varthabharthi

ಸಂಪಾದಕೀಯ

ಉತ್ತರ ಭಾರತೀಯರ ಮೇಲರಿಮೆಗೆ ಕೇರಳ ನೀಡಿದ ಉತ್ತರ

ವಾರ್ತಾ ಭಾರತಿ : 3 Oct, 2019

ಶಾಲಾ ಶಿಕ್ಷಣದ ಗುಣಮಟ್ಟ ಒಂದು ನಾಡಿನ ಬೌದ್ಧಿಕ ಗುಣಮಟ್ಟವನ್ನು ಹೇಳುತ್ತದೆ. ಎಲ್ಲಿ ಶಾಲಾ ಶಿಕ್ಷಣದ ಗುಣಮಟ್ಟ ಉತ್ತಮವಾಗಿದೆಯೋ ಅಲ್ಲಿನ ಸಾಮಾಜಿಕ, ಆರ್ಥಿಕ ಬದುಕಿನ ಗುಣಮಟ್ಟವೂ ಏರಿಕೆಯಾಗುತ್ತಾ ಹೋಗುತ್ತದೆ. ‘ನಮ್ಮ ಶಾಲೆಯ ಯಶಸ್ಸು-ಶಾಲಾ ಶಿಕ್ಷಣ ಗುಣಮಟ್ಟ ಸೂಚ್ಯಂಕ’ ಎಂಬ ಶೀರ್ಷಿಕೆಯ ವರದಿಯನ್ನು ನೀತಿ ಆಯೋಗವು ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಮತ್ತು ವಿಶ್ವಬ್ಯಾಂಕ್‌ನ ಜೊತೆಗೂಡಿ ಬಿಡುಗಡೆಗೊಳಿಸಿದೆ. 2015-16ನ್ನು ಮೂಲ ವರ್ಷ ಹಾಗೂ 2016-17ನ್ನು ಉಲ್ಲೇಖ ವರ್ಷ ಎಂದು ಪರಿಗಣಿಸಿ ಶಾಲಾ ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸಾಧನೆಯನ್ನು ವಿಶ್ಲೇಷಿಸಿ ಸೂಚ್ಯಂಕವನ್ನು ರೂಪಿಸಲಾಗಿದೆ. ವಿಶೇಷವೆಂದರೆ, ಈ ಸೂಚ್ಯಂಕದಲ್ಲಿ ದಕ್ಷಿಣ ಭಾರತದ ರಾಜ್ಯಗಳೇ ಅಗ್ರ ಸ್ಥಾನದಲ್ಲಿ ಗುರುತಿಸಿಕೊಂಡಿರುವುದು. 20 ದೊಡ್ಡ ರಾಜ್ಯಗಳಲ್ಲಿ ಕೇರಳ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದರೆ, ಕರ್ನಾಟಕ ಮೂರನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.

ನಮ್ಮ ನೆರೆಯ ರಾಜ್ಯವಾಗಿರುವ ಕೇರಳದ ಕುರಿತಂತೆ ಸಂಘಪರಿವಾರ ಮತ್ತು ಉತ್ತರ ಭಾರತೀಯ ನಾಯಕರು ಹರಿಯ ಬಿಡುತ್ತಿರುವ ಸುಳ್ಳುಗಳಿಗೆ ಕೇರಳ ನೀಡಿರುವ ಉತ್ತರವಾಗಿದೆ ಇದು. ಕೇರಳದ ಸಾಧನೆ ಬರೀ ಶಿಕ್ಷಣಕ್ಕೆ ಮಾತ್ರ ಸೀಮಿತವಾಗಿಲ್ಲ. ಆರೋಗ್ಯ ಕ್ಷೇತ್ರದಲ್ಲೂ ಕೇರಳ ಉತ್ತರ ಭಾರತದ ರಾಜ್ಯಗಳಿಗೆ ಸವಾಲನ್ನು ಹಾಕಿದೆ. ಕಳೆದ ಜೂನ್ ತಿಂಗಳಲ್ಲಿ ನೀತಿ ಆಯೋಗವು ಆರೋಗ್ಯ ಸೂಚ್ಯಂಕವನ್ನು ಬಿಡುಗಡೆ ಮಾಡಿತ್ತು. ಆರೋಗ್ಯ ಸೌಲಭ್ಯ ವ್ಯವಸ್ಥೆಯ ಗುಣಮಟ್ಟವನ್ನು ಆಧರಿಸಿ ಈ ಸೂಚ್ಯಂಕವನ್ನು ರಚಿಸಲಾಗಿತ್ತು ಮತ್ತು ಆರೋಗ್ಯ ಸೂಚ್ಯಂಕದಲ್ಲೂ ಕೇರಳ ದೇಶದಲ್ಲೇ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿತ್ತು. ಮೂರನೇ ಸ್ಥಾನವನ್ನು ಆಂಧ್ರಪದೇಶ ಮತ್ತು ಮಹಾರಾಷ್ಟ್ರ ತನ್ನದಾಗಿಸಿಕೊಂಡಿತ್ತು. ಎಲ್ಲಕ್ಕಿಂತ ವಿಪರ್ಯಾಸದ ಅಂಶವೆಂದರೆ, ಇತ್ತೀಚೆಗೆ ಬಿಡುಗಡೆ ಮಾಡಿದ ಶಿಕ್ಷಣ ಗುಣಮಟ್ಟ ಮತ್ತು ಜೂನ್‌ನಲ್ಲಿ ಬಿಡುಗಡೆ ಮಾಡಿದ ಆರೋಗ್ಯದಲ್ಲಿ ಗುಣಮಟ್ಟ ಈ ಎರಡರ ಸೂಚ್ಯಂಕದಲ್ಲೂ ಉತ್ತರ ಪ್ರದೇಶ ಕೊನೆಯ ಸ್ಥಾನದಲ್ಲಿದೆ.

ಕೇಂದ್ರದ ಬಿಜೆಪಿ ವರಿಷ್ಠರು ಮತ್ತು ಸಂಘಪರಿವಾರ ದಕ್ಷಿಣ ಭಾರತದ ರಾಜ್ಯಗಳ ಕುರಿತಂತೆ ಹಲವು ದಶಕಗಳಿಂದ ಸುಳ್ಳುಗಳನ್ನು ಹರಡುತ್ತಾ ಬಂದಿವೆ. ಅದಕ್ಕೆ ಕಾರಣ ಸ್ಪಷ್ಟ. ಬಿಜೆಪಿ ಮತ್ತು ಸಂಘಪರಿವಾರಗಳಿಗೆ ಇನ್ನೂ ದಕ್ಷಿಣ ಭಾರತದ ರಾಜ್ಯಗಳ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಾಗಿಲ್ಲ. ಕೇರಳದ ಪಾಲಿಗಂತೂ ಬಿಜೆಪಿ ಅಸ್ಪಶ್ಯವಾಗಿದೆ. ಹಿಂಸೆಯೂ ಸೇರಿದಂತೆ ಬೇರೆ ಬೇರೆ ಹತ್ಯಾರುಗಳ ಮೂಲಕ ಕೇರಳವನ್ನು ಪ್ರವೇಶಿಸುವ ಬಿಜೆಪಿಯ ಪ್ರಯತ್ನ ಭಾಗಶಃ ವಿಫಲವಾಗಿದೆ. ಆದುದರಿಂದಲೇ, ಅದು ಕೇರಳವನ್ನು ಭಯೋತ್ಪಾದಕರ ರಾಜ್ಯ, ಉಗ್ರಗಾಮಿಗಳ ರಾಜ್ಯ ಎಂದು ಬೇರೆಡೆಗಳಲ್ಲಿ ಬಿಂಬಿಸುತ್ತಾ ಓಡಾಡುತ್ತಿದೆ. ಆರೆಸ್ಸೆಸ್ ಮತ್ತು ಎಡಪಂಥೀಯರ ನಡುವಿನ ತಿಕ್ಕಾಟಗಳನ್ನು ಮುಂದಿಟ್ಟುಕೊಂಡು ಕೇರಳದಲ್ಲಿ ಹಿಂದೂಗಳ ‘ಮಾರಣ ಹೋಮ’ ನಡೆಯುತ್ತಿದೆ ಎಂದೂ ಸುಳ್ಳುಗಳನ್ನು ಬಿಜೆಪಿ ನಾಯಕರು ಹಂಚುತ್ತಿದ್ದಾರೆ. ಕೇರಳದಲ್ಲಿ ನಡೆಯುತ್ತಿರುವುದು, ಆರೆಸ್ಸೆಸ್‌ನ ಹಿಂಸೆಗೆ ಪ್ರತಿ ಹಿಂಸೆ. ಇಂದು ದೇಶಾದ್ಯಂತ ಆರೆಸ್ಸೆಸ್ ಸಹಿತ ಸಂಘಪರಿವಾರ ಹಿಂಸಾಚಾರವನ್ನು ಮುಂದಿಟ್ಟು ನಡೆಸಿದ ರಾಜಕೀಯದಲ್ಲಿ ಯಶಸ್ವಿಯಾಗಿದೆ.

ಅಲ್ಲೆಲ್ಲ ನಡೆಯುತ್ತಿರುವುದು ಸಂಘಪರಿವಾರದ ಏಕಮುಖ ಹಿಂಸೆ. ಈ ಹಿಂಸೆಯ ಮೂಲಕವೇ ಬಿಜೆಪಿ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡು ಬಂತು. ಉತ್ತರ ಪ್ರದೇಶವೇ ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ. ಪದೇ ಪದೇ ಅಲ್ಲಿ ದಲಿತರು ಮತ್ತು ಮುಸ್ಲಿಮರ ಮೇಲೆ ಏಕಮುಖ ದಾಳಿಯಾಗುತ್ತಿದೆ. ಇಂತಹದೇ ದಾಳಿಯನ್ನು ದಕ್ಷಿಣ ಭಾರತದಲ್ಲಿ ಅದರಲ್ಲೂ ಮುಖ್ಯವಾಗಿ ಕೇರಳದಲ್ಲಿ ಸಂಘಟಿಸಲು ಸಂಘಪರಿವಾರ ಪ್ರಯತ್ನಿಸುತ್ತಾ ಬಂದಿದೆಯಾದರೂ, ಎಡಪಂಥೀಯರು ಅದನ್ನು ಅಷ್ಟೇ ತೀವ್ರವಾಗಿ ಪ್ರತಿರೋಧಿಸುತ್ತಿದ್ದಾರೆ. ಕೇರಳದಲ್ಲಿ ಎಡಪಂಥೀಯರು ಆರೆಸ್ಸೆಸ್‌ನಷ್ಟೇ ಸಂಘಟಿತರಾಗಿರುವುದರಿಂದ, ಸಂಘಪರಿವಾರ ಹತಾಶೆಗೊಂಡು ಕೇರಳವನ್ನು ಅಭಿವೃದ್ಧಿಯನ್ನೇ ಕಾಣದ, ಉಗ್ರಗಾಮಿಗಳ ರಾಜ್ಯವೆಂಬಂತೆ ಬಿಂಬಿಸಲು ಹವಣಿಸುತ್ತಿದೆ. ಆದರೆ ಕೇಂದ್ರ ಸರಕಾರದ ಅಧಿಕೃತ ವರದಿ ಮಾತ್ರ ಕೇರಳವೂ ಸೇರಿದಂತೆ ದಕ್ಷಿಣ ಭಾರತದ ಕುರಿತಂತೆ ಬೇರೆಯೇ ಚಿತ್ರಣವನ್ನು ನೀಡುತ್ತದೆ.

ಸ್ವಾತಂತ್ರ ಪೂರ್ವದಲ್ಲಿ ವಿವೇಕಾನಂದರು ಕೇರಳಕ್ಕೆ ಆಗಮಿಸಿದ್ದರು. ಕೇರಳದ ಜಾತೀಯತೆಯ ಕ್ರೌರ್ಯವನ್ನು ನೋಡಿದ ವಿವೇಕಾನಂದರು ಈ ರಾಜ್ಯವನ್ನು ‘ಹುಚ್ಚಾಸ್ಪತ್ರೆ’ ಎಂದು ಹತಾಶರಾಗಿ ಕರೆದಿದ್ದರು. ಇಂದು ಕೇರಳ ಜಾತೀಯತೆ ಮತ್ತು ಜಮೀನ್ದಾರಿಕೆಯಿಂದ ಭಾಗಶಃ ಹೊರಬಂದು ಸಮಾನತೆಯ ಬದುಕನ್ನು ಕಾಣುತ್ತಿದ್ದರೆ, ಆರೋಗ್ಯ, ಶಿಕ್ಷಣದಲ್ಲಿ ಅಭಿವೃದ್ಧಿಯನ್ನು ಸಾಧಿಸಿದ್ದರೆ ಅದಕ್ಕೆ ಮುಖ್ಯ ಕಾರಣ ಆ ನೆಲದಲ್ಲಿ ಬೇರಿಳಿಸಿದ ನಾರಾಯಣ ಗುರು ಮತ್ತು ಎಡಪಂಥೀಯ ಚಿಂತನೆಗಳು. ದೇಶದ ಮೊತ್ತ ಮೊದಲ ಸಂಪೂರ್ಣ ಸಾಕ್ಷರತಾ ರಾಜ್ಯ ಎಂದು ಕರೆಸಿಕೊಂಡ ಹೆಮ್ಮೆಯೂ ಕೇರಳದ್ದೇ ಆಗಿದೆ. ಕೇರಳ ಮಾತ್ರವಲ್ಲ, ಪ್ರವಾಸೋದ್ಯಮದಲ್ಲಿ ಆಂಧ್ರ ಪ್ರದೇಶ ಇತ್ತೀಚೆಗೆ ದೇಶದಲ್ಲಿ ಅಗ್ರಸ್ಥಾನ ವನ್ನು ಪಡೆದುಕೊಂಡಿತ್ತು. ಐಟಿ-ಬಿಟಿಯಲ್ಲಿ ಕರ್ನಾಟಕದ ಹೆಗ್ಗಳಿಕೆಯನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇದೇ ಸಂದರ್ಭದಲ್ಲಿ ಸರಕಾರಕ್ಕೆ ಪರ್ಯಾಯವಾಗಿ ಸಂಘಪರಿವಾರ ಆಳ್ವಿಕೆ ನಡೆಸುತ್ತಿರುವ ಉತ್ತರ ಪ್ರದೇಶ ಆರೋಗ್ಯ ಮತ್ತು ಶಿಕ್ಷಣದಲ್ಲಿ ಕೊನೆಯ ಸ್ಥಾನದಲ್ಲಿ ಗುರುತಿಸಿಕೊಳ್ಳುತ್ತಿದೆ. ಇನ್ನೊಂದು ಪ್ರಮುಖ ಅಂಶವನ್ನು ನಾವು ಗಮನಿಸಬೇಕಾಗಿದೆ.

ಇತ್ತೀಚೆಗೆ ಅಮಿತ್ ಶಾ, ದಕ್ಷಿಣ ಭಾರತದ ಮೇಲೆ ಹಿಂದಿಯನ್ನು ಹೇರುವ ಸೂಚನೆಯನ್ನು ನೀಡಿದ್ದರು. ಇಡೀ ದೇಶ ಒಂದು ಭಾಷೆಯ ಮೇಲೆ ಜೋಡಿಸಲ್ಪಟ್ಟರೆ ಅಭಿವೃದ್ಧಿಯಾಗಲು ಅನುಕೂಲವಾಗುತ್ತದೆ ಎನ್ನುವುದು ಅವರ ಮಾತಿನ ಸಾರಾಂಶವಾಗಿತ್ತು. ಆದರೆ, ಎಲ್ಲ ರಂಗಗಳಲ್ಲೂ ಇಂದು ಹಿಂದಿ ಭಾಷೆ ಅರಿಯದ ದಕ್ಷಿಣ ಭಾರತದ ರಾಜ್ಯಗಳೇ ಮುಂಚೂಣಿಯಲ್ಲಿವೆ. ಹಿಂದಿ ಗೊತ್ತಿರುವ ಉತ್ತರ ಪ್ರದೇಶ ಕೊನೆಯ ಸ್ಥಾನದಲ್ಲಿದೆ. ಜೊತೆಗೆ ಆ ರಾಜ್ಯ ಇಂದು ಕ್ರಿಮಿನಲ್ ಪ್ರಕರಣ, ಗಲಭೆ, ಅತ್ಯಾಚಾರಗಳಿಗಾಗಿ ದೇಶದಲ್ಲಿ ಗುರುತಿಸಲ್ಪಡುತ್ತಿದೆ. ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತದಲ್ಲಿ ಅಪರಾಧ ಪ್ರಕರಣಗಳು ತೀರಾ ಕಡಿಮೆ.

ಹಿಂದಿ ಮಾತನಾಡುತ್ತಾ ಹಿಂದುಳಿಯುತ್ತಾ ಬಂದಿರುವ ರಾಜ್ಯಗಳನ್ನು ದಕ್ಷಿಣ ಭಾರತದ ಮೇಲೆ ಹೇರುವ ಪ್ರಯತ್ನದ ಭಾಗವಾಗಿ ಹಿಂದಿಯನ್ನು ‘ರಾಷ್ಟ್ರ ಭಾಷೆ’ಯನ್ನಾಗಿಸುವ ಸಂಚು ನಡೆಯುತ್ತಿದೆ. ಉತ್ತರ ಭಾರತದ ಕೋಮುಗಲಭೆ, ಮನುಸಿದ್ಧಾಂತ, ವೈದಿಕ ಸಂಸ್ಕೃತಿ, ಉದ್ವಿಗ್ನಕಾರಿ ಭಾಷಣ, ವೌಢ್ಯ ಇತ್ಯಾದಿಗಳನ್ನೆಲ್ಲ ದಕ್ಷಿಣ ಭಾರತದ ಮೇಲೆ ಹೇರುವುದಕ್ಕಾಗಿಯೇ ಹಿಂದಿಯನ್ನು ಜನಪ್ರಿಯಗೊಳಿಸುವ ಪ್ರಯತ್ನ ನಡೆಯುತ್ತಿದೆ. ದಕ್ಷಿಣ ಭಾರತ ತನ್ನದೇ ಪ್ರಾದೇಶಿಕ ಭಾಷೆಗಳನ್ನು ಏಣಿಯಾಗಿ ಬಳಸಿಕೊಂಡು ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ. ಉತ್ತರ ಭಾರತೀಯರಿಗೆ ಅಭಿವೃದ್ಧಿಯ ಕನಸುಗಳಿದ್ದರೆ, ಅವರೂ ದಕ್ಷಿಣ ಭಾರತದ ಒಂದೆರಡು ಭಾಷೆಗಳನ್ನಾದರೂ ಕಲಿಯಲಿ. ದೇಶ ಸಮಗ್ರವಾಗಿ ಅಭಿವೃದ್ಧಿಯಾಗಬೇಕಾದಲ್ಲಿ ಉತ್ತರಭಾರತೀಯರು ತಮ್ಮ ಹುಸಿ ಮೇಲರಿಮೆಯನ್ನು ಕಳಚಿಟ್ಟು, ದಕ್ಷಿಣ ಭಾರತದ ಕಡೆಗೆ ತಮ್ಮ ಬಾಹುಗಳನ್ನು ಚಾಚಬೇಕಾಗಿದೆ. ಆಡಳಿತಕ್ಕೆ ಇಲ್ಲಿನ ರಾಜ್ಯಗಳನ್ನು ಮಾದರಿಯಾಗಿಸಿಕೊಳ್ಳಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)