varthabharthiನಿಮ್ಮ ಅಂಕಣ

ಮಹಿಷಮಂಡಳದ ಹುಡುಕಾಟದಲ್ಲಿ...

ವಾರ್ತಾ ಭಾರತಿ : 30 Sep, 2019
-ಮಧು ಬಿ. ಎನ್., ಬೋಕಾರೋ, ಜಾರ್ಖಂಡ್

ಪ್ರೊ. ಮಹೇಶ ಚಂದ್ರ ಗುರು ಅವರು ತಮ್ಮ 'ಮೂಲನಿವಾಸಿಗಳ ಮಹಿಷ ದಸರಾ 2019' ಬರಹದಲ್ಲಿ ಮಹಿಷಾಸುರನೆಂಬವನು ಮೈಸೂರು ಪ್ರಾಂತವನ್ನು ಬಹಳ ಹಿಂದೆ ಆಳುತ್ತಿದ್ದನೆಂದೂ, ಆತ ಬೌದ್ಧನಾಗಿದ್ದನೆಂದೂ ಪ್ರತಿಪಾದಿಸಿದ್ದಾರೆ. ಅದಕ್ಕಾಗಿ ಇತಿಹಾಸಕಾರರನ್ನು ಹೆಸರಿಸಿದ್ದಾರೆ. ಆದರೆ, ಬಹಳ ಹಿಂದೆಯೇ ಅಂದರೆ ಸ್ವಾತಂತ್ರ್ಯಪೂರ್ವದಲ್ಲಿಯೇ ಬ್ರಿಟನ್ ಮೂಲದ ಜೆ.ಎಫ್. ಫ್ಲೀಟ್ ಎಂಬ ಭಾರತೀಯ ನಾಗರೀಕ ಸೇವೆಯ ಅಧಿಕಾರಿಯು 'ಮಹಿಷಮಂಡಲ ಮತ್ತು ಮಹಿಷ್ಮತಿ' ಎಂಬ ತಮ್ಮ ದೀರ್ಘ ಲೇಖನದಲ್ಲಿ ಮಹಿಷಮಂಡಲವನ್ನು ಭೌಗೋಳಿಕವಾಗಿ ಹುಡುಕುತ್ತಾ ಅದನ್ನು ಈಗಿನ ಮಧ್ಯಪ್ರದೇಶ ರಾಜ್ಯದ ಇಂದೋರ್ ಬಳಿಯ ಖಾಂಡ್ವಾ ಜಿಲ್ಲೆಯ 'ಮಂಧಾಟ'ವೆಂಬ ದ್ವೀಪವೆಂದು ಆಧಾರ ಸಹಿತವಾಗಿ ನಿರೂಪಿಸಿದ್ದಾರೆ. ಈ 'ಮಂಧಾಟ'ವು ನರ್ಮದಾ ನದಿಯ ನಡುವಲ್ಲಿನ ಒಂದು ದ್ವೀಪ. ಈ ಪ್ರದೇಶದಲ್ಲಿ ವಾಸಿಸುವ ಜನರನ್ನು 'ಮಹಷಕ', 'ಮಹಿಷಿಕ' ಎಂಬುದಾಗಿ ಕರೆಯುತ್ತಾರೆ ಎಂದು ವಿವರಿಸಿದ್ದಾರೆ.

ಪ್ರೊ. ಮಹೇಶ ಚಂದ್ರ ಗುರುರವರು ಅಕಾಡಮಿಕ್ ವಲಯದಲ್ಲಿದ್ದವರು, ವಿದ್ವಾಂಸರು. ಇವರು ಮಹಿಷಮಂಡಲದ ಇತಿಹಾಸವನ್ನು ಇನ್ನೂ ಕೂಲಂಕಷವಾಗಿ ಪರಿಶೀಲಿಸಬಹುದಾಗಿತ್ತೇನೋ. ಅವರು ತಮ್ಮ ಬರಹದಲ್ಲಿ ವಿವರಿಸಿರುವಂತೆ ಭಾರತದ ಮೂಲನಿವಾಸಿಗಳ ಮೇಲಿನ ಆರ್ಯರ ದೌರ್ಜನ್ಯ, ದಬ್ಬಾಳಿಕೆ, ಸಾಂಸ್ಕೃತಿಕ ಆಕ್ರಮಣ ಮುಂತಾದವುಗಳ ಸತ್ಯಾಸತ್ಯತೆಯ ಬಗ್ಗೆ ಯಾವುದೇ ತಕರಾರಿಲ್ಲ.

ನನ್ನ ಸೀಮಿತ ಪ್ರವಾಸದ ಅನುಭವದ ಆಧಾರದಲ್ಲಿ ಮಹಿಷಾಸುರಮರ್ದಿನಿ, ಕಾಳಿ ಮಾತೆಯರು ಉತ್ತರ ಮತ್ತು ಪೂರ್ವ ಭಾರತದಲ್ಲಿ ಬಹಳ ಹೆಸರುವಾಸಿ. ಹಲವಾರು ದೇವಸ್ಥಾನಗಳು, ಪ್ರಾಚೀನ ವಿಗ್ರಹಗಳು, ಹಲವಾರು ಆಚರಣೆಗಳನ್ನು ನಾವು ಇಂದಿಗೂ ಕಾಣಬಹುದಾಗಿದೆ. ಅಲ್ಲದೇ, ಮೈಸೂರಿನ ಒಡೆಯರು ಉತ್ತರ ಭಾರತ ಮೂಲದವರು. 13ನೇ ಶತಮಾನದಲ್ಲಿ ತಮ್ಮ ಆಗಮನದೊಂದಿಗೆ ಅವರು ತಮ್ಮಾಂದಿಗೆ ಅಂದು ಚಾಲ್ತಿಯಲ್ಲಿದ್ದ ಮಹಿಷಮಂಡಲದ ಐತಿಹ್ಯವನ್ನು ತಂದಿದ್ದಿರಬೇಕು. ಆದರೆ ಗಮನಿಸಬೇಕಾದ ಅಂಶವೆಂದರೆ ಒಡೆಯರ್ ಅರಸರು ಮಹಿಷಾಸುರನ(ಅಸುರನ) ಬೃಹತ್ ಮೂರ್ತಿಯನ್ನು ಕೆತ್ತಿಸಿದಲ್ಲದೇ ಆತನ ಹೆಸರಿನಿಂದಲೇ ತಮ್ಮ ಸಂಸ್ಥಾನವನ್ನು ಕರೆಯುವಂತಾಗಿದ್ದು ಭಾರತದ ಸಮಸ್ತ ಮೂಲನಿವಾಸಿಗಳಿಗೆ ಗೌರವ ಸಂದಂತಾಗಿದೆ. ಒಬ್ಬ ಅಸುರನ ಹೆಸರಿನಿಂದಲೇ ಒಂದು ಊರು, ಒಂದು ಸಂಸ್ಥಾನವನ್ನು ಕರೆಯುವ ನಿದರ್ಶನ ಕೇವಲ ಮೈಸೂರಿಗಷ್ಟೇ ಸೀಮಿತವಲ್ಲ. ಮಹಾಬಲ ಮತ್ತು ಅತಿಬಲರೆಂಬ ಅಸುರ ಸೋದರರ ಹೆಸರಿನಿಂದಲೇ ಮಹಾರಾಷ್ಟ್ರದ ಮಹಾಬಲೇಶ್ವರವೆಂಬ ಗಿರಿಧಾಮವಿದೆ. ಜಲಂಧರವೆಂಬ ನಗರವು ಜರಾಸಂಧನೆಂಬ ರಾಕ್ಷಸನ ಹೆಸರಿನ ಹಿನ್ನೆಲೆಯನ್ನು ಹೊಂದಿದೆ. ಛತ್ತೀಸ್ ಘರ್ ರಾಜ್ಯವು ಬಕಾಸುರನ ವಂಶದ 36 ಮನೆಗಳ(ಕುಟುಂಬ) ಮೂಲದಿಂದಲೇ ತನ್ನ ಹೆಸರನ್ನು ಹೊಂದಿದೆ. ವೈದಿಕ ಪರಂಪರೆಯಲ್ಲಿ ಒಂದೊಂದು ಹಬ್ಬ ಹರಿದಿನವು ಒಬ್ಬೊಬ್ಬ ಅಸುರನ ವಧೆ, ನಿರ್ನಾಮ, ಅವನತಿಯನ್ನೇ ಆಧರಿಸಿದ್ದದ್ದಾಗಿರುತ್ತದೆ. ಪ್ರೊ.ಮಹೇಶ ಚಂದ್ರ ಗುರು ಅವರು ಮಹಿಷಾಸುರನು ಮೂಲನಿವಾಸಿಗಳ ದೊರೆಯಾಗಿದ್ದನೆಂದು ಆತನ ಮಹಿಷಮಂಡಳವೇ ಮೈಸೂರಾಗಿತ್ತೆಂದು ಒತ್ತು ನೀಡಿ ವಿವರಿಸುವ ಬದಲಾಗಿ ಅಸುರ ದೊರೆಗಳ ಅವನತಿ ಆರ್ಯರಿಂದಾಯಿತೆಂಬುದನ್ನು ಮೈಸೂರಿಗರಿಗೆ ವಿವರಿಸಿ ಮನದಟ್ಟಾಗುವಂತೆ ಪ್ರಚಾರ ಮಾಡಬಹುದಿತ್ತು. ಈ ನಿಟ್ಟಿನಲ್ಲಿ ಪ್ರೊ. ಮಹೇಶ ಚಂದ್ರ ಗುರುರವರಿಗೆ ಈ ದೇಶದ ಸಮಸ್ತ ಮೂಲನಿವಾಸಿಗಳ ಬೆಂಬಲವಿರುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)