varthabharthi

ನಿಮ್ಮ ಅಂಕಣ

ಜಾತಿ ವ್ಯವಸ್ಥೆ ಬಂದದ್ದೆಲ್ಲಿಂದ?

ವಾರ್ತಾ ಭಾರತಿ : 24 Sep, 2019
- ಪ್ರವೀಣ್ ಎಸ್. ಶೆಟ್ಟಿ, ಬೋಳೂರು, ಮಂಗಳೂರು

ಮಾನ್ಯರೇ,

ತುಮಕೂರು ಜಿಲ್ಲೆಯ ಪೆಮ್ಮನಹಳ್ಳಿಯ ಗೊಲ್ಲರ ಹಟ್ಟಿಗೆ ಸಂಸದ ನಾರಾಯಣ ಸ್ವಾಮಿಯವರು ದಲಿತ ಎಂಬ ಕಾರಣಕ್ಕೆ ಪ್ರವೇಶಿಸಲು ಗ್ರಾಮಸ್ಥರು ಅಡ್ಡಿಪಡಿಸಿದ್ದು ನೋಡುವಾಗ ಈ ಆಧುನಿಕ ಯುಗದಲ್ಲೂ ಜಾತಿವಿಷ ನಮ್ಮಸಮಾಜದಲ್ಲಿ ಎಷ್ಟು ಆಳವಾಗಿ ಹರಡಿದೆ ಎಂಬುದು ಅರ್ಥವಾಗುತ್ತದೆ. ಈಗಿನಿಂದ ಮೂರು ಸಾವಿರ ವರ್ಷಗಳ ಹಿಂದಿನ ವರೆಗೂ ಜಾತಿ ಧರ್ಮಗಳು ಭಾರತದಲ್ಲಿ ಇರಲಿಲ್ಲ. ಹಾಗಾದರೆ ವರ್ಣ-ಜಾತಿ- ಉಪಜಾತಿ-ಗೋತ್ರ-ಬಳಿ ಹುಟ್ಟಿದ್ದು ಯಾವಾಗ? 2,600 ವರ್ಷಗಳ ಹಿಂದೆ ಗೌತಮ ಬುದ್ಧನು ಬೌದ್ಧ ಧರ್ಮ ಸ್ಥಾಪಿಸುವುದಕ್ಕೆ ಮುಂಚೆ ಅವನು ಯಾವ ಜಾತಿಯವನಾಗಿದ್ದ ಎಂಬ ಉಲ್ಲೇಖ ಎಲ್ಲಿಯೂ ಇಲ್ಲ. ಜೈನ ತೀರ್ಥಂಕರರು ಜೈನ ಧರ್ಮ ಸ್ವೀಕರಿಸುವುದಕ್ಕೆ ಮುಂಚೆ ಯಾವ ಜಾತಿಯವರಾಗಿದ್ದರು ಎಂಬ ಉಲ್ಲೇಖ ಸಹ ಎಲ್ಲಿಯೂ ಇಲ್ಲ. ಕ್ರಿಸ್ತ ಪೂರ್ವದಲ್ಲಿಯೇ ಭಾರತವನ್ನು ಆಳಿದ ರಾಜರ ‘ವಂಶ’ದ ಉಲ್ಲೇಖ ಸಿಗುತ್ತದೆಯೇ ಹೊರತು ಅವರು ಯಾವ ‘ಜಾತಿ’ ಯವರಾಗಿದ್ದರು ಎಂಬ ಉಲ್ಲೇಖ ಎಲ್ಲಿಯೂ ಇಲ್ಲ. ನೃಪತುಂಗ, ಪುಲಿಕೇಶಿ, ಹರ್ಷವರ್ಧನ, ಚೋಳ, ಪಲ್ಲವ ರಾಜರ ‘ವಂಶ’ದ ಉಲ್ಲೇಖ ಇದೆಯೇ ಹೊರತು ಅವರ ಜಾತಿ, ವರ್ಣದ ಉಲ್ಲೇಖ ಎಲ್ಲಿಯೂ ಇಲ್ಲ. ಮಹಾಭಾರತ ರಾಮಾಯಣ ಕಾಲದಲ್ಲಿ (3,000 ವರ್ಷಗಳ ಹಿಂದೆ) ಶ್ರೀರಾಮ-ಯುಧಿಷ್ಠಿರನಂತಹ ಕ್ಷತ್ರಿಯರು ರಾಜ್ಯವನ್ನು ಆಳುತ್ತಿದ್ದದ್ದು ನಿಜವಾದರೆ ನಂತರದ ಕಾಲದಲ್ಲಿ ಈ ಕ್ಷತ್ರಿಯರು ಏನಾದರು? 2,600 ವರ್ಷಗಳ ಹಿಂದೆ ಇದ್ದ ಗೌತಮ ಬುದ್ಧ ಹಾಗೂ ಮಹಾವೀರ ಇಬ್ಬರೂ ರಾಜವಂಶದವರು, ಆದರೆ ಅವರದು ಕ್ಷತ್ರಿಯ ರಾಜವಂಶ ಎಂದು ಯಾವುದೇ ಇತಿಹಾಸಕಾರ ಎಲ್ಲಿಯೂ ಬರೆದಿಲ್ಲ. ಚಂದ್ರಗುಪ್ತ ಮೌರ್ಯ, ಅಶೋಕ, ರಾಷ್ಟ್ರಕೂಟ, ಹರ್ಷವರ್ಧನ, ಪುಲಿಕೇಶಿ, ಚೋಳ ಪಲ್ಲವ ಇವರೆಲ್ಲಾ ದೊಡ್ಡ ಸಾಮ್ರಾಟರಾಗಿದ್ದರೂ ಅವರು ಕ್ಷತ್ರಿಯರು ಎಂದು ಎಲ್ಲಿಯೂ ಹೇಳಿಲ್ಲ. ಮಹಾನ್ ಗಣಿತಜ್ಞರಾದ ಆರ್ಯಭಟ ಬ್ರಹ್ಮಗುಪ್ತ ಹಾಗೂ ಸಂಸ್ಕೃತದ ಮೊತ್ತಮೊದಲ ವ್ಯಾಕರಣಕಾರ ಪಾಣಿನಿ ಇವರ ಜಾತಿ ಎಲ್ಲಿಯೂ ಉಲ್ಲೇಖಿತವಾಗಿಲ್ಲ. ಮೂರು ಸಾವಿರ ವರ್ಷಗಳ ಹಿಂದೆ ಜಾತಿ-ವರ್ಣಗಳೇ ಇರಲಿಲ್ಲ ಎಂದ ಮೇಲೆ ಆಕಾಲದಲ್ಲಿ ನಡೆದದ್ದು ಎಂದು ಹೇಳುವ ಮಹಾಭಾರತ-ರಾಮಾಯಣದಲ್ಲಿ ಕರ್ಣ, ಏಕಲವ್ಯ, ವೇದವ್ಯಾಸ, ವಾಲ್ಮೀಕಿ, ಶಂಭೂಕ ಇವರಿಗೆಲ್ಲಾ ಕೆಳಜಾತಿಯ ಹಣೆಪಟ್ಟಿ ಅಂಟಿಸಿ ಅವರು ಅಸ್ಪೃಶ್ಯರಾದುದರಿಂದ ಅವರು ಕ್ಷತ್ರಿಯರೆನಿಸಲು ಹಾಗೂ ಮೋಕ್ಷ ಪಡೆಯಲು ಯೋಗ್ಯರಲ್ಲ ಎಂದು ಆಗ ವರ್ಣಭೇದ ಮಾಡಲಾಗಿತ್ತು ಎಂಬುದಾಗಿ ವೈದಿಕರು ತಮ್ಮ ಪುರಾಣಗಳಲ್ಲಿ ಬರೆದಿರುವುದು ಸುಳ್ಳು ತಾನೇ? ನಮ್ಮ ದೇಶದಲ್ಲಿ ಆಳುವ ರಾಜರಿಗೆ ಜಾತಿ-ವರ್ಣ ಅಂಟಿಸಿ ಅವನು ನಮ್ಮವನು ಇವನು ನಿಮ್ಮವನು ಎಂದು ಹೆಮ್ಮೆ ಪಡುವ ಕೆಟ್ಟ ಪದ್ಧತಿ ಶುರುವಾಗಿದ್ದು ಬಹುಶಃ ಶಂಕರಾಚಾರ್ಯರ ನಂತರ ಅಂದರೆ ಕ್ರಿ.ಶ. 7ನೇ ಶತಮಾನದ ನಂತರ ಇರಬೇಕು. ಇದರ ಅರ್ಥ ಇಂದಿನ ಹೊಲಸು ಜಾತಿ-ವಿಜಾತಿಯ ದ್ವೇಷ ಮತ್ತು ಶೋಷಣೆಗೆ ಅಡಿಪಾಯ ಹಾಕಿದ್ದು ಶಂಕರಾಚಾರ್ಯರ ಕಾಲದಲ್ಲಿ ಎಂದಂತಾಯಿತು. ಹಾಗಾಗಿ ಜಾತಿ ಮತ್ತು ವರ್ಣ ವ್ಯವಸ್ಥೆಯನ್ನು ಪ್ರತಿಪಾದಿಸುವ ವೇದ ಪುರಾಣಗಳನ್ನೆಲ್ಲಾ ಬರೆದಿದ್ದು ಆದಿ ಶಂಕರರ ಕಾಲದ ನಂತರವೇ ಎಂಬುದನ್ನೂ ನಮ್ಮ ಸಮಾಜದಲ್ಲಿ ಈಗ ಹಾಸುಹೊಕ್ಕಾಗಿರುವ ಕರಾಳ ಜಾತಿ ವ್ಯವಸ್ಥೆ ಸೂಚಿಸುತ್ತದೆ. ರಾಮಾಯಣ ಮಹಾಭಾರತ ಮುಂತಾದ ವೈದಿಕ ಪುರಾಣಗಳೆಲ್ಲ 3,000 ವರ್ಷ ಹಳೆಯವು ಎಂಬುದೂ ಸುಳ್ಳು, ಅವನ್ನು ಕೇವಲ 1,200 ವರ್ಷಗಳ ಹಿಂದೆ ಬರೆದಿದ್ದು ಎಂಬುದು ನಿಜ. ನಾಗರಿ/ದೇವನಾಗರಿ ಲಿಪಿ ಆವಿಷ್ಕಾರ ಅಗಿದ್ದೇ ಕೇವಲ 1,800 ವರ್ಷಗಳ ಹಿಂದೆ (ಕ್ರಿ.ಶ. 2ನೇ ಶತಮಾನದಲ್ಲಿ). ವೇದ ಪುರಾಣಗಳು ಇರುವುದು ದೇವನಾಗರಿ ಲಿಪಿಯಲ್ಲಿ ಮತ್ತು ಸಂಸ್ಕೃತ ಭಾಷೆಯಲ್ಲಿ. ಅದಕ್ಕೆ ಮೊದಲು ಸಂಸ್ಕೃತವು ಕೇವಲ ಮೌಖಿಕ ಭಾಷೆ (ಆಡು ಭಾಷೆ) ಮಾತ್ರ ಆಗಿತ್ತು. ಕ್ರಿಸ್ತಪೂರ್ವದಲ್ಲಿ ಕೇವಲ ಪಾಲಿ ಭಾಷೆ ಮಾತ್ರವಲ್ಲ ಪ್ರಾಕೃತ ಗುಂಪಿನ ಅಡಿ ಬರುವ ಆರು ಬೇರೆಬೇರೆ ಭಾಷೆಗಳಿಗೂ ಬ್ರಾಹ್ಮಿ ಲಿಪಿ ಬಳಸಲಾಗುತ್ತಿತ್ತು. ಆದರೂ ಕ್ರಿಸ್ತಪೂರ್ವದಲ್ಲಿ ಸಂಸ್ಕೃತವನ್ನು ಬ್ರಾಹ್ಮಿ ಲಿಪಿಯಲ್ಲಿ ಯಾಕೆ ಬರೆಯಲಿಲ್ಲ? ಹಾಗಿರುವಾಗ ದೇವನಾಗರಿ ಲಿಪಿ ಆವಿಷ್ಕಾರ ಆಗುವುದಕ್ಕೆ ಮೊದಲೇ ನಾಗರಿ ಲಿಪಿಯಲ್ಲಿ ವೇದ ಪುರಾಣಗಳನ್ನು ಬರೆದಿರಲು ಹೇಗೆ ಸಾಧ್ಯ? ಇನ್ನು ತಲೆಮಾರಿನಿಂದ ತಲೆಮಾರಿಗೆ ಮೌಖಿಕವಾಗಿ ಹರಿದು ಬರುವ ಯಾವುದೇ ವಿದ್ಯೆಯಾಗಲಿ ಅದು ಕ್ರಮೇಣ ಪರಿಷ್ಕರಣೆ, ಸುಧಾರಣೆ ಮತ್ತು ವಿರೂಪಗೊಳ್ಳುತ್ತಾ ಹೋಗಿ ಕೊನೆಗೆ ಮೂಲಕ್ಕಿಂತ ಅದು ಬೇರೆಯದೇ ಆಗಿಬಿಡುತ್ತದೆ. ಮೇಲಾಗಿ ಸುಮಾರು 1,500 ವರ್ಷಗಳ ಕಾಲ (ಕ್ರಿ.ಪೂ.1200 ರಿಂದ ಕ್ರಿ.ಶ.300ರ ವರೆಗೆ) ಬಾಯಿಂದ ಬಾಯಿಗೆ ಹರಡುತ್ತಾ ಬಂದ ಸಂಸ್ಕೃತ ಭಾಷೆಯ ಪುರಾಣ ಕಥೆಗಳು ಮೂಲದಂತೆ ಇರಲು ಎಂದಿಗೂ ಸಾಧ್ಯವಿಲ್ಲ. ನೂರಾರು ಲಿಖಿತ ಭಾಷೆಗಳಿರುವ ಈಗಿನ ಕಾಲದಲ್ಲಿಯೂ ಕೆಲವು ಸಾಮಾಜಿಕ ಮತ್ತು ಧಾರ್ಮಿಕ ವಿಷಯಗಳು ಹೇಗೆ ವಿರೂಪಗೊಳ್ಳುತ್ತವೆ ಎಂಬುದು ಟಿವಿಯಲ್ಲಿ ಬರುವ ಧಾರ್ಮಿಕ ಮತ್ತು ಜ್ಯೋತಿಷ್ಯದ ಕಾರ್ಯಕ್ರಮ ನೋಡುವವರಿಗೆ ಸರಿಯಾಗಿ ಗೊತ್ತಿರುತ್ತದೆ. ಹಾಗಿರುವಾಗ ಯಾವುದೇ ವಿಷಯ 1,500 ವರ್ಷಗಳ ಕಾಲ ಸ್ವಲ್ಪವೂ ಬದಲಾಗದೇ ಮೌಖಿಕವಾಗಿ ಸಾಗಿಬರಲು ಸಾಧ್ಯವೇ?
 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)