varthabharthi

ಸುಗ್ಗಿ

ನ್ಯಾನೋ ಕಥೆಗಳು

ವಾರ್ತಾ ಭಾರತಿ : 28 Sep, 2019
ಗಿರಿಜಾಶಂಕರ್ ಜಿ.ಎಸ್. ನೇರಲಕೆರೆ

ಗಿರಿಜಾಶಂಕರ್ ಜಿ.ಎಸ್. ನೇರಲಕೆರೆ

ಸರಳ ಜೀವನ

ಗಾಂಧಿ ಜಯಂತಿಯ ಸಂದರ್ಭದಲ್ಲಿ ರಾಜಕೀಯ ಧುರೀಣ ಭಾಷಣ ಮಾಡುತ್ತಾ ನಾವು ಗಾಂಧೀಜಿಯವರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರ ಸರಳ ಜೀವನ ನಮಗೆಲ್ಲಾ ಮಾದರಿಯಾಗಬೇಕು. ನಮ್ಮ ಬದುಕನ್ನು ಎಷ್ಟು ಸರಳವಾಗಿ ನಡೆಸಲು ಸಾಧ್ಯವೋ ಅಷ್ಟು ಸರಳತೆಯಿಂದ ಬದುಕಿದಾಗ ಮಾತ್ರ ನಾವು ಗಾಂಧೀಜಿಯವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಹೇಳಿದನು. ಕಾರ್ಯಕ್ರಮ ಮುಗಿದ ಮೇಲೆ ಬೆಂಝ್ ಕಾರಲ್ಲಿ ಹೊರಟನು.

ಭಾವಚಿತ್ರ

ಒಂದನೆಯ ತರಗತಿ ವಿದ್ಯಾರ್ಥಿಗೆ ಗಾಂಧೀಜಿಯವರ ಕುರಿತು ಪ್ರಾಜೆಕ್ಟ್ ಮಾಡಲು ಶಿಕ್ಷಕಿ ಹೇಳಿದ್ದರು. ಆ ವಿದ್ಯಾರ್ಥಿ ಮನೆಗೆ ಬಂದು ತನ್ನ ತಂದೆಯ ಜೇಬಿನಲ್ಲಿದ್ದ 500 ಮತ್ತು 2,000 ರೂಪಾಯಿಗಳ ನೋಟುಗಳನ್ನು ತೆಗೆದುಕೊಂಡು ಗಾಂಧೀಜಿಯವರ ಭಾವಚಿತ್ರವನ್ನು ಕತ್ತರಿಸಿ ಅಂಟಿಸಿ ಪ್ರಾಜೆಕ್ಟ್ ಮುಗಿಸಿದನು. ರಾತ್ರಿ ಮನೆಗೆ ಬಂದ ತಂದೆಗೆ ತಾನು ಮಾಡಿರುವ ಪ್ರಾಜೆಕ್ಟ್‌ವರ್ಕ್‌ನ್ನು ತುಂಬಾ ಖುಷಿಯಿಂದ ತೋರಿಸಿದನು. ತಂದೆ ತಲೆತಿರುಗಿ ಬಿದ್ದನು..

ಹಳ್ಳಿಯ ಅಭಿವೃದ್ದಿ

ಮಹಾತ್ಮಾ ಗಾಂಧೀಜಿಯವರ ಚಿಂತನೆಗಳನ್ನು ನಮ್ಮ ಸರಕಾರ ಚಾಚೂತಪ್ಪದೆ ಪಾಲಿಸುತ್ತಿದೆ ಎಂದು ಮಂತ್ರಿ ಮಹೋದಯರು ಹೇಳುತ್ತಿದ್ದರು. ಹಳ್ಳಿಗಳ ಅಭಿವೃದ್ಧಿಯೇ ಭಾರತದ ಅಭಿವೃದ್ಧಿ ಎನ್ನುವುದು ಗಾಂಧೀಜಿ ತತ್ವದ ಹಿನ್ನೆಲೆಯಲ್ಲಿ ಹಳ್ಳಿಗಳ ಉದ್ಧಾರಕ್ಕೆ ನಾವು ಹಗಲಿರುಳು ಶ್ರಮಿಸುತ್ತಿದ್ದೇವೆ ಎಂದು ಹೇಳಿ ಚಪ್ಪಾಳೆ ಗಿಟ್ಟಿಸಿದರು. ಸದ್ಯ ಎಲ್ಲಾ ಹಳ್ಳಿಗಳಲ್ಲಿ ಬಾರ್‌ಗಳು ಉದ್ಘಾಟನೆಗೊಂಡು ಹಳ್ಳಿಗಳು ತುಂಬಾ ಅಭಿವೃದ್ಧಿಗೊಳ್ಳುತ್ತಿವೆ!

ಸತ್ಯಾಗ್ರಹ

ಸಾವಿರಾರು ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಸಲು ಉಪವಾಸ ಸತ್ಯಾಗ್ರಹಕ್ಕೆ ಕುಳಿತರು. ಸರಕಾರ ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ನಾವು ಒಂದು ಹನಿ ನೀರನ್ನೂ ಕುಡಿಯುವುದಿಲ್ಲ ಎಂದು ಮಾಧ್ಯಮಗಳ ಎದುರು ತಮ್ಮ ದುಃಖವನ್ನು ಹೇಳಿಕೊಂಡರು. ಸಂಜೆಯಾಗುತ್ತಿದ್ದಂತೆ ವೇದಿಕೆಯ ಹಿಂಬದಿಗೆ ಹೋಗಿ ಹೊಟ್ಟೆಬಿರಿಯುವಂತೆ ಕೇವಲ ಹಣ್ಣುಗಳನ್ನು ಮಾತ್ರ ತಿಂದು ಗಾಂಧೀಜಿಯವರ ಉಪವಾಸ ಸತ್ಯಾಗ್ರಹದ ಮಹತ್ವವನ್ನು ಎತ್ತಿಹಿಡಿದರು!

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)