varthabharthi

ಕ್ರೀಡೆ

‘ಟಾಪ್ಸ್’ಗೆ ರವಿ ದಹಿಯಾ ಸೇರ್ಪಡೆ, ಸಾಕ್ಷಿ ಮಲಿಕ್ ಹೊರಕ್ಕೆ

ವಾರ್ತಾ ಭಾರತಿ : 5 Oct, 2019

ಹೊಸದಿಲ್ಲಿ, ಅ.4: ಭಾರತ ಕ್ರೀಡಾ ಪ್ರಾಧಿಕಾರದ ಟಾರ್ಗೆಟ್ ಒಲಿಂಪಿಕ್ಸ್ ಪೋಡಿಯಂ ಸ್ಕೀಂ(ಟಾಪ್ಸ್)ನಿಂದ ಮಹಿಳಾ ಕುಸ್ತಿಪಟು ಸಾಕ್ಷಿ ಮಲಿಕ್‌ರನ್ನು ಹೊರಗಿಡಲಾಗಿದ್ದು ಇತ್ತೀಚೆಗೆ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಯುವ ಕುಸ್ತಿಪಟು ರವಿ ದಹಿಯಾ ಸೇರ್ಪಡೆಗೊಂಡಿದ್ದಾರೆ. ‘ಟಾಪ್ಸ್’ ಯೋಜನೆಯಲ್ಲಿ ಅವಕಾಶ ಪಡೆದ ಕ್ರೀಡಾಳುಗಳಿಗೆ ಒಲಿಂಪಿಕ್ಸ್‌ಗೆ ಸಿದ್ಧತೆ ನಡೆಸಲು ಪ್ರತೀ ತಿಂಗಳೂ 50,000 ರೂ. ನೆರವು ನೀಡಲಾಗುತ್ತದೆ. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಸಾಕ್ಷಿ ಕಳೆದ ಹಲವು ಸಮಯದಿಂದ ಲಯ ಕಂಡುಕೊಳ್ಳಲು ವಿಫಲವಾಗಿದ್ದು ಕಝಖ್‌ಸ್ತಾನ್‌ನಲ್ಲಿ ನಡೆದಿದ್ದ ಟೂರ್ನಿಯಲ್ಲಿ ಮಹಿಳೆಯರ 62 ಕಿ.ಗ್ರಾಂ ವಿಭಾಗದಲ್ಲಿ ಪ್ರಥಮ ಸುತ್ತಿನಲ್ಲಿಯೇ ಸೋತು ಹೊರಬಿದ್ದರೆ , ಇದೇ ಟೂರ್ನಿಯ ಪುರುಷರ 57 ಕಿ.ಗ್ರಾಂ ಫ್ರೀಸ್ಟೈಲ್ ವಿಭಾಗದಲ್ಲಿ ಸ್ಪರ್ಧಿಸಿದ್ದ ರವಿ ಕಂಚಿನ ಪದಕ ಗೆದ್ದಿದ್ದರು. ವೇಯ್ಟಾಲಿಫ್ಟರ್ ಆರ್.ವಿ. ರಾಹುಲ್‌ರನ್ನೂ ‘ಟಾಪ್ಸ್’ ನಿಂದ ಕೈಬಿಡಲಾಗಿದೆ. ಇದೇ ವೇಳೆ ಕುಸ್ತಿಪಟು ಪೂಜಾ ಧಂಡ ತನ್ನ ಊರಾದ ಹಿಸಾರ್‌ನಲ್ಲಿ ರೊಮೇನಿಯಾದ ಕೋಚ್ ಫ್ಯಾನೆಲ್ ಕಾರ್ಪ್‌ರ ಉಸ್ತುವಾರಿಯಡಿ ಒಂದು ತಿಂಗಳ ತರಬೇತಿ ಪಡೆಯುವ ಪ್ರಸ್ತಾವನೆಗೂ ‘ಟಾಪ್ಸ್’ ಸಮಿತಿ ಅನುಮೋದನೆ ನೀಡಿದೆ. ಜೊತೆಗೆ, ವೇಯ್ಟ್‌ಲಿಫ್ಟರ್ ಮೀರಾಬಾ ಚಾನುಗೆ ಟೋಕಿಯೊ ಒಲಿಂಪಿಕ್ಸ್‌ನವರೆಗೆ ಫಿಸಿಯೋಥೆರಪಿಸ್ಟ್ ನೆರವು ಪಡೆಯಲು ಆರ್ಥಿಕ ಸಹಾಯ ಒದಗಿಸಲೂ ಸಮಿತಿ ಒಪ್ಪಿಗೆ ನೀಡಿದೆ. ಇತ್ತೀಚೆಗೆ ನಡೆದ ಸಮಿತಿ ಸಭೆಯಲ್ಲಿ 70 ಲಕ್ಷ ರೂ. ಮೊತ್ತದ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿದೆ. 2020, 2024 ಮತ್ತು 2028 ರಒಲಿಂಪಿಕ್ಸ್‌ನಲ್ಲಿ ಅನುಸರಿಸಬೇಕಾದ ಕಾರ್ಯತಂತ್ರದ ಬಗ್ಗೆ ಶೂಟಿಂಗ್, ಟೇಬಲ್ ಟೆನಿಸ್ ಮತ್ತು ವೇಯ್ಟೆ ಲಿಫ್ಟಿಂಗ್ ಫೆಡರೇಶನ್‌ಗಳು ಸಭೆಯಲ್ಲಿ ಮಾಹಿತಿ ನೀಡಿದವು. ಪುರುಷರ 3,000 ಮೀ. ಸ್ಟೀಪಲ್‌ಚೇಸ್ ಓಟಗಾರ ಅವಿನಾಶ್ ಸಬ್ಲೆ ಕೊಲರಾಡೊ ಸ್ಪ್ರಿಂಗ್ಸ್‌ನಲ್ಲಿ ಟೋಕಿಯೊ ಒಲಿಂಪಿಕ್ಸ್‌ವರೆಗೆ ತರಬೇತಿ ಪಡೆಯುವ ಪ್ರಸ್ತಾವನೆಗೂ ಸಮಿತಿ ಅನುಮೋದನೆ ನೀಡಿದೆ. ಬ್ಯಾಡ್ಮಿಂಟನ್ ಆಟಗಾರ ಸಮೀರ್ ವರ್ಮಾ ಡಚ್ ಓಪನ್, ಮಕಾವು ಓಪನ್ ಹಾಗೂ ಕೊರಿಯಾ ಮಾಸ್ಟರ್ಸ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಸಮಿತಿ ಅನುಮತಿ ನೀಡಿದೆ. 2019ರ ಡಿಸೆಂಬರ್‌ವರೆಗೆ 7 ಅಂತರ್‌ರಾಷ್ಟ್ರೀಯ ಟೂರ್ನಿಯಲ್ಲಿ ತನ್ನ ಫಿಟ್ನೆೆಸ್ ಟ್ರೈನರ್ ಜೊತೆ ಪಾಲ್ಗೊಳ್ಳುವ ಪ್ರಸ್ತಾವನೆಗೂ ಸಮಿತಿ ಒಪ್ಪಿಗೆ ನೀಡಿದೆ. ಶೂಟಿಂಗ್‌ನಲ್ಲಿ ಅಂಜುಂ ವೌದ್ಗಿಲ್, ರಾಹಿ ಸರ್ನೊಬಾಟ್, ಮನು ಭಾಕೆರ್, ಅಭಿಷೇಕ್ ವರ್ಮಾ, ಲಕ್ಷ ಶೆರೋನ್, ಮೆಹುಲಿ ಘೋಷ್ ಮತ್ತು ಅನಿಶ್ ಭನ್ವಾಲಾ ಅವರ ತರಬೇತಿ, ಸ್ಪರ್ಧಾ ಉಪಕರಣಗಳ ಹಾಗೂ ಪ್ರಯಾಣ ವೆಚ್ಚ ಪಾವತಿಸಲೂ ಸಮಿತಿ ಒಪ್ಪಿದೆ. ಐವರು ಪ್ಯಾರಾಬ್ಯಾಡ್ಮಿಂಟನ್ ಆಟಗಾರರಾದ ಪ್ರಮೋದ್ ಭಗತ್, ಸುಹಾಸ್ ಯಥಿರಾಜ್, ಮನೋಜ್ ಸರ್ಕಾರ್, ಸುಕಾಂತ್ ಕದಮ್ ಮತ್ತು ತರುಣ್ ಅವರು ಡೆನ್ಮಾರ್ಕ್ ಓಪನ್ ಪ್ಯಾರಾ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಪ್ರಸ್ತಾವನೆಗೆ ಸಮಿತಿ ಅನುಮೋದನೆ ನೀಡಿದೆ. ಪ್ಯಾರಾಶೂಟಿಂಗ್ ಮತ್ತು ಪ್ಯಾರಾಅಥ್ಲೆಟಿಕ್ಸ್‌ನಲ್ಲಿ ದೀಪೇಂದರ್ , ಶರದ್ ಕುಮಾರ್ ಮತ್ತು ಸಂದೀಪ್ ಚೌಧರಿಯ ತರಬೇತಿ ಮತ್ತು ಕ್ರೀಡಾ ಉಪಕರಣ ವೆಚ್ಚ ಭರಿಸುವ ಪ್ರಸ್ತಾವನೆಗೆ ಒಪ್ಪಿಗೆ ನೀಡಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)