varthabharthiನಿಮ್ಮ ಅಂಕಣ

ಐಎಎಸ್, ಐಪಿಎಸ್ ಅಧಿಕಾರಿಗಳ ರಾಜೀನಾಮೆ: ಇದು ವಿವೇಚನೆಯುಳ್ಳ ನಿರ್ಧಾರವೇ?

ವಾರ್ತಾ ಭಾರತಿ : 24 Sep, 2019
ಎ. ಆರ್. ಅನಂತಾಡಿ

ಪ್ರತಿಭಾವಂತ ಯುವಕ ಶಾ ಫೈಝಲ್ ತನ್ನ ದೀರ್ಘಕಾಲದ ಕನಸನ್ನು ನನಸು ಮಾಡಿದ ಖುಷಿಯಲ್ಲಿದ್ದ ನಾಗರಿಕ ಸೇವಾ ಪರೀಕ್ಷೆಯಲ್ಲಿ ತವರು ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದರು. ಆತನನ್ನು ಇಡೀ ದೇಶ ಕೊಂಡಾಡಿತ್ತು. ಜಮ್ಮು-ಕಾಶ್ಮೀರ ರಾಜ್ಯಕ್ಕೆ ಸೇರಿದ ಆತನ ಮೇಲೆ ಇತರ ರಾಜ್ಯದವರಿಗೂ ಅಪಾರ ಭರವಸೆಯಿತ್ತು. ಕಾಶ್ಮೀರದ ಯುವ ಪೀಳಿಗೆ ಶಾ ಫೈಝಲ್‌ರನ್ನು ಒಂದು ರೋಲ್ ಮೋಡಲ್ ಆಗಿ ಸ್ವೀಕರಿಸಿದ್ದಲ್ಲಿ ಮುಂದಿನ ದಿನಗಳಲ್ಲಿ ಹೊಸ ಮನ್ವಂತರ ಆರಂಭವಾಗಬಹುದೆಂಬ ಆಶಾಕಿರಣವೊಂದು ಗೋಚರಿಸತೊಡಗಿತ್ತು. ಉದ್ವೇಗಕಾರಿ ಭಾಷಣದ ಮೂಲಕ ಸದಾ ಸಕಾರಾತ್ಮಕ ಅಂಶಗಳನ್ನು ಯುವಕರಲ್ಲಿ ತುಂಬಲು ಯತ್ನಿಸುತ್ತಿದ್ದ ಪ್ರತ್ಯೇಕತಾವಾದಿ ನಾಯಕರು ಕಾಶ್ಮೀರದ ಮಕ್ಕಳ ಶಿಕ್ಷಣದ ಕಡೆಗೆ ಗಮನ ಹರಿಸಿದ್ದಕ್ಕಿಂತ ಹೆಚ್ಚು ಅವರ ಯೌವನವನ್ನು ದುರುಪಯೋಗ ಪಡಿಸಿಕೊಂಡದ್ದೇ ಹೆಚ್ಚು. ಅವರ ಪ್ರತಿಭಟನೆ-ಬಂದ್‌ಗಳಿಗೆ ಮೊದಲ ಬಲಿಪಶುವಾಗಿದ್ದೇ ಅಲ್ಲಿನ ಶಾಲಾ-ಕಾಲೇಜುಗಳು. ತಿಂಗಳುಗಟ್ಟಲೇ ಶಾಲಾ-ಕಾಲೇಜುಗಳು ಶಿಕ್ಷಣದಿಂದ ವಿಮುಖರನ್ನಾಗಿ ಮಾಡಿಸುವಲ್ಲಿ ಅಲ್ಲಿನ ಪ್ರತ್ಯೇಕತಾವಾದಿಗಳ ಷಡ್ಯಂತ್ರವೂ ಮಹತ್ವದ ಪಾತ್ರವಹಿಸಿದೆ. ಸೈನಿಕರೋ, ಪೊಲೀಸ್ ಅಧಿಕಾರಿಗಳೋ, ಶಿಕ್ಷಕರೋ, ವಕೀಲರೋ, ವಿಜ್ಞಾನಿಗಳೋ ಅಥವಾ ಆಡಳಿತ ಸೇವಾವರ್ಗದ ಅಧಿಕಾರಿಗಳೋ ಆಗಬೇಕಾದ ಪ್ರತಿಭೆಗಳ ಗಮನವನ್ನು ಬೇರೆಡೆ ಸೆಳೆದು ತೀವ್ರಗಾಮಿತ್ವದ ಬಲೆಗೆ ಸಿಲುಕಿ ತಮ್ಮ ಪ್ರತಿಭೆ ಮತ್ತು ಬದುಕು ಎರಡನ್ನೂ ಕಳೆದುಕೊಳ್ಳುವಂತೆ ಅಲ್ಲಿನ ‘(ಅ)ವ್ಯವಸ್ಥೆ’ ಮಾಡುವಲ್ಲಿ ಯಶಸ್ವಿಯಾಯಿತು. ಇಂತಹ ಕವಲುದಾರಿಯಲ್ಲಿ ಶಾ ಫೈಝಲ್ ಐಎಎಸ್ ಅಧಿಕಾರಿಯಾಗಿ ಅದರಲ್ಲೂ ಅತ್ಯುನ್ನತ ರ್ಯಾಂಕ್‌ನೊಂದಿಗೆ ಪ್ರಜ್ವಲಿಸಿದ್ದು ಜಮ್ಮು ಕಾಶ್ಮೀರ ರಾಜ್ಯದೆಡೆಗೆ ದೇಶದ ಜನ ಹೊಸಭರವಸೆಯೊಂದಿಗೆ ದೃಷ್ಟಿ ಹಾಯಿಸಲು ಕಾರಣವಾಯಿತು.

 ಜಮ್ಮು ಕಾಶ್ಮೀರದಲ್ಲಿ ಸದಾ ಶಾಂತಿ ನೆಲೆಸಬೇಕು. ಅಲ್ಲಿನ ಜನರೂ ನಮ್ಮವರೇ. ಅವರೂ ಇತರ ಭಾರತೀಯರಂತೆ ಕನಸಿನ ಗೋಪುರ ಕಟ್ಟಿಕೊಳ್ಳಬೇಕು, ಆ ಗೋಪುರದ ತುದಿ ತಲುಪಬೇಕು ಎಂದು ಆಶಿಸುತ್ತಿದ್ದ ಸಂವೇದನಾಶೀಲ ಭಾರತೀಯರಿಗೆ ಶಾ ಫೈಝಲ್ ಐಎಎಸ್ ಅಧಿಕಾರಿಯಾದದ್ದು, ತಮ್ಮ ಮನೆ ಮಕ್ಕಳೇ ಉನ್ನತ ಸಾಧನೆ ಮಾಡಿದಷ್ಟು ಸಂತಸವಾಗಿತ್ತು. ಆದರೆ ಇದೇ ಶಾ ಫೈಝಲ್ ರಾಜೀನಾಮೆ ನೀಡುವ ನಿರ್ಧಾರ ಕೈಗೊಂಡಾಗ ಆ ಜನರು ನಿರಾಶರಾದದ್ದು, ಸುಳ್ಳಲ್ಲ. ಕೈಗೆ ಸಿಕ್ಕಿದ ಒಂದು ಅಪೂರ್ವ ಅವಕಾಶವನ್ನು ಅಲ್ಪ ಸಮಯದಲ್ಲೇ ಕಳೆದುಕೊಂಡ ಶಾ ಫೈಝಲ್ ಇಂದು ಸರಕಾರದ ಕಟು ಟೀಕಾಕಾರರಾಗಿ ಬದಲಾಗಿದ್ದಾರೆ. ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ಸಂದರ್ಭ ಇಸ್ತಾಂಬುಲ್‌ಗೆ ಪ್ರಯಾಣಿಸಲು ಬಯಸಿದ್ದ ಈ ಮಾಜಿ ಅಧಿಕಾರಿಯನ್ನು ಪೊಲೀಸರು ವಿಮಾನ ನಿಲ್ದಾಣದಲ್ಲೇ ತಡೆದು ವಾಪಾಸ್ ಕಳುಹಿಸಿರುವುದನ್ನು ಗಮನಿಸಬಹುದು. ಇಂದು ರಾಜಕಾರಣಿಯಾಗಿ ಬದಲಾಗಿರುವ ಈ ಮಾಜಿ ಅಧಿಕಾರಿಗೆ ಪೂರ್ಣ ಸ್ವಾತಂತ್ರವಿಲ್ಲ. ಅಲ್ಲಿನ ನಿರ್ಬಂಧಗಳ ನಡುವೆ ಬದುಕಬೇಕಾದ ಸನ್ನಿವೇಶವಿದೆ. ದುಡುಕಿನ ನಿರ್ಧಾರ ಕೈಗೊಳ್ಳದೆ ತನ್ನ ಹುದ್ದೆಯಲ್ಲಿ ಮುಂದುವರಿಯುತ್ತಿದ್ದಲ್ಲಿ ಶಾ ಫೈಝಲ್‌ಗೆ ಜಮ್ಮು ಕಾಶ್ಮೀರದ ಯುವಜನತೆಯನ್ನು ಮನಪರಿವರ್ತಿಸಿ ಒಂದು ಹೊಸ ದಿಕ್ಕಿನ ಕಡೆಗೆ ಸೆಳೆಯುವ ಅವಕಾಶವಿತ್ತು. ತನ್ನ ಇಲಾಖೆಯ ಮೂಲಕ ನವ ನವೀನ ಕಾರ್ಯಯೋಜನೆ ತಂದು ಸುಶಿಕ್ಷಿತ ಯುವ ಸಮುದಾಯವನ್ನು ಕಟ್ಟುವ ಅವಕಾಶವಿತ್ತು. ತನ್ನದೇ ಹಾದಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಒಂದಷ್ಟು ನವಪೀಳಿಗೆಯನ್ನೂ ಅಣಿಗೊಳಿಸುವ ಅವಕಾಶವಿತ್ತು. ಕಲ್ಲಿಗೆ ಕಲ್ಲಿನ ಬದಲು ಲೇಖನಿ ಹಿಡಿಸುವ ಪ್ರಯತ್ನವನ್ನು ಮಾಡಬಹುದಿತ್ತು. ಆದರೆ ಕಠಿಣ ಹಾದಿಯಲ್ಲಿ ಸಾಗಿ ಅಸಾಧ್ಯವಾದುದನ್ನು ಸಾಧಿಸುವ ಬದಲು ಅತಂತ್ರವಾದ ನಿರ್ಧಾರಕ್ಕೆ ಬಂದ ಶಾ ಫೈಝುಲ್ ರಾಜಿನಾಮೆ ಕೊಟ್ಟು ಆತುರದ ನಿರ್ಧಾರ ಕೈಗೊಂಡರು. ನಾವು ಇನ್ನೊಬ್ಬ ಕಾಶ್ಮೀರದ ಯುವಕ- ಯುವತಿ ಐಎಎಸ್ ಟಾಪರ್ ಆಗುವುದನ್ನು ಕಾಣಬೇಕಾದರೆ ಇನ್ನೆಷ್ಟು ದಿನ ಕಾಯಬೇಕೋ.

370ನೇ ವಿಧಿ ರದ್ದುಗೊಂಡದ್ದನ್ನು ವಿರೋಧಿಸಿ ಕೇರಳದ ಕಣ್ಣನ್ ಗೋಪಿನಾಥನ್ ಇತ್ತೀಚೆಗೆ ರಾಜೀನಾಮೆ ನೀಡಿದರು. ಅದೇ ಹಾದಿಯಲ್ಲಿ ಸಾಗಿದ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ರಾಜೀನಾಮೆ ಕೊಟ್ಟು ಹೋರಾಟದ ಮಾತುಗಳನ್ನಾಡಿದ್ದಾರೆ. ದಕ್ಷ ಅಧಿಕಾರಿಯೆಂದೇ ಗುರುತಿಸಲ್ಪಟ್ಟಿದ್ದ ಸಸಿಕಾಂತ್ ಸೆಂಥಿಲ್ ತಾನು ಸೇವೆ ಸಲ್ಲಿಸಿದೆಲ್ಲೆಡೆ ತನ್ನದೇ ಛಾಪು ಮೂಡಿಸಿದವರು. ಮಂಗಳೂರಿನಲ್ಲಿ ಅವರು ಅನೇಕ ಪ್ರಯೋಗಗಳನ್ನು ಮಾಡಿ (ಸ್ಯಾಂಡ್-ಬಝಾರ್, ಸಕ್ರಮ ಗೋ ಸಾಗಾಟಕ್ಕೆ ಆ್ಯಪ್) ಅದು ಪ್ರಾಯೋಗಿಕ ಹಂತದಲ್ಲಿರುವಾಗಲೇ ರಾಜೀನಾಮೆ ನೀಡಿ ಉನ್ನತ ಹುದ್ದೆಯಿಂದ ನಿರ್ಗಮಿಸಿದ್ದಾರೆ. ರಾಜೀನಾಮೆ ಬಳಿಕ ಇವರ ಕುರಿತಂತೆ ನಾನಾ ಟೀಕೆಗಳೂ ವ್ಯಕ್ತವಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ಇದರ ಬಗ್ಗೆ ಕಟುವಾದ ಮಾತುಗಳಿಂದ ಟೀಕಿಸಿ ವ್ಯಾಪಕವಾಗಿ ಸಂದೇಶಗಳು ಹರಿದಾಡಿದೆ. ಇವರ ವಿರುದ್ಧ ವ್ಯಕ್ತವಾದ ಧ್ವನಿಯೆದುರು ಪರವಾದ ಧ್ವನಿ ಕ್ಷೀಣವಾದುದನ್ನು ಗಮನಿಸಬಹುದು. ಸಸಿಕಾಂತ್ ಸೆಂಥಿಲ್ ರಾಜೀನಾಮೆ ನೀಡುವ ನಿರ್ಧಾರ ಕೈಗೊಂಡದ್ದು ಅವರು ಮಾಡಿದ ಮೊದಲನೇ ತಪ್ಪು. ಸಾಕಷ್ಟು ಸೇವಾವಧಿ ಇದ್ದ ಅವರಿಗೆ ಜಿಲ್ಲಾಧಿಕಾರಿ ಹುದ್ದೆ ಜನರ ಏಳಿಗೆಗಾಗಿ ಶ್ರಮಿಸುವ ಒಂದು ಅಪೂರ್ವ ಅವಕಾಶವಾಗಿತ್ತು. ಇದು ಅವರಿಗೆ ತಿಳಿಯದ ವಿಚಾರವೂ ಆಗಿರಲಿಲ್ಲ. ಮುಂದೆ ಕೆಲವೇ ದಿನಗಳಲ್ಲಿ ಬೇರೆ ಹುದ್ದೆಗೆ ಭಡ್ತಿ ಹೊಂದುವ ಸಾಧ್ಯತೆ ಇತ್ತಾದರೂ ಜಿಲ್ಲಾಧಿಕಾರಿ ಸ್ಥಾನದಲ್ಲಿ ಅವರಿಗೆ ಜನರೊಂದಿಗೆ ನೇರ ಸಂಪರ್ಕ ಸಂವಹನ ಮಾಡಲು ಅವಕಾಶವಿತ್ತು. ಹೆಚ್ಚು ಕಡಿಮೆ ಎರಡು ವರ್ಷಗಳ ಅಧಿಕಾರಾವಧಿಯಲ್ಲಿ ಜನಾನುರಾಗಿಯಾಗಿ ಗುರುತಿಸಿಕೊಂಡಿದ್ದರು. ಓರ್ವ ಐಎಎಸ್ ಅಧಿಕಾರಿಗೆ ತಾನು ಈ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕು, ಸಂವಿಧಾನದ ಆಶಯದಂತೆ ಗರಿಷ್ಠ ಕಾರ್ಯ ನಿರ್ವಹಿಸಬೇಕು, ಸರಕಾರದ ಯೋಜನೆಗಳನ್ನು ಆದಷ್ಟು ಪ್ರಾಮಾಣಿಕವಾಗಿ ಅನುಷ್ಠಾನ ಮಾಡಬೇಕು ಎಂಬ ತುಡಿತವಿದ್ದಲ್ಲಿ ಅದಕ್ಕೆ ಪೂರಕವಾಗಿರುವ ಮಹತ್ವದ ಹುದ್ದೆಯೇ ಜಿಲ್ಲಾಧಿಕಾರಿ ಹುದ್ದೆ. ಈಗಿರುವ ಅಥವಾ ಈಗಾಗಲೇ ಆಗಿ ಹೋಗಿರುವ ಓರ್ವ ಉನ್ನತ ಅಧಿಕಾರಿಯನ್ನು ಜನರೇನಾದರು ನೆನಪಿನಲ್ಲಿಟ್ಟುಕೊಂಡಿದ್ದಾರೆ ಅಂದರೆ ಅದು ಅವರು ಜಿಲ್ಲಾಧಿಕಾರಿಯಾಗಿ ಮಾಡಿದ ಕರ್ತವ್ಯದಿಂದ. ಮುಂದೆ ಈ ಹುದ್ದೆಯಿಂದ ಭಡ್ತಿ ಹೊಂದಿ ಉನ್ನತ ಹುದ್ದೆಗೇರಿದಂತೆ ಜನರಿಂದ ದೂರವಾಗುತ್ತಾ ಹೋಗುತ್ತಾರೆ ಬದಲಾಗಿ ಕಾರ್ಯಾಂಗ -ಶಾಸಕಾಂಗಕ್ಕೆ ಹತ್ತಿರವಾಗುತ್ತಾ ಹೋಗುತ್ತಾರೆ.

  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೆಂಥಿಲ್ ಇನ್ನೂ ಮಾಡಬೇಕಾದ ಸಾಕಷ್ಟು ಕೆಲಸಗಳಿದ್ದವು. ಜನಪ್ರತಿನಿಧಿಗಳು ಲಭ್ಯವಾಗದೇ ಇದ್ದಾಗ ಜನರಿಗೆ ಕಾಣುವುದು ಅಧಿಕಾರಿಗಳು. ಸ್ಥಳೀಯ ರಾಜಕಾರಣದಿಂದ ಯಾವುದೇ ಸೌಲಭ್ಯಗಳು ನಿರ್ದಿಷ್ಟ ವರ್ಗಕ್ಕೆ ಲಭ್ಯವಾಗದೇ ಹೋದಾಗ ಆ ವರ್ಗಕ್ಕೆ ಆಶಾಕಿರಣವಾಗಿ ಗೋಚರಿಸುವುದು ತಹಶೀಲ್ದಾರ್‌ಗಳು ಇಲ್ಲವೇ ಜಿಲ್ಲಾಧಿಕಾರಿಗಳು. ಪ್ರಕೃತಿ ವಿಕೋಪಕ್ಕೆ ಸಿಲುಕಿ ಮನೆ-ತೋಟ ಇರುವ ಗದ್ದೆಗಳನ್ನು ಕಳೆದುಕೊಂಡು ಅತಂತ್ರರಾದ ಸಂತ್ರಸ್ತರಿಗೆ ಈ ಜಿಲ್ಲಾಧಿಕಾರಿಯ ಮೇಲೆ ಭಾರೀ ಭರವಸೆಯಿತ್ತು. ಹೊಸ ಸರಕಾರ ರಚನೆಯಾಗಿ ಸಚಿವ ಸಂಪುಟ ವಿಸ್ತರಣೆಯಾಗದ ಸಂದರ್ಭದಲ್ಲೂ ರಾಜ್ಯದ ಜನ ಭರವಸೆಯಿಟ್ಟಿದ್ದು ಅಧಿಕಾರಿಗಳ ಮೇಲೆ. ಹಲವು ಅಧಿಕಾರಿಗಳು ಅಹೋರಾತ್ರಿ ಕಾರ್ಯನಿರ್ವಹಿಸಿ ಜನರ ಸಂಕಷ್ಟಕ್ಕೆ ಸ್ಪಂದಿಸಿದ್ದರು. ಆದರೆ ಪರಿಹಾರ ಕಾರ್ಯ ಇನ್ನೂ ಪ್ರಗತಿಯಲ್ಲಿದ್ದಾಗಲೇ ಸೆಂಥಿಲ್ ಅವರು ರಾಜೀನಾಮೆ ನೀಡಿ ಹೊರ ನಡೆದಿದ್ದಾರೆ. ತಾನು ನಿರಂತರ ಸಂಪರ್ಕ ಹೊಂದಿದ್ದ ಅರೆ ಮಲೆನಾಡು ಪ್ರದೇಶಗಳ ಜನರು ಇವರ ನಿರ್ಧಾರದಿಂದ ಹೆಚ್ಚು ನಿರಾಶೆಗೆ ಒಳಗಾದರು. ಅವರವರ ಊರಿನಲ್ಲಿ ಕೊಚ್ಚಿ ಹೋದ ರಸ್ತೆ-ಸೇತುವೆಗಳ ನಿರ್ಮಾಣ ಕಾರ್ಯಕ್ಕೆ ವೇಗ ವರ್ಧಕವಾಗಿ ಈ ಜಿಲ್ಲಾಧಿಕಾರಿ ಅಗತ್ಯವಿತ್ತು. ಮುರಿದು ಬಿದ್ದು ಎರಡು ಊರನ್ನು ಬೇರ್ಪಡಿಸಿರುವ ಮೂಲರಪಟ್ನದಂತಹ ಸೇತುವೆ ಪುನರ್ ನಿರ್ಮಾಣಕ್ಕೆ ಇವರ ಅಗತ್ಯವಿತ್ತು. ದಮನಿತರು, ಬುಡಕಟ್ಟು ಜನರು ಸರಕಾರದ ಯೋಜನೆಗಳಿಂದ ವಂಚಿತರಾಗದಂತೆ ನೋಡಿಕೊಳ್ಳಲು ಇವರ ಪಾತ್ರ ಅವಶ್ಯಕತೆಯಿತ್ತು.

ಸಂವಿಧಾನದ ಪೂರ್ವ ಪೀಠಿಕೆಯ ಆಶಯದಂತೆ ಕೆಲಸ ಮಾಡುವ ಬದ್ಧತೆಯುಳ್ಳ ಅಧಿಕಾರಿಗಳು ಈ ರೀತಿ ಅರ್ಧದಲ್ಲೇ ನಿರ್ಗಮಿಸುವುದು ದೇಶದ ಪ್ರಜಾಪ್ರಭುತ್ವದ ದೃಷ್ಟಿಯಿಂದ ಒಳ್ಳೆಯ ಲಕ್ಷಣವಲ್ಲ. ಇದು ಜನರು ವ್ಯವಸ್ಥೆಯ ಮೇಲಿಟ್ಟ ನಂಬಿಕೆಯನ್ನು ಮತ್ತಷ್ಟು ಕಡಿಮೆ ಮಾಡುತ್ತದೆಯೇ ಹೊರತು ಬಲಗೊಳಿಸುವುದಿಲ್ಲ. ವ್ಯವಸ್ಥೆಯ ಮೇಲೆ ಆಕ್ರೋಶ ಹೊಂದಿರುವ ಜನರೂ ಕೂಡಾ ಶಾಶ್ವತ ಕಾರ್ಯಾಂಗವಾದ ಅಧಿಕಾರಿ ವರ್ಗದ ಮೇಲೆ ಅಪಾರ ವಿಶ್ವಾಸವಿಟ್ಟಿರುತ್ತಾರೆ. ಒಂದು ಸರಕಾರದ ಅವಧಿ ಐದು ವರುಷಗಳು. ಆದರೆ ಓರ್ವ ಅಧಿಕಾರಿ ಮೂರು ದಶಕಗಳಿಗಿಂತಲೂ ಹೆಚ್ಚು ಜನರ ಸೇವೆಯಲ್ಲಿರುತ್ತಾನೆ. ಇದು ಸಣ್ಣ ಅವಧಿಯೇನಲ್ಲ. ಮನಸ್ಸು ಮಾಡಿದರೆ ಓರ್ವ ಅಧಿಕಾರಿಗೆ ಅಪಾರ ಬದಲಾವಣೆ ತರಲು ಸಾಧ್ಯವಾವಿದೆ. ಇಂತಹ ಸುವರ್ಣಾವಕಾಶವಿದ್ದ ಒಂದು ಹುದ್ದೆಯಿಂದ ಸೆಂಥಿಲ್ ಅವರು ಅಚಾನಕ್ ನಿರ್ಗಮಿಸಿ ನಿರಾಶೆ ಉಂಟು ಮಾಡಿದ್ದಾರೆ. ವ್ಯವಸ್ಥೆಯ ಹೊರಗೆ ಹೋಗಿ ದೂಷಿಸುವುದಕ್ಕಿಂತಲೂ ಒಳಗೆ ಇದ್ದು ಇನ್ನು ಒಂದಷ್ಟು ವರ್ಷ ಬಲಪಡಿಸುವ ಕಾರ್ಯ ಮೂಡಬಹುದಿತ್ತು. ಅವರ ತತ್ವ ಸಿದ್ಧಾಂತಗಳಿಂದ ಕೈಕೆಳಗಿನ ಕೆಲವು ಅಧಿಕಾರಿಗಳಾದರೂ ಪ್ರಭಾವಿತಗೊಂಡು ಅವರು ಕೂಡಾ ಅದೇ ಹಾದಿಯಲ್ಲಿ ಸಾಗುವ ಸಾಧ್ಯತೆಯಿತ್ತು. ಆದರೆ ಅವರ ದುಡುಕಿನ ನಿರ್ಧಾರ ಅಪಾರ ಜನರನ್ನು ಆತಂಕಕ್ಕೆ ತಳ್ಲಿತೇ ವಿನಃ ಯಾರನ್ನೂ ಖುಷಿಪಡಿಸಲಿಲ್ಲ ಎನ್ನುವುದು ದಿಟ.

ಇನ್ನು ಉಡುಪಿ-ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಎದೆಗುಂದದೆ ಕಾರ್ಯನಿರ್ವಸಿದ್ದ ಅಣ್ಣಾಮಲೈಯವರು ಕೂಡಾ ತನ್ನ ಹಲವು ವರ್ಷಗಳ ಸೇವಾವಧಿ ಬಾಕಿ ಇರುವಾಗಲೇ ರಾಜೀನಾಮೆ ಕೊಟ್ಟು ನಿರ್ಗಮಿಸಿದ್ದಾರೆ. ಓರ್ವ ದಕ್ಷ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಜೊತೆ ಸೇರಿ ಸಮನ್ವಯದಿಂದ ಕಾರ್ಯ ನಿರ್ವಹಿಸಿದರೆ ಅಲ್ಲಿ ಆಗುವ ಕಾರ್ಯ ಕರ್ತವ್ಯ ಎನಿಸದೆ ಶ್ರೇಷ್ಠ ಸೇವೆಯಾಗಿ ಬದಲಾಗುತ್ತದೆ. ನೊಂದ, ಅನ್ಯಾಯಕ್ಕೆ ಒಳಗಾದ ಜನರಿಗೆ ನ್ಯಾಯ ಕೊಡಲು ಪೊಲೀಸ್ ಅಧಿಕಾರಿಯಂತಹ ಸಮರ್ಥ ಹುದ್ದೆ ಮತ್ತೊಂದಿಲ್ಲ. ಈ ನಾಡಿನ ಜನ ಅಣ್ಣಾಮಲೈಯವರಲ್ಲಿ ಭಾರೀ ಭರವಸೆಯನ್ನಿಟ್ಟಿದ್ದರು. ಅವರ ಕಾರ್ಯ-ಉಪನ್ಯಾಸಗಳಿಂದಲೂ ಸಾಕಷ್ಟು ಯುವ ಜನರು ಪ್ರಭಾವಿತರಾಗಿದ್ದರು. ಅವರಂತೆಯೇ ಪೊಲೀಸ್ ಅಧಿಕಾರಿಯಾಗಬೇಕೆಂಬ ಕನಸು ಕಂಡಿದ್ದರು. ಜನರಿಗೆ ನ್ಯಾಯ ಕೊಡಲು ಖಾಕಿ ಒಂದು ಉತ್ತಮ ಸಮವಸ್ತ್ರ ಎಂದು ಸಾಕಷ್ಟು ಯುವ ಮನಸ್ಸುಗಳು ಭಾವಿಸಿದ್ದವು. ಆದರೆ ಅವರ ರಾಜೀನಾಮೆ ಅವರ ಪ್ರಯಾಣವನ್ನು ಅರ್ಧದಲ್ಲೇ ಮೊಟಕುಗೊಳಿಸಿದಂತಾಗಿದೆ. ಐಎಎಸ್-ಐಪಿಎಸ್‌ನಂತಹ ಹುದ್ದೆಗೇರುವುದು ಬಲು ಕಠಿಣವಾದ ಹಾದಿ. ಅದನ್ನು ತಲುಪಿದ ಮೇಲೆ ಅಲ್ಲಿಂದ ಅರ್ಧದಲ್ಲೇ ನಿರ್ಗಮಿಸುವುದು ಆ ಹಾದಿಯಲ್ಲೇ ನಂಬಿಕೆಯಿಟ್ಟು, ಇನ್ನಷ್ಟು ನಿರೀಕ್ಷೆಯಲ್ಲಿರುವ ಯುವ ಮನಸ್ಸುಗಳಿಗೆ ನಿರಾಶೆಯುಂಟಾಗಬಹುದಲ್ಲದೆ ಇಂತಹ ನಿರ್ಧಾರಗಳಿಂದ ಅವರ ಮೇಲೆ ನಂಬಿಕೆಯಿಟ್ಟ ಸಾವಿರಾರು ನೊಂದ, ದಮನಿತರಿಗೆ ನಿರಾಶೆ ತರುವುದು ಖಂಡಿತ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)