varthabharthi

ಸಂಪಾದಕೀಯ

ಉಪಚುನಾವಣೆ: ಬಿಜೆಪಿಗೆ ಬಿಸಿ ತುಪ್ಪ

ವಾರ್ತಾ ಭಾರತಿ : 25 Sep, 2019

ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ರಚನೆಯಾದ ನೂತನ ಸರಕಾರ ವಿಶ್ವಾಸ ಮತವನ್ನೇನೋ ಗೆದ್ದಿರಬಹುದು. ಆದರೆ ಅದರ ನಿಜವಾದ ಅಗ್ನಿಪರೀಕ್ಷೆಯ ಇನ್ನಷ್ಟೇ ನಡೆಯಬೇಕಾಗಿದೆ. ಶಾಸಕರನ್ನು ಖರೀದಿ ಮಾಡಿ ಸಾಬೀತು ಮಾಡಿದ ವಿಶ್ವಾಸ ಅಸಲಿಯೇ ನಕಲಿಯೇ ಎನ್ನುವುದನ್ನು ಉಪಚುನಾವಣೆ ಉಜ್ಜಿ ನೋಡಲಿದೆ. ಈ ಪರೀಕ್ಷೆಯಲ್ಲಿ ವಿಫಲವಾದರೆ ಸರಕಾರ ಅಲುಗಾಡುವುದು ಖಚಿತ. ಸರಕಾರ ಉರುಳಿದರೂ ಅಚ್ಚರಿಯೇನೂ ಇಲ್ಲ. ಬಿಜೆಪಿಯ ಸಂಖ್ಯೆ ಇಳಿಮುಖವಾಗಿ, ಈಗ ಪರಸ್ಪರ ಕಚ್ಚಾಡುತ್ತಿರುವ ಜೆಡಿಎಸ್-ಕಾಂಗ್ರೆಸ್ ಒಂದಾಗಿ ಮತ್ತೆ ಸರಕಾರ ರಚನೆ ಮಾಡುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ತನ್ನ ಸರಕಾರವನ್ನು ಉಳಿಸಿಕೊಳ್ಳಬೇಕಾದರೆ ಈ ಉಪ ಚುನಾವಣೆಯನ್ನು ಗೆಲ್ಲಲೇ ಬೇಕಾದಂತಹ ಅನಿವಾರ್ಯ ಯಡಿಯೂರಪ್ಪರಿಗಿದೆ. ಆದರೆ ಸದ್ಯದ ಪರಿಸ್ಥಿತಿ ಯಡಿಯೂರಪ್ಪ ಅವರಿಗೆ ಪೂರಕವಾಗಿರುವಂತೆ ಕಾಣಿಸುತ್ತಿಲ್ಲ. ಯಡಿಯೂರಪ್ಪ ತನ್ನ ಪಕ್ಷದೊಳಗೆ ಹೋರಾಟದಲ್ಲಿ ಗೆದ್ದ ಬಳಿಕ ಉಪಚುನಾವಣೆಯ ಕಡೆಗೆ ಮುಖ ಮಾಡಬೇಕಾದ ಸನ್ನಿವೇಶವಿದೆ.

ಮೊತ್ತ ಮೊದಲಾಗಿ ಅನರ್ಹರ ಕುರಿತಂತೆ ಸುಪ್ರೀಕೋರ್ಟ್ ಇನ್ನೂ ತನ್ನ ನಿರ್ಧಾರವನ್ನು ಸ್ಪಷ್ಟಪಡಿಸಿಲ್ಲ. ಒಂದು ವೇಳೆ ಸುಪ್ರೀಂಕೋರ್ಟ್ ರಾಜೀನಾಮೆ ನೀಡಿದ ಶಾಸಕರನ್ನು ‘ಅನರ್ಹರು, ಚುನಾವಣೆಯಲ್ಲಿ ಭಾಗವಹಿಸುವಂತಿಲ್ಲ’ ಎಂದು ಹೇಳಿದರೆ ಯಡಿಯೂರಪ್ಪ ಒಂದಿಷ್ಟು ನಿರಾಳರಾಗಬಹುದು. ಸುಪ್ರೀಂಕೋರ್ಟ್‌ನ ಕಡೆಗೆ ಕೈ ತೋರಿಸಿ, ‘ನಾನು ಅಸಹಾಯಕ’ ಎಂದು ಕೈ ಚೆಲ್ಲಿದರೆ ಅನರ್ಹರು ಬಾಲ ಬಿಚ್ಚುವಂತಿಲ್ಲ. ಬಿಜೆಪಿಯೊಳಗಿನ ಸ್ಪರ್ಧಾಕಾಂಕ್ಷಿಗಳೂ ನಿರಾಳವಾಗಿ ನಾಮಪತ್ರ ಸಲ್ಲಿಸಬಹುದು.ಅನರ್ಹರು ‘ತಮಗೆ ಅನ್ಯಾಯವಾಯಿತು’ ಎಂದು ಒಂದಿಷ್ಟು ಚೀರಾಡಬಹುದು. ಆದರೆ ಸುಪ್ರೀಂಕೋರ್ಟ್ ಏನಾದರೂ ಶಾಸಕರ ಅನರ್ಹತೆಯನ್ನು ತೆಗೆದು ಹಾಕಿದ್ದೇ ಆದರೆ ಯಡಿಯೂರಪ್ಪ ಇಕ್ಕಟ್ಟಿಗೆ ಸಿಲುಕಿಕೊಳ್ಳಬೇಕಾಗಿದೆ.

ರಾಜೀನಾಮೆ ನೀಡಿದ ಅಷ್ಟೂ ಶಾಸಕರಿಗೆ ಉಪಚುನಾವಣೆಯಲ್ಲಿ ‘ಟಿಕೆಟ್ ನೀಡುವ’ ಭರವಸೆಯನ್ನು ಯಡಿಯೂರಪ್ಪ ನೀಡಿದ್ದಾರೆ. ಆ ಭರವಸೆಯನ್ನು ಈಡೇರಿಸುವುದು ಅವರ ಕರ್ತವ್ಯವಾಗಿದೆ. ಆದರೆ ಈಗಾಗಲೇ ಆ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಸೋತಿರುವ ಬಿಜೆಪಿಯ ನಿಷ್ಠಾವಂತ ನಾಯಕರು ಮತ್ತೆ ಟಿಕೆಟ್ ಆಕಾಂಕ್ಷಿಗಳಾಗಿ ಬೀದಿಗಿಳಿದಿದ್ದಾರೆ. ತಮ್ಮ ಕ್ಷೇತ್ರಗಳಲ್ಲಿ ಪಕ್ಷಕ್ಕಾಗಿ ಹಗಲಿರುಳು ದುಡಿದು ಕಾರ್ಯಕರ್ತರ ಪಡೆಯನ್ನು ಕಟ್ಟಿಕೊಂಡಿರುವ ಈ ನಾಯಕರು, ಹೊರಗಿನಿಂದ ಬಂದ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವುದಕ್ಕೆ ಅವಕಾಶ ಕೊಡುವುದು ಕಷ್ಟ. ಹಾಗೊಂದು ವೇಳೆ ಅವಕಾಶ ನೀಡಿದರೆ, ಬಿಜೆಪಿಯ ಈ ನಾಯಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಶಾಶ್ವತವಾಗಿ ಮೂಲೆಗುಂಪಾಗಬೇಕಾಗುತ್ತದೆ. ಉಪಚುನಾವಣೆಯಲ್ಲಿ ಈ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ನಾಯಕರು ಬಂಡೇಳುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

ಇದೇ ಸಂದರ್ಭದಲ್ಲಿ ಅನರ್ಹ ಶಾಸಕರನ್ನು ಬಿಜೆಪಿಯಿಂದ ಮತ್ತೆ ಸ್ಪರ್ಧೆಗಿಳಿಸಿದರೆ ಗೆಲ್ಲುವುದಕ್ಕೆ ಹಲವು ಅಡೆತಡೆಗಳಿವೆ. ಮುಖ್ಯವಾಗಿ ಇವರು ಇತ್ತೀಚೆಗೆ ಹಣ ಮತ್ತು ರಾಜಕೀಯ ಕಾರಣಗಳಿಗಾಗಿ ವಲಸೆ ಬಂದಿರುವ ನಾಯಕರು. ಇವರ ಜೊತೆಗೆ ಬಿಜೆಪಿ ಕಾರ್ಯಕರ್ತರು ಬದ್ಧವಾಗಿ ನಿಲ್ಲುತ್ತಾರೆ ಎನ್ನುವಂತಿಲ್ಲ. ಜೊತೆಗೆ ಈಗಾಗಲೇ ಮಾಧ್ಯಮಗಳಲ್ಲಿ ‘ಅನರ್ಹರು’ ಎಂದು ಪದೇ ಪದೇ ಬಿಂಬಿಸಲ್ಪಟ್ಟು ಮತದಾರರ ಮುಂದೆ ವರ್ಚಸ್ಸುಹೀನರಾಗಿ ನಗೆಪಾಟಲಿಗೀಡಾಗಿದ್ದಾರೆ. ತಮ್ಮನ್ನು ಆರಿಸಿ ಕಳುಹಿಸಿದ ಮತದಾರರಿಗೆ ವಂಚಿಸುವ ಮೂಲಕ, ವಿಶ್ವಾಸಾರ್ಹತೆಯನ್ನೂ ಕಳೆದುಕೊಂಡಿದ್ದಾರೆ. ಇಂದಿಗೂ, ತಮ್ಮ ರಾಜೀನಾಮೆಗೆ ಕಾರಣವಾದ ಅಂಶಗಳನ್ನು ಮತದಾರರ ಮುಂದಿಡುವಲ್ಲಿ ಅವರು ವಿಫಲರಾಗಿದ್ದಾರೆ. ರಾಜಕೀಯ ವೈಮನಸ್ಯ, ಹಣ ಮತ್ತು ಅಧಿಕಾರದ ದಾಹವಷ್ಟೇ ಇವರ ರಾಜೀನಾಮೆಗಳಿಗೆ ಕಾರಣ ಎಂದು ಬಹುತೇಕ ಮತದಾರರು ನಂಬಿರುವಾಗ, ಮತ್ತೊಮ್ಮೆ ಇವರಿಗೆ ತಮ್ಮ ಮತವನ್ನು ನೀಡುತ್ತಾರೆ ಎನ್ನುವಂತಿಲ್ಲ.

ಈ ಅನರ್ಹರ ವಿರೋಧಿಗಳು ಇದೇ ಅಂಶವನ್ನು ಚುನಾವಣಾ ಪ್ರಚಾರದಲ್ಲಿ ಬಳಸಲಿದ್ದಾರೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇದೇ ಸಂದರ್ಭದಲ್ಲಿ ಅನರ್ಹರು ಬಿಜೆಪಿಯಿಂದ ಸ್ಪರ್ಧಿಸಿದರೆ ಬಿಜೆಪಿಯೊಳಗೇ ಬಹುದೊಡ್ಡ ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ನಾಯಕರು ಮತ್ತು ಅವರ ಹಿಂಬಾಲಕರು ಈ ಅನರ್ಹರ ಜೊತೆಗೆ ಗುರುತಿಸಿಕೊಳ್ಳುವ ಸಾಧ್ಯತೆಗಳು ತೀರಾ ಕಡಿಮೆ. ಜೊತೆಗೆ ಇವರನ್ನು ಸೋಲಿಸಲು ಬಿಜೆಪಿ ನಾಯಕರು ಎದುರಾಳಿಗಳ ಜೊತೆಗೆ ಕೈಜೋಡಿಸಬಹುದು. ಈ ತಿಕ್ಕಾಟಗಳ ನಡುವೆ ಉಪಚುನಾವಣೆಯಲ್ಲಿ ಬಿಜೆಪಿ ತನ್ನೆಲ್ಲ ಸ್ಥಾನಗಳನ್ನು ಕಳೆದುಕೊಂಡರೆ ಸರಕಾರ ಅತಂತ್ರವಾಗಲಿದೆ. ಯಡಿಯೂರಪ್ಪ ಮತ್ತೊಮ್ಮೆ ವಿಶ್ವಾಸ ಮತ ಸಾಬೀತು ಮಾಡುವಂತಹ ಸನ್ನಿವೇಶ ನಿರ್ಮಾಣವಾಗಬಹುದು. ಜೆಡಿಎಸ್-ಕಾಂಗ್ರೆಸ್ ಮತ್ತೊಮ್ಮೆ ಸರಕಾರ ರಚಿಸುವ ಪ್ರಯತ್ನ ಮಾಡಿದರೂ ಅಚ್ಚರಿಯೇನಿಲ್ಲ.

ಅಥವಾ ಯಡಿಯೂರಪ್ಪ ಅವರು ಜೆಡಿಎಸ್ ಕಡೆಗೆ ಕೈಚಾಚಬಹುದು. ಸಾಧಾರಣವಾಗಿ ಉಪಚುನಾವಣೆಗಳು ನಡೆಯುವುದು ಅಧಿಕೃತ ಶಾಸಕರೆನಿಸಿಕೊಂಡವರು ನಿಧನರಾದಾಗ. ಆದರೆ ಇಂದು ಈ ಉಪಚುನಾವಣೆಯನ್ನು ಜನರ ಮೇಲೆ ಹೇರಿರುವುದು ಶಾಸಕರ ವೈಯಕ್ತಿಕ ಸ್ವಾರ್ಥಗಳಿಗಾಗಿ. ಇದು ಜನರು ಬಯಸದ ಚುನಾವಣೆೆ. ಕೆಲವೇ ಕೆಲವರ ಸ್ವಾರ್ಥಕ್ಕಾಗಿ ಈ ಚುನಾವಣೆಯ ವೆಚ್ಚಗಳನ್ನು ಜನಸಾಮಾನ್ಯರು ಭರಿಸಬೇಕಾಗಿದೆ. ಈ ಪ್ರವೃತ್ತಿ ಹೀಗೇ ಮುಂದುವರಿದರೆ, ಪ್ರತಿ ವರ್ಷ ರಾಜ್ಯ ಉಪಚುನಾವಣೆಗಳನ್ನು ಎದುರಿಸಬೇಕಾಗಬಹುದು.

ಸದ್ಯದ ಸ್ಥಿತಿಯಲ್ಲಿ ತಮ್ಮನ್ನು ಮಾರಿಕೊಂಡು ‘ಅನರ್ಹ’ರೆಂಬ ಕಳಂಕ ಅಂಟಿಸಿಕೊಂಡಿರುವ ಶಾಸಕರು ವಾಸ್ತವವನ್ನು ಅರ್ಥೈಸಿಕೊಂಡು ಉಪಚುನಾವಣೆಯಿಂದ ದೂರ ಉಳಿಯುವುದು ಅವರಿಗೂ, ಯಡಿಯೂರಪ್ಪ ಸರಕಾರಕ್ಕೂ ಒಳಿತು. ಕನಿಷ್ಠ ಹೊಸ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಅವಕಾಶವನ್ನಾದರೂ ‘ಅನರ್ಹ’ ಶಾಸಕರು ಮತದಾರರಿಗೆ ನೀಡಬೇಕು. ಇದೇ ಸಂದರ್ಭದಲ್ಲಿ ಮತದಾರರೂ ಜಾಗೃತರಾಗಬೇಕಾಗಿದೆ. ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಶಾಸಕರು ಮತದಾರರ ಅನುಮತಿಯಿಲ್ಲದೆ ರಾಜೀನಾಮೆ ನೀಡುವುದೆಂದರೆ, ಮತದಾರರ ಮತಗಳನ್ನು ಇನ್ನೊಂದು ಪಕ್ಷಕ್ಕೆ ಮಾರುವುದೆಂದು ಅರ್ಥ. ಈ ಬಾರಿಯ ಉಪಚುನಾವಣಾ ಫಲಿತಾಂಶ, ತಮ್ಮನ್ನು ತಾವು ಮಾರಿಕೊಳ್ಳುವ ಶಾಸಕರಿಗೆ, ಕುದುರೆ ವ್ಯಾಪಾರದ ಮೂಲಕ ಅಧಿಕಾರ ಹಿಡಿಯುವ ನಾಯಕರಿಗೆ ಒಂದು ಎಚ್ಚರಿಕೆಯಾಗಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)