varthabharthi

ವಿಶೇಷ-ವರದಿಗಳು

ಮೈಸೂರು ದಸರಾ ಎಷ್ಟೊಂದು ಸುಂದರ...

ವಾರ್ತಾ ಭಾರತಿ : 30 Sep, 2019
ನೇರಳೆ ಸತೀಶ್‍ ಕುಮಾರ್

ಮೈಸೂರು,ಸೆ.30: ಮೈಸೂರು ದಸರಾ ಎಷ್ಟೊಂದು ಸುಂದರ....ಎಂಬ ಈ ಹಾಡು ಅಕ್ಷರಶ ಸತ್ಯವಾಗಿದ್ದು, ಈ ಹಾಡನ್ನು ಸಾಕ್ಷೀಕರಿಸುವಂತೆ ಮೈಸೂರು ದಸರಾ ಮಹೋತ್ಸವ ಆರಂಭಗೊಂಡಿದೆ.

ವಿಶ್ವವಿಖ್ಯಾತ ಮೈಸೂರು ದಸರಾವನ್ನು ಪ್ರತಿಯೊಬ್ಬರೂ ಒಮ್ಮೆಯಾದರೂ ವೀಕ್ಷಿಸಲೇಬೇಕು. ಮೈಸೂರು ದಸರೆಯ ಜಂಬೂ ಸವಾರಿ ಎಷ್ಟು ಮುಖ್ಯವೋ, ನವರಾತ್ರಿಯ ಒಂಬತ್ತು ದಿನಗಳು ಕೂಡಾ ಅಷ್ಟೇ ಮುಖ್ಯ. ಮೈಸೂರು ದಸರಾದಲ್ಲಿ ಏನಿದೆ ಎನ್ನುವುದಕ್ಕಿಂತ ಏನಿಲ್ಲ ಎಂದು ಹುಡುಕಬೇಕು. ಎಲ್ಲವೂ ಇಲ್ಲಿ ಅನಾವರಣಗೊಳ್ಳಲಿದೆ. ಅ.8ರಂದು ಶ್ರೀಚಾಮುಂಡೇಶ್ವರಿ ದೇವಿಯನ್ನು ಚಿನ್ನದ ಅಂಬಾರಿಯಲ್ಲಿ ಕುಳ್ಳಿರಿಸಿ ನಡೆಯುವ ಅಂಬಾರಿ ಮೆರವಣಿಗೆ ಪ್ರಮುಖ ಆಚರಣೆಯಾದರೆ, ಯುವಕರು, ಮಕ್ಕಳು, ಮಧ್ಯವಯಸ್ಕರು, ವಯೋವೃದ್ಧರೂ ಎಲ್ಲರೂ ನವರಾತ್ರಿಯ ಒಂಭತ್ತು ದಿನವೂ ಒಂದಲ್ಲಾ ಒಂದು ರೀತಿಯಲ್ಲಿ ಸಂಭ್ರಮಿಸಿ ಕಣ್ತುಂಬಿಕೊಳ್ಳಬಹುದು.

ಅ.29 ರಂದು ಚಾಮುಂಡಿ ಬೆಟ್ಟದಲ್ಲಿ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಇದರ ಬೆನ್ನಲ್ಲೇ ಮೈಸೂರು ನಗರದಲ್ಲಿ ವಿವಿಧ ಕಾರ್ಯಕ್ರಮಗಳು ಅನೇಕ ಸ್ಥಳಗಳಲ್ಲಿ ಆರಂಭಗೊಂಡಿವೆ. ಯುವ ಮನಸ್ಸುಗಳನ್ನು ಹುಚ್ಚೆದ್ದು ಕುಣಿಸಲು ಯುವ ದಸರಾ ಅ.1 ರಿಂದ ಆರಂಭಗೊಳ್ಳಲಿದ್ದು, ಖ್ಯಾತ ಬಾಲಿವುಡ್ ತಾರೆಯರು, ಕನ್ನಡ ಚಲನಚಿತ್ರದ ಖ್ಯಾತ ನಟ ನಟಿಯರು ಮತ್ತು ಸಂಗೀತ ನಿರ್ದೇಶಕರು ಭಾಗವಹಿಸಿ ಸಂಗೀತದ ರಸದೌತಣವನ್ನು ನಗರದ ಮಹರಾಜ ಕಾಲೇಜು ಮೈದಾನದಲ್ಲಿ ನೀಡಲಿದ್ದಾರೆ.

ನಗರದ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನ ಮತ್ತು ಲಲಿತ್ ಮಹಲ್ ಮೈದಾನಗಳಲ್ಲಿ ಆಹಾರ ಮೇಳ ಆಯೋಜಿಸಿದ್ದು, ದಕ್ಷಿಣ ಭಾರತ ಮತ್ತು ಉತ್ತರ ಭಾರತದ ಖಾಧ್ಯಗಳು ಕಡಿಮೆ ಬೆಲೆಯಲ್ಲಿ ದೊರೆಯಲಿದೆ. ಹಾಗೆಯೇ, ರಾಜ್ಯದ ದೇಶೀಯ ತಿಂಡಿಗಳ ರಸದೌತಣ ಇರಲಿದ್ದು, ಎಲ್ಲಾ ಬಗೆಯ ತಿಂಡಿ ತಿನಿಸುಗಳು ದೊರೆಯಲಿದೆ. ಸೋಲಿಗರು ತಯಾರಿಸುವ “ಬಾಂಬೂ ಬಿರಿಯಾನಿ” ಮತ್ತು “ಅಕ್ಕಿ ಪಾಯಸ” ಈ ಬಾರಿಯ ವಿಶೇಷತೆಗಳಲ್ಲೊಂದು.

ಅರಮನೆ ಆವರಣದಲ್ಲಿ ಸಂಗೀತ ಕಾರ್ಯಕ್ರಮ, ಜಗನ್ಮೋಹನ ಅರಮನೆಯಲ್ಲಿ ಮಕ್ಕಳ ದಸರಾ, ಜೆ.ಕೆ.ಮೈದಾನದಲ್ಲಿ ಮಹಿಳಾ ಮತು ರೈತ ದಸರಾ, ಕಲಾಮಂದಿರದಲ್ಲಿ ಕರಕುಶಲ ಮತ್ತು ಕವಿಗೋಷ್ಠಿ, ಕಡಾ ಕಚೇರಿ ಆವರಣದಲ್ಲಿ ಪುಸ್ತಕ ಮೇಳ, ಅರಮನೆ ಆವರಣದಲ್ಲಿ ರಂಗೋಲಿ ಸ್ಪರ್ಧೆ, ಕುವೆಂಪು ನಗರದ ಸೌಗಂಧಿಕ ಉದ್ಯಾನವನ ಮತ್ತು ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಯೋಗಾಸನ, ಕುಪ್ಪಣ್ಣ ಪಾರ್ಕ್‍ನಲ್ಲಿ ಫಲಪುಷ್ಪ ಪ್ರದರ್ಶನ, ವಸ್ತು ಪ್ರದರ್ಶನ, ಕುಸ್ತಿ ಪಂದ್ಯಾವಳಿ, ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ದಸರಾ ಕ್ರೀಡೋತ್ಸವ, ಲಲಿತ್ ಮಹಲ್ ಹೆಲಿಪ್ಯಾಡ್‍ನಲ್ಲಿ ಹೆಲಿ ರೈಡ್ಸ್, ಬಾನಂಗಳದಲ್ಲಿ ಚಿತ್ತಾರ ಮೂಡಿಸುವ ಏರ್ ಶೋ, ಸಾಹಸ ಜಲಕ್ರೀಡೆ, ವಾಕಥಾನ್, ಮನೆ ಮನೆ ದಸರಾ ಸೇರಿದಂತೆ ಅನೇಕ ಕಾರ್ಯಕ್ರಮಗಳು ಜರುಗಲಿವೆ.

ಬಣ್ಣದ ಲೋಕ : ಇಡೀ ಮೈಸೂರು ಬೆಳಕಿನ ಚಿತ್ತಾರದಲ್ಲಿ ಕಂಗೊಳಿಸುತ್ತಿದ್ದು, ವಿವಿಧ ಬಣ್ಣಗಳಿಂದ ಕೂಡಿದ ಎಲ್‍ಇಡಿ ಬಲ್ಬ್ ಗಳ ಚಿತ್ತಾರ ಮನಸೂರೆಗೊಳಿಸಿದೆ. ಸುಮಾರು 2.5 ಕೋಟಿ ರೂ ವೆಚ್ಚದಲ್ಲಿ ಇಡೀ ಮೈಸೂರು ನಗರದಲ್ಲಿ ಲೈಟಿಂಗ್ಸ್ ಹಾಕಲಾಗಿದ್ದು, ಬಣ್ಣ ಬಣ್ಣಗಳಿಂದ ಪಾರಂಪರಿಕ ಕಟ್ಟಡಗಳ ಮೇಲೆ ಮತ್ತು ವೃತ್ತಗಳಲ್ಲಿ ಹಾಕಲಾಗಿರುವ ಲೈಟ್‍ಗಳನ್ನು ನೋಡಲು ಎರಡು ಕಣ್ಣುಗಳೇ ಸಾಲದು ಎಂಬಂತಿವೆ. ಮೈಸೂರನ್ನು ಕಣ್ಣಿನಲ್ಲಿ ಕಟ್ಟಿಕೊಳ್ಳುವಂತೆ ಹೆಲಿ ರೈಡ್ಸ್ ಆಯೋಜಿಸಲಾಗಿದ್ದು, ಲಲಿತ್ ಮಹಲ್ ಹೆಲಿಪ್ಯಾಡ್‍ನಿಂದ 15 ನಿಮಿಷ ಹೆಲಿಕ್ಯಾಪ್ಟರ್ ನಲ್ಲಿ ಅರಮನೆ, ಚಾಮುಂಡಿ ಬೆಟ್ಟ, ಲಲಿತ್ ಮಹಲ್, ಕೆ.ಆರ್.ವೃತ್ತ ಸೇರಿದಂತೆ ಇಡೀ ಮೈಸೂರನ್ನು ನೋಡಬಹುದಾಗಿದೆ. 

ಕುಪ್ಪಣ್ಣ ಪಾರ್ಕಿನಲ್ಲಿ ಆಯೋಜಿಸಿರುವ ವಿವಿಧ ಬಗೆಯ ಹೂಗಳ ಫಲಪುಷ್ಪ ಪ್ರದರ್ಶನ ಮನಸ್ಸಿಗೆ ಮುದ ನೀಡಲಿದ್ದು, ಜಯಚಾಮರಾಜೇಂದ್ರ ಒಡೆಯರ್ ಅವರ ರೂಪದಲ್ಲಿ ಗುಲಾಬಿ ಹೂವಿನಿಂದ ಮೂಡಿರುವ ಚಿತ್ರ ಬಹಳ ಸುಂದರವಾಗಿದೆ. ಮಕ್ಕಳಿಗಾಗಿ ಹಲವು ರೀತಿಯ ಹೂಗಳಿಂದ ಚಿತ್ರಗಳನ್ನು ತಯಾರಿಸಲಾಗಿದೆ.

ಸಾರೋಟಿನಲ್ಲೂ ಒಂದು ಸುತ್ತು: ಹಿಂದೆ ಮಹರಾಜರು ಸಂಚರಿಸುತ್ತಿದ್ದ ಸಾರೋಟುಗಳು ಬಹು ಆಕರ್ಷಣೀಯವಾಗಿದ್ದು, ಪ್ರವಾಸಿಗರು ಸಾರೋಟಿನಲ್ಲಿ  ಮೈಸೂರು ನಗರವನ್ನು ಒಂದು ಸುತ್ತು ಹಾಕುತ್ತಾರೆ. ದಸರಾ ಸಂದರ್ಭದಲ್ಲಂತೂ ಸಾರೋಟಿಗೆ ಹೆಚ್ಚಿನ ಬೇಡಿಕೆ ಬಂದಿದೆ.

ಯುವ ಮನಸ್ಸುಗಳು ತಮ್ಮ ಕವಿತೆಗಳನ್ನು ವಾಚಿಸಲು ಕವಿಗೋಷ್ಠಿ ಆಯೋಜಿಸಡಲಾಗಿದ್ದು, ರಾಜ್ಯಾದ್ಯಂತ ಇರುವ ಕವಿಗಳು ಆಗಮಿಸಲಿದ್ದಾರೆ.
ಒಟ್ಟಿನಲ್ಲಿ ಮೈಸೂರಲ್ಲಿ ಎಲ್ಲವನ್ನೂ ನೋಡುವುದರ ಜೊತೆಗೆ ಎಲ್ಲಾ ಬಗೆ ಬಗೆಯ ಆಹಾರಗಳನ್ನು ಸೇವಿಸಿ, ನಮಗೆ ಬೇಕಾದ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)