varthabharthi

ನಿಮ್ಮ ಅಂಕಣ

ಈ ವಿವಾದದ ಬೀಜ ಯಾರು ಬಿತ್ತಿದ್ದು?

ವಾರ್ತಾ ಭಾರತಿ : 27 Sep, 2019
-ಪ್ರವೀಣ್ ಎಸ್. ಶೆಟ್ಟಿ, ಬೋಳೂರು, ಮಂಗಳೂರು

ಮಾನ್ಯರೇ,

ಕ್ರಿ.ಶ. 1767ರಿಂದ 1795ರ ವರೆಗೆ ಈಗಿನ ಮಧ್ಯಭಾರತದ ಮಾಳ್ವಾ (ಇಂದೋರ್) ಸಂಸ್ಥಾನದ ರಾಣಿಯಾಗಿದ್ದ ಅಹಿಲ್ಯಾಬಾಯಿ ಹೊಳ್ಕರ್ ಅಯೋಧ್ಯೆಯಲ್ಲಿ 1780ರಲ್ಲಿಯೇ ರಾಮಮಂದಿರ ನಿರ್ಮಾಣ ಮಾಡಿದ್ದಳು ಎಂದು ಹೊಳ್ಕರ್ ಸಂಸ್ಥಾನದ ಇತಿಹಾಸದಲ್ಲಿ ನಮೂದಿತವಾಗಿದೆ. ಈ ರಾಮಮಂದಿರ ಅಯೋಧ್ಯೆಯಲ್ಲಿ ಬಾಬರಿ ಮಸೀದಿಯಿಂದ ದೂರದಲ್ಲಿ ಈಗಲೂ ಇದೆಯಂತೆ. ಈ ವಿಷಯನ್ನು ಸುಪ್ರೀಂ ಕೋರ್ಟಿನ ಗಮನಕ್ಕೆ ಪ್ರತಿವಾದಿಗಳು ತರಬೇಕಿತ್ತು. ಯಾಕೆಂದರೆ 240 ವರ್ಷಗಳ ಹಿಂದೆ ಅಹಿಲ್ಯಾಬಾಯಿ ಈ ರಾಮಮಂದಿರ ನಿರ್ಮಿಸುವಾಗ ಸ್ಥಳೀಯ ಧಾರ್ಮಿಕ ಮುಖಂಡರನ್ನು ಹಾಗೂ ಹಿರಿಯರನ್ನು ಕೇಳಿಯೇ ಸ್ಥಳದ ಆಯ್ಕೆ ಮಾಡಿರುವುದು ಖಚಿತ. ಆದೇ ಸಮಯಕ್ಕೆ ಅಹಿಲ್ಯಾಬಾಯಿ ಮೊಘಲರಿಂದ ದಾಳಿಗೊಳಗಾಗಿದ್ದ ವಾರಣಾಸಿಯ ಕಾಶಿ ವಿಶ್ವನಾಥ ಮಂದಿರ ಹಾಗೂ ಮಥುರಾದ ಶ್ರೀಕೃಷ್ಣ ಜನ್ಮಸ್ಥಾನ ಮಂದಿರಗಳನ್ನೂ ಪುನರ್ ನಿರ್ಮಾಣ ಮಾಡಿದ್ದಾಳೆ. ಈ ಎರಡೂ ಮಂದಿರಗಳನ್ನು ಅವಳು ಸ್ಥಳೀಯ ಧಾರ್ಮಿಕ ಮುಖಂಡರ ಸಲಹೆ ಪಡೆದೇ ಮಸೀದಿಯ ಗೋಡೆಗೆ ತಾಗಿಯೇ ಕಟ್ಟಿಸಿದ್ದು. (ಇವೆರಡೂ ಮಂದಿರಗಳು ಈಗಲೂ ಮಸೀದಿಗೆ ತಾಗಿಯೇ ಇರುವುದನ್ನು ನಾನು ಉತ್ತರ ಪ್ರದೇಶದಲ್ಲಿ ಉದ್ಯೋಗ ನಿಮಿತ್ತ 4 ವರ್ಷ ಇದ್ದಾಗ ನೋಡಿದ್ದೇನೆ). ಹಾಗಿರುವಾಗ ಕೇವಲ ಅಯೋಧ್ಯೆಯ ರಾಮಮಂದಿರವನ್ನು ಮಾತ್ರ ಅಹಿಲ್ಯಾಬಾಯಿ ಹೊಳ್ಕರ್ ಬಾಬರಿ ಮಸೀದಿಯಿಂದ ದೂರ ಕಟ್ಟಿಸಲು ಕಾರಣವೇನೆಂದರೆ ಬಾಬರಿ ಮಸೀದಿಯ ಸ್ಥಳದಲ್ಲಿ ಮೊದಲು ರಾಮಜನ್ಮಸ್ಥಾನವಿತ್ತು ಎಂಬ ನಂಬಿಕೆ ಆಗಿನ ಆ ಪ್ರದೇಶದ ಹಿಂದೂ ಧಾರ್ಮಿಕ ಪಂಡಿತರಲ್ಲಿ ಇರಲೇ ಇಲ್ಲ. ಬ್ರಿಟಿಷರ ಕಾಲದಲ್ಲಿ ಈ ವಿವಾದ ಯಾರೋ ಕುತ್ಸಿತ ಉದ್ದೇಶದಿಂದ ಬಿತ್ತಿರಬಹುದು ಅಷ್ಟೇ. ಕಾಶಿ ಮಥುರಾ ಎರಡೂ ಮಂದಿರಗಳನ್ನು ಅಹಿಲ್ಯಾಬಾಯಿ ಸರಿಯಾದ ಸ್ಥಳದಲ್ಲಿಯೇ ಕಟ್ಟಿಸಿದ್ದಾಳೆ ಎಂದು ಒಪ್ಪುವವರಿಗೆ ಅಯೋಧ್ಯೆಯಲ್ಲಿ ರಾಮಮಂದಿರವನ್ನು ಅವಳು ಸರಿಯಾದ ಸ್ಥಳದಲ್ಲಿಯೇ ಕಟ್ಟಿಸಿದ್ದಾಳೆ ಎಂದು ಒಪ್ಪಲು ಕಷ್ಟವೇನು? ಸಂತ ಕಬೀರದಾಸ್, ಸಂತ ಧನಾನಂದ, ಚೈತನ್ಯ ಮಹಾಪ್ರಭು, ಗುರು ನಾನಕ್ ದೇವ್, ಸಂತ ಮೀರಾಬಾಯಿ ಈ ಮಹಾತ್ಮರೆಲ್ಲಾ ಬಾಬರನ ಸಮಯದಲ್ಲಿಯೇ ಜೀವಿಸಿದ್ದರು. ಒಂದು ವೇಳೆ ಬಾಬರನು ರಾಮಮಂದಿರ ನಾಶ ಮಾಡಿ ಮಸೀದಿ ಕಟ್ಟಿಸಿದ್ದರೆ ಅದನ್ನು ಈ ನಿರ್ಭೀತ ಸಂತ ಮಹಾತ್ಮರು ಟೀಕಿಸದೇ ಬಿಡುತ್ತಿರಲಿಲ್ಲ.

ಬಾಬರನ ಸಮಕಾಲೀನರಾಗಿದ್ದ ಮಹಾನ್ ರಾಮಭಕ್ತ ಗೋಸ್ವಾಮಿ ತುಳಸಿದಾಸರು ಅಯೋಧ್ಯೆಗೆ ಹತ್ತಿರವೇ ಇರುವ ವಾರಣಾಸಿಯಲ್ಲಿ ಜೀವನವಿಡೀ ವಾಸವಿದ್ದರು. ಆವರು ರಾಮಚರಿತ ಮಾನಸ ಮಾತ್ರವಲ್ಲ ಇತರ ಇಪ್ಪತ್ತು ಭಕ್ತಿ ಸಾಹಿತ್ಯವನ್ನೂ ಅಯೋಧ್ಯಾ-ವಾರಣಾಸಿ ಪ್ರದೇಶದ ಜನರ ಆಡು ಭಾಷೆಯಾದ ‘ಅವಧಿ’ ಉಪಭಾಷೆಯಲ್ಲಿ ರಚಿಸಿದ್ದಾರೆ. ಅವರು ತಾವೇ ರಚಿಸಿದ ಇಪ್ಪತ್ತು ಭಕ್ತಿ ಸಾಹಿತ್ಯದಲ್ಲಿ ಎಲ್ಲಿಯೂ ಅಯೋಧ್ಯೆಯಲ್ಲಿ ರಾಮ ಜನ್ಮಸ್ಥಾನವಿದ್ದ ವಿಷಯವಾಗಲೀ ಅಥವಾ ಅದನ್ನು ಬಾಬರ್ ನಾಶ ಮಾಡಿದ ಬಗ್ಗೆಯಾಗಲೀ ಕೋಪ ದುಃಖ ಪ್ರಕಟಿಸಿಲ್ಲ! ಈಗ ಸುಪ್ರೀಂಕೋರ್ಟಿನಲ್ಲಿ ವಾದ ಪ್ರತಿವಾದ ನಡೆಸುತ್ತಿರುವ ಪಕ್ಷದವರು ಇವನ್ನೆಲ್ಲ ಗಮನಿಸಬೇಕು!

-ಪ್ರವೀಣ್ ಎಸ್. ಶೆಟ್ಟಿ, ಬೋಳೂರು, ಮಂಗಳೂರು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)