varthabharthi


ಸಿನಿಮಾ

ಅಮಿತಾಭ್ ಬಚ್ಚನ್ ಎಂಬ ದೈತ್ಯ ಸಾಧಕ!

ವಾರ್ತಾ ಭಾರತಿ : 29 Sep, 2019
ಮುಸಾಫಿರ್

ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ಕೆಲವು ಅಪರೂಪದ ಪಾತ್ರಗಳನ್ನು ಅವರು ನಿರ್ವಹಿಸಿದರು. ಅದೂ ಇಳಿವಯಸ್ಸಿನಲ್ಲಿ. ಅವುಗಳು ಅವರೊಳಗಿನ ಕಲಾವಿದನಿಗೆ ಸವಾಲಾಗುವ ಪಾತ್ರಗಳೂ ಹೌದು. ಹೊಸ ತಲೆಮಾರು ಅಮಿತಾಭ್ ಬಚ್ಚನ್ ಅವರನ್ನು ಈ ಚಿತ್ರಗಳ ಮೂಲಕವೇ ಗುರುತಿಸುತ್ತಿರುವುದು ಎನ್ನುವುದನ್ನು ನಾವು ಗಮನಿಸಬೇಕಾಗಿದೆ. ಒಟ್ಟಿನಲ್ಲಿ ಬಾಲಿವುಡ್‌ನಲ್ಲಿ ಅಸಾಮಾನ್ಯವಾದುದನ್ನು ಸಾಧಿಸಿದ ಈ ಸ್ಟಾರ್‌ಗೆ ಫಾಲ್ಕೆ ಪ್ರಶಸ್ತಿ ಅರ್ಹವಾಗಿಯೇ ದೊರಕಿದೆ.

‘ಸೂಪರ್ ಸ್ಟಾರ್’ ಆಗಿ ಮೆರೆದವನಿಗೆ ತಮ್ಮ ಬದುಕಿನ ಸಂಜೆಯ ಕಾಲದಲ್ಲಿ ಆ ಬಿರುದೇ ಶಿಲುಬೆಯಾಗಿ ಪರಿವರ್ತನೆಯಾಗುವುದಿದೆ. ಈ ಹಿಂದೆ ನಿರ್ವಹಿಸಿದ ಸ್ಟಾರ್ ಪಾತ್ರಗಳಿಗೆ ಸೀಮಿತವಾದ ನಟರು, ಇಳಿಗಾಲದಲ್ಲಿ ಸಣ್ಣ ಪುಟ್ಟ ಪೋಷಕ ಪಾತ್ರಗಳನ್ನು ಮಾಡುವುದು ತೀರಾ ಇರಿಸುಮುರಿಸಿನ ವಿಷಯ. ಕೆಲವೊಮ್ಮೆ, ಆ ಸೂಪರ್ ಸ್ಟಾರ್ ಸ್ಥಾನದಿಂದ ಅನಿವಾರ್ಯವಾಗಿ ಕೆಳಗಿಳಿದು ವೃತ್ತಿಬದುಕನ್ನು ಉಳಿಸಿಕೊಳ್ಳಬೇಕಾಗುತ್ತದೆ.

ಆದರೆ ಅಮಿತಾಭ್ ಈ ಬಿಕ್ಕಟ್ಟನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ತನ್ನ ಯೌವನವನ್ನು ಸೂಪರ್ ಸ್ಟಾರ್ ಆಗಿ ಮೆರೆದ ಈ ನಟ, ಉಳಿದ ಬದುಕನ್ನು ಅತ್ಯುತ್ತಮ ಕಲಾವಿದನಾಗಿ ಗುರುತಿಸಿಕೊಳ್ಳಲು ಮೀಸಲಿಟ್ಟರು. ಬದುಕಿನ ಏರು ಇಳಿತಗಳಲ್ಲಿ ಬಹಳಷ್ಟು ಕಂಡುಂಡ ಅಮಿತಾಭ್ ತನ್ನ ಇಳಿವಯಸ್ಸಿನಲ್ಲೂ ಸೂಪರ್ ಸ್ಟಾರ್ ಆಗಿಯೇ ಉಳಿದಿರುವುದು ಅಚ್ಚರಿಯೇ ಸರಿ. ಭಾರತೀಯ ಚಿತ್ರರಂಗದಲ್ಲಿ ಮೇರು ಸಾಧನೆ ಮಾಡಿದವರಿಗೆ ನೀಡಲಾಗುವ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಈ ವರ್ಷ ಅಮಿತಾಭ್ ಬಚ್ಚನ್‌ರನ್ನು ಆಯ್ಕೆ ಮಾಡಿರುವುದು ಅತ್ಯಂತ ಸೂಕ್ತವಾಗಿದೆ. ಈ ಮೇರುನಟನಿಗೆ ಪುರಸ್ಕಾರ ತುಸು ವಿಳಂಬ ವಾಗಿ ಸಂದಿದೆ ಎನ್ನಲಡ್ಡಿಯಿಲ್ಲ. ಬಚ್ಚನ್ ಹಾಗೂ ಅವರ ಸಿನೆಮಾ ವೃತ್ತಿಜೀವನ, ಮುಂದೆ ಕೆಲವು ವಿಷಯಗಳಲ್ಲಿ ಅವರು ತಳೆದ ನಿಲುವುಗಳಲ್ಲಿ ಬಹಳಷ್ಟು ತಪ್ಪುಗಳಿರಬಹುದು.

ಆದರೆ ಅವರೊಬ್ಬ ಭಾರತೀಯ ಚಿತ್ರರಂಗ ಕಂಡ ದೈತ್ಯಪ್ರತಿಭೆಯ ಅದ್ಭುತ ನಟ ಎಂಬುದನ್ನು ನಿರಾಕರಿಸಲಾಗದು. ಬಹುತೇಕ ಸಂದರ್ಭದಲ್ಲಿ ನಿವೃತ್ತರಿಗೆ ಫಾಲ್ಕೆ ಪ್ರಶಸ್ತಿ ಸಂದಿದೆ. ಆದರೆ ಬಚ್ಚನ್ ಇನ್ನೂ ಸಿನೆಮಾ ರಂಗದಲ್ಲಿ ಸಕ್ರಿಯ ರಾಗಿದ್ದಾರೆ. ನಟನೆ, ಟಿವಿ ಕಾರ್ಯಕ್ರಮ ನಿರೂಪಣೆ, ಸಾಮಾಜಿಕ ಮಾಧ್ಯಮದಲ್ಲಿ ಏನಾದರೂ ವಿಷಯದ ಬಗ್ಗೆ ಬರೆಯುತ್ತಾ, ಫೋಟೊ ಅಪ್‌ಲೋಡ್ ಮಾಡುತ್ತಾ ಸದಾ ಬ್ಯುಸಿಯಾಗಿರುವ ನಟ ಇವರು. ಇವರ ಅಭಿಮಾನಿಗಳು ಇನ್ನೂ ಇವರನ್ನು ಆರಾಧಿಸುತ್ತಿದ್ದರೆ, ಎಳೆಯ ನಿರ್ದೇಶಕರೂ ಇವರನ್ನು ತಮ್ಮ ಸಿನೆಮಾದಲ್ಲಿ ಅಭಿನಯಿಸಲು ಆದ್ಯತೆ ನೀಡುತ್ತಿದ್ದಾರೆ. ತಾವು ಯಾರ ಸಿನೆಮಾವನ್ನು ನೋಡುತ್ತಾ ಬೆಳೆದಿದ್ದೇವೆಯೋ ಅಂತಹ ಮಹಾನ್ ವ್ಯಕ್ತಿಗೆ ನಿರ್ದೇಶನ ಮಾಡುತ್ತಿರುವ ಬಗ್ಗೆ ಬಹುಶಃ ಈ ಯುವ ನಿರ್ದೇಶಕರು ಥ್ರಿಲ್ ಅನುಭವಿಸುತ್ತಿರಬಹುದು. ‘‘ನಾನೊಬ್ಬ ನಿಯಮಿತ ಕೆಲಸಗಾರ. ಬೆಳಗ್ಗೆ ಎದ್ದ ಬಳಿಕ ಕೆಲಸಕ್ಕೆ ಹೋಗುತ್ತಿದ್ದೇನೆ. ಈಗಲೂ ಉದ್ಯೋಗ ಮಾಡುತ್ತಿರುವ ಬಗ್ಗೆ ಖುಷಿಯಾಗುತ್ತಿದೆ’’ ಎಂದು ಅಮಿತಾಭ್ ಆಗಾಗ್ಗೆ ಹೇಳುತ್ತಿರುತ್ತಾರೆ. ಈ ನಮ್ರತೆಯ ಹಿಂದೆ ಬದುಕಿನ ಅಪಾರ ಅನುಭವ ಮತ್ತು ವಿವೇಕವಿದೆ.

ಕಳೆದ ಹಲವು ವರ್ಷಗಳಿಂದ ಬಚ್ಚನ್ ನಿರಂತರ ತನ್ನನ್ನೇ ಮರುಶೋಧಿಸಿಕೊಂಡವರು, ಅಲೆಗಳೊಂದಿಗೆ ಮುಂದೆ ಸಾಗುತ್ತಾ ಬಂದವರು ಹಾಗೂ ದೊರೆತ ಅವಕಾಶವನ್ನು ಬಳಸಿಕೊಂಡು ಇತರರು ಪ್ರತಿಕ್ರಿಯಿಸುವ ಮೊದಲೇ ಸಿನೆಮಾ ರಂಗದ ‘ಟ್ರೆಂಡ್’ ಅನ್ನು ಅರಿತು ಕೈವಶಮಾಡಿಕೊಂಡವರು. ಟಿವಿ ರಂಗದ ಅಪಾರ ಸಾಧ್ಯತೆಯ ಬಗ್ಗೆ ಸಿನೆಮಾ ರಂಗದ ಇತರ ಮಹಾನ್ ತಾರೆಯರು ಅರಿತುಕೊಂಡು ಎಚ್ಚೆತ್ತುಕೊಳ್ಳುವುದಕ್ಕಿಂತ ಬಹಳಷ್ಟು ಮೊದಲೇ ಬಚ್ಚನ್ ಆ ಕ್ಷೇತ್ರ ಪ್ರವೇಶಿಸಿದ್ದರು. ಕೌನ್ ಬನೇಗಾ ಕರೋಡ್‌ಪತಿ ಎಂಬ ಪ್ರಶ್ನೋತ್ತರ ಕಾರ್ಯಕ್ರಮದ ಮೂಲಕ ಹೊಸ ತಲೆಮಾರಿನ ಜನತೆಗೆ ತನ್ನನ್ನು ಪರಿಚಯಿಸಿಕೊಂಡವರು. ‘ಆ್ಯಂಗ್ರಿ ಯಂಗ್ ಮ್ಯಾನ್’ ಇಮೇಜ್ ಹೊಂದಿದ್ದ ದಿನದಿಂದ ಈಗಿನ ತಂದೆ ಅಥವಾ ಅಜ್ಜನ ಪಾತ್ರ ವಹಿಸುವ ದಿನದವರೆಗೆ ಅಮಿತಾಭ್ ಸಿನೆಮಾ ರಂಗದಲ್ಲಿ ಬಹುದೂರ ಪ್ರಯಾಣಿಸಿದ್ದಾರೆ. ವ್ಯವಸ್ಥೆಯ ವಿರುದ್ಧ ಹೋರಾಡುವ ದಿನದಿಂದ ಈಗ ಅವರೇ ವ್ಯವಸ್ಥೆಯಾಗಿ ಮಾರ್ಪಟ್ಟಿದ್ದಾರೆ. (ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಗುಜರಾತ್ ಪ್ರವಾಸೋದ್ಯಮದ ಬ್ರಾಂಡ್ ಅಂಬಾಸೆಡರ್ ಆಗಿ ಕಾರ್ಯ ನಿರ್ವಹಿಸಿರುವುದು ಅವರ ಅಧಿಕಾರಿ ವರ್ಗದ ಪರ ನಿಲುವನ್ನು ಸೂಚಿಸುತ್ತದೆ).

ಬಚ್ಚನ್ ಅವರ ಸಿನೆಮಾ ಜೀವನ: ಸಾತ್ ಹಿಂದೂಸ್ತಾನಿ ಯಿಂದ (ಸರಿಯಾಗಿ 50 ವರ್ಷದ ಹಿಂದೆ) ಲೆಕ್ಕ ಹಾಕಿದರೆ ಅಮಿತಾಭ್‌ರನ್ನು ರೂಪಿಸಿದ ಅಥವಾ ಅಮಿತಾಭ್ ರೂಪಿಸಿದ ಕೆಲವು ಸಿನೆಮಾಗಳಿವೆ. ದೀವಾರ್, ಜಂಝೀರ್, ಶೋಲೆ, ಅಮರ್ ಅಕ್ಬರ್ ಅಂತೋನಿ, ಆನಂದ್ ಇವೆಲ್ಲಾ ಅತ್ಯುತ್ತಮ ಸಿನೆಮಾಗಳಾಗಿದ್ದು ಈಗಲೂ ಜನತೆಗೆ ಮನೋರಂಜನೆ ನೀಡುತ್ತದೆ ಆದರೆ ಅಮಿತಾಭ್ ಯಾವತ್ತೂ ಪರ್ಯಾಯ ಸಿನೆಮಾಗಳಲ್ಲಿ ಪಾತ್ರ ವಹಿಸಲಿಲ್ಲ. ಇದು ಅವರ ವೈಯಕ್ತಿಕ ಆಯ್ಕೆ ಹಾಗೂ ಅವರು ಮುಖ್ಯವಾಹಿನಿಯಲ್ಲಿ ಉಳಿಯುವುದನ್ನೇ ಆಯ್ಕೆ ಮಾಡಿಕೊಂಡರು. ಮಸಾಲಾ ಸಿನೆಮಾಕ್ಕೆ ಪ್ರಾಧಾನ್ಯತೆ ನೀಡಿದರು. ಆದರೆ ಒಂದು ವೇಳೆ ಬೆಂಗಾಳ- ಬಚ್ಚನ್, ಸಯೀದ್ ಮಿರ್ಝಾ- ಬಚ್ಚನ್ ಅಥವಾ ಮೃಣಾಲ್ ಸೇನ್-ಬಚ್ಚನ್ ಅವರು ಜೊತೆಗೂಡಿದ್ದರೆ ಏನಾಗುತ್ತಿತ್ತು ಎಂಬುದನ್ನು ನಾವು ಕಲ್ಪಿಸಿಕೊಳ್ಳುವುದು ಕಷ್ಟ. ಸತ್ಯಜಿತ್ ರೇಯವರ ಸಿನೆಮಾ ದಲ್ಲಿ ವಹೀದಾ ರೆಹಮಾನ್ ಅದ್ಭುತವಾಗಿ ಅಭಿನಯಿಸಿದ್ದರು, ಇತರ ಹಲವು ನಟರೂ ಇಂತಹ ಸಿನೆಮಾಗಳಲ್ಲಿ ನಟಿಸಿದ್ದಾರೆ. ಆದರೆ ಬಚ್ಚನ್ ತನ್ನ ವೃತ್ತಿಜೀವನದ ಉತ್ತುಂಗದಲ್ಲಿರುವಾಗಲೂ ಇಂತಹ ಕಲಾತ್ಮಕ ಸಿನೆೆಮಾಗಳತ್ತ ಒಲವು ತೋರಲೇ ಇಲ್ಲ.

ಅಮಿತಾಭ್ ಇಂತಹ ಮಹೋನ್ನತ ಪ್ರಶಸ್ತಿಗೆ ಆಯ್ಕೆಯಾದ ಸಂದರ್ಭದಲ್ಲಿ ಇದೊಂದು ಅನಗತ್ಯ ಟೀಕೆ ಎನಿಸಬಹುದು. ಆದರೆ ಇದು ಅನಗತ್ಯವಲ್ಲ. 1970ರಲ್ಲಿ ಹಾಗೂ ಆ ಬಳಿಕವೂ, ಕಲಾತ್ಮಕ (ಪರ್ಯಾಯ) ಸಿನೆಮಾದ ವ್ಯಕ್ತಿಗಳು ಅಮಿತಾಭ್‌ರೊಂದಿಗೆ ಕೆಲಸ ಮಾಡಲು ಉತ್ಸುಕರಾಗಿದ್ದರು. ಆದರೆ ಅವರು ಮನಮೋಹನ್ ದೇಸಾಯಿ-ಯಶ್ ಚೋಪ್ರಾ- ರಮೇಶ್ ಸಿಪ್ಪಿ ವರ್ತುಲದಲ್ಲೇ ಇರಲು ಬಯಸಿದರು. ಅವರು ಅಮಿತಾಭ್‌ಗೆ ಸದೃಢ ಪಾತ್ರಗಳನ್ನೇ ನೀಡಿದರು. ಶಕ್ತಿ ಸಿನೆಮಾದಲ್ಲಿ ಅವರು ದಿಲೀಪ್ ಕುಮಾರ್‌ರಂತಹ ಮೇರು ನಟರೆದುರು ಇನ್ನಷ್ಟು ಹೆಚ್ಚಿನ ಸ್ಕೋರ್ ಮಾಡಿದರು.ಕೂಲಿ, ಮರ್ದ್, ಶಕ್ತಿ ಮುಂತಾದ ಸಿನೆಮಾಗಳು ಅಮಿತಾಭ್‌ಗೆ ಬಹಳಷ್ಟನ್ನು ಕೊಟ್ಟಿರಬಹುದು, ಆದರೆ ಚಿತ್ರೋದ್ಯಮಕ್ಕೆ ಕೊಟ್ಟದ್ದು ಕಡಿಮೆ. ಬಳಿಕ ಅವರು ಕೆಲ ಸಮಯ ಸಿನೆಮಾ ರಂಗದಿಂದ ದೂರವಾದರು. 1980ರ ದಶಕದಲ್ಲಿ ಅವರ ಬಹುತೇಕ ಸಿನೆಮಾಗಳನ್ನು ಪ್ರೇಕ್ಷಕರು ಮರೆತೇ ಬಿಟ್ಟಿದ್ದಾರೆ. ಆದರೆ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ಕೆಲವು ಅಪರೂಪದ ಪಾತ್ರಗಳನ್ನು ಅವರು ನಿರ್ವಹಿಸಿದರು. ಅದೂ ಇಳಿವಯಸ್ಸಿನಲ್ಲಿ. ಅವುಗಳು ಅವರೊಳಗಿನ ಕಲಾವಿದನಿಗೆ ಸವಾಲಾಗುವ ಪಾತ್ರಗಳೂ ಹೌದು. ಚೀನಿ ಕಮ್, ಬ್ಲಾಕ್, ಪಾ, ನಿಶಬ್ದ್ ಮೊದಲಾದ ಚಿತ್ರಗಳು ಸ್ಟಾರ್ ಕಲಾವಿದನಿಗೆ ಪರ್ಯಾಯವಾದವುಗಳು.

ಹೊಸ ತಲೆಮಾರು ಅಮಿತಾಭ್ ಬಚ್ಚನ್ ಅವರನ್ನು ಈ ಚಿತ್ರಗಳ ಮೂಲಕವೇ ಗುರುತಿಸುತ್ತಿರುವುದು ಎನ್ನುವುದನ್ನು ನಾವು ಗಮನಿಸಬೇಕಾಗಿದೆ. ಒಟ್ಟಿನಲ್ಲಿ ಬಾಲಿವುಡ್‌ನಲ್ಲಿ ಅಸಾಮಾನ್ಯವಾದುದನ್ನು ಸಾಧಿಸಿದ ಈ ಸ್ಟಾರ್‌ಗೆ ಫಾಲ್ಕೆ ಪ್ರಶಸ್ತಿ ಅರ್ಹವಾಗಿಯೇ ದೊರಕಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)