varthabharthiನಿಮ್ಮ ಅಂಕಣ

ಉದ್ಯೋಗ ನೇಮಕಾತಿಗೆ ಬೇಕಿದೆ ಹೊಸ ಮಾರ್ಗಸೂಚಿ

ವಾರ್ತಾ ಭಾರತಿ : 29 Sep, 2019
ಡಾ. ಜಗನ್ನಾಥ ಕೆ. ಡಾಂಗೆ ಸಿದ್ದರಾಜು ಕೆಬ್ಬೇಪುರ

ಯಾವುದೇ ಒಬ್ಬ ವ್ಯಕ್ತಿ ಜೀವನವನ್ನು ಸುಗಮವಾಗಿ ಸಾಗಿಸಬೇಕಾದರೆ ಅವನು ಯಾವುದಾದರೊಂದು ವೃತ್ತಿಯಲ್ಲಿ ತೊಡಗಿಕೊಂಡಿರಬೇಕು. ವೃತ್ತಿಯಲ್ಲಿ ತೊಡಗಲು ಆ ವೃತ್ತಿಯ ಕನಿಷ್ಠ ಜ್ಞಾನ, ಕೌಶಲ, ಸಾಮರ್ಥ್ಯಗಳನ್ನು ಹೊಂದಿರಬೇಕಾಗುತ್ತದೆ. ಆ ಜ್ಞಾನ, ಕೌಶಲ, ಸಾಮರ್ಥ್ಯವನ್ನು ಹೊಂದಲು ಶಿಕ್ಷಣ ಪ್ರಮುಖ ಅಸ್ತ್ರವಾಗಿದೆ. ಶಿಕ್ಷಣವನ್ನು ನೀಡುವುದರ ಜೊತೆಗೆ ಉದ್ಯೋಗಾವಕಾಶವನ್ನು ಒದಗಿಸುವುದು ಸರಕಾರದ ಆದ್ಯ ಕರ್ತವ್ಯವಾಗಬೇಕು.


ಇತ್ತೀಚಿನ ವರದಿಗಳ ಪ್ರಕಾರ ಭಾರತದ ಒಟ್ಟು ಜನಸಂಖ್ಯೆಯ ನಾಲ್ಕನೇ ಒಂದು ಭಾಗ ಅಂದರೆ ಸುಮಾರು 38 ಕೋಟಿಗಿಂತಲೂ ಹೆಚ್ಚಿನ ಯುವಜನತೆಯನ್ನು ಹೊಂದುವ ಮೂಲಕ ಪ್ರಪಂಚದಲ್ಲೇ ಅತೀ ಹೆಚ್ಚು ಯುವಶಕ್ತಿಯನ್ನು ಹೊಂದಿದ ದೇಶವಾಗಿದೆ. ಜನಸಂಖ್ಯೆ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದರೂ, ಉದ್ಯೋಗ ಮಾತ್ರ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿರುವುದರಿಂದ ನಿರುದ್ಯೋಗ ಸಮಸ್ಯೆಯು ಎಲ್ಲಾ ಕ್ಷೇತ್ರಗಳಲ್ಲಿಯೂ ಆವರಿಸಿಕೊಂಡಿದ್ದು, ಇದನ್ನು ತಡೆಗಟ್ಟಲು ಸರಕಾರ ಗಳು ಸೂಕ್ತ ಮಾರ್ಗಗಳನ್ನು ಅನುಸರಿಸದರೆ ಮಾತ್ರ ಯುವಜನತೆಗೆ ಉಳಿಗಾಲ, ಇಲ್ಲದಿದ್ದರೆ ಯುವ ಜನತೆಯೇ ದೇಶಕ್ಕೆ ಮಾರಕ ಎನ್ನುವ ಸ್ಥಿತಿಗೆ ಬಂದು ತಲುಪುವುದು. ಈಗ ಯುವಕ ಯುವತಿಯರಿಗೆ ಗುಣಮಟ್ಟದ ಶಿಕ್ಷಣದ ಅವಶ್ಯಕತೆಯಿದ್ದು, ಇದರ ಜೊತೆಗೆ ಸಾಮರ್ಥ್ಯಕ್ಕನುಗುಣವಾಗಿ ಉದ್ಯೋಗ ನೀಡಿ, ಪರಿಣಾಮಕಾರಿಯಾಗಿ ಯುವ ಸಂಪನ್ಮೂಲವನ್ನು ಬಳಸಿಕೊಂಡಾಗ ಮಾತ್ರ ಯುವಜನತೆಯ ಯಶಸ್ಸಿನಲ್ಲಿ ದೇಶದ ಯಶಸ್ಸನ್ನು ನಿರೀಕ್ಷಿಸಲು ಸಾಧ್ಯ. ನೀತಿ ಆಯೋಗವು ಕೂಡ ತನ್ನ ಇತ್ತೀಚಿನ ವರದಿಯಲ್ಲಿ ಸಾಮರ್ಥ್ಯಕ್ಕೆ ತಕ್ಕಂತೆ ಉದ್ಯೋಗ ಸಿಗುತ್ತಿಲ್ಲ ಎನ್ನುವುದನ್ನು ತಿಳಿಸಿದ್ದು ಚಿಂತಿಸಬೇಕಾದ ವಿಷಯವಾಗಿದೆ.

ಯಾವುದೇ ಒಬ್ಬ ವ್ಯಕ್ತಿ ಜೀವನವನ್ನು ಸುಗಮವಾಗಿ ಸಾಗಿಸಬೇಕಾದರೆ ಅವನು ಯಾವುದಾದರೊಂದು ವೃತ್ತಿಯಲ್ಲಿ ತೊಡಗಿಕೊಂಡಿರಬೇಕು. ವೃತ್ತಿಯಲ್ಲಿ ತೊಡಗಲು ಆ ವೃತ್ತಿಯ ಕನಿಷ್ಠ ಜ್ಞಾನ, ಕೌಶಲ, ಸಾಮರ್ಥ್ಯಗಳನ್ನು ಹೊಂದಿರಬೇಕಾಗುತ್ತದೆ. ಆ ಜ್ಞಾನ, ಕೌಶಲ, ಸಾಮರ್ಥ್ಯವನ್ನು ಹೊಂದಲು ಶಿಕ್ಷಣ ಪ್ರಮುಖ ಅಸ್ತ್ರವಾಗಿದೆ. ಶಿಕ್ಷಣವನ್ನು ನೀಡುವುದರ ಜೊತೆಗೆ ಉದ್ಯೋಗಾವಕಾಶವನ್ನು ಒದಗಿಸುವುದು ಸರಕಾರದ ಆದ್ಯ ಕರ್ತವ್ಯವಾಗಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಸರಕಾರಗಳು ತಮ್ಮ ಪಕ್ಷವನ್ನು ಬಲಪಡಿಸಿಕೊಳ್ಳುವುದರಲ್ಲೇ ತೃಪ್ತಿಯನ್ನು ಹೊಂದಿ ಅದೇ ದೊಡ್ಡ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಾ ತಮ್ಮ ಜವಾಬ್ದಾರಿಯನ್ನು ಮರೆತು ಉದ್ಯೋಗ ಸೃಷ್ಟಿಸುವಲ್ಲಿ ನಿರ್ಲಕ್ಷ್ಯವಹಿಸುವುದರಿಂದ ಅದೆಷ್ಟೋ ಯುವಜನರು ಶಿಕ್ಷಣ ಪಡೆದು ಉನ್ನತ ಶ್ರೇಣಿಯಲ್ಲಿ ಪಾಸಾಗಿ ಸಾಮರ್ಥ್ಯಗಳನ್ನು ಹೊಂದಿದ್ದರೂ ಉದ್ಯೋಗ ದೊರೆಯದೆ, ತಮ್ಮ ಶಕ್ತಿ ಸಾಮರ್ಥ್ಯಗಳನ್ನು ಸೂಕ್ತವಾಗಿ ಬಳಸಿಕೊಳ್ಳದೆ ಕಾಲಹರಣ ಮಾಡುತ್ತಾ, ಪೋಷಕರಿಗೂ ಕೂಡ ಹೊರೆಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಶಿಕ್ಷಣವೊಂದು ಹೂಡಿಕೆಯಾಗಿದ್ದು, ಶಿಕ್ಷಣದ ಮುಖಾಂತರ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಿ ಯುವಶಕ್ತಿಯನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡುವುದರ ಬದಲು ಸರಕಾರಗಳು ನಿರುದ್ಯೋಗಿ ಗಳನ್ನಾಗಿ ಮಾಡಿರುವುದು ದುರಂತವೇ ಸರಿ.

ಇದಕ್ಕೆ ಬಲವೆಂಬಂತೆ ಇತ್ತೀಚೆಗೆ ಬಿಡುಗಡೆ ಮಾಡಿದ ನ್ಯಾಷನಲ್ ಸ್ಯಾಂಪಲ್ ಸರ್ವೇ ಆರ್ಗನೈಸೆೇಶನ್‌ನ ಅಂಕಿ ಅಂಶಗಳ ಪ್ರಕಾರ ಕಳೆದ 45 ವರ್ಷಗಳಲ್ಲೇ ಇರದ ನಿರುದ್ಯೋಗ ಪ್ರಮಾಣ 2017-18ರಲ್ಲಿ ಶೇ. 6.1 ರಷ್ಟು (ಗ್ರಾಮೀಣ ಪ್ರದೇಶ ಶೇ. 5.3 ಮತ್ತು ನಗರ ಪ್ರದೇಶ ಶೇ. 7.8) ಹೆಚ್ಚಿರುವುದು ಕಂಡುಬಂದಿದೆ. ಮಾಧ್ಯಮ ವರದಿಗಳ ಪ್ರಕಾರ ರಾಷ್ಟ್ರ ಮತ್ತು ರಾಜ್ಯದಲ್ಲಿ ಒಟ್ಟು 24 ಲಕ್ಷ ಹುದ್ದೆಗಳು ಖಾಲಿ ಇರುವುದು ಕಂಡುಬಂದಿದೆ. ಅದರಲ್ಲೂ ಅತೀ ಹೆಚ್ಚಿನ ಹುದ್ದೆಗಳಿರುವುದು ಪ್ರಾಥಮಿಕ ಶಿಕ್ಷಣ (9 ಲಕ್ಷ) ಮತ್ತು ಪ್ರೌಢಶಿಕ್ಷಣ (1.1 ಲಕ್ಷ) ಇವೆರಡೂ ಸೇರಿ ಒಟ್ಟು 10.1 ಲಕ್ಷ ಹುದ್ದೆಗಳಿರುವುದು ಕಂಡುಬಂದಿದೆ. ನಂತರ ಪೊಲೀಸ್, ರೈಲ್ವೆ, ಅಂಗನವಾಡಿ ಮತ್ತು ಆರೋಗ್ಯ ಇಲಾಖೆಗಳಲ್ಲಿ. ಆದರೂ ಕೂಡ ಯಾವುದೇ ಕ್ರಮಕೈಗೊಳ್ಳದಿರುವುದು ಸರಕಾರದ, ರಾಜಕೀಯ ನಾಯಕರ ಅಸಹಾಯಕತೆಯನ್ನು ಎತ್ತಿ ತೋರಿಸುತ್ತದೆ. ಇಂಡಿಯನ್ ಲೇಬರ್ ಆರ್ಗನೈಷೇಶನ್ (ಐಎಲ್‌ಒ) ಪ್ರಕಾರ 2017ರಲ್ಲಿ 1.83 ಕೋಟಿ ಯಷ್ಟು ಹುದ್ದೆಗಳು ಖಾಲಿಯಿದ್ದು, 2019ರಲ್ಲಿ ಅದು 1.9 ಕೋಟಿಯಷ್ಟಾಗಿದ್ದು, ಪ್ರತೀ ವರ್ಷವೂ ಶೇ. 1ರಷ್ಟು ಹುದ್ದೆಗಳು ಕಡಿತಗೊಳ್ಳುತ್ತಿರುವುದು ಅಚ್ಚರಿಯ ವಿಷಯ. 2015ಕ್ಕಿಂತ ಹಿಂದೆ ಶೇ. 2.3 ಇದ್ದ ನಿರುದ್ಯೋಗದ ಪ್ರಮಾಣ, 2015ರಲ್ಲಿ ಶೇ. 5ಕ್ಕೆ ಏರಿರುವುದು ಯುವಜನರ ಜೀವನಕ್ಕೆ ಬರೆ ಎಳೆದಂತಾಗಿದೆ. ಮುಂಬೈನಲ್ಲಿ 1,137 ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳಿಗೆ ಅರ್ಜಿಯನ್ನು ಕರೆದಿದ್ದು, ಅದಕ್ಕೆ 2 ಲಕ್ಷ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿದ್ದಾರೆ. ಅಚ್ಚರಿಯೆಂದರೆ ಆ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದವರಲ್ಲಿ ಎಂಬಿಎ(167), ಡಾಕ್ಟರ್(3), ಇಂಜಿನಿಯರ್(423), ಬಿ.ಇಡಿ(28), ಸ್ನಾತಕೋತ್ತರ ಪದವಿ(543) ಮತ್ತು ಬಿ.ಎ. ಮಾಸ್‌ಮೀಡಿಯಾ (25) ಪದವಿ ಪಡೆದ ಅಭ್ಯರ್ಥಿಗಳಿದ್ದು ದನ್ನು ಅವಲೋಕಿಸಿದರೆ ನಿರುದ್ಯೋಗ ಸಮಸ್ಯೆಯು ಎಷ್ಟರ ಮಟ್ಟಿಗೆ ಆವರಿಸಿದೆ ಎಂಬುದನ್ನು ಊಹಿಸ ಬಹುದು. ಮಾಧ್ಯಮ ವರದಿಯೊಂದರ ಪ್ರಕಾರ 2025ರ ವೇಳೆಗೆ ಪ್ರಪಂಚದಾದ್ಯಂತ 25 ಕೋಟಿ ಜನರು ನಿರುದ್ಯೋಗಿಗಳಾಗಲಿದ್ದಾರೆ ಎನ್ನುವ ಮಾಹಿತಿ ಬಹಿರಂಗಗೊಡಿದ್ದು ಇದರಿಂದಾಗುವ ಪರಿಣಾಮಗಳನ್ನು ಎದುರಿಸಲು ಸಜ್ಜಾಗುವುದರ ಜೊತೆಗೆ ಉದ್ಯೋಗವನ್ನು ಸೃಷ್ಟಿಸುವುದರ ಕಡೆ ಗಮನ ಹರಿಸಬೇಕಿದೆ.

ನಮ್ಮ ದೇಶದ ಸದ್ಯದ ಪರಿಸ್ಥಿತಿ ಹೇಗಿದೆಯೆಂದರೆ ನ್ಯಾಯಾಲಯಗಳಿವೆ ನ್ಯಾಯಾಧೀಶರಿಲ್ಲ, ಆಸ್ಪತ್ರೆಗಳಿವೆ ವೈದ್ಯರಿಲ್ಲ, ಶಾಲೆಗಳಿವೆ ಶಿಕ್ಷಕರಿಲ್ಲ, ಉದ್ಯೋಗಗಳಿವೆ ಹುದ್ದೆಗಳನ್ನು ನೇಮಕ ಮಾಡಿಕೊಳ್ಳುವುದಿಲ್ಲ, ಮಂತ್ರಿ ಯಾಗಬೇಕು ಆದರೆ ಸಾಮಾನ್ಯ ಜನರ ದೀನದಲಿತರ, ಹಿಂದುಳಿದವರ ಕಷ್ಟ ನಷ್ಟಗಳನ್ನು ಪರಿಹರಿಸುವುದಕ್ಕಲ್ಲ, ಸಂಪನ್ಮೂಲಗಳಿವೆ ಆದರೆ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವುದಿಲ್ಲ ಎಂಬಂತಾಗಿದೆ. ಇದಕ್ಕೆ ಬಲವೆಂಬಂತೆ ಬಹುತೇಕ ವಿಶ್ವವಿದ್ಯಾನಿಲಯಗಳೂ ಕೂಡ ಖಾಲಿಯಾದ ಹುದ್ದೆಗಳನ್ನು ನೇಮಕ ಮಾಡಿ ಕೊಳ್ಳುತ್ತಿಲ್ಲ. ಆದುದರಿಂದ ವಿಶ್ವವಿದ್ಯಾನಿಲಯಕ್ಕೆ ನೀಡುವ ಅನುದಾನವನ್ನು ನಿಲ್ಲಿಸಲಾಗುವುದು ಎಂದು ಯುಜಿಸಿಯು ತನ್ನ ಆದೇಶದಲ್ಲಿ ತಿಳಿಸಿರುವುದನ್ನು ಗಮನಿಸಬಹುದಾಗಿದೆ.
ಪ್ರತಿಯೊಂದು ಕ್ಷೇತ್ರಗಳಲ್ಲೂ, ಚಟುವಟಿಕೆಗಳಲ್ಲೂ, ರಾಜಕೀಯದ ಲೇಪನ ಅಂಟಿರುವುದು, ಉದ್ಯೋಗಗಳಲ್ಲಿಯೂ ಕೂಡ ಹಣಬಲ, ಜಾತಿಬಲ, ರಾಜಕೀಯ ಬಲವಿದ್ದವರು ಸಾಮರ್ಥ್ಯವಿಲ್ಲದಿದ್ದರೂ ಹುದ್ದೆಗೆ ಆಯ್ಕೆಯಾಗುತ್ತಿರುವುದು ಬೇಸರದ ಸಂಗತಿ. ಇದಕ್ಕೆ ಮನನೊಂದು ಯುವಕರು ಆತ್ಮಹತ್ಯೆಗೆ ಶರಣಾಗುತ್ತಿರುವುದನ್ನು ಕಾಣಬಹುದು. ಇತ್ತೀಚಿನ ಯುವಕರಲ್ಲಿ ಹೋರಾಟದ ಮನೋಭಾವನೆಯು ಕಡಿಮೆಯಾಗುತ್ತಿದ್ದು, ಯುವಮನಸ್ಸುಗಳನ್ನು ಉತ್ತಮ ದಾರಿಗೆ ತರಬೇಕಿರುವುದು ಶಿಕ್ಷಣ ಮತ್ತು ಸರಕಾರದ ಆದ್ಯ ಕರ್ತವ್ಯವಾಗಬೇಕಿದೆ.

ಸರಕಾರಗಳು ಉದ್ಯೋಗಕ್ಕೆ ಅಧಿಸೂಚನೆ ಹೊರಡಿಸಿ, ಪರೀಕ್ಷೆ ನಡೆಸಿ, ಕರ್ತವ್ಯಕ್ಕೆ ನೇಮಕ ಮಾಡಿಕೊಳ್ಳುವ ಸಮಯವನ್ನು ನೋಡಿದರೆ ಬೆಚ್ಚಿ ಬೆರಗಾಗುವಂತಿದೆ. ಏಕೆಂದರೆ ಇಡೀ ಪ್ರಕ್ರಿಯೆ ಮುಗಿಯುವವರೆಗೆ 20 ವರ್ಷಗಳಾಗಿರುವ ನಿದರ್ಶನವುಂಟು, ಇಷ್ಟರಲ್ಲಾಗಲೇ ಅಭ್ಯರ್ಥಿಗಳಿಗೆ ವಯೋಮಿತಿ ಮೀರಿ, ಕೊನೆಗೆ ನಿರುದ್ಯೋಗಿಗಳಾಗಿ ಸಮಾಜಕ್ಕೆ ಕಂಟಕವಾಗಿ ಪರಿಣಮಿಸಿ ದೇಶದ ಅಸ್ಥಿರತೆಗೆ ಕಾರಣವಾಗುವರು. ದೇಶದಲ್ಲಿ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಲು ನಿರಂತರವಾಗಿ ಉದ್ಯೋಗ ನೀಡುವಂತಹ ಈ ಕೆಳಕಂಡ ಪ್ರಮುಖ ಮಾರ್ಗ/ತಂತ್ರಗಳನ್ನು ರೂಪಿಸಿದರೆ ಉತ್ತಮ.
* ಪ್ರತೀ ವರ್ಷವೂ ಬಜೆಟ್ ಮಂಡಿಸುವಾಗಲೇ ರಾಷ್ಟ್ರ ಮತ್ತು ರಾಜ್ಯದಲ್ಲಿ ಪ್ರತೀ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು ಹುದ್ದೆಗಳ ಸಂಖ್ಯೆ, ಹಿಂದಿನ ವರ್ಷದಲ್ಲಿ ನೇಮಕ ಮಾಡಿಕೊಂಡ ಹುದ್ದೆಗಳು, ನೇಮಕದ ಪ್ರಕ್ರಿಯೆಯಲ್ಲಿರುವ ಹುದ್ದೆಗಳು, ಮುಂದಿನ ವರ್ಷ ನೇಮಕ ಮಾಡಿಕೊಳ್ಳುವ ಹುದ್ದೆಗಳನ್ನು ಬಿಡುಗಡೆಗೊಳಿಸಬೇಕು. ಅದಕ್ಕೆ ಹಂಚಿಕೆಯಾಗಿರುವ ಮೊತ್ತವನ್ನು, ಕಳೆದ ಸಾಲಿನಲ್ಲಿ ಉದ್ಯೋಗಕ್ಕೆ ವ್ಯಯಿಸಿದ ಹಣವನ್ನು ನಿಖರವಾಗಿ ದಾಖಲೆಗಳೊಂದಿಗೆ ಜನರ ಮುಂದಿಡಬೇಕು.
*ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಪರೀಕ್ಷೆಗಳನ್ನು ನಡೆಸಲು ಹಲವಾರು ಆಯೋಗಗಳಿದ್ದು, ಇದರ ಬದಲು ಕೇಂದ್ರೀಯ ಮಟ್ಟದಲ್ಲಿ ಒಂದೇ ಸಂಸ್ಥೆಯನ್ನು ತೆರೆದು, ಎಲ್ಲಾ ರಾಜ್ಯಭಾಷೆಗಳಿಗೂ ಪ್ರಾಮುಖ್ಯತೆ ನೀಡಿ ರಾಜ್ಯಭಾಷೆಗಳಲ್ಲಿಯೇ ಪರೀಕ್ಷೆ ಯನ್ನು ನಡೆಸುವ ಸ್ವತಂತ್ರ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ, ಪಾರದರ್ಶಕತೆಯ ಜೊತೆಗೆ ರಾಜಕೀಯ ಹಸ್ತಕ್ಷೇಪವಿರದ ಹಾಗೆ ನೋಡಿಕೊಳ್ಳುವುದು.
* ಪ್ರತೀ ವರ್ಷವೂ ಕಡ್ಡಾಯವಾಗಿ ಬಜೆಟ್‌ನ ನಂತರ ಒಂದು ತಿಂಗಳೊಳಗಾಗಿ ಅಧಿಸೂಚನೆಯನ್ನು ಹೊರಡಿಸಿ, ಮಾರ್ಚ್‌ನಲ್ಲಿ ಅರ್ಜಿಸಲ್ಲಿಸಿ, ಜೂನ್‌ನಲ್ಲಿ ಪರೀಕ್ಷೆಯನ್ನು ನಡೆಸಿ, ಅಕ್ಟೋಬರ್‌ನಲ್ಲಿ ಫಲಿತಾಂಶವನ್ನು ನೀಡಿ ಸಂದರ್ಶನವಿರುವ ಹುದ್ದೆಗಳಿಗೆ ನವೆಂಬರ್‌ನಲ್ಲಿ ಸಂದರ್ಶನ ಏರ್ಪಡಿಸಿ ಡಿಸೆಂಬರ್‌ನಲ್ಲಿ ಅಂತಿಮ ಪಟ್ಟಿಯನ್ನು ಬಿಡುಗಡೆಗೊಳಿಸಿ, ಜನವರಿಯಲ್ಲಿಯೇ ಕರ್ತವ್ಯಕ್ಕೆ ಹಾಜರಾಗುವಂತೆ ನೋಡಿಕೊಳ್ಳಬೇಕು. ಇದರಿಂದ ಹೊಸವರ್ಷದಲ್ಲಿ ಹೊಸತನದಿಂದ ಯುವಕರು, ಉದ್ಯೋಗಿಗಳು ಹೊಸ ಜೀವನದತ್ತ ಸಾಗುವುದರಿಂದ ಕುಟುಂಬದಲ್ಲಿ ಉತ್ಸಾಹ ಇಮ್ಮಡಿಯಾಗುತ್ತದೆ. ಒಂದು ಕುಟುಂಬದಲ್ಲಿ ಒಬ್ಬರಿಗಾದರೂ ಉದ್ಯೋಗ ದೊರೆತರೆ ಕುಟುಂಬಕ್ಕೆ ಭದ್ರತೆಯನ್ನು ನೀಡಿದಂತಾಗಿ, ಸಮಾಜದಲ್ಲಿ ಸಾಮರಸ್ಯವನ್ನು ಉಂಟುಮಾಡಬಹುದು.
* ಇತ್ತೀಚಿನ ದಿನಗಳಲ್ಲಿ ನಕಲಿ ಉದ್ಯೋಗ ಮಾಹಿತಿಯನ್ನು ಅಂತರ್ಜಾಲದಲ್ಲಿ ಹರಡುತ್ತಿರುವುದರಿಂದ ನೈಜ ಮಾಹಿತಿ ಹುಡುಕಲು ಸಮಯದ ವ್ಯರ್ಥ್ಯವಾಗುವುದರ ಸಲುವಾಗಿ ರಾಷ್ಟ್ರ ಮತ್ತು ರಾಜ್ಯಮಟ್ಟದ ಉದ್ಯೋಗ ಮಾಹಿತಿಯನ್ನು ನೀಡಲು ಒಂದು ಉತ್ತಮವಾದ ವೆಬ್‌ಸೈಟ್ ತೆರೆದು, ಸಂಪೂರ್ಣ ಮಾಹಿತಿಯೊಂದಿಗೆ ಉತ್ತಮ ಸರ್ವರ್‌ನೊಂದಿಗೆ ಚಾಲ್ತಿಯಲ್ಲಿಡಬೇಕು.
* ಮಾಧ್ಯಮದವರು ಕೂಡ ಕಡ್ಡಾಯವಾಗಿ ಉದ್ಯೋಗಕ್ಕೆ ಸಂಬಂಧಿಸಿದ ಚರ್ಚೆಯನ್ನು ಏರ್ಪಡಿಸಿ, ಯಾವ ಹುದ್ದೆಗೆ ಏನು ಕನಿಷ್ಠ ಅರ್ಹತೆ, ವೇತನ, ಪಠ್ಯಕ್ರಮ, ಅರ್ಜಿ ಸಲ್ಲಿಸುವ ಪ್ರಾರಂಭ ಮತ್ತು ಕೊನೆಯ ದಿನಾಂಕ, ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಅರ್ಜಿಯ ತಿರಸ್ಕಾರ, ಪ್ರಶ್ನೆಪತ್ರಿಕೆಯ ರಚನೆಯ ವಿನ್ಯಾಸ, ಯಾವ ವಿಭಾಗಕ್ಕೆ ಎಷ್ಟು ಅಂಕ, ಹಿಂದಿನ ಪ್ರಶ್ನೆಪತ್ರಿಕೆಗಳ ವಿಶ್ಲೇಷಣೆ, ಪ್ರವೇಶ ಪತ್ರ ದೊರಕುವ ದಿನಾಂಕ, ಕೀ ಉತ್ತರಗಳ ಮತ್ತು ಫಲಿತಾಂಶ ಬಿಡುಗಡೆಯ ಸಮಯ, ಸಂದರ್ಶನದ ದಿನಾಂಕ ಮತ್ತು ದಾಖಲೆಗಳ ಸಲ್ಲಿಸುವಿಕೆಯ ಬಗ್ಗೆ ಮಾಹಿತಿ ಮುಂತಾದ ಸಂಪೂರ್ಣ ವಿವರವನ್ನು ಕಾಲಕಾಲಕ್ಕೆ ಅನುಗುಣವಾಗಿ ಪ್ರಸ್ತುತಪಡಿಸುವುದು.
* ಸಂಸತ್, ವಿಧಾನಸಭೆ, ವಿಧಾನಪರಿಷತ್ತು ಮತ್ತು ರಾಜ್ಯಸಭೆಯಲ್ಲಿ ಉದ್ಯೋಗಕ್ಕೆ ಸಂಬಂಧಿಸಿ ದಂತೆ ಸಚಿವರ ಅವಧಿಯಲ್ಲಿ ನೇಮಕವಾದ ಹುದ್ದೆಗಳ ನಿಖರ ಮಾಹಿತಿಯನ್ನು ಸಂಗ್ರಹಿಸುವುದರ ಮೂಲಕ ಚರ್ಚಿಸಿ, ಅವರ ಕಾರ್ಯವೈಖರಿಯನ್ನು ಪರೀಕ್ಷಿಸುವುದರ ಜೊತೆಗೆ ಜನರ ಅಥವಾ ಯುವಶಕ್ತಿಯ ಬಗ್ಗೆ ಅವರಿಗಿರುವ ಕಾಳಜಿಯನ್ನು ಮನಗಾಣಬಹುದು.
* ಹಾಗೆಯೇ ವಿರೋಧ ಪಕ್ಷದ ನಾಯಕರು, ಎಲ್ಲಾ ಸದಸ್ಯರು ಕೂಡ ಉದ್ಯೋಗಕ್ಕೆ, ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ ಎದುರಾಗಿರುವ ಸಮಸ್ಯೆಗಳು, ವಿಳಂಬದ ಬಗ್ಗೆ ಮಾಹಿತಿ ಪಡೆದು, ಯುವಶಕ್ತಿಗೆ ಅನುಗುಣವಾಗಿ ಬೇಡಿಕೆಯನ್ನಿಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವಂತೆ ನಿಯಮವನ್ನು ರೂಪಿಸಬೇಕು.
ಯಾವುದೇ ಸರಕಾರಗಳು ಆಡಳಿತ ನಡೆಸಿದರೂ ಕೂಡ ಉದ್ಯೋಗಕ್ಕೆ ಹೆಚ್ಚು ಒತ್ತು ನೀಡಬೇಕು. ಏಕೆಂದರೆ ಯುವಶಕ್ತಿಯನ್ನು ಸೂಕ್ತವಾಗಿ, ಸಮರ್ಪಕವಾಗಿ ಬಳಸಿಕೊಂಡಾಗ ಮಾತ್ರ ದೇಶದ ಅಭಿವೃದ್ಧಿಯಾಗಲು ಸಾಧ್ಯ. ನಿರುದ್ಯೋಗ ಸಮಸ್ಯೆಯಿಂದ ಕಳ್ಳತನ, ಆತ್ಮಹತ್ಯೆ, ಭ್ರಷ್ಟಾಚಾರ, ಕೊಲೆ-ಸುಲಿಗೆ, ಹಣಕ್ಕಾಗಿ ಅಪಹರಿಸುವಿಕೆ ಮತ್ತು ಬಡತನ ಮುಂತಾದ ಸಮಾಜದ ದುಷ್ಟಾಚಾರಗಳು ಹೆಚ್ಚಾಗುತ್ತಲೇ ಇವೆ. ಇವುಗಳು ಹೆಚ್ಚಾದರೆ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ. ನಿರುದ್ಯೋಗ ಸಮಸ್ಯೆಯು ಬರೀ ಸಮಸ್ಯೆಯಲ್ಲ ಇದರಲ್ಲಿ ಜನರ ಜೀವನ ಅಡಗಿರುವುದರ ಜೊತೆಗೆ ದೇಶದ ಏಳಿಗೆ ಅಡಗಿದೆ ಎನ್ನುವುದು ನೆನಪಿರಲಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)