varthabharthiಅನುಗಾಲ

ಯುಗ (ಪ್ರ)ವರ್ತಕರು

ವಾರ್ತಾ ಭಾರತಿ : 25 Sep, 2019
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಕಳೆದ ಬಾರಿ ಅಮೆರಿಕದಲ್ಲಿ ನೆಲೆಸಿದ ಭಾರತೀಯರಲ್ಲಿ ಹೆಚ್ಚಿನ ಪ್ರಮಾಣದ ಮತದಾರರು ಡೆಮಾಕ್ರಟಿಕ್ ಪಕ್ಷವನ್ನು ಬೆಂಬಲಿಸಿದ್ದರು. ‘‘ಅಮೆರಿಕವು ಅಮೆರಿಕನ್ನರಿಗೇ’’ ಎಂಬ ಟ್ರಂಪ್ ಘೋಷಣೆ ಭಾರತೀಯರೂ ಸೇರಿದಂತೆ ಅಲ್ಲಿನ ವಿದೇಶೀಯರಲ್ಲಿ ತಳಮಳವನ್ನು ಮೂಡಿಸಿತ್ತು. ಆದರೆ ನಮ್ಮ ಪ್ರಧಾನಿಯವರು ಈ ದೇಶದ ತನ್ನ ಚುನಾವಣಾ ಪ್ರಚಾರ ಘೋಷಣೆಯನ್ನು ಅಮೆರಿಕಕ್ಕೆ ರಫ್ತು ಮಾಡಿ ‘‘ಅಬ್ ಕಿ ಬಾರ್ ಟ್ರಂಪ್ ಸರಕಾರ್’’ ಎಂದು ಘೋಷಿಸುವ ಮೂಲಕ ಟ್ರಂಪ್‌ರವರ ಚುನಾವಣಾ ಪ್ರಚಾರವನ್ನು ಮಾಡಿ ಅಲ್ಲಿನ ಆಂತರಿಕ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಿದರು. ಮುಂದೆ ಟ್ರಂಪ್ ಗೆದ್ದರೆ ಸರಿ, ಈ ‘ಟ್ರಂಪ್ ಕಾರ್ಡ್’ ಜೂಜು ಕೆಲಸಮಾಡಲೂಬಹುದು. ಆದರೆ ಸೋತರೆ?ಭಾರತದ ಪ್ರಧಾನಿಯವರು ನಿಜಕ್ಕೂ ಉತ್ತಮ ವಿದೇಶಾಂಗ ಸಚಿವರು ಮತ್ತು ಅದಕ್ಕೂ ಮಿಗಿಲಾಗಿ ಅತ್ಯುತ್ತಮ ಪ್ರವಾಸೋದ್ಯಮ ಸಚಿವರು ಎಂಬಂತೆ ದುಡಿಯುತ್ತಿರುತ್ತಾರೆ. ಅವರು ಏನನ್ನೂ ರಫ್ತು ಮಾಡಬಲ್ಲರು. ಅಮೆರಿಕದ ಟೆಕ್ಸಾಸ್‌ನ ಹ್ಯೂಸ್ಟನ್‌ನಲ್ಲಿ ನಡೆಸಿದ ‘ಹೌಡಿ ಮೋದಿ’ ಅಥವಾ ‘ಹೌಡಿ ಮೋಡಿ’ ಪ್ರಾಯೋಜಿತ ಕಾರ್ಯಕ್ರಮವು ಈ ಮತ್ತು ಇನ್ನು ಕೆಲವು ಭಾರತೀಯ ಅಂಶಗಳನ್ನು ಬೆಳಕಿಗೆ ತಂದಿದೆ. ಪ್ರಧಾನಿಯವರು ಸದಾ ವಿದೇಶ ಪ್ರವಾಸದಲ್ಲಿರಬಲ್ಲರು. ಏಕೆಂದರೆ ಈ ದೇಶದ ಸಮಸ್ತ ವ್ಯವಹಾರವನ್ನು ಅಕ್ಷರಶಃ ಕೇಂದ್ರ ಗೃಹಸಚಿವ ಶಾ ವಹಿಸಿಕೊಂಡಿದ್ದಾರೆ. ಇತರ ಸಂದರ್ಭಗಳಲ್ಲಿ ಗೃಹ ಸಚಿವರಿಗೆ ಇಷ್ಟು ಪ್ರಾಧಾನ್ಯ ಲಭಿಸುತ್ತಿರಲಿಲ್ಲ. ಆದರೆ ಅವರು ಆಳುವ ಪಕ್ಷದ ಅಧ್ಯಕ್ಷರೂ ಆಗಿರುವುದರಿಂದ ಅವರು ಒಂದರ್ಥದಲ್ಲಿ ಪ್ರಧಾನಿಯನ್ನೂ ಮೀರಿದ ಸರ್ವೋಚ್ಚ ನಾಯಕ. ಪ್ರಧಾನಿಯ ಮಾತಿಗೆ ಮಣೆ ಹಾಕುವವರು ಇರಬಹುದು; ಆದರೆ ಶಾ ಅವರದ್ದು ಹಸೆಮಣೆಯೇರುವ ಮಾತು. ಈ ಮದುಮಕ್ಕಳಿಂದಾಗಿ ಇತರ ಸಚಿವರು ‘ಅವರೂ ಓಡಿದರು’ (also ran) ವರ್ಗಕ್ಕೆ ಸೇರಿದ್ದಾರೆ.

ಪ್ರಜಾಟೀಕೆ ಯಾವತ್ತೂ ರಾಜಕೀಯವಾಗಿರಬಾರದು. ಆ ಕೆಲಸವನ್ನು ಪ್ರತಿಪಕ್ಷದ ಕೆಲವು ರಾಜಕಾರಣಿಗಳು ಮಾಡಬಲ್ಲರು. (ಈಗ ಅನೇಕ ಪ್ರತಿಪಕ್ಷನಾಯಕರು ತಾವೆಲ್ಲಿದ್ದೇವೆಂಬ ಗೊಂದಲ-ಗಲಿಬಿಲಿಯೊಂದಿಗೆ ತಮ್ಮ ಟೀಕೆಗಳನ್ನು ಮೊಂಡಾಗಿಸಿದ್ದಾರೆ ಅಥವಾ ಅರ್ಥಹೀನವಾಗಿಸಿದ್ದಾರೆ, ಮತ್ತು ತಮ್ಮದೇ ಪಕ್ಷಗಳನ್ನು ಇರಿಸುಮುರಿಸಿಗೆ ಹಾಕುತ್ತಿದ್ದಾರೆ! ಇದರಿಂದ ಪರೋಕ್ಷವಾದ ಲಾಭವಿದೆ. ಒಂದು ವೇಳೆ ತಮ್ಮ ಪಕ್ಷವು ಇದನ್ನು ಅಶಿಸ್ತೆಂದು ಪರಿಗಣಿಸಿ ಹೊರದಬ್ಬಿದರೆ ಅದೇ ನೆಪವಾಗಿ ನೇರ ಆಡಳಿತ ಶಿಬಿರವನ್ನು ಸೇರಿಕೊಳ್ಳಬಹುದು. ಈ ವಿಭೀಷಣ ನೀತಿ ತ್ರೇತಾಯುಗಕ್ಕಿಂತಲೂ ಇಂದು ಹೆಚ್ಚು ಪ್ರಚಲಿತವಾಗಿದೆ!) ಪ್ರಜೆಗಳೇ ಪ್ರತಿಪಕ್ಷದ ಕೆಲಸವನ್ನು ಮಾಡಬೇಕಾದ ವಾತಾವರಣ ಸೃಷ್ಟಿಯಾಗಿದೆ. ಎಲ್ಲವೂ ಹೊಗಳಿಕೆ ಮತ್ತು ಮೌನದಲ್ಲಿ ತುಂಬಿಕೊಂಡಾಗ ಮಾತು ತನ್ನ ಅರ್ಥವನ್ನು ಕಳೆದುಕೊಳ್ಳಬಾರದೆಂಬ ಉದ್ದೇಶವಿದ್ದರೆ ಮಾತು ಸಮರ್ಥ ಮತ್ತು ಸಮಾರ್ಥದಲ್ಲಿರಬೇಕಾಗಿದೆ.

ಯಾವುದೇ ಅಧಿಕಾರಸ್ಥ ರಾಜಕಾರಣಿ ವಿದೇಶದಲ್ಲಿ ತನ್ನ ದೇಶವನ್ನು ಹೀನೈಸುವ ಯಾವ ಮಾತನ್ನೂ ಆಡಬಾರದು. ಹಾಗೆಯೇ ತನ್ನ ಜನರನ್ನು ಟೀಕಿಸಬಾರದು. ಅಷ್ಟೇ ಅಲ್ಲ, ತನ್ನ ದೇಶದ ಆಂತರಿಕ ವ್ಯವಸ್ಥೆಯನ್ನು ಬಯಲಿಗೆಳೆಯಬಾರದು. ಅಲ್ಲಿ ದೇಶದ ಘನತೆಯೆಂದರೆ ದೇಶೀಯರ ಘನತೆಯೂ ಹೌದು. ದೇಶದೊಳಗಣ ಪ್ರತಿಪಕ್ಷಗಳು ವಿದೇಶದಲ್ಲಿ ಸ್ವದೇಶೀಯರೇ ವಿನಾ ವಿರೋಧಿಗಳಲ್ಲ. ಆದರೆ ನಮ್ಮ ರಾಜಕಾರಣಿಗಳು ಇಂತಹ ತತ್ವಕ್ಕೆ ತಿಲಾಂಜಲಿ ನೀಡಿ ಎಲ್ಲಿ ಹೋದರೂ ತಮ್ಮ ಬಗ್ಗೆ ಹೊಗಳಿಕೊಳ್ಳುತ್ತಾ ತಾನಿನ್ನೂ ಹೆಚ್ಚು ಸಾಧಿಸುತ್ತಿದ್ದೆ, ಆದರೆ ಪ್ರತಿಪಕ್ಷಗಳು ಎಲ್ಲದಕ್ಕೂ ಅಡ್ಡ ಬರುತ್ತಿವೆ ಎಂಬಂತೆ ಮಾತನಾಡುತ್ತಾರೆ. ಹಿಂದೆಲ್ಲ ಸರಕಾರದ ಪರವಾಗಿ ಹೋಗುವವರ ಕಾರ್ಯಕ್ರಮ ಪಟ್ಟಿಯನ್ನು ಸರಕಾರವೇ ನಿರ್ಧರಿಸುತ್ತಿತ್ತು. ಅದು ಸರಳವಾಗಿರುತ್ತಿತ್ತು, ಗಂಭೀರವಾಗಿರುತ್ತಿತ್ತು. ಇಂತಹ ಪ್ರವಾಸ ಕೈಗೊಂಡಾಗ ಆಯಾಯ ದೇಶದ ಜನರು ತಮ್ಮ ಹುಟ್ಟೂರಿನ ನಾಯಕನೊಬ್ಬ ಬರುತ್ತಾರೆಂಬ ಸಂತೋಷದಿಂದ ವೈಯಕ್ತಿಕ ಉತ್ಸಾಹದಿಂದ ಪಾಲ್ಗೊಳ್ಳಬಹುದಿತ್ತು ಮತ್ತು ಪಾಲ್ಗೊಳ್ಳುತ್ತಿದ್ದರು. ಆದರೆ ಈಗೀಗ ನಾಯಕರ ಪ್ರವಾಸದಲ್ಲಿ ಕೃತಕ ಮತ್ತು ಒಂದು ರೀತಿಯ ರಣೋತ್ಸಾಹ/ಜನೋತ್ಸಾಹವನ್ನು ಸೃಷ್ಟಿಸಲಾಗುತ್ತಿದೆ. ಅದಕ್ಕಾಗಿ ಪಕ್ಷದ ಸಂಘಟನೆಯು ಮೊದಲೇ ಅಲ್ಲಿಗೆ ಹೋಗಿ ಅಲ್ಲಿನ ಸಮಾನ ಮನಸ್ಕರನ್ನು ಸೇರಿಸಿ ಈ ಪ್ರವಾಸ ನಭೂತೋ ಎಂಬಂತೆ ಆಗಬೇಕೆಂಬ ರೀತಿಯಲ್ಲಿ ಕೆಲಸಮಾಡುತ್ತಾರೆ ಮತ್ತು ಅದಕ್ಕೆ ಆ ದೇಶದೊಳಗೆ ಹೆಚ್ಚು ಪ್ರಚಾರ ಸಿಗದಿದ್ದರೂ ನಮ್ಮ ದೇಶದಲ್ಲಿ ಧಾರಾಳ ಪ್ರಚಾರ ಸಿಗುವಂತೆ ಮಾಡುತ್ತಾರೆ.

ತಮ್ಮನ್ನು ತಾವು ಮಾರಿಕೊಂಡಂತಿರುವ ಮಾಧ್ಯಮಗಳು ವಾಚಾಮಗೋಚರ ಹೊಗಳುತ್ತಾರೆ. ಈಚೆಗೆ ಭಾರತದ ಪ್ರಧಾನಿ ಮೋದಿಯವರು ವಿದೇಶಕ್ಕೆ ಹೋದಾಗಲೆಲ್ಲ ಅವರಿಗೆ ಸಿಕ್ಕ ಸ್ವಾಗತ, ಪ್ರಾಮುಖ್ಯತೆ ಇವೆಲ್ಲ ಹಿಂದೆಂದೂ ಯಾರಿಗೂ ಸಿಗಲಿಲ್ಲವೇನೋ ಎಂಬಂತೆ ಬರುತ್ತಿರುವ ದೇಶೀಯ ಮಾಧ್ಯಮ ವರದಿಗಳನ್ನೂ ಆಯಾಯ ವಿದೇಶಗಳ ಮಾಧ್ಯಮ ವರದಿಗಳನ್ನೂ ಹೋಲಿಸಿದರೆ ನಿಜಾಂಶ ಗೊತ್ತಾಗುತ್ತದೆ. ಯಾವುದೇ ದೇಶಕ್ಕೆ ಹೋದಾಗಲೂ ಅಲ್ಲಿನ ನಾಯಕರು ತಮ್ಮ ವ್ಯಾಪಾರನುಕೂಲತೆಗೆ ತಕ್ಕಂತೆ ಅತಿಥಿ-ಗಣ್ಯರನ್ನು ಹೊಗಳುವುದು ವಾಡಿಕೆ. ಅದು ಪದನಿಮಿತ್ತವೇ ಹೊರತು ವೈಯಕ್ತಿಕವಲ್ಲ. ಅಮೆರಿಕಕ್ಕೆ ಪ್ರಧಾನಿ ಮೋದಿ ಹೋದಾಗಲೆಲ್ಲ ನಮ್ಮ ಮಾಧ್ಯಮಗಳಲ್ಲಿ ಅವರೊಬ್ಬ ವಿಶ್ವನಾಯಕರಾಗಿದ್ದಾರೆಂದು (ಹಾಗೆ ಆಗಿದ್ದರೆ ಸಂತೋಷ ಮತ್ತು ಹೆಮ್ಮೆ ಪಡಬಹುದು!) ಬಿಂಬಿಸುವುದು ದೇಶೀಯ ರಾಜಕಾರಣಕ್ಕೆ ಮತ್ತು ಅಧಿಕಾರದ ಉಳಿವಿಗೆ ಮತ್ತು ಚುನಾವಣಾ ಗೆಲುವಿಗೆ ಸಹಕಾರಿಯಾಗಬಹುದೇ ಹೊರತು ದೇಶದ ಹಿತ ಸಾಧನೆಗಲ್ಲ. ಅಮೆರಿಕಕ್ಕೆ ಮೋದಿಯೂ ಬೇಕು, ಇಮ್ರಾನ್‌ಖಾನರೂ ಬೇಕು. (ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಅಮೆರಿಕದ ಪರಮಾಪ್ತ ಮಿತ್ರ ಸೌದಿ ಅರೇಬಿಯದ ರಾಜಕುಮಾರನ ವಿಮಾನದಲ್ಲಿ ಅಮೆರಿಕಕ್ಕೆ ಪ್ರಯಾಣಿಸಿದ್ದು ಆಕಸ್ಮಿಕವೇನಲ್ಲ!) ಇವರಿಬ್ಬರ ನಡುವೆ ಅಮೆರಿಕ ತನ್ನ ವ್ಯಾಪಾರದ ಆಸಕ್ತಿಯನ್ನು ಬೆಳೆಸಿಕೊಳ್ಳುತ್ತದೆಯೇ ಹೊರತು ಈ ನಾಯಕರನ್ನು ಹೋಲಿಸಿ ಗೌರವಿಸುವುದಿಲ್ಲ.

ಮೊನ್ನೆ ಮೊನ್ನೆಯ ವರೆಗೆ ಅಮೆರಿಕದ ಅಧ್ಯಕ್ಷ ಟ್ರಂಪ್ ಆತ್ಮೀಯವಾಗಿ ಮಾತನಾಡಿಸುತ್ತಿದ್ದ ಇಸ್ರೆಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಈಗ ಇಳಿಜಾರಿನಲ್ಲಿರುವುದರಿಂದ ಅವರನ್ನು ಟ್ರಂಪ್ ಈಗ ದೂರ ಸರಿಸುತ್ತಿರುವುದು ರಹಸ್ಯವೇನಲ್ಲ. ಇದು ರಾಜಕಾರಣ. ದೇಶದ ಆಂತರಿಕ ರಾಜಕಾರಣದಲ್ಲಿ ಒಂದಿಷ್ಟು ಸೌಜನ್ಯವಿದ್ದೀತು; ಅಂತರ್‌ರಾಷ್ಟ್ರೀಯ ರಾಜಕಾರಣದಲ್ಲಿ ದೇಶ-ದೇಶಗಳ ನಡುವಣ ಸಂಬಂಧದಲ್ಲಿ ನಾಯಕರು ಗೌಣವಾಗುತ್ತಾರೆ. ನಮ್ಮ ದೇಶಾಭಿಮಾನಿಗಳು ಗಮನಿಸದಿರುವ ಮತ್ತು ಗಮನಿಸಬೇಕಾದ ಒಂದು ಅಂಶವೆಂದರೆ ನಮ್ಮ ಪ್ರಧಾನಿ ಮೋದಿಯವರು ಮತ್ತು ಅವರ ಬೆಂಬಲಿಗರು ಗಾಂಧಿ, ನೆಹರೂ ಮುಂತಾದ ವಿಶ್ವಮಟ್ಟದ ನಮ್ಮ ಪಾರಂಪರಿಕ ನಾಯಕರನ್ನು ಪರೋಕ್ಷವಾಗಿ ಅವಮಾನಿಸುವುದು. ಭೂತವಿಲ್ಲದೆ ವರ್ತಮಾನವಿಲ್ಲ; ಭವಿಷ್ಯವೂ ಇಲ್ಲ. ಇದು ಸ್ಪಷ್ಟವಾಗಬೇಕಾದರೆ ಈ ಬಾರಿ ಮೋದಿ ಹ್ಯೂಸ್ಟನ್ ಸಮಾರಂಭದಲ್ಲಿ ಪಾಲ್ಗೊಂಡಾಗ ಅವರನ್ನು ಸ್ವಾಗತಿಸಿದ ಅಮೆರಿಕದ ಸದನದ ಬಹುಮತೀಯ ನಾಯಕರು ಗಾಂಧಿ, ನೆಹರೂ, ಜಾತ್ಯತೀತ ಪ್ರಜಾಪ್ರಭುತ್ವ ವ್ಯವಸ್ಥೆ, ಬಹುಮುಖೀ ಸಮಾಜ ಹಾಗೂ ಮಾನವ ಹಕ್ಕುಗಳ ಬಗ್ಗೆ ಗೌರವ- ಈ ಐದು ಅಂಶಗಳಿಗಾಗಿ ಭಾರತ ಹೆಸರುವಾಸಿಯಾದದ್ದನ್ನು ನೆನಪಿಸಿದ್ದು ಅಭಿನಂದನೆಗಿಂತಲೂ ಹೆಚ್ಚಾಗಿ ಎಚ್ಚರಿಕೆಯ ಕರೆಗಂಟೆಯಂತಿತ್ತು. ಬಹುತ್ವವು ಭಾರತದ ಪ್ರಜಾತಂತ್ರದ ಬುನಾದಿಯೆಂದು ಮತ್ತು ನಮ್ಮ ವಿವಿಧ ಭಾಷೆಗಳು ನಮ್ಮ ಉದಾರ ಮತ್ತು ಪ್ರಜಾಪ್ರಭುತ್ವ ಸಮಾಜದ ಮುಖ್ಯ ಕೈಗನ್ನಡಿಯೆಂದು ಮೋದಿ ಅಮೆರಿಕದಲ್ಲಿ ನೀಲಕಂಠ ಭಾಷಣ ಮಾಡಿದರೂ ಇಲ್ಲಿ ಅದು ಕುಸಿಯುತ್ತಿದೆಯೆಂಬ (ಇದೇ ಸಮಯಕ್ಕೆ ಶಾ ಇಲ್ಲಿ ಒಂದೇ ಭಾಷೆಯ ಅದ್ವೈತ ಕಹಳೆಯನ್ನೂದುತ್ತಿದ್ದರು!) ವಿಚಾರವನ್ನು ಅವರು ಹೇಳಲಿಲ್ಲ. (ಈ ರಹಸ್ಯಗಳು ಅಮೆರಿಕಕ್ಕೆ ಗೊತ್ತಿಲ್ಲದ ವಿಚಾರಗಳೇನಲ್ಲ!)

ಇತಿಹಾಸವನ್ನು ಮೆಲುಕು ಹಾಕಿ ಹೋಲಿಸಬಾರದು. ಆದರೂ ನಮ್ಮ ಪ್ರಧಾನಿಯವರ ಮಾನದಂಡದ ಕೆಂಪು ಹಾಸಿನ ಸ್ವಾಗತವನ್ನು ಹಳತಿನೊಂದಿಗೆ ಹೋಲಿಸುವುದಾದರೆ ನೆನಪಿಡಬೇಕಾದ ಅಂಶವೆಂದರೆ ಅಮೆರಿಕದ ಅಧ್ಯಕ್ಷರು ವಿಮಾನ ನಿಲ್ದಾಣದಲ್ಲೇ ಸ್ವಾಗತಿಸಿದ ಭಾರತದ ಪ್ರಧಾನಿಯೆಂದರೆ ನೆಹರೂ ಒಬ್ಬರೇ. ನೆಹರೂ 1949ರಲ್ಲಿ ಅಮೆರಿಕಕ್ಕೆ ಹೋದಾಗ ಆಗಿನ ಅಧ್ಯಕ್ಷ ಹ್ಯಾರಿ ಎಸ್.ಟ್ರೂಮನ್ ಅವರನ್ನು ವಿಮಾನ ನಿಲ್ದಾಣದಲ್ಲೇ ಬರಮಾಡಿಕೊಂಡರು. ಆನಂತರ 1961ರಲ್ಲಿ ನೆಹರೂ ಅಮೆರಿಕ ಪ್ರವಾಸ ಕೈಗೊಂಡಾಗ ಆಗಿನ ಅಧ್ಯಕ್ಷ ಜಾನ್ ಎಫ್. ಕೆನಡಿ ನೆಹರೂ ಅವರನ್ನು ವಿಮಾನ ನಿಲ್ದಾಣದಿಂದಲೇ ಸ್ವಾಗತಿಸಿ ಕರೆದೊಯ್ದರು. ಅಲಿಪ್ತ ನೀತಿ ಮತ್ತು ಅಮೆರಿಕ- ಸೋವಿಯತ್‌ಒಕ್ಕೂಟದ ನಡುವೆ ಭಾರತವು ತೂಗುಯ್ಯಾಲೆಯಾಡುತ್ತಿದ್ದ ದಿನಗಳವು ಎಂಬುದನ್ನು ನೆನಪು ಮಾಡಿಕೊಂಡರೆ ನೆಹರೂ ಅವರಿಗೆ ಅಮೆರಿಕ ನೀಡಿದ ಗೌರವದ ಘನತೆ ಅರ್ಥವಾದೀತು. ಪಾಶ್ಚಾತ್ಯ ದೇಶಗಳೆಲ್ಲವೂ ಮಾರ್ವಾಡಿತನಕ್ಕೆ ಪ್ರಸಿದ್ಧಿ. ಭಾರತದ ವಸಾಹತುಶಾಹಿ ರಾಜಕೀಯವನ್ನು ಗಮನಿಸಿದರೆ ಎಲ್ಲರೂ ವ್ಯಾಪಾರಕ್ಕೆಂದು ಬಂದವರೇ. ಬಂದವರು ಬಂಧುಗಳಾಗಲಿಲ್ಲ; ಬದಲಿಗೆ ಇಲ್ಲಿ ಬೇರೂರಿ ನಮ್ಮ ಸ್ವಾತಂತ್ರ್ಯವನ್ನು ಸ್ವಲ್ಪಸ್ವಲ್ಪವೇ ಕಸಿದು ನಮ್ಮ ನೆಲದಲ್ಲೇ ನಮ್ಮನ್ನು ಗುಲಾಮರನ್ನಾಗಿ ಮಾಡಿದರು. (ಹಾಗೆ ನೋಡಿದರೆ ಅದಕ್ಕೆ ಹಿಂದಣ ಆಕ್ರಮಣಕಾರರು ನೇರ ಭಾರತವನ್ನು ಜಯಿಸಲೆಂದೇ ಬಂದವರು!)

ಟ್ರಂಪ್ ಈ ವಿಚಾರದಲ್ಲಿ ಬಹು ಸೂಕ್ಷ್ಮ ರಾಜಕೀಯ ಮುತ್ಸದ್ದಿತನವನ್ನು ಪ್ರದರ್ಶಿಸಿದ್ದಾರೆ. ತಮ್ಮ ರಾಜಕೀಯ ಭವಿಷ್ಯಕ್ಕೆ ಬೇಕಾದ್ದನ್ನು ಅವರು ತೋರಿಸಿದರು. ಕಳೆದ ಬಾರಿ ಅಮೆರಿಕದಲ್ಲಿ ನೆಲೆಸಿದ ಭಾರತೀಯರಲ್ಲಿ ಹೆಚ್ಚಿನ ಪ್ರಮಾಣದ ಮತದಾರರು ಡೆಮಾಕ್ರಟಿಕ್ ಪಕ್ಷವನ್ನು ಬೆಂಬಲಿಸಿದ್ದರು. ‘‘ಅಮೆರಿಕವು ಅಮೆರಿಕನ್ನರಿಗೇ’’ ಎಂಬ ಟ್ರಂಪ್ ಘೋಷಣೆ ಭಾರತೀಯರೂ ಸೇರಿದಂತೆ ಅಲ್ಲಿನ ವಿದೇಶೀಯರಲ್ಲಿ ತಳಮಳವನ್ನು ಮೂಡಿಸಿತ್ತು. ಆದರೆ ನಮ್ಮ ಪ್ರಧಾನಿಯವರು ಈ ದೇಶದ ತನ್ನ ಚುನಾವಣಾ ಪ್ರಚಾರ ಘೋಷಣೆಯನ್ನು ಅಮೆರಿಕಕ್ಕೆ ರಫ್ತು ಮಾಡಿ ‘‘ಅಬ್ ಕಿ ಬಾರ್ ಟ್ರಂಪ್ ಸರಕಾರ್’’ ಎಂದು ಘೋಷಿಸುವ ಮೂಲಕ ಟ್ರಂಪ್‌ರವರ ಚುನಾವಣಾ ಪ್ರಚಾರವನ್ನು ಮಾಡಿ ಅಲ್ಲಿನ ಆಂತರಿಕ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಿದರು. ಮುಂದೆ ಟ್ರಂಪ್ ಗೆದ್ದರೆ ಸರಿ, ಈ ‘ಟ್ರಂಪ್ ಕಾರ್ಡ್’ ಜೂಜು ಕೆಲಸಮಾಡಲೂಬಹುದು. ಆದರೆ ಸೋತರೆ? ಡೆಮಾಕ್ರಟಿಕ್ ಪಕ್ಷದ ಮುನಿಸನ್ನು ಎದುರಿಸಬೇಕಾಗಬಹುದು. ಹಾಗೊಂದು ವೇಲೆ ಅವರೂ ಸಂದರ್ಭಕ್ಕೆ ಸರಿಯಾಗಿ ವರ್ತಿಸಿದರೂ ನಮ್ಮ ಘನತೆ ಎಲ್ಲಿಗಿಳಿದೀತು? ಇಲ್ಲೇ ಮೋದಿ ಎಡವಿದ್ದು.

ಈ ಬಾರಿಯ ಭೇಟಿಯಲ್ಲಿ ಭಾರತಕ್ಕೆ ವ್ಯಾವಹಾರಿಕವಾಗಿ ಏನೂ ಲಾಭವಾದಂತಿಲ್ಲ. ಆದರೆ ಅಮೆರಿಕ ಈಗಾಗಲೇ ತನ್ನ ವ್ಯಾಪಾರದ ಬಂಡವಾಳವನ್ನು ಭಾರತಕ್ಕೆ ಹರಿಸುವ ದಿಸೆಯಲ್ಲಿದೆ. ಇನ್ನೂ ಮುಖ್ಯವಾಗಿ ಟ್ರಂಪ್ ಪಾಕಿಸ್ತಾನದೊಂದಿಗಿನ ತನ್ನ ವ್ಯಾಪಾರದ ಅಭಿವೃದ್ಧಿಯನ್ನು ಹೆಚ್ಚಿಸುವ ಮಾತನ್ನಾಡಿದ್ದಾರೆ. ಭಾರತಕ್ಕೆ ಅಮೆರಿಕದ ಬಾಸ್ಕೆಟ್ ಬಾಲ್ ಬರುವುದಂತೂ ನಿಶ್ಚಿತ. ಅಮೆರಿಕದ ಬುಟ್ಟಿ ತುಂಬುವ ಇದು ಭಾರತಕ್ಕೆ ಸಂತಸ ತರುವ ವಿಚಾರವೇನೂ ಅಲ್ಲ. ಮುಖ್ಯವಾದ ಇನ್ನೊಂದು ಅಂಶವೆಂದರೆ ಕಾಶ್ಮೀರದ ಕುರಿತ ಭಾರತ-ಪಾಕಿಸ್ತಾನದ ನಡುವಣ ಭಿನ್ನಾಭಿಪ್ರಾಯದ ಕುರಿತು ಭಾರತವು ತನ್ನ ನಿಲುವನ್ನು ಸ್ಪಷ್ಟಪಡಿಸಿ ಇದು ದ್ವಿಪಕ್ಷೀಯ ಸಮಸ್ಯೆಯೇ ಹೊರತು ಜಾಗತಿಕ ಸಮಸ್ಯೆಯಲ್ಲ ಮತ್ತು ಇದನ್ನು ವಿಶ್ವದ ಯಾವೊಂದು ದೇಶವೂ ಅಥವಾ ವಿಶ್ವಸಂಸ್ಥೆಯೂ ಪ್ರವೇಶಿಸಿ ಬಗೆಹರಿಸುವಂತಿಲ್ಲ ಎಂದಿದೆ. ಕಾಶ್ಮೀರದ ಬಗ್ಗೆ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿ ನಮ್ಮ ಸಂಸದರಿಗೆ ಅಮೆರಿಕದ ಭಾರತೀಯ ಪ್ರೇಕ್ಷಕರಿಂದ ಚಪ್ಪಾಳೆೆಯನ್ನು ಗಿಟ್ಟಿಸಿದರೂ ಟ್ರಂಪ್ ಆಗಾಗ ಆಕಳಿಸಿದಂತೆ ತಾನು ಬೇಕಾದರೆ ಮಧ್ಯ ಪ್ರವೇಶಿಸಬಲ್ಲೆ ಎಂದು ಹೇಳಿಕೆ ಕೊಡುತ್ತಿರುವುದು ಯಾವ ಪುರುಷಾರ್ಥಕ್ಕೆ? ಇಂತಹ ಮಾತುಗಳಿಗೆ ಒಂದು ಪೂರ್ಣವಿರಾಮ ಹಾಕಿಸಲು ಭಾರತಕ್ಕೆ ಸಾಧ್ಯವಾಗುತ್ತಿಲ್ಲ ಯಾಕೆ?

ಯಾರೇ ಪ್ರಧಾನಿಯಾದರೂ ವಿದೇಶದಲ್ಲಿ ಅವರು ನಮ್ಮ ಪ್ರಧಾನಿ. ಅವರು ದೇಶದ ಘನತೆಯನ್ನು ಎತ್ತಿಹಿಡಿಯಬೇಕೆಂದು ಬಯಸುತ್ತೇವೆ. ಆದರೆ ನಮ್ಮವರನ್ನು ಹೀಯಾಳಿಸಿ ವಿದೇಶದ ದಂತಗೋಪುರದಲ್ಲಿ ಕೂರಬಹುದೆಂದು ತಿಳಿಯುವುದು ಮೂರ್ಖತನ. ಮಗನೊಬ್ಬ ತನ್ನ ತಂದೆತಾಯಿಗಳನ್ನು ಹೋದಲ್ಲಿ ಹಳಿದರೆ ಅಂತಹವರ ಮಗ ಈತ ಹೇಗಿರಬಹುದೆಂದು ಜನರು ಅಳೆಯುವುದು ಖಚಿತ. ಹಾಗೆಯೇ ಗಾಂಧಿ ಹುಟ್ಟಿದ ಈ ನೆಲದಿಂದ ಯಾರೇ ಎಲ್ಲೇ ಹೋದರೂ ಗಾಂಧಿ ಎಂಬ ವ್ಯಕ್ತಿಯನ್ನಲ್ಲದಿದ್ದರೂ ಗಾಂಧಿ ಎಂಬ ವಿಚಾರವನ್ನು ಮುಂದಿಟ್ಟುಕೊಂಡು ಮತ್ತು ನೆಹರೂ ಎಂಬ ಮೊದಲ ಪ್ರಧಾನಿ ಕೊನೇ ಪಕ್ಷ ಒಳ್ಳೆಯ ಮಾತುಗಾರ, ಲೇಖಕ ಎಂಬಂತಾದರೂ ಉಲ್ಲೇಖಿಸಿ ಮಾತನಾಡಿದರೆ ಹೋದವರಿಗೂ ಅವರ ಮಾತು ಮತ್ತು ಕ್ರಿಯೆಗಳಿಗೂ ಗೌರವ.

ಕೆಂಪುಹಾಸಿನ ವಿಶ್ವವಿಜೇತರು ಈ ಮತ್ತು ಇಂತಹ ಇತರ ಗತವೈಭವಗಳನ್ನು ನೆನಪಿಡುವುದು ಮಾಧ್ಯಮದ ಹೊರತಾದ ವರ್ತಮಾನವೆಂಬ ಕಾಲಮಾನ ವೂ ಇದೆಯೆಂಬಂತೆ ವರ್ತಿಸುವುದು ಅವರಿಗೂ ಈ ದೇಶಕ್ಕೂ ಈ ದೇಶದ ಜಾತ್ಯತೀತ ಬಹುಮುಖಿ ಸಮಾಜದ ಉಳಿವಿಗೂ ಒಳ್ಳೆಯದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)