varthabharthi

ಅಂತಾರಾಷ್ಟ್ರೀಯ

ಅಭ್ಯರ್ಥಿಯ ಪ್ರಚಾರ ಕಂಪ್ಯೂಟರ್‌ಗೆ ಕನ್ನ ಹಾಕಲು ಇರಾನ್ ಹ್ಯಾಕರ್‌ಗಳ ಯತ್ನ: ಮೈಕ್ರೋಸಾಫ್ಟ್ ಆರೋಪ

ವಾರ್ತಾ ಭಾರತಿ : 5 Oct, 2019

ವಾಶಿಂಗ್ಟನ್, ಅ. 5: ಇರಾನ್ ಸರಕಾರದೊಂದಿಗೆ ನಂಟು ಹೊಂದಿರುವಂತೆ ಕಂಡುಬಂದ ಹ್ಯಾಕಿಂಗ್ ಗುಂಪೊಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿಯೊಬ್ಬರ ಪ್ರಚಾರ ಅಭಿಯಾನಕ್ಕೆ ಕನ್ನಹಾಕಲು ಪ್ರಯತ್ನಿಸಿದೆ, ಆದರೆ ಅದರಲ್ಲಿ ಅದು ಯಶಸ್ವಿಯಾಗಿಲ್ಲ ಎಂದು ಮೈಕ್ರೋಸಾಫ್ಟ್ ಕಾರ್ಪೊರೇಶನ್ ಶುಕ್ರವಾರ ಹೇಳಿದೆ.

ಈ ಹ್ಯಾಂಕಿಂಗ್ ಗುಂಪು ‘ಗಮನಾರ್ಹ’ ಸೈಬರ್ ಚಟುವಟಿಕೆಗಳಲ್ಲಿ ತೊಡಗಿದ್ದು, ಅಮೆರಿಕ ಸರಕಾರದ ಹಾಲಿ ಮತ್ತು ಮಾಜಿ ಅಧಿಕಾರಿಗಳು, ಜಾಗತಿಕ ರಾಜಕೀಯವನ್ನು ವರದಿ ಮಾಡುವ ಪತ್ರಕರ್ತರು ಮತ್ತು ಇರಾನ್‌ನಿಂದ ಹೊರಗೆ ವಾಸಿಸುವ ಪ್ರಮುಖ ಇರಾನಿಯನ್ನರನ್ನೂ ಅದು ಗುರಿಯಾಗಿಸಿದೆ ಎಂದು ಮೈಕ್ರೋಸಾಫ್ಟ್ ಬ್ಲಾಗ್ ಪೋಸ್ಟ್ ಒಂದರಲ್ಲಿ ಬರೆದಿದೆ.

ಆಗಸ್ಟ್ ಮತ್ತು ಸೆಪ್ಟಂಬರ್ ನಡುವಿನ 30 ದಿನಗಳ ಅವಧಿಯಲ್ಲಿ, ನಿರ್ದಿಷ್ಟ ಬಳಕೆದಾರರಿಗೆ ಸೇರಿದ ಇಮೇಲ್ ಖಾತೆಗಳನ್ನು ಗುರುತಿಸಲು 2,700ಕ್ಕೂ ಅಧಿಕ ಯತ್ನಗಳನ್ನು ಮಾಡಿದೆ ಹಾಗೂ ಬಳಿಕ ಆ ಪೈಕಿ 241 ಖಾತೆಗಳ ಮೇಲೆ ದಾಳಿ ನಡೆಸಿದೆ.

‘‘ಈ ಪ್ರಯತ್ನಗಳ ಮೂಲಕ ನಾಲ್ಕು ಖಾತೆಗಳಿಗೆ ಕನ್ನ ಹಾಕುವಲ್ಲಿ ಅದು ಯಶಸ್ವಿಯಾಗಿದೆ. ಈ ಖಾತೆಗಳು ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿಗೆ ಅಥವಾ ಅಮೆರಿಕ ಸರಕಾರದ ಮಾಜಿ ಅಥವಾ ಹಾಲಿ ಅಧಿಕಾರಿಗಳಿಗೆ ಸೇರಿಲ್ಲ’’ ಎಂದು ಮೈಕ್ರೋಸಾಫ್ಟ್‌ನ ಬ್ಲಾಗ್‌ಪೋಸ್ಟ್ ಹೇಳಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)