varthabharthi

ಸುಗ್ಗಿ

ಗೀಜಗಬಲು ಸೋಜಿಗ

ವಾರ್ತಾ ಭಾರತಿ : 5 Oct, 2019
ಅಮೀರ್ ಅತ್ತರ್

ಹಕ್ಕಿಗಳ ಕಲರವವೆಂದರೆ ಯಾರಿಗೆ ತಾನೆ ಇಷ್ಟವಿಲ್ಲ!. ಪ್ರಕೃತಿಯಲ್ಲಿ ಸ್ವಚ್ಛಂದವಾಗಿ ಹಾರಾಡುವ ಬಾನಾಡಿಗಳ ಬದುಕೆ ವಿಚಿತ್ರ! ಹಕ್ಕಿಗಳ ಬದುಕೇ ವಿಸ್ಮಯ. ಸಹಸ್ರಾರು ಜಾತಿಗಳಿಗೆ ಸೇರಿದ ಹಕ್ಕಿಗಳನ್ನು ಕಾಣಬಹುದು. ಪ್ರತಿ ಹಕ್ಕಿಗಳದು ಒಂದೊಂದು ವೈಶಿಷ್ಟ. ಇಲ್ಲೊಂದು ಹಕ್ಕಿ ತಾನು ಕಟ್ಟಿಕೊಳ್ಳುವ ಗೂಡಿನ ಮೂಲಕವೇ ಬೆರಗು ಹುಟ್ಟಿಸುತ್ತದೆ. ಯಾವುದೇ ಇಂಜಿನಿಯರಿಂಗ್ ವಿದ್ಯಾರ್ಥಿ ಬೆಕ್ಕಸ ಬೆರಗಾಗುವಂತೆಗೂಡು ಕಟ್ಟುವ ಚತುರ ಹಕ್ಕಿ ಇದು. ಹೌದು ಈ ರಚನಾತ್ಮಕ, ಸೃಜನಶೀಲ, ಸತತ ಕಠಿಣ ಪರಿಶ್ರಮ ಮಾಡುವ ಹಕ್ಕಿಯ ಹೆಸರು ಗೀಜಗ. ಇದರ ಜಗವೇ ಒಂದು ಸೋಜಿಗ.

ಹೀಗಿರುತ್ತದೆ ಈ ಹಕ್ಕಿ

ಹಳದಿ ಬಣ್ಣ ಪ್ರಧಾನವಾಗಿರುವ ಗುಬ್ಬಚ್ಚಿ ಗಾತ್ರದ ಹಕ್ಕಿ ಇದು. ಮರಿ ಮಾಡದ ಸಮಯದಲ್ಲಿ ಮಾತ್ರ ಹಳದಿ ಬಣ್ಣ ಮಂಕಾಗಿರುತ್ತದೆ. ಮರಿ ಮಾಡುವ ಸಮಯದಲ್ಲಿ ತಲೆ, ಹೊಟ್ಟೆ, ಎದೆ ಹೊಳೆಯುವ ಹಳದಿ ಬಣ್ಣಕ್ಕಿರುತ್ತದೆ, ರೆಕ್ಕೆಯ ಮೇಲೆ ಗುಬ್ಬಚ್ಚಿಗಳಂತೆಯೇ ಕಪ್ಪು ಮಚ್ಚೆಗಳಿರುತ್ತವೆೆ. ಕಡು ಕಪ್ಪು ಬಣ್ಣದ ಕೊಕ್ಕುಗಳನ್ನು ಹೊಂದಿರುತ್ತದೆ.

ಪ್ರೀತಿಯ ಪ್ರಸ್ತಾವಕ್ಕಾಗಿ ಗೂಡು ನೇಯುವ ಪ್ರೇಮಿ

ಹೆಣ್ಣು ಗೀಜಗ ಹಕ್ಕಿ ಗಂಡಿಗೆ ಫಿದಾ ಆಗುವುದು ಅವನ ಅಂದ, ಚಂದಕ್ಕಾಗಿಯಲ್ಲ. ಆತನ ಗೂಡು ಕಟ್ಟುವ ಕುಶಲತೆಗೆ. ಹೆಣ್ಣು ಹಕ್ಕಿಯನ್ನು ಒಲಿಸಿಕೊ ಳ್ಳಲು ಗಂಡು ಮೊದಲು ಅರ್ಧಗೂಡು ರಚಿಸುತ್ತದೆ. ಅದನ್ನು ಹೆಣ್ಣು ಹಕ್ಕಿ ಇಷ್ಟಪಟ್ಟರೆ ಪೂರ್ಣಗೊಳಿ ಸುತ್ತದೆ. ಇಷ್ಟವಾಗದೇ ಹೋದರೆ ಮತ್ತೊಂದು ಗೂಡು ಆರಂಭವಾಗುತ್ತದೆ. ನೂರಾರು ಬಾರಿ ತಿರಸ್ಕ ರಿಸಿದರೂ ಅಷ್ಟೇ ಪ್ರೀತಿಯಿಂದ ಗೂಡು ಕಟ್ಟುವ ಈ ಹಕ್ಕಿಯ ತಾಳ್ಮೆ ಆಧುನಿಕ ಪ್ರೇಮಿಗಳಿಗೆ ಅನುಕ ರಣೀಯ. ಗೀಜಗನ ಈ ಪ್ರೇಮ ಪ್ರಪಂಚವನ್ನು ಜಗತ್ತಿಗೆ ಪರಿಚಯಿಸಿದವರು ಪಕ್ಷಿ ಪ್ರೇಮಿ ಡಾ. ಸಲೀಂ ಅಲಿ. ಗೀಜಗನ ಗೂಡು ಕಟ್ಟುವ ಕೆಲಸ ಪ್ರಯಾಸಕರವಾದುದು. ದಿನಕ್ಕೆ ನೂರಾರು ಬಾರಿ ಹಾರಿ ಹೋಗಿ, ತೆಂಗಿನ ಗಿಡ, ಜೋಳದ ಹೊಲ, ಕಬ್ಬಿನ ಗದ್ದೆಗಳಿಂದ ಎಳೆ ಎಳೆಯಾಗಿ ನಾರನ್ನು ಬಲವಾದ ಕೊಕ್ಕುಗಳಿಂದ ಬಿಡಿಸಿ ತರುತ್ತದೆ.

ಗೀಜಗನ ಗೂಡು ಅದ್ಭುತ ನೋಡು!

ನೇಕಾರ ಹಕ್ಕಿ ಎಂದು ಕರೆಯಲ್ಪಡುವ ಗೀಜಗ ಬಹಳ ಚತುರ ಹಕ್ಕಿ. ಮನೆ ಕಟ್ಟಲು ಕಷ್ಟಪಡುವ ಮಂದಿಗೆ ಇದು ಮಾದರಿ. ಮಕ್ಕಳ ಕುಲಾವಿ ಕಾಲು ಚೀಲದ ಮಾದರಿಯಲ್ಲಿ ಇವುಗಳು ಗೂಡು ಕಟ್ಟುತ್ತವೆ. ಗೂಡು ಕಟ್ಟುವಿಕೆಯ ಬುದ್ಧ್ದಿಶಕ್ತಿ, ಕುಶಲತೆಯಿಂದ ಇದನ್ನು ಪದವಿ ಪಡೆಯದ ಇಂಜಿನಿಯರ್ ಎನ್ನುತ್ತಾರೆ.

ಪಾಳುಬಿದ್ದ ಬಾವಿಗಳು, ನದಿ, ಕೆರೆ ನೀರಿನ ಮೇಲೆ ಬಾಗಿರುವ ಜಾಲಿ ಮರ, ಬೇವಿನ ಮರ, ಈಚಲು ಮರಗಳ ಮೇಲೆ ಇವುಗಳು ಗೂಡು ಕಟ್ಟುತ್ತವೆ. ಮನುಷ್ಯ, ಹಾವು, ಮುಂಗುಸಿ, ಅಳಿಲು ಇತರೆ ಜೀವಿಗಳಿಂದ ದಾಳಿ ಮಾಡುವುದನ್ನು ತಡೆಯಲು ಈ ರೀತಿಯ ಜಾಗ ಆಯ್ದುಕೊಳ್ಳುತ್ತದೆ.

ಗೀಜಗನ ವಾಸಸ್ಥಳ

ಗೀಜಗ ಗುಂಪು ಜೀವಿ. ಕೃಷಿ ಪ್ರದೇಶಗಳಲ್ಲಿ ಜಾಸ್ತಿ ಕಂಡುಬರುತ್ತದೆ. ಭಾರತ, ಬಾಂಗ್ಲಾ, ಸೀಲೋನ್, ಬರ್ಮಾಗಳಲ್ಲಿ ಕಾಣಬಹುದು. ಪಕ್ಷಿತಜ್ಞರು ಇದರಲ್ಲಿ3 ಉಪಜಾತಿಗಳನ್ನು ಗುರುತಿಸಿದ್ದಾರೆ. ನಾಲಾ ಪ್ರದೇಶ, ನೀರಿರುವ ಪ್ರದೇಶ ಹಾಗೂ ಬೆಳೆ ಕಟಾವು ಮಾಡಿದ ಜಾಗಗಳಲ್ಲಿ ಇವು ಜಾಸ್ತಿ ಕಂಡುಬರುತ್ತವೆ. ಗುಬ್ಬಚ್ಚಿಗಳಂತೆಯೇ ಚಿರಿ ಚಿರಿ ಚರೀಂ ಎಂದು ಕೂಗುತ್ತದೆ. ನೂರಾರು ಹಕ್ಕಿಗಳು ರಾತ್ರೀ ಒಂದೇ ಮರದ ಮೇಲೆ ಕುಳಿತು ನಿದ್ರಿಸುತ್ತವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)