varthabharthiಸುಗ್ಗಿ

ನವಿಲು ಸಾಲು

ಬಾಲ್ಯವೇ ನೀ ಮರಳಿ ಬರಬಾರದೇ?

ವಾರ್ತಾ ಭಾರತಿ : 28 Sep, 2019
ಡ್ಯಾನಿಯಲ್.ಜೆ .ಹುಣಸನಹಳ್ಳಿ

ಡ್ಯಾನಿಯಲ್.ಜೆ .ಹುಣಸನಹಳ್ಳಿ

ಬಾಲ್ಯವೆಂಬ ಜೀವನದ ಆರಂಭಿಕ ದಿನಗಳು ಕಳೆದು ಹೋದ ಆ ಕ್ಷಣಗಳು ಮರಳಿ ಬಾರದೇ ಹೋದರು. ಸವಿ ನೆನಪಿನ ನೆಪದಲ್ಲಿ ಸದಾ ಮನದಲ್ಲಿ ಸ್ವರಸಂಗೀತವಾಗಿ ಗುನುಗುತ್ತಲೇ ಇರುತ್ತದೆ, ಬಾಲ್ಯದ ಉತ್ಸಾಹದಾಯಕ, ಆಟ-ಪಾಠ ತುಂಟಾಟ, ಗೆಳೆಯರ ಜೊತೆಗಿನ ಒಡನಾಟ, ಕ್ಲಾಸ್ ಸಮಾರಂಭದ ಡ್ಯಾನ್ಸ್, ಮಳೆಯಲ್ಲಿ ಮಿಂದೆದ್ದ ಕ್ಷಣ, ಸಹಪಾಠಿಗಳೊಂದಿಗೆ ರಗಳೆ, ಸ್ಲೇಟ್‌ನಲ್ಲಿ ಬಳಪದ ಸಹಾಯದಿಂದ ಮೊದಲ ಅಕ್ಷರಗಳ ಕಲಿತ ಕ್ಷಣ. ಕುಳಿತಲ್ಲೇ ಕಾಗೆ ಗೂಬೆಗಳ ಕರೆಯುವ ಸ್ವಚ್ಛಂದ ಹಾಡುಗಳು ಇವೆಲ್ಲಾ ಬಾಲ್ಯದಲ್ಲಿ ನಡೆದ ಘಟನೆಗಳಾದರೆ ಶಾಲೆಯಲ್ಲಿ ಪಾಠ ಕೇಳದೆ ಓಡಿ ಹೋಗಲು ಹೋಗಿ ಬಿದ್ದು ಕಾಲಿಗೆ ಗಾಯ ಮಾಡಿಕೊಂಡು ಮನೆಯಲ್ಲಿ ಅಮ್ಮನ ಕೈಯಲ್ಲಿ ಪೆಟ್ಟು ತಿಂದ ಸನ್ನಿವೇಶ. ಶನಿವಾರ ಬಂತೆಂದರೆ ಸ್ಕೂಲಿಗೆ ಹೋಗಲು ಮನದಲಿ ಏನೋ ಒಂಥರ ದುಗುಡ ಕಾರಣ, ಮೇಷ್ಟ್ರು ಮಗ್ಗಿ ಅದೇ ದಿನ ಕೇಳುತ್ತಿದ್ದರು. ಆದರೆ ನನಗೆ ಮಗ್ಗಿ ಹೇಳಲು ಬಾರದೇ ಅವರ ಕೈಯಲ್ಲಿ ತಿಂದ ಪೆಟ್ಟು ಇಂದು ಸಹ ನೆನೆದಾಗ ಕಣ್ಣಾಲೆಗಳಿಂದ ನೀರು ಆನಂದಭಾಷ್ಪವಾಗಿ ಭೂರಮೆಗೆ ಜಿನುಗುತ್ತವೆ. ಇನ್ನು ನಮ್ಮ ರಗಳೆ ಒಂದ-ಎರಡ ಸೈಕಲ್ ಕಲಿಯಲು ಹೋಗಿ ಅಜ್ಜಿಗೆ ಢಿಕ್ಕಿ ಹೊಡೆದು ಕಾಲು ಉಳುಕಿಸಿದ ಪ್ರಸಂಗವು ಸಹ ಆಗಿದ್ದುಂಟು.

ಗೆಳೆಯರ ಜೊತೆ ಕೂಡಿ ಆಡಿದ ಕ್ರಿಕೆಟ್, ಗೋಲಿ, ಬುಗುರಿ, ಚಿನ್ನಿದಾಂಡು, ಲಗೋರಿಯ ನೆನಪು. ಶಾಲೆಗೆ ರಜೆ ಬಂತೆಂದರೇ ಅಜ್ಜಿ ಮನೆಗೆ ಹೋಗಿ ಕಾಲ ಕಳೆದ ಕ್ಷಣಗಳು. ನಾನೇನೇ ತಪ್ಪ್ಪು ಮಾಡಿದರು ಪೆಟ್ಟು ನೀಡದೆ ನನ್ನ ಸಂತೋಷವನ್ನೇ ನೋಡುತ್ತಿದ್ದ ಆಕೆಯ ಪರಿಶ್ರಮ, ಮಮತೆಯ ಕಾಳಜಿ ಅಚ್ಚಳಿಯದಂತೆ ಇಂದಿಗೂ ಮನದಲ್ಲಿ ಸದಾ ಕಾಡುತ್ತಲೇ ಇರುತ್ತದೆ.

ಸ್ನೇಹಿತನೊಂದಿಗೆ ಆದಂತಹ ಜಗಳ, ಮುನಿಸು ಮತ್ತೆ ನಮ್ಮಿಬ್ಬರ ನಡುವೆ ತಪ್ಪಿನ ಅರಿವಾಗಿ ಒಂದುಗೂಡಿದ ಕ್ಷಣ, ಪಕ್ಕದ ಮನೆಯಲ್ಲಿ ಮಾವಿನ ಕಾಯಿ ಕೀಳಲು ಹೋಗಿ ಮನೆಯ ಹೆಂಚುಗಳಿಗೆ ಕಲ್ಲಿನಿಂದ ಒಡೆದು ಅವರೊಂದಿಗೆ ಗಲಾಟೆ ಮಾಡಿದ ಸನ್ನಿವೇಶಗಳು ನೆನಪಾಗಿ ಹಾಗೇ ಉಳಿದಿದೆ.

ಶಾಲೆ ಎಂದರೇ ಒಂತರ ಭೂತಬಂಗಲೆ ಇದ್ದಂತೆ ದಿನನಿತ್ಯ ಅದೇ ಬಾರದ ಪುಸ್ತಕ ಚೀಲವನ್ನು ಹೆಗಲ ಮೇಲೆ ಏರಿಸಿಕೊಂಡು ಯುದ್ಧ್ದಕ್ಕೆ ಸನ್ನದ್ಧವಾದಂತೆ ನಮ್ಮ ಪಯಣ ಆರಂಭವಾಗುತ್ತಿತ್ತು. ಕ್ಲಾಸ್ ರೂಂನಲ್ಲಿ ಒಡನಾಡಿಗಳ ಜೊತೆ ದಿನ ಮೀಟಿಂಗ್. ಮೇಷ್ಟ್ರು ಕ್ಲಾಸಿಗೆ ಆಗಮಿಸುತ್ತಿದ್ದಂತೆ ಎಲ್ಲರೂ ಸೈಲೆಂಟ್, ಹೋಮ್ ವರ್ಕ್ ಮಾತ್ರ ಚಾಚು ತಪ್ಪದೆ ಮಾಡಿಕೊಂಡು ಕ್ಲಾಸಿಗೆ ಎಂಟ್ರಿ ಇಲ್ಲದಿದ್ದರೆ ಆ ದಿನ ತರಗತಿಗೆ ರಜೆ ಇವು ನಮ್ಮಯ ಅಭ್ಯಾಸಗಳು. ನಮ್ಮ ಊರಿನಿಂದ 1ಕಿ.ಮೀ ದೂರದ ಲಕ್ಕವಳ್ಳಿ ಎಂಬ ಗ್ರಾಮದಲ್ಲಿ ನಮ್ಮ ಸರಕಾರಿ ಶಾಲೆ ಅಲ್ಲಿಗೆ ದಿನನಿತ್ಯ ನಡೆದುಕೊಂಡೆ ಹೋಗುತ್ತಿದ್ದೆವು, ಇನ್ನು ನಮ್ಮ ಪ್ರದೇಶ ಮಲೆನಾಡು ಭಾಗವಾಗಿದ್ದರಿಂದ ಮಳೆಗಾಲ ಆರಂಭವಾಗುತ್ತಿದ್ದಂತೆ ವರುಣ ಅಬ್ಬರ ಸ್ವಲ್ಪ ಅಧಿಕವೇ ಇರುತ್ತಿತ್ತು. ಇದರಿಂದಾಗಿ ಒಮ್ಮಿಮ್ಮೆ ಹಳ್ಳ ಕೊಳ್ಳಗಳು ತುಂಬಿ ರಸ್ತೆಯ ಮೇಲೆ ಮಳೆ ನೀರು ಹರಿದು ಸಂಚರಿಸಲು ಆಗದ ಪರಿಸ್ಥಿತಿ ಎದುರಾಗುತ್ತಿತ್ತು. ಇದೇ ಸಂದರ್ಭವನ್ನು ಚಾತಕ ಪಕ್ಷಿಯಂತೆ ಕಾಯುತ್ತಿದ್ದ ನಮಗೆ. ರೋಗಿ ಬಯಸಿದ್ದು ಹಾಲು, ಅನ್ನ, ವೈದ್ಯರು ಹೇಳಿದ್ದು ಹಾಲು, ಅನ್ನ ಎಂಬಂತೆ ಮಳೆಗಾಲ ಬಂತೆಂದರೆ ನನಗಂತೂ ಹಬ್ಬವೋ ಹಬ್ಬ. ಕಾರಣ ಶಾಲೆಗೆ ಹೋಗುವ ದಾರಿಯಲ್ಲಿ ಸ್ನೇಹಿತರೆಲ್ಲಾ ನಾವಾಗಿ ನಾವೇ ಮಳೆಯಲ್ಲಿ ನೆನೆದು ಮನೆಗೆ ಮರಳುತ್ತಿದ್ದೆವು. ಊರಿನಲ್ಲಿ ಯಾಕೆ ಶಾಲೆಗೆ ಇಂದು ಹೋಗಿಲ್ಲವೆಂದು ಯಾರಾದರೂ ಪ್ರಶ್ನಿಸಿದರೆ ಅತಿಯಾದ ಮಳೆಯಿಂದ ಇಂದು ಶಾಲೆಗೆ ರಜೆ ನೀಡಲಾಗಿದೆ ಎಂದು ಉತ್ತರಿಸುತ್ತಿದ್ದೆವು.

ಒಂದು ದಿನ ಸ್ಕೂಲ್‌ಗೆ ಬಂಕ್ ಹಾಕಿ ಸಹಪಾಠಿಗಳೊಂದಿಗೆ ಕೂಡಿ ಆಟವಾಡುತ್ತಿದ್ದುದ್ದನ್ನು ಕಂಡ ನನ್ನಪ್ಪ. ಹುಡುಗರ ಜೊತೆ ಸೇರಿ ಶಾಲೆಗೆ ಹೋಗುವುದಿಲ್ಲವೆಂದು ಅರಿತು ನನ್ನನ್ನು ಮನೆಯಿಂದ ದೂರದ ಊರಿನ ಹಾಸ್ಟೆಲ್‌ಗೆ ಸೇರಿಸಲು ಮುಂದಾದರು. ಇದನ್ನು ಕಂಡ ಅಮ್ಮ ಒಂದೆಡೆ ಕಣ್ಣೀರಿನಿಂದ ನನಗೆ ವಿದಾಯ ಹೇಳಿದರೆ ನನಗಂತೂ ಮನಸ್ಸೇ ಇಲ್ಲ ಅಲ್ಲಿಗೆ ಹೋಗಲು, ಮುಂದೆ ಏನೂ ಮಾಡುವುದು ಸಮಯದ ಗೊಂಬೆಯಾಗಿದ್ದ ನನಗೆ ಬೇರೆ ಮಾರ್ಗಗಳೇ ಇಲ್ಲದೆ ಹಾಸ್ಟೆಲ್‌ಗೆ ಹೋಗಿ ಸೇರಿಕೊಂಡೆ. ಪ್ರತಿದಿನ ಮನೆಯಲ್ಲಿ ಬೆಳಗ್ಗೆ 8 ಗಂಟೆಗೆ ಏಳುತ್ತಿದ್ದ ನನಗೆ ಹಾಸ್ಟೆಲ್‌ನಲ್ಲಿ 5ಕ್ಕೆ ಎದ್ದು ಕೈಯಲ್ಲಿ ಪುಸ್ತಕ ಇಡಿದು ಓದಲು ಕುಳಿತುಕೊಳ್ಳಬೇಕಿತ್ತು. ಪುನಃ 7ಕ್ಕೆ ವ್ಯಾಯಾಮ, ಹೀಗೆ ಹಲವಾರು ಪ್ರಯೋಗಗಳು ಪ್ರಥಮ ದಿನವೇ ನನಗೆ ಕಾಡಲು ಆರಂಭಿಸಿದವು. ಮನೆಯಲ್ಲಿ ಸ್ವಚ್ಛಂದವಾಗಿ ಹಾರಾಟ ನಡೆಸುತ್ತಿದ್ದ ನನಗೆ ಪಂಜರದಲ್ಲಿ ಬಂಧಿಸಿದ ಹಕ್ಕಿಯ ಅನುಭವ.

ಒಂದು ಕಡೆ ಮನೆಯ ನೆನಪು ಇನ್ನೊಂದೆಡೆ ರವಿವಾರ ಸಹಪಾಠಿಗಳೊಂದಿಗೆ ಸೇರಿ ಆಟವಾಡುತ್ತಿದ್ದ ನೆನಪು ನನ್ನನ್ನು ಕಾಡಲು ಆರಂಭಿಸುತ್ತಿತ್ತು. ಇದೇ ಕಾರಣಕ್ಕೆ ಒಂದು ದಿನ ಹಾಸ್ಟೆಲ್ ವಾರ್ಡನ್‌ಗೂ ಹೇಳದೇ ಮನೆಗೆ ತೆರಳಿದ್ದೆ. ಇದನ್ನು ಗಮನಿಸಿದ ಅಪ್ಪ ಪುನಃ ನನ್ನನ್ನು ಹಾಸ್ಟೆಲ್‌ಗೆ ಕರೆ ತಂದು ಇನ್ನೊಮ್ಮೆ ಹೀಗೆ ಮಾಡಬೇಡ ಎಂದು ಬುದ್ಧಿವಾದ ಹೇಳಿ ಬಿಟ್ಟು ಹೋದರು. ಈ ಘಟನೆ ಅರಿತ ನಾನು ಅಂದಿನಿಂದ ಶಿಸ್ತಿನ ಸಿಪಾಯಿಯ ರೀತಿ ಹೊಸ ಜೀವನ ಆರಂಭಿಸಿದೆ. ಅಂದಿನ ಪಾಠ ಇಂದು ನನ್ನನ್ನು ಉತ್ತುಂಗಕ್ಕೆ ನಡೆಸಿದೆ.

ಇತ್ತೀಚಿನ ಜಂಜಾಟದ ಜೀವನದಲ್ಲಿ ಎಲ್ಲಾ ಸಂಬಂಧಗಳು ಅವನತಿಯ ಕಡೆಗೆ ಮುಖ ಮಾಡಿ ನಿಂತಿವೆ. ಪ್ರಸ್ತುತ ದಿನಗಳಲ್ಲಿ ಮಕ್ಕಳಿಗೆ ಯಾವ ಆಟಗಳ ಆಸಕ್ತಿಯೂ ಇಲ್ಲ. ಶಾಲೆಯೇ ದೊಡ್ಡ ಪ್ರಪಂಚವಾಗಿದೆ. ಕೊನೆಯದಾಗಿ ತರಗತಿಯಲ್ಲಿ ಎಷ್ಟು ಅಂಕಗಳಿಸಬೇಕು ಎಂಬುದರ ಕಡೆ ಅತಿಯಾದ ಗಮನ ಹೆಚ್ಚಿದೆ. ಶಾಲೆಗಳಲ್ಲಿ ನೀಡುವ ಹೋಮ್‌ವರ್ಕ್, ಶಾಲೆಯಿಂದ ಬಂದ ಮಕ್ಕಳಿಗೆ ಟ್ಯೂಷನ್‌ಗೆ ಕಳುಹಿಸುವ ಪರಿಪಾಠ ಕೇವಲ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರಶಂಸೆಯನ್ನು ಪೋಷಕರು ನೀಡಿ, ಮಕ್ಕಳನ್ನು ಕೀ ಕೊಟ್ಟ ಬೊಂಬೆಯ ರೀತಿಯಲ್ಲಿ ನಡೆಸಿಕೊಳ್ಳುವ ವಿಪರ್ಯಾಸ ಜರುಗುತ್ತಿದೆ. ಈ ಎಲ್ಲಾ ಘಟನೆಗಳನ್ನು ನೋಡಿದರೆ ನನ್ನ ಬಾಲ್ಯವೇ ಅತ್ಯಂತ ಸಂತೋಷದಾಯಕವಾಗಿತ್ತೆಂದು ನನಗನಿಸಿತು.ಬಾಲ್ಯದ ಆ ನೆನಪುಗಳು ಇಂದಿಗೂ ಪ್ರತಿ ಕ್ಷಣ ಸದಾ ಕಾಡುತ್ತಲೇ ಇರುತ್ತವೆ, ಸಮಯ ನಮಗಾಗಿ ಆ ದಿನಗಳನ್ನು ನೀಡಿ ಅದರಿಂದ ನಮ್ಮನ್ನು ಮುಂದಕ್ಕೆ ಕಳುಹಿಸಿದೆ ಆದರೂ ಆಗಿನ ಕೆಲ ಅಂಶಗಳು ನಮ್ಮನ್ನು ಮೂಕ ವಿಸ್ಮಿತರಾಗಿ ಮಾಡಿ, ಕಣ್ಣಲ್ಲಿ ಕಂಬನಿಯನ್ನು ಬರ ಮಾಡುತ್ತವೆ. ಇವನ್ನೆಲ್ಲಾ ನೆನೆದಾಗ ಬಾಲ್ಯ ಮತ್ತೊಮ್ಮೆ ಬರಬಾರದಿತ್ತೇ ಅಂದು ಕೊಳ್ಳುವುದು ಸಹಜ, ಆದರೆ ಅದು ಅಸಾಧ್ಯ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)