varthabharthi

ನಿಮ್ಮ ಅಂಕಣ

ಎಸ್ಸಿ ಪಿಎಚ್.ಡಿ. ವಿದ್ಯಾರ್ಥಿಗಳಿಗೆ ಕುತ್ತು

ವಾರ್ತಾ ಭಾರತಿ : 4 Oct, 2019
ಲಕ್ಷ್ಮೀಕಾಂತ ಗೋಡ್‌ಬೋಲೆ, ವಾಡಿ

ಮಾನ್ಯರೇ,

ಎಲ್ಲಾ ಸಮುದಾಯದ ಪಿಎಚ್.ಡಿ. ವಿದ್ಯಾರ್ಥಿಗಳಿಗೆ ಕೇಂದ್ರ ಸರಕಾರದಿಂದ ಫೆಲೋಶಿಪ್ ನೀಡುವಂತೆ ಪ್ರತೀ ವರ್ಷ ಎಸ್ಸಿ ಪಿಎಚ್.ಡಿ. ವಿದ್ಯಾರ್ಥಿಗಳಿಗೆ ರಾಜೀವ್ ಗಾಂಧಿ ನ್ಯಾಷನಲ್ ಫೆಲೋಶಿಪ್ ನೀಡುತ್ತಿದೆ. ಆದರೆ 2017-18ನೇ ಸಾಲಿನಿಂದ ಫೆಲೋಶಿಪ್‌ಗಾಗಿ ಅರ್ಜಿ ಆಹ್ವಾನಿಸಿಲ್ಲ. ಆದರೆ ದಿನಾಂಕ 17-09-2019ರಂದು ಯುಜಿಸಿಯು ತನ್ನ ವೆಬ್‌ಸೈಟ್‌ನಲ್ಲಿ ಎಸ್ಸಿ ಪಿಎಚ್.ಡಿ. ವಿದ್ಯಾರ್ಥಿಗಳಿಗಾಗಿ ‘ನ್ಯಾಷನಲ್ ಫೆಲೋಶಿಪ್ ಫಾರ್ ಶೆಡೂಲ್ಡ್ ಕಾಸ್ಟ್’ ಎಂಬ ಹೆಸರಿನಲ್ಲಿ ಅರ್ಜಿ ಆಹ್ವಾನಿಸಿದ್ದು, 2017ರಿಂದ 2 ವರ್ಷಗಳ ನಂತರ ಫೆಲೋಶಿಪ್‌ಗಾಗಿ ಅರ್ಜಿ ಆಹ್ವಾನಿಸಿದ್ದು ಖುಷಿ ಎನ್ನುವುದಕ್ಕಿಂತ ಈ ಅಧಿಸೂಚನೆಯನ್ನು ಓದಿದವರಿಗೆ ನಿರಾಶೆ, ಜೊತೆಗೆ ಬೇಸರವಾದರೆ ಅಚ್ಚರಿಯಿಲ್ಲ ಏಕೆಂದರೆ ಇಲ್ಲಿನ ಕೆಲವು ಮಾನದಂಡಗಳು ಗೊಂದಲ ಮೂಡಿಸುವುದಲ್ಲದೆ ಪಿಎಚ್.ಡಿ. ಮಾಡುತ್ತಿರುವ ಎಸ್ಸಿ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಈ ಹೊಸ ಫೆಲೋಶಿಪ್ ಯೋಜನೆ ಪ್ರಕಾರ ಅರ್ಜಿ ಹಾಕುವವರು ಯುಜಿಸಿ/ಎನ್‌ಟಿಎ ನೆಟ್ ಅನ್ನು ಕಡ್ಡಾಯವಾಗಿ ಪಾಸ್ ಆಗಿರಲೇಬೇಕು ಜೊತೆಗೆ ಯುಜಿಸಿಯು ಈ ಯೋಜನೆಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಅರ್ಹರ ಮೆರಿಟ್ ಪಟ್ಟಿಯೊಂದನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯನ್ನು 2018ರ ಜುಲೈ ಮತ್ತು ಡಿಸೆಂಬರ್ ತಿಂಗಳಲ್ಲಿ ನೆಟ್ ಪರೀಕ್ಷೆ ಪಾಸಾದವರು ಪಡೆದಿರುವ ಅಂಕಗಳನ್ನು ಆಧರಿಸಿ ಬಿಡುಗಡೆ ಮಾಡಿದೆ. ಅಂದರೆ ಈ ಪಟ್ಟಿಯಲ್ಲಿ ಇರುವವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು ಎಂದು ಹೇಳಿದೆ. ಅಚ್ಚರಿ ಎಂದರೆ ಈ ಪಟ್ಟಿಯಲ್ಲಿ ಇಲ್ಲದೇ ಇರುವವರು ಸಾಕಷ್ಟು ಜನ ನೆಟ್ ಪಾಸಾಗಿ ಪಿಎಚ್.ಡಿ. ಮಾಡುತ್ತಿದ್ದಾರೆ ಮತ್ತು ಪಟ್ಟಿಯಲ್ಲಿನ ಕೆಲವು ಮೆರಿಟ್ ಅಭ್ಯರ್ಥಿಗಳು ಪಿಎಚ್.ಡಿ. ಪ್ರವೇಶ ಪಡೆದಿರುವುದಿಲ್ಲ. ಆದರೆ ಇವರಿಗೆ ಇದೀಗ ಪಿಎಚ್.ಡಿ. ಪ್ರವೇಶಾತಿ ಪಡೆಯಲು 3 ವರ್ಷದೊಳಗೆ ಅವಕಾಶ ನೀಡಿದೆ. ಅಂದರೆ ಈ ಪಟ್ಟಿಯಲ್ಲಿ ಇದ್ದ ಕಾರಣಕ್ಕೇ ಇವರು ಪಿಎಚ್.ಡಿ. ಮಾಡಲು ಇದೀಗ ವಿಶ್ವವಿದ್ಯಾನಿಲಯಗಳಿಗೆ ಅಲೆದಾಡಿ ಹೇಗಾದರೂ ಪಿಎಚ್.ಡಿ. ಗಿಟ್ಟಿಸಿಕೊಳ್ಳುವವರು ಒಂದು ಕಡೆಯಾದರೆ ಈ ಪಟ್ಟಿಯಲ್ಲಿ ಮೆರಿಟ್ ಪ್ರಕಾರ ಅರ್ಹತೆ ಪಡೆಯದೇ ಫೆಲೋಶಿಪ್ ಸಿಗುವುದಿಲ್ಲ ಎಂದು ಸಂಕಟ ಪಡುವವರು ಇನ್ನೊಂದು ಕಡೆಯಾಗಿದ್ದಾರೆ. ಇಲ್ಲಿ ಕೆಲವು ಮೂಲ ಪ್ರಶ್ನೆಗಳು ಉದ್ಭವವಾಗುತ್ತವೆ. 1. ಪ್ರತೀ ವರ್ಷ ಕರೆಯಬೇಕಾದ ಎಸ್ಸಿ ಫೆಲೋಶಿಪ್ ಅನ್ನು 2 ವರ್ಷಗಳಿಂದ ಯಾಕೆ ಕರೆಯಲ್ಲಿಲ್ಲ? 2. ಬೇರೆ ಸಮುದಾಯದ ಪಿಎಚ್.ಡಿ. ವಿದ್ಯಾರ್ಥಿಗಳಿಗೆ ವಿಧಿಸದೇ ಇರುವ ಫೆಲೋಶಿಪ್‌ಗಾಗಿ ನೆಟ್ ಕಡ್ಡಾಯ ಎಂಬ ಮಾನದಂಡ ಎಸ್ಸಿ ಪಿಎಚ್.ಡಿ ವಿದ್ಯಾರ್ಥಿಗಳಿಗೆ ಮಾತ್ರ ಯಾಕೆ ವಿಧಿಸಲಾಗಿದೆ? 3. ಅರ್ಹರ ಪಟ್ಟಿ ಮಾಡಿದ್ದಾದರೂ ಯಾಕೆ? 4. ಈ ಫೆಲೋಶಿಪ್‌ಗಾಗಿ ಮೆರಿಟ್ ಆಧರಿಸಿ ಆಯ್ಕೆ ಮಾಡುವುದರ ಬಗ್ಗೆ ನೆಟ್ ಪರೀಕ್ಷೆಗಳ ಮುಂಚೆಯೇ ಯಾಕೆ ಘೋಷಿಸಲಿಲ್ಲ? 5. ಈಗೇಕೆ ನೆಟ್‌ನಲ್ಲಿ ಪಡೆದ ಅಂಕಗಳನ್ನು ಆಧರಿಸಿ ಮೆರಿಟ್ ಪಟ್ಟಿ ಮಾಡಲಾಗಿದೆ? ಈ ಪಟ್ಟಿಯಲ್ಲಿ ಇರುವವರೆಲ್ಲಾ ಪಿಎಚ್.ಡಿ. ಮಾಡುತ್ತಿರುವರೇ? ಅಥವಾ ಇನ್ನು ಮುಂದೆ ಮಾಡುವರೇ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುವರೋ ಗೊತ್ತಿಲ್ಲ ಆದರೆ ಇದೆಲ್ಲವೂ ಉದ್ದೇಶ ಪೂರ್ವಕವಾಗಿ ಎಸ್ಸಿ ವಿದ್ಯಾರ್ಥಿಗಳನ್ನು ತುಳಿಯಲು ಮಾಡಿದ ಸಂಚು ಎಂಬುವುದು ಈ ಯೋಜನೆಯಿಂದ ಸಾಬೀತಾಗಿದೆ. ಕೇಂದ್ರ ಸರಕಾರ ಉನ್ನತ ಶಿಕ್ಷಣದಲ್ಲಿ ಮಹತ್ವದ ಬದಲಾವಣೆಗಳನ್ನು ತರುವ ಆತುರದಲ್ಲಿ ಇಂತಹ ಅಸಂಬದ್ಧ ಯೋಜನೆಯೊಂದನ್ನು ಜಾರಿಗೆ ತರುವ ಮೂಲಕ ದೇಶದ ಎಲ್ಲಾ ಎಸ್ಸಿ ಪಿಎಚ್.ಡಿ. ವಿದ್ಯಾರ್ಥಿಗಳ ಜೀವನದ ಜೊತೆ ಆಟವಾಡುವುದರ ಜೊತೆಗೆ ಅವರಿಗೆ ಹಿಂಸೆ ನೀಡುವುದು ಒಪ್ಪುವಂತಹದ್ದಲ್ಲ. ಕೂಡಲೇ ಈ ಅರ್ಥವಿಲ್ಲದ ಯೋಜನೆಯನ್ನು ಕೈ ಬಿಟ್ಟು ಈ ಹಿಂದಿನಂತೆ ಮುಂದುವರಿಸಿದರೆ ದೇಶದ ಎಲ್ಲಾ ಎಸ್ಸಿ ಪಿಎಚ್.ಡಿ. ವಿದ್ಯಾರ್ಥಿಗಳ ಬದುಕು ನಿರಾಳವಾಗುವುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)