varthabharthi

ಸುಗ್ಗಿ

ಕಥಾಸಂಗಮ

ಆಡಂ ಕುದ್ರು

ವಾರ್ತಾ ಭಾರತಿ : 5 Oct, 2019
ಮುನವ್ವರ್, ಜೋಗಿಬೆಟ್ಟು

ಬಸ್ಸಿನ ವೇಗಕ್ಕೆ ಒಳ ನುಗ್ಗುವ ಗಾಳಿಯ ರಭಸದಿಂದ ಪತ್ರಿಕೆಯು ಕಣ್ಣಿನ ನೇರಕ್ಕೆ ರಾಚುತ್ತಿತ್ತು. ಅಭಿನಂದನ್ ಮತ್ತಷ್ಟು ಮಡಚಿ ಪತ್ರಿಕೆಯನ್ನು ಸರಿ ಪಡಿಸಲು ಪ್ರಯತ್ನಿಸಿದ. ಅಷ್ಟರಲ್ಲಿ ‘ಟಿಕೆಟ್...ಟಿಕೆಟ್ ಯಾರಲ್ಲಿ ಬಾಕಿ’ ಎಂದು ಕಂಡಕ್ಟರ್ ಪ್ರಯಾಣಿಕರ ಮಧ್ಯೆ ತಲೆ ತೂರಿದ. ಪತ್ರಿಕೆ ಸರಿಪಡಿಸುತ್ತಿರುವಂತೆ ಅಭಿನಂದನ್ ಕಣ್ಣೊಮ್ಮೆ ಹೊರಗಿಣುಕಿತು. ಬಸ್ಸು ನೇತ್ರಾವತಿ ಸೇತುವೆ ಮೇಲೆ ಚಲಿಸುತ್ತಿದೆ. ನದಿಯ ಬದುಗಳಲ್ಲಿ ತೆಂಗಿನ ಮರಗಳು, ಬಲ ಭಾಗದಲ್ಲಿ ನೋಡ ನೋಡುತ್ತಿದ್ದಂತೆ ದೂರದ ಸೇತುವೆ ಮೇಲೆ ಸಹಸ್ರಪದಿಯಂತೆ ರೈಲೊಂದು ವೇಗವಾಗಿ ಹಾದು ಹೋದದ್ದು ಕಂಡಿತು. ನದಿ ತುಂಬಾ ಮರದ ದಿಮ್ಮಿಗಳು ನೀರಿನಲ್ಲಿ ತೇಲುತ್ತಿದ್ದವು. ಹತ್ತಿರದ ಕಾರ್ಖಾನೆಗಳು ಅವುಗಳಿಗೆ ಕಾವಲಿಗೆ ನಿಂತಂತೆ ಕಾಣುತ್ತಿದ್ದವು. ಎಡ ಭಾಗದಲ್ಲಿ ನದಿಯಲ್ಲಿ ಹೊಯ್ಗೆ ತುಂಬುವ ದೋಣಿಗಳು ತೇಲುತ್ತಿದ್ದವು. ಅಷ್ಟಕ್ಕೆ ಸೇತುವೆ ಮುಗಿಯಿತು. ಬಸ್ಸು ವೇಗವಾಗಿ ದಾಟಿ ಮುಂದೆ ಹೋಯಿತು. ನಿಡು ಸಮಯ ಪ್ರಕೃತಿ ಸವಿದ ಅಭಿನಂದನ್ ಮತ್ತೆ ಪತ್ರಿಕೆಗೆ ಇಣುಕಬೇಕೆನ್ನುವಷ್ಟರಲ್ಲಿ ಕಂಡಕ್ಟರ್ ಜೋರಾಗಿ ಸೀಟಿ ಊದಿದ. ಬಸ್ಸಿನ ವೇಗ ಕುಗ್ಗಿತು. ಬ್ರೇಕ್ ಹಾಕಿದ ಭರಕ್ಕೆ ಒಮ್ಮೆ ನಿಂತಿದ್ದ ಪ್ರಯಾಣಿಕರೆಲ್ಲಾ ತಮ್ಮ ಎದುರಿಗೆ ನಿಂತಿದ್ದವರ ಮೇಲೊಮ್ಮೆ ವಾಲಿದರು. ‘‘ಆಡಂ ಕುದ್ರು, ಆಡಂ ಕುದ್ರು... ಇಳಿಲೀಕ್ಕುಂಟಾ? ಬೇಗ... ಬೇಗ’’ ಕಂಡಕ್ಟರ್ ಅವಸರಿಸುತ್ತಿದ್ದ. ಬಸ್ಸು ಬುಸುಗುಡುತ್ತಾ ಕಂಡಕ್ಟರ್‌ನ ಇನ್ನೊಂದು ಸೀಟಿಗಾಗಿ ಕಾಯುತ್ತಿತ್ತು.

ಒಂದೆರಡು ಜನ ಇಳಿದರು. ಅಲ್ಲೇ ನಿಲ್ದಾಣದಲ್ಲಿ ನಿಂತಿದ್ದ ಚಂದದ ಹುಡುಗಿಯೊಬ್ಬಳನ್ನು ನೋಡಿ ಕಂಡೆಕ್ಟರ್ ಅವಳ ಗಮನಸೆಳೆಯುವಂತೆ ‘‘ಉಳ್ಳಾಲ್, ಉಳ್ಳಾಲ್’’ ಎಂದು ಜೋರಾಗಿ ಕರೆದ. ಅವಳು ಇವನ ಕರೆಗೆ ಸೊಪ್ಪ್ಪು ಹಾಕಿದಂತೆ ಕಾಣಲಿಲ್ಲ. ‘ರೈಟ್ ಪೋಯಿ’ ಎಂದು ಕಂಡಕ್ಟರ್ ಜೋರಾಗಿ ಸೀಟಿ ಊದಿದ. ಬಸ್ಸು ಹೊರಟಿತು. ಅವಳು ನೋಡದ ಕೋಪವನ್ನು ತೀರಿಸಿಕೊಳ್ಳಲು ‘‘ಎದುರು ಹೋಗಿ ಮಾರ್ರೇ, ಫುಟ್‌ಪಾತಲ್ಲಿ ಯಾಕೆ ಸಾಯ್ತೀರಿ’’ ಎಂದು ಕಂಡೆಕ್ಟರ್ ಗೊಣಗಿಕೊಂಡ.

ಅಭಿನಂದನ್ ಮತ್ತೆ ಪತ್ರಿಕೆ ಓದಲೆಂದು ಬಾಗಿದ. ‘ಆಡಂ ಕುದ್ರುವಿನಲ್ಲಿ ವೃದ್ಧೆಯ ಸಂಶಯಾಸ್ಪದ ಸಾವು, ಪ್ರಕರಣ ಉಳ್ಳಾಲ ಠಾಣೆಯಲ್ಲಿ ದಾಖಲಾಗಿದೆ. ಆರೋಪಿಯನ್ನು ಸೆರೆ ಹಿಡಿಯಲಾಗಿದೆ’ ಪತ್ರಿಕೆಯ ವಾರ್ತೆಯನ್ನೊಮ್ಮೆ ಸೂಕ್ಷ್ಮವಾಗಿ ಓದಿದ.

ಅಭಿನಂದನ್ ಮೂಲತಃ ಉಪ್ಪಿನಂಗಡಿಯವನು.ಇತ್ತೀಚೆಗೆ ವಾರಕ್ಕೊಮ್ಮೆ ಸ್ಟೇಟ್‌ಬ್ಯಾಂಕಿನಿಂದ ಉಳ್ಳಾಲಕ್ಕೆ ಬರುವವನು. ಕಳೆದೆರಡು ವರ್ಷಗಳ ಹಿಂದೆ ಉಳ್ಳಾಲ ವ್ಯಾಪ್ತಿಯಲ್ಲಿ ಕ್ರೈಂ ಬ್ರಾಂಚ್ ವರದಿಗಾರನಾಗಿ ಉದಯ ರವಿ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ. ಹಾಗಂತ ಅಭಿನಂದನ್ ಪತ್ರಿಕೋದ್ಯಮ ವಿದ್ಯಾರ್ಥಿ ಅಲ್ಲ. ಮನೆಯವರ ಒತ್ತಾಯಕ್ಕೆ ಬಯೋಲಾಜಿ ಕಲಿತವನು.ಕೋರ್ಸು ಮುಗಿಸಿ ಕೆಲಸಕ್ಕಾಗಿ ಸುಮಾರು ವರ್ಷ ಪರದಾಡಿದ. ಕಾಲೇಜು ಓದುವಾಗಲೇ ಸಾಹಿತ್ಯದಲ್ಲಿ ಒಲವಿದ್ದವನು, ಕಥೆ ಕವನಗಳನ್ನು ಬರೆಯುತ್ತಿದ್ದ. ಕೊನೆಗೂ ಅಲೆದಲೆದು ಸುಸ್ತಾಗಿ ತಾನು ಕಲಿತದ್ದನ್ನು ಮೂಲೆಗೆಸೆದು ಈ ಪತ್ರಿಕೆಯಲ್ಲಿ ರಿಪೋರ್ಟರಾಗಿ ಕೆಲಸಕ್ಕೆ ಸೇರಿಕೊಂಡ. ಸಂಬಳ ಬಹಳ ಕಡಿಮೆ ಇತ್ತು, ಓದಲು ಪುಸ್ತಕವಿರುತ್ತಿದ್ದರಿಂದ ಒತ್ತಡವಾಗುತ್ತಿರಲಿಲ್ಲ.

ಉಳ್ಳಾಲದ ಪರಿಸರದ ಕ್ರೈಂ ಬ್ರಾಂಚ್ ರಿಪೋರ್ಟ್ ಮಾಡಬೇಕಾದ್ದರಿಂದ ಉಳ್ಳಾಲ ಪೇಟೆಯಲ್ಲೇ ರೂಂ ಮಾಡಿಕೊಂಡಿದ್ದ. ಊರಿನಿಂದ ಹಿಂದಿರುಗಿದ ದಿನದಂದು ಮಂಗಳೂರಿನ ಸ್ಟೇಟ್‌ಬ್ಯಾಂಕಿನಲ್ಲಿ ಬಸ್ಸಿಳಿದರೆ 44 ನಂಬರ್ ಬಸ್ಸು ಎಲ್ಲವೂ ಉಳ್ಳಾಲ ಪೇಟೆಗೆ ಬಾರದೆ ಹೋಗುವುದಿಲ್ಲ. ಬಸ್ಸು ಆಗಲೇ ಕಲ್ಲಾಪು ದಾಟಿ ತೊಕ್ಕೊಟ್ಟುವಿಗೆ ಹತ್ತಿರವಾಗಿತ್ತು. ಪತ್ರಿಕೆ ಓದುತ್ತಿದ್ದ ಅಭಿನಂದನ್ ಒಮ್ಮೆಲೆ ಏನೋ ನೆನಪಾಗಿ ಗೊಳ್ಳೆಂದು ನಕ್ಕ. ಹತ್ತಿರದ ಸೀಟಿನಲ್ಲಿ ಕುಳಿತಿದ್ದ ಮಧ್ಯವಯಸ್ಕ ಹೆಂಗಸು ಟೀಚರ್ ಅಪಾದಮಸ್ತಕವಾಗಿ ನೋಡಿದವಳೇ ಸೆರಗನ್ನು ಮುಚ್ಚಿಕೊಂಡಳು.

‘ಸ್ವಾರಿ’ ಅಂದವನೇ ಸಾವರಿಸಿಕೊಂಡು, ಪತ್ರಿಕೆಯ ಅದೇ ವರದಿಯನ್ನು ಇನ್ನೊಮ್ಮೆ ಓದಿದ. ಇನ್ನಷ್ಟು ಜೋರಾಗಿ ನಗಬೇಕೆನಿಸಿದರೂ ಚಪ್ಪಲಿ ಮುಖಕ್ಕಪ್ಪಳಿಸುವ ಎಲ್ಲಾ ಸಾಧ್ಯತೆ ಇರುವುದರಿಂದ ನಗುವನ್ನು ಹೊಟ್ಟೆಗೆ ಹಾಕಿಕೊಂಡ.

ಪತ್ರಿಕೆಯ ವರದಿ ಅಷ್ಟು ವಿಚಿತ್ರವಾಗಿತ್ತು. ಆಡಂ ಕುದ್ರುವಿನಲ್ಲಿ ಯಾರೋ ಒಬ್ಬ ರಾತ್ರಿ ಸೈಕಲ್‌ನಲ್ಲಿ ಹೋಗುತ್ತಿರಬೇಕಾದರೆ ಭೂತ ಕಂಡು ಹೆದರಿ ಚರಂಡಿಗೆ ಬಿದ್ದು ಗಾಯ ಮಾಡಿಕೊಂಡಿದ್ದ. ಆಡಂ ಕುದ್ರು ಅಭಿನಂದನ್‌ಗೆ ಹೊಸತಲ್ಲ. ನೇತ್ರಾವತಿ ತಪ್ಪಲಿನಲ್ಲಿರುವ ಚಂದದ ಹಸಿರು ತುಂಬಿಕೊಂಡ ಊರು. ಮಂಗಳೂರಿನಿಂದ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಹೈವೇ ಬದಿಯಲ್ಲಿರುವ ಹಳ್ಳಿ.

ಅಭಿನಂದನ್ ನಕ್ಕಿದ್ದು ಅದಕ್ಕಲ್ಲ. ಈಗ್ಗೆ ಯಾವುದೋ ಒಂದು ಕ್ರೈಂ ರಿಪೋರ್ಟ್‌ಗಾಗಿ ತಿಂಗಳ ಕಾಲ ಆಡಂ ಕುದ್ರುವಿನಲ್ಲಿ ಗೆಳೆಯನ ಮನೆಯಲ್ಲಿದ್ದ. ಅಲ್ಲಿ ಕೆಲಸ ಮುಗಿಸಿ ದಿನವೂ ಇಬ್ಬರು ಆಟವಾಡಲು ಹೋಗುತ್ತಿದ್ದರು. ಒಂದು ದಿನ ಅಭಿನಂದನ್ ಗೆಳೆಯ ಇರಲಿಲ್ಲ. ಸಂಜೆಯಾಗಿತ್ತು. ಒಬ್ಬನೇ ಹೋಗಿ ಆಟವಾಡಿ ತಿರುಗಿ ಬರುತ್ತಿರಬೇಕಾದರೆ ಸಣ್ಣಗೆ ಗೆಜ್ಜೆಯ ಸದ್ದು ಕೇಳಿಬರತೊಡಗಿತು. ಇನ್ನೂ ಸ್ವಲ್ಪ ಜೋರಾಗಿ ನಡೆದಂತೆ ಮತ್ತೆ ಜೋರು ಗೆಜ್ಜೆ ಸದ್ದು. ಭೂತ, ಪ್ರೇತವೆಂದರೆ ಹೆದರಿಕೆ ಹುಟ್ಟಿಸುವಂತಹ ಹಳ್ಳಿಯದು. ನಡೆಯುತ್ತಿದ್ದ ಅಭಿನಂದನ್ ಓಡತೊಡಗಿದ, ಗೆಜ್ಜೆ ಸದ್ದು ಇನ್ನಷ್ಟು ಜೋರಾದವು. ಅಭಿನಂದನ್ ಪ್ರಾಣ ಹೋಗುವಷ್ಟು ಹೆದರಿಕೆಯಾಯಿತು. ಈಗ ಅಭಿನಂದನ್ ಮೆಲ್ಲ ನಡೆಯತೊಡಗಿದ, ಮತ್ತೆ ಗೆಜ್ಜೆ ಸದ್ದು ಕ್ಷೀಣಿಸಿತು. ಈಗ ಸಣ್ಣಗೆ ಬೆವರತೊಡಗಿದ್ದ. ಬೆವರೊರೆಸಲು ಜೇಬಿನಿಂದ ಕರ್ಚೀಫು ತೆಗೆದ. ಕರ್ಚೀಫ್ ಎಳೆದಂತೆ ಎರಡು ನಾಣ್ಯಗಳು ಕೆಳಗೆ ಬಿದ್ದವು. ಆಗಲೇ ಗೊತ್ತಾಗಿದ್ದು ಇದು ಗೆಜ್ಜೆ ಸದ್ದಲ್ಲ ಕಿಸೆಯೊಳಗಿನ ನಾಣ್ಯಗಳ ಸದ್ದೆಂದು. ತನ್ನ ಈ ದಡ್ಡತನ ಯಾವಾಗ ನೆನೆಯುತ್ತಾನೋ ಆವಾಗಲೆಲ್ಲಾ ಅಭಿನಂದನ್‌ಗೆ ಜೋರಾಗಿ ನಗು ಉಕ್ಕಿ ಬರುತ್ತಿತ್ತು. ಈಗಲೂ ಆಗಿದ್ದು ಇದೇ.

ಮತ್ತೆ ಅಭಿನಂದನ್ ಮೀಸೆ ಹಿಂದೆ ನಗುತ್ತಾ ಹೊರಗಿನ ಪ್ರಕೃತಿ ಯೊಂದಿಗೆ ಲೀನವಾದ. ಸ್ವಲ್ಪ ಸಮಯದ ತರುವಾಯ ‘‘ಉಳ್ಳಾಲ, ಉಳ್ಳಾಲ’’ ಎಂದು ಕರೆಯುವಾಗಲೇ ಎಚ್ಚರವಾದದ್ದು. ಅದಾಗಲೇ ದೂರದಲ್ಲಿ ಅಬ್ಬಕ್ಕ ರಾಣಿಯ ಪ್ರತಿಮೆ ದೃಗ್ಗೋಚರವಾಯಿತು. ಬಸ್ಸು ಸರ್ಕಲ್ ಹೊಡೆಯಲು ವೇಗ ತಗ್ಗಿಸಿದಾಗ, ಅಭಿನಂದನ್ ಸ್ಟೈಲಾಗಿ ಇಳಿದು ಬಿಟ್ಟ. ‘‘ಓಯ್ ಮೆಲ್ಲ ಮಾರ್ರೇ ಸಾಯ್ತೀಯಾ?’’ ಅಂತ ಪಕ್ಕಾ ಮಂಗಳೂರು ಭಾಷೆಯಲ್ಲಿ ಕಂಡಕ್ಟರ್ ಬೈಯುವುದು ಕೇಳಿಸಿತು. ನಾಚಿಕೆಯಿಂದ ಬಸ್ಸು ಹೋಗುವವರೆಗೂ ತಿರುಗದೆ, ರಸ್ತೆ ದಾಟಿ ನಗುತ್ತಾ ಅಭಿನಂದನ್ ಪೊಲೀಸ್ ಸ್ಟೇಶನ್ ಬಾಗಿಲು ಹತ್ತಿದ. ಎಲ್ಲಿಗೋ ಹೊರಟಿದ್ದ ಕಾನ್‌ಸ್ಟೇಬಲ್ ‘‘ಹಾ... ನಮಸ್ಕಾರ’’ ಎಂದು ಅಭಿನಂದನ್‌ಗೆ ಕೈ ಬೀಸಿದ. ಅಭಿನಂದನ್‌ಗೆ ಒಂದು ಕ್ರೈಂ ರಿಪೋರ್ಟ್ ಸಿದ್ಧ ಮಾಡುವುದಿತ್ತು. ಅದಕ್ಕಾಗಿಯೇ ಕಳೆದೆರಡು ವಾರವೂ ಪೊಲೀಸ್ ಸ್ಟೇಶನ್‌ಗೆ ಬಂದು ಹೋಗುತ್ತಿದ್ದ. ಆದುದರಿಂದಲೇ ಅವನು ಪೊಲೀಸರಿಗೆಲ್ಲಾ ಚಿರಪರಿಚಿತ.

ಹೊರಾಂಗಣ ದಾಟುವ ಮೊದಲು ನೋಟಿಸ್ ಬೋರ್ಡಿ ಗೊಮ್ಮೆ ಇಣುಕಿದ. ‘‘ಅಬ್ಬಾ... ಎಷ್ಟೊಂದು ರೌಡಿ ಶೀಟರ್‌ಗಳ ಹೆಸರು ಮತ್ತು ಫೋಟೊ. ಎ ರೌಡಿ ಶೀಟರ್‌ಗಳು, ಬಿ ವರ್ಗ, ಸಿ ಅಂಥ ಅವೆಷ್ಟು ಕ್ರೂರ ಮುಖಗಳು. ಅವನ್ನೇ ದಿನಾ ನೋಡುತ್ತ ಬರುತ್ತಿದ್ದವನಾ ದ್ದರಿಂದ ಅವನಿಗಿದು ಆಸಕ್ತಿಯ ವಿಷಯವಾಗಿರಲಿಲ್ಲ. ಇನ್ನೇನು ವರದಿ ವಿಷಯ ಮಾತನಾಡಬೇಕು ಎಂದು ಒಳಗೆ ಪ್ರವೇಶಿಸಬೇ ಕಾದರೆ ಲಾಕಪ್ಪಿನಿಂದ ‘‘ಇಲ್ಲ ಸರ್, ದಮ್ಮಯ್ಯ ಸರ್... ನಾ ಕೊಂದಿಲ್ಲ ಸಾರ್. ದೇವರಾಣೆ ಸರ್, ನನ್ನಪ್ಪನಾಣೆಗೂ ಸರ್. ಪ್ಲೀಸ್ ಸರ್.... ಅಯ್ಯೋ’’ ಎಂಬ ಆರ್ತನಾದ ಕೇಳಿತು. ‘‘ಬೊಗಳು ಬೋ... ಮಗ್ನೆ... ಮೊನ್ನೆ ಯಾಕೆ ಕದಿಯಲು ಹೋಗಿದ್ದು?’’ ಪೊಲೀಸ್ ಧ್ವನಿಯೂ ಕೇಳಿತು. ‘‘ಸತ್ಯ ಸರ್, ಕದಿ ಯಲು ಹೋಗಿದ್ದೆ, ಆ ಅಜ್ಜಿ ಆಗಲೇ ಸತ್ತು ಹೋಗಿತ್ತು ಸರ್, ನಾನೇನೂ ಮಾಡಿಲ್ಲ ಸರ್. ಬಿಟ್ಬಿಡಿ ಸರ್’’ ಎಂದು ಜೋರಾಗಿ ಅರಚುವಿಕೆ ಯೂ ಕೇಳಿತು. ಅಷ್ಟರಲ್ಲೇ ಬಾಗಿಲು ದಾಟಿ ಬಂದ ಅಭಿನಂದನನ್ನು ನೋಡಿ ಏನೋ ಬರೆಯುತ್ತಿದ್ದ ಸಬ್ ಇನ್‌ಸ್ಟೆಕ್ಟರ್ ತಲೆಯೆತ್ತಿ ನೋಡಿದ.

ಓಹ್, ಏನ್ ಸಾಹುಕಾರ್ರೆ.. ಕೇಸಿನ ವಿಚಾರ ಕೇಳಲಿಕ್ಕಲ್ವಾ, ಕೂತ್ಕೊಳ್ಳಿ... ಅಯ್ಯೋ ಅದನ್ನೇ ಎಷ್ಟೂಂತ ನೋಡ್ತೀರಿ. ಅದೇ ಕೇಸಿನ ಬಗ್ಗೆ, ಹೆಹ್ಹೆ.. ನಿಮಗೇನಪ್ಪಾ ನಾಲ್ಕು ಗೆರೆ ಬರೆದ್ರೆ ಕೈ ತುಂಬಾ ಸಂಪಾದಿಸಬಹುದು, ನಮ್ಮ ಅವಸ್ಥೆ ನಮಗೇನೇ ಗೊತ್ತು’’ ಎಂದು ಸಬ್ ಇನ್‌ಸ್ಪೆಕ್ಟರ್ ಪರಿಚಯದಿಂದಲೇ ಕಾಲೆಳೆದ.

‘‘ಎಂಥದೂ ಇಲ್ಲಾ ಸಾರ್, ಮಣ್ಣು. ಬರಿಯದಿದ್ರೆ ಸಂಬಳ ಯಾರು ಕೊಡ್ತಾರೆ?’’ ಎಂದು ಅಭಿನಂದನ್ ಪತ್ರಕರ್ತರ ಕೆಲಸ ವನ್ನು ಸಮರ್ಥಿಸಿಕೊಂಡ.

‘‘ಅದಲ್ಲ, ಎಂಥ ವಿಷ್ಯಾ?’’ ಎಂದು ಲಾಕಪ್ಪಿನ ಕಡೆಗೊಮ್ಮೆ ಕಡೆಗಣ್ಣಲ್ಲಿ ನೋಡಿ ಅಭಿನಂದನ್ ಪ್ರಶ್ನಿಸಿದ.

‘‘ಓ ಅದಾ, ಅದು ನಿನ್ನೆ ಆಡಂ ಕುದ್ರುವಿನಲ್ಲಿ ಕೊಲೆ ಆಯ್ತಲ್ವಾ, ಅದೇ ದಿನ ರಾತ್ರಿ ಇವನು ಕದಿಯಲು ಅದೇ ಮನೆಗೆ ಹೋಗಿದ್ದಂತೆ, ಸಂಶಯ ಬಲವಾಗಿದೆ, ಊರವರು ಹಿಡಿದು ಕೊಟ್ರು. ಈಗ ಇವನೋ ಒಂದಕ್ಷರ ಬಾಯಿ ಬಿಡ್ತಾನೂ ಇಲ್ಲ’’ ಎಂದು ಅನಾಸಕ್ತಿ ಯಿಂದಲೇ ಉತ್ತರ ಕೊಟ್ಟ. ಅಭಿನಂದನ್ ಮತ್ತೆ ಮತ್ತೆ ಕೇಳುತ್ತಿದ್ದ ಲಾಕಪ್ಪಿನ ಹೊಡೆತದ ಶಬ್ದಕ್ಕೆ ಸಂಪೂರ್ಣ ಕರಗಿದ್ದ. ಅನುಕಂಪದ ಅಲೆಯೊಂದು ಆತನ ಹೃದಯವನ್ನೊಮ್ಮೆ ಮೀಟದಿರಲಿಲ್ಲ.

‘‘ಪತ್ರಕರ್ತರೇ ನಿಮಗೇನು, ಒಂದು ತಿಂಗಳು ಬರೆಯುವಷ್ಟು ಒಳ್ಳೆಯ ರಿಪೋರ್ಟ್ ಆಗೋಯ್ತಲ್ವಾ’’ ದೂರದಲ್ಲಿ ಕುಳಿತಿದ್ದ ಕಾನ್‌ಸ್ಟೇಬಲ್ ಮುದುಡಿ ಕುಳಿತ ಅಭಿನಂದನನ್ನು ಒಮ್ಮೆ ನೋಡುತ್ತಾ ಹಲ್ಲು ಕಿರಿದ.

ಒಳಗಿನಿಂದ ಹೊಡೆತದ ಶಬ್ದ ಕೇಳಿಸುತಿತ್ತು. ಅಭಿನಂದನ್ ಒಂದೊಂದು ಹೊಡೆತಕ್ಕೂ ಒಳಗೊಳಗೆ ಕಿರಿಕಿರಿ ಅನುಭವಿಸುತ್ತಿದ್ದ. ಪೊಲೀಸರಿಗದು ಅಭ್ಯಾಸವಾಗಿದ್ದಂತೆ ತೋರುತ್ತಿತ್ತು. ಲಾಕಪ್ಪಿನೊ ಳಗಿದ್ದವನ ನಾಯಿ ಪಾಡು ನೆನೆಯುತ್ತಿದ್ದರಿಂದ ಅವನ ಮನಸ್ಸು ಆದಷ್ಟು ಬೇಗ ಇಲ್ಲಿಂದ ಹೋದರೆ ಸಾಕೆಂದು ಪ್ರಾರ್ಥಿಸುತ್ತಿತ್ತು.

ಇದಾಗಿ ಮೂರು ದಿನಗಳ ತರುವಾಯ ಆಡಂ ಕುದ್ರುವಿನಲ್ಲಿ ಇನ್ನೊಂದು ಪ್ರಕರಣ ಬೆಳಕಿಗೆ ಬಂತು. ರಾತ್ರಿ ಕೆಲಸ ಮುಗಿಸಿ ಬರುತ್ತಿದ್ದ ಇಬ್ಬರು ಕೂಲಿಯಾಳುಗಳನ್ನು ಕೊಂದು ಹಳ್ಳಕ್ಕೆಸೆಯಲಾಗಿತ್ತು. ವೃದ್ಧೆಯನ್ನು ಕೊಲೆ ಮಾಡಿದಂತೆ ಕುತ್ತಿಗೆಯಲ್ಲಿ ನಾಲ್ಕು ಆಳ ಗುರುತುಗಳು ಈ ಎರಡು ಶವಗಳಲ್ಲೂ ಪತ್ತೆಯಾಗಿದ್ದವು. ಸಾಲದ್ದಕ್ಕೆ ಮೂರೂ ಮೃತದೇಹದಲ್ಲಿ ವಿಷದಂಶವಿರುವುದು ಮರಣೋತ್ತರ ಪರೀಕ್ಷೆಗಳಲ್ಲಿ ಕಂಡು ಬಂತು. ಆ ಬಳಿಕ ಟಿವಿ ವಾಹಿನಿಗಳು ಆಡಂ ಕುದ್ರುವಿನ ನಿಗೂಢ ಕೊಲೆಗಳ ಬಗ್ಗೆ ಬಗೆಬಗೆಯ ಕಥೆಗಳನ್ನೆಲ್ಲಾ ಹಣೆಯತೊಡಗಿದವು. ದೇವರ ಪೂಜೆಯ ಕೊರತೆ, ಭೂತಾರಾಧನೆ ನಡೆಸದ್ದು ಎಂಬಿತ್ಯಾದಿ ನೆಪಗಳನ್ನು ಅವರು ವಿವರಿಸುತ್ತಿದ್ದರು. ಎಲ್ಲರ ನಾಲಗೆಯ ತುದಿಯಲ್ಲೂ ಈಗ ಆಡಂ ಕುದ್ರುವಿನದೇ ಸುದ್ದಿ. ಈ ಮಧ್ಯೆ ಕೊಲೆಗುಡುಕನ ಮಾಹಿತಿ ಕೊಟ್ಟರೆ 2 ಲಕ್ಷ ರೂ. ಇನಾಮನ್ನು ಸರಕಾರ ಘೋಷಿಸಿತು.

ಅಭಿನಂದನ್‌ಗೆ ಆಡಂ ಕುದ್ರು ಬಗ್ಗೆ ಚೆನ್ನಾಗಿ ಗೊತ್ತು. ನದಿ ಕಡಲು ಸೇರುವಲ್ಲಿ ಒಂದಷ್ಟು ಮ್ಯಾಂಗ್ರೋ ಕಾಡುಗಳಿಂದ ತುಂಬಿಕೊಂಡ ಪ್ರಕೃತಿ ರಮಣೀಯ ಪ್ರದೇಶ. ಹತ್ತಾರು ಮನೆಗಳು. ಮನೆ ಮನೆಗೂ ಹತ್ತರಷ್ಟು ತೆಂಗಿನ ಮರಗಳು. ರಾತ್ರಿಯಾದರೆ ಗವ್ವನೆ ಕತ್ತಲು ತುಂಬಿ ಬಿಡುವ ಊರು. ಬೀದಿ ದೀಪಗಳು ಉರಿಯುತ್ತಿದ್ದರೂ ಮಣ್ಣಿನ ರಸ್ತೆಯ ತಿರುವುಗಳಲ್ಲಿ ಕತ್ತಲ ಬೆದರಿಕೆ. ರಾತ್ರಿ ಅನತಿ ದೂರದ ನೇತ್ರಾವತಿ ದೊಡ್ಡ ಸೇತುವೆಯಲ್ಲಿ ಚಲಿಸುವ ವಾಹನಗಳ ಹಾರ್ನು ಶಬ್ದ ಬಿಟ್ಟರೆ ಮತ್ತೆ ಕಪ್ಪೆ ಜೀರುಂಡೆಗಳದ್ದೇ ಗಾನ ಮೇಳ. ಒಂದಷ್ಟು ಜನರಿಗೆ ಆಗಾಗ್ಗೆ ಭೂತ, ಪ್ರೇತಗಳು ಕಾಣಿಸಿಕೊಳ್ಳುವ ಕಥೆಗಳು ಇದ್ದುದರಿಂದಲೇ, ಗಂಟೆ ಏಳಾದ ನಂತರ ಯಾರೂ ಹೊರಗಿಳಿ ಯಲಾರರು. ಇತ್ತೀಚೆಗೆ ಯಾಕೆ ಇಂತಹ ನಿಗೂಢ ಕೊಲೆಗಳಾಗುತ್ತಿದೆ?ಎಂದು ಕ್ರೈಂ ವರದಿಯ ಸಂಶಯದಂತೆ ಪ್ರಕರಣ ಭೇದಿಸುವ ಹಲವಷ್ಟು ಉಪಾಯಗಳನ್ನು ಮಾಡುತ್ತಾ ಅಭಿನಂದನ್ ಆ ರಾತ್ರಿ ನಿದ್ದೆ ಹೋದ. ಅಪರಾತ್ರಿ, ಗಾಢ ನಿದ್ದೆ. ತಟ್ಟನೆ ಯಾರೋ ಎಚ್ಚರಿಸಿದಂತಾಯ್ತು. ಗಕ್ಕನೆ ಎದ್ದು ಕುಳಿತ. ಮೈಯಲ್ಲಾ ಬೆವರಿತ್ತು. ಅದಾಗಲೇ ಕೆಟ್ಟ ಕನಸುಗಳು ಅವನನ್ನು ಅಪ್ಪಚ್ಚಿ ಮಾಡಿದ್ದವು.

ಸಣ್ಣಗೆ ಮೊಬೈಲ್ ನೋಟಿಫೀಕೇಶನ್ ಲೈಟು ಮಿಂಚುತ್ತಿತ್ತು. ಅನಾಮತ್ತಾಗಿ ಮೊಬೈಲ್ ಎತ್ತಿಕೊಂಡವನು ನೋಟಿಫಿಕೇಶನ್ ಪರಿಶೀಲಿಸಿದ. ವಾಟ್ಸ್‌ಆ್ಯಪ್ ಮೆಸೇಜ್ ನೋಡಿದ ಅಭಿನಂದನ್‌ಗೆ ಒಮ್ಮೆ ಕೈ ಅದುರಿತು. ಆಡಂ ಕುದ್ರುವಿನಲ್ಲಿ ಗಸ್ತು ತಿರುಗುತ್ತಿದ್ದ ಎರಡು ಪೇದೆಗಳನ್ನು ಕೊಂದು ಬೇಲಿಯಲ್ಲಿ ಎಸೆದು ಹೋಗಿದ್ದರು. ಕಂಡ ಕೆಟ್ಟ ಕನಸಿನಲ್ಲೂ ಆಡಂ ಕುದ್ರುವಿನ ಕೊಲೆಗುಡುಕ ಅಟ್ಟಿಸಿ ಬರುತ್ತಿದ್ದ, ಕಾಕತಾಳೀಯವೆಂಬಂತೆ ಮತ್ತೆ ಕೊಲೆ ನಡೆದ ಸುದ್ದಿ ಅಭಿನಂದನ್‌ನನ್ನು ಇನ್ನಷ್ಟು ಧೃತಿಗೆಡಿಸಿತು. ಆ ರಾತ್ರಿ ಅಭಿನಂದನ್‌ಗೆ ನಿದ್ದೆಯೇ ಹತ್ತಲಿಲ್ಲ. ಮಗ್ಗಲು ಬದಲಾಯಿಸುತ್ತಲೇ ಇದ್ದ.

ಬೆಳಗಾಗುವುದರೊಳಗಾಗಿ ಡಿ.ಸಿ. ಯಿಂದ ಹೊಸ ಆಜ್ಞೆ ಬಂತು. ಆಡಂ ಕುದ್ರುವಿನಲ್ಲಿರುವ ಎಲ್ಲಾ ಮನೆಗಳನ್ನು ತೆರವುಗೊಳಿಸಬೇಕು, ಯಾರೊಬ್ಬರೂ ಇನ್ನು ರಾತ್ರಿ ಅಲ್ಲಿರಬಾರದು. ಆಡಂ ಕುದ್ರು ನಿವಾಸಿಗಳನ್ನೆಲ್ಲಾ ಬೇರೆಡೆಗೆ ಕರೆಸಲಾಯಿತು. ಒಬ್ಬೊಬ್ಬರಾಗಿ ವಿಚಾರಣೆ ಮಾಡಲಾಯಿತು. ಒಂದಿಬ್ಬರು ಆ ಊರಿನಲ್ಲಿ ಇತ್ತೀಚೆಗೆ ನಡೆದ ಕೆಲವು ಬದಲಾವಣೆಗಳನ್ನು ತಿಳಿಸಿದರು. ಒಂದೆರಡು ಬಿದಿರಿನ ತೆಪ್ಪಗಳು ನದಿ ಬದಿಯಲ್ಲಿ ತೇಲುತ್ತಿದ್ದವು. ಅಷ್ಟರಲ್ಲೇ ಇನ್ನೊಬ್ಬ ಅದು ಮರಳು ತರುವವರದ್ದೆಂದು ಸಮಜಾಯಿಷಿ ಕೊಟ್ಟ. ಇನ್ನು ರಾತ್ರಿಗಳಲ್ಲಿ ಶಿಳ್ಳಿನ ಸದ್ದು ಕೇಳಿದವರಿದ್ದರು. ಊರವರಲ್ಲೇ ಕೆಲವರು ಅದು ರಾತ್ರಿ ಹೈವೇಯಲ್ಲಿ ಚಲಿಸುವ ಲಾರಿಗಳ ಏರಿಳಿತದ ಸದ್ದು ಎಂದು ಸಮರ್ಥಿಸಿದರು. ಮಿಕ್ಕುಳಿದಂತೆ ಯಾವುದೇ ಹೊಸ ಬದಲಾವಣೆ ಕಂಡು ಬಂದಿರಲಿಲ್ಲ.

ಕಾನ್‌ಸ್ಟೇಬಲ್‌ಗಳಿಬ್ಬರ ಮರಣೋತ್ತರ ವರದಿ ಬಂತು. ಮೃತದೇಹದಲ್ಲಿ ವಿಷದಂಶ ಪತ್ತೆ ಹಚ್ಚಲಾಗಿತ್ತು. ತಜ್ಞರ ಪ್ರಕಾರ ಮಿಚಿಗನ್ ಎಂಬ ಹಾವೊಂದರ ವಿಷವದು. ಮೃತದೇಹದಲ್ಲಿರುವ ವಿಷ ಹಾವಿನದ್ದಾದರೂ ಅದು ಕಚ್ಚಿದ ಯಾವುದೇ ಗುರುತು ಕೂಡಾ ಇರಲಿಲ್ಲ. ಇರುವುದು ಕುತ್ತಿಗೆ ಭಾಗದಲ್ಲಿ ಆಳವಾದ ಗಾಯ. ಆಶ್ಚರ್ಯವೆಂದರೆ ಈ ಹಾವು ಭಾರತಕ್ಕೆ ಬರುವುದೆಂದರೆ ನಂಬುವುದು ಅಸಾಧ್ಯವಾಗಿತ್ತು. ಅದರಲ್ಲೂ ವಿಶೇಷವೆಂದರೆ ಇವು ವಾಸಿಸುವುದು ಮಂಜು ಮಿಶ್ರಿತ ಪ್ರದೇಶಗಳಲ್ಲಿ, ಆದರೂ ಮಂಗಳೂರಿನ ಆಸುಪಾಸಿನ ಆಡಂ ಕುದ್ರವಿಗೆ ಬರಲು ಸಾಧ್ಯವೇ. ಎಂಬ ಹಲವಾರು ಪ್ರಶ್ನೆಗಳು ತಜ್ಞರಿಗೆ ಸವಾಲಾಗಿ ಪರಿಣಮಿಸಿತ್ತು. ಪತ್ರಿಕೆಗಳು ಈ ವಿಚಾರವನ್ನು ಪ್ರಕಟಿಸಿದ್ದವು.

ಅಭಿನಂದನ್ ಕೂಡಾ ಬಯೋಲಜಿ ವಿದ್ಯಾರ್ಥಿ, ಪ್ರಾಣಿ ಪ್ರಪಂಚದ ಬಗ್ಗೆ ವಿಶೇಷ ಒಲವಿರುವವನು, ಇಂತಹ ವಿಶಿಷ್ಟ ಹಾವಿನ ವಿಚಾರ ಬಂದರೆ ಸುಮ್ಮನಿರಲಾದೀತೇ. ಮಿಚಿಗನ್ ಹಾವಿನ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಿದ. ಪ್ರಕರಣದ ಬಗ್ಗೆ ಇನ್ನಷ್ಟು ತನಿಖೆಗೆ ವಿಶೇಷ ತಂಡ ರಚಿಸಲಾಯಿತು. ಜನರೇ ಇಲ್ಲದ ಆಡಂ ಕುದ್ರು ಇವರ ನಿರೀಕ್ಷಣೆಯಲ್ಲೇ ಕಳೆಯಿತು. ಆ ರಾತ್ರಿ ಇಡೀ ಆಡಂ ಕುದ್ರುವಿನಲ್ಲಿ ನಿರೀಕ್ಷಣಾ ತಂಡ ಬಂದೂಕು ಹಿಡಿದು ಜಾಗರಣೆ ಮಾಡಿತು. ಯಾವುದೇ ವಿಶೇಷ ಕಂಡು ಬರಲಿಲ್ಲ. ಬೆಳಗ್ಗಾದರೆ ವಿಶಿಷ್ಟ ಬಿಳಿ ಬಣ್ಣದ ಎರಡು ಹಾವುಗಳ ಕಳೇಬರಗಳು ಪತ್ತೆಯಾದವು. ಜೀವಶಾಸ್ತ್ರ ವಿಜ್ಞಾನಿಗಳ ಹೆಚ್ಚಿನ ಪರೀಕ್ಷೆಗಾಗಿ ಹಾವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಯಿತು. ತಜ್ಞರು ಇದೇ ಮಿಚಿಗನ್ ಹಾವೆಂದು ಖಚಿತವಾದ ತೀರ್ಮಾನಕ್ಕೆ ಬಂದರು. ಇದಾಗಿ ಎರಡ್ಮೂರು ದಿನಗಳು ಯಾವುದೇ ಸಾವಿನ ಸುದ್ದಿ ಬರಲಿಲ್ಲ. ಸರಿಯಾಗಿ ಮೂರನೇ ದಿನಕ್ಕೆ ಪಟ್ಲದಲ್ಲೊಂದು ಕೊಲೆಯಾಯಿತು. ಪಟ್ಲವೆಂದರೆ ಜನ ಬಾಹುಳ್ಯವಿರುವ ಆಡಂ ಕುದ್ರುವಿನ ಪಕ್ಕದ ಊರು. ಹಿಂದಿನ ಸಾವಿನ ಎಲ್ಲಾ ಕುರುಹುಗಳು ಈ ಮೃತದೇಹದಲ್ಲಿ ಕಂಡಿದ್ದವು. ಆಡಂ ಕುದ್ರುವಿನಲ್ಲಿ ವಿಶೇಷವೇನೂ ಗತಿಸಲಿಲ್ಲ. ಒಂದು ವಾರ ಯಾವುದೇ ಕುರುಹು ಸಿಗದೆ ವಿಶೇಷ ತಂಡ ಆಡಂ ಕುದ್ರುವನ್ನು ನಿರ್ಜನವಾಗಿ ಬಿಟ್ಟು ಮರಳಿ ಬಂದಿತ್ತು.

ಆಮೇಲೆ ಒಂದುವಾರ ಬಿಗಿ ಬಂದೋಬಸ್ತಿನಲ್ಲಿದ್ದ ಆಡಂ ಕುದ್ರುವಿನ ವಿಶೇಷ ಅಧಿಕಾರಿಗಳು ಯಾವುದೇ ಕುರುಹು ಸಿಗದೆ ಹೊರಟು ಬಂದರು. ಆದರೆ ಸರಕಾರ ಜನರನ್ನು ರಕ್ಷಣಾ ಸ್ಥಳದಲ್ಲಿರಿಸಿ ಆಡಂ ಕುದ್ರುವಿಗೆ ಹೋಗಲು ಬಿಡದೆ ನಿರ್ಜನವಾಗಿರಿಸಿತು. ಆ ವಾರದಲ್ಲಿ ಮಿಚಿಗನ್ ಹಾವಿನ ಬಗ್ಗೆ ಅಭಿನಂದನ್ ವಿಶೇಷ ಲೇಖನವೊಂದನ್ನು ಬರೆದ. ಹಿಮ ಪ್ರದೇಶಗಳಲ್ಲಿ ವಾಸಿಸುವ ವಿಷಪೂರಿತ ಹಾವು. ಶೀತರಕ್ತ ಪ್ರಾಣಿಗಳಾದ್ದರಿಂದ ಎಲ್ಲೂ ವಾಸಿಸ ಬಲ್ಲದು. ಹೆಚ್ಚುತ್ತಿರುವ ಜಾಗತಿಕ ತಾಪ ಮಾನದಿಂದ ಮಂಜು ಕರಗಿ ಹೋಗುತ್ತಿದ್ದು, ಕಡಲಮಾರ್ಗ ಮೂಲಕ ತೀರ ಪ್ರದೇಶಗಳಿಗೆ ಬರುವ ಸಾಧ್ಯತೆಗಳು ಇವೆ ಎಂದು ಬರೆದಿದ್ದ. ಓದುಗರು ಮುಗಿ ಬಿದ್ದು ಪತ್ರಿಕೆ ಓದಿದರು. ಪತ್ರಿಕೆ ಮುಂದೆ ಇಂತಹದ್ದೇ ಹೊಸ ಮಾಹಿತಿ ಬಗ್ಗೆ ಬರೆಯಲು ಅಭಿನಂದನಿಂದ ಆದೇಶಿಸಿತು. ಆ ಬಳಿಕ ಒಂದು ವಾರ ಅಭಿನಂದನ್‌ಗೆ ಏನೂ ಬರೆಯಲಾಗಲಿಲ್ಲ. ಪತ್ರಿಕೆ ಶತಾಯಗತಾಯ ಪೀಡಿಸತೊಡಗಿತು. ಇತ್ತ ಆ ಹಾವೇ ಕೊಲೆಗಾರನೆಂದು ತೀರ್ಮಾನಕ್ಕೂ ಬಾರದೆ ವಿಶೇಷ ತಂಡಗಳಿಗೆ ಕುತ್ತಿಗೆಯ ಆಳ ಗಾಯಗಳು ತಡೆಯಾಗಿದ್ದವು. ಅಷ್ಟೇ ಅಲ್ಲದೆ ಆಡಂ ಕುದ್ರುವಿನಲ್ಲಿ ಸಿಕ್ಕ ಹಾವುಗಳ ವಿಷದ ಹಲ್ಲುಗಳು ಕೀಳಲಾಗಿದ್ದವು. ಪತ್ರಿಕೆಯ ಒತ್ತಡಕ್ಕೆ ಸಿಲುಕಿ, ಆ ದಿನ ಸಂಜೆ ಯಾರಿಗೂ ಹೇಳದೆ ಅಭಿನಂದನ್ ಎಲ್ಲಿಗೋ ಹೊರಟು ಹೋದ. ಯಾರಿಗೂ ಹೇಳದೆ ಹೊರಟಿದ್ದ. ಒಂದು ವಾರ ಕಳೆಯಿತು. ಆ ಬಳಿಕ ಅಭಿನಂದನನ್ನು ಯಾರೂ ನೋಡಿದವರಿಲ್ಲ. ಒಂದು ವಾರದಿಂದ ಕೆಲಸಕ್ಕೆ ಬಾರದಿದ್ದನ್ನು ಕಂಡು ಪತ್ರಿಕಾ ಮಂಡಳಿಯೇ ಪೊಲೀಸ್‌ಗೆ ಕಂಪ್ಲೇಟ್ ಕೊಟ್ಟಿತು. ಪತ್ರಿಕೆಗಳು ಪರಿಚಯದ ಜಾಹೀರಾತು ಹಾಕಿ ಕಂಡರೆ ತಿಳಿಸಬೇಕೆಂದು ವರದಿ ಬರೆದಿದ್ದವು. ಮನೆಯವರಿಗೂ ತಿಳಿಸಿದರು. ಆತ ಮನೆಗೂ ಹೋಗಿರಲಿಲ್ಲ. ಅಭಿನಂದನ್ ಬಗ್ಗೆ ಯಾವ ಸುಳಿವೂ ಸಿಗಲಿಲ್ಲ.

ಕೊನೆಗೆ ಪೊಲೀಸರು ಆತನ ರೂಂಗೆ ಹೋದರು, ಬಾಗಿಲು ಹೊರಗಿನಿಂದಲೇ ಮುಚ್ಚಿತ್ತು. ಬಾಗಿಲು ಒಡೆದು ಒಳ ಪ್ರವೇಶಿಸಿ ದರು. ಒಳಗೆ ಬರೆದಿಟ್ಟ ಹಲವು ಆಡಂ ಕುದ್ರುವಿನ ಬಗ್ಗೆ ಮಾಹಿತಿ ಗಳು ರಾಶಿ ಹಾಕಿದ್ದವು. ಪೊಲೀಸರು ಆತ ಆಡಂ ಕುದ್ರುವಿಗೆ ಹೋಗಿರ ಬಹುದೆಂದು ಭಾವಿಸಿ, ಆಡಂ ಕುದ್ರುವಿನಲ್ಲಿ ಹುಡುಕಿದರು. ಒಂದು ಅನಾಥ ಮೊಬೈಲ್ ಬಿಟ್ಟು ಬೇರೆನೂ ಪತ್ತೆಯಾಗಿರಲಿಲ್ಲ. ಪೊಲೀಸರು ಕ್ರೈಂ ಬ್ರಾಂಚ್‌ಗೆ ಮೊಬೈಲನ್ನು ಹಸ್ತಾಂತರಿಸಿದರು. ಸ್ವಿಚ್ಡಾಫ್ ಆಗಿದ್ದ ಮೊಬೈಲ್‌ಗೆ ಚಾರ್ಜ್ ಮಾಡಿದರು. ಆನ್ ಅಯಿತು, ಅದು ಅಭಿನಂದನ್ ನ ಮೊಬೈಲ್. ಮೊಬೈಲ್ ತುಂಬಾ ಜಾಲಾಡಿದರು. ಯಾವುದೇ ಮಾಹಿತಿ ಲಭಿಸಲಿಲ್ಲ. ವಾಟ್ಸ್‌ಆ್ಯಪ್, ಮೆಸೇಂಜರ್ ಎಲ್ಲಾ ಹುಡುಕಿ ನೋಡಿದರು ಆತನ ಮಾಹಿತಿಗೆ ಪೂರಕವಾದ ಮಾಹಿತಿಗಳೇನೂ ಕಾಣಲೇ ಇಲ್ಲ. ಆಚಾನಕ್ಕಾಗಿ ಕೊನೆಗೆ ಈ ಮೈಲ್ ನೋಡೋಣವೆಂದೆನಿಸಿದಾಗ, ಡ್ರಾಫ್ಟ್‌ನಲ್ಲಿ ಸುಮಾರು ಬರಹಗಳು ಕಾಣಿಸಿದವು.

ಆಶ್ಚರ್ಯವೆಂಬಂತೆ ಅದರಲ್ಲಿ ಎರವ ಕುಡಿಯ ಎನ್ನುವ ಕಾಡು ಮನುಷ್ಯರ ಕಥೆಯಿತ್ತು. ಮೂಲತಃ ಮಡಿಕೇರಿ ಕಾಡಿನಲ್ಲಿ ವಾಸಿಸುತ್ತಿದ್ದ ಕಾಡು ಮನುಷ್ಯರ ಜನಾಂಗ. ಬೇಟೆಗಾಗಿ ವಿಷ ಹಾವುಗಳನ್ನು ಹಿಡಿದು ಅವುಗಳ ವಿಷವನ್ನು ಅದ್ದಿ ಸಣ್ಣ ಮರದ ಭರ್ಜಿ ಗಳನ್ನು ತಿವಿದು ಪ್ರಾಣಿಗಳನ್ನು ಕೊಲ್ಲುತ್ತಿದ್ದರು. ಇತ್ತೀಚೆಗೆ ಕಾಡು ನಾಶ, ಗಂಧದ ಮರಗಳ ಸಾಗಾಟದಿಂದಾಗಿ ಅವರ ಸಂತತಿಯೇ ನಾಶ ವಾಗಿದ್ದಾಗಿ ತಿಳಿದಿದ್ದರು. ಅವರು ಮಡಿಕೇರಿಯ ಕಾವೇರಿ ನದಿಯ ಕಾಡಿನ ಮೂಲಕ ಎಲ್ಲಿಗೋ ವಲಸೆ ಹೋಗಿದ್ದಾರೆಂಬ ಮಾಹಿತಿಯೂ ಇತ್ತು. ನಾನೇ ಇಂದವರನ್ನು ಸ್ವತಃ ಮರೆಯಲ್ಲಿ ಕುಳಿತು ಇಲ್ಲಿ ಕಂಡೆ. ಮರದ ತೆಪ್ಪದಲ್ಲಿ ಅವರು ನದಿ ದಾಟಿ ಬಂದರು. ತೀರ ಕಪ್ಪಗಿನ ಮನುಷ್ಯರು. ಒಂದಷ್ಟು ಎಲೆಗಳನ್ನು ಸುತ್ತಿದ ಬಟ್ಟೆ. ಅವರನ್ನು ಉಪಾಯದಿಂದ ಮಾತನಾಡಿಸಲು ಅವರ ಜೊತೆ ವ್ಯವಹರಿಸಲು ಪ್ರಯತ್ನಿಸಿದೆ. ನನ್ನ ಇರುವು ಅವರಿಗೆ ಗೊತ್ತಾಗಿರಬೇಕು. ನನ್ನನ್ನು ಹುಡಿಕಿಕೊಂಡು ಬಂದರು. ನಾನು ತಪ್ಪಿಸಿಕೊಂಡೆ. ನನ್ನ ಪ್ರಕಾರ ಈ ಕೊಲೆಗಳಿಗೆ ಕಾರಣಇವರೇ. ಮೊನ್ನೆ ಅವರ ಕೈಯಲ್ಲಿ ಮಿಚಿಗನ್ ಹಾವುಗಳನ್ನು ನೋಡಿದ್ದೆ. ಅವರು ಹಲ್ಲು ಕಿತ್ತು ಆ ಚೂಪ್ಪು ಕೋಲುಗಳಿಗೆ ಸವರುವುದನ್ನು ನೋಡಿದ್ದೆ. ಮಧ್ಯ ರಾತ್ರಿ ಬಂದರೆ, ಬೆಳಗ್ಗೆ ಬೇಗನೇ ಮತ್ತೆ ತೆಪ್ಪದಲ್ಲಿ ತೆರಳುತ್ತಾರೆ. ಅವರ ಭಾಷೆ ವಿಚಿತ್ರವಾಗಿದೆ.

ಇಷ್ಟೂ ಮಾಹಿತಿಗಳು ಡ್ರಾಫ್ಟ್‌ನಲ್ಲಿ ಭದ್ರವಾಗಿದ್ದವು. ಅಂದೇ ಸಂಜೆ ಟಿ.ವಿ. ವಾಹಿನಿಗಳಲ್ಲಿ ವಿಶೇಷ ವಾರ್ತೆಯೊಂದು ಪ್ರಕಟವಾಯಿತು. ಆಡಂ ಕುದ್ರುವಿನಲ್ಲಿ ಅಪರಿಚಿತ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ, ನಾಪತ್ತೆಯಾದ ಪತ್ರಕರ್ತನೆಂಬ ಶಂಕೆ. ಮರು ದಿನ ಉದಯ ರವಿ ಪತ್ರಿಕೆಯಲ್ಲಿ ಎರವ ಕುಡಿಯ ಜನಾಂಗದ ಬಗ್ಗೆ ಅದ್ಭುತ ವರದಿಯೊಂದು ಅಭಿನಂದನ್ ಹೆಸರಿನಲ್ಲಿ ಪ್ರಕಟವಾಯಿತು. ಕೆಲವು ಚಿಂತಕರು ಇದು ಅದ್ಭುತ ವರದಿಯೆಂದು ಬಣ್ಣಿಸಿದರು. ವಾರಗಳೊಳಗಾಗಿ ಅದು ಇಂಗ್ಲಿಷ್ ಪತ್ರಿಕೆಗಳಿಗೂ ಭಾಷಾಂತರಗೊಂಡು ಪ್ರಕಟವಾಯಿತು. ಆ ಹೊತ್ತಿಗೆ ಆಡಂ ಕುದ್ರು ಮತ್ತು ವಲಸೆ ಬಂದ ಕಾಡು ಮನುಷ್ಯರ ವಿಚಾರ ವನ್ಯ ಜೀವಿ ಸಂರಕ್ಷಣೆ ಇಲಾಖೆಯಲ್ಲೂ ಮಾತಾಯಿತು. ಮುಂದಿನ ದಿನದಲ್ಲಿ ಆಡಂ ಕುದ್ರು ಸುಪ್ರೀಂ ಕೋರ್ಟಿನವರೆಗೂ ತಲುಪಿತು. ಕೊನೆಗೆ ಸುಪ್ರೀಂ ಕೋರ್ಟ್ ಆಡಂ ಕುದ್ರುವನ್ನು ಅಭಿನಂದನ್ ರಕ್ಷಿತಾರಣ್ಯವೆಂದು ಘೋಷಿಸಿತು. ಅಳಿವಿನಂಚಿ ನಲ್ಲಿದ್ದ ಕಾಡು ಮನುಷ್ಯರ ಬಗೆಗಿನ ವಿಶಿಷ್ಟ ವರದಿಗಾಗಿ ಅಭಿನಂದನ್‌ಗೆ ಮರಣೋತ್ತರವಾಗಿ ವಿಶ್ವದ ನಾನಾ ದೇಶಗಳಿಂದ ಹಲ ವಾರು ಪ್ರಶಸ್ತಿಗಳು ಅರಸಿ ಬಂದವು. ಆಡಂ ಕುದ್ರುವಿನ ಮೂಲ ನಿವಾ ಸಿಗಳಿಗೆ ಸರಕಾರವೇ ಹೊಸ ಜಾಗ ಕಲ್ಪಿಸಿತು. ಮತ್ತೆಂದೂ ಕಾಡು ಮನುಷ್ಯರು ಯಾರನ್ನೂ ಕೊಂದದ್ದಾಗಿ ವರದಿಯಾಗಲೇ ಇಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)