varthabharthi

ನಿಮ್ಮ ಅಂಕಣ

ಮೂಗರ್ಜಿಗಿಲ್ಲ ಪುರಸ್ಕಾರ!

ವಾರ್ತಾ ಭಾರತಿ : 4 Oct, 2019
-ಲಕ್ಷ್ಮೀಕಾಂತರಾಜು ಎಂ.ಜಿ. ಮಠಗ್ರಾಮ, ಗುಬ್ಬಿ

ಮಾನ್ಯರೇ

ಭ್ರಷ್ಟಾಚಾರ ಮತ್ತು ಅಧಿಕಾರಿ/ಸಿಬ್ಬಂದಿಯ ಬೇಜವಾಬ್ದಾರಿಗಳನ್ನು ಮೇಲಧಿಕಾರಿಗಳಿಗೆ ಅಥವಾ ಸರಕಾರದ ಮಟ್ಟಕ್ಕೆ ಸಾರ್ವಜನಿಕರು ಮೂಗರ್ಜಿಯ ಮೂಲಕ ತಲುಪಿಸುತ್ತಿದ್ದ ಅರ್ಜಿಗಳನ್ನು ಪುರಸ್ಕರಿಸಬಾರದೆಂದು ರಾಜ್ಯದಲ್ಲಿನ ಬಿಜೆಪಿ ಸರಕಾರದ ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ರಾಜ್ಯ ಮುಖ್ಯ ಕಾರ್ಯದರ್ಶಿಗಳು ಆದೇಶ ಮಾಡಿದ್ದಾರೆ. ಈ ಆದೇಶದ ಅನ್ವಯ ದೂರು ಅರ್ಜಿಗಳನ್ನು ಅನಾಮೆಧೇಯವಾಗಿ ಬರೆದ ಪತ್ರಗಳಿಗೆ ಇನ್ನು ಮುಂದೆ ಕಿಮ್ಮತ್ತಿರುವುದಿಲ್ಲ. ಈ ಆರ್ಜಿಯನ್ನು ಆಧರಿಸಿ ತನಿಖೆ ನಡೆಯುವುದಿಲ್ಲ.

ಸರಕಾರದ ಈ ನಡೆಯಿಂದ ಅಧಿಕಾರಿಗಳ ಭ್ರಷ್ಟಾಚಾರ ಮತ್ತು ಅಕ್ರಮಗಳನ್ನು ಮೂಗರ್ಜಿಯ ಮೂಲಕ ತಿಳಿಸಲಿದ್ದ ಅವಕಾಶ ಸಾರ್ವಜನಿಕರಿಗೆ ತಪ್ಪಿಹೋಗಿದೆ. ಕಣ್ಣಾರೆ ಕಂಡು ನೇರವಾಗಿ ದೂರು ನೀಡಿ ವೈಯಕ್ತಿಕ ದ್ವೇಷ ಕಟ್ಟಿಕೊಳ್ಳಲಾಗದ ಮನೋಭಾವ ಉಳ್ಳ ಸಾರ್ವಜನಿಕರು ಮೂಗರ್ಜಿಯ ಮೂಲಕ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಕನಿಷ್ಠ ಮಟ್ಟಿಗಾದರೂ ಅಕ್ರಮ ತಡೆಯುತ್ತಿದ್ದರು.ಇನ್ನು ಮುಂದೆ ಅದೂ ನಡೆಯುವುದಿಲ್ಲ.

ಮೂಗರ್ಜಿಯ ಮೂಲಕ ಬಂದ ದೂರು ಅಂತಿಮವೇನಲ್ಲ. ಅರ್ಜಿಯಲ್ಲಿ ಆರೋಪಿತ ಅಧಿಕಾರಿ ಸಿಬ್ಬಂದಿಯನ್ನು ತನಿಖೆ ಗೊಳಪಡಿಸಿ ಆರೋಪ ಸಾಬೀತಾಗದೆ ಇದ್ದರೆ ಅರ್ಜಿ ವಜಾ ಮಾಡಲಿ. ಅದು ಬಿಟ್ಟು ಮೂಗರ್ಜಿಯ ಅವಕಾಶವನ್ನೇ ತಪ್ಪಿಸಿದರೆ ಹೇಗೆ? ಮೂಗರ್ಜಿಯ ಮೂಲಕ ನೈಜ ದೂರನ್ನು ದಾಖಲಿಸುತ್ತಿದ್ದವರಿಗೆ ಇದೊಂದು ರೀತಿಯ ಹಿನ್ನಡೆಯೇ ಸರಿ. ಇದೇ ಮೂಗರ್ಜಿಗಳ ದೂರುಗಳು ಪೊಲೀಸರ ತನಿಖೆಗೂ ನೆರವಾಗಿವೆ.

ಈ ಮೂಗರ್ಜಿಯನ್ನು ಆಧರಿಸಿ ಅಧಿಕಾರಿ/ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಬಾರದೆಂಬ ಸರಕಾರದ ಆದೇಶ, ಹೊರ ಬರಬೇಕಾದ ಅಕ್ರಮಗಳನ್ನು ಅಲ್ಲೇ ಮುಚ್ಚಿಹಾಕುವ ಪ್ರಯತ್ನವಾಗಿದ್ದು, ಭ್ರಷ್ಟಾಚಾರ ಬಯಲಿಗೆಳೆಯುವ ಪ್ರಬಲ ಮಾಧ್ಯಮವೊಂದನ್ನು ಮುಚ್ಚಿಹಾಕಿದ ಕೀರ್ತಿ ರಾಜ್ಯ ಬಿಜೆಪಿ ಸರಕಾರಕ್ಕೆ ಸಲ್ಲುತ್ತದೆ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)