varthabharthi

ವೈವಿಧ್ಯ

ಕಲೆ ಸಂಸ್ಕೃತಿಗೆ ಸಾಂಸ್ಕೃತಿಕ ರಾಜಕಾರಣದ ಹೊದಿಕೆ

ವಾರ್ತಾ ಭಾರತಿ : 25 Sep, 2019
ನಾ. ದಿವಾಕರ

ಸಾಹಿತ್ಯ ಮತ್ತು ಶೈಕ್ಷಣಿಕ ಅಕಾಡಮಿಗಳು ಈಗಾಗಲೇ ಸರಕಾರಿ ಕೃಪಾಪೋಷಿತ ಸಂಸ್ಥೆಗಳಾಗಿದ್ದು ಅಲ್ಲಿನ ನಿರ್ದೇಶಕರು ಸದಾ ಆಡಳಿತಾರೂಢ ಪಕ್ಷಗಳ ಆಣತಿಯಂತೆಯೇ ನಡೆಯುವಂತಾಗಿದೆ. ಈಗ ಬಹುಶಃ ರಂಗಾಯಣದ ಸರದಿ ಎನಿಸುತ್ತದೆ. ಇದು ಒಂದು ಸಂಸ್ಥೆಯ ಪ್ರಶ್ನೆಯಲ್ಲ, ಕರ್ನಾಟಕದ ಕಲೆ ಮತ್ತು ಸಂಸ್ಕೃತಿಯ ಇತಿಹಾಸದ ಪ್ರಶ್ನೆ. ಅಕಾಡಮಿಗಳಲ್ಲಿ ಸರಕಾರದ ಹಸ್ತಕ್ಷೇಪವನ್ನು ಈವರೆಗೂ ಕರ್ನಾಟಕದ ಸಾಹಿತ್ಯ ವಲಯ ಬಲವಾಗಿ ವಿರೋಧಿಸಿದ್ದನ್ನು ಕಂಡಿಲ್ಲ. ಈಗ ರಂಗಾಯಣವೂ ಇದೇ ರೀತಿ ಅನಾಥ ಶಿಶು ಆಗುತ್ತಿದೆ.

ರಂಗಾಯಣ ಮತ್ತೊಮ್ಮೆ ಆಡಳಿತ ವ್ಯವಸ್ಥೆಯ ಚದುರಂಗವಾಗಿದೆ. ಮತ್ತೊಮ್ಮೆ ಆಡಳಿತಾರೂಢ ಪಕ್ಷದ ರೂವಾರಿಗಳು ತಮ್ಮದೇ ರೀತಿಯಲ್ಲಿ ಪಗಡೆಯ ದಾಳ ಬೀಸಲು ಮುಂದಾಗಿದ್ದಾರೆ. ಒಂದು ಸ್ವಾಯತ್ತ ಸಾಂಸ್ಕೃತಿಕ ಕೇಂದ್ರವಾಗಿ ಸ್ಥಾಪನೆಯಾದ ರಂಗಾಯಣ ಕಲೆ, ಸಂಸ್ಕೃತಿ, ನಾಟಕಗಳ ಮೂಲಕ ಜನಸಮಾನ್ಯರನ್ನು ತಲುಪುವ ಒಂದು ರಥದಂತೆ. ಇದರ ಚಕ್ರಗಳು ಚಲಿಸುವುದೇ ಸಂವೇದನೆ ಮತ್ತು ಕ್ರಿಯಾಶೀಲ ಚಟುವಟಿಕೆಗಳ ಮಾರ್ಗದಲ್ಲಿ. ಹಾಗಾಗಿ ಈ ರಥದ ಸಾರಥ್ಯ ವಹಿಸುವವರಿಗೆ ಮೂಲತಃ ಸಮಾಜೋ ಸಾಂಸ್ಕೃತಿಕ ಸಂವೇದನೆ ಅವಶ್ಯವಾಗಿ ಇರಲೇಬೇಕಾಗುತ್ತದೆ. ಭಾರತದ ಪ್ರಸ್ತುತ ರಾಜಕಾರಣದಲ್ಲಿ ಮತ್ತು ಆಡಳಿತ ವ್ಯವಸ್ಥೆಯಲ್ಲಿ ಮಾನವೀಯ ಸಂವೇದನೆಯೇ ಇಲ್ಲದಿರುವಾಗ ಹೆಚ್ಚಿನದೇನನ್ನೂ ನಿರೀಕ್ಷಿಸಲಾಗುವುದಿಲ್ಲ. ಆದರೂ ಆಳುವ ವರ್ಗಗಳು ಸಮಾಜದ ಎಲ್ಲ ಕ್ಷೇತ್ರಗಳನ್ನೂ ತಮ್ಮ ಆಧಿಪತ್ಯಕ್ಕೆ ಒಳಪಡಿಸಿ ನಿರಂಕುಶ ಪ್ರಭುತ್ವವನ್ನು ಸ್ಥಾಪಿಸಲು ಯತ್ನಿಸುತ್ತಿರುವುದನ್ನು ಗಮನಿಸುತ್ತಲೇ ಬಂದಿದ್ದೇವೆ. ಕಲೆ ಮತ್ತು ಸಾಹಿತ್ಯ ಮೂಲತಃ ಸಮಾಜದ ಸ್ವಾಸ್ಥ್ಯವನ್ನು ಕೆಡದಂತೆ ಎಚ್ಚರ ವಹಿಸುವ ಸೂಕ್ಷ್ಮವಲಯಗಳು. ಈ ಕ್ಷೇತ್ರಗಳು ಭ್ರಷ್ಟವಾದಷ್ಟೂ ಸಮಾಜ ಹದಗೆಡುತ್ತಾ ಹೋಗುತ್ತದೆ. ರಾಜಪ್ರಭುತ್ವದ ಯುಗದಲ್ಲಿ ಈ ಕ್ಷೇತ್ರಗಳು ವಂದಿಮಾಗಧ ಸಂಸ್ಕೃತಿಗೆ ಬದ್ಧವಾಗಿದ್ದವು. ಆದರೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸ್ವಾಯತ್ತೆ ಬಯಸುತ್ತವೆ. ದುರಂತ ಎಂದರೆ ಆಡಳಿತ ವ್ಯವಸ್ಥೆಗೆ ವಂದಿಮಾಗಧ ಸಂಸ್ಕೃತಿಯೇ ಅಪ್ಯಾಯಮಾನವಾಗಿ ಕಾಣುತ್ತದೆ.

ಕನ್ನಡದ ಆಧುನಿಕ ರಂಗಭೂಮಿಯ ಭೀಷ್ಮ ಎಂದೇ ಹೆಸರಾದ ಶ್ರೀಯುತ ಬಿ.ವಿ. ಕಾರಂತರ ಕನಸಿನ ಕೂಸು ರಂಗಾಯಣ. ಕಾರಂತರ ದೃಷ್ಟಿಯಲ್ಲಿ ಕ್ರಿಯಾಶೀಲತೆ ರಂಗಭೂಮಿ ಮತ್ತು ಇತರ ಕಲೆಗಳ ಆತ್ಮವಾದರೆ ಚಲನಶೀಲತೆ ಅದರ ಧಮನಿಯಾಗಿತ್ತು. ಕನ್ನಡ ರಂಗಭೂಮಿಯನ್ನು ಕರ್ನಾಟಕದಲ್ಲಿ ಮಾತ್ರ ಬೆಳೆಸಲು ಯತ್ನಿಸದೆ ದೇಶಾದ್ಯಂತ ಬೆಳೆಸುವ ಒಂದು ದೂರದೃಷ್ಟಿಯ ಚಿಂತನೆ ಕಾರಂತರಿಗಿತ್ತು. ಈ ಚಿಂತನೆಗೆ ಪೂರಕವಾಗಿ ಅಂದಿನ ರಾಜ್ಯ ಸರಕಾರ ರಂಗಾಯಣದ ಸ್ಥಾಪನೆಗೆ ಅವಕಾಶ ನೀಡಿದಾಗ ಈ ಸಂಸ್ಥೆಯ ಧ್ಯೇಯೋದ್ದೇಶಗಳು ಸ್ಪಷ್ಟವಾಗಿದ್ದವು. ಕರ್ನಾಟಕದಲ್ಲಿ ಬೇರಾವ ಸಂಸ್ಥೆಯೂ ಆಯೋಜಿಸದಂತಹ ನಾಟಕಗಳನ್ನು, ನಾಟಕೋತ್ಸವಗಳನ್ನು ರಂಗಾಯಣ ಆಯೋಜಿಸಿದೆ. ಇಲ್ಲಿ ಪ್ರತಿ ವರ್ಷ ನಡೆಯುವ ಬಹುರೂಪಿ ನಾಟಕೋತ್ಸವ ಮತ್ತು ಮಕ್ಕಳಿಗಾಗಿ ಬೇಸಿಗೆಯಲ್ಲಿ ನಡೆಸುವ ಚಿನ್ನರ ಮೇಳ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದ್ದು ನಾಟಕ, ಕಲೆ ಮತ್ತು ಮನರಂಜನೆಯ ಮಾಧ್ಯಮಕ್ಕೆ ಹೊಸ ಆಯಾಮ ನೀಡಿದೆ. ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ನಾಟಕವನ್ನು ಅಹೋರಾತ್ರಿ ಪ್ರದರ್ಶಿಸಿದ ಒಂದು ಹೊಸ ಪ್ರಯತ್ನಕ್ಕೂ ರಂಗಾಯಣ ನಾಂದಿ ಹಾಡಿದೆ. ಆದರೆ ಇತ್ತೀಚಿನ ಹಲವು ವರ್ಷಗಳಿಂದ ರಂಗಾಯಣ ನಾಟಕ ಮತ್ತು ಕಲೆಗಿಂತಲೂ ವ್ಯಕ್ತಿಗತ ಪ್ರತಿಷ್ಠೆ, ವೈಯ್ಯಕ್ತಿಕ ಹಿತಾಸಕ್ತಿ ಮತ್ತು ಸೈದ್ಧಾಂತಿಕ ಸಂಘರ್ಷಗಳಿಗೆ ಹೆಸರಾಗಿದೆ.

ಒಂದು ಸರಕಾರಿ ಅನುದಾನಿತ ಸಂಸ್ಥೆಯಾಗಿ ರಂಗಾಯಣ ಪೂರ್ಣ ಸ್ವಾಯತ್ತೆಯನ್ನು ಪಡೆದಿಲ್ಲ. ಹಾಗೊಮ್ಮೆ ಸ್ವಾಯತ್ತೆ ಪಡೆದರೂ ಸಹ ಈಗ ಕಾಣಲಾಗುತ್ತಿರುವ ಸೈದ್ಧಾಂತಿಕ ಸಂಘರ್ಷ ನಿಲ್ಲುವುದೂ ಇಲ್ಲ. ಕಾರಣ ಭಾರತದ ಸಂದರ್ಭದಲ್ಲಿ ಕಲೆ, ನಾಟಕ ಮತ್ತಿತರ ಸಾಂಸ್ಕೃತಿಕ ಪ್ರಕಾರಗಳು ಸದಾ ಭಿನ್ನತೆಯ ನಡುವೆಯೇ ಸಾಗುತ್ತವೆ. ಸಾಂಪ್ರದಾಯಿಕ, ಪಾರಂಪರಿಕ, ಆಧುನಿಕ, ಆಧುನಿಕೋತ್ತರ, ಪ್ರಗತಿಪರ ಹೀಗೆ ವಿಭಿನ್ನ ಲೇಬಲ್‌ಗಳನ್ನು ಹೊತ್ತು ತಿರುಗುವ ಕಲಾಪ್ರಪಂಚದಲ್ಲಿ ಭಿನ್ನ ನಿಲುವು, ಭಿನ್ನಾಭಿಪ್ರಾಯ ಮತ್ತು ವೈವಿಧ್ಯತೆ ಸಹಜ, ಸ್ವಾಭಾವಿಕ. ಆದರೂ ರಂಗಾಯಣದ ವೈಶಿಷ್ಟ್ಯವೆಂದರೆ ಕಳೆದ ಎರಡು ದಶಕಗಳಲ್ಲಿ ತನ್ನ ಜನಪರ ನಿಲುವನ್ನು ಕಾಪಾಡಿಕೊಂಡು ಬಂದಿದ್ದರೆ ಅದಕ್ಕೆ ಕಾರಣ ಈ ಸಂಸ್ಥೆಯನ್ನು ಪೋಷಿಸಿ, ಬೆಳೆಸಿ ಮುನ್ನಡೆಸಿರುವ ಕಲಾವಿದರು ಮತ್ತು ಅವರ ಕಲಾ ಬದ್ಧತೆ. ಇಂದಿಗೂ ರಂಗಾಯಣದ ಅಂಗಣದಲ್ಲಿ ಈ ಬದ್ಧತೆಗೆ ಕೊರತೆಯಿಲ್ಲ. ಅಥವಾ ಕಲಾ ಪ್ರತಿಭೆಗೆ, ನೈಪುಣ್ಯತೆಗೆ ಕೊರತೆ ಕಂಡುಬರುತ್ತಿಲ್ಲ. ರಂಗಾಯಣದ ನಿರ್ದೇಶಕರಾಗಿ ನೇಮಿಸಲ್ಪಡುವವರು ಸರಕಾರದ ಮರ್ಜಿಗೆ ಒಳಪಟ್ಟಿದ್ದರೂ ಆಡಳಿತಾತ್ಮಕ ಹಾಗೂ ಹಣಕಾಸಿನ ಅಧಿಕಾರಗಳನ್ನು ನೀಡದೆ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ.

ಈಗ ರಾಜ್ಯ ಸರಕಾರ ರಂಗಾಯಣದಲ್ಲಿ ಮತ್ತೊಂದು ರಾಮಾಯಣವನ್ನು ಸೃಷ್ಟಿಸಲು ಮುಂದಾಗಿರುವುದು ದುರದೃಷ್ಟಕರ. ಏಕಾಏಕಿ ರಂಗಾಯಣ ನಿರ್ದೇಶಕರನ್ನು ವಜಾ ಮಾಡುವ ಸರಕಾರದ ನಿರ್ಧಾರ ಅವಿವೇಕದ ಕ್ರಮ ಎಂದು ಹೇಳಲು ಅಡ್ಡಿಯಿಲ್ಲ. ಸಾಹಿತ್ಯ ಮತ್ತು ಶೈಕ್ಷಣಿಕ ಅಕಾಡಮಿಗಳು ಈಗಾಗಲೇ ಸರಕಾರಿ ಕೃಪಾಪೋಷಿತ ಸಂಸ್ಥೆಗಳಾಗಿದ್ದು ಅಲ್ಲಿನ ನಿರ್ದೇಶಕರು ಸದಾ ಆಡಳಿತಾರೂಢ ಪಕ್ಷಗಳ ಆಣತಿಯಂತೆಯೇ ನಡೆಯುವಂತಾಗಿದೆ. ಈಗ ಬಹುಶಃ ರಂಗಾಯಣದ ಸರದಿ ಎನಿಸುತ್ತದೆ. ಇದು ಒಂದು ಸಂಸ್ಥೆಯ ಪ್ರಶ್ನೆಯಲ್ಲ, ಕರ್ನಾಟಕದ ಕಲೆ ಮತ್ತು ಸಂಸ್ಕೃತಿಯ ಇತಿಹಾಸದ ಪ್ರಶ್ನೆ. ಅಕಾಡಮಿಗಳಲ್ಲಿ ಸರಕಾರದ ಹಸ್ತಕ್ಷೇಪವನ್ನು ಈವರೆಗೂ ಕರ್ನಾಟಕದ ಸಾಹಿತ್ಯ ವಲಯ ಬಲವಾಗಿ ವಿರೋಧಿಸಿದ್ದನ್ನು ಕಂಡಿಲ್ಲ. ಈಗ ರಂಗಾಯಣವೂ ಇದೇ ರೀತಿ ಅನಾಥ ಶಿಶು ಆಗುತ್ತಿದೆ. ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಉಂಟಾಗುತ್ತಿರುವ ಬದಲಾವಣೆಗಳ ಹಿನ್ನೆಲೆಯಲ್ಲಿ ನೋಡಿದಾಗ ಸಾಂಸ್ಕೃತಿಕ ರಾಷ್ಟ್ರೀಯತೆ ಕಲೆ ಮತ್ತು ಸಾಹಿತ್ಯ ಕ್ಷೇತ್ರವನ್ನೂ ನುಂಗಿ ಹಾಕುವ ಸೂಚನೆಗಳು ಸ್ಪಷ್ಟವಾಗುತ್ತಿದೆ.

 ಕರ್ನಾಟಕ ಸರಕಾರದ ಕ್ರಮವನ್ನು ಸಮರ್ಥಿಸುವ ಮನಸ್ಸುಗಳು ದಿನೇ ದಿನೇ ಹೆಚ್ಚಾಗುತ್ತಿರುವುದನ್ನೂ ಇಲ್ಲಿ ಗಮನಿಸಬಹುದು. ರಂಗಭೂಮಿಯಲ್ಲಿ ಇನ್ನೂ ಮಾನವ ಸಂವೇದನೆಯ ಸೂಕ್ಷ್ಮ ತರಂಗಗಳು ಜೀವಂತವಾಗಿವೆ. ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದಲ್ಲಿ ಈ ತರಂಗಗಳು ಈಗಾಗಲೇ ಪ್ರಕ್ಷುಬ್ಧವಾಗಿದ್ದು ಕೆಲವೇ ದನಿಗಳು ಸಂವೇದನೆಯನ್ನು ಹೊರಸೂಸುತ್ತಿವೆ. ಪ್ರಚಲಿತ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ನೋಡಿದಾಗ ರಂಗಭೂಮಿಯನ್ನೂ ಆಧಿಪತ್ಯ ರಾಜಕಾರಣದ ಕರ್ಮಭೂಮಿಯನ್ನಾಗಿ ಪರಿವರ್ತಿಸುವ ಹುನ್ನಾರವನ್ನು ಅಲ್ಲಗಳೆಯಲಾಗುವುದಿಲ್ಲ. ಈವರೆಗೂ ಭಾರತದ ರಂಗಭೂಮಿ ತನ್ನ ಅಸ್ಮಿತೆಯನ್ನು ಉಳಿಸಿಕೊಂಡಿರುವುದೇ ಅಲ್ಲದೆ ಸಮಾಜೋ ಸಾಂಸ್ಕೃತಿಕ ವ್ಯತ್ಯಯಗಳಿಂದ ಅಂತರ ಕಾಪಾಡಿಕೊಂಡು ಬಂದಿದೆ. ಕರ್ನಾಟಕದ ರಂಗಾಯಣ ಈ ನಿಟ್ಟಿನಲ್ಲಿ ಹೆಚ್ಚಿನದನ್ನೇ ಸಾಧಿಸಿದೆ. ಬಹುಶಃ ಈಗ ಸರ್ಜಿಕಲ್ ಸ್ಟ್ರೈಕ್ ನಡೆಯುವ ಸಾಧ್ಯತೆಗಳು ಹೆಚ್ಚಾಗಿವೆ. ಆಧಿಪತ್ಯ ರಾಜಕಾರಣದಲ್ಲಿ ಯುದ್ಧ ಯಾವ ರೂಪದಲ್ಲಾದರೂ ಸಂಭವಿಸಬಹುದು ಎನ್ನುವುದಕ್ಕೆ ಇಂತಹ ದಾಳಿಗಳು ನಿದರ್ಶನವಾಗಿ ನಿಲ್ಲುತ್ತವೆ.

ಕನ್ನಡದ ಅಸ್ಮಿತೆಯನ್ನೇ ಪ್ರಶ್ನಿಸುವಂತೆ ಹಿಂದಿ ಹೇರಿಕೆಯ ದನಿ ಗಟ್ಟಿಯಾಗುತ್ತಿರುವ ಬೆನ್ನಲ್ಲೇ ರಂಗಭೂಮಿಯನ್ನೂ ಕಲುಷಿತಗೊಳಿಸುವ ಪ್ರಯತ್ನಗಳು ನಡೆಯುತ್ತಿರುವುದು ದುರಂತದ ಸೂಚನೆ ಎಂದೇ ಹೇಳಬಹುದು. ಕರ್ನಾಟಕದ ಸಾಂಸ್ಕೃತಿಕ ದನಿಗಳು ಈ ಸಂದರ್ಭದಲ್ಲಿ ಒಂದಾಗಬೇಕಿದೆ. ಕನ್ನಡದ ಉಳಿವು ಎಂದರೆ ನಾಮಫಲಕಗಳಲ್ಲಿ ರಾರಾಜಿಸುವ ಅಕ್ಷರಗಳ ರಕ್ಷಣೆ ಮಾತ್ರವೇ ಅಲ್ಲ. ಅಕ್ಷರಗಳು ಅಳಿಸಿ ಹೋದರೂ ಆಕರಗಳು ಸುರಕ್ಷಿತವಾಗಿರುವುದು ಅತ್ಯವಶ್ಯ. ಕನ್ನಡದ ಅಸ್ತಿತ್ವ ಮತ್ತು ಅಸ್ಮಿತೆಯ ಆಕರಗಳು ಇರುವುದು ಕಲೆ, ಸಂಸ್ಕೃತಿ, ಸಾಹಿತ್ಯ, ಸಂಗೀತ ಮತ್ತು ರಂಗಭೂಮಿಯಲ್ಲಿ ಎನ್ನುವ ವಾಸ್ತವವನ್ನು ಇನ್ನಾದರೂ ಗ್ರಹಿಸಬೇಕಿದೆ. ಶೈಕ್ಷಣಿಕ ವಲಯದಲ್ಲಿ ಈಗಾಗಲೇ ಕನ್ನಡವನ್ನು ನಿರ್ಲಕ್ಷಿಸಲಾಗಿದೆ. ಈಗ ಸಾಂಸ್ಕೃತಿಕ ವಲಯದ ಮೇಲೆ ದಾಳಿ ಸಂಭವಿಸಿದೆ. ಇದು ರಾಜಕೀಯ ಪ್ರಶ್ನೆಯಲ್ಲ. ಪಕ್ಷ ರಾಜಕಾರಣದ ಪ್ರಶ್ನೆಯೂ ಅಲ್ಲ. ಆಳುವ ವರ್ಗಗಳ ಬಣ್ಣ ಒಂದೇ ಎಂಬ ವಾಸ್ತವವನ್ನು ಅರಿತಿದ್ದೇವೆ. ಹಾಗೆಯೇ ಕಲೆ ಮತ್ತು ಸಂಸ್ಕೃತಿಯ ವಲಯವನ್ನು ಪ್ರತಿನಿಧಿಸುವ ಸಂವೇದನಾಶಿಲ ಮನಸ್ಸುಗಳ ಬಣ್ಣವೂ ಒಂದೇ ಆಗಿರಬೇಕಲ್ಲವೇ? ಹೌದು ಎಂದು ನಿರೂಪಿಸುವುದೇ ನಮ್ಮ ಮುಂದಿರುವ ಸವಾಲು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)