varthabharthi

ನಿಮ್ಮ ಅಂಕಣ

ಐತಿಹಾಸಿಕ ಪುಣೆ ಒಪ್ಪಂದಕ್ಕೆ 87 ವರ್ಷಗಳು

ಧಾರ್ಮಿಕ ಸ್ವಾರ್ಥಕ್ಕೆ ಬಲಿಯಾದ ದಮನಿತರ ಹಕ್ಕುಗಳು

ವಾರ್ತಾ ಭಾರತಿ : 24 Sep, 2019
ಡಾ. ಪದ್ಮಶ್ರೀ ಟಿ. ಉಪನ್ಯಾಸಕರು, ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರ ಮಾನಸಗಂಗೋತ್ರಿ, ಮೈಸೂರು

ಸುದೀರ್ಘ ಚರ್ಚೆಯ ನಂತರವೂ ಪಟ್ಟುಬಿಡದ ಗಾಂಧಿ ಅವರು, ಅಂಬೇಡ್ಕರ್‌ರ ಸಾಮಾಜಿಕ ನ್ಯಾಯದ ಮಹಾನ್ ಉದ್ದೇಶವನ್ನು ಸೋಲಿಸಿ ಸೆಪ್ಟಂಬರ್ 24, 1932ರ ಸಂಜೆ 5 ಗಂಟೆಗೆ ಸರಿಯಾಗಿ ಪೂನಾ ಒಪ್ಪಂದಕ್ಕೆ ಒತ್ತಾಯಪೂರ್ವಕವಾಗಿ ಸಹಿ ಹಾಕಿಸುವ ಮೂಲಕ ದಮನಿತರ ಹಕ್ಕುಗಳನ್ನು ತನ್ನ ಧಾರ್ಮಿಕ ಸ್ವಾರ್ಥಕ್ಕೆ ಬಲಿಹಾಕಿದರು. ನಂತರ ಸೆಪ್ಟಂಬರ್ 26, 1932 ರಂದು ವಿಧಿಯಿಲ್ಲದೆ ಈ ಅನ್ಯಾಯದ ನಿರ್ಧಾರಕ್ಕೆ ಬ್ರಿಟಿಷ್ ಸರಕಾರ ಒಪ್ಪಿಗೆ ಸೂಚಿಸಬೇಕಾಯಿತು. ಇದು ಎಂದೂ ಕ್ಷಮಿಸಲಾರದ ಕರಾಳ ದಿನವಾಗಿ ಚರಿತ್ರೆಯಲ್ಲಿ ದಾಖಲಾಗಿ ಉಳಿಯಿತು.

24ನೇ ಸೆಪ್ಟಂಬರ್ 1932

ಎಂಬತ್ತೇಳು ವರ್ಷಗಳ ಹಿಂದೆ ನಡೆದ ಚಾರಿತ್ರಿಕ ಮೋಸದ ಕಥೆ. ಅದು ಭಾರತದ ಪರಿಶಿಷ್ಟರ ಪಾಲಿಗೆ ಮರೆಯಲಾಗದ ಕರಾಳ ದಿನ. ಸಾವಿರಾರು ವರುಷಗಳ ಅನ್ಯಾಯದ ಶ್ರೇಣೀಕೃತ ಜಾತಿ ಶೋಷಣೆಗೆ ಒಳಗಾದ ಪರಿಶಿಷ್ಟರ ಬದುಕಿನಲ್ಲಿ ಆಶಾಜ್ಯೋತಿಯಾಗಿ ಬಂದವರು ಡಾ. ಬಿ. ಆರ್. ಅಂಬೇಡ್ಕರ್ (14.04.1891 - 06.12.1956) ಅವರು. ಇವರನ್ನು ಸಮಸ್ತ ಶೋಷಿತ ವರ್ಗ ಅತ್ಯಂತ ಗೌರವ ಪೂರ್ವಕವಾಗಿ ಬಾಬಾಸಾಹೇಬ ಎಂಬುದಾಗಿ ಕರೆಯುತ್ತದೆ. ಅಂಬೇಡ್ಕರರು ತಮ್ಮ 65 ವರ್ಷಗಳ ಜೀವಿತದ ಬದುಕಿನಲ್ಲಿ ಎಂದೂ ಸ್ವ-ಹಿತಾಸಕ್ತಿಗಾಗಿ ಬಾಳಿದವರಲ್ಲ, ಬದಲಿಗೆ ಸಮಸ್ತ ದಮನಿತ ಜನರ ಬಂಧ ವಿಮೋಚನೆಗೆ ತಮ್ಮ ಜೀವನವನ್ನು ಸಮರ್ಪಿಸಿದವರು. ಶೋಷಿತರ ಏಳಿಗೆಗಾಗಿ ದಣಿವರಿಯದೆ ಹೋರಾಡಿದ ಅಂಬೇಡ್ಕರ್ ಸಾವಿರಾರು ವರ್ಷಗಳ ಚಾರಿತ್ರಿಕ ಅನ್ಯಾಯದ ವಸ್ತುನಿಷ್ಠ ದಾಖಲೆಗಳೊಂದಿಗೆ ಬ್ರಿಟಿಷರ ಮುಂದೆ ನ್ಯಾಯಕ್ಕಾಗಿ ಆಗ್ರಹಿಸಿ ನಿಂತರು. ಸೆಪ್ಟಂಬರ್ 9, 1930ರಂದು ಬ್ರಿಟಿಷ್ ಸರಕಾರ ಅಂಬೇಡ್ಕರ್‌ರಿಗೆ ಪ್ರಥಮ ದುಂಡು ಮೇಜಿನ ಪರಿಷತ್‌ನಲ್ಲಿ ಭಾಗವಹಿಸಲು ಆಹ್ವಾನ ನೀಡಿತು. ಈ ಸಮ್ಮೇಳನ ಗ್ರೇಟ್ ಬ್ರಿಟನ್‌ನಲ್ಲಿ ನಡೆಯಿತು. ಈ ಉದ್ದೇಶಿತ ಕೆಲಸಕ್ಕೆ ಅಕ್ಟೋಬರ್ 4, 1930ರಂದು ಇಂಗ್ಲೆಂಡಿಗೆ ಹೊರಟ ಅಂಬೇಡ್ಕರ್‌ರನ್ನು ಬೀಳ್ಕೊಡಲು ಸಾವಿರಾರು ಶೋಷಿತವರ್ಗದ ಜನ ಸೇರಿದ್ದರು ಎಂಬುದು ಆವತ್ತಿನ ಅಚ್ಚರಿಗಳಲ್ಲಿ ಒಂದು. ಸಾವಿರಾರು ವರ್ಷಗಳ ಶೋಷಣೆಯ ನೊಗದಿಂದ ಕೋಟ್ಯಂತರ ಪರಿಶಿಷ್ಟರನ್ನು ಮುಕ್ತಗೊಳಿಸಲು ಹೊರಟ ಧೀಮಂತ ನಾಯಕನಿಗೆ ಸಂಧ ಗೌರವಾರ್ಪಣೆ ಅದಾಗಿತ್ತು. ನವೆಂಬರ್ 12, 1930 ಸೈಂಟ್ ಜೇಮ್ಸ್ ಪ್ಯಾಲೇಸ್‌ನಲ್ಲಿ ಪ್ರಾರಂಭವಾದ ಮೊದಲನೆ ದುಂಡು ಮೇಜಿನ ಸಭೆಯಲ್ಲಿ ಚಾರಿತ್ರಿಕ ಭಾಷಣ ಮಾಡಿದ ಡಾ.ಅಂಬೇಡ್ಕರ್ ವಿಶ್ವಮಾನ್ಯರಾದರು. ನಂತರ ಮೇ 25, 1932ರಂದು ಲಂಡನ್‌ಗೆ ಪ್ರಯಾಣ ಬೆಳೆಸಿದ ಅಂಬೇಡ್ಕರ್ ಬ್ರಿಟನ್‌ನ ಪ್ರಧಾನಿ ರ್ಯಾಮ್‌ಸೆ ಮ್ಯಾಕ್ ಡೊನಾಲ್ಡ್ ಅವರನ್ನು ಭೆೇಟಿ ಮಾಡಿ 22 ಪುಟಗಳ ಮನವಿ ಪತ್ರವನ್ನು ಸಲ್ಲಿಸಿದರು. ಅದು 'ಕೋಮು ಆದೇಶ' (Communal Award) ಜಾರಿಗೆ ತರಲು ನಿರ್ದೇಶಿಸಲಾಗಿತ್ತು. ಇದು ಸಾಮಾಜಿಕ ನ್ಯಾಯದ ತಕ್ಕಡಿಯಂತಿತ್ತು. ಅಂಬೇಡ್ಕರರು ವಾದಿಸಿದ್ದ ಪರಿಶಿಷ್ಟರಿಗೆ ಎರಡು ಓಟುಗಳ ಅವಕಾಶವಿರುವ 'ಕೋಮು ಆದೇಶ' ಜಾರಿಮಾಡಲು ಬ್ರಿಟನ್ ಸಂಸತ್ತು ಕೂಡ ಒಪ್ಪಿಗೆ ಸೂಚಿಸಿತ್ತು. ಬ್ರಿಟಿಷರು ತೆಗೆದುಕೊಂಡ ಈ ನಿರ್ಧಾರದ ವಿರುದ್ಧ ಮತ್ತು ಇದಕ್ಕೆ ಕಾರಣರಾದ ಅಂಬೇಡ್ಕರ್‌ರ ವಿರುದ್ಧ ಮೋಹನದಾಸ್ ಕರಮಚಂದ್ ಗಾಂಧಿ ಅವರು ಸೆರೆಮನೆಯಲ್ಲಿಯೇ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಕೈಗೊಂಡರು. ಪ್ರತ್ಯೇಕ ಮತದಾನದ ಹಕ್ಕನ್ನು ಪರಿಶಿಷ್ಟರಿಗೆ ನೀಡಿದರೆ ಹಿಂದೂ ಧರ್ಮ ಒಡೆದುಹೋಗುತ್ತದೆ ಎಂಬ ಕ್ಷುಲ್ಲಕ ಕಾರಣಕ್ಕೆ ಅವಮಾನಿತರನ್ನು ಮತ್ತಷ್ಟು ಅವಮಾನಿಸಿದರು. ಗಾಂಧಿ ಅವರು ಉಪವಾಸ ಕೈಗೊಂಡಿದ್ದಾರೆಂಬ ಸುದ್ದಿ ದೇಶಾದ್ಯಂತ ಅಂಬೇಡ್ಕರ್ ಅವರ ವಿರುದ್ಧ ಅಸಮಾಧಾನದ ಆಕ್ರೋಶವನ್ನು ಉಂಟುಮಾಡಿತು. ಅವರನ್ನು ನಾನಾವಿಧಗಳಲ್ಲಿ ತೇಜೋವಧೆ ಮಾಡಲಾಯಿತು. ದೇಶದ್ರೋಹಿ, ಬ್ರಿಟಿಷರ ಏಜೆಂಟ್ ಎಂಬಿತ್ಯಾದಿ ಕೀಳುಪದಗಳಿಂದ ಅವರನ್ನು ನಿಂದಿಸಲಾಯಿತು. ಹಲವಾರು ಕೊಲೆ ಬೆದರಿಕೆ ಪತ್ರಗಳು ಬಂದು ಸೇರಿದವು. ಗಾಂಧಿಯವರ ಮಡದಿ ಕಸ್ತೂರ್ಬಾ ಅವರನ್ನು ಕಳಿಸಿ ಮಾಂಗಲ್ಯ ಭಿಕ್ಷೆ ಬೇಡಿಸಲಾಯಿತು. ಸ್ವತಃ ಗಾಂಧಿಯವರೇ ಪ್ರಧಾನಮಂತ್ರಿಗಳಾಗಿದ್ದ ಜೆ.ರಾಮ್‌ಸೇ ಮ್ಯಾಕ್ ಡೊನಾಲ್ಡ್ ಅವರಿಗೆ ಪತ್ರ ಬರೆಯುತ್ತಾ ''....... ನನ್ನ ಕೊನೆಯ ನಿರ್ಣಯವೆಂದರೆ ದಲಿತರಿಗೆ ಪ್ರತ್ಯೇಕ ಚುನಾವಣೆಯನ್ನು ಕೊಟ್ಟರೆ ಇದು ಅವರಿಗೂ ಹಿಂದೂ ಧರ್ಮಕ್ಕೂ ದ್ರೋಹ ಬಗೆದ ಹಾಗಾಗುತ್ತದೆ. ಆದುದರಿಂದ ಇದಾಗಕೂಡದು. ನಾನು ನನ್ನ ಜೀವನದ ಉಳಿದ ತತ್ವಗಳ ಬಗ್ಗೆ ಈ ಮಾತು ಹೇಳುತ್ತಿಲ್ಲ. ಇದಾಗದೆ ಹೋದರೆ ಉಪವಾಸದ ಮೃತ್ಯುವೇ ನನ್ನ ಜೀವನದ ಅಂತಿಮ ತಪಸ್ಸಾಗಲಿ. ನನ್ನ ತಪ್ಪಿಗೆ ಇದೇ ಪ್ರಾಯಶ್ಚಿತ್ತ. ನನ್ನ ಭಾರ ಈ ಅಸಂಖ್ಯ ಜನರ ಮಧ್ಯೆಯಿಂದ ದೂರ ಹೊರಟು ಹೋಗುತ್ತದೆ. ಏಕೆಂದರೆ ಈ ಜನ ನನ್ನಲ್ಲಿ ಮಕ್ಕಳಂತೆ ಮುಗ್ಧ ನಂಬಿಕೆ ಇಟ್ಟಿದ್ದಾರೆ. ಕೊನೆಯದಾಗಿ ತಿಳಿಸಬೇಕಾದರೆ ನನ್ನ ನಿರ್ಣಯ ಸರಿಯಾಗಿದ್ದರೆ, ನಾನು ತೆಗೆದುಕೊಂಡಿರುವ ಈ ತೀರ್ಪು ನನ್ನ ಜೀವನದ ಪೂರ್ಣತ್ವಕ್ಕೆ ಒಂದು ಹಾದಿ ಮಾತ್ರವಾಗಿದೆ. ಇದನ್ನು ನಾನು ಕಾಲು ಶತಮಾನಕ್ಕಿಂತ ಹೆಚ್ಚಾಗಿ ನನ್ನ ಜೀವನದಲ್ಲಿ ಅನುಭವಿಸುತ್ತ ಬಂದಿದ್ದೇನೆ, ಆದರೆ ಇದಕ್ಕೆ ದೊರಕಬೇಕಾದ ಸಾಫಲ್ಯ ದೊರಕಿಲ್ಲ'' ಎಂದು ಬರೆಯುವ ಮೂಲಕ ತಮ್ಮ ಅಂತಿಮ ನಿಲುವನ್ನು ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಪ್ರಧಾನಿ ಮ್ಯಾಕ್ ಡೋನಾಲ್ಡ್ ''...... ನಾನು ತಿಳಿದುಕೊಂಡ ಹಾಗೆ, ನೀವು ಮರಣದ ತನಕ ಉಪವಾಸ ಸತ್ಯಾಗ್ರಹ ಮಾಡಿ, ದಲಿತರೂ ಸಹ ಬೇರೆಯ ಹಿಂದೂಗಳ ಜೊತೆ ವೋಟಿಗಾಗಿ ಸೇರಬೇಕು ಎಂದು ತಿಳಿಸಿದ್ದೀರಿ. ಇದು ಆಗಲೇ ಕೊಡಲಾಗಿದೆ, ಹಿಂದೂಗಳಿಂದ ದೂರ ಮಾಡುವುದಕ್ಕೋಸ್ಕರವಲ್ಲ, ಆದರೆ ದಲಿತರಿಗೆ ಆಗುವ ನ್ಯೂನತೆ ಅವರಲ್ಲೇ ಕೆಲವರು ಪ್ರತಿನಿಧಿಗಳಾದರೆ ದೂರವಾಗುತ್ತದೆ ಎಂದೂ ಹಾಗೂ ದಲಿತರ ಬಗ್ಗೆ ಅವರು ಮಾತನಾಡಬಹುದೆಂದೂ, ಇದರಿಂದ ಭವಿಷ್ಯಕ್ಕೆ ಒಳ್ಳೆಯದಾಗುವುದೆಂದೂ ಈ ಕಾರ್ಯ ಮಾಡಲಾಗಿದೆ. ನ್ಯಾಯೋಚಿತವಾದ ಈ ಯೋಜನೆಗಳ ಬೆಳಕಿನಲ್ಲಿ ನೀವು ತೆಗೆದುಕೊಂಡಿರುವ ನಿರ್ಣಯ ಅರ್ಥವಾಗುತ್ತಿಲ್ಲ. ನೀವು ನಿಜಾಂಶವರಿಯದೆ ತಪ್ಪುತಿಳುವಳಿಕೆಯಿಂದ ಈ ರೀತಿ ಮಾಡಿದ್ದೀರಿ ಎಂದು ಅರ್ಥವಾಗುತ್ತದೆ'' ಎಂದು ಬರೆಯುತ್ತಾರೆ. ಇದಕ್ಕೆ ಬಗ್ಗದ ಗಾಂಧಿಯವರು ಸೆಪ್ಟಂಬರ್ 9ನೇ 1932ರಂದು ಮತ್ತೊಂದು ಪತ್ರ ಬರೆದು ಅದರಲ್ಲಿ ''...... ಹೆಚ್ಚು ವಾದ ಮಾಡದೆ ಒಂದು ವಿಷಯವನ್ನು ನಾನು ಮಾತನಾಡಲು ಇಚ್ಛಿಸುತ್ತೇನೆ. ಈ ವಿಷಯ ನನ್ನ ಧರ್ಮದಷ್ಟೇ ಮುಖ್ಯ. ಎರಡು ವೋಟಿನ ಹಕ್ಕು ಕೊಟ್ಟುಬಿಟ್ಟರೆ ದಲಿತರ ಹಕ್ಕು ರಕ್ಷಣೆಯಾದ ಹಾಗಾಗುವುದಿಲ್ಲ ಹಾಗೂ ಹಿಂದೂ ಸಮಾಜದ ಏಕತೆ ಕಾಪಾಡಿದ ಹಾಗಾಗುವುದಿಲ್ಲ. ಬೇರೆಯ ಚುನಾವಣೆಯ ಹಕ್ಕನ್ನು ಕೊಟ್ಟರೆ ಲೆಕ್ಕಾಚಾರವಾಗಿ ಹಿಂದೂ ಧರ್ಮದ ನಾಶಕ್ಕೆ ಬೇಕಾದ ವಿಷ ಕೊಟ್ಟ ಹಾಗಾಗುತ್ತದೆ'' ಎನ್ನುವ ಮೂಲಕ ಮತ್ತಷ್ಟು ಬಿಗಿಯಾಗುತ್ತಾರೆ.

ಅಂತಿಮವಾಗಿ ಗಾಂಧೀಜಿ 20ನೇ ಸೆಪ್ಟಂಬರ್ 1932ರಂದು ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದರು. ಒತ್ತಡ ಹೆಚ್ಚಾದ ಪರಿಣಾಮ ಸೆಪ್ಟಂಬರ್ 22, 1932ರಂದು ಅಂಬೇಡ್ಕರ್ ಅವರು ಯರವಾಡ ಸೆರೆಮನೆಯಲ್ಲಿ ಉಪವಾಸ ಕುಳಿತ್ತಿದ್ದ ಗಾಂಧೀಜಿ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ''ನಾನು ಸ್ವಾತಂತ್ರ್ಯದ ವಿರೋಧಿಯಲ್ಲ, ಹಿಂದೂ ಸಮಾಜ ಛಿದ್ರವಾಗಬೇಕೆಂದೂ ನನ್ನ ಇರಾದೆಯಲ್ಲ. ನಮ್ಮ ಬೇಡಿಕೆ ಹಾನಿಕಾರಕವೂ ಅಲ್ಲ, ನಾನೊಂದು ಹೆಜ್ಜೆ ಮುಂದೆ ಬಂದಾಗ ನೀವೂಂದು ಹೆಜ್ಜೆ ಮುಂದೆ ಬಂದರೆ ತಾನೆ ಅಂತರ ಕಡಿಮೆಯಾಗುವುದು?'' ಎಂದರು. ''ನಿಜಕ್ಕೂ ಮಹಾತ್ಮಾಜಿ, ನಮ್ಮ ಜನರ ಹಿತರಕ್ಷಣೆಗಾಗಿ ನೀವು ಬದುಕಬೇಕು'' ಎಂಬುದಾಗಿ ಕೇಳಿಕೊಂಡರು. ಆದರೆ ಗಾಂಧಿಯವರು ''ಸರಿ ಹಾಗಾದರೆ, ನಾನು ಬದುಕಬೇಕು ತಾನೆ? ನಾನು ಉಳಿಯಬೇಕಾದರೆ ಏನು ಮಾಡಬೇಕು ಎಂಬುದು ನಿಮಗೆ ಗೊತ್ತಿದೆ. ನಾನು ಬದುಕುವಂತೆ ಮಾಡಿ'' ಎಂದು ಮುಖಕ್ಕೆ ಹೊಡೆದಂತೆ ಹೇಳಿಬಿಟ್ಟರು. ಹೀಗೆ ಸುದೀರ್ಘ ಚರ್ಚೆಯ ನಂತರವೂ ಪಟ್ಟುಬಿಡದ ಗಾಂಧಿ ಅವರು, ಅಂಬೇಡ್ಕರ್‌ರ ಸಾಮಾಜಿಕ ನ್ಯಾಯದ ಮಹಾನ್ ಉದ್ದೇಶವನ್ನು ಸೋಲಿಸಿ ಸೆಪ್ಟಂಬರ್ 24, 1932ರ ಸಂಜೆ 5 ಗಂಟೆಗೆ ಸರಿಯಾಗಿ ಪೂನಾ ಒಪ್ಪಂದಕ್ಕೆ ಒತ್ತಾಯಪೂರ್ವಕವಾಗಿ ಸಹಿ ಹಾಕಿಸುವ ಮೂಲಕ ದಮನಿತರ ಹಕ್ಕುಗಳನ್ನು ತನ್ನ ಧಾರ್ಮಿಕ ಸ್ವಾರ್ಥಕ್ಕೆ ಬಲಿಹಾಕಿದರು. ನಂತರ ಸೆಪ್ಟಂಬರ್ 26, 1932 ರಂದು ವಿಧಿಯಿಲ್ಲದೆ ಈ ಅನ್ಯಾಯದ ನಿರ್ಧಾರಕ್ಕೆ ಬ್ರಿಟಿಷ್ ಸರಕಾರ ಒಪ್ಪಿಗೆ ಸೂಚಿಸಬೇಕಾಯಿತು. ಇದು ಎಂದೂ ಕ್ಷಮಿಸಲಾರದ ಕರಾಳ ದಿನವಾಗಿ ಚರಿತ್ರೆಯಲ್ಲಿ ದಾಖಲಾಗಿ ಉಳಿಯಿತು.

ಗಾಂಧೀಜಿಯವರನ್ನು ಮುಂದುಮಾಡಿಕೊಂಡು ಜಾತಿವಾದಿ ಸವರ್ಣೀಯರು ಆಡಿದ ಮಹಾನ್ ನಾಟಕದ ಆಳ-ಅಗಲಗಳು ಸಮಾಜ ವಿಜ್ಞಾನಿಯಾದ ಅಂಬೇಡ್ಕರ್ ಅವರಿಗೆ ತುಂಬ ಚೆನ್ನಾಗಿಯೇ ತಿಳಿದಿತ್ತು. ''ಕೊನೆಯಲ್ಲಿ ನಾನು ಇಷ್ಟು ಹೇಳಬಯಸುತ್ತೇನೆ. ಗಾಂಧಿ ಅವರು ಆಮರಣಾಂತ ಉಪವಾಸ ಸತ್ಯಾಗ್ರಹ ಘೋಷಿಸಿದ್ದರೂ ಅವರು ಸಾಯಲು ಇಷ್ಟಪಡಲಿಲ್ಲ. ಅವರು ಬಹಳವಾಗಿ ಬದುಕಲು ಇಷ್ಟಪಟ್ಟಿದ್ದರು'' ಎಂಬುದನ್ನು ಹೊರಹಾಕಿದರು. ಗಾಂಧಿ ಅವರ ಉಪವಾಸ ಸತ್ಯಾಗ್ರಹದ ಬಗ್ಗೆ ತಮ್ಮ ಸ್ಪಷ್ಟ ನಿಲುವನ್ನು ಬರೆದ ಅಂಬೇಡ್ಕರ್ ಅವರು ಅದರಲ್ಲಿ ''ಗಾಂಧಿ ಅಮರರಲ್ಲ. ಕಾಂಗ್ರೆಸ್‌ಎಂದೆಂದೂ ಇರುವಂತಹ ಶಕ್ತಿ ಅಲ್ಲ, ಭಾರತದಲ್ಲಿ ಬಹಳ ಜನ ಮಹಾತ್ಮರಿರಬೇಕಿತ್ತು. ಇವರ ಮೂಲ ಉದ್ದೇಶ ಅಸ್ಪಶ್ಯತೆಯನ್ನು ಹೋಗಲಾಡಿಸುವುದೇ ಆಗಿರಬೇಕಿತ್ತು. ಆಗ ಪ್ರತಿಯೊಬ್ಬರೂ ತಮ್ಮ ಈ ಕಾರ್ಯದಲ್ಲಿ ಸೋಲುತ್ತಿದ್ದರು. ಮಹಾತ್ಮರು ಬಂದಿದ್ದಾರೆ ಹಾಗೂ ಮಹಾತ್ಮರು ಆಗಿ ಹೋಗಿದ್ದಾರೆ. ಆದರೆ ಅಸ್ಪಶ್ಯರು ಅಸ್ಪಶ್ಯರಾಗಿಯೇ ಉಳಿದಿದ್ದಾರೆ'' ಎಂದು ಹೇಳಿಕೆ ಕೊಟ್ಟ ಅಂಬೇಡ್ಕರ್ ಅವರು ತಮ್ಮ ಪುಸ್ತಕ ( 'POONA PACT') ಕೃತಿಯ ಕೊನೆಯಲ್ಲಿ ಭಾರವಾದ ಮನಸ್ಸಿನೊಂದಿಗೆ ದುಃಖಭರಿತ ದೀರ್ಘಕಥೆ ಕೊನೆಮಾಡುವ ಮೊದಲು ''ಒಂದು ಮಾತು ಹೇಳಬಯಸುತ್ತೇನೆ. ಪುಣೆ ಒಪ್ಪಂದದ ರಸವನ್ನು ಕಾಂಗ್ರೆಸ್ ಹೀರಿಕೊಂಡು ಕೇವಲ ಅವರ ಸಿಪ್ಪೆಯನ್ನು ದಲಿತರ ಮುಖದ ಮೇಲೆ ಬಿಸಾಡಿದರು'' ಎಂದು ತಿಳಿಸಿದರು.

ಎಂಬತ್ತೇಳು ವರ್ಷಗಳಿಂದ ದಲಿತ ರಾಜಕಾರಣದಲ್ಲಿ ಸವರ್ಣೀಯರ ಚಮಚಗಳನ್ನು ಕಾಣುತ್ತಿದ್ದೇವೆಯೇ ವಿನಃ ಸ್ವಾಭಿಮಾನಿಗಳಾದ ಶೋಷಿತಪರ ರಾಜಕೀಯ ಮುಖಂಡರು ಒಂಡೆರಡು ಅಪವಾದಗಳನ್ನು ಹೊರತುಪಡಿಸಿ ಕಂಡೇಇಲ್ಲವೆಂದರೆ ಅತಿಶಯೋಕ್ತಿಯಾಗಲಾರದು. ಅಂಬೇಡ್ಕರ್‌ರ ಕಾಲಾನಂತರ ದಲಿತ ರಾಜಕಾರಣಿಗಳು ಅಧಿಕಾರಕ್ಕೆ ಅಂಟಿಕೊಂಡರೇ ವಿನಃ ಸಾಮಾಜಿಕ ನ್ಯಾಯಸ್ಥಾಪನೆ ಎಂಬುದು ಅವರ ರಾಜಕೀಯ ಬದುಕಿನಲ್ಲಿ ಸ್ಥಾನಕಳೆದುಕೊಂಡಿತು. ಉಳ್ಳವರಪರ ಪ್ರಜಾಪ್ರಭುತ್ವ ವ್ಯವಸ್ಥೆ ಚಲಾವಣೆಯಲ್ಲಿರುವ ಇವತ್ತಿನ ರಾಜಕೀಯ ವಿಷಮ ಸ್ಥಿತಿಯಲ್ಲಿ ಸುಧಾರಣೆಯ ಲವಲೇಶವೂ ಉಳಿಯದಂತೆ ಮಾಡಿಬಿಟ್ಟರು. ಪುಣೆ ಒಪ್ಪಂದವೆಂಬುದು ಶೋಷಿತರ ಸ್ಥಿತಿಯನ್ನು ಪ್ರತಿವರ್ಷವು ಹೊಸಹೊಸ ಅನಾಹುತಗಳೊಂದಿಗೆ ಪ್ರತಿಭಟಿಸುತ್ತಾ, ಪ್ರತಿಧ್ವನಿಸುತ್ತಾ ಮತ್ತೆ ಮತ್ತೆ ಬರುತ್ತಲೇ ಇದೆ.

ಗ್ರಂಥ ಋಣ

1.ಪೂನಾ ಒಪ್ಪಂದ ಮೂಲ: ಡಾ.ಬಿ.ಆರ್.ಅಂಬೇಡ್ಕರ್, ಅನು: ಡಾ. ಇಜಾಝುದ್ದೀನ್ (ಅಶ್ರಫಿ)

2. ಡಾ.ಬಿ.ಆರ್.ಅಂಬೇಡ್ಕರ್ ಜೀವನ ಮತ್ತು ಸಾಧನೆ ಮೂಲ: ಧನಂಜಯ್ ಕೀರ್, ಅನು: ಎಂ.ಎಸ್.ಮಾಧವರಾವ್

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)