varthabharthi

ಸಂಪಾದಕೀಯ

ಕಟ್ಟಡ ಕಾರ್ಮಿಕರ ಸಮಾಧಿಯ ಮೇಲೆ ಅಭಿವೃದ್ಧಿಯ ಕಟ್ಟಡ

ವಾರ್ತಾ ಭಾರತಿ : 30 Sep, 2019


ತಾಜ್‌ಮಹಲನ್ನು ಯಾರು ನಿರ್ಮಿಸಿದರು ಎಂದಾಗ ಇತಿಹಾಸ ಪುಸ್ತಕ ‘ಶಹಜಹಾನ್’ ಎಂದು ತಟ್ಟನೆ ಉತ್ತರಿಸುತ್ತದೆ. ಒಬ್ಬ ಶಹಜಹಾನ್, ಆ ಬೃಹತ್ ತಾಜ್‌ಮಹಲ್‌ನ ನಕ್ಷೆ ರೂಪಿಸಿ, ಕಲ್ಲು ಹೊತ್ತು, ಕಟ್ಟಡ ನಿರ್ಮಿಸುವುದು ಸಾಧ್ಯವೇ? ಗೋಮಟೇಶ್ವರನನ್ನು ನಿರ್ಮಿಸಿದವರು ಯಾರು ಎಂದಾಗಲೂ ಉತ್ತರ ಥಟ್ಟನೆ ಹೊರಬೀಳುತ್ತದೆ. ಶಿಲ್ಪಕಲೆಯ ಆಗರವಾಗಿರುವ ಭಾರತದ ಇತಿಹಾಸ ವಿವಿಧ ಕೆತ್ತನೆಗಳ ವೈಭವಗಳನ್ನು ವರ್ಣಿಸುತ್ತಾ ಅದನ್ನು ನಿರ್ಮಿಸಿದ ರಾಜನಿಗೆ ನಾವು ಭೋಪರಾಕ್ ಹೇಳುತ್ತಾ ಬಂದಿದೆ. ಆದರೆ ಆ ಕಾಲಘಟ್ಟದಲ್ಲಿ ಅಂತಹ ಭವ್ಯ ನಿರ್ಮಾಣಗಳಿಗಾಗಿ ಕಲ್ಲು-ಮಣ್ಣು ಹೊತ್ತ ಕಾರ್ಮಿಕರ ಇತಿಹಾಸವನ್ನು ಹುಡುಕಿದರೆ ನಮಗೆ ನಿರಾಶೆ ಕಟ್ಟಿಟ್ಟ ಬುತ್ತಿ. ಯಾವುದೇ ಆಧುನಿಕ ತಂತ್ರಜ್ಞಾನಗಳಿಲ್ಲದ ಕಾಲಘಟ್ಟದಲ್ಲಿ ಕಾರ್ಮಿಕರು ಗುಲಾಮರಂತೆ ಹಗಲಿರುಳು ಬೆವರು ಮತ್ತು ರಕ್ತವನ್ನು ಸುರಿಸದೆ ಇದ್ದಿದ್ದರೆ ಅಂತಹ ಕಟ್ಟಡಗಳನ್ನು ನಿರ್ಮಿಸಲು ಸಾಧ್ಯವೇ ಇಲ್ಲ. ಆದುದರಿಂದ ಐತಿಹಾಸಿಕ ಭವ್ಯ ಕಟ್ಟಡಗಳನ್ನು ನೋಡುವಾಗ ನಾವು ಇತಿಹಾಸದಲ್ಲಿ ಯಾವ ರೀತಿಯಲ್ಲೂ ಸ್ಥಾನವನ್ನು ಪಡೆಯದ ಆ ಕಾರ್ಮಿಕರ ದಯನೀಯತೆನ್ನು ಸ್ಮರಿಸಬೇಕಾಗಿದೆ.

 ಅದೆಲ್ಲ ಇತಿಹಾಸದ ಮಾತಾಯಿತು. ಇಂದಿನ ದಿನಗಳಲ್ಲಾದರೂ ಆ ಕಾರ್ಮಿಕರ ಸ್ಥಿತಿ ಬದಲಾಗಿದೆಯೇ? ಇಂದು ಮುಗಿಲನ್ನು ಚುಂಬಿಸುವ ಬೃಹತ್ ಕಟ್ಟಡಗಳ ಮುಂದೆ, ಅದರ ಮಾಲಕರ, ಇಂಜಿನಿಯರ್‌ಗಳ ಹೆಸರುಗಳಷ್ಟೇ ಛಾಪಿಸಲ್ಪಟ್ಟಿವೆ. ಆದರೆ ಆ ಕಟ್ಟಡಗಳಿಗಾಗಿ ಹಗಲು ರಾತ್ರಿ ಕಲ್ಲು ಮಣ್ಣು ಹೊತ್ತ ಕಾರ್ಮಿಕರು ಎಲ್ಲಿ ಹೋದರು? ಅವರನ್ನು ಈ ಮಾಲಕರು, ಇಂಜಿನಿಯರ್‌ಗಳು ಹೇಗೆ ನಡೆಸಿಕೊಂಡರು? ಈ ದೇಶದ ಜನರಿಗಾಗಿ ಮನೆ, ಸೇತುವೆ, ರಸ್ತೆ ಇತ್ಯಾದಿಗಳನ್ನು ಕಟ್ಟಿಕೊಟ್ಟ ಈ ಜೀವಗಳಿಗಾಗಿ ದೇಶ ಎಷ್ಟರಮಟ್ಟಿಗೆ ಮಿಡಿದಿದೆ ಎಂದು ತನಿಖೆ ನಡೆಸಿದರೆ, ಇತಿಹಾಸ ಬದಲಾಗಿಲ್ಲ ಎನ್ನುವುದು ಮನವರಿಕೆಯಾಗುತ್ತದೆ. ದೇಶದಲ್ಲಿ ಅತೀಹೆಚ್ಚು ಕಾರ್ಮಿಕರನ್ನು ಹೊಂದಿರುವ ವಲಯಗಳಲ್ಲಿ ಒಂದಾಗಿದೆ ನಿರ್ಮಾಣ ಕಾಮಗಾರಿ ಕ್ಷೇತ್ರ ಮತ್ತು ಇವರಲ್ಲಿ ಶೇ.10 ರಷ್ಟು ಮಹಿಳಾ ಕಾರ್ಮಿಕರಾಗಿದ್ದಾರೆ. ನಗರಗಳಲ್ಲಿರುವ ಈ ಕಾರ್ಮಿಕ ವಲಯವನ್ನು ನಾವು ವಿಶೇಷವಾಗಿ ಯಾಕೆ ಪರಿಗಣಿಸಬೇಕು ಎಂದರೆ, ಇವರಲ್ಲಿ ಬಹುತೇಕರು ನಗರದಲ್ಲೇ ಹುಟ್ಟಿ ಬೆಳೆದವರಲ್ಲ. ಅವರೆಲ್ಲ ಹಳ್ಳಿಗಳಿಂದ ವಲಸೆ ಬಂದವರು. ಅನೇಕ ಸಂದರ್ಭಗಳಲ್ಲಿ ಕೃಷಿನಾಶವಾಗಿ ಸಾಲಸೋಲದಿಂದ ನೊಂದು ಬೆಂದವರು ಅಂತಿಮವಾಗಿ ತಮ್ಮ ಭೂಮಿಯನ್ನು ಕೈ ಬಿಟ್ಟು, ನಗರಕ್ಕೆ ವಲಸೆಬಂದವರಾಗಿದ್ದಾರೆ. ಇದೇ ಸಂದರ್ಭದಲ್ಲಿ, ಸರಕಾರದ ಒತ್ತುವರಿ ಸಂತ್ರಸ್ತರು, ಮಳೆ, ಬೆಳೆ ಸಂತ್ರಸ್ತರೆಲ್ಲರೂ ನಗರಗಳಿಗೆ ವಲಸೆ ಬಂದು, ಆಶ್ರಯಿಸುವುದು ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು. ಶೇ. 80ಕ್ಕೂ ಅಧಿಕ ಕಾರ್ಮಿಕರು ವಲಸಿಗರಾಗಿರುವುದರಿಂದ ಗುತ್ತಿಗೆದಾರರಿಗೆ ಇವರನ್ನು ಶೋಷಿಸುವುದು ಅತಿ ಸುಲಭ.

ಈ ಕಾರ್ಮಿಕರಲ್ಲಿ ಬಹುತೇಕರಿಗೆ ವಿಳಾಸಗಳಿರುವುದಿಲ್ಲ. ನಗರಗಳಲ್ಲಿ ಸಾವಿರಾರು ಜನರಿಗೆ ಮನೆಗಳನ್ನು ನಿರ್ಮಿಸಿಕೊಟ್ಟ ಕೈಗಳು ಇವರದಾದರೂ, ಇವರು ಬಳಿಕ ಆಶ್ರಯ ಪಡೆಯುವುದು ಕೊಳೆಗೇರಿಗಳಲ್ಲಿ. ಅಸಂಘಟಿತ ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಧ್ವನಿಯೆತ್ತುವ ಸಾಧ್ಯತೆ ತೀರಾ ಕಡಿಮೆ. ಇದು ವಲಸೆ ಕಾರ್ಮಿಕರ ಮಕ್ಕಳ ಶಿಕ್ಷಣ ಮತ್ತು ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮಗಳನ್ನು ಬೀರುತ್ತಿದೆ. ನಿರ್ಮಾಣ ತಾಣಗಳಲ್ಲಿ ಮಕ್ಕಳ ಬಹುದೊಡ್ಡ ಸಂಖ್ಯೆಯಿದ್ದರೂ ಅವರನ್ನು ಎಣಿಕೆ ಮಾಡುವ ವ್ಯವಸ್ಥಿತ ಪ್ರಯತ್ನ ಇನ್ನೂ ನಡೆದಿಲ್ಲ ಮತ್ತು ಇದರ ಫಲವಾಗಿ ಅವರ ಪೌಷ್ಟಿಕತೆ ಮತ್ತು ಆರೋಗ್ಯ ಅನುಭವಗಳು ದಾಖಲಾಗದೆ ಮತ್ತು ಪರಿಹಾರ ಕಾಣದೆ ಬಾಕಿಯುಳಿದಿದೆ. ಸರಕಾರದ ಅಲ್ಪಸ್ವಲ್ಪ ಯೋಜನೆಗಳು ಕೂಡ ಇವರನ್ನು ತಲುಪದಂತಹ ಸ್ಥಿತಿ ಇದೆ. ಅಹ್ಮದಾಬಾದ್‌ನ ವಿವಿಧ ನಿರ್ಮಾಣ ತಾಣದಲ್ಲಿ ಜೀವಿಸುತ್ತಿರುವ 131 ವಲಸಿಗ ಮಕ್ಕಳ ಅಧ್ಯಯನ ನಡೆಸಿದಾಗ ಇವರಲ್ಲಿ ಅರ್ಧದಷ್ಟು ಮಕ್ಕಳು ವಯಸ್ಸಿನ ಆಧಾರದಲ್ಲಿ ಕಡಿಮೆ ತೂಕ ಹೊಂದಿರುವುದು, ಶೇ.41 ರಷ್ಟು ಮಕ್ಕಳು ವಯಸ್ಸಿನ ಪ್ರಕಾರ ಕಡಿಮೆ ಎತ್ತರ ಹೊಂದಿರುವುದು ಮತ್ತು ಶೇ.22 ರಷ್ಟು ಮಕ್ಕಳು ಎತ್ತರದ ಪ್ರಕಾರ ಕಡಿಮೆ ತೂಕ ಹೊಂದಿರುವುದು ಪತ್ತೆಯಾಗಿವೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (2015-16)ಯ ಪ್ರಕಾರ, ದೇಶದಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಶೇ.35.5 ರಷ್ಟು ಮಕ್ಕಳು ಕಡಿಮೆ ತೂಕ ಹೊಂದಿದ್ದಾರೆ. ಶೇ.38.4 ರಷ್ಟು ಮಕ್ಕಳು ವಯಸ್ಸಿನ ಪ್ರಕಾರ ಕಡಿಮೆ ಎತ್ತರ ಹೊಂದಿದ್ದರೆ ಶೇ.21 ರಷ್ಟು ಎತ್ತರದ ಪ್ರಕಾರ ಕಡಿಮೆ ತೂಕ ಹೊಂದಿದ್ದಾರೆ. ಈ ಸಮಸ್ಯೆಯು ಎಸ್ಸಿ/ಎಸ್ಟಿ ಸಮುದಾಯಗಳಲ್ಲಿ ವ್ಯಾಪಕವಾಗಿವೆ ಎಂದು ಸಮೀಕ್ಷೆಯಲ್ಲಿ ತಿಳಿದುಬಂದಿದೆ.

ಕಳಪೆ ಆಹಾರ ಸೇವನೆ, ಅನಾರೋಗ್ಯಕರ ವಾತಾವರಣದಲ್ಲಿ ಜೀವನ ಮತ್ತು ಆರೋಗ್ಯಸೇವೆಯ ಕೊರತೆ ಅಪೌಷ್ಟಿಕತೆಗೆ ಪ್ರಮುಖ ಕಾರಣವಾಗಿದೆ. ವಲಸಿಗ ಕಾರ್ಮಿಕರಲ್ಲಿ ಈ ಸಮಸ್ಯೆ ಇನ್ನಷ್ಟು ಗಂಭೀರವಾಗಿದೆ. ನಿರ್ಮಾಣ ವಲಯದ ಶೇ.90 ರಷ್ಟು ಕೆಲಸಗಳು ಅನೌಪಚಾರಿಕವಾಗಿರುವುದರಿಂದ ಕಾರ್ಮಿಕರ ವೇತನ ಅನಿಯಮಿತವಾಗಿ ಪಾವತಿಸಲಾಗುತ್ತದೆ ಮತ್ತು ಕಾರ್ಮಿಕರು ಗುತ್ತಿಗೆದಾರರ ದಯೆಯಲ್ಲಿರಬೇಕಾಗುತ್ತದೆ. ನಗರವನ್ನು ನಾವು ಅಭಿವೃದ್ಧಿಯ ಮಾನದಂಡವಾಗಿ ಗುರುತಿಸುತ್ತೇವೆ. ನಗರವೆಂದರೆ ಈ ಬೃಹತ್ ಗಗನ ಚುಂಬಿ ಕಟ್ಟಡಗಳೆಂದೇ ಬಗೆದಿದ್ದೇವೆ. ಆ ಗಗನಚುಂಬಿ ಕಟ್ಟಡಗಳು ನಿಂತಿರುವುದು ವಲಸೆ ಕಾರ್ಮಿಕರ ಸಮಾಧಿಯ ಮೇಲೆ ಎನ್ನುವ ವಾಸ್ತವವನ್ನು ನಾವು ಸಂಪೂರ್ಣ ಮರೆತಿದ್ದೇವೆ. ಶೇ. 10ರಷ್ಟು ಮಹಿಳೆಯರು ಈ ಕ್ಷೇತ್ರದಲ್ಲಿ ಕೆಲಸ ಮಾಡುವುದರಿಂದ, ಮಕ್ಕಳು ಈ ಪರಿಸರದಲ್ಲೇ ಅನಾರೋಗ್ಯಗಳ ಜೊತೆಗೆ ಬೆಳೆಯಬೇಕಾಗುತ್ತದೆ. ತುಂಬು ಗರ್ಭಿಣಿಯರು ಕೂಡ ನಿರ್ಮಾಣ ಕೆಲಸದಲ್ಲಿ ಭಾಗಿಯಾಗುತ್ತಾರೆ. ಹೊಟ್ಟೆ ತುಂಬ ಊಟ ದೊರಕಿದರೆ ಅದೇ ಈ ಮಹಿಳಾ ಕಾರ್ಮಿಕರ ಭಾಗ್ಯ.

ಹೀಗಿರುವಾಗ, ಇನ್ನಿತರ ಸೌಲಭ್ಯಗಳನ್ನು ಇವರು ಬಯಸುವುದಾದರೂ ಹೇಗೆ? ನೋಟು ನಿಷೇಧದ ಬಳಿಕ ಈ ಕಟ್ಟಡ ಕಾರ್ಮಿಕರ ಸ್ಥಿತಿ ಇನ್ನಷ್ಟು ಚಿಂತಾಜನಕವಾಗಿದೆ. ನೋಟು ನಿಷೇಧವಾದಾಗ ಮೊದಲ ಆಘಾತ ಎದುರಿಸಿದ್ದು ನಿರ್ಮಾಣ ಕಾಮಗಾರಿಗಳು. ಇಂದಿಗೂ ಈ ಉದ್ಯಮ ಇನ್ನೂ ಚೇತರಿಸಿಕೊಂಡಿಲ್ಲ. ಇದರಿಂದಾಗಿ ಕಟ್ಟಡ ಕಾರ್ಮಿಕರು ಇನ್ನಷ್ಟು ಶೋಷಿತರಾಗುತ್ತಿದ್ದಾರೆ. ಹಳ್ಳಿಗಳಿಂದ ವಲಸೆ ಬಂದಿರುವ ಕಾರ್ಮಿಕರು ಮರಳಿ ತಮ್ಮ ಊರಿಗೆ ತೆರಳಿದ್ದಾರೆ. ಅಲ್ಲಿನ ಜಮೀನ್ದಾರರು, ಶ್ರೀಮಂತರ ತೋಟಗಳಲ್ಲಿ ಅವರು ಕೊಟ್ಟ ವೇತನಕ್ಕೆ ತೃಪ್ತರಾಗಿ ದುಡಿಯಬೇಕಾದಂತಹ ಸ್ಥಿತಿಗೆ ತಲುಪಿದ್ದಾರೆ. ಯಾವುದೇ ಸಂಘಟನೆಗಳ ಬೆಂಬಲವೂ ಇಲ್ಲದೆ ಚದುರಿ ಹೋಗಿರುವ ಈ ಕಾರ್ಮಿಕರ ಕುರಿತಂತೆ ಸರಕಾರ ಮತ್ತು ಸರಕಾರೇತರ ಸಂಸ್ಥೆಗಳು ಗಮನ ಹರಿಸಬೇಕಾಗಿದೆ. ಮೊತ್ತ ಮೊದಲಾಗಿ ಕಟ್ಟಡ ಕಾರ್ಮಿಕರನ್ನು ಗುರುತಿಸಿ ಅವರನ್ನು ಒಂದು ಸಂಘಟನೆಯ ರೂಪಕ್ಕೆ ಪರಿವರ್ತಿಸುವ ಕೆಲಸ ನಡೆಯಬೇಕಾಗಿದೆ. ಇದಾದ ಬಳಿಕ ಅವರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಧ್ಯಯನಗಳನ್ನು ನಡೆಸಿ ಅವರನ್ನು ಮೇಲೆತ್ತುವ ಕೆಲಸ ನಡೆಯಬೇಕು. ತಳಪಾಯವನ್ನು ನಿರ್ಲಕ್ಷಿಸಿ ಕಟ್ಟಿ ನಿಲ್ಲಿಸುವ ಅಭಿವೃದ್ಧಿ ಒಂದಲ್ಲ ಒಂದು ದಿನ ಬುಡ ಕಳಚಿ ಬಿದ್ದೇ ಬೀಳುತ್ತದೆ ಎನ್ನುವ ಎಚ್ಚರಿಕೆ ನಮಗಿರಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)