varthabharthi


ಪ್ರಚಲಿತ

ಬಾಪೂ ಎಂಬ ಬೆಳಕಿನ ಕಿರಣ

ವಾರ್ತಾ ಭಾರತಿ : 30 Sep, 2019

ಗಾಂಧಿ ವೈಯಕ್ತಿಕವಾಗಿ ಧರ್ಮನಿಷ್ಠರಾಗಿದ್ದರು ಎಂಬುದು ನಿಜ. ಆದರೆ, ಸ್ವಾತಂತ್ರ ಹೋರಾಟಕ್ಕೆ ಧರ್ಮ ಮತ್ತು ದೇವರನ್ನು ಎಂದೂ ಬಳಸಿಕೊಳ್ಳಲಿಲ್ಲ. ಸ್ವಾತಂತ್ರ ಹೋರಾಟಕ್ಕೆ ಚರಕಾ ಬಾಪೂಜಿಯ ಸಂಕೇತವಾಗಿತ್ತು. ರಾಮನನ್ನು ಅವರು ಅದಕ್ಕಾಗಿ ಬಳಸಿಕೊಳ್ಳಲಿಲ್ಲ.


ಇ ಂದಿಗೆ 150 ವರ್ಷಗಳ ಹಿಂದೆ ಮೋಹನದಾಸ ಕರಮಚಂದ ಗಾಂಧಿ ಎಂಬ ಅಪರೂಪದ ಮನುಷ್ಯ ಗುಜರಾತ್‌ನಲ್ಲಿ ಜನಿಸಿದ. ನಂತರ ಮಹಾತ್ಮಾ ಗಾಂಧಿ ಎಂದು ಹೆಸರಾದ ಈತನ ಬಗ್ಗೆ ಭಾರತದ ಹೊಸ ಪೀಳಿಗೆಯ ಯುವಕರಿಗೆ ಹೆಚ್ಚು ಗೊತ್ತಿಲ್ಲ. ಇಲ್ಲವೇ ಆತನ ಬಗ್ಗೆ ಅತ್ಯಂತ ವ್ಯವಸ್ಥಿತವಾಗಿ ಕೆಟ್ಟ ಅಭಿಪ್ರಾಯವನ್ನು ತರುಣರ ಮೆದುಳಲ್ಲಿ ರೂಪಿಸಲಾಗಿದೆ. ಆದರೆ ಜಗತ್ತು ಮಾತ್ರ ಗಾಂಧೀಜಿಯನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಿದೆ. ಇತ್ತೀಚೆಗೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಹೋದಾಗಲೂ ‘ಗಾಂಧಿ, ನೆಹರೂ ನಾಡಿನಿಂದ ಬಂದಿದ್ದೀರಿ. ನಿಮಗೆ ಸ್ವಾಗತ’ ಎಂದು ಬರಮಾಡಿಕೊಳ್ಳಲಾಯಿತು.

ಗಾಂಧಿಯನ್ನು ಕೊಂದ ಸಿದ್ಧಾಂತದ ಪ್ರತಿಪಾದಕರಿಗೂ ಕೂಡ ಈಗ ಆತನ ಹೆಸರು ಹೇಳುವುದು ಅನಿವಾರ್ಯ. ಗಾಂಧಿ ಅಭಿಪ್ರಾಯಗಳನ್ನು, ನಿಲುವುಗಳನ್ನು ಒಪ್ಪದಿರಬಹುದು. ಆದರೆ ಕಡೆಗಣನೆ ಸಾಧ್ಯವಿಲ್ಲ. ಅದೂ ಎಲ್ಲ ಜೀವಪರ ಪರ್ಯಾಯಗಳು ವಿಫಲಗೊಂಡ ಈ ಕಾಲದಲ್ಲಿ ಗಾಂಧಿ ಮತ್ತೆ ನೆನಪಾಗುತ್ತಾರೆ.

 ಡಾ. ಅಂಬೇಡ್ಕರ್ ಅವರಿಂದ ‘ಮಿಸ್ಟರ್ ಎಂ.ಕೆ.ಗಾಂಧಿ’ ಎಂದು ಕರೆಯಲ್ಪಡುತ್ತಿದ್ದ ಗಾಂಧೀಜಿಯನ್ನು ದ್ವೇಷಿಸುವವರು ಆಗಲೂ ಇದ್ದರು. ಈಗಲೂ ಇದ್ದಾರೆ. ಆತನ ವಿರೋಧಿಗಳು ಒಂದೇ ವಿಚಾರ ಧಾರೆಗೆ ಸೇರಿದವರಲ್ಲ. ವಿಭಿನ್ನ ಧಾರೆಗಳ ಜನ ತಮ್ಮದೇ ಕಾರಣಗಳಿಗಾಗಿ ಬಾಪೂಜಿಯನ್ನು ವಿರೋಧಿಸುತ್ತಾ ಬಂದಿದ್ದಾರೆ. ಬಾಬಾಸಾಹೇಬ್ ಅಂಬೇಡ್ಕರ್ ಗಾಂಧಿಯನ್ನು ಸಕಾರಣವಾಗಿ ಟೀಕಿಸುತ್ತಿದ್ದರು. ಭಗತ್ ಸಿಂಗ್ ಬೆಂಬಲಿಗರಾದ ಎಡಪಂಥೀಯರು ತಮ್ಮದೇ ಕಾರಣಗಳಿಗಾಗಿ ಗಾಂಧೀಜಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಾರೆ. ಇನ್ನು ಸಾವರ್ಕರ್ ಮತ್ತು ಗೋಳ್ವಲ್ಕಕರ ವಾದಿಗಳು ಕೂಡ ಗಾಂಧೀಜಿಯನ್ನು ದ್ವೇಷಿಸುತ್ತ ಬಂದಿದ್ದಾರೆ. ಆದರೆ, ಅಂಬೇಡ್ಕರ್ ಮತ್ತು ಎಡಪಂಥೀಯರ ಗಾಂಧಿ ವಿರೋಧ ಎಂದೂ ದ್ವೇಷವಾಗಿ ರೂಪಾಂತರಗೊಳ್ಳಲಿಲ್ಲ. ಆದರೆ ಹಿಂದೂರಾಷ್ಟ್ರ ಕಟ್ಟಲು ಹೊರಟ ಕೋಮುವಾದಿಗಳ ಗಾಂಧಿ ವಿರೋಧ ದ್ವೇಷದ ರೂಪ ತಾಳಿ ಬಾಪೂಜಿ ಗೋಡ್ಸೆಯ ಗುಂಡಿಗೆ ಬಲಿಯಾಗಬೇಕಾಯಿತು

 ಗಾಂಧೀಜಿಗೆ ಭಾರತದಿಂದ ಬ್ರಿಟಿಷ್ ಸಾಮ್ರಾಜ್ಯ ಶಾಹಿಯನ್ನು ತೊಲಗಿಸುವುದು ಮೊದಲ ಆದ್ಯತೆಯಾಗಿತ್ತು, ಆನಂತರ ನಮ್ಮ ಆಂತರಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳೋಣ ಎಂಬುದು ಅವರ ನಿಲುವಾಗಿತ್ತು. ಆದರೆ, ಅಂಬೇಡ್ಕರ್ ಇದನ್ನು ಒಪ್ಪಲಿಲ್ಲ. ‘ದೇಶಕ್ಕೆ ಬರೀ ಸ್ವಾತಂತ್ರ ಬಂದರೆ ಸಾಲದು. ಶತಮಾನಗಳಿಂದ ನಾಯಿ, ಬೆಕ್ಕುಗಳಿಗಿಂಥ ಕೀಳಾಗಿ ನರಳುತ್ತಿರುವ ನನ್ನ ಜನರಿಗೆ ಸ್ವಾತಂತ್ರ ಮಾತ್ರವಲ್ಲದೆ ಸ್ವಾಭಿಮಾನದ ಬದುಕು ಬೇಕು. ಗಾಂಧೀಜಿ ಪಡೆಯುವ ಸ್ವಾತಂತ್ರ ಮೇಲ್ಜಾತಿಯ ಮೇಲ್ವರ್ಗದ ಜನರಿಗೆ ಮಾತ್ರ ದಕ್ಕುತ್ತದೆ. ದಲಿತರ ಬದುಕಿಗೆ ಅದು ಬೆಳಕನ್ನು ನೀಡುವುದಿಲ್ಲ’ ಎಂಬುದು ಬಾಬಾಸಾಹೇಬರ ನಿಲುವಾಗಿತ್ತು

 ಗಾಂಧೀಜಿ ಜೊತೆಗೆ ಸುಭಾಶ್ಚಂದ್ರ ಭೋಸ್ ಮತ್ತು ಭಗತ್‌ಸಿಂಗ್‌ರಿಗೂ ಭಿನ್ನಾಭಿಪ್ರಾಯವಿತ್ತು. ಎಡಪಂಥೀಯರೂ ಗಾಂಧಿಯನ್ನು ಒಪ್ಪುತ್ತಿರಲಿಲ್ಲ. ದೇಶ ಸ್ವಾತಂತ್ರ ಪಡೆಯುವ ಜೊತೆಗೆ ಸಮಾನತೆಯ ಸಮಾಜವೂ ನಿರ್ಮಾಣವಾಗಬೇಕು ಎಂಬುದು ಅವರ ನಿಲುವಾಗಿತ್ತು. ಆದರೆ ಈ ಭಿನ್ನಾಭಿಪ್ರಾಯಗಳು ಎಂದೂ ವೈಯಕ್ತಿಕ ದ್ವೇಷದ ರೂಪ ತಾಳಲಿಲ್ಲ. ಇವರೆಲ್ಲರಿಗೂ ಗಾಂಧೀಜಿ ಬಗ್ಗೆ ಭಿನ್ನಾಭಿಪ್ರಾಯಗಳ ನಡುವೆಯೂ ಗೌರವವಿತ್ತು. ಆದರೆ, ಹಿಂದೂ ಮಹಾಸಭಾ ಹಾಗೂ ಆರೆಸ್ಸೆಸ್‌ಗಳ ಗಾಂಧಿ ದ್ವೇಷ ಭಿನ್ನವಾಗಿತ್ತು. ಬ್ರಿಟಿಷರು ಭಾರತದಿಂದ ತೊಲಗಿದ ನಂತರ ಈ ಭಾರತ ಹಿಂದಿನಂತೆ ಶ್ರೇಣೀಕೃತ ಜಾತಿ ಪದ್ಧತಿಯನ್ನು ಆಧರಿಸಿದ ಹಿಂದೂರಾಷ್ಟ್ರ ಆಗಬೇಕೆಂಬುದು ಹಿಂದೂ ರಾಷ್ಟ್ರ ಪ್ರತಿಪಾದಕರ ನಿಲುವಾಗಿತ್ತು. ಅಂತಲೇ ಅವರು ಸ್ವಾತಂತ್ರ ಚಳವಳಿಯನ್ನು ವಿರೋಧಿಸಿದರು. ಆದರೆ ರಾಮಭಕ್ತನಾಗಿದ್ದ ಗಾಂಧೀಜಿ ಇದನ್ನು ಒಪ್ಪಲಿಲ್ಲ. ಈ ದೇಶ ಹಿಂದೂ, ಮುಸ್ಲಿಂ, ಕ್ರೈಸ್ತರು ಸೇರಿದಂತೆ ಎಲ್ಲರಿಗೂ ಸೇರಿದ್ದು ಎಂಬುದು ಬಾಪೂ ನಿಲುವಾಗಿತ್ತು . ಅಂತಲೇ ಸ್ವಾತಂತ್ರಾ ನಂತರ ಅಂಬೇಡ್ಕರ್ ನೇತೃತ್ವದಲ್ಲಿ ರೂಪುಗೊಂಡ ಸಂವಿಧಾನವನ್ನು ಈ ದೇಶ ಒಪ್ಪಿಕೊಂಡು ಜಾತ್ಯತೀತ ಜನತಾಂತ್ರಿಕ ರಾಷ್ಟ್ರವಾಗಿ ಹೊರ ಹೊಮ್ಮಿತು.

ಗಾಂಧೀಜಿ ಗೊಡ್ಸೆ ಗುಂಡಿಗೆ ಬಲಿಯಾದರು. ಗಾಂಧೀಜಿಗೆ ಸ್ವಾತಂತ್ರವೇ ಮುಖ್ಯ ಗುರಿಯಾಗಿತ್ತು. ಅದಕ್ಕಾಗಿ ಅವರು ಹಿಂದೂ ಮುಸ್ಲಿಂ ಎನ್ನದೆ ಎಲ್ಲರನ್ನೂ ಕೂಡಿಸಿಕೊಂಡು ವಿಮೋಚನಾ ಹೋರಾಟ ರೂಪಿಸಿದರು. ಗಾಂಧೀಜಿಯನ್ನು ಒಪ್ಪಿಕೊಂಡಂತೆ ಈ ದೇಶ ಉಳಿದವರನ್ನು ಒಪ್ಪಿಕೊಳ್ಳಲಿಲ್ಲ.

ತನ್ನನ್ನು ವಿರೋಧಿಸುವವರನ್ನು ಹಾಗೂ ತನ್ನೊಂದಿಗೆ ತಾತ್ವಿಕ ಭಿನ್ನಾಭಿಪ್ರಾಯ ಹೊಂದಿದವರನ್ನು ಗಾಂಧೀಜಿ ಎಂದೂ ದ್ವೇಷಿಸುತ್ತಿರಲಿಲ್ಲ. ತನ್ನನ್ನು ತಾತ್ವಿಕ ಕಾರಣಕ್ಕಾಗಿ ವಿರೋಧಿಸಿದ ಅಂಬೇಡ್ಕರ್ ಮತ್ತು ಎಡಪಂಥೀಯರನ್ನು ಗಾಂಧಿ ಎಂದೂ ದ್ವೇಷಿಸಲಿಲ್ಲ. ಅಂಬೇಡ್ಕರ್ ಮತ್ತು ಎಡಪಂಥೀಯರೂ ಗಾಂಧಿ ಬಗ್ಗೆ ದ್ವೇಷ ಹೊಂದಿರಲಿಲ್ಲ. ಗಾಂಧಿ ಎಂಥ ಮನುಷ್ಯ ಅಂದರೆ ತಾನು ಕಟ್ಟಾ ದೈವಭಕ್ತನಾಗಿದ್ದರೂ ತನ್ನ ಆಶ್ರಮದಲ್ಲಿ ಗೋರಾ (ಗೊ.ರಾಮಚಂದ್ರರಾವ್) ಅವರಂಥ ನಾಸ್ತಿಕನಿಗೂ ಆಶ್ರಯ ನೀಡಿದ್ದರು. ಗಾಂಧಿ ಆಶ್ರಮದಲ್ಲಿದ್ದರೂ ಗೋರಾ ಬೆಳಗ್ಗಿನ ಮತ್ತು ಸಂಜೆಯ ಪ್ರಾರ್ಥನಾ ಸಭೆಗಳಿಗೆ ಹೋಗುತ್ತಿರಲಿಲ್ಲ. ಪ್ರಾರ್ಥನೆಗೆ ಬರಬೇಕೆಂದು ಗಾಂಧೀಜಿಯೂ ಒತ್ತಾಯಿಸಲಿಲ್ಲ. ಆಸ್ತಿಕತೆ ಮತ್ತು ನಾಸ್ತಿಕತೆ ಬಗ್ಗೆ ಗುರು ಶಿಷ್ಯರಿಬ್ಬರೂ ದಿನವಿಡೀ ವಾದ, ಚರ್ಚೆ ಮಾಡುತ್ತಿದ್ದರು. ವರ್ಷಾನುಗಟ್ಟಲೆ ಗೋರಾ ಗಾಂಧಿ ಆಶ್ರಮದಲ್ಲಿ ಇದ್ದರೂ ನಾಸ್ತಿಕರಾಗಿಯೇ ಉಳಿದರು. ಇದು ವ್ಯಕ್ತಿಯೊಬ್ಬನ ವಿಚಾರಗಳಿಗೆ ಗಾಂಧಿ ಕೊಡುತ್ತಿದ್ದ ಗೌರವಕ್ಕೆ ಉದಾಹರಣೆ.

ಅದೇ ರೀತಿ ಕಮ್ಯುನಿಸ್ಟರ ಜೊತೆಗೂ ಗಾಂಧೀಜಿಗೆ ಭಿನ್ನಾಭಿಪ್ರಾಯಗಳಿದ್ದವು. ಹಿಂಸೆಯನ್ನು ಅವರು ಒಪ್ಪುತ್ತಿರಲಿಲ್ಲ. ಆದರೆ ಕಮ್ಯುನಿಸ್ಟರ ಬದ್ಧತೆ ಬಗ್ಗೆ ಅವರಿಗೆ ಗೌರವವಿತ್ತು. ಮೀರತ್ ಫಿತೂರಿ ಖಟ್ಲೆಯಲ್ಲಿ ಕಮ್ಯುನಿಸ್ಟರು ಬಂಧನಕ್ಕೊಳಗಾಗಿ ಜೈಲಿನಲ್ಲಿದ್ದಾಗ ಗಾಂಧಿ ಕಮ್ಯುನಿಸ್ಟ್ ನಾಯಕರನ್ನು ಭೇಟಿಯಾಗಲು ಹೋಗಿದ್ದರು. ನಲವತ್ತರ ದಶಕದ ಭಾರತ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪೂರ್ಣಚಂದ್ರ ಜೋಶಿ ಮತ್ತು ಗಾಂಧೀಜಿ ನಡುವೆ ಉತ್ತಮ ಸ್ನೇಹವಿತ್ತು. ಅವರ ನಡುವಿನ ಪತ್ರ ವ್ಯವಹಾರ ಇದಕ್ಕೊಂದು ಉದಾಹರಣೆ.

ಗಾಂಧಿಯಲ್ಲಿ ಬದಲಾವಣೆಗೆ ಸ್ಪಂದಿಸುವ ಅಪರೂಪದ ಗುಣವಿತ್ತು. ಮೊದಲು ಅಂತರ್ಜಾತಿ, ಅಂತರ್‌ಧರ್ಮೀಯ ಮದುವೆಗಳನ್ನು ವಿರೋಧಿಸುತ್ತಿದ್ದ ಗಾಂಧಿ ಕ್ರಮೇಣ ಬದಲಾಗಿ ತಮ್ಮ ಕೊನೆಯ ದಿನಗಳಲ್ಲಿ ಜಾತಿರಹಿತ ಮದುವೆಗಳನ್ನು ಬೆಂಬಲಿಸಿದರು. ಬರೀ ಬೆಂಬಲಿಸಲಿಲ್ಲ, ಸ್ವಜಾತಿಯ ವಿವಾಹಗಳನ್ನು ಬಹಿಷ್ಕರಿಸಿದರು. ನಾಸ್ತಿಕ ಗೋಪರಾಜು ರಾಮಚಂದ್ರರಾವ್ (ಗೋರಾ) ಆಶ್ರಮಕ್ಕೆ ಬಂದಾಗ, ಮೊದಲು ನಾಸ್ತಿಕರೊಂದಿಗೆ ಏನು ಮಾತು ಎಂದು ಮಾತಾಡಲು ನಿರಾಕರಿಸಿದ ಬಾಪೂಜಿ ಕ್ರಮೇಣ ಅವರೊಂದಿಗೆ ನಿರೀಶ್ವರವಾದದ ಬಗ್ಗೆ ಚರ್ಚಿಸತೊಡಗಿದರು. ಕೊನೆಯ ದಿನಗಳಲ್ಲಿ ಬದಲಾವಣೆಗೆ ತೆರೆದುಕೊಳ್ಳುವಾಗಲೇ ಗೋಡ್ಸೆ ಗುಂಡಿಗೆ ಬಲಿಯಾದರು.

 ಸ್ವಾತಂತ್ರ ಚಳವಳಿಯಲ್ಲಿ ಮತ್ತು ನಂತರ, ಖಾನ್ ಅಬ್ದುಲ್ ಗಫ್ಫಾರ್ ಖಾನ್ ಗಾಂಧೀಜಿಗೆ ಅತ್ಯಂತ ಆಪ್ತರಾಗಿದ್ದರು. ಅವರನ್ನು ಗಡಿನಾಡ ಗಾಂಧಿ ಎಂದು ಜನ ಕರೆಯುತ್ತಿದ್ದರು. ಅವರನ್ನು ಬಿಟ್ಟರೆ ಮೌಲಾನಾ ಅಬುಲ್ ಕಲಾಂ ಆಝಾದ, ಬಾಪೂಜಿಯ ಕಟ್ಟಾ ಅನುಯಾಯಿಯಾಗಿದ್ದರು. ಬ್ಯಾರಿಸ್ಟರ್ ಜಿನ್ನಾ ದೇಶ ವಿಭಜಿಸಿ ಪಾಕಿಸ್ತಾನ ಮಾಡಲು ಹೊರಟಾಗ ಇವರಿಬ್ಬರು ಅದನ್ನು ವಿರೋಧಿಸಿದ್ದರು.

ಗಾಂಧಿ ವೈಯಕ್ತಿಕವಾಗಿ ಧರ್ಮನಿಷ್ಠರಾಗಿದ್ದರು ಎಂಬುದು ನಿಜ. ಆದರೆ, ಸ್ವಾತಂತ್ರ ಹೋರಾಟಕ್ಕೆ ಧರ್ಮ ಮತ್ತು ದೇವರನ್ನು ಎಂದೂ ಬಳಸಿಕೊಳ್ಳಲಿಲ್ಲ. ಸ್ವಾತಂತ್ರ ಹೋರಾಟಕ್ಕೆ ಚರಕಾ ಬಾಪೂಜಿಯ ಸಂಕೇತವಾಗಿತ್ತು. ರಾಮನನ್ನು ಅವರು ಅದಕ್ಕಾಗಿ ಬಳಸಿಕೊಳ್ಳಲಿಲ್ಲ.
 ಗಾಂಧಿ, ಅಂಬೇಡ್ಕರ್, ಭಗತ್ ಸಿಂಗ್, ಸುಭಾಶ್ ಎಲ್ಲರ ಹೋರಾಟ, ತ್ಯಾಗ ಬಲಿದಾನದಿಂದ ಈ ದೇಶ ಸ್ವತಂತ್ರವಾಯಿತು. ಆದರೆ, ಈ ದೇಶ ಎಲ್ಲಿಗೆ ಬಂದು ತಲುಪಿದೆ ಅಂದರೆ 2018 ರ ಆಗಸ್ಟ್ 12ರಂದು ರಾಜಧಾನಿ ದಿಲ್ಲಿಯ ಜಂತರ್ ಮಂತರ್ ಬಳಿ ಫ್ಯಾಶಿಸ್ಟರ ಗುಂಪು ಸಂವಿಧಾನದ ಪ್ರತಿಯನ್ನು ಬೆಂಕಿ ಹಾಕಿ ಸುಟ್ಟು ಅಂಬೇಡ್ಕರರಿಗೆ ಧಿಕ್ಕಾರ ಕೂಗಿತು. 2019ರ ಜನವರಿ 30ರಂದು ಇನ್ನೊಂದು ಘಟನೆ ನಡೆಯಿತು. ಅಂದು ಗಾಂಧಿ ಹುತಾತ್ಮರಾದ ದಿನ. ಆ ದಿನ ಸಾಧ್ವಿಯೊಬ್ಬಳ ನೇತೃತ್ವದ ಮತಾಂಧರ ಗುಂಪು ಗಾಂಧೀಜಿ ಭಾವಚಿತ್ರಕ್ಕೆ ಗುಂಡು ಹಾರಿಸಿ ಗೋಡ್ಸೆಗೆ ಜಯವಾಗಲಿ ಎಂದು ಕೂಗಿ ಸಂಭ್ರಮಿಸಿತು.

ಗಾಂಧಿ, ಅಂಬೇಡ್ಕರ್, ಭಗತ್‌ಸಿಂಗ್, ಸುಭಾಶ್ಚಂದ್ರ ಬೋಸ್, ನೆಹರೂ, ಲೋಹಿಯಾ, ವಿವೇಕಾನಂದ ಇವರೆಲ್ಲ, ‘ಭಾರತ ಯಾವುದೇ ಧರ್ಮಕ್ಕೆ ಜನಾಂಗಕ್ಕೆ ಸೇರಿದ ದೇಶವಲ್ಲ. ಇದು ಎಲ್ಲರಿಗೂ ಸೇರಿದ ರಾಷ್ಟ್ರ’ ಎಂದು ಪ್ರತಿಪಾದಿಸಿದರು. ಗಾಂಧೀಜಿ ಇದಕ್ಕಾಗಿ ತಮ್ಮ ಪ್ರಾಣವನ್ನೇ ಕೊಟ್ಟರು.ಈ ಮಹಾಪುರುಷರು ಬಯಸಿದ, ಕುವೆಂಪು ಆಶಿಸಿದ ಈ ಸರ್ವಜನಾಂಗದ ಶಾಂತಿಯ ತೋಟವನ್ನು ಕಾಪಾಡಿಕೊಳ್ಳಲು ಸಂಕಲ್ಪ ಮಾಡಬೇಕಿದೆ. ಈಗ ಹೊರಟ ದಾರಿಯಲ್ಲೇ ಸಾಗಿದರೆ ಮುಂದೊಂದು ದಿನ ಈ ದೇಶ ನಾಶವಾಗಿ ಹೋಗುತ್ತದೆ. ಒಂದೇ ರಾಷ್ಟ್ರ, ಒಂದೇ ಧರ್ಮ, ಒಂದೇ ಭಾಷೆ, ಒಂದೇ ಪಕ್ಷ, ಒಬ್ಬನೇ ನಾಯಕ ಇವೆಲ್ಲ ಈ ನೆಲದ ಮಣ್ಣಿನ ಮಾತುಗಳಲ್ಲ. ಸಕಲ ಜೀವಾತ್ಮರಿಗೆ ಲೇಸನು ಬಯಸಿದ ಬಸವಣ್ಣನವರ ನಾಡಿದು. ಗಾಂಧಿ ಎಂಬ ಮಹಾ ಚೇತನ ನೀಡಿದ ಬೆಳಕು ಆರದಿರಲಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)