varthabharthi

ವಿಶೇಷ-ವರದಿಗಳು

ಜೆ.ಪಿ.ನಗರದ ರಜನಿ ಅನಂತಸ್ವಾಮಿ ಮನೆಯಲ್ಲಿ ವಿವಿಧ ರೀತಿಯ ಗೊಂಬೆಗಳ ಅನಾವರಣ

ಸಂಸ್ಕೃತಿ, ಇತಿಹಾಸ, ಮಾನವೀಯ ಮೌಲ್ಯಗಳನ್ನು ಗಟ್ಟಿಗೊಳಿಸುವ ಆಕರ್ಷಣೀಯ ಗೊಂಬೆಗಳ ಪ್ರದರ್ಶನ

ವಾರ್ತಾ ಭಾರತಿ : 4 Oct, 2019
ನೇರಳೆ ಸತೀಶ್‍ ಕುಮಾರ್

ಮೈಸೂರು,ಅ.4: ಭಾರತದ ಸಂಸ್ಕೃತಿ, ಪರಂಪರೆ, ಇತಿಹಾಸವನ್ನು ಪ್ರತಿಬಿಂಬಿಸುವ ಮಾನವೀಯ ಮೌಲ್ಯಗಳ ಸಂಬಂಧವನ್ನು ಗಟ್ಟಿಗೊಳಿಸುವ ಗೊಂಬೆಗಳ ಪ್ರದರ್ಶವನ್ನು ನಗರದ ಮನೆಯೊಂದರಲ್ಲಿ ಏರ್ಪಡಿಸಿದ್ದು, ಬಹು ಆಕರ್ಷಣೀಯ ಮತ್ತು ಸುಂದರವಾಗಿ ಪ್ರದರ್ಶನಗೊಳಿಸಲಾಗಿದೆ.

ನಗರದ ಜೆ.ಪಿ.ನಗರದ ಪೊಲೀಸ್ ಬೂತ್ ಬಳಿಯಲ್ಲಿರುವ ರಜನಿ ಅನಂತಸ್ವಾಮಿ ಅವರ ಮನೆಯಲ್ಲಿ ಆಕರ್ಷಣೀಯ ಮತ್ತು ಮಾನವೀಯ ಸಂಬಂಧಗಳ ಮೌಲ್ಯವನ್ನು ಬೆಸೆಯುವ ರೀತಿಯಲ್ಲಿ ದಸರಾ ಗೊಂಬೆಗಳನ್ನು ಪ್ರದರ್ಶನ ಮಾಡಲಾಗಿದ್ದು, ಐತಿಹಾಸಿಕ ಹಿನ್ನಲೆ ಮತ್ತು ರಾಜ ಮಹರಾಜರ ಪರಂಪರೆಯನ್ನು ಬಹಳ ಅಚ್ಚುಕಟ್ಟಾಗಿ ಮತ್ತು ಬಹುದೊಡ್ಡ ಇತಿಹಾಸವನ್ನು ಸಾರುವ ರೀತಿಯಲ್ಲಿ ಎಲ್ಲಾ ರೀತಿಯ ಗೊಂಬೆಗಳನ್ನು ಇಡಲಾಗಿದೆ.

ಮೈಸೂರು ದಸರಾ ಎಂದರೆ ಹಲವಾರು ಸಂಸ್ಕೃತಿ ಆಚಾರ ವಿಚಾರಗಳ ಅನಾವರಣ ಬಿಂಬಿತಗೊಳ್ಳುತ್ತದೆ. ನಮ್ಮ ವಂಶದ ಇತಿಹಾಸ ಮತ್ತು ಸಂಸ್ಕೃತಿಗಳ ಅನಾವರಣ ಒಂದು ಕಡೆಯಾದರೆ ನಮ್ಮ ಹಿರಿಯರಿಗೆ ಗೌರ ಸಮರ್ಪಿಸುವ ಪಿತೃಪಕ್ಷದ ಆಚರಣೆ ಒಂದು ಕಡೆ. ಎಲ್ಲಾ ರೀತಿಯಲ್ಲಿ ನಮ್ಮ ಸಂಸ್ಕೃತಿ ಆಚಾರ ವಿಚಾರಗಳ ಸಮಾಗಮವೇ ಈ ಹಬ್ಬ.

ಇಂತಹ ಸುಂದರ ಮತ್ತು ಐತಿಹಾಸಿಕ ಹಿನ್ನೆಲೆಯುಳ್ಳ ಹಬ್ಬವನ್ನು ಜಾತಿ, ಧರ್ಮ ಬೇದವಿಲ್ಲದೆ ಎಲ್ಲರೂ ತಮ್ಮ ತಮ್ಮ ಇಚ್ಛಾನುಸಾರ ಆಚರಣೆ ಮಾಡುತ್ತಾರೆ. ಅಂತಹ ವಿಶೇಷತೆಗಳಲ್ಲಿ ಒಂದಾದ ಗೊಂಬೆಗಳ ಪ್ರದರ್ಶನ ಬಹಳ ಮಹತ್ವವನ್ನು ಪಡೆದುಕೊಂಡಿದೆ. ಈ ಹಿಂದೆ ನಗರದ ಬಹುತೇಕ ಮನೆಗಳಲ್ಲಿ ಗೊಂಬೆಗಳ ಪ್ರದರ್ಶನ ಮಾಡಿ ನವರಾತ್ರಿಯ ಒಂಬತ್ತು ದಿನಗಳೂ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತಿದ್ದವು. ಆದರೆ ಬರುಬರುತ್ತ ಕ್ಷೀಣಿಸುತ್ತಿರುವ ಸಂದರ್ಭದಲ್ಲಿ ನಗರದ ಕೆಲವು ಕಡೆಗಳಲ್ಲಿ ಈ ಆಚರಣೆ ಜೀವಂತವಾಗಿದ್ದು, ಗೊಂಬೆಗಳ ಪ್ರದರ್ಶನದ ಮೂಲಕ ನಮ್ಮ ಹಿಂದಿನ ಎಲ್ಲಾ ಸಂದರ್ಭಗಳನ್ನು ಕಣ್ಣಿಗೆ ಕಟ್ಟಿಕೊಡುವ ವ್ಯವಸ್ಥೆಯನ್ನು ಮಾಡಲಾಗಿದೆ.

ನಗರದ ಜೆ.ಪಿ.ನಗರದ ನಿವಾಸಿ ರಜನಿ ಅನಂತಸ್ವಾಮಿ ತಮ್ಮ ಚಿಕ್ಕ ಮತ್ತು ಚೊಕ್ಕದಾದ ಮನೆಯಲ್ಲಿ ನವರಾತ್ರಿಯ ಗೊಂಬೆಗಳನ್ನು ಬಹಳ ವಿಶಿಷ್ಟ ಮತ್ತು ಆಧುನಿಕ ಶೈಲಿಯಲ್ಲಿ ಕುಳ್ಳಿರಿಸಿ ಸಾಂಸ್ಕೃತಿಕ ಹಿನ್ನೆಲೆ ಮತ್ತು ಆಚಾರ ವಿಚಾರಗಳನ್ನು ಬಹುದೊಡ್ಡ ಮಟ್ಟದಲ್ಲಿ ಸಾರಿದ್ದಾರೆ. ಗೊಂಬೆಗಳ ಪ್ರದರ್ಶನದಲ್ಲಿ ಏನಿದೆ ಎನ್ನುವುದಕ್ಕಿಂತ ಎಲ್ಲವೂ ಅಲ್ಲಿ ಅನಾವರಣಗೊಂಡಿದೆ. ರಜನಿ ಅವರು ಹೇಳುವ ಪ್ರಕಾರ ಎಲ್ಲಾ ರೀತಿಯಲ್ಲೂ ನಾವು ಗೊಂಬೆಗಳನ್ನು ಪ್ರದರ್ಶನ ಮಾಡಿದ್ದು, ನಮ್ಮ ಆಚಾರ ವಿಚಾರಗಳನ್ನು ಬಿಂಬಿಸಿ ನಮ್ಮ ಯುವ ಪೀಳಿಗೆಗೆ ಪರಿಚಯಿಸುವ ದೃಷ್ಟಿಯಿಂದ ಈ ಆಚರಣೆಯನ್ನು ಕಳೆದ 12 ವರ್ಷಗಳಿಂದಲೂ ಆಯೋಜನೆ ಮಾಡಿಕೊಂಡು ಬರಲಾಗುತ್ತಿದೆ.

ಈ ಗೊಂಬೆಗಳ ಪ್ರದರ್ಶನದಿಂದ ನಮಗೆ ಮಾನಸಿಕ ಮತು ದೈಹಿಕ ನೆಮ್ಮದಿ ದೊರಕಿದ್ದು, ಮನೆಯಲ್ಲಿ ಅಷ್ಟ ಲಕ್ಷ್ಮಿ ಪೂಜೆ ಮಾಡಿದರೆ ನೆಮ್ಮದಿ, ಅಭಿವೃದ್ದಿ ಹೊಂದಲಿದೆ ಎಂಬ ಪ್ರತೀತಿ ಇದೆ. ಅದರಂತೆ ನಾವು ಆಚರಣೆ ಮಾಡಿಕೊಂಡು ಬರುತ್ತಿದ್ದು, ನಮ್ಮ ಮಕ್ಕಳು ಮೊಮ್ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರವನ್ನು ಪರಿಚಯಿಸುವ ಉದ್ದೇಶ ನಮ್ಮದಾಗಿದೆ ಎಂದು ಹೇಳಿದರು.

ನಮಗೆ ಗೊಂಬೆಗಳ ಸಂಗ್ರಹ ಒಂದು ಹವ್ಯಾಸವಾಗಿದ್ದು, ನಾವು ಎಲ್ಲೇ ಪ್ರವಾಸ ಹೋದರೂ ನಮಗೆ ವಿಶಿಷ್ಟ ಎನ್ನುವ ಗೊಂಬೆಗಳನ್ನು ಖರೀದಿಸುತ್ತೇವೆ. ನಾವು ತಿರುಪತಿ, ತಮಿಳುನಾಡು, ಚನ್ನಪಟ್ಟಣ, ಮೈಸೂರು, ಮತ್ತು ನಗರದ ಗೊಂಬೆ ಮನೆಗಳಲ್ಲಿ ಸುಮಾರು ಎರಡು ಸಾವಿರ ಗೊಂಬೆಗಳನ್ನು ಖರೀದಿಸಿ ಪ್ರದರ್ಶನಕ್ಕಿಡಲಾಗಿದೆ. ನಾವು ಅಷ್ಟಲಕ್ಷ್ಮಿ, ರಾಮಾಯಣ ಇತಿಹಾಸ ಸಾರುವ ಗೊಂಬೆಗಳು, ಸರಸ್ವತಿ, ಗಣಪತಿ, ವೆಂಕಟೇಶ್ವರ, ಪಟ್ಟದ ಬೊಂಬೆಗಳು, ತಾತ ಅಜ್ಜಿ, ಮುಪ್ಪಿನ ಕಾಲದಲ್ಲಿ ಮೊಮ್ಮಕಳ ಜೊತೆ ಕಾಲ ಕಳೆಯಬೇಕಾದ ಸಂದರ್ಭಗಳನ್ನು ಬಿತ್ತರಗೊಳಿಸುವ ಅಂಗಡಿ ಮನೆಗಳು, ಮಕ್ಕಳು ತಮ್ಮ ದೈನಂದಿನ ಆಟದಲ್ಲಿ ತೊಡಗಿಸಿಕೊಳ್ಳುವ ರೀತಿ ಸೇರಿದಂತೆ ಅನೇಕ ಗೊಂಬೆಗಳನ್ನು ಪ್ರದರ್ಶನ ಮಾಡಲಾಗಿದೆ ಎಂದು ಹೇಳಿದರು.

ಪ್ರಸ್ತುತ ದಿನಗಳಲ್ಲಿ ನಮ್ಮ ಜೊತೆಗಿನ ಸಂಬಂಧಗಳು ಮಾಯವಾಗುತ್ತಿದ್ದು ಅದನ್ನು ಗಟ್ಟಿಗೊಳಿಸುವ ಉದ್ದೇಶದಿಂದ ತಂದೆ, ತಾಯಿ ಸಂಬಂಧ, ತಾತಾ, ಅಜ್ಜಿಗಳ ಸಂಬಂಧವನ್ನು ಎತ್ತಿ ಹಿಡಿಯುವ ಗೊಂಬೆಗಳನ್ನು ಕೂರಿಸಲಾಗಿದೆ ಎಂದು ಹೇಳಿದರು.

ಮೈಸೂರು ದಸರಾಕ್ಕೆ 400 ವರ್ಷಗಳ ಇತಿಹಾಸ: ಜೆ.ಪಿ.ನಗರದ ಸಾಯಿಬಾಬಾ ದೇವಸ್ಥಾನ ಸಮಿತಿ ಅಧ್ಯಕ್ಷ ಹೆಡತಲೆ ಮಂಜುನಾಥ್ ಮಾತನಾಡಿ,  ಸುಮಾರು 400 ವರ್ಷ ಇತಿಹಾಸ ಇರುವ ಈ ದಸರಾ ಮಹೋತ್ಸವದ ಆಚರಣೆಯೇ ಒಂದು ವಿಶೇಷ, ಇದು ದೇಶ ವಿದೇಶಗಳ ಪ್ರಸಿದ್ದಿ ಹೊಂದಿದೆ. ಮೈಸೂರಿನ ಅಂದಿನ ಮಹರಾಜ ಮಮ್ಮಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಗೊಂಬೆಗಳ ಪ್ರದರ್ಶನ ಪ್ರವರ್ದಮಾನಕ್ಕೆ ಬಂತು. ನಂತರ ಅದು ಎಲ್ಲಾ ಕಡೆ ಹರಡಿ ಈ ಗೊಂಬೆಗಳ ಪ್ರದರ್ಶನವನ್ನು ರಾಜ್ಯದಲ್ಲೇ ಅಲ್ಲದೆ, ದೇಶ ಮತ್ತು ವಿದೇಶಗಳಲ್ಲೂ ಆಚರಣೆ ಮಾಡಲಾಗುತ್ತದೆ, ತಿರುಪತಿ, ತಮಿಳುನಾಡು, ಮೈಸೂರು, ಸೇರಿದಂತೆ ಗೊಂಬೆಗಳ ಪ್ರದರ್ಶನಗಳ ಸಮಯದಲ್ಲಿ ಗೊಂಬೆಗಳನ್ನು ಖರೀದಿಸಲಾಗಿದೆ ಎಂದು ಹೇಳಿದರು.

ರಾಜರಿಗೂ ದಸರಾಗೂ ಅವಿನಾಭಾವ ಸಂಬಂಧ: ಮೈಸೂರು ಮಹಾರಾಜರಿಗೂ ದಸರಾಗೂ ಅವಿನಾಭಾವ ಸಂಬಂಧ, ಹಾಗಾಗಿ ಅವರು ಈ ಹಬ್ಬಕ್ಕೆ ಬಹಳ ಮಹತ್ವವನ್ನು ನೀಡಿದ್ದು, ಈ ಹಿಂದೆ ರಾಜರ ದರ್ಬಾರ್ ನಲ್ಲಿ ಅವರನ್ನು ಚಿನ್ನದ ಅಂಬಾರಿಯಲ್ಲಿ ಕುಳ್ಳಿರಿಸಿಕೊಂಡು ಮೆರವಣಿಗೆ ಮಾಡಲಾಗುತ್ತಿತ್ತು. ನಂತರ ನಾಡಹಬ್ಬವನ್ನಾಗಿ ಪರಿವರ್ತಿಸಿ ನಾಡಿನ ಅಧಿದೇವತೆ ಶ್ರೀಚಾಮುಂಡೇಶ್ವರಿ ದೇವಿಯನ್ನು ಕುಳ್ಳಿರಿಸಿ ಎಲ್ಲ ವರ್ಗದವರನ್ನು ಸಾರುವ ರೀತಿಯಲ್ಲಿ ಆಚರಣೆ ಮಾಡಲಾಗುತ್ತಿದೆ ಎಂದು ಹೇಳಿದರು.

ಬೊಂಬೆಗಳ ಪ್ರದರ್ಶನದ ಮೂಲಕ ನಮ್ಮ ಇತಿಹಾಸ ಸಂಸ್ಕೃತಿಯನ್ನು ತಿಳಿಸಲಾಗುತ್ತೆ. ನಮ್ಮ ಯುವ ಪೀಳಿಗೆ ಹೇಳಿದರೆ ಅವರು ಕೇಳುವ ಸ್ಥಿತಿಯಲ್ಲಿಲ್ಲ, ಅದಕ್ಕೆ ವಿವಿಧ ಬಣ್ಣಗಳಿಂದ ಕೂಡಿದ ಬಹು ಆಕರ್ಷಣೀಯ ಗೊಂಬೆಗಳ ಮೂಲಕ ಎಲ್ಲವನ್ನು ತಿಳಿಸಬಹುದು. ಅದಕ್ಕಾಗಿ ನವರಾತ್ರಿಯ ಒಂಬತ್ತು ದಿನಗಳು ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ಇಟ್ಟು ಪೂಜೆ ಮಾಡಲಾಗುಕವುದು. ಈ ಗೊಂಬೆಗಳ ಪ್ರದರ್ಶನವನ್ನು ದಸರಾ ಮುಗಿಯುವವರೆಗೂ ಮಾಡಲಾಗುತ್ತದೆ ಎಂದು ಹೇಳಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)