varthabharthiರಾಷ್ಟ್ರೀಯ

ರಾಮಾಯಣ ಕುರಿತ ಪ್ರಶ್ನೆಗೆ ಉತ್ತರಿಸಲು ವಿಫಲವಾಗಿದ್ದ ಸೋನಾಕ್ಷಿಗೆ ‘ಧನಪಶು’ ಎಂದ ಯುಪಿ ಅಧಿಕಾರಿ!

ವಾರ್ತಾ ಭಾರತಿ : 24 Sep, 2019

ಹೊಸದಿಲ್ಲಿ, ಸೆ.24: ಕಳೆದ ವಾರ ಜನಪ್ರಿಯ ಟಿವಿ ರಸ ಪ್ರಶ್ನೆ ಕಾರ್ಯಕ್ರಮ ‘ಕೌನ್ ಬನೇಗಾ ಕರೋಡ್‌ಪತಿ’ಯಲ್ಲಿ ರಾಮಾಯಣಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಲು ವಿಫಲವಾಗಿದ್ದ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ವಿರುದ್ಧ ಉತ್ತರಪ್ರದೇಶದ ಹಿರಿಯ ಅಧಿಕಾರಿಯೊಬ್ಬರು ಕಿಡಿಕಾರಿದ್ದಾರೆ.

ಸೋನಾಕ್ಷಿ ಓರ್ವ ಧನ ಪಶು. ಇಂತಹ ವ್ಯಕ್ತಿಗಳಿಗೆ ಕಲಿಯಲು ಸಮಯವಿಲ್ಲ. ಕೇವಲ ಹಣ ಗಳಿಸಲು ಮಾತ್ರ ಕಾಳಜಿ ವಹಿಸುತ್ತಾರೆ. ತಮಗೋಸ್ಕರ ಹಣ ಖರ್ಚು ಮಾಡುತ್ತಾರೆ. ಇಂತಹವರಿಗೆ ಇತಿಹಾಸ ಹಾಗೂ ದೇವರ ಬಗ್ಗೆ ಜ್ಞಾನವೇ ಇಲ್ಲ. ಕಲಿಯುವ ಸಮಯವೂ ಅವರಿಗಿಲ್ಲ. ಇದಕ್ಕಿಂತ ಬೇಸರದ ವಿಷಯ ಬೇರೊಂದಿಲ್ಲ’’ ಎಂದು ಕಾರ್ಮಿಕ ಕಲ್ಯಾಣ ಮಂಡಳಿಯ ಅಧ್ಯಕ್ಷರಾಗಿರುವ ಸುನೀಲ್ ಭರಾಲಾ ಹೇಳಿದ್ದಾರೆ.

ರಾಜಸ್ಥಾನದ ಸ್ಪರ್ಧಿಗೆ ಬೆಂಬಲವಾಗಿ ಕರೋಡ್‌ಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸೋನಾಕ್ಷಿ ಬಳಿ, ರಾಮಾಯಣದ ಪ್ರಕಾರ, ಹನುಮಾನ್ ಸಂಜೀವನಿ ಗಿಡಮೂಲಿಕೆ ಯಾರಿಗಾಗಿ ತಂದಿದ್ದರು ಎಂದು ಕೇಳಲಾಗಿತ್ತು. ಸುಗ್ರೀವ, ಲಕ್ಷ್ಮಣ, ಸೀತಾ ಹಾಗೂ ರಾಮ ಎಂದು ನಾಲ್ಕು ಆಯ್ಕೆ ನೀಡಲಾಗಿದ್ದರೂ ಸಿನ್ಹಾಗೆ ಉತ್ತರ ಗೊತ್ತಿರಲಿಲ್ಲ. ಅಂತಿಮವಾಗಿ ಅವರು ಲೈಫ್‌ಲೈನ್ ಬಳಸಿಕೊಂಡು ಉತ್ತರ ನೀಡಲು ಯತ್ನಿಸಿದ್ದರು.

ರಾಮಾಯಣ ಕಥೆ ತಿಳಿದುಕೊಳ್ಳದ ಸೋನಾಕ್ಷಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ನೆಟ್ಟಿಗರಿಗೆ ತಿರುಗೇಟು ನೀಡಿರುವ ಸಿನ್ಹಾ, ನನಗೆ ಇತರ ವಿಚಾರಗಳ ಬಗ್ಗೆಯೂ ಹೆಚ್ಚು ಗೊತ್ತಿಲ್ಲ. ಟ್ರೋಲರ್‌ಗಳಿಗೆ ಬೇರೆ ಕೆಲಸವಿಲ್ಲ. ಅವರು ನನ್ನ ಬಗ್ಗೆ ಟೀಕೆ ಮಾಡುತ್ತಾ ಇರುತ್ತಾರೆ ಎಂದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)