varthabharthiಅಂತಾರಾಷ್ಟ್ರೀಯ

ವಿಶ್ವಸಂಸ್ಥೆಯಲ್ಲಿ ವಿಶ್ವ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬಾಲಕಿ

ನನ್ನ ಕನಸು, ಬಾಲ್ಯವನ್ನು ಕಸಿದಿದ್ದೀರಿ, ನಿಮಗೆಷ್ಟು ಧೈರ್ಯ?: ಗ್ರೇಟಾ ಥನ್ಬರ್ಗ್

ವಾರ್ತಾ ಭಾರತಿ : 24 Sep, 2019

ನ್ಯೂಯಾರ್ಕ್, ಸೆ.24:  ಸೋಮವಾರ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ 16ರ ಹರೆಯದ ಜಾಗತಿಕ ಹವಾಮಾನ ಬದಲಾವಣೆ ವಿರುದ್ಧದ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್ ಅವರು ಅಲ್ಲಿ ಸೇರಿದ ಜಾಗತಿಕ ನಾಯಕರ ಬಳಿ ಕೇಳಿದ ಒಂದೇ ಒಂದು ಪ್ರಶ್ನೆ - “ಹೌ ಡೇರ್ ಯು?''  (ನಿಮಗೆಷ್ಟು ಧೈರ್ಯ) ಆಗಿತ್ತು.

ವಿಜ್ಞಾನಿಗಳ ಮಾತುಗಳನ್ನು ಆಲಿಸಿ ಎಂದು ಅಮೆರಿಕಾ ಸಂಸದರಿಗೆ ಕರೆ ನೀಡಿದ  ಕೆಲವು ದಿನಗಳ ನಂತರ ಅದೇ ಬೇಡಿಕೆಯನ್ನು ವಿಶ್ವಸಂಸ್ಥೆಯ ಸಭೆಯಲ್ಲೂ ಮುಂದಿಟ್ಟ ಈ ಬಾಲಕಿ,  ಜಾಗತಿಕ ನಾಯಕರು ತನ್ನಂತಹ ಹಿರಿಯ ಹೋರಾಟಗಾರರನ್ನು ಶ್ಲಾಘಿಸುತ್ತಾರಾದರೂ  ಹವಾಮಾನ ಬದಲಾವಣೆ ತಪ್ಪಿಸಲು ಕ್ರಮ ಕೈಗೊಳ್ಳುತ್ತಿಲ್ಲ ಎಂಡು ಟೀಕಿಸಿದರು.  ಜಗತ್ತು ಎಂದಿನಂತೆಯೇ ಮತ್ತೆ ಮುಂದುವರಿದರೆ ತಮ್ಮ ಜನಾಂಗ ದೊಡ್ಡ ವಿನಾಂಶವನ್ನೇ ಎಉದರಿಸಬೇಕಾದೀತು ಎಂದು ಅವರು ಎಚ್ಚರಿಸಿದರು.

‘ಇದೆಲ್ಲಾ ತಪ್ಪು' ಎಂದು ಭಾವನಾತ್ಮಕವಾಗಿ ಮಾತನಾಡಿದ ಗ್ರೇಟಾ ``ನಾನಿಲ್ಲಿ ಇರಬಾರದಾಗಿತ್ತು, ಸಾಗರದಾಚೆ ನನ್ನ ಶಾಲೆಯಲ್ಲಿ ಇರಬೇಕಾಗಿತ್ತು, ಆದರೂ ನೀವೆಲ್ಲಾ ನಮ್ಮಂತಹ ಕಿರಿಯರ ಬಳಿ ಆಶಾವಾದದಿಂದ ಬರುತ್ತೀರಿ ಹೌ ಡೇರ್ ಯು?'' ಎಂದು ಕಂಗಳಲ್ಲಿ ನೀರು ತುಂಬಿಕೊಳ್ಳುತ್ತಾ ಪ್ರಶ್ನಿಸಿದರು.

“ನಿಮ್ಮ ಟೊಳ್ಳು ಮಾತುಗಳಿಂದ ನೀವು ನನ್ನ ಕನಸುಗಳು ಹಾಗೂ ನನ್ನ ಬಾಲ್ಯವನ್ನು ಕಸಿದಿದ್ದೀರಿ, ಜನರು ಕಷ್ಟಪಡುತ್ತಿದ್ದಾರೆ, ಸಾಯುತ್ತಿದ್ದಾರೆ. ಇಡೀ ಪ್ರಾಕೃತಿಕ ವ್ಯವಸ್ಥೆ ಕುಸಿಯುತ್ತಿದೆ. ನಾವು ಸಾಮೂಹಿಕ ಅವನತಿಯ ಆರಂಭದಲ್ಲಿದ್ದೇವೆ  ಹಾಗೂ ನೀವೆಲ್ಲ ಹಣ ಹಾಗೂ  ಖಾಯಂ ಆರ್ಥಿಕ  ಪ್ರಗತಿಯ ಯಕ್ಷ ಕಥೆಗಳ ಬಗ್ಗೆ ಮಾತನಾಡುತ್ತೀರಿ. ಹೌ ಡೇರ್ ಯು?'' ಎಂದು ಪ್ರಶ್ನಿಸಿದರು.

``ನೀವು ನಮ್ಮ ನಿರೀಕ್ಷೆಗಳನ್ನು ಹುಸಿಯಾಗಿಸಿದ್ದೀರಿ. ಆದರೆ ಯುವಜನರು ನಿಮ್ಮ ದ್ರೋಹವನ್ನು ಅರಿತಿದ್ದಾರೆ. ಎಲ್ಲಾ ಭವಿಷ್ಯದ ಜನಾಂಗಗಳ ಕಣ್ಣು ನಿಮ್ಮತ್ತ ನೆಟ್ಟಿದೆ. ಆದರೆ ನೀವು ನಮ್ಮನ್ನು ನಿರಾಸೆಗೊಳಿಸಿದರೆ  ನಾವು ನಿಮ್ಮನ್ನು ಯಾವತ್ತೂ ಕ್ಷಮಿಸುವುದಿಲ್ಲ,'' ಎಂದು ಗ್ರೇಟಾ ಖಾರವಾಗಿ ನುಡಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)