varthabharthi

ಸಂಪಾದಕೀಯ

ಪ್ರಧಾನಿಯ ಕ್ಷಮೆಯಾಚನೆಗಾಗಿ ಕಾಯುತ್ತಿರುವ ತಾಯಂದಿರು

ವಾರ್ತಾ ಭಾರತಿ : 25 Sep, 2019

ಒಂದು ದೇಶದ ಪ್ರಧಾನಿಯ ‘ಕ್ಷಮೆಯಾಚನೆ’ಗೆ ಕೆಲವು ಘನತೆಗಳಿವೆ. ಹಿರೋಶಿಮಾ-ನಾಗಸಾಕಿಗೆ ಅಣುಬಾಂಬ್ ಹಾಕಿ ಸಾವಿರಾರು ಜನರ ಸಾವಿಗೆ ಕಾರಣವಾದ ಅಮೆರಿಕ ಈ ಹಿಂದೆ ಜಗತ್ತಿನ ಕ್ಷಮೆ ಯಾಚಿಸಿತ್ತು. ಜಲಿಯನ್‌ವಾಲಾಬಾಗ್ ಹತ್ಯಾಕಾಂಡಕ್ಕಾಗಿ ಬ್ರಿಟನ್ ಇನ್ನೂ ಸ್ಪಷ್ಟವಾಗಿ ಭಾರತದ ಜೊತೆಗೆ ಕ್ಷಮೆಯಾಚಿಸಿಲ್ಲ. ಅಡ್ಡಗೋಡೆಯಲ್ಲಿ ದೀಪವಿಟ್ಟಂತೆ ವಿಷಾದವನ್ನಷ್ಟೇ ವ್ಯಕ್ತಪಡಿಸುತ್ತಾ ಬಂದಿದೆ. ಸಿಖ್ ಹತ್ಯಾಕಾಂಡಕ್ಕಾಗಿ ಕಾಂಗ್ರೆಸ್‌ನ ನಾಯಕರು ಪಂಜಾಬ್ ಜನತೆಯ ಮುಂದೆ ಕ್ಷಮೆಯಾಚಿಸಿ, ವಿಷಾದವ್ಯಕ್ತಪಡಿಸಿದ್ದರು. ಆದರೆ ಗುಜರಾತ್ ಹತ್ಯಾಕಾಂಡಕ್ಕಾಗಿ ನರೇಂದ್ರ ಮೋದಿ ಗುಜರಾತ್ ಜನತೆಯನ್ನುದ್ದೇಶಿಸಿ ಕ್ಷಮೆಯಾಚಿಸಿಲ್ಲ ಮಾತ್ರವಲ್ಲ, ವೇಗವಾಗಿ ಓಡುತ್ತಿದ್ದ ಕಾರಿಗೆ ಸಿಕ್ಕ ನಾಯಿಮರಿಯಂತೆ ಆ ಹತ್ಯಾಕಾಂಡವನ್ನು ಬಣ್ಣಿಸಿದ್ದರು. ಇಂತಹ ನರೇಂದ್ರ ಮೋದಿ ಅಮೆರಿಕದಲ್ಲಿ ಅನಿವಾಸಿ ಭಾರತೀಯ ಉದ್ಯಮಿಗಳ ಟ್ರಂಪ್ ಪರ ಚುನಾವಣಾ ಪ್ರಚಾರ ಎಂದೇ ಬಿಂಬಿತವಾಗಿದ್ದ ‘ಹೌಡಿ ಮೋದಿ’ ಎನ್ನುವ ಸಮಾವೇಶದ ಹಿನ್ನೆಲೆಯಲ್ಲಿ ಅಮೆರಿಕದ ಸೆನೆಟರ್ ಜಾನ್‌ಕ್ರಾನಿಯೇ ಅವರ ಪತ್ನಿ ಸ್ಯಾಂಡಿ ಅವರ ಕ್ಷಮೆ ಯಾಚಿಸಿರುವುದು ತಮಾಷೆಯಾಗಿದೆ.

ಇಷ್ಟಕ್ಕೂ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಕ್ಷಮೆ ಯಾಚನೆಗೆ ಕಾರಣವಾದ ಅಂಶವಂತೂ ಜಾಗತಿಕವಾಗಿ, ಆರ್ಥಿಕ- ಸಾಮಾಜಿಕವಾಗಿ ಅದೇನೋ ಪರಿಣಾಮ ಬೀರುವಂತಹದಿರಬೇಕು ಎಂದರೆ ಹಾಗೇನೂ ಇಲ್ಲ. ನಿನ್ನೆ ಸ್ಯಾಂಡಿ ಅವರ ಜನ್ಮದಿನವಾಗಿತ್ತಂತೆ ಮತ್ತು ‘ಹೌಡಿ ಕಾರ್ಯಕ್ರಮ’ದ ಕಾರಣದಿಂದಾಗಿ ಸ್ಯಾಂಡಿ ಜೊತೆಗೆ ಪತಿ ಜಾನ್ ಅವರಿಗೆ ಇರಲು ಸಾಧ್ಯವಾಗಲಿಲ್ಲವಂತೆ. ‘‘ಇಂದು ನಿಮ್ಮ ಜನ್ಮದಿನವಾಗಿತ್ತು. ಇಂಥ ಸಂದರ್ಭದಲ್ಲಿ ನಿಮ್ಮ ಜೊತೆಗೆ ಇರಬೇಕಾಗಿದ್ದ ಬಾಳಸಂಗಾತಿಯನ್ನು ದೂರ ಮಾಡಿದ್ದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ನಿಮಗೆ ನನ್ನ ಬಗ್ಗೆ ಅಸೂಯೆಯಾಗಿರಬೇಕು’’ ಎಂಬ ಟ್ವೀಟ್ ಒಂದನ್ನು ಪ್ರಧಾನಮಂತ್ರಿ ಮೋದಿ ಮಾಡಿದ್ದಾರೆ.

ಇಷ್ಟಕ್ಕೂ ಹೌಡಿ ಕಾರ್ಯಕ್ರಮವೆಂದರೆ ‘ಪ್ರೇಮಿಗಳ ದಿನಾಚರಣೆಯೇ?’ ಮೋದಿಯ ಜೊತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾರಣಕ್ಕಾಗಿ ಮೋದಿಯ ಕುರಿತಂತೆ ಸೆನೆಟರ್‌ನ ಪತ್ನಿ ಯಾಕೆ ಅಸೂಯೆ ಪಡಬೇಕು? ಅವರು ಅಸೂಯೆ ಪಡುತ್ತಾರೆ ಎಂದು ಭಾರತದ ಪ್ರಧಾನಿ ಯಾಕೆ ಭಾವಿಸಬೇಕು? ಅಮೆರಿಕದ ಸೆನೆಟರ್ ಜೊತೆಗೆ ಭಾಗವಹಿಸಲು ಅವಕಾಶ ಸಿಕ್ಕಿರುವುದಕ್ಕೆ ಪ್ರಧಾನಿ ಇಷ್ಟೊಂದು ರೋಮಾಂಚನಗೊಳ್ಳುವುದಕ್ಕೆ ಕಾರಣವೇನು? ಹಿಂದೆಲ್ಲ, ನೆಹರೂ, ಇಂದಿರಾಗಾಂಧಿ, ಅಟಲ್‌ಬಿಹಾರಿ ವಾಜಪೇಯಿ ಜೊತೆಗೆ ಗುರುತಿಸಿಕೊಳ್ಳುವುದಕ್ಕೆ, ಅವರಜೊತೆಗೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಕ್ಕೆ ವಿದೇಶಿ ನಾಯಕರು ಹಂಬಲಿಸುತ್ತಿದ್ದರು. ವಿದೇಶಗಳ ನಾಯಕರು ಅದನ್ನು ಹೆಮ್ಮೆಯೆಂದು ಭಾವಿಸುತ್ತಿದ್ದರು.

ಇಂದು ಈ ದೇಶದ ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ಸೆನೆಟರ್ ಜೊತೆಗೆ ಗುರುತಿಸಿಕೊಂಡು ಎಳೆ ಬಾಲಕನಂತೆ ಸಂಭ್ರಮಿಸುವುದು, ಬಾಲಿಶವಾಗಿ ಟ್ವೀಟ್ ಮಾಡುವುದು ದೇಶದ ಪ್ರಧಾನಿಯ ಘನತೆಗೆ ಧಕ್ಕೆ ತಂದಿದೆ. ಅಷ್ಟೇ ಅಲ್ಲ, ಅಮೆರಿಕದಲ್ಲಿ ನಿಂತು ‘ಭಾರತದಲ್ಲಿ ಎಲ್ಲವೂ ಸರಿಯಾಗಿದೆ’ ಎಂದು ಘೋಷಿಸಿ, ಬಳಿಕ ಟ್ರಂಪ್‌ನ ಚುನಾವಣಾ ಪ್ರಚಾರದ ತಳಮಟ್ಟದ ಕಾರ್ಯಕರ್ತನಂತೆ ‘‘ಅಬ್ ಕಿ ಬಾರ್ ಟ್ರಂಪ್ ಸರಕಾರ್’ ಎಂದು ಘೋಷಿಸಿ ಈ ದೇಶದ ಪ್ರಧಾನಿಯ ಘನತೆಗೆ ಸರಿಪಡಿಸಲಾಗದಷ್ಟು ಹಾನಿ ಮಾಡಿದ್ದಾರೆ. ಮೋದಿ ಒಬ್ಬ ಸಾಮಾನ್ಯ ನಾಯಕನಾಗಿ ಇಂತಹ ಘೋಷಣೆಯನ್ನು ಮಾಡಿದ್ದಿದ್ದರೆ ಅದನ್ನು ಅವರ ವೈಯಕ್ತಿಕ ಎಂದು ಬಿಟ್ಟು ಬಿಡಬಹುದಿತ್ತು. ಆದರೆ ಇಡೀ ಭಾರತದ ಘೋಷಣೆಯಾಗಿ ‘ಅಬ್ ಕಿ ಬಾರ್ ಟ್ರಂಪ್ ಸರಕಾರ್’ ಎಂದಿದ್ದಾರೆ. ಟ್ರಂಪ್ ಎದುರಾಳಿ ನಾಳೆ ಗೆದ್ದು ಬಂದರೆ, ಆ ನಾಯಕರನ್ನು ಭಾರತ ಹೇಗೆ ಎದುರುಗೊಳ್ಳಬೇಕು? ಹುಟ್ಟು ಹಬ್ಬದ ದಿನ ಪತ್ನಿಯಿಂದ ಸೆನೆಟರ್ ಅವರನ್ನು ದೂರ ಮಾಡಿದ್ದಕ್ಕಾಗಿ ಕ್ಷಮೆಯಾಚಿಸಿದ ನಮ್ಮ ಪ್ರಧಾನಿ ಮೋದಿಯನ್ನು ಅಣಕಿಸುವಂತೆ ನಮ್ಮ ಮುಂದೆ ಅವರ ಪತ್ನಿ ಜಶೋದಾಬೆನ್ ಇದ್ದಾರೆ. ತನ್ನ ಪತಿ ಪ್ರಧಾನಮಂತ್ರಿಯಾಗಿದ್ದರೂ ಅವರ ಜೊತೆಗೆ ಸಾರ್ವಜನಿಕವಾಗಿ ಓಡಾಡಲಾಗದೆ, ‘ತಾನು ನಿಜಕ್ಕೂ ಅವರ ಪತ್ನಿ ಹೌದೋ, ಅಲ್ಲವೋ?’ ಎನ್ನುವುದು ಕೂಡ ಸ್ಪಷ್ಟವಿಲ್ಲದೆ ಬದುಕುತ್ತಿದ್ದಾರೆ.

ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ, ತನ್ನನ್ನು ತಾನು ಅವಿವಾಹಿತ ಎಂದೇ ಘೋಷಿಸಿಕೊಂಡಿದ್ದ ಮೋದಿ, ತನ್ನ ಪತ್ನಿಯ ಒಳಗಿನ ನೋವನ್ನು ಅರಿಯದೆ, ಅಮೆರಿಕದ ಅದಾವುದೋ ಸೆನೆಟ್‌ರ್‌ನ ಪತ್ನಿಯ ಒಂದು ದಿನದ ವಿರಹಕ್ಕಾಗಿ ಕ್ಷಮೆಯಾಚಿಸಿರುವುದು ವಿಪರ್ಯಾಸವೇ ಸರಿ. ಜಶೋದಾಬೆನ್ ಅವರಿಗೆ ವಿಚ್ಛೇದನವನ್ನಾದರೂ ನೀಡಿದ್ದಿದ್ದರೆ ಅದು ಬೇರೆ ಮಾತು. ಇದು ನರೇಂದ್ರ ಮೋದಿಯವರ ಖಾಸಗಿ ಬದುಕಿನ ವಿಷಯವಾಗಿದ್ದರೂ, ಒಬ್ಬ ಪ್ರಧಾನಿಯಾಗಿ ಪತ್ನಿಗೆ ವಿಚ್ಛೇದನವನ್ನೂ ನೀಡದೆ, ಆಕೆಯನ್ನು ಪತ್ನಿಯಾಗಿಯೂ ಸ್ವೀಕರಿಸದೇ ಇರುವುದು ದೇಶಕ್ಕೆ ಯಾವ ಸಂದೇಶವನ್ನು ನೀಡುತ್ತದೆ? ಈ ದೇಶದಲ್ಲಿ ತ್ರಿವಳಿ ತಲಾಖ್ ವಿರುದ್ಧ ಕಾಯ್ದೆ ಜಾರಿಗೊಳಿಸುವ ಮೊದಲು ತನ್ನ ವೈವಾಹಿಕ ಜೀವನದ ಯಡವಟ್ಟನ್ನು ಮೋದಿಯವರು ಸರಿಪಡಿಸುವುದು ಅತ್ಯಗತ್ಯವಾಗಿತ್ತು. ಆಗ ಮಾತ್ರ ಆ ಕಾಯ್ದೆಯನ್ನು ಜಾರಿಗೊಳಿಸುವ ನೈತಿಕ ಹಕ್ಕು ಅವರಿಗೆ ಸಿಗುತ್ತಿತ್ತು. ಇದೀಗ ‘ತಲಾಖ್ ನೀಡದೆಯೇ ಪತ್ನಿಯನ್ನು ಕೈ ಬಿಡಿ’ ಎನ್ನುವುದನ್ನು ಅವರು ಪುರುಷ ಸಮಾಜಕ್ಕೆ ಪರೋಕ್ಷವಾಗಿ ಘೋಷಿಸಿದಂತಾಗಿದೆ. ಆದುದರಿಂದ ಪ್ರಧಾನಿ ಮೋದಿ ಯಾರ ಜೊತೆಗಾದರೂ ಕ್ಷಮೆಯಾಚಿಸುವುದಿದ್ದರೆ, ಅದು ಪತ್ನಿ ಜಶೋದಾಬೆನ್ ಅವರ ಜೊತೆಗಾಗಿದೆ.

 ಗುಜರಾತ್ ಹತ್ಯಾಕಾಂಡದಲ್ಲಿ ನೂರಾರು ಮಹಿಳೆಯರು ತಮ್ಮ ಪತಿಯನ್ನು ಕಳೆದುಕೊಂಡಿದ್ದಾರೆ. ಮಕ್ಕಳು ಅನಾಥವಾಗಿದ್ದಾರೆ. ಮಹಿಳೆಯರನ್ನು ಅತ್ಯಾಚಾರಗೈದು ಕೊಂದು ಹಾಕಲಾಗಿದೆ. ಈ ಘಟನೆ ನಡೆದಿರುವುದು ಮೋದಿಯವರು ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದಾಗ. ಅವರಿಗಾಗಿ ಒಂದು ವಾಟ್ಸ್‌ಆ್ಯಪ್ ಕ್ಷಮೆಯಾಚನೆಯನ್ನು ಮಾಡಿದರೆ ಅದು ಈ ದೇಶದ ಪಾಲಿಗೆ ಅತ್ಯಂತ ಗೌರವಾರ್ಹ ವಿಷಯವಾಗುತ್ತದೆ. ‘ದೇಶದಲ್ಲಿ ಎಲ್ಲವೂ ಸರಿಯಾಗಿದೆ’ ಎಂದು ನರೇಂದ್ರ ಮೋದಿ ಹೇಳುತ್ತಿರುವ ಹೊತ್ತಿನಲ್ಲೇ, ಕಾಶ್ಮೀರದಲ್ಲಿ ಶ್ರೀಸಾಮಾನ್ಯರು ತಮ್ಮ ತಮ್ಮ ಮನೆಗಳಲ್ಲೇ ಬಂಧನಕ್ಕೆ ಒಳಗಾಗಿದ್ದಾರೆ. ಮಕ್ಕಳು ಶಾಲೆ, ಕಾಲೇಜುಗಳಿಗೆ ತೆರಳುವುದಕ್ಕೆ ಸಾಧ್ಯವಾಗದೆ ಭೀತಿಯಿಂದ ಮನೆಯಲ್ಲೇ ಕಾಲ ಕಳೆಯುವಂತಹ ಸ್ಥಿತಿ ನಿರ್ಮಾಣವಾಗಿದೆ. ನೂರಾರು ಜನರನ್ನು ಪೊಲೀಸರು ರಾತ್ರೋರಾತ್ರಿ ಎತ್ತೊಯ್ದಿದ್ದಾರೆ. ಅವರೆಲ್ಲರ ಪತ್ನಿಯರು, ತಾಯಂದಿರು ಆತಂಕದಿಂದ ಕಾಲ ಕಳೆಯುತ್ತಿದ್ದಾರೆ. ಅಮೆರಿಕದ ಸೆನೆಟರ್ ಪತ್ನಿಯ ಜೊತೆಗೆ ಕ್ಷಮೆಯಾಚಿಸಿದ ಪ್ರಧಾನಿ ಕಾಶ್ಮೀರದ ಈ ಮಹಿಳೆಯರ ಜೊತೆಗೆ ಕ್ಷಮೆಯಾಚಿಸುವ ಅಗತ್ಯವಿಲ್ಲವೇ? ಪುಲ್ವಾಮದಲ್ಲಿ ಸರಕಾರದ ವೈಫಲ್ಯದಿಂದಾಗಿಯೇ ಉಗ್ರನೊಬ್ಬ ನಮ್ಮ 40ಕ್ಕೂ ಅಧಿಕ ಯೋಧರನ್ನು ಕೊಲ್ಲಲು ಸಾಧ್ಯವಾಯಿತು. ಆ ಯೋಧರ ಪತ್ನಿಯರು ಇಂದು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಸೈನಿಕರ ಪ್ರಾಣವನ್ನು ರಕ್ಷಿಸಲಾಗದೇ ಇದ್ದುದಕ್ಕೆ ಮೋದಿ ಯೋಧರ ಪತ್ನಿಯರ ಕ್ಷಮೆಯಾಚಿಸುವ ಅಗತ್ಯವಿಲ್ಲವೆ?

ಒಂದನ್ನು ಗಮನಿಸಬೇಕು. ಹೌಡಿಮೋದಿಯನ್ನು ಹಮ್ಮಿಕೊಂಡಿರುವುದು ಅನಿವಾಸಿ ಭಾರತೀಯರು. ಹತ್ತಿಪ್ಪತ್ತು ವರ್ಷ ಅಮೆರಿಕದಲ್ಲಿ ಕಳೆದು ಅಲ್ಲಿನ ಪೌರತ್ವವನ್ನು ಪಡೆದು, ಅನಿವಾಸಿಗಳ ಬೃಹತ್ ಸಮಾವೇಶವನ್ನೇ ಸಂಘಟಿಸುವಷ್ಟು ಸಮರ್ಥರಾಗಿದ್ದಾರೆ ಭಾರತೀಯರು. ಅಮೆರಿಕದ ರಾಜಕೀಯದಲ್ಲೂ ಅವರು ನಿರ್ಣಾಯಕ ಪಾತ್ರವನ್ನು ನಿರ್ವಹಿಸುವ ಮಟ್ಟಿಗೆ ಬೆಳೆದಿದ್ದಾರೆ. ಅಮೆರಿಕದಲ್ಲಿ ಪ್ರಜಾಪ್ರಭುತ್ವದ ಅಡಿಪಾಯ ಗಟ್ಟಿಯಾಗಿದ್ದುದರಿಂದ ಇದು ಸಾಧ್ಯವಾಯಿತು. ರಾಜಕೀಯ ಕಾರಣಗಳಿಗಾಗಿ ನಾಳೆ ಅಮೆರಿಕದ ಜನರು ಈ ಅನಿವಾಸಿ ಭಾರತೀಯರ ಪೌರತ್ವವನ್ನೇ ಪ್ರಶ್ನಿಸತೊಡಗಿದರೆ ಸ್ಥಿತಿ ಏನಾದೀತು? ಅಸ್ಸಾಮಿನಲ್ಲಿ ಕಳೆದ ನಾಲ್ಕೈದು ದಶಕಗಳಿಂದ ವಲಸೆ ಬಂದು ಬೇರೂರಿರುವ ಅಸಹಾಯಕ ಕೂಲಿ ಕಾರ್ಮಿಕರನ್ನು ಪೌರತ್ವ ನೋಂದಣಿಯ ಹೆಸರಿನಲ್ಲಿ ಬೀದಿ ಪಾಲು ಮಾಡುವುದಕ್ಕೆ ಸರಕಾರ ಹವಣಿಸುತ್ತಿದೆ. ಈ ಕಾರ್ಮಿಕರು ಭಾರತದ ತೋಟಗಳಲ್ಲಿ, ಗದ್ದೆಗಳಲ್ಲಿ ಬೆವರು ಹರಿಸಿದವರು. ಅವರ ಶ್ರಮವನ್ನು ನಮ್ಮ ನೆಲ ಬಳಸಿಕೊಂಡಿದೆ.

ಮುಖ್ಯವಾಗಿ ತಮ್ಮ ತಾತನ ಕಾಲದಿಂದ ಅವರು ಈ ನೆಲದಲ್ಲಿದ್ದಾರೆ. ಅನಿವಾಸಿ ಭಾರತೀಯ ಹೌಡಿ ಸಮಾವೇಶದಲ್ಲಿ ಸಂಭ್ರಮಿಸುತ್ತಿರುವ ಮೋದಿಗೆ, ಎನ್‌ಆರ್‌ಸಿ ಹೆಸರಿನಲ್ಲಿ ಬೀದಿ ಪಾಲು ಸ್ಥಿತಿಯಲ್ಲಿರುವ ಈ ಬಡಪಾಯಿಗಳು ನೆನಪಾಗಬೇಕಾಗಿದೆ. ಇದೇ ಸಂದರ್ಭದಲ್ಲಿ ಅಮೆರಿಕದ ಹಿರಿಯ ಪ್ರೊಫೆಸರ್ ಒಬ್ಬರು ಫೋರ್ಬ್ಸ್‌ನಲ್ಲಿ ಲೇಖನವೊಂದನ್ನು ಬರೆದಿದ್ದಾರೆ. ‘ಭಾರತದಲ್ಲಿ ಆರ್ಥಿಕತೆ ತೀವ್ರವಾಗಿ ಕುಸಿಯುತ್ತಿರುವ, ಜನರ ನಡುವೆ ಕಂದಕಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಮೋದಿ ವಿದೇಶಗಳಲ್ಲಿ ಸಭೆ ಸಮಾರಂಭಗಳಲ್ಲಿ ಕಾಲ ಕಳೆಯಬಾರದು. ಭಾರತಕ್ಕೆ ಸದ್ಯ ಅದರ ಪ್ರಧಾನಿಯ ಅಗತ್ಯವಿದೆ. ಅವರು ಭಾರತದಲ್ಲೇ ಹೆಚ್ಚು ಕಾಲ ಕಳೆಯಬೇಕು’’ ಎಂದು ಆ ಲೇಖನದಲ್ಲಿ ಸಲಹೆ ನೀಡಿದ್ದಾರೆ. ವಿದೇಶಗಳಲ್ಲಿ ನಿಂತು ‘ಭಾರತದಲ್ಲಿ ಎಲ್ಲವೂ ಸರಿಯಾಗಿದೆ’ ಎಂದು ಹೇಳುವುದರಿಂದ ಯಾವುದೂ ಸರಿಯಾಗುವುದಿಲ್ಲ. ಸಮಸ್ಯೆಗಳಿಗೆ ಮುಖಾಮುಖಿಯಾಗಿ ಅವುಗಳನ್ನು ಎದುರಿಸುವುದೇ ಸಮರ್ಥ ಪ್ರಧಾನಿಯ ಲಕ್ಷಣ ಹೊರತು, ವಿದೇಶಗಳಲ್ಲಿ ಶೋಕಿಲಾಲನಂತೆ ಕಾಲ ಕಳೆಯುವುದಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)