varthabharthi

ಸಂಪಾದಕೀಯ

ಗೋಡ್ಸೆಯ ನಕಲಿ ರಾಮನಿಗೆ ಗಾಂಧಿಯ ಅಸಲಿ ಶ್ರೀರಾಮನೇ ಉತ್ತರ

ವಾರ್ತಾ ಭಾರತಿ : 2 Oct, 2019

ಈ ಬಾರಿಯ ಗಾಂಧಿ ಜಯಂತಿ ಭಾರತದ ಪಾಲಿಗೆ ಹಲವು ಕಾರಣಗಳಿಗಾಗಿ ವಿಶೇಷವಾಗಿದೆ. ಮುಖ್ಯವಾಗಿ, ಗಾಂಧಿ ಈಗ ಬದುಕಿದ್ದಿದ್ದರೆ ಅವರಿಗೆ 150 ವರ್ಷ ಪೂರ್ತಿಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ದೇಶ ಮಾತ್ರವಲ್ಲ, ವಿಶ್ವವೇ ಗಾಂಧಿಯನ್ನು ವಿಶೇಷ ರೀತಿಯಲ್ಲಿ ಸ್ಮರಿಸುವುದಕ್ಕೆ ಸಿದ್ಧತೆ ನಡೆಸಿವೆ. ವರ್ತಮಾನದಲ್ಲಿ ಭಾರತದ ಪಾಲಿಗೆ ಗಾಂಧೀಜಿ ಹಲವು ಕಾರಣಗಳಿಗಾಗಿ ಹೆಚ್ಚು ಪ್ರಸ್ತುತವಾಗುತ್ತಿದ್ದಾರೆ. ಒಂದೆಡೆ ಅಂಬೇಡ್ಕರ್ ಚಿಂತನೆಗಳು ದೇಶದ ಮುನ್ನೆಲೆಗೆ ಬರುತ್ತ್ತಿದೆ. ಈ ದೇಶಕ್ಕೆ ಶಾಪದಂತೆ ಅಂಟಿಕೊಂಡಿರುವ ಜಾತೀಯತೆಯನ್ನು ಗಾಂಧಿ ಚಿಂತನೆಯ ಮೂಲಕ ಕಿತ್ತೊಗೆಯಲು ಸಾಧ್ಯವಿಲ್ಲ ಎನ್ನುವುದರ ಕುರಿತಂತೆ ದಲಿತರಿಗೆ ಸ್ಪಷ್ಟವಾಗಿದೆ. ಜಾತಿಭೇದಗಳ ಕುರಿತಂತೆ ಗಾಂಧೀಜಿ ಕೆಲವು ವಿಷಯಗಳಲ್ಲಿ ಮೃದುವಾಗಿರುವುದು ಇದಕ್ಕೆ ಕಾರಣವಿರಬಹುದು. ಜಾತೀಯತೆಯ ವಿಷಯದಲ್ಲಿ ಗಾಂಧೀಜಿಯ ಕೆಲವು ವಿರೋಧಾಭಾಸ ನಿಲುವುಗಳನ್ನು ಮುಂದಿಟ್ಟುಕೊಂಡು ಅವರನ್ನು ಸಾರಾಸಗಟಾಗಿ ನಿರಾಕರಿಸುವ ಪ್ರಯತ್ನವೂ ನಡೆಯುತ್ತಿದೆ. ಅಂಬೇಡ್ಕರ್ ಮತ್ತು ಗಾಂಧೀಜಿಯನ್ನು ಎದುರು-ಬದುರಾಗಿ ನಿಲ್ಲಿಸಿ ಅವರನ್ನು ಕಚ್ಚಾಟಕ್ಕಿಳಿಸುವುದು ಇಂದು ನಾವು ಮಾಡುತ್ತಿವ ಬಹುದೊಡ್ಡ ತಪ್ಪು. ಸ್ವತಃ ದಲಿತ ಸಮುದಾಯದಲ್ಲಿ ಹುಟ್ಟಿ, ಅವಮಾನಗಳನ್ನು ಅನುಭವಿಸಿ ಅವುಗಳ ವಿರುದ್ಧ ನೇರ ಹೋರಾಟಕ್ಕಿಳಿದ ಅಂಬೇಡ್ಕರ್‌ಗೂ, ಜಾತಿ ಮಾತ್ರವಲ್ಲ, ಈ ದೇಶದ ಆತ್ಮವನ್ನು ನಾಶ ಮಾಡಲು ಬೇರೆ ಬೇರೆ ರೂಪಗಳಲ್ಲಿ ಹೊಂಚು ಹಾಕಿ ಕೂತಿರುವ ಪ್ರತಿಗಾಮಿ ಶಕ್ತಿಗಳನ್ನು ಗುರುತಿಸಿ, ಇಡೀ ದೇಶವನ್ನೇ ಅವುಗಳ ವಿರುದ್ಧ ಹೋರಾಡುವುದಕ್ಕೆ ಸಜ್ಜುಗೊಳಿಸಲು ಮುಂದಾದ ಗಾಂಧೀಜಿಗೂ ಭಿನ್ನಮತಗಳಿರುವುದು ಸಹಜ. ಪ್ರತಿಗಾಮಿ ಶಕ್ತಿಗಳ ವಿರುದ್ಧ ಹೋರಾಟದಲ್ಲೂ ಅವರು ಮೃದು ನಿಲುವನ್ನೇ ಬಳಸಿದವರು. ಬದಲಾವಣೆಗಳು ಹೊರಗಿನ ಒತ್ತಡದಿಂದ ನಡೆಯದೆ, ಒಳಗಿನಿಂದಲೇ ನಡೆಯಬೇಕು ಎಂದು ಬಲವಾಗಿ ನಂಬಿದವರು. ಆದುದರಿಂದಲೇ ಅವರ ಕೆಲವು ಚಿಂತನೆಗಳು, ವಾಸ್ತವಕ್ಕೆ ತೀರಾ ದೂರ ಅನ್ನಿಸಿ ಬಿಡುವುದಿದೆ. ಹಾಗೆಂದು ನಾವು ಅವರನ್ನು ಸಾರಾಸಗಟಾಗಿ ತಿರಸ್ಕರಿಸಿದ್ದೇ ಆದರೆ, ಗಾಂಧೀಜಿ ಯಾವ ಪ್ರತಿಗಾಮಿ ರಾಜಕೀಯ ಶಕ್ತಿಗಳ ವಿರುದ್ಧ ಹೋರಾಡಿದರೋ, ಆ ಶಕ್ತಿಗಳೇ ಅದರ ಲಾಭವನ್ನು ತನ್ನದಾಗಿಸಿಕೊಳ್ಳುತ್ತವೆ ಎನ್ನುವುದನ್ನು ನಾವು ಮರೆಯಬಾರದು.

ಗಾಂಧಿ ಹುಟ್ಟಿ 150 ವರ್ಷವಾಗಿರುವ ಈ ಸಂದರ್ಭದಲ್ಲಿ ಗಾಂಧೀಜಿ ಯಾವ ‘ಹಿಂದುತ್ವ’ವಾದಿ ಶಕ್ತಿಯನ್ನು ಒಬ್ಬ ‘ಹಿಂದೂ’ ಆಗಿ ಬದುಕಿನುದ್ದಕ್ಕೂ ಎದುರಿಸಿದರೋ, ಯಾವ ‘ಹಿಂದುತ್ವ’ವಾದಿ ಶಕ್ತಿಗಳು ಗಾಂಧೀಜಿಯನ್ನು ‘ಒಬ್ಬ ಶ್ರೇಷ್ಠ ಹಿಂದೂ’ ಎನ್ನುವ ಕಾರಣಕ್ಕಾಗಿಯೇ ಕೊಂದು ಹಾಕಿದರೋ ಆ ಶಕ್ತಿಗಳು ದೇಶದಲ್ಲಿ ವಿಜೃಂಭಿಸುತ್ತಿವೆ. ಈ ಹಿಂದೆ ಆ ಹಿಂದುತ್ವವಾದಿ ಶಕ್ತಿಗಳು ಬಹಿರಂಗವಾಗಿ ಗುರುತಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದವು. ಬ್ರಿಟಿಷರಿಗೆ ಮಂಡಿಯೂರಿ, ಸ್ವಾತಂತ್ರಹೋರಾಟಗಾರರ ವಿರುದ್ಧ ಸಂಚುಗಳನ್ನು ನಡೆಸುತ್ತಾ ತಮ್ಮ ಸಂಘಟನೆಗಳನ್ನು ಬೆಳೆಸುತ್ತಾ ಬಂದ ಸುದೀರ್ಘ ಇತಿಹಾಸ ಅದಕ್ಕಿದೆ. ಸ್ವತಂತ್ರ ದೇಶಕ್ಕಾಗಿ ಒಂದೆಡೆ ಹೋರಾಟ ನಡೆಯುತ್ತಿರುವಾಗಲೇ ಜನರ ನಡುವೆ ‘ದ್ವಿರಾಷ್ಟ್ರ ಸಿದ್ಧಾಂತ’ವನ್ನು ಬಿತ್ತಿ, ಹಿಂದೂ-ಮುಸ್ಲಿಮರ ನಡುವೆ ಅಭದ್ರತೆಯನ್ನು ಸೃಷ್ಟಿಸಿ ಈ ದೇಶ ಇಬ್ಭಾಗವಾಗಲು ಈ ಪ್ರತಿಗಾಮಿ ಶಕ್ತಿಯೇ ಕಾರಣವಾಯಿತು. ಈ ದೇಶವನ್ನು ಒಡೆದು, ಸ್ವತಂತ್ರ ಭಾರತವನ್ನು ‘ಹಿಂದೂರಾಷ್ಟ್ರ’ವನ್ನಾಗಿಸುವುದು ಅವರ ಗುರಿಯಾಗಿತ್ತು. ಆದರೆ ಈ ದೇಶವನ್ನು ಒಂದು ಧರ್ಮದ ತಳಹದಿಯಲ್ಲಿ ರಚಿಸಲು ಕಟ್ಟ ಕಡೆಯವರೆಗೂ ಗಾಂಧೀಜಿ ಅವಕಾಶವನ್ನು ನೀಡಲಿಲ್ಲ. ತಮ್ಮ ಉದ್ದೇಶ ವಿಫಲವಾದ ಹತಾಶೆಯಿಂದ ಹಿಂದುತ್ವವಾದಿಗಳು ಗಾಂಧೀಜಿಯನ್ನು ಕೊಂದು ಹಾಕಿದರು. ಈ ದೇಶವನ್ನು ಒಡೆಯುವುದಕ್ಕೆ ‘ಹಿಂದೂ ಮಹಾ ಸಭಾ’ ಬಳಸಿದ ‘ಹಿಂದೂ’ ಎನ್ನುವ ಅಸ್ತ್ರಕ್ಕೆ ಪ್ರತಿಯಾಗಿ, ಮಹಾತ್ಮ್ಮಾಗಾಂಧೀಜಿಯೂ ಅದೇ ಹಿಂದೂ ಎನ್ನುವ ಅಸ್ತ್ರವನ್ನು ಬಳಸಿ ಎದುರಿಸಿ ಗೆದ್ದರು. ತನ್ನನ್ನು ತಾನು ಹಿಂದೂ ಎಂದು ಗುರುತಿಸಿಕೊಳ್ಳಲು ಎಂದೂ ಹಿಂಜರಿಯದ ಗಾಂಧೀಜಿ, ಒಬ್ಬ ಶ್ರೇಷ್ಠ ಹಿಂದೂ ಹೇಗಿರಬೇಕು ಎನ್ನುವುದಕ್ಕೆ ಮಾದರಿಯಾಗಿ ಬದುಕಿದರು. ಸ್ವಾತಂತ್ರ ಪೂರ್ವದಲ್ಲಿ, ಹಿಂದೂ ಮಹಾ ಸಭಾ ‘ಹಿಂದೂ ಧರ್ಮ’ವನ್ನು ತಿರುಚಿ, ದುರ್ಬಳಕೆಗೊಳಿಸಿ, ತನ್ನ ಸ್ವಾರ್ಥಸಾಧಿಸುವುದಕ್ಕೆ ಹವಣಿಸುತ್ತಿರುವುದನ್ನು ಸೂಕ್ಷ್ಮವಾಗಿ ಗ್ರಹಿಸಿದ್ದ ಗಾಂಧೀಜಿ, ಅದಕ್ಕೆ ಪ್ರತಿಯಾಗಿ ಈ ದೇಶದ ಸರ್ವ ಜನರನ್ನು ಒಳಗೊಳ್ಳುವಂತಹ ‘ಹಿಂದೂ ಧರ್ಮ’ದ ಮಾದರಿಯೊಂದನ್ನು ಬಿತ್ತಿ ಬೆಳೆಸಿದರು. ಸ್ವತಃ ಶ್ರೀರಾಮನ ಬಹುದೊಡ್ಡ ಭಕ್ತನಾಗಿ ಗುರುತಿಸಿಕೊಂಡ ಗಾಂಧೀಜಿ ಎಂದಿಗೂ ರಾಮನನ್ನು ಹುಡುಕಿಕೊಂಡು ಗುಡಿ ಗೋಪುರಗಳಿಗೆ ಹೋಗಲಿಲ್ಲ. ಒಮ್ಮೆ ಕಾಶಿಯಾತ್ರೆ ಮಾಡಿದ ಅವರು, ಕ್ಷೇತ್ರಗಳ ಪರಿಸರ ಭಕ್ತರ ಹೊಲಸಿನಿಂದ ಕಲುಷಿತಗೊಂಡಿರುವುದನ್ನು ನೋಡಿ ‘ಇಲ್ಲಿ ನನ್ನ ದೇವರು ಇರಲು ಸಾಧ್ಯವೇ ಇಲ್ಲ’ ಎಂದು ಬಹಿರಂಗವಾಗಿ ಸಾರಿದರು. ರಾಮನಿಗಾಗಿ ಮಂದಿರವೊಂದನ್ನು ನಿರ್ಮಾಣ ಮಾಡುವ ಅವಶ್ಯಕತೆ ಅವರಿಗೆ ಯಾವತ್ತೂ ಕಂಡು ಬರಲಿಲ್ಲ. ‘ರಾಮರಾಜ್ಯ’ದ ಪದ ಬಳಕೆ ಮಾಡಿದವರೂ, ಅದನ್ನು ಚಾಲ್ತಿಗೆ ತಂದವರೂ ಗಾಂಧೀಜಿ. ರಾಮ ಎಂದರೆ ಅವರ ಪಾಲಿಗೆ ಬಿಲ್ಲು ಬಾಣ ಹಿಡಿದು ಅನ್ಯ ಧರ್ಮೀಯರನ್ನು ಬೆದರಿಸುವುದಕ್ಕೆ ಬಳಸುವ ಬೆದರು ಬೊಂಬೆಯಲ್ಲ. ಬದಲಿಗೆ, ಸತ್ಯ, ತ್ಯಾಗ, ವಚನಪರಿಪಾಲನೆ, ಸರಳತೆ, ಸಚ್ಚಾರಿತ್ರ...ಇತ್ಯಾದಿಗಳನ್ನು ಅವರು ರಾಮನ ಹೆಸರಲ್ಲಿ ನಂಬಿದ್ದರು ಮತ್ತು ಅದನ್ನೇ ಆರಾಧಿಸುತ್ತಿದ್ದರು. ಆ ಆದರ್ಶದ ತಳಹದಿಯಲ್ಲಿ ಅವರು ‘ರಾಮರಾಜ್ಯ’ವನ್ನು ಕಟ್ಟಲು ಬಯಸಿದ್ದರು. ಗಾಂಧೀಜಿಯ ರಾಮನಿಗೂ, ಸಂಘಪರಿವಾರದ ರಾಮನಿಗೂ ಇರುವ ಬಹುದೊಡ್ಡ ವ್ಯತ್ಯಾಸ ಇದು. ಮಹಾತ್ಮಾ ಗಾಂಧೀಜಿ ರಾಮನನ್ನು ಪ್ರತಿ ಸಂಜೆ ತನ್ನ ಆಶ್ರಮದಲ್ಲಿ ಭಜಿಸುತ್ತಿದ್ದರು. ಆಗ ಅವರ ಎಡ, ಬಲದಲ್ಲಿ ಅಬುಲ್ ಕಲಾಂ ಆಝಾದ್, ಖಾನ್ ಅಬ್ದುಲ್ ಗಫ್ಫಾರ್ ಖಾನ್‌ರಂತಹ ಮುಸ್ಲಿಮ್ ಮಹನೀಯರಿರುತ್ತಿದ್ದರು. ಗಾಂಧಿಯ ರಾಮ ಹಿಂದೂ ಮುಸ್ಲಿಮರನ್ನು ಬೆಸೆದರೆ, ಗೋಡ್ಸೆಯ ರಾಮ ಹಿಂದೂ ಮುಸ್ಲಿಮರನ್ನು ಒಡೆಯುವ ಉದ್ದೇಶವನ್ನು ಹೊಂದಿದ್ದಾನೆೆ.

ಸಂಘಪರಿವಾರದವರು ನಿಜಕ್ಕೂ ರಾಮಭಕ್ತರೇ ಆಗಿದ್ದರೆ ಪರಮ ರಾಮಭಕ್ತನಾಗಿದ್ದ, ಈ ದೇಶ ರಾಮರಾಜ್ಯವಾಗಬೇಕು ಎಂದು ಕನಸುಕಂಡಿದ್ದ ಗಾಂಧೀಜಿಯನ್ನು ಯಾಕೆ ಕೊಂದರು? ಎನ್ನುವ ಪ್ರಶ್ನೆ ಗಾಂಧಿ ಜಯಂತಿಗೆ 150 ವರ್ಷವಾಗುವ ಈ ಸಂದರ್ಭದಲ್ಲಿ ಮುನ್ನೆಲೆಗೆ ಬರಬೇಕು. ಈ ದೇಶಕ್ಕೆ ಗಾಂಧೀಜಿಯ ಹಿಂದೂ ಧರ್ಮ ಬೇಕೆ ಅಥವಾ ಗೋಡ್ಸೆ, ಚಿನ್ಮಯಾನಂದ, ಪ್ರಜ್ಞಾಸಿಂಗ್ ಠಾಕೂರ್‌ರ ಹಿಂದೂ ಧರ್ಮ ಬೇಕೆ ಎನ್ನುವ ಚರ್ಚೆಗೆ ಈ ಮೂಲಕ ಚಾಲನೆ ಸಿಗಬೇಕು. ರಾಮನನ್ನು ಮುಂದಿಟ್ಟು ಗಾಂಧೀಜಿ ಪ್ರಜಾಸತ್ತಾತ್ಮಕ ದೇಶವನ್ನು ಕಟ್ಟಿದರೆ, ಹಿಂದುತ್ವವಾದಿಗಳು ಅದೇ ರಾಮನನ್ನು ತಿರುಚಿ ಪ್ರಜಾಪ್ರಭುತ್ವದ ದೌರ್ಬಲ್ಯಗಳನ್ನು ಬಳಸಿಕೊಂಡು ಮತ್ತೆ ಮನುವಾದಿ ಭಾರತವನ್ನು ಕಟ್ಟಲು ಹೊರಟಿದ್ದಾರೆ. ಅದರಲ್ಲಿ ಭಾಗಶಃ ಯಶಸ್ವಿಯಾಗಿದ್ದಾರೆ. ಗಾಂಧೀಜಿಯ ವೌಲ್ಯಗಳನ್ನು ಮುಂದಿಟ್ಟುಕೊಂಡು ಭಾರತವನ್ನು ಮುನ್ನಡೆಸುತ್ತಿದ್ದ ನಾಯಕರು ಕಣ್ಮರೆಯಾಗಿ ಆ ಜಾಗದಲ್ಲಿ, ಗೋಡ್ಸೆಯನ್ನು ಎದೆಯೊಳಗಿಟ್ಟು ಗಾಂಧಿಯನ್ನು ಮತ್ತು ರಾಮನನ್ನು ಬಾಯಲ್ಲಷ್ಟೇ ಜಪ ಮಾಡುವ ನಾಯಕರು ಬಂದು ಕುಳಿತಿದ್ದಾರೆ. ರಾಮನೇ ಗೋಡ್ಸೆವಾದಿಗಳ ಕೈಯಲ್ಲಿ ವಿರೂಪಗೊಂಡಿದ್ದಾನೆ. ಗೋಡ್ಸೆಯ ರಾಮನನ್ನು ಗಾಂಧಿಯ ರಾಮನ ಮೂಲಕ ಎದುರಿಸಬೇಕಾದ ಸಮಯ ಇದು. ಗಾಂಧಿಯ ರಾಮ ಗೆದ್ದರೆ ದೇಶ ಮಾತ್ರವಲ್ಲ, ಹಿಂದೂ ಧರ್ಮದ ವೌಲ್ಯಗಳು ಗೆದ್ದಂತೆ. ಸ್ವಾಮಿ ವಿವೇಕಾನಂದ, ನಾರಾಯಣಗುರುಗಳ ಹಿಂದೂಧರ್ಮ ಗೆದ್ದಂತೆ. ಈ ಹಿನ್ನೆಲೆಯಲ್ಲಿ ನಾವು 150ನೇ ಗಾಂಧೀಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕಾಗಿದೆ. ವರ್ತಮಾನದ ರಾಜಕೀಯ ಸವಾಲುಗಳಿಗೆ ಗಾಂಧಿಯ ಮೂಲಕವೇ ಉತ್ತರಿಸಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)