varthabharthi

ಸುಗ್ಗಿ

‘ಪೊರಕೆ ಮತ್ತು ಒಡೆದ ಮಡಕೆ’ ನಾನು ಗಳಿಸಿದ ಆಸ್ತಿ ಎಂದಿದ್ದರು ಗಾಡ್ಗೆ ಮಹಾರಾಜ್

ಸ್ವಚ್ಛ ಭಾರತದ ಜನಕ 'ಬಾಬಾ ಗಾಡ್ಗೆ ಮಹಾರಾಜ್'

ವಾರ್ತಾ ಭಾರತಿ : 5 Oct, 2019
ಬಿ. ಗೋಪಾಲ್ ಬೆಂಗಳೂರು

ಬಾಬಾರವರು ಸಮಾಜದಿಂದ ವಂತಿಗೆ ಪಡೆದು ಸಮಾಜಕ್ಕಾಗಿ ಕಟ್ಟಿಸಿದ ಶಾಲೆಗಳು, ಆಶ್ರಮಗಳು, ಧರ್ಮಶಾಲೆ, ಆಸ್ಪತ್ರೆಗಳ ಬಗ್ಗೆ ಚರ್ಚಿಸುತ್ತಾ ಗಾಂಧೀಜಿ ಅವರು, ಸಂತರೇ ನಿಮ್ಮ ಆಸ್ತಿ ಎಷ್ಟಿದೆ ಎಂದಾಗ, ತಮ್ಮ ಕೈಯಲ್ಲಿದ್ದ ಪೊರಕೆ ಮತ್ತು ಅರ್ಧಮಡಕೆಯನ್ನು ಎತ್ತಿ ತೋರಿಸುತ್ತ ಇವೇ ನನ್ನ ಆಸ್ತಿ ಎಂದು ಉತ್ತರಿಸಿದ್ದರು. ಗಾಂಧೀಜಿ ಅವರು ಅಂದಿನ ಇವರ ಕೀರ್ತನೆಯನ್ನು ಕೇಳಿಸಿಕೊಂಡು ಪ್ರಭಾವಿತರಾಗಿ ಅವರೂ ಸ್ವಚ್ಛ ಭಾರತ ಅಭಿಯಾನವನ್ನು ದೇಶದಾದ್ಯಂತ ಪ್ರಾರಂಭಿಸಿದರೆಂದರೆ ಅದಕ್ಕೆ ಪ್ರೇರಣೆ ಬಾಬಾ ಗಾಡ್ಗೆಯವರೇ ಆಗಿದ್ದರು.

ಅಸ್ಪಶ್ಯ ದೋಭಿ (ಮಡಿವಾಳ) ಸಮಾಜದಲ್ಲಿ ಜನಿಸಿದ ಬಾಬಾ ಗಾಡ್ಗೆ ಮಹಾರಾಜ್ ಶಾಲೆಯ ಬಾಗಿಲು ತುಳಿದವರಲ್ಲ. ಆದರೆ ಭಗವಾನ್ ಗೌತಮ ಬುದ್ಧರಂತೆಯೇ ಮದುವೆಯಾಗಿ ಎರಡು ಮಕ್ಕಳಾದ ಮೇಲೆ ತಮ್ಮ 28ನೇ ವರ್ಷದಲ್ಲೇ ಸಾಂಸಾರಿಕ ಜೀವನ ತೊರೆದು ತಮ್ಮ 80ನೇ ವಯಸ್ಸಿನಲ್ಲಿ ತೀರಿಹೋಗುವ ತನಕ ಅಸ್ಪಶ್ಯತೆ ನಿವಾರಣೆ, ಮೂಢನಂಬಿಕೆಗಳನ್ನು ವಿರೋಧಿಸಿ ಸಮಾಜ ವನ್ನು ವಿದ್ಯಾವಂತ ರಾಗಲು ಪ್ರೇರೇಪಿಸಿದವರು. ಅವರು ಮನೆಬಿಟ್ಟು ಬಂದಾಗ ಒಂದು ಬ್ಯಾಗಿನಲ್ಲಿ ಒಂದು ತೆಂಗಿನ ಪೊರಕೆ ಮತ್ತು ಪಿಂಡಾಪಾತ್ರೆಯಾಗಿ ಅರ್ಧ ಒಡೆದ ಮಡಕೆ(ಗಡಿಗೆ) ತಲೆಯ ಮೇಲೆ ಹೊತ್ತು ಚಿಂದಿಬಟ್ಟೆಗಳನ್ನು ತಾನೇ ಖುದ್ದಾಗಿ ಹೊಲಿದು ಮೈಮುಚ್ಚಿ ಕೊಂಡು ದೇಶ ಪರ್ಯಟನೆ ಮಾಡಿದವರು.

ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಅಂಜಲಗಾಂವ ಸೂರ್ಜಿ ತಾಲೂಕಿನ ಶೆಂಗ್ಗಾವ್ ಎಂಬ ಗ್ರಾಮದಲ್ಲಿ ಅಸ್ಪಶ್ಯ ದೋಭಿ ಸಮಾಜದಲ್ಲಿ ಫೆಬ್ರವರಿ 23ನೇ ತಾರೀಖು 1876ರಲ್ಲಿ ಜನಿಸಿದರು. ಅವರ ಹುಟ್ಟು ಹೆಸರು ದೇಬು. ಇವರ ತಂದೆ ಜಿಂಗರಗಿ ಮತ್ತು ತಾಯಿ ಸಕ್ಕೂಬಾಯಿ. ತಂದೆ ಗ್ರಾಮದ ದೋಭಿ ಸಮಾಜದ ಮುಖ್ಯಸ್ಥ ರಾಗಿದ್ದು, ಆರು ಎಕರೆ ಜಮೀನು, ಸ್ವಂತ ಮನೆ ಹೊಂದಿದ್ದರು. ಮೂಢನಂಬಿಕೆಯಿಂದಾಗಿ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುತ್ತಾ ತನ್ನ ದೇಬು ಹುಟ್ಟಿದಾಗ ಊರಿಗೆಲ್ಲ ಮಾಂಸಾಹಾರ ಹಾಕಿ ಮದ್ಯದ ಹೊಳೆಯನ್ನೇ ಹರಿಸಿದ್ದರು. ಈ ಮೂಢನಂಬಿಕೆಯಿಂದಾಗಿ ಸಣ್ಣ ವಯಸ್ಸಿನಲ್ಲೇ ಕುಡಿತಕ್ಕೆ ದಾಸನಾಗಿ ಆರೂ ಎಕರೆ ಜಮೀನು ಕಳೆದುಕೊಂಡು ಕಡೆಗೆ ಮನೆಯನ್ನೂ ಮಾರಾಟ ಮಾಡಿ ತನ್ನ ಸ್ವಂತ ಊರಿನಲ್ಲೇ ಭಿಕಾರಿಯಾಗಿದ್ದ ಜಿಂಗರಗಿ. ಕಡೆಗೊಂದು ದಿನ ಹೆಂಡತಿ ಮಗನನ್ನು ಪಕ್ಕದಲ್ಲಿ ಕುಳ್ಳಿರಿಸಿಕೊಂಡು ನನ್ನ ಮಗನನ್ನು ದೇವಿ ದೇವತೆಗಳ ಕಡೆಗೆ ಕಳಿಸಬೇಡ ಮತ್ತು ನನ್ನಂತೆ ಮದ್ಯದ ದಾಸನನ್ನಾಗುವುದಕ್ಕೆ ಬಿಡಬೇಡ ಎಂದು ಹೇಳಿ ಕೊನೆಯುಸಿರೆಳೆದ.ಆಗ ದೇಬು ತಾಯಿ ಸಕ್ಕೂಬಾಯಿ ವಿಧಿಯಿಲ್ಲದೇ ತನ್ನ ತವರು ಮನೆಯಾದ ದಾಪುರ ಗ್ರಾಮಕ್ಕೆ ಬರಬೇಕಾಯಿತು.

ಗಾಡ್ಗೆ ಮಹಾರಾಜ್ ಜೊತೆ ಬಿ.ಆರ್. ಅಂಬೇಡ್ಕರ್

ತನ್ನ ತಮ್ಮ 60 ಎಕರೆ ಜಮೀನು ಉಳ್ಳ ಊರಿನ ಶ್ರೀಮಂತನೇ ಆಗಿದ್ದ. ಆಕೆಗೆ ಅನಾಥರಂತೆ ತಮ್ಮನ ಮನೆಯಲ್ಲಿ ಚಾಕರಿ ಮಾಡುವ ಪರಿಸ್ಥಿತಿ ಉಂಟಾಗಿತ್ತು. ತಾತಾ ಅಂಬಿದಾಸ ಕೋಲರ್ಸ್ ತನ್ನ ಮಗಳ ಮಗನನ್ನು ಪ್ರೀತಿಯಿಂದಲೇ ನೋಡಿ ಕೊಂಡನು. ಚಂದ್ರಬಾನನ ಹೆಂಡತಿ ಕೌತಿಕಾ ಬಾಯಿ ತಾರತಮ್ಯ ಮಾಡುತ್ತಿದ್ದಳು. ಮುಂದೆ ಈತ ತಮ್ಮ ಆಸ್ತಿಯ ಮೇಲೆ ಎಲ್ಲಿ ಕಣ್ಣು ಹಾಕುತ್ತಾನೋ ಎಂದು ಚಿಂತಿತ ಳಾಗಿದ್ದಳು. ತಾಯಿಯ ಸಲಹೆಯಂತೆ ಬಾಲಕ ದೇಬು ದನದಕೊಟ್ಟಿಗೆ ಯನ್ನು ಶುಚಿಮಾಡುವುದು, ಸೆಗಣಿ ತಿಪ್ಪೆಗೆ ಹಾಕುವುದು ಜೊತೆಗೆ ದನಕರುಗಳನ್ನು ಸಾಕುವ ಕೆಲಸವನ್ನು ಚಿಕ್ಕಂದಿನಿಂದಲೇ ಅಭ್ಯಾಸ ಮಾಡಿಕೊಂಡ. ರಾತ್ರಿ ವೇಳೆ ತಾಯಿ ಕಾಳುಬೀಸುವ ಸಮ ಯದಲ್ಲಿ ಹಾಡುವ ಹಾಡುಗಳನ್ನು ಕೇಳಿಸಿಕೊಳ್ಳುತ್ತಾ ನಿದ್ದೆ ಮಾಡುತ್ತಿದ್ದ. ತಾಯಿಯೇ ಈತ ಮುಂದೆ ಕೀರ್ತನ ಕಾರನಾಗಲು ಮೊದಲ ಗುರುವಾಗಿ ದ್ದಳು. ಹುಲ್ಲುಗಾವಲಿಗೆ ದನಗಳನ್ನು ಮೇಯಿಸಲು ಹೋಗುವ ಸಂದರ್ಭ ದಲ್ಲಿ ಊರಿನ ಹುಡುಗರ ಜೊತೆ ತಾಯಿ ಹಾಡುವ ಮತ್ತು ಭಜನಾ ಮಂಡಳಿ ಯವರು ಹಾಡುವ ಹಾಡುಗಳನ್ನು ಹಾಡುತ್ತ ಸಮಯ ಕಳೆಯುತ್ತಿದ್ದರು. ಇದು ಮುಂದುವರಿದಂತೆ ದೇಬುವಿನ ಕಂಠ ಸುಮಧುರ ಕಂಠವಾಗಿ ಮಾರ್ಪಟ್ಟಿತ್ತು. ಈತನ ಇಂಪಾದ ಕಂಠಸಿರಿ ಭಜನಾಮಂಡಳಿಯ ಗಮನಕ್ಕೆ ಬಂದು ಊರಿನ ದೇವಸ್ಥಾನದಲ್ಲಿ ಹಾಡುವ ಕಾರ್ಯಕ್ರ ಮದಲ್ಲಿ ಮುಖ್ಯ ಗಾಯಕನಾಗಿ ಹಾಡುವ ಅವಕಾಶ ಪಡೆದುಕೊಂಡ ದೇಬು.

ಪಕ್ಕದ ಊರಿನ ಜಾತ್ರೆಯಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಜಾತ್ರೆಯಲ್ಲಿ ನಡೆಯುತ್ತಿದ್ದ ಮೂಢನಂಬಿಕೆಯ ಕುರಿಕೋಳಿಗಳ ಬಲಿಗಳನ್ನು ಕಂಡು ಬೇಜಾರು ಮಾಡಿಕೊಂಡಿದ್ದ. ಈತನ ಕೆಲಸದ ನಿಷ್ಠೆಯನ್ನು ನೋಡಿದ ತಾತಾ ಅಂಬಿರಾಯ ಆಗ ಪೂರ್ತಿ ವ್ಯವಸಾಯದ ಜವಾಬ್ದಾರಿಯನ್ನು ದೇಬುವಿಗೆ ವಹಿಸಿದ. ಈತ ಸುತ್ತಮುತ್ತಲಿನ ಹಳ್ಳಿಗಳ ರೈತ ರಿಗೆ ಮಾದರಿ ರೈತನಾದ. ಇದರಿಂದ ಪ್ರಭಾವಿತಗೊಂಡ ಅನೇ ಕರು ಈತನ ಸಲಹೆ ಸೂಚನೆಗಳನ್ನು ಕೇಳ ಲು ಈತನಲ್ಲಿಗೆ ಬರು ವಂತಾಯಿತು.

ತಾಯಿ ಸಕ್ಕೂಬಾಯಿ 18 ವರ್ಷದ ತನ್ನ ಮಗನಿಗೆ ಮದುವೆ ಮಾಡುವ ಆಸೆಯನ್ನು ತಂದೆ ಅಂಬಿರಾಯ ಮತ್ತು ತಮ್ಮ ಚಂದ್ರ ಬಾನನ ಮುಂದಿಟ್ಟಳು. ಆದರೆ ಇವನಿಗೆ ಸ್ವಂತ ಜಮೀನಿಲ್ಲವೆಂದು ಅನೇಕರುಹೆಣ್ಣುಕೊಡಲು ನಿರಾಕರಿಸಿದರು. ಆಗ ಪಕ್ಕದ ಊರು ಕಮಲಾಪುರದ ದನಾಜಿ ಕಲ್ಲಾರ್‌ಕರ್ ಎಂಬ ವ್ಯಕ್ತಿ ಈತನ ಧೈರ್ಯ, ಸಾಹಸ, ನೇರ ನಡೆ ನುಡಿ, ಕರ್ತವ್ಯಶೀಲತೆ ಯನ್ನು ನೋಡಿ ತನ್ನ ಮಗಳಾದ ಕಾಂತಾ ಬಾಯಿ ಯನ್ನು ಕೊಟ್ಟು ಮದುವೆ ಮಾಡಿ ಸಿದನು. 1892ರಲ್ಲಿ ಈತನ ತಾತಾ ಮತ್ತು ಮಾವ ಜಮೀ ನಿನ ಪೂರ್ತಿ ವ್ಯವಸಾಯದ ಹೊಣೆಯನ್ನು ದೇಬುವಿಗೆ ವಹಿಸಿದ್ದರು.

ಅನ್ಯಾಯದ ವಿರುದ್ಧ ತಿರುಗಿಬಿದ್ದ ದೇಬು:

ಇದೇ ಊರಿನ ಮುಖ್ಯಸ್ಥ ಬಹುದೊಡ್ಡ ಶ್ರೀಮಂತ ಬನಾಜಿ ತಿಡಕೆ ಎಲ್ಲ ಬಡವರ ಜಮೀನುಗಳ ಮೇಲೆ ಸಾಲ ನೀಡುವುದು, ಚಕ್ರಬಡ್ಡಿ ಹಾಕುವುದು, ಸಾಧ್ಯವಾದರೆ ಬಡವರ ಜಮೀನುಗಳನ್ನು ಸ್ವಾಧೀನ ಪಡಿಸಿಕೊಳ್ಳುವುದು ಸರ್ವೆ ಸಾಮಾನ್ಯವಾಗಿತ್ತು. ಆದರೆ ಚಂದ್ರಬಾನ ಮಾತ್ರ ಇವನ ಬಳಿ ಬರುತ್ತಿರಲಿಲ್ಲ.

ಬನಾಜಿ ತಿಡಕೆ ಚಂದ್ರಬಾನನನ್ನು ಮಣಿಸಲು ಮಸಲತ್ತು ಮಾಡಿದ. ತನ್ನ ಐದು ಎಕರೆ ಜಮೀನನ್ನು ಚಂದ್ರಬಾನನಿಗೆ ಮಾರುವು ದಾಗಿ ವ್ಯಾಪಾರ ಕುದುರಿಸಿ ಸ್ವಲ್ಪಹಣ ಪಡೆದು ಕಂತುಗಳಲ್ಲಿ ತೀರಿಸ ಬೇಕು ಎಂದು ಹೇಳಿ ಯಾವುದೋ ಸಂದರ್ಭದಲ್ಲಿ ಬಿಳಿಹಾಳೆಯ ಮೇಲೆ ಈತನ ಹೆಬ್ಬೆಟ್ಟನ್ನು ಪಡೆದು ಈತನ 50 ಎಕರೆ ಜಮೀನನ್ನು ಲಪಟಾಯಿಸಿದ್ದ. ಓದು ಬರಹವಿರದ ಚಂದ್ರಬಾನು ಶ್ರೀಮಂತನಾಗಿದ್ದರೂ ಮೋಸ ಹೋಗಿ ಆಘಾತಕ್ಕೆ ಒಳಗಾಗಿದ್ದ. ದೇಬು ಶ್ರೀಮಂತ ಬನಾಜೆ ಹತ್ತಿರ ತಮ್ಮ ತಾತನ ಜಮೀನು ಆಕ್ರಮಿಸಿರುವುದನ್ನು ಬಿಟ್ಟುಕೊಡಲು ಪ್ರಾರ್ಥಿ ಸಿದ. ಕೊನೆಯ ದಿನ ಧಮಕಿ ಹಾಕಿ ಬಂದು ಹೊಲದಲ್ಲಿ ಮತ್ತೆ ವ್ಯವಸಾಯದ ಕೆಲಸ ಮಾಡುತ್ತಿದ್ದಾಗ ಹತ್ತಿಪ್ಪತ್ತು ಗೂಂಡಾಗಳನ್ನು ಕರೆದುಕೊಂಡು ಬಂದು ದೇಬುವಿನ ಕೊಲೆ ಮಾಡಲು ಯತ್ನಿಸಿದಾಗ ದೇಬು ತಿರುಗಿಬಿದ್ದು ಗೂಂಡಾಗಳಿಗೆ ಬಿಸಿಮುಟ್ಟಿಸಿದ. ಅಷ್ಟೇ ಅಲ್ಲದೇ ಇತರ ಬಡವರಿಂದ ಕಸಿದುಕೊಂಡು ಜಮೀನುಗಳನ್ನು ವಾಪಸ್ ಕೊಡಿಸಿ ಶ್ರೀಮಂತ ಬನಾಜೆಯಿಂದ ಆಗುತ್ತಿದ್ದ ಕಿರುಕುಳ ತಪ್ಪಿಸಿದ. 1899ರಲ್ಲಿ ಮೊದಲ ಮಗಳು ಅಲೋಕ, 1900ರಲ್ಲಿ ಎರಡನೇಮಗಳು ಕಲಾವತಿ, 1902ರಲ್ಲಿ ಗಂಡು ಮಗುವಿನ ಜನನವಾ ಯಿತು. ಗಂಡು ಮಗು ಹುಟ್ಟಿದಾಗ ಮಾಂಸದೂಟ ಹಾಕದೇ ಸಿಹಿ ಯೂಟ ಹಾಕಿದ್ದಕ್ಕೆ ಸಂಬಂಧಿಕರು ಕೋಪಗೊಂಡು ವಾಪಸ್ ಹೋದರು. ಉಳಿದ ಸಂಬಂಧಿಕರಿಗೆ ದೇಬು ಹೇಳಿದ ಮಾತುಗಳಿವು. ಪುರೋಹಿತರು ಎಂದಾದರೂ ಅವರ ಮಕ್ಕಳು ಹುಟ್ಟಿದ ಹಬ್ಬಗಳಲ್ಲಿ ಮಾಂಸ ಮಧ್ಯ ವಿತರಿಸಿದ್ದಾರೆಯೇ? ಇಲ್ಲ! ಹಾಗಿದ್ದ ಮೇಲೆ ನಾವು ಕೆಲಸಕ್ಕೆ ಬಾರದ ಹಳೇ ಸಂಪ್ರದಾಯವನ್ನು ಏಕೆ ಪರಿಪಾಲಿಸಬೇಕು ಎಂದು ಮನವರಿಕೆ ಮಾಡಿದಾಗ ಎಲ್ಲರೂ ಅದನ್ನು ಒಪ್ಪಿಕೊಂಡರು.

ಮಹಾನ್ ಸಂತರು ದೇವರು ಒಬ್ಬನೇ ಎಂದು ಹೇಳುತ್ತಿದ್ದಾರೆ. ಆದರೆ ಊರಿಂದ ಊರಿಗೆ ಸಾವಿ ರಾರು, ಲಕ್ಷಾಂತರ ದೇವರು ಹುಟ್ಟಿದ್ದಾ ದರೂ ಹೇಗೆ? ಮಾನವನಿಗೆ ಜನ್ಮ ನೀಡಿದವರು ದೇವರು ಎಂದಾದರೆ ಗುಡಿಯಲ್ಲಿನ ದೇವರ ಮೂರ್ತಿ, ಶಿಲ್ಪವನ್ನು ಕೆತ್ತಿದವರು ಯಾರು? ನಿಮ್ಮ ದೇವರ ದೇವಸ್ಥಾನಕ್ಕೆ ಪೂಜಾರಿ ದೀಪ ಹಚ್ಚಬೇಕು. ದೇವಸ್ಥಾನದ ಬಾಗಿಲಿಗೆ ಬೀಗಹಾಕಬೇಕು. ನಿಮ್ಮ ದೇವರ ವಿಗ್ರಹ ಕಳವಾದರೆ ಪೊಲೀ ಸರಿಗೆ ದೂರು ಕೊಡಬೇಕು. ಹೀಗಿರುವಾಗ ಬಟ್ಟೆ ತೊಡಲಾರದ, ಸ್ನಾನ ಮಾಡಲಾರದ, ದೀಪ ಹಚ್ಚಿಕೊಳ್ಳಲಾಗದ, ಬೀಗ ಹಾಕಿಕೊಳ್ಳ ಲಾಗದ, ತನ್ನನ್ನು ತಾನು ರಕ್ಷಿಸಿಕೊಳ್ಳಲಾಗದ ದೇವರು ನಿಮ್ಮನ್ನು ರಕ್ಷಿಸುತ್ತಾನೆಯೇ ಎಂದು ಪ್ರಶ್ನಿಸುತ್ತ ಇದು ಬಡವರನ್ನು ವಂಚಿಸಲು ಸೃಷ್ಟಿಸಿದ ಹುನ್ನಾರ ಎಂದು ಜನರಿಗೆ ಮನ ವರಿಕೆ ಮಾಡುವಲ್ಲಿ ಯಶಸ್ವಿಯಾದರು.

 ‘‘ನಿಮ್ಮ ತಂದೆತಾಯಿಯನ್ನೇ ದೇವ ರೆಂದು ಪೂಜಿಸಿ. ಸಾಲಸೋಲ ಮಾಡಿ ತೀರ್ಥ ಯಾತ್ರೆಗೆ ಹೋಗದೇ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಸಾಲ ಮಾಡಿ. ನಿಮ್ಮ ಊಟದ ತಟ್ಟೆಯನ್ನಾದರೂ ಮಾರಿ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ’’ ಎಂದು ಸುತ್ತಮುತ್ತಲಿನ ಜನರಿಗೆ ಹೇಳುತ್ತಿದ್ದರು. 1904ರಲ್ಲಿ ಇವರು ಹೊಲದಲ್ಲಿ ಕೆಲಸ ಮಾಡುತ್ತಿ ದ್ದಾಗ ಇವರಿಗೆ ಅನಾಮಿಕ ಸಾಧುವೊಬ್ಬರ ಭೇಟಿಯಾಗು ತ್ತದೆ. ಅದಾದ ಮಾರನೇ ದಿನ ಮಧ್ಯಾಹ್ನ ಅವರು ಮನೆಯನ್ನು ತೊರೆಯುತ್ತಾರೆ. ಭಗವಾನ್‌ಬುದ್ಧರು ಇದೇ 28ನೇ ವಯಸ್ಸಿ ನಲ್ಲಿ ಇಬ್ಬರು ಮಕ್ಕಳು ಹೆಂ ಡತಿಯನ್ನು ತೊರೆದು ಮನೆ ಬಿಟ್ಟಿದ್ದರು. ಮನೆಯನ್ನು ಬಿಟ್ಟ ಮೇಲೆ ಮತ್ತೆಂದೂ ಮನೆಗೆ ವಾಪಸ್ ಬರಲಿಲ್ಲ. ಭಗವಾನ್ ಬುದ್ಧರು ಮೈಮೇಲೆ ಒಂದು ಬಟ್ಟೆ ಮತ್ತು ಕೈಯಲ್ಲಿ ಪಿಂಡಾ ಪಾತ್ರೆಯನ್ನು ಹಿಡಿದುಕೊಂಡು ಲೋಕಸಂಚಾರಕ್ಕೆ ಹೊರಟರೆ, ಬಾಬಾ ಗಾಡ್ಗೆ ಮಹಾರಾಜರು ಚಿಂದಿಬಟ್ಟೆಗಳನ್ನು ತಾವೇ ಹೊಲೆದು ಮೈಮುಚ್ಚಿಕೊಂಡು ಕೈಯಲ್ಲಿ ಒಂದು ಪೊರಕೆ, ಅರ್ಧ ಒಡೆದ ಮಡಕೆ (ಗಡಿಗೆ) ಹಿಡಿದು ಹೊರಡುತ್ತಾರೆ. ಅದೇ ಗಡಿಗೆಯಲ್ಲಿ ಊಟ ಮಾಡಿ ನೀರು ಕುಡಿದು ಬಿಸಿಲಿನ ಸಂದರ್ಭದಲ್ಲಿ ತಲೆಗೆ ಟೊಪ್ಪಿಗೆಯನ್ನಾಗಿ ಮಾಡಿಕೊಂಡು ಗಡಿಗೆ ಮಹಾರಾಜ ಮರಾಠಿಯ ಗಾಡ್ಗೆ ಮಹಾರಾಜರಾದರು. ಊರಿಗೆ ಪ್ರವೇಶ ಮಾಡಿದ ತಕ್ಷಣ ಆ ಊರಿನ ಕಸ, ಕಡ್ಡಿ, ಹೊಲಸನ್ನು ಸ್ವಚ್ಛ ಮಾಡುತ್ತಾ, ಸಂಜೆ ಊರ ಜನರು ಬಿಡುವು ಮಾಡಿಕೊಳ್ಳುವ ಹೊತ್ತಿನಲ್ಲಿ ಸಂತ ನಾಮದೇವ, ಸಂತ ಕಬೀರರ ಕೀರ್ತನೆಗಳನ್ನು ಇಂಪಾಗಿ ಹಾಡುತ್ತ ಹಳ್ಳಿಯ ಸುತ್ತಲೂ ತೆರಳುತ್ತಿದ್ದರು. ಹಳ್ಳಿಯ ಜನರು ಇವರ ಗಾಯನಕ್ಕೆ ಮರುಳಾಗಿ ರಾತ್ರಿಯೆಲ್ಲ ಇವರ ಮುಂದೆ ಕುಳಿತು ಕೀರ್ತನೆಗಳನ್ನು ಕೇಳುತ್ತಾ ಇವರು ಕೊಡುವ ಸಲಹೆ ಸೂಚನೆಗಳನ್ನು ಪಾಲಿಸುವಂತಾಗಿತ್ತು. ಇಡೀ ಮಹಾರಾಷ್ಟ್ರದ ಮೂಲೆ ಮೂಲೆಗಳಲ್ಲಿ ಬಾಬಾ ಗಾಡ್ಗೆ ಅವರ ಕೀರ್ತನೆಗಳು ಮನೆ ಮಾತಾ ಗಿದ್ದವು. ಇದರಿಂದ ಜನಾಕರ್ಷಿತರಾಗಿ ಹಳ್ಳಿ ಹಳ್ಳಿಗಳಿಂದ ಇವರ ದರ್ಶನ ಪಡೆಯಲು ಬರುತ್ತಿದ್ದರು. ಜನರು ಕರೆದ ಎಲ್ಲ ಕಡೆ ಹೋಗಲಾಗದಿದ್ದರೂ, ತುಂಬಾ ಪರಿಶ್ರಮದಿಂದ ಬಿಡುವಿಲ್ಲದೆ ಸಾಧ್ಯವಾದಷ್ಟು ಹಳ್ಳಿ ಪಟ್ಟಣಗಳನ್ನು ಭೇಟಿ ಮಾಡಿ ಸ್ವಚ್ಛತೆಯ ಪರಿಪಾಠವನ್ನು ಮಹಾರಾಷ್ಟ್ರದ ಜನರಿಗೆ ಕಲಿಸಿದರು. ಒಮ್ಮೆ ಬಾಬಾ ಗಾಡ್ಗೆ ಅವರ ವಿಚಾರವನ್ನು ತಿಳಿದ ಮಹಾತ್ಮಾ ಗಾಂಧಿ ಅವರು ಗಾಡ್ಗೆ ಅವರನ್ನು ಭೇಟಿ ಮಾಡಿ ಅವರೊಂದಿಗೆ ಚರ್ಚಿ ಸಲು ಅವಕಾಶಕ್ಕಾಗಿ ಅಂದಿನ ಬಾಂಬೆ ಪ್ರಾಂತೀಯ ಮುಖ್ಯಮಂತ್ರಿ ಬಾಲಗಂಗಾಧರ ಖೇರ್ (ಬಿ.ಜಿ.ಖೇರ್) ಅವರ ಬಳಿ ಕೇಳುತ್ತಾರೆ. ‘‘ಗಾಂಧೀಜಿ ನಿಮ್ಮ ಭೇಟಿ ಮಾಡಲು ಕಾಯುತ್ತಿದ್ದಾರೆ. ನೀವು ಸಮಯ ನೀಡಿದರೆ ಅವರು ನಿಮ್ಮಲ್ಲಿಗೆ ಬರಲಿದ್ದಾರೆ’’ ಎಂದು ಖೇರ್ ಅವರುತಿಳಿಸಿದಾಗ ವಾದ್ರಾದಲ್ಲಿರುವ ಗಾಂಧಿ ಸೇವಾಶ್ರಮಕ್ಕೆ ನಾನೇ ಬರುತ್ತೇನೆ ಎಂದು ಹೇಳಿದ ಗಾಡ್ಗೆ ಬಾಬಾ ಅವರು ಮುಖ್ಯಮಂತ್ರಿ ಗಳ ಜತೆ ಗಾಂಧೀಜಿ ಅವರನ್ನು 30.11.1935ರಂದು ಭೇಟಿ ಮಾಡುತ್ತಾರೆ. ಸೇವಾಶ್ರಮದಲ್ಲಿ ಬಾಬಾ ಗಾಡ್ಗೆ ಅವರನ್ನು ಸ್ವಾಗತಿಸಿದ ಗಾಂಧೀಜಿ ದಂಪತಿ ಎತ್ತರದ ಸ್ಥಾನದಲ್ಲಿ ಕೂರುವಂತೆ ವಿನಂತಿಸುತ್ತಾರೆ. ಅದನ್ನು ನಯವಾಗಿ ತಿರಸ್ಕರಿಸಿ ನೆಲದ ಮೇಲೆ ಕುಳಿತು ಅವರು ಸತ್ಕರಿಸಿದ ಭೋಜನವನ್ನು ಅರ್ಧಮಡಕೆಯಲ್ಲೇ ತಿನ್ನುತ್ತಾರೆ. ಬಾಬಾರವರು ಸಮಾಜದಿಂದ ವಂತಿಗೆ ಪಡೆದು ಸಮಾಜಕ್ಕಾಗಿ ಕಟ್ಟಿಸಿದ ಶಾಲೆಗಳು, ಆಶ್ರಮಗಳು, ಧರ್ಮಶಾಲೆ, ಆಸ್ಪತ್ರೆಗಳ ಬಗ್ಗೆ ಚರ್ಚಿಸುತ್ತಾ ಗಾಂಧೀಜಿ ಅವರು, ಸಂತರೇ ನಿಮ್ಮ ಆಸ್ತಿ ಎಷ್ಟಿದೆ ಎಂದಾಗ, ತಮ್ಮ ಕೈಯಲ್ಲಿದ್ದ ಪೊರಕೆ ಮತ್ತು ಅರ್ಧಮಡಕೆಯನ್ನು ಎತ್ತಿ ತೋರಿಸುತ್ತ ಇವೇ ನನ್ನ ಆಸ್ತಿ ಎಂದು ಉತ್ತರಿಸಿದ್ದರು. ಗಾಂಧೀಜಿ ಅವರು ಅಂದಿನ ಇವರ ಕೀರ್ತನೆಯನ್ನು ಕೇಳಿಸಿ ಕೊಂಡು ಪ್ರಭಾವಿತರಾಗಿ ಅವರೂ ಸ್ವಚ್ಛ ಭಾರತ ಅಭಿಯಾನವನ್ನು ದೇಶದಾದ್ಯಂತ ಪ್ರಾರಂಭಿಸಿದರೆಂದರೆ ಅದಕ್ಕೆ ಪ್ರೇರಣೆ ಬಾಬಾ ಗಾಡ್ಗೆಯವರೇ ಆಗಿದ್ದರು.

ಅಂದಿನ ಬಾಂಬೆ ಪ್ರಾಂತೀಯ ಸರಕಾರ ಬಾಬಾರ ಸ್ವಚ್ಛಭಾರತ ಅಭಿಯಾನಕ್ಕೆ ಭೇಟಿ ನೀಡಿ, ಗಾಡ್ಗೆ ಬಾಬಾ ಅವರ ಅನನ್ಯ ಸಾಧನೆ ಯನ್ನು ಮೆಚ್ಚಿ ಅವರಿಗೆ ಸರಕಾರಿ ವಾಹನವನ್ನು ನೀಡಿ ಅದರ ಚಾಲಕನ ಸಂಬಳ ಮತ್ತು ಇಂಧನದ ವೆಚ್ಚವನ್ನು ಸರಕಾರವೇ ಭರಿಸಿತ್ತು.

ಬಾಬಾ ಸಾಹೇಬ್ ಡಾ.ಭೀಮರಾವ್ ಅಂಬೇಡ್ಕರ್ ಕೂಡ ಗಾಡ್ಗೆಯವರ ಅಭಿಮಾನಿಯಾಗಿದ್ದರು. ಮೂವರು ಗುರುಗಳನ್ನು (ಭಗವಾನ್ ಬುದ್ಧ, ಸಂತ ಕಬೀರ, ಜ್ಯೋತಿಬಾಫುಲೆ) ಹೊಂದಿದ್ದ ಅಂಬೇಡ್ಕರ್ ನಾಲ್ಕನೇ ಗುರುವಾಗಿ ಗಾಡ್ಗೆ ಅವರನ್ನು ಒಪ್ಪಿಕೊಂಡಿದ್ದರು. ಅಂಬೇಡ್ಕರ್ ಅವರು ಬ್ರಿಟಿಷ್ ಇಂಡಿಯಾದ ಕೇಂದ್ರ ಸರಕಾರದಲ್ಲಿ ಕಾರ್ಮಿಕ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಮುಂಬೈಯಲ್ಲಿ ನಡೆಯು ತ್ತಿದ್ದ ಬಾಬಾ ಗಾಡ್ಗೆಯವರ ಭಜನಾ ಕಾರ್ಯಕ್ರಮಕ್ಕೆ ಯಾರಿಗೂ ತಿಳಿಸದೇ ಬಂದು ಸಾವಿರಾರು ಜನರ ನಡುವೆ ಕೊನೆಯ ಸಾಲಿನಲ್ಲಿ ಕುಳಿತು ಭಜನೆ ಆಲಿಸುತ್ತಿದ್ದುದನ್ನು ತಿಳಿದ ಸಂತ ಗಾಡ್ಗೆ ಅವರು, ತಮ್ಮ ಭಜನೆಯನ್ನು ನಿಲ್ಲಿಸಿ, ಈ ರೀತಿಯಾಗಿ ಹಿತವಚನ ನೀಡುತ್ತಾರೆ: ‘‘ನನ್ನ ಬಂಧುಗಳೇ ಇದುವರೆಗೂ ದೇವರಿಲ್ಲ! ದೇವರೇ ಇದ್ದಿದ್ದರೆ ಬಡತನ, ಅಸ್ಪಶ್ಯತೆ, ಅಕ್ರಮ, ಅನ್ಯಾಯ ನಿಲ್ಲಿಸುತ್ತಿದ್ದ ಎಂದು ಹೇಳು ತ್ತಿದ್ದೆ. ಆದರೆ ಈ ಸಭೆಯಲ್ಲಿ ಒಬ್ಬ ವ್ಯಕ್ತಿ ಕೂತು ನನ್ನ ಹಾಡು ಕೇಳು ತ್ತಿದ್ದಾರೆ. ಅವರು ದೇವರಲ್ಲ, ಆದರೆ ಬಡ ಶೋಷಿತ, ಹಿಂದುಳಿದ ಜನಾಂಗಗಳಿಗೆ ದೇವರಿಗಿಂತ ಹೆಚ್ಚಾಗಿ ಕೆಲಸ ಮಾಡುತ್ತಿದ್ದಾರೆ. ಬಡ ವರೇನಾದರೂ ಈ ದೇಶದಲ್ಲಿ ಉದ್ಧಾರವಾಗಬೇಕಾದರೆ ಇವರೇ ಕಾರಣೀಭೂತರಾಗುತ್ತಾರೆ’’ ಎಂದು ಅಂಬೇಡ್ಕರ್ ಅವರನ್ನು ಪ್ರಶಂಸಿಸಿರುವ ದಾಖಲೆ ಇದೆ.

ಗುರು ಬಾಬಾರವರು ಅಂಬೇಡ್ಕರ್‌ರವರ ಅಭಿಮಾನಿಯೂ ಮತ್ತು ಮಾರ್ಗದರ್ಶಕರೂ ಆಗಿದ್ದರು. ಬಾಬಾ ಸಾಹೇಬರು ಬೌದ್ಧ ಧರ್ಮಕ್ಕೆ ಧರ್ಮಾಂತರ ಮಾಡಿದಾಗ ಇವರ ಭೇಟಿ ಮಾಡಿ ಸಲಹೆ ಪಡೆದಿದ್ದರು. ‘‘ಮಾನವೀಯತೆ, ಕರುಣೆ, ಸ್ವಾತಂತ್ರ್ಯವಿರುವ ಒಂದು ಧರ್ಮಕ್ಕೆ ಮತಾಂತರವಾಗಿ’’ ಎಂದು ಹೇಳಿದ್ದರು.

14.07.1949ರಂದು ಗಾಡ್ಗೆ ಮಹಾರಾಜರು ಅಸ್ವಸ್ಥರಾಗಿರುವ ವಿಷಯ ತಿಳಿದು ಅಂಬೇಡ್ಕರರು ತಮ್ಮ ಮುಂಬೈ ದಿಲ್ಲಿಯ ಪ್ರಯಾಣ ವನ್ನು ರದ್ದುಗೊಳಿಸಿ ಗಾಡ್ಗೆ ಮಹಾರಾಜ್ ಅವರನ್ನು ಭೇಟಿ ಮಾಡಿದ್ದರು. ಆಸ್ಪತ್ರೆಗೆ ಬಂದ ಅಂಬೇಡ್ಕರರನ್ನು ನೋಡಿದ ಗಾಡ್ಗೆ ಮಹಾರಾಜ್ ಅವರು ಕೂಡಲೇ ಎದ್ದು ಕುಳಿತು, ‘‘ನೀವು ಬರಬಾರದಿತ್ತು. ಬಡವರ ಕೆಲಸಕ್ಕೆ ಅಡ್ಡಿಯಾಯಿತು’’ ಎಂದರು. ಆಗ ಬಾಬಾ ಸಾಹೇಬರು ‘‘ಅಧಿಕಾರ ಶಾಶ್ವತವಲ್ಲ, ನೀವು ಪಡೆದಿರುವ ಸಮಾಜ ಸುಧಾರಣೆಯ ಅಧಿಕಾರವೇ ಖಾಯಂ ಆದದ್ದು. ನನಗೆ ನನ್ನ ಅಧಿಕಾರಕ್ಕಿಂತ ನಿಮ್ಮ ಆರೋಗ್ಯವೇ ಮುಖ್ಯ’’ ಎಂದು ವಿನಂತಿಸಿದ್ದರು. ಗಾಡ್ಗೆ ಮಹಾರಾಜರು ತಮ್ಮ ಜೀವಿತ ಅವಧಿಯಲ್ಲಿ ಜನರಿಂದಕಾಣಿಕೆಯಾಗಿ ಬಂದ ಹಣ ಮತ್ತು ಆಸ್ತಿಯನ್ನು ಜನರಿಗಾಗಿಯೇ ಬಳಸಿದ್ದರು. ಸುಮಾರು 43 ವಿದ್ಯಾ ಸಂಸ್ಥೆಗಳು, ಅನೇಕ ಧರ್ಮಶಾಲೆ ಗಳನ್ನು ಕಟ್ಟಿದ್ದರು. ಅವರು ಪ್ರಾರಂಭಿಸಿದ ಅನಾಥಾಶ್ರಮಗಳು, ಆಸ್ಪತ್ರೆಗಳು ಲೆಕ್ಕವಿಲ್ಲದಷ್ಟಿದ್ದವು. ಅವುಗಳಲ್ಲಿ ಸುಮಾರು ಸಂಸ್ಥೆಗಳನ್ನು ಅಂಬೇಡ್ಕರ್ ಅವರ ಹೆಸರಿಗೆ ವಿಲ್ ಬರೆದುಕೊಟ್ಟು, ಕಾಗದ ಪತ್ರ ಗಳನ್ನೂ ಹಸ್ತಾಂತರಿಸಿದ್ದಾರೆ. ಪ್ರಮುಖವಾಗಿ ಪಂಡರಾಪುರದಲ್ಲಿ ಪಂಡರಿನಾಥನ ದರ್ಶನಕ್ಕೆ ಅಸ್ಪಶ್ಯರಿಗೆ ಅವಕಾಶವಿರಲಿಲ್ಲ. ಅವರಿಗೆ ನೀರು, ವಸತಿ ಕೇಳುವವರಾರೂ ಇರಲಿಲ್ಲ. ಅಂತ ಸಂದರ್ಭದಲ್ಲಿ ಅಲ್ಲಿ 11 ಲಕ್ಷ ರೂಪಾಯಿ ವೆಚ್ಚದಲ್ಲಿ ಮಹರ್ ಸಂತ ಬೊಕ್ಕಮಾಳ ಹೆಸರಿನಲ್ಲಿ ಬಹುದೊಡ್ಡ ಛತ್ರವನ್ನು ನಿರ್ಮಿಸಿದ್ದರು. ಅದನ್ನು ಅಂಬೇಡ್ಕರ್ ಅವರಿಗೆ ವಹಿಸಿಕೊಟ್ಟಿರುವುದು ದಾಖಲೆಯಲ್ಲಿದೆ.

ಜವಾಹರಲಾಲ್ ನೆಹರೂ, ಮದನ ಮೋಹನ ಮಾಳವೀಯ, ಪಂಜಾಬ್ ರಾವ್ ದೇಶಮುಖ್ ಸೇರಿದಂತೆ ಅನೇಕ ಅಂದಿನ ಕಾಂಗ್ರೆಸ್ಸಿನ ನಾಯಕರು ಬಾಬಾ ಗಾಡ್ಗೆ ಅವರನ್ನು ಭೇಟಿಯಾಗಿ ಆಶೀ ರ್ವಾದ ಪಡೆದಿದ್ದರು. ಬನಾರಸ್ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿಆಶೀರ್ವಚನ ನೀಡಿದ್ದರು.1956ರ ಡಿಸೆಂಬರ್ 6ರಂದು ಅಂಬೇಡ್ಕರ್ ಅವರ ನಿಧನವು ಗಾಡ್ಗೆ ಮಹಾರಾಜರ ಮೇಲೆ ತೀವ್ರವಾದ ಪ್ರಭಾವ ಬೀರಿತ್ತು. ಈ ಸುದ್ದಿಯನ್ನು ತಿಳಿದ ಮೇಲೆ ಔಷಧ ಮತ್ತು ಆಹಾರ ಸೇವನೆಯನ್ನು ಬಿಟ್ಟುಬಿಟ್ಟರು ಎಂದು ಹೇಳಲಾಗುತ್ತದೆ.

ಅಸ್ಪಶ್ಯರು, ಮಹಿಳೆಯರು, ಕಾರ್ಮಿಕರು ರೈತರ ಪರ ಹೋರಾ ಡುತ್ತಿದ್ದ ಭಾರತದ ಭವಿಷ್ಯ ಆಗಿದ್ದ ಅಂಬೇಡ್ಕರ್ ಅವರ ಸಾವು ಸಮಾಜಕ್ಕೆ ಭರಿಸಲಾಗದ ಭಾರೀ ನಷ್ಟ ಎಂದು ನಿಟ್ಟುಸಿರು ಬಿಟ್ಟರಂತೆ.

ಗಾಡ್ಗೆ ಬಾಬಾ ಅವರು ಹೌರಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಮುಂಬೈ ನಿಂದ ಅಮರಾವತಿಗೆ ಪ್ರಯಾಣಿಸುವ ಸುದ್ದಿ ಜನರಿಂದ ಜನರಿಗೆ ಹಬ್ಬಿ ಪ್ರತಿಯೊಂದು ರೈಲು ನಿಲ್ದಾಣದಲ್ಲಿ ಸಾವಿರಾರು ಜನ ಅವರ ದರ್ಶನಕ್ಕೆ ಕಾದಿದ್ದರು. 13.12.1956ರಂದು ಅಮರಾವತಿ ತಲುಪಿದಾಗ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟು ಅವರನ್ನು ಇರ್ವಿನ್ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಡಿಸೆಂಬರ್ 18ರಂದು ಪಡೆನೇರಾಕ್ಕೆ ಪ್ರಯಾಣ ಬೆಳೆಸುತ್ತಾರೆ. ಅಲ್ಲಿ ಅವರ ಅನುಯಾಯಿಗಳಿಗೆ ನನ್ನನ್ನು ನಾಗರ ವಾಡಿಗೆ ಕರೆದೊಯ್ಯುರಿ ಎಂದು ಸೂಚಿಸುತ್ತಾರೆ. ಕಾರಿನಲ್ಲಿ ನಾಗರವಾಡಿ ಗೆ ಹೋಗುವಾಗ, ನಾನು ಯಾರ ಮನೆಯಲ್ಲೂ ಸಾಯಬಾರದು, ನನ್ನ ಸಾವು ದಾರಿಯಲ್ಲೇ ಆಗಲಿ, ಎಲ್ಲಿ ಸಾವು ಆಗುತ್ತದೆಯೊ ಅಲ್ಲೇ ಅಂತ್ಯಸಂಸ್ಕಾರ ಮಾಡಿರಿ. ಸಮಾಧಿ ಅಥವಾ ಸ್ಮಾರಕ ನಿರ್ಮಿಸಬೇಡಿ ಎಂದು ಅಂತಿಮ ಸಂದೇಶ ನೀಡಿ ಕಾರನ್ನು ಅಮರಾವತಿ ಕಡೆಗೆ ತಿರುಗಿಸು ಎಂದು ಚಾಲಕ ಬಹುರಾವ್ ಕಾಳೆ ಅವರಿಗೆ ಹೇಳುತ್ತಾರೆ. ಪೇಡಿ ನದಿ ಸೇತುವೆ ಬಳಿ ಬರುತ್ತಿದ್ದಾಗ ನಿಧನರಾಗುತ್ತಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛಭಾರತದ ಅಭಿಯಾನ ವನ್ನು ಅಕ್ಟೋಬರ್ 2ರಂದು ಗಾಂಧಿಜಯಂತಿಯ ದಿನ ಆರಂಭಿಸಿದರು. ಆದರೆ ಗಾಂಧಿ ಸಾಹೇಬರಿಗೆ ಸ್ವಚ್ಛತೆಯ ಅರಿವು ಮೂಡಿಸಿದ ಮೂಲ ಪುರುಷ ಮಹಾನ್ ಸಂತ ಬಾಬಾ ಗಾಡ್ಗೆ ಮಹಾರಾಜ ಅವರನ್ನು ಸ್ಮರಿಸಬಹುದಿತ್ತಲ್ಲವೇ? ಈ ಸ್ವಚ್ಛ ಭಾರತ ಅಭಿಯಾನವನ್ನು ಸಂತ ಗಾಡ್ಗೆ ಮಹಾರಾಜ್ ಅವರ ಹೆಸರಿನಲ್ಲಿ ನಡೆಸಿದ್ದರೆ ಹೆಚ್ಚು ಅರ್ಥ ಪೂರ್ಣ ಆಗಿರುತ್ತಿತ್ತಲ್ಲವೇ? ಮುಂದಿನ ಸ್ವಚ್ಛಭಾರತ ಅಭಿಯಾನದ ದಿನದಂದು ಗಾಡ್ಗೆ ಮಹಾ ರಾಜ್ ಅವರ ಹೆಸರನ್ನು ಸೇರಿಸಿ ಸ್ವಚ್ಛಭಾರತದ ಜನಕನನ್ನು ಸ್ಮರಿಸು ವಂತಾಗಲಿ. ಸಂತ ಬಾಬಾ ಗಾಡ್ಗೆ ಮಹಾರಾಜ್ ಅವರ ಹೆಸರು ಶಾಶ್ವತ ವಾಗಿ ಪ್ರತಿಯೊಬ್ಬ ಭಾರತೀಯನ ಮನದಲ್ಲಿ ಉಳಿಯಲಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)