varthabharthi

ನಿಮ್ಮ ಅಂಕಣ

​ಹೊಣೆಗಾರಿಕೆ ಮರೆತಿರುವ ಜನರು, ಮಾಧ್ಯಮಗಳು ಮತ್ತು ಪೊಲೀಸರು

ವಾರ್ತಾ ಭಾರತಿ : 29 Sep, 2019
ಎಎಂಎಸ್, ಚಿಕ್ಕಮಗಳೂರು

ಸಂಚಾರ ನಿಯಮಗಳನ್ನು ಗಾಳಿಗೆ ತೂರುವ ಜಾಯಮಾನದ ಭಾರತೀಯರನ್ನು ಸರಿದಾರಿಗೆ ತರಲು ಮತ್ತು ಅಪಘಾತಗಳಿಂದ ಉಂಟಾಗುವ ಹೆಚ್ಚಿನ ಅಕಾಲ ಮರಣಗಳನ್ನು ತಪ್ಪಿಸಲು ಕೇಂದ್ರ ಸರಕಾರ ದಂಡದ ಮೊತ್ತವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿದ್ದು, ಜನರ (ಕಾನೂನು ಪಾಲನೆಯಲ್ಲಿ ಉದಾಸೀನತೆ ತೋರುವ) ಆಕ್ರೋಶಕ್ಕೆ ಕಾರಣವಾಗಿದೆ. ದಂಡದ ಮೊತ್ತದಲ್ಲಿ ಹೆಚ್ಚಳದ ವಿಚಾರವು ಸಾರಿಗೆ ಇಲಾಖೆಗೆ ಸಂಬಂಧಪಟ್ಟ ವಿಚಾರ ಎಂಬುದು ಎಲ್ಲರಿಗೂ ತಿಳಿದ ವಿಚಾರ.

 ಸರಿಯಾದ ರಸ್ತೆ, ಪಾದಚಾರಿ ಮಾರ್ಗ, ಪಾರ್ಕಿಂಗ್ ಸ್ಥಳಗಳು, ಎಚ್ಚರಿಕೆ ಬೋರ್ಡ್‌ಗಳು ಮತ್ತು ಸೂಕ್ತ ಸೌಲಭ್ಯಗಳನ್ನು ಸರಕಾರ ಒದಗಿಸದೇ ದಂಡದ ಮೊತ್ತವನ್ನು ಮಾತ್ರ ಏರಿಸಿರುವುದು ಎಷ್ಟು ಸರಿ ಎಂದು ಜನರು ಪ್ರಶ್ನಿಸುತ್ತಿರುವುದು ಸರಿಯಾಗಿಯೇ ಇದೆ. ಇದೂ ಕೂಡ ಲೋಕೋಪಯೋಗಿ, ಸ್ಥಳೀಯ ಪ್ರಾಧಿಕಾರ ಮತ್ತು ಹೆದ್ದಾರಿ ಪ್ರಾಧಿಕಾರಗಳಿಗೆ ಸಂಬಂಧಿಸಿದ ವಿಚಾರ. ಆದರೆ ಜನರ ನೇರ ಆಕ್ರೋಶಕ್ಕೆ ಬಲಿಯಾಗುತ್ತಿರುವುದು ಜನರ ಮೇಲೆ ದಂಡ ವಿಧಿಸುತ್ತಿರುವ ಪೊಲೀಸರು ಮಾತ್ರ. ಸಂಬಂಧಿಸಿದ ಉಳಿದ ಎಲ್ಲಾ ಇಲಾಖೆಗಳು ಮಾತ್ರ ಏನೂ ಗೊತ್ತಿಲ್ಲದಂತೆ ಮಗುಮ್ಮಾಗಿ ಕುಳಿತಿವೆ.

 ಮೇಲಧಿಕಾರಿಗಳ ಒತ್ತಡಕ್ಕೋ, ಕಾನೂನುಗಳನ್ನು ಪರಿಪಾಲನೆ ಮಾಡುವ ಅನಿವಾರ್ಯಕ್ಕೆ ಒಳಗಾಗಿಯೋ ಬಿಸಿಲು, ಮಳೆ ಎನ್ನದೇ ರಸ್ತೆಯಲ್ಲಿ ನಿಂತು ಪೊಲೀಸರು ಸಹನೆ, ಆರೋಗ್ಯ,ಕೌಟುಂಬಿಕ ಸಂಬಂಧ, ತನ್ನತನ ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದಾರೆ. ದೇಶದಾದ್ಯಂತ ಅಲ್ಲಲ್ಲಿ ಸ್ಥಳ ದಂಡ ವಸೂಲಿ ವಿಚಾರದ ಸಂಬಂಧ ಸಾರ್ವಜನಿಕರು ಪೊಲೀಸರ ಮೇಲೆ ಹಲ್ಲೆ ನಡೆಸುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ.

ಸೆ.28ರಂದು ಚಿಕ್ಕಮಗಳೂರು ನಗರದಲ್ಲಿ ನಡೆದ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಸಂಪೂರ್ಣ ತಿರುಚಿ ಪ್ರಸಾರವಾಗುತ್ತಿರುವುದು ಜನರಿಗೆ ಮತ್ತು ಮಾಧ್ಯಮಗಳಿಗೆ ಪೊಲೀಸರ ವಿರುದ್ಧ ಇರುವ ಅಸಹನೆಯನ್ನು ಸೂಚಿಸುತ್ತದೆ.

ಸೆ.28ರಂದು ಬೆಳಗ್ಗೆ ಮಂಗಲ್‌ದಾಸ್ ಎಂಬ ಕಾನ್‌ಸ್ಟೇಬಲ್‌ಗೆ ನಗರದ ಪ್ರಭು ಬೀದಿಯಲ್ಲಿ ಸಂಚಾರ ನಿಯಂತ್ರಣ ಕರ್ತವ್ಯಕ್ಕೆ ನೇಮಕ ಮಾಡಲಾಗಿತ್ತು. ಆಝಾದ್ ಪಾರ್ ಮುಖಾಂತರ ಎಲ್ಲಾ ಮಾದರಿಗಳ ವಾಹನಗಳು ಪ್ರಭು ಬೀದಿ ಪ್ರವೇಶ ಮಾಡುವುದನ್ನು ನಿಷೇಧಿಸಿ ಈಗಾಗಲೇ ಆದೇಶ ಹೊರಡಿಸಲಾಗಿದೆ ಮತ್ತು ಈ ಬಗ್ಗೆ ವಾಹನ ಸವಾರರನ್ನು ಎಚ್ಚರಿಸುವ ನೋ ಎಂಟ್ರಿ ಫಲಕವನ್ನೂ ಅಳವಡಿಸಲಾಗಿದೆ.

ಮಧ್ಯಾಹ್ನ 1:30 ಗಂಟೆಗೆ ಚಿಕ್ಕಮಗಳೂರು ನಿವಾಸಿಯೊಬ್ಬರು ಸಂಚಾರ ನಿಯಮ ಉಲ್ಲಂಘಿಸಿ ಆಝಾದ್ ಪಾರ್ಕ್ ಮುಖಾಂತರ ಪ್ರಭು ಬೀದಿ ಪ್ರವೇಶ ಮಾಡಿದ್ದಾರೆ. ಪ್ರಭು ಬೀದಿಯಲ್ಲಿರುವ ಬಿಜೆಪಿ ಕಚೇರಿಯ ಹತ್ತಿರ ಕರ್ತವ್ಯದಲ್ಲಿದ್ದ ಮಂಗಲ್‌ದಾಸ್ ಕಾರನ್ನು ತಡೆದು ನಿಲ್ಲಿಸಿ ಸ್ಥಳಕ್ಕೆ ಸಂಚಾರಿ ಠಾಣೆ ಎಎಸ್ಸೈ ಧರ್ಮರಾಜ್‌ರನ್ನು ಕರೆಸಿಕೊಂಡಿದ್ದಾರೆ (ಕಾನೂನು ಪ್ರಕಾರ ಸಂಚಾರ ಠಾಣೆ ಎಎಸ್ಸೈ ಮತ್ತು ಮೇಲ್ಮಟ್ಟದ ಅಧಿಕಾರಿಗಳಿಗೆ ಮಾತ್ರ ದಂಡ ವಿಧಿಸುವ ಅಧಿಕಾರವಿರುತ್ತದೆ). ಈ ಮಧ್ಯೆ ನಿಯಮ ಉಲ್ಲಂಘಿಸಿದ ವ್ಯಕ್ತಿ ಪೊಲೀಸ್ ಮಂಗಲ್‌ದಾಸ್‌ಗೆ ಮನಸೋ ಇಚ್ಛೆ ಅವಾಚ್ಯವಾಗಿ ನಿಂದಿಸಿದ್ದಾರೆ. ಸಾರ್ವಜನಿಕವಾಗಿ ಅಪಮಾನಗೊಳಿಸುವ ಶಬ್ದವನ್ನು ಬಳಸಿರುತ್ತಾರೆ. ಅಷ್ಟರಲ್ಲಿ ಸ್ಥಳಕ್ಕೆ ಆಗಮಿಸಿದ ಎಎಸ್ಸೈ ಧರ್ಮರಾಜ್ ಅವರು ಸಂಚಾರ ನಿಯಮ ಉಲ್ಲಂಘಿಸಿದ ವ್ಯಕ್ತಿಯ ಮೇಲೆ 500 ರೂ. ದಂಡ ವಿಧಿಸಿದ್ದಾರೆ. ಆ ವ್ಯಕ್ತಿ ದಂಡ ನೀಡಲು ನಿರಾಕರಿಸಿದ್ದಾರೆ ಮತ್ತು ಎಎಸ್ಸೈ ವಿರುದ್ಧ ಕೂಡಾ ಅಪಮಾನಕಾರಿಯಾಗಿ ವರ್ತಿಸಿದ್ದಾರೆ ಹಾಗೂ ದುರ್ವರ್ತನೆ ತೋರಿದ್ದಾರೆ.

 ಆ ವ್ಯಕ್ತಿಗೆ ನೀಡಿದ ದಂಡದ ರಸೀದಿ ಪ್ರತಿಯನ್ನು ಹರಿದು ಹಾಕಿದ್ದಾರೆ. ‘ನೋ ಎಂಟ್ರಿ ಆದೇಶ ಮಾಡಿದವನು ಯಾರ ಅಪ್ಪ? ಆದೇಶ ತೋರಿಸಿ’ ಎಂದು ಮೊಂಡು ಹಠಕ್ಕೆ ಬಿದ್ದಿದ್ದಾರೆ. ಒಂದು ತಿಂಗಳಲ್ಲಿ ಹಗಲು ರಾತ್ರಿ ಗಣಪತಿ ಬಂದೋಬಸ್ತ್ ಕರ್ತವ್ಯದಲ್ಲಿ ದಣಿದಿದ್ದ ಪೊಲೀಸ್ ಕಾನ್ ಸ್ಟೇಬಲ್ ಮಂಗಲ್ ದಾಸ್ ಸಹಜವಾಗಿ ಸಹನೆ ಕಳೆದುಕೊಂಡಿದ್ದಾರೆ. ತನ್ನ ಕಣ್ಣೆದುರೇ ತನ್ನ ಮೇಲಧಿಕಾರಿಗಳಿಗೆ ಸಾರ್ವಜನಿಕವಾಗಿ ಅಶ್ಲೀಲ ಪದ ಪ್ರಯೋಗ ಮಾಡಿ ಅಪಮಾನಗೊಳಿಸಿದ ವ್ಯಕ್ತಿ ವಿರುದ್ಧ ಏರಿ ಹೋಗಿದ್ದಾರೆ. ಇದೂ ಕೂಡಾ ಮಂಗಲ್‌ದಾಸ್ ತೋರಿದ ದುರ್ವರ್ತನೆಯಾಗಿರುತ್ತದೆ. ಇದನ್ನೆಲ್ಲಾ ಪಕ್ಕದಲ್ಲಿ ನಿಂತು ವೀಡಿಯೊ ರೆಕಾರ್ಡ್ ಮಾಡುತ್ತಿದ್ದ ಆ ವ್ಯಕ್ತಿಯ ಸ್ನೇಹಿತ ಕೇವಲ ಮಂಗಲ್‌ದಾಸ್‌ನ ದುರ್ವರ್ತನೆಯನ್ನು ಮಾತ್ರ ಎಡಿಟ್ ಮಾಡಿ ವೈರಲ್ ಮಾಡಿದ್ದಾರೆ.

ದಂಡದ ಮೊತ್ತದ ರಸೀದಿ ಕೇಳಿದ್ದಕ್ಕೆ ಸಂಚಾರಿ ಪೊಲೀಸನಿಂದ ಅಮಾಯಕನ ಮೇಲೆ ಹಲ್ಲೆ ಎಂಬಂತೆ ಘಟನೆಯನ್ನು ಸಂಪೂರ್ಣವಾಗಿ ತಿರುಚಿ ಪ್ರಸಾರ ಮಾಡಲಾಗುತ್ತಿದೆ. ಮಾಧ್ಯಮಗಳು ಘಟನೆಯ ಸತ್ಯಾಸತ್ಯತೆ ಬಗ್ಗೆ ತಿಳಿದುಕೊಳ್ಳದೆ ಸುಳ್ಳನ್ನು ಸಂಭ್ರಮಿಸುತ್ತಿವೆ. ಸಂಚಾರ ನಿಯಮಗಳನ್ನು ಗಾಳಿಗೆ ತೂರಿ ಪೊಲೀಸರಿಂದ ದಂಡ ವಿಧಿಸಿಕೊಂಡವರು ಮತ್ತು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಪೊಲೀಸರಿಂದ ಒದೆ ತಿಂದವರು ಸಾಮಾಜಿಕ ಮಾಧ್ಯಮಗಳಲ್ಲಿ ಅಪಪ್ರಚಾರ ನಡೆಸಿ ತಮ್ಮ ವಿಕೃತ ಮನಸ್ಥಿತಿಯನ್ನು ತೋರುತ್ತಿದ್ದಾರೆ.

ಸಾರ್ವಜನಿಕವಾಗಿ ಪೊಲೀಸ್ ಕಾನ್‌ಸ್ಟೇಬಲ್ ಮಂಗಲ್ ದಾಸ್ ತೋರಿದ ದುರ್ವರ್ತನೆಯನ್ನು ಸಮರ್ಥಿಸುವುದು ಈ ಲೇಖನದ ಉದ್ದೇಶವಲ್ಲ. ವಿಕೃತರ ಮನಸ್ಥಿತಿ ಬಿಡಿ. ಸಮಾಜದ ಓರೆ ಕೋರೆಗಳನ್ನು ತಿಳಿಸಿ ಸಮಾಜದ ಸ್ವಾಸ್ಥವನ್ನು ಕಾಪಾಡಬೇಕಾದ ಗುರುತರ ಜವಾಬ್ದಾರಿಯನ್ನು ಹೊಂದಿರುವ ಮಾಧ್ಯಮಗಳು ಪ್ರಾಮಾಣಿಕವಾಗಿ ಮತ್ತು ಪಾರದರ್ಶಕವಾಗಿ ಇರಬೇಕಾಗಿರುತ್ತದೆ. ಮಾಧ್ಯಮಗಳೂ ಕೂಡ ಮುಂದಾಲೋಚನೆ ಇಲ್ಲದೆ ವಿಕೃತರ ಮನಸ್ಥಿತಿಯನ್ನೇ ತೋರಿದರೆ ಹೇಗೆ? ಸಮಾಜಕ್ಕೆ ಉತ್ತರದಾಯಿತ್ವ ಹೊಂದಿದ ಮಾಧ್ಯಮಗಳು ತಮ್ಮ ಸೂಕ್ಷ್ಮತೆಯನ್ನು ಕಳೆದುಕೊಂಡು ಸುಳ್ಳನ್ನು ನಿಜ ಎಂಬಂತೆ ಜನರ ಮನಸ್ಸಿನಲ್ಲಿ ಮೂಡಿಸಿದರೆ ಹೇಗೆ? ಮಾಧ್ಯಮಗಳು ಸಾಗುತ್ತಿರುವ ಹಾದಿಯನ್ನು ನೋಡಿದರೆ ಭವಿಷ್ಯದ ಬಗ್ಗೆ ಭಯ ಮೂಡುತ್ತಿದೆ.

ಪೊಲೀಸರು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುತ್ತಿಲ್ಲ ಎನ್ನುವುದು ಗುರುತರ ಆರೋಪ. ಇದೂ ಬಹುಮಟ್ಟಿಗೆ ನಿಜ ಕೂಡಾ. ಸಾರ್ವಜನಿಕ ಸೇವೆಗೆ ನಿಯೋಜಿತರಾದ ಪೊಲೀಸರು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಜನರ ಸಮಸ್ಯೆಗಳಿಗೆ ಕಿವಿಯಾಗಬೇಕು. ಸಾರ್ವಜನಿಕರಿಗೆ ಅವಾಚ್ಯವಾಗಿ ನಿಂದಿಸುವುದು, ಹಲ್ಲೆ ಇತ್ಯಾದಿಗಳಿಗೆ ಅವಕಾಶವಿಲ್ಲದಂತೆ ಪೊಲೀಸರು ಕರ್ತವ್ಯ ನಿರ್ವಹಿಸಬೇಕಾದ ಜರೂರತ್ತು ಇದೆ. ಪೊಲೀಸರು ಈ ಬಗ್ಗೆ ಗಮನ ಹರಿಸಬೇಕು.
ಹಾಗಂತ ಯಾರೇ ತಪ್ಪು ಮಾಡಿದರೂ ಪೊಲೀಸರ ಮೇಲೇ ಗೂಬೆ ಕೂರಿಸುವುದು ಕಡಿಮೆಯಾಗಬೇಕು. ಮಾಧ್ಯಮಗಳು ತಮ್ಮ ಹೊಣೆ ಅರಿತುಕೊಂಡು ಕರ್ತವ್ಯ ಪಾಲನೆ ಮಾಡಬೇಕು. ಜನರು ಕೂಡಾ ಸರಕಾರದ ನಿಯಮಗಳನ್ನು ಪಾಲಿಸಬೇಕು. ಪೊಲೀಸರು ಮತ್ತು ಸಾರ್ವಜನಿಕರ ನಡುವಿನ ಸೌಹಾರ್ದ ಸಂಬಂಧದಲ್ಲಿ ಸುಧಾರಣೆಯಾಗಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)