ಕೊಳ್ಳಬಹುದಾಗಿತ್ತು. ಆದರೆ ಅವರು ಹಾಗೆ ಹೇಳಲಿಲ್ಲ.

ಅಮೆರಿಕದ ಮೋದಿ ಸಭೆಯಲ್ಲಿ ಐವತ್ತು ಸಾವಿರ ಅನಿವಾಸಿ ಭಾರತೀಯರು ಪಾಲ್ಗೊಂಡಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ಮಾಧ್ಯಮಗಳಲ್ಲಿ ವರದಿಯಾಗದ ಇನ್ನೊಂದು ವಿಷಯವೆಂದರೆ ಹ್ಯೂಸ್ಟನ್‌ನಲ್ಲಿ ಮೋದಿ ಭೇಟಿಯನ್ನು ಪ್ರತಿಭಟಿಸಿ ಸಾವಿರಾರು ಅನಿವಾಸಿ ಭಾರತೀಯರು ಕಪ್ಪುಬಾವುಟ ಹಿಡಿದು ‘‘ಗೋ ಬ್ಯಾಕ್ ಮೋದಿ’’ ಎಂದು ಪ್ರದರ್ಶನ ಮಾಡಿದ್ದಾರೆ. ಮೋದಿ ಮತ್ತು ಹಿಟ್ಲರ್ ಫೋಟೊ ಗಳಿರುವ ಫಲಕಗಳನ್ನು ಹಿಡಿದು ಧಿಕ್ಕಾರ ಕೂಗಿದ್ದಾರೆ.

ಅದೇನೇ ಇರಲಿ ಮೋದಿಯವರು ಅಮೆರಿಕದ ಚುನಾವಣೆ ಮುಂದಿರುವಾಗ ಅಲ್ಲಿ ಹೋಗಿ ಟ್ರಂಪ್ ಪರ ಪ್ರಚಾರ ಮಾಡುವ ಅಗತ್ಯವೇನಿತ್ತು? ‘‘ಅಬ್ ಕಿ ಬಾರ್‌ಟ್ರಂಪ್’’ ಎಂದು ಕಿರಿಚಾಡುವ ಅನಿವಾರ್ಯ ಇತ್ತೇ? ಒಂದು ದೇಶದ ಪ್ರಧಾನಿಯಾಗಿ ರಾಜತಾಂತ್ರಿಕ ಮಾತುಕತೆಗಳಿಗಾಗಿ ಅಲ್ಲಿ ಹೋಗಲಿ ಅಭ್ಯಂತರವಿಲ್ಲ. ಎರಡು ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಲಿ ತಕರಾರಿಲ್ಲ. ಆದರೆ ಅಲ್ಲಿ ಹೋಗಿ ಒಂದು ಪಕ್ಷದ ಪರವಾಗಿ, ಒಬ್ಬ ಅಭ್ಯರ್ಥಿಯ(ಟ್ರಂಪ್) ಪರವಾಗಿ ಬಹಿರಂಗವಾಗಿ ಚುನಾವಣಾ ಪ್ರಚಾರ ಮಾಡುವುದು ಆ ದೇಶದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಿದಂತಾಗುತ್ತದೆ. ಇದು ನಮ್ಮ ದೇಶದ ವಿದೇಶಾಂಗ ನೀತಿಯ ಮೂಲಭೂತ ತತ್ವಗಳಿಗೆ ಹಾಗೂ ಶಿಷ್ಟಾಚಾರಕ್ಕೆ ಬಗೆದ ಅಪಚಾರವಾಗಿದೆ.ಇದು ಮುಂದಿನ ದಿನಗಳಲ್ಲಿ ದ್ವಿಪಕ್ಷೀಯ ಸಂಬಂಧದ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತದೆ.

ಪ್ರಧಾನಿ ಮೋದಿಯವರ ಈ ಸಲದ ಅಮೆರಿಕದ ಭೇಟಿ ಮತ್ತು ಟ್ರಂಪ್ ಪರ ಪ್ರಚಾರ ಕೆಟ್ಟ ಪರಂಪರೆಗೆ ನಾಂದಿ ಹಾಡಿದಂತಾಗಿದೆ. ಮುಂದೆ ಭಾರತದ ಸಾರ್ವತ್ರಿಕ ಚುನಾವಣೆಗಳು ನಡೆದಾಗ ಅಮೆರಿಕ ಇಲ್ಲವೇ ಯಾವುದೇ ದೇಶದ ಅಧ್ಯಕ್ಷರಾಗಲಿ, ಪ್ರಧಾನಿಯಾಗಲಿ ಈ ದೇಶಕ್ಕೆ ಬಂದು ಮೋದಿ ಪರ ಇಲ್ಲವೇ ವಿರೋಧವಾಗಿ ಪ್ರಚಾರ ಮಾಡಿದರೆ ನಮ್ಮ ಸರಕಾರ ಅವಕಾಶ ನೀಡುವುದೇ? ಇದು ಇನ್ನೊಂದು ರಾಷ್ಟ್ರದ ಆಂತರಿಕ ವ್ಯವಹಾರಗಳಲ್ಲಿ ಮಾಡಿದ ಹಸ್ತಕ್ಷೇಪವಲ್ಲವೇ? ಅಮೆರಿಕದ ಚುನಾವಣೆಯಲ್ಲಿ ಅಕಸ್ಮಾತ್ ಟ್ರಂಪ್ ಸೋತು ಅವರ ಎದುರಾಳಿ ಪಕ್ಷ ಅಧಿಕಾರಕ್ಕೆ ಬಂದರೆ ಉಭಯ ದೇಶಗಳ ಸಂಬಂಧ ಹೀಗೇ ಅಬಾಧಿತವಾಗಿ ಇರುವುದೇ?

ವಿದೇಶ ಪ್ರವಾಸಕ್ಕೆ ನಮ್ಮ ಪ್ರಧಾನ ಮಂತ್ರಿ ಈ ವಯಸ್ಸಿನಲ್ಲಿ ತೋರುತ್ತಿರುವ ಉತ್ಸಾಹ ಶ್ಲಾಘನೀಯವಾಗಿದೆ. ವಿದೇಶ ಮಂತ್ರಿಯ ಕೆಲಸವನ್ನೂ ತಾವೇ ಮಾಡುವ ಮೋದಿ ‘ಅನಿವಾಸಿ ಪ್ರಧಾನಿ’ ಎಂಬ ಬಿರುದನ್ನು ಪಡೆಯಲು ಅರ್ಹರಾಗಿದ್ದಾರೆ. ವಿದೇಶಕ್ಕೆ ಹೋಗಲಿ ಅಭ್ಯಂತರವಿಲ್ಲ. ಆದರೆ ಅಲ್ಲಿ ಹೋಗಿ ಅಲ್ಲಿನ ಆಂತರಿಕ ವ್ಯವಹಾರಗಳಲ್ಲಿ ಕೈ ಹಾಕುವ ಆತುರ ತೋರಿಸಬಾರದು. ಅವರದೇ ಪಕ್ಷದ ಹಿಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ವಿದೇಶಕ್ಕೆ ಹೋದರೆ ಎಷ್ಟು ಗೌರವಾನ್ವಿತವಾಗಿ ನಡೆದುಕೊಳ್ಳುತ್ತಿದ್ದರೆಂಬುದನ್ನು ಕಂಡುಕೊಂಡು ಅವರನ್ನು ಮಾದರಿಯಾಗಿ ಇಟ್ಟುಕೊಳ್ಳಲಿ. ಹ್ಯೂಸ್ಟನ್‌ನಲ್ಲಿ ಟ್ರಂಪ್ ಜೊತೆಗೆ ಕೈಗೆ ಕೈ ಸೇರಿಸಿ ಓಡಾಡುವುದು, ಅಲ್ಲಿ ಚುನಾವಣಾ ಭಾಷಣ ಮಾಡುವುದು ಪ್ರಧಾನಿಯಾಗಿ ಮೋದಿಯವರಿಗೆ ಶೋಭೆ ತರುವುದಿಲ್ಲ.

ಅಮೆರಿಕದ ಅಧ್ಯಕ್ಷ ಟ್ರಂಪ್ ಏನೆಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಸ್ವತಃ ಬಂಡವಾಳಶಾಹಿ ಆಗಿರುವ ಅವರು ಕೆಲ ತಿಂಗಳ ಹಿಂದೆ ಅಮೆರಿಕದ ಪ್ರಜೆಗಳಲ್ಲದವರು ದೇಶ ಬಿಟ್ಟು ತೊಲಗಿ ಎಂದು ಪರೋಕ್ಷವಾಗಿ ಅನಿವಾಸಿ ಭಾರತೀಯರಿಗೆ ಬೆದರಿಕೆ ಹಾಕಿದ್ದರು.ಈಗ ಅನಿವಾಸಿ ಭಾರತೀಯರ ಓಟಿಗಾಗಿ ಮೋದಿಯವರನ್ನು ಅಲ್ಲಿ ಕರೆಸಿಕೊಂಡು ಈ ಪ್ರಹಸನ ನಡೆಸಿದ್ದಾರೆ.

ಇದು ಜಗತ್ತಿನ ದುರಂತ. ಒಂದು ಕಾಲದಲ್ಲಿ ವಿಶ್ವದಲ್ಲಿ ಚರ್ಚಿಲ್ (ಇಂಗ್ಲೆಂಡ್ ಪ್ರಧಾನಿ), ರೂಸ್‌ವೆಲ್ಟ್ (ಅಮೆರಿಕ ಅಧ್ಯಕ್ಷ), ಸ್ಟಾಲಿನ್ (ರಶ್ಯ ಅಧ್ಯಕ್ಷ), ಅಬ್ದುಲ್ ನಾಸರ್ (ಈಜಿಪ್ಟ್ ಅಧ್ಯಕ್ಷ) ಹಾಗೂ ಪಂಡಿತ್ ಜವಾಹರಲಾಲ್ ನೆಹರೂ (ಭಾರತ ಪ್ರಧಾನಿ) ಅವರಂತಹ ವಿಶ್ವ ನಾಯಕರಿದ್ದರು. ಅಂತಲೇ ಈ ಜಗತ್ತು ಸುರಕ್ಷಿತವಾಗಿ ಉಳಿಯಿತು. ಆದರೆ ಈಗ ಅಮೆರಿಕಕ್ಕೆೆ ಟ್ರಂಪ್, ರಶ್ಯಕ್ಕೆ ಪುಟಿನ್ ಹಾಗೂ ಭಾರತಕ್ಕೆ ಮೋದಿಯಂಥವರ ನಾಯಕತ್ವವಿದೆ. ಮುಂದೇನೋ ಗೊತ್ತಿಲ್ಲ.

ಅದೇನೇ ಇರಲಿ ಮೋದಿಯವರನ್ನು ಭಾರತದ ಜನ ಚುನಾಯಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಜನರಿಂದ ಚುನಾಯಿತರಾದ ವ್ಯಕ್ತಿಯ ಬಗ್ಗೆ ಅಗೌರವದ ಮಾತು ಬೇಡ. ಆದರೆ ಮೋದಿಯವರು ಮುಂದೆ ಇಂತಹ ಲೋಪಗಳಾಗದಂತೆ ತಿದ್ದಿಕೊಳ್ಳಲಿ ಎಂಬುದು ಭಾರತೀಯರ ಆಶಯವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)