varthabharthi

ಆರೋಗ್ಯ

ಹೃದ್ರೋಗಗಳಲ್ಲಿ ಕರ್ಕುಮಿನ್‌ನ ರಕ್ಷಣಾತ್ಮಕ ಪಾತ್ರದ ಬಗ್ಗೆ ನಿಮಗೆ ಗೊತ್ತಿರಲಿ

ವಾರ್ತಾ ಭಾರತಿ : 3 Oct, 2019

ಹೆಚ್ಚಿನವರಿಗೆ ತಮ್ಮ ಬಾಲ್ಯದಲ್ಲಿ ಯಾವುದೇ ಅನಾರೋಗ್ಯವುಂಟಾದರೂ ತಾಯಂದಿರು ಅರಿಷಿಣ ಬೆರೆತ ಹಾಲನ್ನು ಕುಡಿಸುತ್ತಿದ್ದುದು ನೆನಪಿರಬಹುದು. ಈಗೀಗ ನಗರಗಳಲ್ಲಿ ಎಲ್ಲದಕ್ಕೂ ವೈದ್ಯರ ಬಳಿ ಧಾವಿಸುವ ಪ್ರವೃತ್ತಿ ಹೆಚ್ಚಾಗಿರುವುದರಿಂದ ಈ ಪದ್ಧತಿ ಹೆಚ್ಚು ಬಳಕೆಯಲ್ಲಿಲ್ಲ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ತಾಯಂದಿರು ತಮ್ಮ ಮಕ್ಕಳಿಗೆ ಅನಾರೋಗ್ಯ ಕಾಡಿದರೆ ಮೊದಲು ಕುಡಿಸುವುದೇ ಅರಿಷಿಣ ಬೆರೆತ ಹಾಲನ್ನು,ವೈದ್ಯರ ಬಳಿಗೆ ಹೋಗುವುದೇನಿದ್ದರೂ ನಂತರ. ಅರಿಷಿಣ ಭಾರತೀಯ ಅಡಿಗೆಮನೆಗಳಲ್ಲಿ ಕಾಯಂ ಸದಸ್ಯನಾಗಿದೆ ಮತ್ತು ಕರ್ಕುಮಿನ್ ಅದರಲ್ಲಿರುವ ಕ್ರಿಯಾಶೀಲ ಘಟಕವಾಗಿದೆ. ಕರ್ಕುಮಿನ್ ಶಕ್ತಿಶಾಲಿ ಜೈವಿಕ ಗುಣಲಕ್ಷಣಗಳನ್ನು ಹೊಂದಿದೆ ಎನ್ನುವುದು ವೈಜ್ಞಾನಿಕವಾಗಿ ಸಿದ್ಧಗೊಂಡಿದೆ. ಆಯುರ್ವೇದದಲ್ಲಿ ಶತಮಾನಗಳಿಂದಲೂ ದೀರ್ಘಕಾಲಿಕ ನೋವು, ಉರಿಯೂತ, ಯಕೃತ್ತಿನ ತೊಂದರೆ ಮತ್ತು ಜೀರ್ಣಾಂಗದ ಅನಾರೋಗ್ಯ ಇತ್ಯಾದಿ ಕಾಯಿಲೆಗಳ ಚಿಕಿತ್ಸೆಯಲ್ಲಿ ಅರಿಷಿಣವನ್ನು ಬಳಸಲಾಗುತ್ತಿದೆ.

ಕರ್ಕುಮಿನ್ ಹೃದ್ರೋಗಗಳುಂಟಾಗುವ ಅಪಾಯವನ್ನೂ ತಗ್ಗಿಸುತ್ತದೆ ಎನ್ನುವುದನ್ನು ಇತ್ತೀಚಿನ ಅಧ್ಯಯನಗಳು ಸಾಬೀತುಗೊಳಿಸಿವೆ.

   ನಾವು ಅಡಿಗೆಮನೆಯಲ್ಲಿ ಬಳಸುವ ಅರಿಷಿಣವು ಕೇವಲ ಶೇ.3ರಿಂದ ಶೇ.5ರಷ್ಟು ಕರ್ಕುಮಿನ್ ಅನ್ನು ಒಳಗೊಂಡಿರುತ್ತದೆ ಮತ್ತು ಅದರ ಆರೋಗ್ಯಲಾಭಗಳನ್ನು ಪೂರ್ಣವಾಗಿ ಪಡೆಯಲು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕಾಗುತ್ತದೆ. ಕರ್ಕುಮಿನ್‌ನ ಲಾಭಗಳನ್ನು ನೀಡುವ ಕ್ಯಾಪ್ಸೂಲ್‌ಗಳು ಔಷಧಿ ಅಂಗಡಿಗಳಲ್ಲಿ ದೊರೆಯುತ್ತವೆ ಮತ್ತು ಇವುಗಳನ್ನು ಅತಿಯಾದ ಪ್ರಮಾಣದಲ್ಲಿ ಸೇವಿಸಿದರೂ ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ. ಶರೀರವು ಈ ಕ್ಯಾಪ್ಸೂಲ್‌ನ್ನು ಸುಲಭವಾಗಿ,ತ್ವರಿತವಾಗಿ ಹೀರಿಕೊಳ್ಳುತ್ತದೆ ಎನ್ನುತ್ತಾರೆ ವೈದ್ಯಕೀಯ ತಜ್ಞರು.

ಕರ್ಕುಮಿನ್ ಹೃದಯಕ್ಕೆ ಹೇಗೆ ನೆರವಾಗುತ್ತದೆ?

ಅರಿಷಿಣ ಸೇವನೆಯು ಹೃದಯಾಘಾತದ ಸಾಧ್ಯತೆಯನ್ನು ಶೇ.65ರಷ್ಟು ಕಡಿಮೆಗೊಳಿಸುತ್ತದೆ. ಅದು ಹೃದಯಾಘಾತ ಮತ್ತು ಅಪಧಮನಿ ಕಾಠಿಣ್ಯದ ವಿರುದ್ಧ ಹಲವಾರು ರೀತಿಗಳಲ್ಲಿ ರಕ್ಷಣೆ ನೀಡುತ್ತದೆ. ಅದು ಮುಖ್ಯವಾಗಿ ಅಪಧಮನಿಗಳು ಸಂಕುಚಿತಗೊಳ್ಳುವುದನ್ನು ತಡೆಯುತ್ತದೆ,ತನ್ಮೂಲಕ ಹೃದಯದ ಸ್ನಾಯುಗಳಿಗೆ ನಿರಂತರ ರಕ್ತಪೂರೈಕೆಗೆ ನೆರವಾಗುತ್ತದೆ.

ಅರಿಷಿಣವು ಉರಿಯೂತ ನಿರೋಧಕವಾಗಿರುವುದರಿಂದ ಹೃದಯಾಘಾತಕ್ಕೆ ಪ್ರಮುಖ ಕಾರಣಗಳಲ್ಲೊಂದಾಗಿರುವ ರಕ್ತವು ದಪ್ಪಗಾಗುವುದನ್ನು ನಿಧಾನಗೊಳಿಸುತ್ತದೆ. ಅದು ಇನ್ಸುಲಿನ್ ಪ್ರತಿರೋಧದ ಅವಕಾಶಗಳನ್ನೂ ತಗ್ಗಿಸುತ್ತದೆ.

 ಅರಿಷಿಣದಲ್ಲಿರುವ ಕರ್ಕುಮಿನ್ ಹೃದಯದ ಅಂಗಾಂಶಗಳಿಗೆ ಆಗಿರುವ ಹಾನಿಯನ್ನು ನಿವಾರಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಬೈಪಾಸ್ ಸರ್ಜರಿಯ ಬಳಿಕ ಚಿಕಿತ್ಸೆಯಲ್ಲಿ ಸಾಕಷ್ಟು ನೆರವಾಗುತ್ತದೆ. ಅದು ಶರೀರದಲ್ಲಿ ಕೊಲೆಸ್ಟ್ರಾಲ್ ಮಟ್ಟಗಳನ್ನು ಸಮತೋಲನಗೊಳಿಸಲೂ ನೆರವಾಗುತ್ತದೆ. ಹೃದಯಾಘಾತ ಅಥವಾ ಹೃದ್ರೋಗಗಳು ಕಾಡಿದ್ದರೆ ಜೀವಕೋಶಗಳ ಸಾವಿನ ವಿರುದ್ಧವೂ ಕರ್ಕುಮಿನ್ ರಕ್ಷಣೆಯನ್ನು ನೀಡುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)