varthabharthi

ಆರೋಗ್ಯ

ಏನಿದು ಮಾಲ್‌ಎಬ್ಸಾರಪ್ಶನ್ ಸಿಂಡ್ರೋಮ್?

ವಾರ್ತಾ ಭಾರತಿ : 26 Sep, 2019

ನಾವು ದಿನನಿತ್ಯ ಸೇವಿಸುವ ಅಗತ್ಯ ಪೋಷಕಾಂಶಗಳು ಮತ್ತು ದ್ರವಗಳನ್ನು ಹೀರಿಕೊಳ್ಳುವುದು ಸಣ್ಣಕರುಳಿನ ಮುಖ್ಯ ಕೆಲಸವಾಗಿದೆ. ನಮ್ಮ ಆಹಾರದಲ್ಲಿಯ ಪ್ರೋಟಿನ್‌ಗಳು,ಕೊಬ್ಬುಗಳು,ಖನಿಜಗಳು ಇತ್ಯಾದಿ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಣ್ಣಕರುಳಿಗೆ ಸಾಧ್ಯವಾಗದಿದ್ದಾಗ ಅಂತಹ ಸ್ಥಿತಿಯನ್ನು ಮಾಲ್‌ಎಬ್ಸಾರಪ್ಶನ್ ಸಿಂಡ್ರೋಮ್(ಎಂಎಸ್) ಎಂದು ಕರೆಯಲಾಗುತ್ತದೆ. ಹೀಗಾದಾಗ ನಾವು ಸೇವಿಸುವ ಆಹಾರದ ಲಾಭಗಳನ್ನು ಪಡೆದುಕೊಳ್ಳಲು ಶರೀರಕ್ಕೆ ಸಾಧ್ಯವಾಗುವುದಿಲ್ಲ.

► ಕಾರಣಗಳು

  ಹಾನಿಗೀಡಾದ ಕರುಳುಗಳು,ಪಿತ್ತಕೋಶ ಅಥವಾ ಯಕೃತ್ತು ರೋಗಗಳು,ಸಣ್ಣ ಕರುಳಿಗೆ ಹಾನಿಯನ್ನುಂಟು ಮಾಡಬಹುದಾದ ಔಷಧಿಗಳು,ಆ್ಯಂಟಿ ಬಯಾಟಿಕ್‌ಗಳ ದೀರ್ಘಕಾಲಿಕ ಬಳಕೆ,ಕ್ರೋನ್ಸ್ ಡಿಸೀಸ್,ದೀರ್ಘಕಾಲಿಕ ಪ್ಯಾಂಕ್ರಿಯಾಟೈಟಿಸ್,ಸಿಲಿಯಾಕ್ ಡಿಸೀಸ್ ಇತ್ಯಾದಿ ಕಾಯಿಲೆಗಳು,ಲ್ಯಾಕ್ಟೋಸ್ ಅಸಹಿಷ್ಣುತೆ,ಗ್ಯಾಸ್ಟ್ರಿಕ್ ಅಥವಾ ತೂಕ ಇಳಿಕೆ ಶಸ್ತ್ರಚಿಕಿತ್ಸೆ, ಕ್ಷಯ ಇತ್ಯಾದಿಗಳು ಸೇರಿದಂತೆ ಹಲವಾರು ಕಾರಣಗಳಿಂದಾಗಿ ಎಂಎಸ್ ಉಂಟಾಗುತ್ತದೆ.

► ಲಕ್ಷಣಗಳು

ರೋಗದ ಕಾರಣದ ತೀವ್ರತೆಗೆ ಅನುಗುಣವಾಗಿ ಎಂಎಸ್ ಲಕ್ಷಣಗಳು ಬದಲಾಗಬಹುದು. ಪದೇ ಪದೇ ಅತಿಸಾರ, ನಾಲಿಗೆಯ ಉರಿಯೂತ ಮತ್ತು ನೋವು,ನಿಶ್ಶಕ್ತಿ,ದಣಿವು,ಹೊಟ್ಟೆಯುಬ್ಬರ,ಹೊಟ್ಟೆ ಸೆಳೆತ,ಮೂಳೆಗಳಲ್ಲಿ ನೋವು, ರಕ್ತಹೀನತೆ,ತೂಕ ಇಳಿಕೆ,ಚರ್ಮದ ಮೇಲೆ ಹಪ್ಪಳೆಗಳಿಂದ ಕೂಡಿದ ದದ್ದುಗಳು ಇವು ಎಂಎಸ್‌ನ ಕೆಲವು ಸಾಮಾನ್ಯ ಲಕ್ಷಣಗಳಾಗಿವೆ.

► ರೋಗನಿರ್ಧಾರ

ರೋಗಿಯು ಎಂಎಸ್‌ನಿಂದ ನರಳುತ್ತಿದ್ದಾನೆಂದು ವೈದ್ಯರು ಶಂಕಿಸಿದರೆ ಲಕ್ಷಣಗಳನ್ನು ಪರಿಶೀಲಿಸಿ ಒಂದು ನಿರ್ಧಾರಕ್ಕೆ ಬರುತ್ತಾರೆ. ಲಕ್ಷಣಗಳನ್ನು ಆಧರಿಸಿ ನಿಖರ ಕಾರಣವನ್ನು ತಿಳಿದುಕೊಳ್ಳಲು ರಕ್ತ,ಬೆವರು ಮತ್ತು ಮಲ ಪರೀಕ್ಷೆ,ಲ್ಯಾಕ್ಟೋಸ್ ಹೈಡ್ರೋಜನ್ ಉಸಿರಾಟ ಪರೀಕ್ಷೆ,ಸಣ್ಣ ಕರುಳಿನ ಬಯಾಪ್ಸಿ,ಎಂಡೊಸ್ಕೋಪಿ ಇತ್ಯಾದಿ ತಪಾಸಣೆಗಳನ್ನು ನಡೆಸುತ್ತಾರೆ.

► ತಡೆಯುವುದು ಹೇಗೆ?

  ಸೋಂಕುಗಳನ್ನು ಕಡೆಗಣಿಸಬೇಡಿ,ಅವು ಕಾಯಿಲೆಗೆ ಮೂಲ ಕಾರಣಗಳಾಗಿಬಹುದು. ಅತಿಯಾದ ಮದ್ಯಪಾನವು ಎಂಎಸ್ ಮತ್ತು ಇತರ ರೋಗಗಳನ್ನು ತರುತ್ತದೆ,ಹೀಗಾಗಿ ಈ ದುಶ್ಚಟದಿಂದ ದೂರವಿದ್ದಷ್ಟೂ ಒಳ್ಳೆಯದು. ನೀರಿನ ಮೂಲ ಯಾವುದು ಎನ್ನುವುದು ಗೊತ್ತಿಲ್ಲದಿದ್ದರೆ ಕಂಡಕಂಡ ಕಡೆಗಳಲ್ಲಿ ನಲ್ಲಿ ನೀರನ್ನು ಸೇವಿಸಬೇಡಿ. ಮನೆಯಿಂದ ಹೊರಗಿದ್ದಾಗ ತಾಜಾ ಆಹಾರಗಳನ್ನೇ ಸೇವಿಸಿ,ಪ್ಯಾಕ್ ಮಾಡಲಾದ ಆಹಾರ ಸೇವನೆಯನ್ನು ನಿವಾರಿಸಿ. ಆ್ಯಂಟಿ ಬಯಾಟಿಕ್‌ಗಳು ಕರುಳುಗಳ ಮೇಲೆ ತೀವ್ರ ಹಾನಿಕಾರಕ ಪರಿಣಾಮವನ್ನುಂಟು ಮಾಡುವುದರಿಂದ ಅವುಗಳ ಬಳಕೆಗೆ ಮಿತಿಯಿರಲಿ,ಬದಲಿಗೆ ನೈಸರ್ಗಿಕ ಆ್ಯಂಟಿ ಬಯಾಟಿಕ್‌ಗಳನ್ನು ಬಳಸಿ. ಅಧಿಕ ನಾರಿನಂಶ ಇರುವ ಆಹಾರವನ್ನು ಸೇವಿಸಿ,ಇದು ಜೀರ್ಣ ಕ್ರಿಯೆಯನ್ನು ಉತ್ತೇಜಿಸುತ್ತದೆ ಹಾಗೂ ಆಹಾರವನ್ನು ಸಂಸ್ಕರಿಸಲು ಮತ್ತು ಪ್ರಮುಖ ಪೋಷಕಾಂಶಗಳನ್ನು ಹೀರಿಕೊಳ್ಳಲು ಶರೀರಕ್ಕೆ ಹೆಚ್ಚು ಸಮಯಾವಕಾಶವನ್ನು ನೀಡುತ್ತದೆ. ಇದು ಎಂಎಸ್ ಉಂಟಾಗುವ ಅಪಾಯವನ್ನು ತಗ್ಗಿಸುತ್ತದೆ. ವಿರೇಚಕಗಳ ಬಳಕೆಯನ್ನು ನಿವಾರಿಸಿ.

  ಅತಿಯಾದ ಒತ್ತಡವು ಸೂಕ್ತವಾಗಿ ಜೀರ್ಣವಾಗುವುದನ್ನು ತಡೆಯುವ ಮೂಲಕ ಜೀರ್ಣ ವ್ಯವಸ್ಥೆಗೆ ವ್ಯತ್ಯಯವನ್ನುಂಟು ಮಾಡುತ್ತದೆ. ಎಂಎಸ್ ಮತ್ತು ಇತರ ಜೀರ್ಣ ಸಮಸ್ಯೆಗಳಿಂದ ಪಾರಾಗಲು ಒತ್ತಡದಿಂದ ಮುಕ್ತಗೊಳ್ಳುವುದು ಮುಖ್ಯವಾಗಿದೆ. ಯೋಗ,ಧ್ಯಾನ ಮತ್ತು ಆಳ ಉಸಿರಾಟದಂತಹ ಕೆಲವು ಒತ್ತಡ ನಿವಾರಕ ಕ್ರಮಗಳನ್ನು ಅನುಸರಿಸಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)