varthabharthi

ಆರೋಗ್ಯ

ಲ್ಯುಕೇಮಿಯಾಕ್ಕೆ ಕಾರಣಗಳು ಮತ್ತು ಲಕ್ಷಣಗಳು: ಇಲ್ಲಿದೆ ಸಂಪೂರ್ಣ ವಿವರ

ವಾರ್ತಾ ಭಾರತಿ : 26 Sep, 2019

 ರಕ್ತ ಮತ್ತು ಅಸ್ಥಿಮಜ್ಜೆಯ ಕ್ಯಾನ್ಸರ್‌ನ್ನು ಲ್ಯುಕೇಮಿಯಾ ಎಂದು ಕರೆಯಲಾಗುತ್ತದೆ. ಈ ಸ್ಥಿತಿಯಿದ್ದಾಗ ಆರೋಗ್ಯಕರ ರಕ್ತಕಣಗಳನ್ನು ಉತ್ಪಾದಿಸಲು ಶರೀರಕ್ಕೆ ಸಾಧ್ಯವಾಗುವುದಿಲ್ಲ. ಹೊಸ ರಕ್ತಕಣಗಳು ಉತ್ಪಾದನೆಯಾಗುವ ಅಸ್ಥಿಮಜ್ಜೆಯಲ್ಲಿ ಲ್ಯುಕೋಮಿಯಾ ಆರಂಭಗೊಳ್ಳುತ್ತದೆ.

  ಅಸ್ಥಿಮಜ್ಜೆಯು ಕೆಂಪು ರಕ್ತಕಣಗಳು (ಆರ್‌ಬಿಸಿ),ಬಿಳಿಯ ರಕ್ತಕಣಗಳು (ಡಬ್ಲುಬಿಸಿ) ಮತ್ತು ಪ್ಲೇಟ್‌ಲೆಟ್‌ಗಳನ್ನು ಉತ್ಪಾದಿಸುತ್ತದೆ. ಲ್ಯುಕೇಮಿಯಾ ಪ್ರಕರಣದಲ್ಲಿ ಅಸ್ಥಿಮಜ್ಜೆಯಲ್ಲಿನ ಅಪಕ್ವ ಜೀವಕೋಶಗಳು ಅಥವಾ ದೋಷಯುಕ್ತ ಜೀವಕೋಶಗಳಿಂದಾಗಿ ಅಸಹಜ ಮತ್ತು ನಿಷ್ಕ್ರಿಯ ಡಬ್ಲುಬಿಸಿಗಳು ಉತ್ಪಾದನೆಯಾಗುತ್ತವೆ. ಇವುಗಳಿಗೆ ಸೋಂಕಿನ ವಿರುದ್ಧ್ದ ಹೋರಾಡಲು ಮತ್ತು ಸೂಕ್ಷ್ಮಜೀವಿಗಳಿಂದ ಶರೀರಕ್ಕೆ ರಕ್ಷಣೆ ನೀಡುವುದು ಸಾಧ್ಯವಾಗುವುದಿಲ್ಲ. ಅಲ್ಲದೆ ತ್ವರಿತವಾಗಿ ವಿಭಜನೆಗೊಂಡು ಸಹಜ ಜೀವಕೋಶಗಳನ್ನು ಆಕ್ರಮಿಸಿಕೊಂಡು ಇತರ ರಕ್ತಕಣಗಳ ಉತ್ಪಾದನೆಗೆ ತಡೆಯನ್ನುಂಟು ಮಾಡುತ್ತವೆ.

ಲ್ಯುಕೇಮಿಯಾ ಸಾಮಾನ್ಯವಾಗಿ ಡಬ್ಲ್ಯುಬಿಸಿಯ ಎರಡು ಪ್ರಮುಖ ವಿಧಗಳಾದ ಲಿಂಫೋಸೈಟ್ ಮತ್ತು ಗ್ರಾನ್ಯುಲೊಸೈಟ್‌ಗಳ ಮೇಲೆ ದಾಳಿ ನಡೆಸುತ್ತದೆ. ಮಹಿಳೆಯರಲ್ಲಿ ಹೋಲಿಸಿದರೆ ಪುರುಷರನ್ನು ಮತ್ತು ವಯಸ್ಕರಿಗಿಂತ ಹಿರಿಯ ಜೀವಗಳನ್ನು ಲ್ಯುಕೇಮಿಯಾ ಕಾಡುವ ಸಾಧ್ಯತೆಗಳು ಹೆಚ್ಚು. ಮಕ್ಕಳಲ್ಲಿ ಸಾಮಾನ್ಯವಾಗಿ 10 ವರ್ಷಗಳಿಗೆ ಮೊದಲು ಈ ರೋಗವು ಕಾಣಿಸಿಕೊಳ್ಳುತ್ತದೆ.

ರೋಗದ ಬೆಳವಣಿಗೆಯ ವೇಗ ಮತ್ತು ರೋಗಪೀಡಿತ ಜೀವಕೋಶಗಳನ್ನು ಆಧರಿಸಿ ಲ್ಯುಕೇಮಿಯಾವನ್ನು ಎಕ್ಯೂಟ್ ಲಿಂಫೋಸೈಟಿಕ್ ಲ್ಯುಕೇಮಿಯಾ,ಕ್ರಾನಿಕ್ ಲಿಂಫೋಸೈಟಿಕ್ ಲ್ಯುಕೇಮಿಯಾ,ಎಕ್ಯೂಟ್ ಮೈಯೆಲೊಜಿನಸ್ ಲ್ಯುಕೇಮಿಯಾ ಮತ್ತು ಕ್ರಾನಿಕ್ ಮೈಯೆಲೊಜಿನಸ್ ಲ್ಯುಕೇಮಿಯಾ ಎಂದು ವರ್ಗೀಕರಿಸಲಾಗಿದೆ.

► ಕಾರಣಗಳು

   ಜೀವಕೋಶಗಳ ಡಿಎನ್‌ಎ ವಿಭಜನೆಗೊಂಡು ಅವುಗಳ ಕಾರ್ಯನಿರ್ವಹಣೆಯಲ್ಲಿ ಕೆಲವು ಅಸಹಜತೆಗಳು ಉಂಟಾಗುವುದು ಲ್ಯುಕೇಮಿಯಾಕ್ಕೆ ಕಾರಣವಾಗಿದೆ. ಅಂದರೆ,ನಮ್ಮ ಶರೀರದ ಪ್ರತಿಯೊಂದು ಜೀವಕೋಶವು ರೂಪುಗೊಳ್ಳುವಾಗಲೇ ಕೆಲವು ಅಂತರ್ಗತ ಸೂಚನೆಯನ್ನು ಹೊಂದಿರುತ್ತದೆ. ದೃಢಪಡಿಸಲಾಗದ ಕಾರಣಗಳಿಂದಾಗಿ ಜೀವಕೋಶದ ಡಿಎನ್‌ಎದಲ್ಲಿ ವಿಭಜನೆಯುಂಟಾದಾಗ ಅವು ವೃದ್ಧಿಗೊಳ್ಳುತ್ತವೆ ಮತ್ತು ತ್ವರಿತವಾಗಿ ವಿಭಜನೆಗೊಂಡು ಅಸ್ಥಿಮಜ್ಜೆಯ ಸಮೀಪ ಸಹಜ ಆರೋಗ್ಯಯುತ ಜೀವಕೋಶಗಳ ನಡುವೆ ದಟ್ಟಣೆಗೊಳ್ಳುತ್ತವೆ. ಈ ಕೋಶಗಳು ಸಾಯುವುದಿಲ್ಲ ಮತ್ತು ಇನ್ನಷ್ಟು ಜಾಗವನ್ನು ಆಕ್ರಮಿಸಿಕೊಳ್ಳುವ ಮೂಲಕ ಅಸ್ಥಿಮಜ್ಜೆಯಿಂದ ಆರೋಗ್ಯಯುತವಾದ ಹೊಸ ರಕ್ತಕಣಗಳು ಉತ್ಪಾದನೆಯಾಗುವುದನ್ನು ತಡೆಯುತ್ತವೆ.

► ಕಾರಣಗಳು

ಆರಂಭದಲ್ಲಿ ಲ್ಯುಕೇಮಿಯಾದ ಲಕ್ಷಣಗಳು ಸೌಮ್ಯವಾಗಿರಬಹುದು,ಆದರೆ ನಂತರ ರಕ್ತಹೀನತೆ,ಊದಿದ ದುಗ್ಧರಸ ಗ್ರಂಥಿಗಳು,ವಸಡುಗಳಿಂದ ರಕ್ತಸ್ರಾವ,ಮಲದಲ್ಲಿ ರಕ್ತ,ಆಗಾಗ್ಗೆ ಸೋಂಕುಂಟಾಗುವುದು,ಅತಿಯಾಗಿ ಬೆವರುವಿಕೆ, ಮೂಳೆಗಳಲ್ಲಿ ಮೃದುತ್ವ,ದಿಢೀರ್ ದೇಹತೂಕ ಇಳಿಕೆ,ಜ್ವರ,ಸುಲಭದಲ್ಲಿ ಮೂಗೇಟುಗಳು,ಸೆಳವು ಮತ್ತು ತಲೆನೋವಿಂತಹ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ರೋಗವು ನರಮಂಡಲಕ್ಕೆ ಹರಡಿದ್ದರೆ ಸ್ನಾಯುಗಳ ನಿಯಂತ್ರಣ ನಷ್ಟ,ಯಕೃತ್ತು ಅಥವಾ ಗುಲ್ಮ ದೊಡ್ಡದಾಗುವಿಕೆಯ ಲಕ್ಷಣಗಳು ಪ್ರಕಟವಾಗುತ್ತವೆ.

► ರೋಗದ ಅಪಾಯವನ್ನುಂಟು ಮಾಡುವ ಕಾರಣಗಳು

ಎಚ್‌ಐವಿ,ಧೂಮ್ರಪಾನ,ಆನುವಂಶಿಕತೆ,ಡೌನ್ ಸಿಂಡ್ರೋಮ್,ಹಿಂದಿನ ಕ್ಯಾನ್ಸರ್ ಚಿಕಿತ್ಸೆಯಲ್ಲಿನ ಅಲ್ಕೈಲೇಟಿಂಗ್ ಕಿಮೊಥೆರಪಿ,ಬೆಂಝೀನ್‌ನಂತಹ ಪೆಟ್ರೋಕೆಮಿಕಲ್‌ಗಳಿಗೆ ಒಡ್ಡಿಕೊಳ್ಳುವಿಕೆ ಮತ್ತು ಕೂದಲಿಗೆ ಹಚ್ಚುವ ಬಣ್ಣ ಇವು ಲ್ಯುಕೇಮಿಯಾದ ಅಪಾಯಕ್ಕೆ ಗುರಿಯಾಗಿಸುವ ಕಾರಣಗಳಾಗಿವೆ.

► ಅಪಾಯಗಳು

ಲ್ಯುಕೇಮಿಯಾಕ್ಕೆ ತುರ್ತು ಚಿಕಿತ್ಸೆಯ ಅಗತ್ಯವಿದೆ,ಇಲ್ಲದೇ ಹೊದರೆ ಅದು ಗಂಭೀರ ತೊಂದರೆಗಳನ್ನುಂಟು ಮಾಡುತ್ತದೆ. ಮೂತ್ರನಾಳ ಸೋಂಕು,ಚರ್ಮದ ಸೋಂಕು,ಸೆಪ್ಸಿಸ್,ಮಿದುಳು,ಕರುಳು ಮತ್ತು ಶ್ವಾಸಕೋಶಗಳಲ್ಲಿ ರಕ್ತಸ್ರಾವ ಮತ್ತು ಸಾವಿಗೂ ಅದು ಕಾರಣವಾಗುತ್ತದೆ.

ಲ್ಯುಕೇಮಿಯಾದ ಹಲವಾರು ಲಕ್ಷಣಗಳು ಇತರ ರೋಗಗಳಲ್ಲಿಯೂ ಕಾಣಿಸಿಕೊಳ್ಳುತ್ತವೆ. ಹೀಗಾಗಿ ರೋಗನಿರ್ಧಾರಕ್ಕೆ ಸೂಕ್ತ ವೈದ್ಯಕೀಯ ತಪಾಸಣೆ ಅಗತ್ಯವಾಗುತ್ತದೆ. ವಿಕಿರಣ ಚಿಕಿತ್ಸೆ,ಕಿಮೊಥೆರಪಿ,ಟಾರ್ಗೆಟೆಡ್ ಥೆರಪಿ,ಬಯಾಲಾಜಿಕಲ್ ಥೆರಪಿಗಳ ಜೊತೆಗೆ ರಕ್ತ ಅಥವಾ ಪ್ಲೇಟ್‌ಲೆಟ್‌ಗಳ ಮರುಪೂರಣ,ಆ್ಯಂಟಿ ವೈರಲ್ ಅಥವಾ ಆ್ಯಂಟಿ ಬಯಾಟಿಕ್‌ಗಳು, ಇಮ್ಯುನೊಗ್ಲೊಬುಲಿನ್ ಚುಚ್ಚುಮದ್ದುಗಳು ಇತ್ಯಾದಿ ವಿಧಾನಗಳ ಮೂಲಕ ಲ್ಯುಕೇಮಿಯಾಕ್ಕೆ ಚಿಕಿತ್ಸೆ ನೀಡಲಾಗುತ್ತದೆ.

ಸಾಮಾನ್ಯವಾಗಿ ಲ್ಯುಕೇಮಿಯಾ ಡಿಎನ್‌ಎಗೆ ಸಂಬಂಧಿಸಿದ್ದಾಗಿರುವುದರಿಂದ ಮತ್ತು ಹೆಚ್ಚಿನ ಪ್ರಕರಣಗಳಲ್ಲಿ ದಿಢೀರನೆ ಕಾಣಿಸಿಕೊಳ್ಳುವುದರಿಂದ ಅದನ್ನು ತಡೆಯಲು ಯಾವುದೇ ನಿರ್ದಿಷ್ಟ ಉಪಾಯಗಳಿಲ್ಲ. ಆದರೆ ಧೂಮ್ರಪಾನ ವರ್ಜನೆ,ಪೆಟ್ರೋಕೆಮಿಕಲ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರೆ ಅಂತಹ ರಾಸಾಯನಿಕಗಳೊಂದಿಗೆ ನೇರ ಸಂಪರ್ಕದ ನಿವಾರಣೆ ಲ್ಯುಕೇಮಿಯಾವನ್ನು ತಡೆಯಲು ಕೆಲವು ಮುನ್ನೆಚ್ಚರಿಕೆ ಕ್ರಮಗಳಾಗಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)