varthabharthiನಿಮ್ಮ ಅಂಕಣ

ಇಂದು ಭಗತ್ ಸಿಂಗ್ ಜನ್ಮದಿನ

ಮತ್ತೆ ಮತ್ತೆ ಮರುಕಳಿಸುವ ಕ್ರಾಂತಿಕಾರಿಯ ನೆನಪು

ವಾರ್ತಾ ಭಾರತಿ : 28 Sep, 2019
ನಾ. ದಿವಾಕರ

ಭಗತ್‌ಸಿಂಗ್ ಪ್ರತಿರೋಧ ವ್ಯಕ್ತಪಡಿಸಲು ಹೆದರಲಿಲ್ಲ. ಗಲ್ಲು ಕಂಬಕ್ಕೆ ಹೋಗುವ ಕೊನೆಯ ಘಳಿಗೆಯಲ್ಲೂ ಲೆನಿನ್‌ನ ‘ಪ್ರಭುತ್ವ ಮತ್ತು ಕ್ರಾಂತಿ’ ಕೃತಿಯನ್ನು ಓದುತ್ತಿರುತ್ತಾನೆ. ಪ್ರತಿರೋಧ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮಾತ್ರವೇ ಅಲ್ಲ ಯಾವುದೇ ಆಡಳಿತ ವ್ಯವಸ್ಥೆಯಲ್ಲೂ ಅದು ಮಾನವನ ಆಜನ್ಮ ಸಿದ್ಧ ಹಕ್ಕು ಎಂದು ಪ್ರತಿಪಾದಿಸುವವರಲ್ಲಿ ಭಗತ್‌ಸಿಂಗ್ ಮುಂಚೂಣಿಯಲ್ಲಿ ನಿಲ್ಲುತ್ತಾನೆ. ಆತನ ಬರವಣಿಗೆಗಳು, ಟಿಪ್ಪಣಿಗಳು, ಭಾಷಣಗಳು ಇವನ್ನೇ ಸಾರುತ್ತವೆ.


ದೇಶದ ಪರಿಕಲ್ಪನೆ ಬದಲಾಗಿಲ್ಲ. ಭೌಗೋಳಿಕ ಗಡಿಗಳನ್ನು ರೂಪಿಸಿ ಒಂದು ನಿರ್ದಿಷ್ಟ ಚೌಕಟ್ಟಿನಲ್ಲಿ ಒಳಗೊಳ್ಳಬಹುದಾದ ಭೂಪ್ರದೇಶವೆಲ್ಲವನ್ನೂ ಆಕ್ರಮಿಸಿ, ಒಂದು ವರ್ಗದ ಆಧಿಪತ್ಯ ಸಾಧಿಸುವುದನ್ನೇ ದೇಶ ಎಂದು ಪ್ರತಿಪಾದಿಸುವ ಆಧುನಿಕ ಕಾಲಘಟ್ಟದ ಪರಿಕಲ್ಪನೆ ಬದಲಾಗಿಲ್ಲ. ಸಮಕಾಲೀನ ರಾಜಕೀಯ ಸಂದರ್ಭದಲ್ಲಿ ಭೌಗೋಳಿಕ ದೇಶದ ಪರಿಕಲ್ಪನೆ ಭಾರತೀಯ ಸಮಾಜದ ಸಂವೇದನಾಶೀಲತೆಯನ್ನೂ ಅತಿಕ್ರಮಿಸಿ ‘‘ನಾನು-ನನ್ನದೇಶ-ನನ್ನ ಹೆಮ್ಮೆ’’ ಎನ್ನುವ ಗೌರವಯುತ ಅಭಿವ್ಯಕ್ತಿಯನ್ನು ಸಂಕುಚಿತಗೊಳಿಸುತ್ತಿರುವುದು ಆತಂಕದ ವಿಚಾರ. ವಿವೇಕ, ವಿವೇಚನೆ ಮತ್ತು ನಾಗರಿಕ ಪ್ರಜ್ಞೆ ಈ ಮೂರೂ ಲಕ್ಷಣಗಳನ್ನು ‘‘ದೇಶ- ದೇಶಕ್ಕಾಗಿ-ದೇಶದ ರಕ್ಷಣೆಗಾಗಿ’’ ಎನ್ನುವ ಭಾವನಾತ್ಮಕ ಘೋಷಣೆಯ ಕಾಲಡಿಯಲ್ಲಿ ಹೊಸಕಿ ಹಾಕುತ್ತಿರುವುದನ್ನು ನೋಡಿದಾಗೆಲ್ಲಾ ಸ್ವಾತಂತ್ರ್ಯ ಸಂಗ್ರಾಮದ ಕಾಲಘಟ್ಟಕ್ಕೆ ಮನಸ್ಸು ಜಾರುತ್ತದೆ. ಜಾರುವ ಮನಸ್ಸನ್ನು ಥಟ್ಟನೆ ತಡೆದು ನಿಲ್ಲಿಸುವುದು ಮೂರು ಚಿಲುಮೆಗಳು. ಗಾಂಧಿ, ಅಂಬೇಡ್ಕರ್ ಮತ್ತು ಕ್ರಾಂತಿಕಾರಿ ಭಗತ್‌ಸಿಂಗ್. ಪ್ರತಿರೋಧದ ದನಿಗೆ ಸಾರ್ವತ್ರಿಕ ಸ್ವರೂಪ ನೀಡಿದ ಗಾಂಧಿ, ದಮನಿತ ಸಮುದಾಯಗಳ ದನಿಗೆ ಶಕ್ತಿ ನೀಡಿದ ಅಂಬೇಡ್ಕರ್ ಮತ್ತು ಪ್ರಭುತ್ವದ ದಬ್ಬಾಳಿಕೆಯ ವಿರುದ್ಧ ಸೆಟೆದು ನಿಲ್ಲಲು ಪ್ರೇರಣೆ ನೀಡಿದ ಕ್ರಾಂತಿಯ ಚಿಲುಮೆ ಭಗತ್ ಸಿಂಗ್. ಇಂದು ಭಗತ್ ಸಿಂಗ್ ಹೆಸರಿನ ಚೇತನದ 113ನೆಯ ಜನ್ಮದಿನ.

ಈ ದೇಶದಲ್ಲಿ ಎಲ್ಲವೂ ಚೆನ್ನಾಗಿದೆ, ಎಲ್ಲವೂ ಸುಸೂತ್ರವಾಗಿದೆ ಎಂದು ತಾಳಮೇಳಗಳೊಡನೆ ವಿಶ್ವ ವೇದಿಕೆಗಳಲ್ಲಿ ವಿಜೃಂಭಿಸುತ್ತಿರುವ ಭಾರತದಲ್ಲಿ ನಿಜಕ್ಕೂ ಎಲ್ಲವೂ ಚೆನ್ನಾಗಿದೆ. ಕಾಣ್ಕೆಯೊಂದನ್ನು ಹೊರತುಪಡಿಸಿ. ಏಕೆಂದರೆ ನಾವು ಕಾಣ್ಕೆಯ ಅರ್ಥವನ್ನೇ ಅರಿಯದವರಂತಾಗಿದ್ದೇವೆ. ಕಣ್ಣೋಟವನ್ನೇ ಅಂತಿಮ ಎಂದು ಭಾವಿಸಿದ್ದೇವೆ. ನಮಗೆ ಆಲಿಂಗನ ಎಂದರೆ ಮೈ ನವಿರೇಳುತ್ತದೆ, ಅಪ್ಪುಗೆ ಎಂದರೆ ಸಂಚಲನ ಮೂಡುತ್ತದೆ, ಕೈ ಕುಲುಕುವ ನಾಯಕರ ಹಿಮ್ಮೇಳದ ಸದ್ದು ನಮ್ಮನ್ನು ಭಾವುಕರನ್ನಾಗಿ ಮಾಡುತ್ತದೆ. ಎದೆ ತಟ್ಟಿ ಹೇಳುತ್ತೇವೆ ‘‘ನಾನು-ನನ್ನ ದೇಶ-ನನ್ನ ಹೆಮ್ಮೆ’’. ಆದರೆ ಈ ಹೆಮ್ಮೆಯ ನಾಡಿನ ಮೂಲೆ ಮೂಲೆಗಳಲ್ಲೂ ಆಕ್ರಂದನದ ಸದ್ದು ಕೇಳುತ್ತಿದೆ. ಹಾಹಾಕಾರ ಕೇಳಿಬರುತ್ತಿದೆ. ನೋವಿನ ದನಿಗಳು, ನರಳುವ ಪಿಸುಪಿಸು ಸದ್ದು, ಬೆವೆತ ಕೈಗಳು, ರಕ್ತಸಿಕ್ತ ದೇಹಗಳು, ಸುಟ್ಟ ಅಸ್ತಿಪಂಜರಗಳು ಕಾಣ್ಕೆ ಇದ್ದವರಿಗೆ ಕಾಣಿಸುತ್ತಿದೆ, ಕಿವಿ ತೆರೆದವರಿಗೆ ಕೇಳಿಸುತ್ತಲೇ ಇದೆ. ಆದರೆ ಸೂಜಿ ದಾರ ಇಲ್ಲದೆಯೇ ಬಾಯಿಗಳಿಗೆ ಹೊಲಿಗೆ ಹಾಕಲಾಗುತ್ತಿದೆ. ಹೊಲಿಗೆ ಕಿತ್ತು ಹಾಕಲು ಬಯಸಿದವರನ್ನು ಬಂಧಿಸಲಾಗುತ್ತಿದೆ. ಅಧಿಕಾರ ಪೀಠಕ್ಕೆ ಪ್ರಿಯರಾದವರು ಆಪ್ತರಾಗುತ್ತಿದ್ದಾರೆ. ಪೀಠವನ್ನು ಧಿಕ್ಕರಿಸಿದವರು ದ್ರೋಹಿಗಳಾಗುತ್ತಿದ್ದಾರೆ. ಇಲ್ಲಿ ವ್ಯಕ್ತಿಗತ ನಿಷ್ಠೆ ಮೇಲುಗೈ ಸಾಧಿಸುತ್ತಿದೆ ಸ್ವಚ್ಛ ಪ್ರಾಮಾಣಿಕತೆ ಶಿಕ್ಷೆಗೊಳಗಾಗುತ್ತಿದೆ. ಬ್ರಿಟಿಷರ ಕಾಲದಲ್ಲೂ ಇದೇ ಪರಿಸ್ಥಿತಿಯನ್ನು ಕಾಣಬಹುದಿತ್ತಲ್ಲವೇ? ಹಾಗಾಗಿ ಭಗತ್ ಸಿಂಗ್ ಮತ್ತೆ ಮತ್ತೆ ನೆನಪಾಗುತ್ತಾನೆ. ಏಕೆಂದರೆ ಆತ ಕ್ಷಮೆ ಕೋರಲಿಲ್ಲ. ಕ್ಷಮತೆಯನ್ನು ಬಲಿಗೊಡಲೂ ಇಲ್ಲ.

ಭಗತ್ ಸಿಂಗ್ ಬ್ರಿಟಿಷರ ಕಣ್ಣಿಗೆ ಭಯೋತ್ಪಾದಕನಾಗಿ ಕಂಡಿದ್ದು ಅಚ್ಚರಿಯೇನಿಲ್ಲ. ಏಕೆಂದರೆ ಬ್ರಿಟಿಷರ ಕಾಲದಲ್ಲಿದ್ದುದು ಸರ್ವಾಧಿಕಾರಿ ಆಡಳಿತ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲ. ವಸಾಹತು ಆಳ್ವಿಕೆಯಲ್ಲಿ ಭಾರತದಲ್ಲಿ ಜಾರಿಯಲ್ಲಿದ್ದುದು ಅಂತರ್‌ರಾಷ್ಟ್ರೀಯ ರಾಜಪ್ರಭುತ್ವ ಎನ್ನಬಹುದು. ಬಹುಶಃ ಭಾರತದ ಯಾವುದೇ ರಾಜಪ್ರಭುತ್ವದಲ್ಲಿ ಭಗತ್‌ಸಿಂಗ್ ತನ್ನ ಕ್ರಾಂತಿಕಾರಿ ಚಟುವಟಿಕೆಗಳನ್ನು ಮುಂದುವರಿಸಿದ್ದರೂ ಗಲ್ಲಿಗೇರುತ್ತಿದ್ದುದು ಖಚಿತ. ಏಕೆಂದರೆ ಆಳುವ ವರ್ಗಗಳಿಗೆ ವ್ಯವಸ್ಥೆಯ ವಿರುದ್ಧದ ದನಿಗಳು ಅಪಾಯಕಾರಿಯಾಗಿಯೇ ಕಾಣುತ್ತವೆ. ಏಳು ದಶಕಗಳ ಪ್ರಜಾಸತ್ತೆಯ ನಂತರವೂ ಭಾರತದಲ್ಲಿ ಅಸಹಾಯಕ ವ್ಯಕ್ತಿಗಳೂ ಪ್ರಭುತ್ವದ ದೃಷ್ಟಿಯಲ್ಲಿ ದೇಶಕ್ಕೆ ಮಾರಕವಾಗುವ ಉಗ್ರವಾದಿಯಾಗಿ ಕಾಣುತ್ತಾರೆ ಎಂದರೆ ಇನ್ನು ಬ್ರಿಟಿಷರ ದೃಷ್ಟಿ ಹೇಗಿರಬಹುದು ಅಲ್ಲವೇ? ಭಗತ್ ಸಿಂಗ್‌ನನ್ನು ಅಥವಾ ಅವನ ಚೇತನವನ್ನು ಇಂದಿನ ಭಾರತದ ಪ್ರಜಾಸತ್ತೆಯಲ್ಲಿಟ್ಟು ಒಮ್ಮೆ ನೋಡಿದರೆ ಹೇಗನಿಸುತ್ತದೆ? ಅವ ಪ್ರೀತಿಸಿದ್ದು ಪ್ರಜಾತಂತ್ರವನ್ನು, ಅಪ್ಪಿಕೊಂಡಿದ್ದು ಸೌಹಾರ್ದವನ್ನು, ಸ್ವೀಕರಿಸಿದ್ದು ಮಾನವೀಯ ಮೌಲ್ಯಗಳನ್ನು, ಆಯ್ಕೆ ಮಾಡಿಕೊಂಡಿದ್ದು ಕ್ರಾಂತಿಯ ಮಾರ್ಗವನ್ನು.

ಭಗತ್ ಸಿಂಗ್ ಮಾರ್ಕ್ಸ್‌ವಾದಿಯಾಗಿದ್ದುದು ಹೌದು. ಮಾರ್ಕ್ಸ್‌ವಾದವೇ ಭವಿಷ್ಯ ಭಾರತಕ್ಕೆ ಒಂದು ಸುಭದ್ರ ಸಮಾಜವನ್ನು ನಿರ್ಮಿಸಲು ಸಾಧ್ಯ ಎಂದು ನಂಬಿದ್ದ ಧೀಮಂತ ಚೇತನ ಭಗತ್‌ಸಿಂಗ್. ಆದರೆ ಆತ ಮಾರ್ಕ್ಸ್ ವಾದವನ್ನು ಗ್ರಾಂಥಿಕವಾಗಿ ಅನುಸರಿಸಲಿಲ್ಲ ಅಥವಾ ಅಂಧ ಶ್ರದ್ಧೆಯಿಂದ ಅನುಕರಿಸಲೂ ಇಲ್ಲ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತನ್ನದೇ ಆದ ಚಿಂತನಾವಾಹಿನಿಯನ್ನು ಅನುಸರಿಸಿದ ಭಗತ್‌ಸಿಂಗ್ ಹೋರಾಡಿದ್ದು ಮಾನವೀಯ ಸಮಾಜಕ್ಕಾಗಿ, ಸಮ ಸಮಾಜಕ್ಕಾಗಿ, ಸೌಹಾರ್ದ ಸಮಾಜಕ್ಕಾಗಿ ಮತ್ತು ಪ್ರಜಾಪ್ರಭುತ್ವಕ್ಕಾಗಿ. ಆದರೆ ಬ್ರಿಟಿಷರಿಗೆ ಆತನು ಅನುಸರಿಸಿದ ಮಾರ್ಗ ಭೀತಿ ಉಂಟುಮಾಡಿತ್ತು. ಏಕೆಂದರೆ ವ್ಯವಸ್ಥೆಯನ್ನೇ ಪರಿವರ್ತಿಸುವ ಮನಸ್ಸುಗಳನ್ನು ಯಾವುದೇ ನಿರಂಕುಶ ಪ್ರಭುತ್ವ ಒಪ್ಪುವುದಿಲ್ಲ. ಇಂದಿನ ಭಾರತದಲ್ಲೇ ಇದನ್ನು ನೋಡುತ್ತಿದ್ದೇವೆ. ವಿಚಿತ್ರ ಎಂದರೆ ಮಾರ್ಕ್ಸ್‌ವಾದ ಎಂದರೆ ದೇಶದ್ರೋಹದ ಲೇಬಲ್ ಅಂಟಿಸುವ ಇಂದಿನ ಸಮಾಜದ ಒಂದು ವರ್ಗವೂ ಭಗತ್‌ಸಿಂಗ್‌ನನ್ನು ತನ್ನ ಬತ್ತಳಿಕೆಯಲ್ಲಿ ಕುಳ್ಳಿರಿಸಲು ಯತ್ನಿಸುತ್ತಿದೆ. ಕೆಲವೊಮ್ಮೆ ಯಶಸ್ವಿಯಾಗಿರುವುದೂ ಉಂಟು.

ಆದರೆ ನಮ್ಮ ಮುಂದಿರುವ ಪ್ರಶ್ನೆ, ಭಗತ್ ಸಿಂಗ್ ಇಂದು ಏಕೆ ಪ್ರಸ್ತುತನಾಗುತ್ತಾನೆ? ಬಹುಶಃ ಇದು ಮಹತ್ತರವಾದ ಪ್ರಶ್ನೆಯೂ ಹೌದು. ಏಕೆಂದರೆ ಭಗತ್ ಸಿಂಗ್ ಪ್ರತಿರೋಧದ ದನಿಗಳಿಗೆ ದನಿಯಾಗಬಲ್ಲ ಒಂದು ಶಕ್ತಿ. ಸೈದ್ಧಾಂತಿಕ ಸ್ಪಷ್ಟತೆಗೆ ನಿಲುಕುವ ಸಮೂಹ ಶಕ್ತಿ. ಪ್ರಭುತ್ವ ವಿರೋಧಿ ಧೋರಣೆಗೆ ಬೆನ್ನೆಲುಬಾಗಿ ನಿಲ್ಲುವಂತಹ ಹೋರಾಟದ ಕಿಡಿ. ದಮನಕಾರಿ ಆಡಳಿತ, ಶೋಷಕ ವ್ಯವಸ್ಥೆ ಮತ್ತು ಆಳುವವರ ದಬ್ಬಾಳಿಕೆಯ ವಿರುದ್ಧ ತೊಡೆ ತಟ್ಟಿ ನಿಲ್ಲಬಲ್ಲ ಯುವ ಶಕ್ತಿ. ಇಂದು ನಾವು ಇವೆಲ್ಲವನ್ನೂ ಕಳೆದುಕೊಂಡಿದ್ದೇವೆ ಅಥವಾ ನಿಷ್ಕ್ರಿಯವಾಗಿರುವುದನ್ನು ನೋಡುತ್ತಿದ್ದೇವೆ ಅಥವಾ ಈ ಶಕ್ತಿಗಳಿಗಾಗಿ ತಡಕಾಡುತ್ತಿದ್ದೇವೆ. ತಡೆಗೋಡೆಗಳು ಸಾಕಷ್ಟಿವೆ. ಕಂದಕಗಳು ಹೇರಳವಾಗಿವೆ. ಎಲ್ಲೆಡೆಯಿಂದಲೂ ಆಕ್ರಮಣ ಎದುರಿಸುತ್ತಿದ್ದೇವೆ. ನಮ್ಮ ಹಾಡು ನಮ್ಮದು ಎಂದು ಹೇಳಲು ಭಯಪಡುತ್ತಿದ್ದೇವೆ. ಏಕೆಂದರೆ ಅವರ ಹಾಡನ್ನೇ ನಮ್ಮದು ಎಂದು ಘೋಷಿಸುವಂತೆ ಒತ್ತಡ ಹೇರಲಾಗುತ್ತಿದೆ. ಭಗತ್‌ಸಿಂಗ್‌ಗೆ ಭಾರತ ಎಂದರೆ ಭೂಪಟವಾಗಿರಲಿಲ್ಲ, ನಾಲ್ಕು ಗಡಿಗಳೂ ಆಗಿರಲಿಲ್ಲ, ಭೌಗೋಳಿಕ ಪ್ರದೇಶವೂ ಆಗಿರಲಿಲ್ಲ.

ಅದೊಂದು ಮಾನವ ಸಂವೇದನೆಯ ಹೊಸ ಪ್ರಪಂಚವಾಗಿತ್ತು. ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಭಗತ್‌ಸಿಂಗ್ ನಮಗೆ ಒಬ್ಬ ಕ್ರಾಂತಿಕಾರಿಯಾಗಿ ಮಾತ್ರವೇ ಅಲ್ಲ, ಒಬ್ಬ ಮಾರ್ಗದರ್ಶಕನಾಗಿ, ಹೋರಾಟದ ಸ್ಫೂರ್ತಿಯಾಗಿ ಮತ್ತು ಬೌದ್ಧಿಕ ಶಕ್ತಿಯಾಗಿ ಕಾಣುತ್ತಾನೆ. ಏಕೆಂದರೆ ಇಂದು ಭಾರತದಲ್ಲಿ ಅಪಾಯದಲ್ಲಿರುವುದು ಭೌದ್ಧಿಕ ಚಿಂತನೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಕಲ್ಪನೆ. ಎಲ್ಲವೂ ಏಕದಲ್ಲೇ ಲೀನವಾಗಬೇಕು ಎನ್ನುವ ವಿಕೃತ ರಾಕ್ಷಸೀ ಮನಸ್ಥಿತಿಯನ್ನು ವ್ಯವಸ್ಥಿತವಾಗಿ ಪೋಷಿಸಲಾಗುತ್ತಿದೆ. ಸಮಸ್ತ ಭಾರತೀಯರನ್ನು ಒಂದೇ ಕೋಷ್ಟಕದಲ್ಲಿ ಕೂಡಿಹಾಕುವ ಪ್ರಯತ್ನಗಳು ನಡೆಯುತ್ತಿವೆ. ಇದಕ್ಕೆ ಭಾರತೀಯರು ಎಂದು ಎದೆತಟ್ಟಿ ಹೇಳಿಕೊಳ್ಳುವ ನಾವು ಒಪ್ಪುತ್ತೇವೆಯೋ ಇಲ್ಲವೋ ‘‘ಸಮಗ್ರ ದೇಶ’’ ದ ಹೆಸರಿನಲ್ಲಿ ಜಾಗತಿಕ ಮನ್ನಣೆ ಪಡೆಯಲಾಗುತ್ತಿದೆ. ಏಕೆಂದರೆ ಜಾಗತಿಕ ಪ್ರಭುತ್ವಕ್ಕೆ ಭಾರತದಂತಹ ಬೃಹತ್ ರಾಷ್ಟ್ರಗಳು ಮಂಡಿಯೂರುವುದು ಅಪ್ಯಾಯಮಾನವಾಗುತ್ತದೆ. ಹಾಗಾಗಿ ನಮ್ಮ ರಾಷ್ಟ್ರಪಿತ ಯಾರು ಎನ್ನುವುದನ್ನು ಅವರು ನಿರ್ಧರಿಸುವ ದಾರ್ಷ್ಟ ತೋರುತ್ತಾರೆ. ನಾಳೆ ನಮ್ಮ ಭಾಷೆಯನ್ನೂ ಅವರೇ ನಿರ್ಧರಿಸಬಹುದು.

ಏಕೆಂದರೆ ದೇಶಭಕ್ತಿಗೂ ವಿಶ್ವಗುರುವಿನ ಸ್ಥಾನಕ್ಕೂ ಅವಿನಾಭಾವ ಸಂಬಂಧವಿದೆ.
ನವ ಉದಾರವಾದ ಮತ್ತು ಕಾರ್ಪೊರೇಟ್ ಹಣಕಾಸು ಬಂಡವಾಳ ಸಮಸ್ತ ವಿಶ್ವದ ಶ್ರಮಜೀವಿಗಳನ್ನು ವಿನಾಶದ ಅಂಚಿಗೆ ನೂಕುತ್ತಿದೆ. ಹಾಗೆಯೇ ಜಗತ್ತಿನ ಸಂಪತ್ತೆಲ್ಲವನ್ನೂ ತಮ್ಮದೇ ಎಂದು ಭಾವಿಸುವ ಕೆಲವೇ ಶ್ರೀಮಂತರನ್ನು ವಿಕಾಸದ ಶಿಖರಕ್ಕೇರಿಸುತ್ತಿದೆ. ಈ ಸಂದರ್ಭದಲ್ಲಿ ವಿಶ್ವದ ಎಲ್ಲ ಆಳುವ ವರ್ಗಗಳೂ ಬಂಡವಾಳದ ಪರ ನಿಂತಿವೆ. ಎಲ್ಲ ಮತಧರ್ಮಗಳೂ ಬಂಡವಾಳಕ್ಕೆ ಶರಣಾಗಿವೆ. ಭಾರತದಲ್ಲಿ ಅಧ್ಯಾತ್ಮವೂ ಔದ್ಯಮಿಕ ಸ್ವರೂಪ ಪಡೆದು ಮಾರುಕಟ್ಟೆಯಲ್ಲಿ ವಿಜೃಂಭಿಸುತ್ತಿದೆ. ಹಾಗೆಯೇ ಪ್ರಬಲ ಜಾತಿಗಳೂ ಸಹ ಬಂಡವಾಳದ ಆಶ್ರಯ ಬಯಸುತ್ತಿವೆ. ಮತ್ತೊಂದು ನೆಲೆಯಲ್ಲಿ ಜಾತಿ, ಧರ್ಮ, ಭಾಷೆಯ ಎಲ್ಲೆಗಳನ್ನು ಮೀರಿ ತಮ್ಮ ಬದುಕು ಕಟ್ಟಿಕೊಳ್ಳಲು ಹಗಲಿರುಳೂ ಶ್ರಮಿಸುತ್ತಿರುವ ವರ್ಗಗಳು ತಮ್ಮ ಹಕ್ಕುಗಳನ್ನು ಹಂತ ಹಂತವಾಗಿ ಕಳೆದುಕೊಳ್ಳುತ್ತಲೇ ಇವೆ. ರೈತರು, ಕೃಷಿ ಕಾರ್ಮಿಕರು, ಮಹಿಳೆಯರು, ದುರ್ಬಲ ವರ್ಗಗಳು, ಅಸ್ಪಶ್ಯ ಸಮುದಾಯಗಳು, ದಲಿತರು, ಅಲ್ಪಸಂಖ್ಯಾತರು, ಅವಕಾಶ ವಂಚಿತರು, ಕೆಳಮಧ್ಯಮ ವರ್ಗದ ಕಾರ್ಮಿಕರು, ಆದಿವಾಸಿಗಳು ತಮ್ಮ ಅಸ್ತಿತ್ವ, ಅಸ್ಮಿತೆ ಮತ್ತು ಮೂಲ ನೆಲೆಯನ್ನೇ ಕಳೆದುಕೊಳ್ಳುತ್ತಿದ್ದಾರೆ.

ಈ ಸಂದರ್ಭದಲ್ಲಿ ಪ್ರತಿರೋಧದ ದನಿಗಳು ಜಾಗೃತವಾಗುತ್ತವೆ. ತಮ್ಮ ಹಕ್ಕೊತ್ತಾಯಗಳಿಗಾಗಿ ನೊಂದ ಜೀವಗಳು ಸೆಟೆದು ನಿಲ್ಲುತ್ತವೆ. ತಮ್ಮ ಅಸ್ಮಿತೆಯ ಉಳಿವಿಗಾಗಿ ಕೆಲವು ಸಮುದಾಯಗಳೇ ಹೋರಾಟದ ಹಾದಿ ಹಿಡಿಯುತ್ತವೆ. ತಮ್ಮ ಅಸ್ತಿತ್ವಕ್ಕಾಗಿ ಭಾಷಿಕರು ಸಂಘರ್ಷಕ್ಕೆ ಸಜ್ಜಾಗುತ್ತಾರೆ. ತಮ್ಮ ಪ್ರಾದೇಶಿಕ ಸ್ವಾಯತ್ತತೆಗಾಗಿ ಜನಸಮುದಾಯಗಳು ಒಂದಾಗುತ್ತವೆ. ಈ ಎಲ್ಲ ದನಿಗಳಿಗೂ ಪ್ರಜಾತಂತ್ರ ಮೌಲ್ಯಗಳೇ ದನಿಯಾಗಿರುತ್ತವೆ. ಈ ದನಿಗಳಿಗೆ ದನಿಗೂಡಿಸಲು ಸಾಹಿತಿಗಳು, ಕಲಾವಿದರು, ಬರಹಗಾರರು, ಕಾರ್ಯಕರ್ತರು ಮತ್ತು ಮಾನವ ಸಂವೇದನೆಯುಳ್ಳ ಪ್ರತಿಯೊಂದು ಪ್ರಜ್ಞಾವಂತ ಜೀವಿಯೂ ಸಜ್ಜಾಗುವುದು ಸಹಜ. ಏಕೆಂದರೆ ನಾವು ಬದುಕುತ್ತಿರುವುದು ಮಾನವ ಸಮಾಜದಲ್ಲಿ. ಹಂಚಿ ತಿನ್ನುವ ಜಗತ್ತಿನಲ್ಲಿ. ಈ ದನಿಗಳು ಪ್ರಭುತ್ವದ ದೃಷ್ಟಿಯಲ್ಲಿ ದ್ರೋಹದ ಸಂಕೇತವಾಗಿಬಿಡುತ್ತವೆ. ಬಹುತ್ವದಲ್ಲಿ ಏಕತೆ ಸಾಧಿಸಲು ಶ್ರಮಿಸುವ ಈ ದನಿಗಳು ಕ್ಷೀಣಿಸಿದಂತೆಲ್ಲಾ ಬಹುತ್ವದ ಸಮಾಧಿಯ ಮೇಲೆ ಏಕತ್ವವನ್ನು ಸಾಧಿಸುವ ಮನಸ್ಸುಗಳು ಆಧಿಪತ್ಯ ಸಾಧಿಸುತ್ತವೆ. ಇಲ್ಲಿ ಬಹುತ್ವದ ದನಿಗಳಿಗೆ ದನಿಯಾಗುವ ಒಂದು ಬೌದ್ಧಿಕ ಶಕ್ತಿ ಬೇಕಾಗುತ್ತದೆ. ಈ ದನಿಯನ್ನು ನಾವು ಗಾಂಧಿಯಲ್ಲಿ, ಅಂಬೇಡ್ಕರ್‌ರಲ್ಲಿ, ಫುಲೆಯಲ್ಲಿ, ಮಾರ್ಕ್ಸ್‌ನಲ್ಲಿ ಮತ್ತು ಇಂದಿನ ಭಾರತದ ಸಂದರ್ಭದಲ್ಲಿ ಭಗತ್‌ಸಿಂಗ್‌ನಲ್ಲಿ ಕಾಣಲು ಸಾಧ್ಯ.

ಕಾರಣ ಇಷ್ಟೆ. ಭಗತ್‌ಸಿಂಗ್ ಪ್ರತಿರೋಧ ವ್ಯಕ್ತಪಡಿಸಲು ಹೆದರಲಿಲ್ಲ. ಗಲ್ಲು ಕಂಬಕ್ಕೆ ಹೋಗುವ ಕೊನೆಯ ಘಳಿಗೆಯಲ್ಲೂ ಲೆನಿನ್‌ನ ‘ಪ್ರಭುತ್ವ ಮತ್ತು ಕ್ರಾಂತಿ’ ಕೃತಿಯನ್ನು ಓದುತ್ತಿರುತ್ತಾನೆ. ಪ್ರತಿರೋಧ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮಾತ್ರವೇ ಅಲ್ಲ ಯಾವುದೇ ಆಡಳಿತ ವ್ಯವಸ್ಥೆಯಲ್ಲೂ ಅದು ಮಾನವನ ಆಜನ್ಮ ಸಿದ್ಧ ಹಕ್ಕು ಎಂದು ಪ್ರತಿಪಾದಿಸುವವರಲ್ಲಿ ಭಗತ್‌ಸಿಂಗ್ ಮುಂಚೂಣಿಯಲ್ಲಿ ನಿಲ್ಲುತ್ತಾನೆ. ಆತನ ಬರವಣಿಗೆಗಳು, ಟಿಪ್ಪಣಿಗಳು, ಭಾಷಣಗಳು ಇವನ್ನೇ ಸಾರುತ್ತವೆ. ಇಂದು ನಾವು ಈ ಪ್ರತಿರೋಧದ ಹಕ್ಕನ್ನು ಕಳೆದುಕೊಳ್ಳುತ್ತಿದ್ದೇವೆ. ಹಾಗೆಯೇ ಪ್ರತಿರೋಧದ ದನಿಯನ್ನೂ ಕ್ರಮೇಣ ಕಳೆದುಕೊಳ್ಳುತ್ತಿದ್ದೇವೆ. ನಾವೇ ಚುನಾಯಿಸಿದ ಪ್ರತಿನಿಧಿಗಳು ನಮ್ಮ ಉಸಿರನ್ನು ಕಸಿಯಲು ಯತ್ನಿಸುತ್ತಿದ್ದಾರೆ. ನಮ್ಮದೇ ಆದ ಸರಕಾರ ನಮ್ಮ ದನಿಯನ್ನು ಆಲಿಸಲು ನಿರಾಕರಿಸುತ್ತಿದೆ. ಈ ಪ್ರತಿರೋಧದ ದನಿಗಳಿಗೆ ದೇಶದ್ರೋಹದ ಲೇಬಲ್ ಹಚ್ಚಲು ಬೃಹತ್ ಪಡೆಯೇ ಸಿದ್ಧವಾಗಿಬಿಟ್ಟಿದೆ. ಲೋಕದಿಂದಲೇ ಹೊರಹಾಕುವ ಸೇನೆಗಳೂ ಸಿದ್ಧವಾಗಿಬಿಟ್ಟಿವೆ. ರಸ್ತೆಗಳ ಸ್ವಚ್ಛತೆಗಾಗಿ ನಾವು ಕೇವಲ ಮಲಮೂತ್ರವನ್ನು ತೆಗೆದುಹಾಕುತ್ತಿಲ್ಲ. ಎಳೆಯ ಜೀವಗಳನ್ನೂ ತೆಗೆದು ಬಿಸಾಡುತ್ತಿದ್ದೇವೆ. ಏಕೆಂದರೆ ನಮ್ಮ ಬಾಹ್ಯ ಸ್ವಚ್ಛತೆ ನಮ್ಮನ್ನು ವಿಶ್ವಗುರು ಮಾಡುತ್ತದೆ. ಆಂತರಿಕ ಮಾಲಿನ್ಯ ಗೋಚರಿಸುವುದಿಲ್ಲ.

ಈ ಮಾಲಿನ್ಯದ ವಿರುದ್ಧ ಹೋರಾಡುವ ಒಂದು ಸ್ಫೂರ್ತಿಯಾಗಿ ಭಗತ್‌ಸಿಂಗ್ ಇಂದು ಮತ್ತೆ ಮತ್ತೆ ನೆನಪಾಗುತ್ತಾನೆ. ಭಗತ್‌ಸಿಂಗ್-ಗಾಂಧೀಜಿಯಿಂದ ಹಿಡಿದು ಗೌರಿ ಲಂಕೇಶ್‌ವರೆಗೆ ಹಂತಕರ ಏಟಿಗೆ ಬಲಿಯಾದ ಎಲ್ಲ ಪ್ರತಿರೋಧದ ದನಿಗಳೂ ಪ್ರಜಾತಂತ್ರದ ಪ್ರತಿಪಾದಕರೇ ಆಗಿದ್ದವರು. ಇಂದು ಪ್ರಜಾತಂತ್ರದ ಎದೆಗೇ ಬಂದೂಕಿನ ನಳಿಗೆಯನ್ನು ಇಡಲಾಗುತ್ತಿದೆ. ಅಧಿಕಾರಸ್ಥರಿಗೆ ಇದು ಗೋಚರಿಸುತ್ತಿಲ್ಲ. ಹಣವಂತರಿಗೆ ಇದು ನಡೆದು ಅಳಿಸಿ ಹೋಗುವ ಮರೆಯಬಹುದಾದ ಒಂದು ವಿಲಕ್ಷಣ ಘಳಿಗೆ ಮಾತ್ರ. ಆದರೆ ತನ್ನ ನಾಳಿನ ಬದುಕನ್ನು ಕಟ್ಟಿಕೊಳ್ಳಲು ಹೆಣಗಾಡುತ್ತಿರುವ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಇದು ಆತಂಕದ ಕ್ಷಣ. ಈ ವ್ಯಕ್ತಿಯ ದನಿಗೆ ದನಿಯಾಗಲು ಭಗತ್‌ಸಿಂಗ್ ಬೇಕಾಗುತ್ತಾನೆ. ಕಿಂದರಿ ಜೋಗಿಯಂತೆ ಬೆಳಕಿನ ಕಿಂಡಿಯಂತೆ. ಇಂತಹ ವ್ಯಕ್ತಿಗಳ ಸಮೂಹ ಪ್ರಜ್ಞೆಯನ್ನು ಬಡಿದೆಬ್ಬಿಸಲು ಭಗತ್‌ಸಿಂಗ್ ಇಂದು ಹೆಚ್ಚು ಪ್ರಸ್ತುತ ಎನಿಸುತ್ತಾನೆ. ಇಂದಿಗೂ, ಎಂದಿಗೂ, ಎಂದೆಂದಿಗೂ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)