varthabharthi


ಅನುಗಾಲ

ಗಾಂಧಿ ಸ್ಮೃತಿಯೆಂಬ ಸನ್ಮತಿ

ವಾರ್ತಾ ಭಾರತಿ : 2 Oct, 2019
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಗಾಂಧಿಯ ಹೆಸರನ್ನು ಬಳಸಿಕೊಳ್ಳದಿದ್ದರೆ ವಿಶ್ವ ಮಾತ್ರವಲ್ಲ, ಕಾಲವೂ ತಮ್ಮನ್ನು ಕ್ಷಮಿಸಲಾರದೆಂಬುದು ಗಾಂಧಿಯ ಟೀಕಾಕಾರರಿಗೆ, ಗಾಂಧಿ ವಿರುದ್ಧದ ವ್ಯವಸ್ಥೆಗೆ ಗೊತ್ತಿದೆ. ಅದಕ್ಕೇ ಗಾಂಧಿಯ ಹೆಸರನ್ನು ಸ್ವಚ್ಛತಾ ಅಭಿಯಾನಕ್ಕೆ ಬಳಸಿಕೊಳ್ಳಲಾಗಿದೆ. ಈಗ ಈ ದೇಶ ಪ್ರಯತ್ನಿಸುತ್ತಿರುವುದು ದೇಶದ ಭೌತಿಕ ಕಸವನ್ನು ಗುಡಿಸಿ ಹೊರಹಾಕುವುದಕ್ಕಲ್ಲ, ನಾಶಮಾಡುವುದಕ್ಕಲ್ಲ, ಬದಲಾಗಿ ಅವನ್ನು ಕಾಣದಂತೆ ಅಡಗಿಸಿಟ್ಟು ಮನಸ್ಸಿನೊಳಗೆ ತುಂಬುವುದಕ್ಕಾಗಿ.


ಇಂದು ಭಾರತದಲ್ಲಿ ಹಿಂದು ರಾಷ್ಟ್ರವನ್ನು ಸ್ಥಾಪಿಸುವ ಹುನ್ನಾರ ನಡೆಯುತ್ತಿದೆಯೆಂದು ಆರೋಪಿಸುವವರು ಗಾಂಧಿ ಹತ್ಯೆಯನ್ನು ನೆನಪು ಮಾಡಿಕೊಳ್ಳುವುದು ಒಳ್ಳೆಯದು. ಏಕೆಂದರೆ ಗಾಂಧಿಯನ್ನು 1948ರಲ್ಲಿ ಕೊಂದರೆನ್ನುವುದು ಇತಿಹಾಸದ ದಾಖಲೆಯಾದರೂ ಅವರನ್ನು ಕೊಲ್ಲಲು 1934ರಿಂದಲೇ ಸಂಚುಗಳು, ಪ್ರಯತ್ನಗಳು ನಡೆದಿದ್ದವು. ಇವು ಯಶಸ್ವಿಯಾದದ್ದು 1948ರಲ್ಲಿ, ಅಷ್ಟೇ. ಆದ್ದರಿಂದ ಭಾರತಕ್ಕೆ ಸ್ವಾತಂತ್ರ್ಯ ಬರುವ ಮೊದಲೇ ಬರಲಿರುವ ರಾಷ್ಟ್ರದ ಬಹುತ್ವವನ್ನು ಇಲ್ಲವಾಗಿಸಿ ಅದನ್ನು ಒಂದು ಮತೀಯ ಹಿಂದೂ ರಾಷ್ಟ್ರವಾಗಿಸುವ ಸಂಘಟಿತ ಯತ್ನವು ನಡೆಯುತ್ತಿತ್ತೆಂಬುದು ಸ್ಪಷ್ಟ.

ಇಂದು ಗೋಡ್ಸೆಯನ್ನು ಆರಾಧಿಸುವ ಒಂದು ಗುಂಪಿದ್ದರೆ ಅದು ಹಿಂದೆಯೂ ಇತ್ತು ಮತ್ತು ಇನ್ನು ಮುಂದೆಯೂ ಇರುತ್ತದೆಯೆಂಬ ಕರಾಳ ಸತ್ಯವನ್ನೂ ಈ ಸಂದರ್ಭದಲ್ಲಿ ನೆನಪಿಡುವುದು ಇನ್ನೂ ಒಳ್ಳೆಯದು. ಡ್ರಾಕುಲಾ ಸರಣಿಯ ಸಿನೆಮಾಗಳಲ್ಲಿ ಕಾಣುವಂತೆ ಸೈತಾನನನ್ನು ಪ್ರೀತಿಸುವ, ಆರಾಧಿಸುವ ಮತ್ತು ಸೈತಾನಿಕೆಯನ್ನು ತೃಪ್ತಿಪಡಿಸುವ ಕ್ರೌರ್ಯವನ್ನು ನಡೆಸಿಕೊಂಡು ಬರುವ ಒಂದು ಆರಾಧಕರ ಗುಂಪು ಸದಾ ಸಕ್ರಿಯವಾಗಿರುತ್ತದೆ. ಅದು ನಿಷೇಧದಿಂದ ಸಾಯಲಾರದು; ಸ್ವಲ್ಪಕತ್ತಲು ಆವರಿಸಿದರೆ ಚಿಗುರಿಕೊಳ್ಳುತ್ತದೆ. ಈಗ ಇಷ್ಟು ಗಾಂಧಿ ಕುರಿತ ಟೀಕೆಯಿದೆಯೆಂದರೆ ಅಂತಹ ಕತ್ತಲು ಈ ದೇಶವನ್ನು ಆವರಿಸಿದೆಯೆಂದು ಅರ್ಥ. ಭಾರತ ವಿಭಜನೆಗೆ ಗಾಂಧಿ ಕಾರಣರೆಂದು ಬಹು ಆಕರ್ಷಕವಾದ ಜನಪ್ರಿಯವಾದ ಒಂದು ಮಿಥ್ಯವಾದವು ಎಲ್ಲೆಡೆ ಹಬ್ಬುತ್ತಲಿದೆ.

ಚರಿತ್ರೆಯ ಪುಟಗಳನ್ನು ತೆರೆದರೆ ಜಿನ್ನಾ ಹುಟ್ಟುಹಾಕಿದ ಈ ಅಂಶವನ್ನು, ವಿಚಾರವನ್ನು ಮೊದಲು ಒಪ್ಪಿಕೊಂಡ ಕಾಂಗ್ರೆಸ್ ಮುಖಂಡರೆಂದರೆ ಸರ್ದಾರ್ ವಲ್ಲಭಭಾಯಿ ಪಟೇಲರು. ಆನಂತರ ನೆಹರೂ ಆದಿಯಾಗಿ ಇತರರೂ ಇದನ್ನು ಒಪ್ಪಿಕೊಂಡರು. ಆದರೆ ಇದನ್ನು ಕೊನೆಯಲ್ಲಿ ಅನಿವಾರ್ಯವಾಗಿ ಒಪ್ಪಿಕೊಂಡವರು ಗಾಂಧಿ. ಆಗಿನ ರಾಜಕೀಯ ಮತ್ತು ಸಾಮಾಜಿಕ ಸಂದರ್ಭ ಹೇಗಿತ್ತೆಂದರೆ ಕಾಂಗ್ರೆಸಿನಲ್ಲಿ ಯಾರು ಏನೇ ಹೇಳಲಿ, ಅದು ಸ್ಥಾಪಿತವಾಗುತ್ತಿದ್ದದ್ದು ಮತ್ತು ಸ್ವೀಕಾರವಾಗುತ್ತಿದ್ದದ್ದು ಗಾಂಧಿಯ ಮುಖಮುದ್ರೆಯಿಂದ. ಆದ್ದರಿಂದ ಗಾಂಧಿ ಈ ವಿಭಜನೆಗೆ ಕಾರಣರೆಂಬ ಅಪವಾದ ಇದ್ದದ್ದೇ. ಅವರ ಹಿಂದಿದ್ದ ಇತರ ಮುಖಗಳು ಈ ಸಮೂಹ ಭಾವಚಿತ್ರದಲ್ಲಿ ಮರೆಯಾಗುತ್ತವೆ. ಗಾಂಧಿ ಒಪ್ಪಿದ್ದ ರಸ್ಕಿನ್‌ನ ‘ಕೊನೆಯವನ ವರೆಗೆ’ (Unto this last) ಈ ರೀತಿಯ ವ್ಯಂಗ್ಯದಲ್ಲಿ ಮೂಡುತ್ತದೆಂದು ಅವರು ತಿಳಿದಿರಲಾರರು. ಗಾಂಧಿ ಎಂದೂ ‘ರಾಷ್ಟ್ರಪಿತ ಮಹಾತ್ಮ ಮೋಹನದಾಸ ಕರಮ್‌ಚಂದ್ ಗಾಂಧಿ’ ಎಂದು ತನ್ನನ್ನು ತಾನು ಉಲ್ಲೇಖಿಸಲಿಲ್ಲ. ಆದರೆ ಇಂದು ಚರಿತ್ರೆಯನ್ನು ತಿದ್ದಿ ಓದುವವರು, ಓದಿಸುವವರು ಗಾಂಧಿಯ ವಿಕೃತ ಚಿತ್ರವನ್ನು ಬರೆಯುವುದರಲ್ಲಿ ಸಿದ್ಧಹಸ್ತರಾಗುತ್ತಿದ್ದಾರೆ. ಗಾಂಧಿಯನ್ನು ಒಂದಿಷ್ಟೂ ತಿಳಿಯದವರಿಗಾಗಿ ಮಾಹಿತಿಯನ್ನು ನೀಡುವುದಾದರೆ- ‘ಮಹಾತ್ಮಾ’ ಎಂಬ ಬಿರುದನ್ನು ನೀಡಿದವರು ಅವರಿಗಿಂತಲೂ ಹಿರಿಯರಾಗಿದ್ದ ಗುರುದೇವ ರವೀಂದ್ರನಾಥ್ ಟಾಗೋರ್; ‘ರಾಷ್ಟ್ರಪಿತ’ ಎಂಬ ಬಿರುದನ್ನು ನೀಡಿದವರು ನೇತಾಜಿ ಸುಭಾಷ್‌ಚಂದ್ರ ಭೋಸ್ ಅವರು.

ಟಾಗೋರ್ ಅವರು ಮಹರ್ಷಿ ಅರವಿಂದರ ಹಾಗೆ; ಯಾರು ಹೆಚ್ಚು ಯಾರು ಕಡಿಮೆಯೆಂಬ ತರ್ಕ ಇಲ್ಲಿ ಅನಗತ್ಯ. ಆದರೆ ಅವರ ಕಲಾತ್ಮಕ ಅಭಿವ್ಯಕ್ತಿಗಳು ಅವರನ್ನು ರಾಜಕೀಯಕ್ಕಿಂತ ಭಿನ್ನವಾಗಿ ಗುರುತಾಗುವಂತೆ ಉಳಿಸಿರುವುದರಿಂದ ಗಾಂಧಿವೈರಿಗಳು ಈ ಇಬ್ಬರನ್ನು ಗಾಂಧಿಪಂಥದ ಪ್ರಮುಖರೆಂದು ಅಷ್ಟಾಗಿ ಗಮನಿಸುವುದೇ ಇಲ್ಲ. ಇದರಿಂದಾಗಿ ಹಿಂದೂ ರಾಷ್ಟ್ರಕಲ್ಪನೆಯ ನಾಯಕರು ಇವರಿಬ್ಬರನ್ನು ಟೀಕಿಸುವುದನ್ನು ಕಾಣೆವು. ನೇತಾಜಿ ತಮ್ಮದಲ್ಲದ ತಪ್ಪಿಗೆ/ಕಾರಣಕ್ಕೆ ಭಾರತದ ಮತ್ತು ಕಲ್ಪಿತ ಹಿಂದೂ ರಾಷ್ಟ್ರದ ನಾಯಕ ಪಾತ್ರಧಾರಿ. ಎಲ್ಲ ರಾಷ್ಟ್ರವಾದಿಗಳು ನೇತಾಜಿಯನ್ನು ಗಾಂಧಿಗಿಂತ ದೊಡ್ಡವರಂತೆ, ಸರ್ದಾರ್ ಪಟೇಲರನ್ನು ನೆಹರೂವಿಗಿಂತ ದೊಡ್ಡವರಂತೆ ಬಿಂಬಿಸಲು ಸತತವಾಗಿ ಪ್ರಯತ್ನಿಸಿದ್ದಾರೆ; ಪಂಥದ ಚೌಕಟ್ಟಿನ ಈ ವಿಫಲ ಪ್ರಯತ್ನ ಎಂದಿಗಿಂತ ಪ್ರಖರವಾಗಿ ಈಗ ನಡೆಯುತ್ತಿರುವುದು ನಮ್ಮ ಕಾಲದ ಮತ್ತು ಈ ದೇಶದ ದುರಂತ. ವಾಸ್ತವವನ್ನು ಮರೆಮಾಚಿ ವಿಚಾರಕ್ಕಿಂತ ಹೆಚ್ಚಾಗಿ ಬರಿಯ ಭೌತಿಕ ವಿವರಗಳನ್ನಷ್ಟೇ ಗಮನಿಸುವವರಿಗೆ ಮಹಾನ್ ನಾಯಕರಾಗಿದ್ದ ನೇತಾಜಿಯ ಬದುಕು ರೋಚಕವಾಗಿ ಮಾತ್ರ ಕಾಣುತ್ತದೆ. (ಈ ಬಗೆಯ ಚಿತ್ರಗಳು ರಾಣಾ ಪ್ರತಾಪ್, ಚಂದ್ರಶೇಖರ ಆಝಾದ್ ಮುಂತಾದವರ ಬಗೆಗೂ ಇವೆ!) ರಕ್ತ ಬಿಸಿಯಿದ್ದಾಗ ಭಾವ ಉತ್ಕಟವಾಗಿದ್ದಾಗ, ವಿಚಾರ ತೆಳುವಾಗಿದ್ದಾಗ ಇವು ತುಂಬಾ ಆಕರ್ಷಕವಾಗಿ ಕಾಣಿಸುತ್ತವೆ. ಸ್ವಾಮಿ ವಿವೇಕಾನಂದ, ಭಗತ್ ಸಿಂಗ್, ಮುಂತಾದವರ ವಿಚಾರ ಪ್ರಪಂಚವನ್ನು ತಮಗೆ ಬೇಕಾದಂತೆ ವಿಕೃತಗೊಳಿಸಿ ಹಂಚಿದವರು ಸಾಕಷ್ಟಿದ್ದರೂ ಅವರ ಬಗೆಗಿನ ನೈಜ ತಿಳಿವಳಿಕೆ ಮಕ್ಕಾಗದಿರುವುದು ಈ ಮಹಾನುಭಾವರ ವೈಶಿಷ್ಟ್ಯ ಮತ್ತು ಅನನ್ಯತೆ. ಬೆಟ್ಟವನ್ನು ಅಲುಗಿಸುವುದು ಸುಲಭಸಾಧ್ಯವಲ್ಲ!

ಗಾಂಧಿ ಜಯಂತಿಯಂದು ಗಾಂಧಿ ಮಾತ್ರವಲ್ಲ ಅದೇ ದಿನ ಹುಟ್ಟಿದ ಲಾಲ್ ಬಹದೂರ್ ಶಾಸ್ತ್ರಿಯವರನ್ನೂ ನೆನಪು ಮಾಡಿಕೊಳ್ಳಬಹುದು. ಆದರೆ ಈ ಜಯಂತಿಗಳು ಒಟ್ಟಾಗಿ ಗಾಂಧಿಯ ವಿಚಾರಗಳನ್ನು ಮರುಸ್ಥಾಪಿಸುವ ದಿನಚರಿಯಾಗಿ ನಿತ್ಯವಿಧಿಯಾಗಿ ಮುಂದುವರಿಯಬೇಕಾದ ಅಗತ್ಯವಿದೆ. ಆದರೆ ಇಂದು ಒಂದಲ್ಲ ಒಂದು ರೀತಿಯಲ್ಲಿ, ಪರೋಕ್ಷವಾಗಿ ಮತ್ತು ಕೆಲವೊಮ್ಮೆ ಪ್ರತ್ಯಕ್ಷವಾಗಿ ಗಾಂಧಿಯನ್ನು ಅಳಿಸುವ ಯತ್ನ ಸಮಾಜದ ಜವಾಬ್ದಾರಿಯುತ ಸ್ಥಾನದಲ್ಲಿರುವವರಿಂದಲೇ ನಡೆಯುತ್ತಿರುವುದು ವಿಪರ್ಯಾಸ. ಇದನ್ನು ವಿಪರ್ಯಾಸವೆನ್ನುವುದೂ ತೀರಾ ಸಣ್ಣ ಮಾತಾಗುತ್ತದೆ. ಏಕೆಂದರೆ ಇವೆಲ್ಲ ಒಂದು ಗೊತ್ತಾದ, ಪೂರ್ವನಿಗದಿತವಾದ ಕಾರ್ಯಸೂಚಿಯಂತೆ, ಯೋಜನೆಯಂತೆ ನಡೆಯುತ್ತಿವೆ. ಇವನ್ನು ಏನೂ ತಿಳಿಯದ ಮೂರ್ಖರು ಮಾಡಿದರೆ ಯಾರೂ ಆತಂಕಪಡಬೇಕಾದ್ದಿಲ್ಲ. ಆದರೆ ತಿಳಿವಳಿಕೆಯಿರುವ ಧೂರ್ತರು ಇಂತಹ ಕಾರಸ್ಥಾನಗಳ ಸೂತ್ರಧಾರರಾದಾಗ ಇಡೀ ಸಮಾಜವೇ ಕಂಗೆಡಬೇಕಾಗುತ್ತದೆ. ಹೊಸದಾಗಿ ‘ರಾಷ್ಟ್ರಪಿತ’ ಹುದ್ದೆಯನ್ನು ನಿರ್ಮಿಸುವ ಸಂಚು ಈ ಬಗೆಯದು. ಭಾರತದ ಪ್ರಧಾನಿ ಮೋದಿಯ ಅಮೆರಿಕ ಬೇಟಿಯ ಸಂದರ್ಭಕ್ಕೆ ಟೆಕ್ಸಾಸ್‌ನ ಹ್ಯೂಸ್ಟನ್‌ನಲ್ಲಿ ಪ್ರಾಯೋಜಿತವಾದ ಸಮಾರಂಭವೊಂದರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೋದಿಯವರನ್ನು 'Father of India' (‘ಭಾರತ ಪಿತ’ ಅಥವಾ ‘ಭಾರತದ ಪಿತ’) ಎಂದು ಹೇಳಿದರೆಂದು ವರದಿಯಾಗಿದೆ. ಇದು ಪ್ರಾಸಂಗಿಕವಾದ ಉತ್ಪ್ರೇಕ್ಷಿತ ಹೊಗಳಿಕೆಯೆಂದೂ ಡೊನಾಲ್ಡ್ ಟ್ರಂಪ್ ಅವರ ಇತರ ಎಲ್ಲ ಬೇಜವಾಬ್ದಾರಿಯುತ ಹೇಳಿಕೆ, ಕ್ರಮಗಳಂತೆ ಇವನ್ನೂ ಪರಿಗಣಿಸಬೇಕೆಂದು ತಿಳಿದಿದ್ದರೆ ಮತ್ತು ಹಾಗೆ ಪರಿಗಣಿಸಿದ್ದರೆ ಗಾಜಿನ ಮೇಲೆ ಕುಳಿತ ಧೂಳಿನಂತೆ ಇವನ್ನೂ ಒರೆಸಿ ತೆಗೆಯಬಹುದಿತ್ತು.

ಇದೇ ಸಂದರ್ಭದಲ್ಲಿ ಮೋದಿ ‘‘ಅಬ್ ಕೀ ಬಾರ್ ಟ್ರಂಪ್ ಸರಕಾರ್’’ ಎಂದೂ ಹೇಳಿದರೆಂಬುದು ವರದಿಯಾಗಿದೆ. ಅದನ್ನೀಗ ವಿದೇಶಾಂಗ ಸಚಿವ ಜೈಶಂಕರ್ ಅವರು ತೇಪೆ ಹಾಕಿ ಸರಿಪಡಿಸಲು ಪ್ರಯತ್ನಿಸುತ್ತಿದ್ದಾರೆ! ತನ್ನ ನೆನಪಿನಂತೆ ಈ ಮಾತು ಟ್ರಂಪ್ ಅವರ ಮಾತಿಗೆ ಸೂಚಕವಾಗಿ ಮಾತ್ರ ಬಂದಿತ್ತು ಮತ್ತು ಅದಕ್ಕೆ ತಪ್ಪುಅರ್ಥ ಕಟ್ಟುವ ಅಗತ್ಯವಿಲ್ಲವೆಂದು ಹೇಳಿದ್ದಾರೆ. ಮಾತನಾಡಿದ ಮೋದಿಯವರೇ ಈ ಬಗ್ಗೆ ಸ್ಪಷ್ಟನೆ ನೀಡದ ಮೇಲೆ ಅದನ್ನು ಇನ್ನೊಬ್ಬರು ವಿವರಿಸುವುದು, ಸ್ಪಷ್ಟೀಕರಿಸುವುದು ಹಾಸ್ಯಾಸ್ಪದವಾಗಿದೆ. ಇದು ವಿದೇಶಾಂಗ ಸಚಿವರ ನಿಷ್ಠೆಯನ್ನು ಪ್ರಚುರಪಡಿಸಿದರೂ ಅವರ ಸ್ಥಾನಕ್ಕೆ ಯಾವ ಶೋಭೆಯನ್ನೂ ತರುವುದಿಲ್ಲವೆನ್ನುವುದು ಬೇರೆ ಮಾತು. (ಕರ್ನಾಟಕದ ಪ್ರವಾಹ ಪೀಡಿತರ ಕುರಿತು ಯಾವ ನೋವನ್ನೂ ಅಭಿವ್ಯಕ್ತಿಸದ ಪ್ರಧಾನಿ ಬಿಹಾರದ ಸಂತ್ರಸ್ತರ ಕುರಿತು ಟ್ವೀಟಿಸಿದ್ದನ್ನು ಕಂಡು ಕರ್ನಾಟಕದ ಜನತೆ ಆಕ್ರೋಶ ವ್ಯಕ್ತಪಡಿಸಿದಾಗ ಕರ್ನಾಟಕದ ಭಾಜಪ ಧುರೀಣ ಜಗದೀಶ ಶೆಟ್ಟರ್ ಇದೇ ರೀತಿ (ಬಿಹಾರ ಕುರಿತ) ‘‘ಪ್ರಧಾನಿ ಟ್ವೀಟ್‌ಗೆ ವಿಶೇಷ ಅರ್ಥ ಕಲ್ಪಿಸಬೇಡಿ’’ ಎಂದು ಪ್ರಾರ್ಥಿಸಿದ್ದಾರೆ. ವಿಪರೀತಾರ್ಥಕ್ಕೆ ದಾರಿಮಾಡಿಕೊಡುವ ದೇಶದ ಮಹಾನ್ ನಾಯಕರ ಮಾತುಗಳಿಗೆ ಹೀಗೆ ‘ನ್ಯಾಪಿ’ ಕಟ್ಟುವ ಪರಿಸ್ಥಿತಿ ಬಂದಿರುವುದು ನಿಜಕ್ಕೂ ಶೋಚನೀಯ! ಮತ್ತು ಹೀಗಾದರೆ ಪ್ರಧಾನಿಯವರು ‘‘ನನ್ನ ಮಾತುಗಳಿಗೆ ನಾನು ಹೊಣೆಯಲ್ಲ’’ ಎಂಬ ಫಲಕ ಹಾಕಿಕೊಳ್ಳುವುದು ಲೇಸು!)

ಆದರೆ ಸದ್ಭಕ್ತರು ತಕ್ಷಣ ಇದನ್ನು ಒಂದು ಅಧಿಕೃತ ಪ್ರಶಸ್ತಿಪತ್ರದಂತೆ, ಪದವಿಪ್ರಮಾಣಪತ್ರದಂತೆ ಬಳಸಿದರು. ಇದನ್ನು ಒಪ್ಪಿಕೊಳ್ಳದವರ ಪೈಕಿ ಕೆಲವರು ಇದು ಗಾಂಧಿಗಾದ ಅವಮಾನವೆಂಬಂತೆ ಸಂತೋಷಪಟ್ಟರು. ಗಾಂಧಿಯನ್ನು ಅಳಿಸಲು ಈ ಸಂದರ್ಭವನ್ನು ಹೇಗೆ ಬಳಸಿಕೊಳ್ಳಬಹುದೆಂಬುದನ್ನು ಯೋಚಿಸಲಾರಂಭಿಸಿದರು. ಇದು ಬಹು ಮುಖ್ಯವೇನಲ್ಲ. ಗಾಂಧಿಯನ್ನು ಯಾರೂ ‘ಭಾರತಪಿತ’ ಎನ್ನಲಿಲ್ಲ. ‘ರಾಷ್ಟ್ರಪಿತ’ ಎಂದರು. ಒಂದು ರಾಷ್ಟ್ರದ ಹುಟ್ಟಿಗೆ ಕಾರಣರಾದ ಗಾಂಧಿ ಹಾಗೆ ಕರೆಸಿಕೊಳ್ಳುವ ಎಲ್ಲ ಅರ್ಹತೆಯನ್ನೂ ಹೊಂದಿದವರೇ. ಸಮುದ್ರದಲ್ಲಿರುವುದು ಸಮುದ್ರದ ನೀರಷ್ಟೇ ಅಲ್ಲ; ಎಲ್ಲ ನದಿ-ತೊರೆಗಳ ನೀರೂ ಸೇರಿ ಸಮುದ್ರವಾಗುತ್ತದೆ. ಹಾಗೆಯೇ ಗಾಂಧಿ ಸ್ವಾತಂತ್ರ್ಯದ ಸಾವಿರಾರು ತೊರೆಗಳನ್ನು ಪ್ರತಿನಿಧಿಸುತ್ತಾರೆ. ಆದ್ದರಿಂದ ರಾಷ್ಟ್ರಪಿತ ಎಂಬುದು ಗಾಂಧಿ ಎಂಬ ವ್ಯಕ್ತಿಗಿಂತ ಹೆಚ್ಚಾಗಿ ಗಾಂಧಿ ಎಂಬ ವಿಚಾರಪ್ರಪಂಚವನ್ನು ಪರಿಪೂರ್ಣವಾಗಿ ಪ್ರತಿನಿಧಿಸುತ್ತದೆಂದು ಹೇಳಬಹುದು. ಪ್ರಾಯಃ ಗಾಂಧಿ ಇಂದು ಬದುಕಿದ್ದರೆ ಇಂತಹ ವಿಚಾರಗಳನ್ನು ಕ್ಷುಲ್ಲಕವೆಂದು ಅಲಕ್ಷಿಸುತ್ತಿದ್ದರು. (ಅಥವಾ ದೇಶಕ್ಕೆ ಎಷ್ಟು ತಂದೆಯರು ಎಂದು ಹಾಸ್ಯಮಾಡುತ್ತಿದ್ದರು!) ಎಲ್ಲವನ್ನೂ ಪ್ರೀತಿಯಿಂದ, ಸಹನೆಯಿಂದ, ಸೌಜನ್ಯದಿಂದ ಎದುರಿಸುತ್ತಿದ್ದ ಗಾಂಧಿಗೆ ಈ ದೇಶದ ಒಂದು ವರ್ಗ ಹೀಗೆ ಇನ್ನೊಬ್ಬರನ್ನು ತನಗೆ ಪರ್ಯಾಯವಾಗಿ ಬೆಳೆಸುತ್ತಿದ್ದಾರೆಂದು ತಿಳಿದರೂ ಯಾವುದೇ ಉದ್ವೇಗಕ್ಕೆ, ಭಾವಾವೇಶಕ್ಕೆ ಒಳಗಾಗದೆ ಅವನ್ನು ಯಥಾವತ್ತು ಸ್ವೀಕರಿಸುತ್ತಿದ್ದರು ಮತ್ತು ಈ ಕಾರಣಕ್ಕೆ ಅಂತಹ ಪರ್ಯಾಯ ವ್ಯಕ್ತಿ(ತ್ವ)ಗಳು ನಾಚುವಂತೆ ಮಾಡಬಲ್ಲವರಾಗಿದ್ದರು.

ಸರ್ದಾರ್ ಪಟೇಲ್, ಸಾವರ್ಕರ್ ಮುಂತಾದವರನ್ನು ಪ್ರಥಮ ಸಾಲಿನಲ್ಲಿ ಕೂರಿಸುವ ಇಂದಿನ ಯಾವ ಸಂಚೂ ಶಾಶ್ವತವಾಗಿ ಉಳಿಯಲಾರದು. ಏಕೆಂದರೆ ಗಾಂಧಿ ಇತಿಹಾಸದ ಅಗ್ನಿಪರೀಕ್ಷೆಯಲ್ಲಿ ಉತ್ತೀರ್ಣರಾದವರು; ಪ್ರವಾಹದಲ್ಲಿ ಮುಳುಗೆದ್ದವರು; ಈಜಿದವರು; ಇದ್ದು ಜೈಸಿದವರು. ಗಾಂಧಿಯ ಹೆಸರನ್ನು ಬಳಸಿಕೊಳ್ಳದಿದ್ದರೆ ವಿಶ್ವ ಮಾತ್ರವಲ್ಲ, ಕಾಲವೂ ತಮ್ಮನ್ನು ಕ್ಷಮಿಸಲಾರದೆಂಬುದು ಗಾಂಧಿಯ ಟೀಕಾಕಾರರಿಗೆ, ಗಾಂಧಿ ವಿರುದ್ಧದ ವ್ಯವಸ್ಥೆಗೆ ಗೊತ್ತಿದೆ. ಅದಕ್ಕೇ ಗಾಂಧಿಯ ಹೆಸರನ್ನು ಸ್ವಚ್ಛತಾ ಅಭಿಯಾನಕ್ಕೆ ಬಳಸಿಕೊಳ್ಳಲಾಗಿದೆ. ಈಗ ಈ ದೇಶ ಪ್ರಯತ್ನಿಸುತ್ತಿರುವುದು ದೇಶದ ಭೌತಿಕ ಕಸವನ್ನು ಗುಡಿಸಿ ಹೊರಹಾಕುವುದಕ್ಕಲ್ಲ, ನಾಶಮಾಡುವುದಕ್ಕಲ್ಲ, ಬದಲಾಗಿ ಅವನ್ನು ಕಾಣದಂತೆ ಅಡಗಿಸಿಟ್ಟು ಮನಸ್ಸಿನೊಳಗೆ ತುಂಬುವುದಕ್ಕಾಗಿ. ಗಾಂಧಿಯ ಸಬರಮತಿಯನ್ನು ಅತ್ಯಾಧುನಿಕಗೊಳಿಸುವ ಯೋಜನೆಯೊಂದು ಸರಕಾರದ ಮುಂದಿದೆಯಂತೆ. ಅದು ಗಾಂಧಿಮೌನದ ಸದ್ದನ್ನು ಅಡಗಿಸುವ ಪ್ರಯತ್ನವಾಗದಿರಲಿ ಎಂದು ಹಾರೈಕೆ. ಗಾಂಧಿ ಕುರಿತ ದುರ್ಭಾವನೆಗಳು, ನೇತ್ಯಾತ್ಮಕ ವಿಚಾರಗಳು ದೇಶದಿಂದ ಮತ್ತು ದೇಶದ ಅಸಂಖ್ಯಾತ ಮನಸ್ಸುಗಳಿಂದ ಹೊರಹೋಗದ ಹೊರತು ದೇಶದ ಮಲಿನತೆ ನಿವಾರಣೆಯಾಗದು; ದೇಶ ಸ್ವಚ್ಛವಾಗದು. ಗಾಂಧಿಯ ಕನ್ನಡಕದ ಮೇಲೆ ಕುಳಿತ ಧೂಳನ್ನು ತೊಡೆಯದೆ ಯಾವ ಅಭಿಯಾನವೂ ವಿವೇಕಿಗಳ ಗೌರವಕ್ಕೆ ಪಾತ್ರವಾಗದು.

ಗಾಂಧಿಯನ್ನು ಟೀಕಿಸುವುದರ ಮೂಲಕ ಮತ್ತೆ ಮತ್ತೆ ಗಾಂಧಿಯ ನೆನಪು ಮರುಕಳಿಸುತ್ತದೆ. ‘‘ಮರಾ... ಮರಾ...’’ ಎಂದು ಕೂಗಿದರೂ ಅದು ಎಲ್ಲೋ ‘ರಾಮ..’ ಎಂಬುದನ್ನು ಧ್ವನಿಸುತ್ತದೆಯಲ್ಲ, ಹಾಗೆ. ಗಾಂಧಿ ಎಂದರೆ ಈ ದೇಶವನ್ನು ಸರಿಯಾಗಿ ನೋಡಬಲ್ಲ ಕನ್ನಡಕ; ಮತ್ತು ಮನಸ್ಸಿನ ಮಾಲಿನ್ಯವನ್ನು ತೊಳೆಯಬಲ್ಲ ಅಭಿಯಾನ. ಗಾಂಧಿ ‘‘ಸಬ್‌ಕೋ ಸನ್ಮತಿ ದೇ ಭಗವಾನ್!’’ ಎಂದದ್ದು ತನ್ನ ಆನಂತರಕ್ಕೂ ದೇಶ ಸುಖವಾಗಿರಲಿ ಎಂಬ ಉದ್ದೇಶಕ್ಕೇ.
ಅಕ್ಟೋಬರ್ 2ನೇ ದಿನಾಂಕ ಕಳೆದು ಮರುದಿನ ಬಂದರೆ ಅದು ಕುವೆಂಪು ಭಾಷೆಯಲ್ಲಿ ಹೇಳುವುದಾದರೆ ‘‘ಕಳೆಯಿತಾ ಗಾಂಧಿ ರಾತ್ರಿ; ಕಳೆಯಿತಾ ಗಾಂಧಿ ಸ್ಮತಿಯ ಭಾರತ ಧಾತ್ರಿ!’’

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)