varthabharthi


ಸಿನಿಮಾ

ತಮಿಳು ಸಿನೆಮಾ

ಏಕಪಾತ್ರದ ‘ಒತ್ತ ಸೆರಪ್ಪು ಸೈಝ್ ಏಳ್’

ವಾರ್ತಾ ಭಾರತಿ : 6 Oct, 2019
ಮ.ಶ್ರೀ. ಮುರಳಿ ಕೃಷ್ಣ, ಬೆಂಗಳೂರು

ಬರಗೂರು ರಾಮಚಂದ್ರಪ್ಪನಿರ್ದೇಶನದ ‘ಶಾಂತಿ’(2005), 1964ರಲ್ಲಿ ತೆರೆಕಂಡ ಸುನಿಲ್ ದತ್ ನಟನೆಯ ‘ಯಾದೇಂ’(ಹಿಂದಿ) ಮತ್ತು ಈ ವರ್ಷ ಬೆಂಗಳೂರು ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಜಿ. ಮೂರ್ತಿ-ಶ್ರೀನಿವಾಸ ಪ್ರಭು ನಿರ್ದೇಶನದ ‘ಬಿಂಬ-ಆ ತೊಂಬತ್ತು ನಿಮಿಷಗಳು’(ಖ್ಯಾತ ನಾಟಕಕಾರ ಸಂಸರ ಜೀವನಗಾಥೆ ಆಧಾರಿತ) ಎಂಬ ಚಲನಚಿತ್ರಗಳ ಸಾಮಾನ್ಯ ಅಂಶ-ಏಕಪಾತ್ರ. ಇಂತಹ ಪ್ರಯತ್ನಗಳು ಹೊಸದೇನೂ ಅಲ್ಲ. ವಿದೇಶಿ ಚಲನಚಿತ್ರರಂಗದಲ್ಲೂ ಇಂತಹ ಕೆಲವು ಗಮನೀಯ ಪ್ರಯೋಗಗಳಾಗಿವೆ. ಇತ್ತೀಚೆಗೆ ಬಿಡುಗಡೆಯಾಗಿರುವ, ತಮಿಳು ಚಲನಚಿತ್ರರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿರುವ ಪಾರ್ಥಿಬನ್‌ರ ಚಿತ್ರಕಥೆ, ನಿರ್ದೇಶನ, ನಟನೆ ಮತ್ತು ನಿರ್ಮಾಣದ ‘ಒತ್ತ ಸೆರೆಪ್ಪುಸೈಝ್ ಏಳ್’(‘ಒಂಟಿ ಚಪ್ಪಲಿ ಸೈಝ್ ಏಳು’)ಎಂಬ ತಮಿಳು ಚಲನಚಿತ್ರ ಈ ಪಟ್ಟಿಗೆ ನೂತನ ಸೇರ್ಪಡೆ.

  ಮಾಸಿಲಾಮಣಿ ಕ್ಲಬ್‌ವೊಂದರ ಸೆಕ್ಯುರಿಟಿ ಗಾರ್ಡ್. ಕೊಲೆಯ ಆಪಾದನೆಯಲ್ಲಿ ಆತನನ್ನು ಒಂದು ಪೊಲೀಸ್ ಠಾಣೆಯಲ್ಲಿ ಡೆಪ್ಯುಟಿ ಕಮಿಷನರ್(ಡಿಸಿಪಿ) ನೇತೃತ್ವದ ತಂಡ ವಿಚಾರಣೆಯನ್ನು ನಡೆಸುತ್ತದೆ. ಈ ಸಮಯದಲ್ಲಿ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ಆತನ ಸಣ್ಣ ವಯಸ್ಸಿನ ಮಗ ವಿಚಾರಣಾ ಕೊಠಡಿಯ ಹೊರಗಿರುತ್ತಾನೆ. ಅನೇಕ ಪೊಲೀಸ್ ವಿಚಾರಣೆಗಳಲ್ಲಿ ಸಾಮಾನ್ಯವಾಗಿ ಜರುಗುವಂತೆ ಇಲ್ಲೂ ಸಹ ಆತ ಮಾಡದಿರಬಹುದಾದ ಕೊಲೆಯನ್ನು ಒಪ್ಪಿಕೊಳ್ಳುವಂತೆ ಮಾಡಲು ಒತ್ತಡಗಳನ್ನು ಹಾಕಲಾಗುತ್ತದೆ. ಆತ ಕೊಲೆ ಮಾಡಿದ್ದಾನೆಯೇ ಅಥವಾ ಇಲ್ಲವೇ ಎಂಬುದು ಚಲನಚಿತ್ರದ ಕ್ಲೈಮಾಕ್ಸ್‌ನಲ್ಲಿ ತಿಳಿದು ಬರುತ್ತದೆ.

ಟೈಟಲ್ ಕಾರ್ಡ್ಸ್‌ನಲ್ಲೇ ಈ ಚಲನಚಿತ್ರ ಒಂದು ನಿಗೂಢ ವಸ್ತುವನ್ನು ಹೊಂದಿದೆ ಎಂಬುದನ್ನು ದಾಟಿಸಲಾಗಿದೆ. ಮೊದಲನೇ ಶಾಟ್‌ನಲ್ಲಿ ಒಂದು ಕಾಲಿಗೆ ಹಾಕಿಕೊಳ್ಳುವ ಬಿಗಿಪಟ್ಟಿಯನ್ನು ಝೂಮ್ ಇನ್ ಮಾಡಿ ತೋರಿಸುತ್ತ ಟೇಬಲ್ ಮೇಲೆ ಇರುವ ಪುಸ್ತಕದ ಲೇಬಲ್‌ನಲ್ಲಿ ‘ಮಹೇಶ್-2ನೇ ಕ್ಲಾಸ್’ ಎಂಬ ಸಂಗತಿಯತ್ತ ಕ್ಯಾಮರಾ ಕೇಂದ್ರೀಕರಿಸುತ್ತದೆ. ನಂತರ ಟೇಬಲ್ ಮೇಲಿರುವ ಆಪಾದಿತನ ಕನ್ನಡಕದ ಮೂಲಕ ಆತನ ಮುಖವನ್ನು ಪ್ರಧಾನವಾಗಿ ಬಿಂಬಿಸುವ ಒಂದು ಫ್ರೇಮಿದೆ. ಇಡೀ ಚಲನಚಿತ್ರ ಆಪಾದಿತನ ‘ಪಾಯಿಂಟ್ ಆಫ್ ವ್ಯೆ’ನ್ನು ಹೊಂದಿದೆ ಎಂಬ ಸುಳಿವನ್ನು ನಿರ್ದೇಶಕ-ಛಾಯಾಚಿತ್ರಗ್ರಾಹಕ ಸೂಕ್ಷ್ಮವಾಗಿ ವೀಕ್ಷಕರಿಗೆ ತಲುಪಿಸುತ್ತಾರೆ!

 ಇನ್ನೊಂದು ಶಾಟ್‌ನಲ್ಲಿ ಸ್ವಲ್ಪದೂರದಲ್ಲಿರುವ ಮಾನಿಟರ್ ಮೂಲಕ ವೀಕ್ಷಕರು ಮಾಸಿಲಾಮಣಿಯನ್ನು ವೀಕ್ಷಿಸುತ್ತಾರೆ. ವೀಕ್ಷಕರು ಆ ಕೋಣೆಯಲ್ಲಿರುವ ಡಿಸಿಪಿ, ಸಾಮಿ ಎಂಬ ಪೊಲೀಸ್ ಅಧಿಕಾರಿ ಮತ್ತು ಮಹಿಳಾ ಸೈಕಾಲಜಿಸ್ಟ್‌ರನ್ನು ಕಾಣುತ್ತಿದ್ದಾರೆ; ಅವರನ್ನು ಅಳೆಯುತ್ತಿದ್ದಾರೆ ಎಂದು ಭಾಸವಾಗುವಂತೆ ಚಿತ್ರೀಕರಿಸಲಾಗಿದೆ. ಚಿತ್ರಕಥೆಯಲ್ಲಿ ಅಡಕಗೊಂಡಿರುವ 7-8 ಪಾತ್ರಗಳಾವುವೂ ತೆರೆಯ ಮೇಲೆ ಕಾಣಿಸುವುದಿಲ್ಲ. ಆದರೆ ಆಡಿಯೊ ಮೂಲಕ ವೀಕ್ಷಕರ ಮನಸ್ಸು ಅವುಗಳನ್ನು ಗ್ರಹಿಸುವಂತೆ ಮಾಡುವುದರಲ್ಲಿ ನಿರ್ದೇಶಕರು ಸಫರಾಗಿದ್ದಾರೆ. ಎರಡು ಪೊಲೀಸ್ ಪಾತ್ರಗಳನ್ನು ಒಂದು ರೀತಿಯಲ್ಲಿ ಬ್ಯಾಲೆನ್ಸ್ ಮಾಡಲಾಗಿದೆ. ಯುವ(?) ಪೊಲೀಸ್ ಅಧಿಕಾರಿಯ ದರ್ಪ ಮತ್ತು ಅವಸರದ ನಡವಳಿಕೆ ಮತ್ತು ಡಿಸಿಪಿಯ ಸಂಯಮದ ವಿಚಾರಣೆಯ ಮೂಲಕ ನಿರ್ದೇಶಕರು ಸಾಮಾನ್ಯವಾಗಿ ಬಳಸುವ ಕಪ್ಪು-ಬಿಳುಪು ಚಿತ್ರಣದ ಹಾದಿಯನ್ನು ಹಿಡಿದಿಲ್ಲ ಎಂಬ ವಿಚಾರ ವೇದ್ಯವಾಗುತ್ತದೆ.

 ಮಾಸಿಲಾಮಣಿಯ ಮಗನ ಮೇಲಿನ ಮಮಕಾರ, ಕಾಳಜಿ, ಆತನ ಕೋಪ, ಆತಂಕ, ನಿಟ್ಟುಸಿರು, ತಮಾಷೆ, ಲೇವಡಿ, ಮಗನ ವೈದ್ಯಕೀಯ ವೆಚ್ಚಕ್ಕಾಗಿ(ಹಾಗೆಂದು ಹೇಳಲಾಗುವ)ಇತರರ ಜೊತೆ ಮಲಗಿದರೂ ಪತ್ನಿಯನ್ನು ಕ್ಷಮಿಸುವ, ಆಕೆಯ ದಾರುಣ ಮರಣದ ತರುವಾಯ ದೇಹದ ವಿಲೇವಾರಿಗೆ ಸಂಬಂಧಿಸಿದಂತೆ ಆತನ ವಿಚಲಿತಗೊಳ್ಳದ ಸ್ಪಂದನ(ವಿಚಾರಣೆಯ ಸಂದರ್ಭದಲ್ಲಿ ಅಕೆ ಗತಿಸಿ ಹತ್ತು ದಿನಗಳಾಗಿರುತ್ತವೆ. ಈ ಸಂಗತಿಯನ್ನು ತನ್ನ ಮಗನಿಗೆ ತಿಳಿಸಬಾರದೆಂದು ಆತ ಪೊಲೀಸರಲ್ಲಿ ವಿನಂತಿಸುತ್ತಾನೆ!), ಒಂದು ಜಿರಳೆಯ ಪಾಡನ್ನು ಕಂಡು ಮರುಗುವ, ಬೆಕ್ಕೊಂದು ಗುಬ್ಬಚ್ಚಿಯನ್ನು ಹಿಡಿದು, ಅದಕ್ಕೆ ಅಂತ್ಯ ಕಾಣಿಸುವ ಸಂದರ್ಭದಲ್ಲಿ ಕೇಳಿಸುವ ಆಕ್ರಂದನಕ್ಕೆ ತರಗುಟ್ಟುವ, ಇತ್ಯಾದಿ ಸಂಗತಿಗಳನ್ನು ಮಾರ್ಮಿಕವಾಗಿ ಹೆಣೆಯಲಾಗಿದೆ. ವಿಚಾರಣೆಯ ಕೊಠಡಿಯ ಕಿಟಕಿಯ ಮೂಲಕ ಹಾದು ಬಂದು, ಆತನ ಮುಖದ ಮೇಲೆ ಮೂಡುವ ಬೆಳಕು(ಇದು ಆತನ ಸಮಾಧಾನಚಿತ್ತದ ಝಲಕನ್ನು ತೋರಿಸುವಂತೆ, ಆತ ಅರಸುತ್ತಿರುವ ಸ್ವಾತಂತ್ರ್ಯವನ್ನೂ ಸೂಚಿಸುತ್ತದೆ!), ನಲ್ಲಿಯಲ್ಲಿ ಧಡಕ್ಕನೆ ಬರುವ ನೀರು, ಮೇಲೆ ತಿಳಿಸಿರುವ ಬೆಕ್ಕು ಗುಬ್ಬಚ್ಚಿಯನ್ನು ಹಿಡಿಯುವಾಗಿನ ಆರ್ತನಾದ ಮುಂತಾದುವು ವೀಕ್ಷಕರ ಗಮನವನ್ನು ಬೇರೆಡೆ ಸೆಳೆದು, ಏಕತಾನತೆಯನ್ನು ಮುರಿಯಲು ಬಳಸಿರುವ ತಂತ್ರವಾಗಿದೆ. ಇದು ಬಹಳ ಮಟ್ಟಿಗೆ ಯಶಸ್ವಿಯೂ ಆಗಿದೆ.

   ಚಲನಚಿತ್ರದ ವಸ್ತುವಿನಲ್ಲಿ ಬಡತನ, ಹಣದ ಮುಗ್ಗಟ್ಟಿನಿಂದ ವ್ಯಕ್ತಿತ್ವದಲ್ಲಾಗಬಹುದಾದ ಋಣಾತ್ಮಕ ಬದಲಾವಣೆ, ಪೊಲೀಸ್ ಇಲಾಖೆಯ ಕರಾಳ ಲೋಕ, ರಾಜಕಾರಣಿಗಳ-ಪೊಲೀಸ್ ನಡುವಿನ ಅಕ್ರಮ ಸಂಬಂಧಗಳು ಇತ್ಯಾದಿಗಳು ಸೂಚ್ಯವಾಗಿ ಅಡಕಗೊಳಿಸಲಾಗಿದೆ. ಈ ತೆರೆನಾದ ಅಂಶಗಳು ಬೇರೆ ಚಲನಚಿತ್ರಗಳಲ್ಲೂ ಕಂಡು ಬರುತ್ತವೆ. ಆದರೆ ಅವುಗಳನ್ನು ನಿರೂಪಿಸಿರುವ ಬಗೆ ಗುರುತಿಸುವಂತಿದೆ. ಪಾರ್ಥಿಬನ್‌ರ ಚಲನಚಿತ್ರಗಳಲ್ಲಿ ಚುರುಕು ಸಂಭಾಷಣೆಗಳಿರುತ್ತವೆ. ಆತನ ಪದಗಳ ಜೊತೆಗಿನ ಆಟಗಳು ಇಲ್ಲೂ ಪರಿಣಾಮಕಾರಿಯಾಗಿವೆ. ಮಾಸಿಲಾಮಣಿ ಮೊದಲ ಬಾರಿ ತನ್ನ ರೂಪವತಿಯಾದ ಮಡದಿಯನ್ನು ಪ್ರಸ್ತಾಪಿಸುವಾಗ ತನ್ನ ತಲೆಯ ಮೇಲಿರುವ ಫ್ಯಾನನ್ನು ದಿಟ್ಟಿಸುತ್ತಾನೆ. ಅದು ಉಷಾ ಬ್ರಾಂಡ್‌ನದ್ದಾಗಿರುತ್ತದೆ. ಆತನ ಹೆಂಡತಿಯ ಹೆಸರು ಕೂಡ ಉಷಾ. ಹೀಗೆ ಕೆಲವು ಚಮತ್ಕಾರಕ ಅಂಶಗಳೂ ಇವೆ.

ರಾಮ್‌ಜಿಯ ಸಿನೆಮಾಟೋಗ್ರಾಫಿ, ಸತ್ಯಾರ ಹಿನ್ನೆಲೆ ಸಂಗೀತ, ರಸೂಲ್ ಪೂಕುಟ್ಟಿಯವರ ಸೌಂಡ್ ಡಿಸೈನ್ ಈ ಸಿನೆಮಾದ ಪಾತ್ರಗಳಾಗಿ ಮೈದೆಳೆದಿವೆ ಎಂದರೆ ಅತಿಶಯೋಕ್ತಿಯಾಗುವುದಿಲ್ಲ. ಒಬ್ಬ ಕೊಲೆಗಾರ ಮೂತ್ರ ಮಾಡಿದಾಗ ಮೂಡಿಬರುವ ಸದ್ದು, ಮಾಂಜಾ ದಾರದಿಂದ ಮಾಸಿಲಾಮಣಿ(?) ಕೊಯ್ದಿಗ ಕೇಳಿ ಬರುವ ರಕ್ತದ ಹರಿಯುವಿಕೆಯ ಶಬ್ದ ಇತ್ಯಾದಿಗಳನ್ನು ರಸೂಲ್ ಅದ್ಭುತವಾಗಿ ವಿನ್ಯಾಸ ಮಾಡಿದ್ದಾರೆ. ರಾಮ್‌ಜಿ ಬಳಸಿರುವ ಎಕ್ಸ್‌ಟ್ರೀಮ್ ಕ್ಲೋಸ್‌ಅಪ್, ಕ್ಲೋಸ್‌ಅಪ್ ಮತ್ತು ಪಾಯಿಂಟ್ ಆಫ್ ವ್ಯೆ ಶಾಟ್‌ಗಳು ವಿಶೇಷವಾಗಿವೆ. ಮಧ್ಯಂತರದ ನಂತರದ ಒಂದು ಹಂತದಲ್ಲಿ ಚಲನಚಿತ್ರ ತುಸು ನಿಧಾನ ಗತಿಯನ್ನು ಪಡೆದಿದೆ ಎಂದು ಭಾಸವಾದರೂ, ಕೊನೆಯ 10-15 ನಿಮಿಷಗಳಲ್ಲಿ ಅನಾವರಣಗೊಳ್ಳುವ ಕ್ಲೈಮಾಕ್ಸ್ ಇದನ್ನು ಸರಿದೂಗಿಸುತ್ತದೆ.

 ಯಾವ ಚಲನಚಿತ್ರವೂ ಪೂರ್ಣಪ್ರಮಾಣದಲ್ಲಿ ಸರಿಯಾಗಿರುವುದಿಲ್ಲ. ಈ ಚಲನಚಿತ್ರವೂ ಕೂಡ ಇದಕ್ಕೆ ಹೊರತಾಗಿಲ್ಲ. ಆದರೆ ಏಕಪಾತ್ರ/ಸ್ಥಳ ಕಟ್ಟೊಣದ ಮೂಲಕ ವೀಕ್ಷಕನ ಗಮನವನ್ನು ಹಿಡಿದಿಡುವುದು ಪ್ರಯಾಸಕರ ಹಾಗೂ ಸವಾಲಿನ ಕೆಲಸವೇ ಸರಿ. ಇಂತಹ ಸಾಹಸಕ್ಕೆ ಕೈ ಹಾಕಿದ ಪಾರ್ಥಿಬನ್‌ರಿಗೆ ತಾರೀಫ್ ಮಾಡಬೇಕು. ಸುಮಾರು ಹದಿನೈದು ವರ್ಷಗಳಿಂದ ಈ ಚಲನಚಿತ್ರದ ವಸ್ತು ತನ್ನ ತಲೆಯಲ್ಲಿ ಸುಳಿದಾಡುತ್ತಿತ್ತೆಂದು ಅವರು ಒಂದು ಸಂದರ್ಶನದಲ್ಲಿ ಹೇಳಿದ್ದಾರೆ.

msmurali1961@gmail.com

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)