varthabharthi

ಸುಗ್ಗಿ

ಕಥಾಸಂಗಮ

ಗುರುತು

ವಾರ್ತಾ ಭಾರತಿ : 28 Sep, 2019
ದಾದಾಪೀರ್ ಜೈಮನ್, ಬೆಂಗಳೂರು

ವಿಮಾನ ನಿಲ್ದಾಣದಿಂದ ಹೊರಬಂದು ಕ್ಯಾಬಿನೊಳಗೆ ಕೂತು ಡ್ರೈವರನಿಗೆ ಒಟಿಪಿ ಹೇಳುವ ತರಾತುರಿಯಲ್ಲೇ ತಂಗಿಯ ಫೋನು. ಅವಳ ಫೋನ್ ಕಟ್ ಮಾಡಿದರೆ ನಾನು ಬ್ಯುಸಿ ಇರುತ್ತೇನೆ ಎಂದು ಅಂದುಕೊಳ್ಳುವವಳಲ್ಲ. ಫೋನ್ ಎತ್ತಿ ಮಾತನಾಡುವವರೆಗೂ ನೂರು ಬಾರಿಯಾದರೂ ಅಡ್ಡಿಯಿಲ್ಲ, ರಿಂಗು ಕೊಡುತ್ತಾಳೆ. ಆಮೇಲೆ ನನ್ನ ಮರೆವಿನ ಬಗ್ಗೆ ಅವಳಿಗೆ ಗೊತ್ತು... ‘‘ಮತ್ತೆ ಫೋನ್ ಮಾಡ್ತೀನಿ ಅಂತಂದು ಊಫಿ ಮಾಡಿಬಿಟ್ಯಲ. ಏನಾದ್ರು ಅರ್ಜೆಂಟ್ ಇದ್ರೆ ನಾವೆನಿಲ್ಲಿ ಸತ್ತು ಹೋಗ್ಬೇಕಾ’’ ಎನ್ನುವ ಅವಳ ಮಾತಿನಲ್ಲಿ ಅತಿಯಿದ್ದರೂ ನಿಜವಿತ್ತು. ಯಾರ ಕರೆಗೆ ಉತ್ತರಿಸದಿದ್ದರೂ ಅವಳದ್ದು ಮಾತ್ರ ಮೂರನೇ ರಿಂಗಿಗೆ ಮುಂಚೆ ಎತ್ತಿಬಿಡುತ್ತಿದ್ದೆ. ಈ ಸಲವೂ ‘‘ಏನಪ್ಪಾ ರಾಜ್ಕುಮಾರ. ಹದಿನೈದು ದಿನ ಆಫೀಸ್ ಕೆಲಸದ ಮೇಲೆ ಬ್ಯಾರೆ ದೇಶಕ್ಕೋಗಿ ನಮ್ಮನ್ನೆಲ್ಲ ಮರ್ತು ಬಿಟ್ಟೀಯೇನು?’’

‘‘ಬೇ ಈಗೇನಾತು ಹೇಳು... ಅರಾಮಿದ್ದಿ?’’ ಎಂದದ್ದಕ್ಕೆ ‘‘ನಿಮ್ಮಷ್ಟ ಅರಾಮಲ್ಲ ಬಿಡಪಾ ಎರಡು ಸುದ್ದಿ ಹೇಳ್ಬಕು ಅಂತ ಫೋನ್ ಮಾಡಿದೆ. ಬಾಳ ದಿನದಿಂದ ಹೇಳ್ಬಕು ಅನ್ಕೊಂಡೆ ಹೇಳಿರಲಿಲ್ಲ. ಇತ್ತಿತ್ಲಾಗ ಟೀವಿ ಬಿರುಕು ಬಿಡಾಕ ಸುರುವಿಟ್ಟವಾ. ಒಂದೊಂದ್ಸಲ ಈ ವಾರ್ತಾ ಓದೋರಿಗೆ, ರಾಜಕಾರಣಿಗಳಿಗೆ ಕೊಂಬು, ಕೋರೆ ಹಲ್ಲು ಕಾಣಿಸ್ತಿರ್ತಾವ... ಒಂದೊಂದ್ಸಲ ಮಜಾ ಅನಿಸ್ತದ. ಭಯ ಆಗ್ತದ. ನನಗ ಹುಚ್ಚು ಅನ್ಕೊಂಡಿ ಮತ್ತ!!! ಇಡೀ ಓಣಿಯೊರ ಮನಿ ಟೀವಿಯೊಳಗೂ ಇದಾ ಕಥಿ. ಅದರ ಫೋಟೊ ತಗದು ಕಳ್ಸಿನಿ ನೋಡು’’ ಅಂದಳು. ನನಗೆ ನಗು ಬಂತು. ಕಿಸಕ್ಕನೆ ನಕ್ಕೆ ಕೂಡ. ಅವಳಿಗೆ ಕೇಳಿಸಿರಬೇಕು... ‘‘ಹು ನಿನಗ ಸೊಕ್ಕು. ನಾ ಏನ್ ಹೇಳಿದ್ರು ಅದು ನಿನಗ ಅಡಿಗಿ ಮನಿ ಕಥಿ ಅನಿಸ್ತದ. ಇಡೀ ಶಾಲೆಕಾ ನಾ ಫಸ್ಟ್ ಇದ್ನಿ. ಮಾಸ್ತರು ನನ್ನ ನೋಡಿ ಕಲಿ ಅನತಿದ್ರು ನೆನಪಿದ್ಯೋ ಇಲ್ಲೋ ನಿನಗ? ನನ್ನನ್ನೂ ಕೆಲ್ಸಕ್ ಕಳ್ಸಿದ್ರ ನಾನೂ ನಿನಿಗಿಂತ ಜಾಸ್ತಿ ಸಂಬಳ ತಗೋತಿದ್ದೆ. ಹುಡುಗ ಬಾಳ ಛೋಲೋ ಅಂತ ಮದುವಿ ಮಾಡಿ ಕೊಟ್ರಿ. ಇವ ನೋಡಿದ್ರ ನಮಗ ಬಾಳ ಆಸ್ತಿ ಅದಾ. ನೀ ಮತ್ತ್ ಕೆಲ್ಸ ಮಾಡೂ ಜರೂರಿಲ್ಲ. ಇಲ್ಲೆ ಉಂಡು ತಿನ್ಕೋತ ಅರಾಮಿರು ಅಂದ. ನಾ ಕುಂತುಂಡು ದಪ್ಪ ಆದ್ನಿ ಅಂತ ಅಪ್ಪ ಅವ್ವ ಎಲ್ರು ಅಂತಾರ. ನೀನೂ ಎಷ್ಟೋ ಸಲ ಅಂದಿ!!! ಆದ್ರ ಮನಿಕೆಲ್ಸ ರಗೂಡ ಇರ್ತಾವು. ನಾವು ಮನಿ ಕೆಲ್ಸ ಮಾಡುದು ಯಾರ ಕಣ್ಣಿಗೂ ಬೀಳುದಿಲ್ಲ...’’ ತಂಗಿ ಶತಾಬ್ದಿ ಎಕ್ಸ್ ಪ್ರೆಸ್ ರೈಲಿನಂತೆ ಪಟಪಟ ಮಾತನಾಡುತ್ತಲೇ ಹೋದಳು. ಅವಳನ್ನ ಮಧ್ಯ ತಡೆಯಲು ಹೋದರೆ ಅದಕ್ಕಿಂತ ಮೂರು ಪಟ್ಟು ಕೇಳಬೇಕಾಗುತ್ತದೆ. ಸುಮ್ಮನೆ ಕೇಳಿಸಿಕೊಳ್ಳುವುದು ಒಳಿತು.
‘ಆ ಟೀವಿ ವಿಷ್ಯ ಬಿಡು. ಇನ್ನೊಂದೇನ ಹೇಳ್ತಿನಿ ಅಂದ್ಯಲಾ. ಅದೇನ್ ಹೇಳು’’ ಅಂದೆ.
‘‘ಮುನ್ನಿನಾ ದೇಶಾ ಬಿಟ್ಟು ಕಳಿಸ್ತಾರಂತೆ. ಅದನ್ನ ಕೇಳಿದಾಗಿಂದ ಯಾಕೋ ಸಮಾಧಾನ ಇಲ್ಲ. ಈ ದೇಶದಾಕಿ ಅನ್ನೋ ಯಾವ ಗುರ್ತು ಇಲ್ಲ ಅನ್ನಾಕತ್ತಾರ. ನಾವು ಇಷ್ಟು ವರ್ಷ ನಮ್ಮನಿಯಾಗ ಕೆಲಸಕ್ಕಿದ್ಲು. ಸಂಬಳ ಕೊಟ್ಟಿವಿ ಅಂದ್ರ ಸುಮ್ನಿರ್ತಾರೇನು. ಏನಾರ ಮಾಡಯಣ... ನಿಮ್ಮನಿ ಬಾಯಿನ ಇಕಿನ್ನ ಇಲ್ಲಿ ಕಳ್ಸಿದ್ದು... ಅಲ್ಲಿ ಹೆಂಗದ?’’ ಅವಳು ಹೇಳಿದ್ದಕ್ಕೆ ನನಗೆ ಈಗ ಅರ್ಥ ಹೊಳೆಯಲಾರಂಭಿಸಿತು.
‘‘ನಾನು ಊರಾಗಿರಲಿಲ್ಲ. ಮನಿಗೋಗಿ ಏನಾಗೇತಿ ಅಂತ ನೋಡಿ ಹೇಳ್ತಿನಿ’ ಅಂದು ಫೋನಿಟ್ಟೆ.
ತಂಗಿಯ ರಸಕಸಿ ಹಿಂಸೆ ಅನ್ಸಿದ್ರು ಅವಳದು ತಾಯಿ ಹೃದಯ. ನಾವು ಊರಿನಲ್ಲಿ ಶಾಲೆ ಓದುತ್ತಿದ್ದ ದಿನಗಳಲ್ಲಿ ತಂಗಿಯೆ ಬೆಳಗ್ಗೆ ರಂಗೋಲಿ ಹಾಕುತ್ತಿದ್ದಳು. ಸಾಮಾನ್ಯವಾಗಿ ಗಾಳಿ, ಇರುವೆ, ಜಿಟ್ಟಿ, ಜಂಡಿಗಿ, ಹುಳ, ಹುಪ್ಪ್ಪುಡಿ ಅವಳ ಪುಟ್ಟ ಬೆರಳಿನಿಂದ ಹಾಕಿದ ಗೆರೆಗಳನ್ನ ದಾಟಿ ಒಳಬಂದು ಬಿಟ್ಟಿರುಬಿಡುತ್ತಿದ್ದವು. ರಂಗೋಲಿಯ ಗೆರೆಗಳ ಮಧ್ಯದ ಜಾಗದಲ್ಲಿ ಅತ್ತಿಂದಿತ್ತ ಇತ್ತಿಂದತ್ತ ಹರಿದಾಡುತ್ತಾ ವಾಸಿಸುತ್ತಿದ್ದವು... ಆಗೆಲ್ಲ ತಂಗಿಯ ಕೋಪ ತಾರಕಕ್ಕೇರುತ್ತಿತ್ತು. ಒಳಗೆ ಬರುವ ಜಿಟ್ಟೆಯ ಮೀಸೆ ಹಿಡಿದು ಹೊರದಬ್ಬುತ್ತಿದ್ದಳು. ಇರುವೆಯ ಹೊರದಬ್ಬಿ ತನ್ನ ರಂಗೋಲಿ ಕೆಡಿಸಿದ ಕೋಪಕ್ಕೆ ಪಕ್ಕದ ಹೂಜಿಯಲ್ಲಿ ಹಾಕಿ ಚಪ್ಪಾಳೆ ತಟ್ಟುತ್ತಿದ್ದಳು. ರಜಾದಿನವಾದ ರವಿವಾರ ರಂಗೋಲಿ ಹಾಕಿದಾಗಲಂತು ಅದರ ಸುತ್ತಲೆ ಕಾವಲು ಕೂರುತ್ತಿದ್ದಳು. ಅಲ್ಲಿಯೇ ಒಂದು ಪುಟ್ಟ ಸ್ಟೂಲ್ ಹಾಕಿಕೊಂಡು ತಿಂಡಿ ಕಾಫಿ ಮುಗಿಸುತ್ತಿದ್ದಳು. ಅವಳು ಸಂಜೆ ಶಾಲೆಯಿಂದ ಬಂದವಳೆ ಅಪ್ಪನ ಬಳಿ ದೂರು ಹೇಳುತ್ತಿದ್ದಳು. ಅಪ್ಪ ಆಗೆಲ್ಲ ಬಹಳ ತೂಕದಿಂದ ‘‘ಅವು ನಿನ್ನ ರಂಗೋಲಿ ಕೆಡಿಸಲಾಕೆ ಅಂತ ಬರ್ತವೇನು? ಎಷ್ಟು ಚಂದ ರಂಗೋಲಿ ಬಿಡಿಸ್ತಿ ನೀನು... ಇಲ್ಲಿ ಬದುಕೋಬೋದು ಅಂತ ಬರ್ತಾವಪ್ಪ’’ ಅಂದಾಗ ತಂಗಿ ಪೆಪೆಪೆಪೆ ಮಾಡಿ ಅರ್ಥವಾಗದೆ ನನ್ನ ಮುಖ ನೋಡುತ್ತಿದ್ದಳು. ಶಾಲೇಲಿ ಫಸ್ಟ್ ಇದ್ದ ಆಕಿಗೆ ಹಂಗಾದ್ರ ನಾನಿನ್ನೇನು ಹೇಳಲು ಸಾಧ್ಯವಿತ್ತು. ಈಗ ಅದಕ್ಕೆ ಅರ್ಥ ಹೊಳೆದು ರೆಕ್ಕೆ ಪುಕ್ಕ ಕಟ್ಟಿಕೊಂಡು ಏನೋ ಧ್ವನಿಸುತ್ತ ಸುತ್ತ ತಿರುಗುತ್ತಿವೆ ಅನಿಸಲಿಕ್ಕೆ ಶುರುವಾಯಿತು.
ಕೀ ತೆಗೆದು ನನ್ನ ಫ್ಲ್ಯಾಟಿನೊಳಗೆ ಕಾಲಿಡುತ್ತಿದ್ದಂತೆಯೇ ಮನೆಯ ಅಸ್ತವ್ಯಸ್ತತೆ ಗೋಚರಿಸಿತು. ಬಾಯಿ ಸುಮಾರು ದಿನದಿಂದ ಬಂದಿಲ್ಲ. ಒಂದು ವಾರವಾಗಿರಬೇಕು. ಕಸ ಹಾಗೆ ಬಿದ್ದಿದೆ. ಅಡುಗೆ ಮನೆಗೆ ಹೋದರೆ ಅಲ್ಲೊಂದೆರಡು ಪಾತ್ರೆಗಳು ಹಾಗೆ ಇವೆ. ಬಹುಷಃ ನಾಳೆ ತೊಳೆದರಾಯಿತು ಅಂದು ಬಿಟ್ಟಿರಬೇಕು. ಕೂಡಲೇ ಅವಳ ನಂಬರಿಗೆ ಕರೆ ಮಾಡಿದೆ. ‘‘ನೀವು ಕರೆ ಮಾಡಿದ ಚಂದಾದಾರರು ನೆಟ್‌ವರ್ಕ್ ಕ್ಷೇತ್ರದಿಂದ ಹೊರಗಿದ್ದಾರೆ’’ ಎನ್ನುವ ಉತ್ತರ ಬಂದಿತು. ಪ್ರಯಾಣದ ಸುಸ್ತು ಇದ್ದದ್ದರಿಂದ ತುಸು ಹೊತ್ತು ಅಡ್ಡಾಗಿ ಆಮೇಲೆ ಅವಳ ಅಡ್ರೆಸ್ಸ್ ಹುಡುಕಿ ಮಾತನಾಡಿಸಿಕೊಂಡು ಬಂದರಾಯಿತೆಂದು ವಿಶ್ರಾಂತಿ ತೆಗೆದುಕೊಳ್ಳಲು ಕೋಣೆಗೆ ಹೋದೆ.
ಏಳುವಷ್ಟರಲ್ಲಿ ಮಧ್ಯಾಹ್ನವಾಗಿತ್ತು. ಮತ್ತೊಮ್ಮೆ ಕರೆ ಮಾಡಿದೆ. ಮತ್ತದೇ ಉತ್ತರ: ‘‘ನೆಟ್‌ವರ್ಕ್ ಕ್ಷೇತ್ರದಿಂದ ಹೊರಗೆ’’. ಮನೆಯ ಸ್ಥಿತಿ ನೋಡುವಂತಿರಲಿಲ್ಲ. ನಾನೇ ಪೊರಕೆ ಹಿಡಿದು ಶುಚಿಗೊಳಿಸಲು ಹೋದೆ. ಎಷ್ಟು ಗುಡಿಸಿದರೂ ಮತ್ತೆ ಹಿಂದೆ ಹಿಂದೆ ಉಳಿಯುವ ಕಸ. ಪಾತ್ರೆ ತೊಳೆಯಲು ಹೋದೆ. ಅಲ್ಲೂ ಹಾಗೆ!!! ನಳದೊಳಗಿನ ನೀರು ಪಾತ್ರೆಗೆ ಅಂಟುತ್ತಿಲ್ಲವೆಂಬಂತೆ ಭಾಸವಾಯಿತು. ಬ್ರೆಡ್ ಆಮ್ಲೆಟ್ ಮಾಡಲು ಹೋದೆ. ಸರಿಯಾಗಲಿಲ್ಲ. ಕಾಫಿ ಮಾಡಿಕೊಂಡೆ. ರುಚಿಯಿರಲಿಲ್ಲ. ಯಾಕೋ ಮನೆಯ ಯಾವುದೂ ನನಗೆ ಸಹಕರಿಸುತ್ತಿಲ್ಲ ಎನಿಸಲಾರಂಭಿಸಿತು. ನಾನೇಕೆ ಹೀಗೆ ತಂಗಿಯಂತೆ ಮಳ್ಳನ ಹಾಗೆ ಆಡುತ್ತಿದ್ದೇನೆ? ಮೊದಲ ಬಾರಿ ಮನೆಗೆಲಸಕ್ಕೆಂದು ಬಂದಾಗ ಬಾಯಿಗೆ ನಮ್ಮ ಭಾಷೆ ಬರುತ್ತಿರಲಿಲ್ಲ. ಅವಳು ಮಾತನಾಡುವ ಧಾಟಿಯಲ್ಲೇ ಅವಳು ಇಲ್ಲಿನವಳಲ್ಲ ಎಂದು ತಿಳಿಯಿತು. ಯಾವ ಊರು ಕೇಳಿದೆ? ಯಾವುದೋ ಊರಿನ ಹೆಸರು ಹೇಳಿದ್ದಳು... ಅದೆಲ್ಲಿ ಬರುತ್ತದೆಂದರೆ ‘ಮುಝೆ ಮಾಲೂಮ್ ನಹಿ’ ಎಂದಿದ್ದಳು. ಹಿಂದಿಯು ಅಷ್ಟು ಸ್ಪಷ್ಟವಿರಲಿಲ್ಲ. ಅವಳ ಊರಿನ ಹೆಸರನ್ನೇ ಇನ್ನೊಮ್ಮೆ ಕೇಳಿ ಗೂಗಲ್ಲಿನಲ್ಲಿ ತಲಾಷಿ ನಡೆಸಿದಾಗ ಆ ಹೆಸರಿನ ಯಾವ ಊರೂ ಸಿಗಲಿಲ್ಲ. ನಾನು ಆಗ ತಾನೆ ಹೊಸತಾಗಿ ಕೆಲಸಕ್ಕೆ ಸೇರಿದ್ದರಿಂದ ಸಂಬಳ ಕಡಿಮೆಯೇ ಹೇಳಿದೆ. ಯಾವುದೇ ಚೌಕಾಸಿ ಮಾಡದೆ ಒಪ್ಪಿಕೊಂಡು ಬಿಟ್ಟಿದ್ದಳು. ಯಾವ ಊರಿನವರಾದರೇನು? ಸಂಬಳ ಕಡಿಮೆ ಇದೆಯಲ್ಲ. ಇಲ್ಲಿಯವರೆ ಆದರೆ ಅವರ ಡಿಮ್ಯಾಂಡುಗಳೆ ನೂರೆಂಟು ಎಂದು ಕೇಳಲ್ಪಟ್ಟಿದ್ದೆ. ಹೆಂಗೂ ನನಗೆ ಚೂರು ಮಿಕ್ಕುತ್ತದೆ ಎಂದು ಸುಮ್ಮನಾಗಿದ್ದೆ. ಬಾಯಿ ತುಂಬಾ ರುಚಿಕರವಾಗಿ ಅಡುಗೆ ಮಾಡಿ ಹಾಕುತ್ತಿದ್ದಳು. ಮನೆಯನ್ನ ಅತಿ ಎನ್ನಿಸುವಷ್ಟು ಸ್ವಚ್ಛ ಮಾಡಿ ಇಡುತ್ತಿದ್ದಳು. ಅವಳ ಬಳಿ ಕೇವಲ ಮಾತನಾಡಬಹುದಾದ ಫೋನ್ ಇತ್ತು. ಒಮ್ಮೆ ಯಾರ ಬಳಿಯೋ ಮಾತನಾಡಬೇಕಾದರೆ ಅವಳ ಭಾಷೆ ಬೆಂಗಾಲಿ ಎಂದು ತಿಳಿಯಿತು. ಬಹುಶಃ ಬಾಂಗ್ಲಾದಿಂದ ಬಂದಿರಬಹುದೆಂದು ಊಹಿಸಿದೆನಾದರೂ ಅದು ಅಷ್ಟು ಮುಖ್ಯವೆನಿಸಲಿಲ್ಲ. ಅವಳು ಇಲ್ಲಿ ಒಡನಾಡುತ್ತಾ ಒಡನಾಡುತ್ತಾ ಇಲ್ಲಿಯವಳೆ ಆಗಿದ್ದಳು. ಸ್ವತಂತ್ರ ದಿವಸದ ದಿನ ನನಗಿಷ್ಟದ ಹೆಸರುಬೇಳೆ ಪಾಯಸವನ್ನು ಅದು ಹೇಗೋ ಕಲಿತು ಮಾಡಿಕೊಟ್ಟಿದ್ದಳು. ಚೂರು ಪಾರು ಕನ್ನಡ ಕಲಿಯುತ್ತಿದ್ದಳು. ‘‘ಹೋಗಿ ನೀವು... ಬನ್ನಿ... ತಿಂಡಿ ಮಾಡಿದೆ. ನಾ... ನು ನಾಳೆ ಬರುತ್ತೆ’’. ಹೀಗೆ ಅವಳ ಬಾಯಲ್ಲಿ ಕನ್ನಡ ಕೇಳುವುದೇ ಚಂದ ಅನಿಸಿತ್ತು. ನನ್ನ ಸುತ್ತಮುತ್ತಲಿನ ಎಷ್ಟೋ ಮನೆಗಳಿಗೆ ಅವಳೇ ಪರಿಚಯದ ಬಾಯಿಯರನ್ನ ಕಳಿಸಿದ್ದಳು. ಇದೇ ಅಪಾರ್ಟ್ಮೆಂಟಿನಲ್ಲಿರುವ ನನ್ನದೇ ಆಫೀಸಿನಲ್ಲಿ ಕೆಲಸ ಮಾಡುವ ಸ್ನೇಹಿತನ ಮನೆಗೂ ಇವಳ ಗೆಳತಿಯನ್ನೇ ಕಳಿಸಿದ್ದಳು. ಇದು ಗೊತ್ತಾಗಿ ನಾನು ಕಿಚಾಯಿಸುವಂತೆ ‘‘ಅಡುಗೆ ಕೆಲಸದವರನ್ನ ಸಪ್ಲೈ ಮಾಡೋ ಬ್ರೋಕರ್ ಆಗಿಬಿಟ್ಟಿದ್ದೀರಲ್ಲಾ ಬಾಯಿ’’ ಎಂದದ್ದಕ್ಕೆ ‘ಭೂಖ್ ಸಾಹಬ್’ ಎನ್ನುವ ಉತ್ತರ ನನ್ನ ಬಾಯಿ ಮುಚ್ಚಿಸಿತ್ತು. ನಾನು ಉತ್ತರ ಕರ್ನಾಟಕದಲ್ಲಿರುವ ನನ್ನ ತಂಗಿಯ ಮನೆಗೂ ಯಾರಾದರೂ ಇದ್ದಾರೆಯೇ? ಎಂದಿದ್ದಕ್ಕೆ ಮುಖವರಳಿಸಿಕೊಂಡು ‘ಮುನ್ನಿ ಅಂತ ಇದೆ. ಉಸ್ಕೊ ಅಠಾರಾ ನಹಿ ಹುಯಿ ಹೈ ಸಾಬ್. ಒ ಪಡ್ನ ಚಾಹತಿ ಹೈ’ ಅಂದಳು. ಅದರ ಬಗ್ಗೆ ಚಿಂತೆ ಬೇಡ. ನನ್ನ ತಂಗಿ ತುಂಬಾ ಜಾಣೆ. ಅವಳು ಚೆನ್ನಾಗಿ ಇಟ್ಟುಕೊಳ್ಳುತ್ತಾಳೆ. ಓದಿಸುತ್ತಾಳೆ ಕೂಡ ಎಂದಿದ್ದೆ. ತಂಗಿಯೂ ಹಾಗೆಯೇ ನಡೆದುಕೊಂಡಳು. ಮುನ್ನಿಯೂ ಅಲ್ಲಿ ಬೇಗ ಹೊಂದಿಕೊಂಡಳು. ತಂಗಿಯ ಮಗನಿಗೂ ಒಳ್ಳೆಯ ಕಂಪೆನಿಯಾಯಿತು ಎಂದು ಖುಷಿಪಟ್ಟಿದ್ದೆ. ಬಾಯಿ ಮತ್ತು ಮುನ್ನಿ ನಮ್ಮ ಕುಟುಂಬದವರಾಗಿಬಿಟ್ಟಿದ್ದರು.
ಈಗ ಬಾಯಿ ಇಲ್ಲದೆ ಈ ಮನೆ ಬಿಕೋ ಎನ್ನುತ್ತಿದೆ. ಅಲ್ಲಿ ಮುನ್ನಿ ಭಯಗೊಂಡಿರಬಹುದು... ಕೂಡಲೇ ವಾಸ್ತವಕ್ಕೆ ಬಂದು ಮಾಡಿದೆ. ಈಗ ಸ್ವಿಚ್ ಆಫ್ ಆಗಿತ್ತು. ಅವಳ ಅಡ್ರೆಸ್ಸ್ ಎಲ್ಲೋ ಬರೆದುಕೊಂಡಿದ್ದ ನೆನಪಾಗಿ ಮತ್ತೆ ನನ್ನ ಕೋಣೆಯ ಬೀರುವಿನಲ್ಲೆಲ್ಲ ಹುಡುಕಾಡಿದೆ. ಹಳೆಯ ಡೈರಿ, ಓದುವ ಕಪಾಟು ಎಲ್ಲ ಕಡೆ ಹುಡುಕಾಡಿದೆ. ಎಲ್ಲೂ ಸಿಗಲಿಲ್ಲ. ಅವಳು ಇಲ್ಲೇ ಹತ್ತಿರದ ಎಫ್.ಎಸ್.ಆರ್ ಲೇಔಟಿನಲ್ಲಿರುವ ರಾಯಲ್ ಮಾಲಿನ ಅದ್ಯಾವುದೋ ಪುಟ್ಟ ಚರ್ಚಿನ ಪಕ್ಕದ ಪುಟ್ಟ ಜೋಪಡಿಯಂತಹ ಜನತಾ ಮನೆಯಲ್ಲಿ ಇರುವುದಾಗಿ ಹೇಳಿದ್ದು ನೆನಪಾಗಿ ಕೂಡಲೇ ಬಟ್ಟೆ ಬದಲಾಯಿಸಿ ನನ್ನದೆ ಕಾರಿನಲ್ಲಿ ಹೊರಟೆ. ದಾರಿಯಲ್ಲಿ ಯಾರೋ ‘‘ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ಕೊಡಬೇಕು. ಅಕ್ರಮ ವಲಸಿಗರನ್ನು ಹೊರದಬ್ಬಬೇಕು’’ ಎನ್ನುವ ಘೋಷಣೆ ಕೂಗುವುದು ಕೇಳಿಬರುತ್ತಿತ್ತು. ರೇಡಿಯೋ, ಪತ್ರಿಕೆ, ಟೀವಿಗಳಲ್ಲಿ ಎಲ್ಲವು ಇಂಥದ್ದೇ ಸುದ್ದಿ. ಅವರ ಮನೆ ಯಾವುದು? ಅವರ ದೇಶ ಯಾವುದು? ಅಲ್ಲಿಯೂ ಇಲ್ಲಿಯಂತದೆ ಗಾಳಿ, ನೀರು, ಬೆಳಕು, ಸೂರ್ಯ, ಚಂದ್ರ ಇರುತ್ತಾನಲ್ಲವೆ. ನಮಗೆ ನಾವೇ ಎಳೆದುಕೊಳ್ಳುತ್ತಿರುವ ಗಡಿಗಳು ತಂಗಿ ಹಾಕುತ್ತಿದ್ದ ರಂಗೋಲಿ ಗೆರೆಗಳಂತೆ ಕಂಡವು. ನಾನು ಕೆಲಸದ ಬಾಯಿಯನ್ನ ನೇಮಿಸಿಕೊಳ್ಳುವಾಗಿನ ಮಾನದಂಡ ಕಡಿಮೆ ಸಂಬಳವೇ ಆಗಿತ್ತಲ್ಲವೇ? ಎಲ್ಲ ಕಡೆಯೂ ಹೀಗೆ ನಡೆಯುತ್ತಿರಬಹುದು ಎನಿಸಿತು. ನಮಗೆ ಮುಟ್ಟುತ್ತಿದ್ದ ಸುದ್ದಿಗಳು ತಿರುಚಿ ಮರುಚಿಯಾಗಿರಲಿಕ್ಕೂ ಸಾಧ್ಯವಿತ್ತು. ಕೆಲವೊಮ್ಮೆ ನಿಜ ಎನ್ನಿಸುವಷ್ಟು ರೋಚಕವು ಆಗಿರುತ್ತಿತ್ತು. ಬಾಯಿ ಹೇಳಿದ ಜಾಗದಲ್ಲಿ ಅವಳು ಹೇಳಿದ ಮನೆಗಳಿದ್ದವಾದರೂ ಅವಳಿರಲಿಲ್ಲ. ಖಾಲಿ ಬಿದ್ದಿದ್ದವು.
ಯಾವುದೋ ದುಃಖದಿಂದ ಡ್ರೈವು ಮಾಡಿಕೊಂಡು ಬರುವಾಗ ನಮ್ಮಂತಿಲ್ಲದವರು, ಬೇರೆ ಭಾಷೆ ಮಾತನಾಡುತ್ತಿರುವವರು ಸೆಕ್ಯೂರಿಟಿ ಗಾರ್ಡುಗಳಾಗಿ, ಮನೆ ಕೆಲಸದವರಾಗಿ, ಬೀದಿ ಬದಿಯ ವ್ಯಾಪಾರಿಗಳಾಗಿ ನಾವಿರುವ ನೆಲವೇ ನಮ್ಮ ತಾಯಿ ಎಂದು ಅವರ ಕಣ್ಣೋಟದಿಂದಲೆ ಹೇಳುತ್ತಿದ್ದಾರೆ ಎನಿಸಿತು. ತಂಗಿಯ ಫೋನು. ಈ ಬಾರಿ ಎರಡನೇ ರಿಂಗಿಗೆ ಎತ್ತಿದೆ. ‘ಮುನ್ನಿ ಬಜಾರಕ್ಕೆ ತರಕಾರಿ ತರೋದಕ್ಕ ಹೋಗಿದ್ಲು. ಇನ್ನು ಬಂದಿಲ್ಲ. ಹೊರಗ ಬಾಳ ಗಲಾಟಿ ಅದ. ನಾನು ಬ್ಯಾಡ ಅಂತಂದ್ರು ನಮ್ಮೂರಾಗ ನಮಗ ಎಂತಾ ಭಯ ಅಂತ ಹೋದ್ಲು. ಯಾಕೋ ಭಯ ಆಗ್ಲಿಕತ್ತಾದ. ಈಗೇನ್ ಮಾಡುದು? ಹೊರಗ ಧಾಂಡಿಗರ ಹಾವಳಿ ಬೇರೆ...’’ ಅವಳು ಮಾತನಾಡುತ್ತಲೇ ಇದ್ದಳು. ನನಗೇನು ಹೇಳಬೇಕೋ ತೋಚಲಿಲ್ಲ. ಫೋನ್ ಕಟ್ ಮಾಡಿದೆ. ಮನಸ್ಸು ಭಾರವಾಗಿತ್ತು. ಮನೆಗೆ ಬಂದು ಟೀವಿ ಹಾಕಿದೆ. ಯಾವುದೊ ಪ್ಯಾನೆಲ್ ನಡೀತಿತ್ತು. ಫ್ರಿಡ್ಜಿನೊಳಗಿನ ಜ್ಯೂಸು ತೆಗೆದುಕೊಂಡು ಬರುವಷ್ಟರಲ್ಲಿ ತಂಗಿ ಹೇಳಿದಂತೆ ಟೀವಿಯ ಪರದೆಯಲ್ಲಿ ಗೀಚುಗಳಿದ್ದವು. ಕ್ರಮೇಣ ಬಿರುಕು ಬಿಡಲಾರಂಭಿಸಿತು. ಚಾನೆಲ್ ಬದಲಾಯಿಸತ್ತ ಹೊರಟೆ. ಯಾವುದೋ ರಾಜಕಾರಣಿ ತಲೆಬುಡವಿಲ್ಲದ ಹೇಳಿಕೆ ನೀಡುತ್ತಿದ್ದ. ಅವನಿಗೆ ಕ್ರಮೇಣ ಕೊಂಬು, ಕೋರೆ ಹಲ್ಲು ಮೂಡಲಾರಂಭಿಸಿದವು. ಬಿರುಕು ಜಾಸ್ತಿಯಾಗಲು ಶುರುವಾಯಿತು. ಮತ್ಯಾವುದೋ ಚಾನೆಲ್ಲಿನಲ್ಲಿ ಜನ ದಂಡಿ ದಂಡಿಯಾಗಿ ಬೇರೆಲ್ಲಿಗೋ ಹೋಗುತ್ತಿದ್ದರು. ನಗರದ ವಾಯುಮಾಲಿನ್ಯದ ಟ್ರಾಫಿಕ್‌ನ ಹೊಗೆಯಂತೆ ಹೊಗೆಯೇಳಲು ಶುರುವಾಗಿ ಒಮ್ಮೆಲೇ ಟೀವಿ ಛಿದ್ರ ಛಿದ್ರವಾಗಿ ಚೂರಾಯಿತು. ಟೀವಿ ಪರದೆಯ ಗಾಜು ನೆಲದ ಮೇಲೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದವು. ಒಳಗೆ ವಯರು ತುಂಬಿದ ಸರಕೀಟುಗಳು ಮನುಜನ ಕರುಳಿನಂತೆ ಕಂಡವು. ಭಯವಾಯಿತು. ಒಮ್ಮೆ ಸುತ್ತ ನೋಡಿದೆ. ಮನೆಯ ಎಲ್ಲವೂ ‘ಈ ಮನೆ ನಿನ್ನದೊಬ್ಬನದೆ ಅಲ್ಲ’ ಎಂದಂದಾಯಿತು. ಮತ್ತೆ ಬಾಯಿಗೆ ಫೋನ್ ಮಾಡಿದೆ ಸ್ವಿಚ್ ಆಫ್ ಇತ್ತು. ತಂಗಿಗೆ ಫೋನ್ ಮಾಡಿದೆ. ರಿಂಗಾಗುತ್ತಲೆ ಇತ್ತು. ಕೊನೆಯ ರಿಂಗಿಗೆ ಫೋನೆತ್ತಿದಳು. ‘ಫೋನ್ ಎತ್ತಕೆ ಏನ್ ಧಾಡಿ ನಿನಿಗೆ? ಸಾಯುವಂತಹ ಅರ್ಜೆಂಟ್ ಇದ್ರೆ ಏನ್ ಮಾಡ್ತಿ ನೀನು?’ ಭಯಮಿಶ್ರಿತ ಕೋಪದಿಂದ ಅಂದೆ. ದುಗುಡದ ಆ ಸಮಯದಲ್ಲೂ ತಂಗಿ ಕಿಸಕ್ ಎಂದು ನಕ್ಕಿದ್ದು ಕೇಳಿಸಿತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)