varthabharthi

ನಿಮ್ಮ ಅಂಕಣ

ಝಿಂದಗೀ ಕೆ ಬಾದ್ ಭಿ

'ಮನೆಯ ಮಾತು ಬೀದಿಗೆ ಬಾರದಿರಲು ಈಗಲೇ ವೀಲುನಾಮೆ ಮಾಡಿಸಿ ಬಿಡಿ'

ವಾರ್ತಾ ಭಾರತಿ : 27 Sep, 2019

ನಿಮ್ಮ ಬಳಿ ಈಗ ಏನಿಲ್ಲವೆಂದರೂ ಸಂಪಾದಿಸಿದ ಅಲ್ಪಸ್ವಲ್ಪ ಆಸ್ತಿಯಿದೆ. ಮನೆಯಲ್ಲಿ ಹೆಂಡತಿ - ಮಕ್ಕಳಿದ್ದಾರೆ. ಎಲ್ಲವೂ ಕ್ಷೇಮ. ಏನೂ ತಕರಾರಿಲ್ಲ. ಹಾಗಾದರೆ ತಡ ಮಾಡಬೇಡಿ. ಮುಂದಿನ ವಾರ ನೋಡೋಣ... ಎನ್ನದಿರಿ. ವೀಲುನಾಮೆ ರಿಜಿಸ್ಟರ್ ಮಾಡಲು ಇದಕ್ಕಿಂತ ಒಳ್ಳೆಯ ಸಮಯವೇ ಇಲ್ಲ.  ಮರಣಾ ನಂತರ ನಿಮ್ಮ ಆಸ್ತಿಪಾಸ್ತಿಯ ವಿಲೇವಾರಿ ಅಂದರೆ ವೀಲುನಾಮೆ ಯಾನೆ ಮರಣ ಶಾಸನ ರಿಜಿಸ್ಟರ್ ಮಾಡಿಬಿಡಿ‌. ನಂದನವನದಂತಿರುವ ನಿಮ್ಮ ಕುಟುಂಬ ಈ ವೀಲುನಾಮೆ ಕಾರಣದಿಂದಾಗಿ ಹಾಗೆಯೇ ಮುಂದುವರಿಯಬಹುದು- ನಿಮ್ಮ ನಂತರವೂ.

ಸಾಯುವ ಮಾತು ಈಗೇಕೆ ? ನಾನು ಚೆನ್ನಾಗಿದ್ದೇನೆ ಗಟ್ಟಿಮುಟ್ಟಾಗಿದ್ದೇನೆ ಎನ್ನುವ ಆಲೋಚನೆ ಬಂದರೆ ಅದಕ್ಕೆ ಸೊಪ್ಪು ಹಾಕದಿರಿ. ಮರಣವು ಅರ್ಜಿ ಸಲ್ಲಿಸಿ ಬರುವುದಿಲ್ಲ. ಅದೆಷ್ಟೋ ಉದಾಹರಣೆಗಳಲ್ಲಿ ಸೂಚನೆಯನ್ನು ನೀಡುವುದಿಲ್ಲ. ಕ್ಷಣದಲ್ಲಿ 'ಎಲ್ಲವೂ' ಮುಗಿದಿರುತ್ತದೆ. ಹಾಗಂತ 'ನಮ್ಮವರ' ಅಸಲಿಯತ್ತು ತಿಳಿಯುವುದೇ ನಂತರ...  ಅಲ್ಲಿಯವರೆಗೂ ನಿಮಗೆ ವಿಧೇಯರಾಗಿದ್ದವರೆಲ್ಲ ಕಾದಾಟ ಆರಂಭಿಸುತ್ತಾರೆ. ವಕೀಲರ ಕಚೇರಿಗೆ ಪ್ರದಕ್ಷಿಣೆ ಶುರು ಮಾಡುತ್ತಾರೆ‌. ಹೆಣ ಎತ್ತಬೇಕಾದರೆ ಮೊದಲು ಆಸ್ತಿ ಪಾಲಾಗಬೇಕು... ಎನ್ನುವ ಸುಪುತ್ರರು ಇದ್ದಾರೆನ್ನುವುದು ತಿಳಿಯುವುದು  ಮರಣಾನಂತರವೇ. ಇದನ್ನೆಲ್ಲ ಗಮನಿಸಿದ ಅಥವಾ ಅನುಭವಿಸಿದ ಮಂದಿ ಹೇಳುತ್ತಿರುತ್ತಾರೆ  "...ಅಪ್ಪ ಆಸ್ತಿಯನ್ನು ಮಾಡದಿರುತ್ತಿದ್ದರೆ ನಮ್ಮ ಸಂಬಂಧ ಚೆನ್ನಾಗಿರುತ್ತಿತ್ತು.."

ಹಾಗನ್ನಬೇಡಿ. ಯಥಾಶಕ್ತಿ ಆಸ್ತಿ ಸಂಪಾದಿಸಿ. ಜೊತೆಯಲ್ಲಿ ಅದಕ್ಕೊಂದು ವಿಲೇವಾರಿ, ವ್ಯವಸ್ಥೆಯನ್ನೂ. ಅದು ವಿಲ್ ರೂಪದಲ್ಲಿರಲಿ. ವೀಲುನಾಮೆ ರಿಜಿಸ್ಟರ್ ಮಾಡಿದರೆ ಇನ್ನೂ ಒಳ್ಳೆಯದು. ವಿಲ್  ಬರೆಯುತ್ತಿರುವವರು ನೀವಾದರೆ ಇಬ್ಬರು ವಿಶ್ವಾಸ ಪಾತ್ರರನ್ನು ನಿಮ್ಮ ವೀಲುನಾಮೆಗೆ ಸಾಕ್ಷಿಗಳಾಗಿಸಿ. ಸಾಧ್ಯವಾದರೆ ಸಾಕ್ಷಿ ವಯಸ್ಸಿಗಿಂತ ನಿಮಗಿಂತ ಕಿರಿಯರಾಗಿರುವ ವ್ಯಕ್ತಿಗಳನ್ನು ಆರಿಸಿ. ವೀಲುನಾಮೆ ಇದ್ದ ಹೊರತಾಗಿಯೂ ಮರಣಾನಂತರ ತಕರಾರು ಉಂಟಾದರೆ, 'ನಾನೂ ಹಿತಾಸಕ್ತಿದಾರ, ಬಾಧಿತ..' ಎಂದು ಯಾರಾದರೂ ಮರಣಶಾಸನವನ್ನು ಚಾಲೆಂಜ್ ಮಾಡಿದರೆ, ದಾಖಲೆಯು ಸಾಚಾ ಅಲ್ಲ ಎಂದುಬಿಟ್ಟರೆ ಆಗ ಮಹತ್ವಪೂರ್ಣವಾಗುತ್ತದೆ - ಸಾಕ್ಷಿ.

ನೀವು ವಾಸಿಸುತ್ತಿರುವ ಊರಿನ ಸಬ್ ರಿಜಿಸ್ಟ್ರಾರ್ ಆಫೀಸಿನಲ್ಲಿಯೇ ನಿಮ್ಮ ವೀಲುನಾಮೆಯನ್ನು ರಿಜಿಸ್ಟರ್ ಮಾಡಬೇಕೆನ್ನುವ ಕಡ್ಡಾಯವೇನೂ ಇಲ್ಲ. ಒಂದು ವೇಳೆ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ನೀವು ಬಯಸುವಿರಾದರೆ ಅಥವಾ  ಇನ್ಯಾವುದೇ ಕಾರಣವಿದ್ದರೆ ಖಂಡಿತವಾಗಿಯೂ ದೂರದೂರಿನ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿಲ್ ನೋಂದಾಯಿಸಿಕೊಳ್ಳಬಹುದು. ಈ ದಾಖಲೆಯನ್ನು ನೀವೇ ಬರೆಯಬಹುದು - ವಕೀಲರ ಅಥವಾ ದಸ್ತಾವೇಜು ಬರಹಗಾರರ ನೆರವು ಇಲ್ಲದೆ. ನೋಂದಾಯಿಸಿರುವ ವೀಲುನಾಮೆಯನ್ನು ರದ್ದುಪಡಿಸಲು ನೀವು ಸರ್ವ ಸ್ವತಂತ್ರರು. ಹಾಗೂ ಹೊಸದಾಗಿ ಬೇರೆ ವೀಲುನಾಮೆಯನ್ನು ನಿಮ್ಮ ಇಚ್ಚಾನುಸಾರ  ನೋಂದಾಯಿಸಬಹುದು.

ನೀವು ಹೊಂದಿರುವ ಜೀವವಿಮಾ ಪಾಲಿಸಿ, ಬ್ಯಾಂಕ್ ಡೆಪಾಸಿಟ್, ಶೇರುಗಳಲ್ಲಿ ತೊಡಗಿಸಿರುವ ಮೊತ್ತಗಳಿಗೂ ಯಾರು ವಾರಿಸುದಾರರು.. ಮರಣಾನಂತರ ಯಾರಿಗೆ ಸೇರಬೇಕು ಎನ್ನುವುದನ್ನು ವೀಲುನಾಮೆಯಲ್ಲಿ ಸ್ಪಷ್ಟವಾಗಿ ನಮೂದಿಸುವುದು ಉಚಿತ. ಯಾಕೆಂದರೆ ವ್ಯವಹಾರಗಳಲ್ಲಿ ನೀವು ದಾಖಲಿಸಿರುವ ನಾಮಿನಿಯು  ಮೊತ್ತವನ್ನು ಸ್ವೀಕರಿಸುವವರೆಗಿನ ಮಿತಿಯನ್ನು ಮಾತ್ರ  ಹೊಂದಿರುತ್ತಾರೆಯೇ ಹೊರತು ಆತ ವಾರೀಸುದಾರ ಆಗಲು ಅವಕಾಶವಿಲ್ಲ.

The nomination only indicates the hand which is authorised to receive the amount, on the payment of which the insurer gets a valid discharge of its liability under the policy. The amount, however can be claimed by the heirs of the assured in accordance with the law of succession governing them... ಎನ್ನುತ್ತದೆ ಕೋರ್ಟು.

ಕೇವಲ ಐನೂರು - ಸಾವಿರ ಶುಲ್ಕವನ್ನು ಪಾವತಿಸಿ ವಿಲ್ ನೋಂದಾಯಿಸಿ. ನಿಮ್ಮ ಆಸ್ತಿ ವಿಲೇವಾರಿಗೊಂದು ವ್ಯವಸ್ಥೆ ಮಾಡಿ. ಕುಟುಂಬದ ಆಸ್ತಿ ವಿವಾದ ಬೀದಿಗೆ ಬರದಂತಾಗಲಿ. ಹುಟ್ಟುತ್ತ ಅಣ್ಣ ತಮ್ಮಂದಿರು ಬೆಳೆಯುತ್ತ ದಾಯಾದಿಗಳಾಗಲೇಬೇಕಂತ ಕಡ್ಡಾಯವೇನೂ ಇಲ್ಲವಲ್ಲ ?

- ರಾಜು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)