varthabharthi

ಸುಗ್ಗಿ

ಹೈಪರ್ ಆ್ಯಕ್ಟೀವ್ ಮಕ್ಕಳು

ವಾರ್ತಾ ಭಾರತಿ : 6 Oct, 2019
ಯೋಗೇಶ್ ಮಾಸ್ಟರ್

ಮಗು ತುಂಬಾ ಹೈಪರ್ ಆ್ಯಕ್ಟೀವ್
ಬಹಳಷ್ಟು ಪಾಲಕರಿಗೆ ಅವರ ಮಗುವು ಬಹಳ ಚಟುವಟಿಕೆ ಯಿಂದ ಕೂಡಿರುವುದು ಒಂದು ಇಷ್ಟದ ಸಂಗತಿಯೋ ಅಥವಾಕಷ್ಟದ ಸಂಗತಿಯೋ ತಿಳಿಯದೇ ಒದ್ದಾಡುತ್ತಾರೆ. ಏಕೆಂದರೆ, ಮಗುವು ಚಟುವಟಿಕೆಯಿಂದ ಮತ್ತು ಲವಲವಿಕೆಯಿಂದ ಅತ್ತಿಂದಿತ್ತ ಇತ್ತಿಂದತ್ತಓಡಾಡಿಕೊಂಡಿರುವುದು ಸಂತೋಷದ ವಿಷಯವೇ. ಆದರೆ, ಅವರು ಹಾಗೆಲವಲವಿಕೆಯಿಂದ, ಚಟುವಟಿಕೆಯಿಂದ ಓಡಾಡುವುದನ್ನು ನಿಯಂತ್ರಿಸಲು ಆಗದೇ ಹೋದಾಗ ಕಷ್ಟದ ಸಂಗತಿಯಾಗುತ್ತದೆ. ಮಗುವಿನ ತೀವ್ರವಾದ ಚಲನಶೀಲ ಚಟುವಟಿಕೆಗಳು ಲವಲವಿಕೆ ಯಿಂದ ಇವೆಯೋ, ಚಡಪಡಿಕೆಯಿಂದ ಇವೆಯೋ ಎಂಬುದೇ ಎಷ್ಟೊದೊಡ್ಡವರಿಗೆ ತಿಳಿಯುವುದೇ ಇಲ್ಲ. ಮಕ್ಕಳನ್ನು ಕಂಡರೆ ಮುದ್ದು ಇರುವ ಮನೆಯ ಹಿರಿಯರು ಅದನ್ನು ಚುರುಕುತನ ಎಂದು ನಿರ್ಲಕ್ಷಿಸಿ ಬಿಡುತ್ತಾರೆ. ಮಕ್ಕಳು ಶಾಲೆಯನ್ನು ನಡೆಸಲು ಕೇವಲ ವಾಣಿಜ್ಯವಸ್ತುಗಳೆಂಬಂತೆ ನೋಡುವ ಶಿಕ್ಷಕರಿಗೆ ಇವರೊಂದು ಉಪದ್ರವ. ಶಿಸ್ತಿನ ತರಗತಿ ನಡೆಸಲು ಅವರೊಂದು ಪೀಡೆ. ಪಾಠ ಮಾಡುವಾಗ ಮಾತಾಡುತ್ತಿರು ತ್ತಾನೆ. ಏನೇನೋ ನೆಪ ಹೇಳಿಕೊಂಡು ತರಗತಿ ಪೂರ್ತಿ ಓಡಾಡು ತ್ತಿರುತ್ತಾನೆ. ಆ ಈ ಹುಡುಗರಿಗೆ ಹೊಡೆಯುತ್ತಾನೆ. ಚೇಷ್ಟೆ ಮಾಡುತ್ತಿರು ತ್ತಾನೆ. ತನ್ನಷ್ಟಕ್ಕೆ ತಾನೇ ಬೇರೆ ಏನೋ ಮಾಡಿಕೊಂಡು ವಿಧೇಯ ವಿದ್ಯಾರ್ಥಿಗಳ ಗಮನ ಸೆಳೆದು ಅವರ ಏಕಾಗ್ರತೆಗೂ ಮತ್ತು ಅಧ್ಯಯ ನಕ್ಕೂ ಭಂಗ ತರುತ್ತಿರುತ್ತಾನೆ. ಎಷ್ಟು ಹೊಡೆದರೂ ಹೆದರುವುದೇ ಇಲ್ಲ. ಬೈದರೆ ಕೇಳುವುದಿಲ್ಲ. ಕೆಲವೊಮ್ಮೆ ಹಿಂದಕ್ಕೆ ಎದುರು ಜವಾಬು ಕೊಡುವುದೂ ಉಂಟು. ಇತ್ಯಾದಿ ದೂರುಗಳ ಸುರಿಮಳೆ ತರಗತಿಯ ಉಪಾಧ್ಯಾಯರಿಂದ. ಹೌದು, ಇದೆಲ್ಲವೂ ನಿಜವೇ ಇರಬಹುದು. ಆದರೆ, ಅದಕ್ಕೆ ಕಾರಣ ಇರಬೇಕಲ್ಲ? ನಮ್ಮ ದೇಶದ ಪಾಲಕರ ಮತ್ತು ಶಿಕ್ಷಕರ ಸಾಮಾನ್ಯ ವಾದ ದೊಡ್ಡ ಸಮಸ್ಯೆ ಎಂದರೆ, ಮಗುವಿನಲ್ಲಿ ಕಾಣುವ ಸಮಸ್ಯೆಯ ಮೂಲಕಾರಣವನ್ನು ಹುಡುಕುವ ಗೋಜಿಗೇ ಹೋಗುವುದಿಲ್ಲ. ಬದಲಾಗಿ ಆ ಸಮಸ್ಯೆಯ ಪರಿಣಾಮಕ್ಕೆ ತಕ್ಕದಾದ ದಂಡನೆ, ಖಂಡನೆ ಮತ್ತು ಶಿಕ್ಷೆಗಳ ಬಗ್ಗೆ ಆಲೋಚಿಸುತ್ತಿರುತ್ತಾರೆ. ಸಮಾಜದಲ್ಲಿ ನಾವು ದಿನ ನಿತ್ಯ ಕಾಣುವ ದೊಡ್ಡವರು ಮಾಡುವ ಅನೇಕ ದುರಂತಗಳ ಕಾರಣ ಅವರ ಬಾಲ್ಯಗಳಲ್ಲಿರುತ್ತವೆ. ಅವರ ಹಿರಿಯರು ನಿರ್ಲಕ್ಷಿಸಿ ರುವ ಕಾರಣವೋ, ಅವರಿಗೇ ಅರಿವಿಲ್ಲದ ಕಾರಣವೋ, ಗಮನಿಸಿದರೂ ಅದಕ್ಕೆ ಸೂಕ್ತ ಚಿಕಿತ್ಸಾಕ್ರಮಗಳನ್ನು ಕೈಗೊಳ್ಳದಿರುವ ಕಾರಣವೋ, ಒಟ್ಟು ಆತ್ಮಹತ್ಯೆ, ಕೊಲೆ, ಕಾನೂನು ಭಂಗ, ಸುಲಿಗೆ, ಸಾಮೂಹಿಕ ಅಪರಾಧ ಗಳು, ದೊಂಬಿ, ವ್ಯಕ್ತಿಗತ ಅನೈತಿಕ ಕೆಲಸಗಳು ನಡೆಯುತ್ತಿರುತ್ತವೆ. ಅವುಗಳನ್ನು ಮಾಡಿದ ವ್ಯಕ್ತಿಗೆ ಶಿಕ್ಷೆ, ಖಂಡನೆ ಮತ್ತು ದಂಡನೆಗಳು ಆಗುತ್ತಿರುತ್ತವೆ. ಆದರೆ, ಆ ಅಪರಾಧಿ ಎಂಬ ವ್ಯಕ್ತಿಯ ಹಿಂದೆ ಇರುವ ತಂದೆ, ತಾಯಿ, ಕುಟುಂಬ ಹಾಗೂ ಶಿಕ್ಷಕರ ದೊಡ್ಡ ಪಾತ್ರವನ್ನು ಸಾಮಾನ್ಯವಾಗಿ ಜನ ಗಮನಿಸುವುದೇ ಇಲ್ಲ. ಮಕ್ಕಳನ್ನು ಮುದ್ದಾಡುವ ಪಾಲಕರು ತಮ್ಮ ಮಗುವು ಸರಿಯಾಗಿ ಸುಶಿಕ್ಷಿತ ಮತ್ತು ನಾಗರಿಕನಾಗದಿರುವುದಕ್ಕೆ ಶಾಲೆಯನ್ನು ದೂರಿದರೆ, ಮಕ್ಕಳನ್ನು ಸರಿಯಾಗಿ ಬೆಳೆಸುವುದಿಲ್ಲ ಎಂದು ಶಿಕ್ಷಕರು ಮಗುವಿನ ಕುಟುಂಬವನ್ನು ದೂರುತ್ತಾರೆ. ಒಟ್ಟಾರೆ ಇಬ್ಬರೂ ತಮ್ಮ ಜವಾಬ್ದಾರಿ ಯನ್ನು ಕೊಡವಿಕೊಳ್ಳುವುದರಲ್ಲೇ ನಿರತರಾಗಿರುತ್ತಾರೆ.

ಅಟೆಂಶನ್ ಡಿಫಿಸಿಟ್ ಹೈಪರ್ಯಾಕ್ಟಿವಿಟಿ

ಮಗುವು ಹೈಪರ್ ಆ್ಯಕ್ಟೀವ್ ಎನ್ನುವ ಪಾಲಕರಾಗಲಿ, ಶಿಕ್ಷಕರಾಗಲಿ ಮಗುವಿನ ಚುರುಕುತನ ನಕಾರಾತ್ಮಕವಾಗಿದೆಯೋ, ಸಕಾರಾತ್ಮ ಕವಾಗಿದೆಯೋ ಎಂಬುದನ್ನು ಮೊದಲು ಪತ್ತೆ ಹಚ್ಚಬೇಕು. ಚುರುಕಾಗಿರುವುದು, ಲವಲವಿಕೆಯಿಂದ ಇರುವುದು ಒಂದು ಸಕಾ ರಾತ್ಮಕವಾದ ಮನಸ್ಥಿತಿ. ಅವರಿಗೆ ಕೆಲಸದ ಮೇಲೆ ಗಮನ ಇರುತ್ತದೆ.ಆದರೆ ಕೆಲವು ಮಕ್ಕಳು ತೀವ್ರ ಚುರುಕುತನದಿಂದ ಕೂಡಿರುತ್ತಾರೆ. ಆದರೆ ಅವರಿಗೆ ತಮ್ಮ ಕೆಲಸದ ಮೇಲೆ ಗಮನ ಇರುವುದಿಲ್ಲ. ಸದಾ ಚಡಪಡಿಸುತ್ತಿ ರುತ್ತಾರೆ. ಸಂಯಮ ಇರುವುದಿಲ್ಲ. ಇದಕ್ಕೆ ಅಟೆಂಶನ್ ಡಿಫಿಸಿಟ್ ಹೈಪರ್ಯಾಕ್ಟಿವಿಟಿ ಅಥವಾ ಎಡಿಎಚ್‌ಡಿ ಎನ್ನುವುದು. ಇದು ನಿಜಕ್ಕೂ ಚಿಕಿತ್ಸೆ ಬೇಡುವಂತಹ ಕಾಯಿಲೆ. ದೊಡ್ಡವರಾಗುತ್ತಾ ದೊಡ್ಡವರಾಗುತ್ತಾ ಹೋದಂತೆ ಸರಿ ಹೋಗುವುದು ಎಂಬ ಭ್ರಮೆ ಬೇಡ. ಯಾವುದೇ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಸಮಸ್ಯೆಗಳು ಕಾಲ ಕಳೆದಂತೆ ಅದರ ಪಾಡಿಗೆ ಅದು ಹೋಗಿ ಬಿಡುವುದಿಲ್ಲ. ಸರಿಯಾದ ತಪಾಸಣೆಯ ನಂತರ ಅದಕ್ಕೆಸೂಕ್ತವಾದ ಚಿಕಿತ್ಸಕ ವಾತಾವರಣವನ್ನು ನಿರ್ಮಿಸಿದರೆ ಕಾಲಕ್ರಮೇಣ ಅವು ಕಡಿಮೆಯಾಗುತ್ತಾ ಹೋಗುತ್ತವೆ. ಇಲ್ಲದೇ ಹೋದರೆ, ಅಂದರೆ ನಿರ್ಲಕ್ಷಿಸಿದರೆ; ಅವು ಹೆಚ್ಚುತ್ತಾ ಹೋಗುತ್ತವೆ. ಮುಂದೊಂದು ದಿನ ಸರಿಪಡಿಸಲಾಗದಂತಹ ಸ್ಥಿತಿಗೆ ತಲುಪಿದಾಗ ಶಿಕ್ಷೆ, ದಂಡನೆ, ಖಂಡನೆ, ನಿರಾಕರಣೆಗಳನ್ನು ಕಾಣಬೇಕಾಗುತ್ತದೆ. ಎಡಿಎಚ್‌ಡಿಯ ಸಾಮಾನ್ಯ ಲಕ್ಷಣಗಳು

ಎಡಿಎಚ್‌ಡಿಯ ಲಕ್ಷಣಗಳು

ಮಕ್ಕಳು, ಹದಿಹರೆಯದವರಲ್ಲಿ, ಯುವಕರಲ್ಲಿ, ವಯಸ್ಕರಲ್ಲಿ ಮತ್ತು ವೃದ್ಧರಲ್ಲಿ ವ್ಯತ್ಯಾಸಗಳಾಗುತ್ತವೆ. ಇಲ್ಲಿ ನಾನು ಮಕ್ಕಳಲ್ಲಿ ಕಾಣುವ ಲಕ್ಷಣಗಳ ಬಗ್ಗೆ ಗಮನ ಹರಿಸುತ್ತೇನೆ.ಇನ್ನುಳಿದಂತೆ ಮುಂದಿನ ವಯೋಮಾನದ ಹಂತದವರಲ್ಲಿ ಇವೇ ವಿಸ್ತೃತ ರೂಪ ದಲ್ಲಿರುತ್ತವೆ. ಇವುಗಳಿಗೆ ಸಂಬಂಧಪಟ್ಟಂತೆ ವರ್ತನೆ ಗಳು, ಚಟುವಟಿಕೆಗಳು ವಿಸ್ತಾರವಾಗಿರುತ್ತವೆ. ಅವುಗಳನ್ನು ನಂತರ ಗಮನಿಸೋಣ.

1.ಸ್ವಕೇಂದ್ರಿತ ವರ್ತನೆ: ಇದು ತುಂಬಾ ಸಾಮಾನ್ಯ ವಾದಂತಹ ಲಕ್ಷಣ. ಈ ಮಕ್ಕಳಿಗೆ ಅಥವಾ ದೊಡ್ಡವರಿಗೆ ಇನ್ನಿತರರ ಅಗತ್ಯ ಮತ್ತು ಆಸೆಗಳನ್ನು ಗಮನಿಸುವಂತಹ ವ್ಯವ ಧಾನ ವಿರುವುದಿಲ್ಲ. ಇತರರ ಪಾಡು, ಸ್ಥಿತಿಗತಿ ಗಳನ್ನು ಗಮನಿಸುವುದಿಲ್ಲ. ತನಗೆ ಬೇಕು. ತನಗೇ ಮೊದಲು ಬೇಕು. ತಾನೇ ಮೊದಲು ಹೇಳಬೇಕು. ತಾನು ಹೇಳಿದ ಮೇಲೆ ಇನ್ನುಳಿದವರು ಹೇಳುವುದನ್ನು ಕೇಳುವಷ್ಟಿಲ್ಲ. ಅವರದ್ದು ಬೇಡ. ಎಲ್ಲದಕ್ಕೂ ತಾನು ಮೊದಲು.

2.ಅಡಚಣೆಗಳನ್ನು ಒಡ್ಡುತ್ತಿರುವುದು: ಇತರರ ವಿಷಯದಲ್ಲಿ ತಾಳ್ಮೆ, ಆಸಕ್ತಿ ಇವುಗಳು ಇಲ್ಲದ ಕಾರಣ ಬೇರೆಯವರು ಮಾಡು ತ್ತಿರುವುದರಲ್ಲಿ ಅನಗತ್ಯವಾಗಿ ಮೂಗು ತೂರಿಸುತ್ತಾರೆ ಮತ್ತು ಅವರ ಕೆಲಸಗಳಿಗೆ ಅಡಚಣೆಗಳನ್ನು ಒಡ್ಡುತ್ತಾರೆ. ಬೇರೆಯವರು ಮಾತಾಡುತ್ತಿದ್ದರೆ ತನಗೆ ಗೊತ್ತಿರಲಿ, ಗೊತ್ತಿಲ್ಲದಿರಲಿ, ತನಗೆ ಸಂಬಂಧಿಸಲಿ ಅಥವಾ ಸಂಬಂಧಿಸದಿರಲಿ ಮಧ್ಯೆ ಮಾತಾಡುವುದು. ಬೇರೆಯವರು ಆಟವಾಡುತ್ತಿದ್ದರೆ ಸುಮ್ಮನೆ ಮಧ್ಯೆ ನುಗ್ಗಿ ಏನೋ ಒಂದು ಅಡಚಣೆ ಒಡ್ಡುವುದು.
3. ತಮ್ಮ ಸರದಿಗೆ ಕಾಯದಿರುವುದು: ಶಾಲೆಯಲ್ಲಿ ಬೇರೆ ಮಕ್ಕಳನ್ನು ಪ್ರಶ್ನೆ ಕೇಳಿದರೂ ತಾನೇ ಉತ್ತರಿಸುವುದು. ಬೇರೆಯವರನ್ನು ಮಾತಾಡಿಸಿದರೆ ತಾನೇ ಮಾತಾಡುವುದು. ಸರತಿಯಲ್ಲಿ ತನ್ನ ಸರದಿ ಬರುವುದಕ್ಕೆ ಕಾಯುವ ತಾಳ್ಮೆ ಇಲ್ಲದಿರುವುದು. ಆಟದಲ್ಲಿ, ಹೊರಗೆ ಹೋಗುವುದರಲ್ಲಿ, ಒಳಕ್ಕೆ ಬರುವುದರಲ್ಲಿ ತಾವು ತಟ್ಟಣೆ ನುಗ್ಗಿಬಿಡುವುದು. ಒತ್ತಾಯದಿಂದ ಸುಮ್ಮನಿರಿಸಿದರೆ, ತಮ್ಮ ಸರದಿ ಬರುವುದಕ್ಕೆ ಚಡಪಡಿಕೆಯಿಂದ ವಿಲವಿಲ ಒದ್ದಾಡುತ್ತಾ ಕಾಯುವುದು.
4.ಭಾವೋದ್ರೇಕಗೊಳ್ಳುವುದು: ತಮ್ಮ ಬೇಡಿಕೆ ಅಥವಾ ಚಡಪಡಿಕೆಯು ಮನ್ನಣೆಗೆ ಒಳಗಾಗದಿದ್ದರೆ ಜೋರಾಗಿ ಮತ್ತು ಅನಗತ್ಯವಾಗಿ ಅಳುವುದು, ಕಿರುಚುವುದು, ಎಲ್ಲರ ಗಮನ ಸೆಳೆಯುವಂತೆ ಹಟ ಮಾಡುವುದು. ಕೋಪಿಸಿಕೊಳ್ಳುವುದು, ದುಃಖಿತರಾಗುವುದು ಇತ್ಯಾದಿಗಳೆಲ್ಲಾ ತಮ್ಮ ಹಟ ಸಾಧನೆಗೆ ಬಳಸಿಕೊಳ್ಳುವುದು.
5.ಚಡಪಡಿಕೆ: 
 
ಕುಳಿತಲ್ಲಿ ಕುಳಿತಿರಲಾಗದೇ, ಕಾಯಲಾಗದೇ ಚಡಪಡಿಸುವುದು. ತಮಗೂ ತಲೆನೋವು ತಂದುಕೊಂಡು ಇತರರ ಮೇಲೂ ಹರಿಹಾಯುವುದು. ತರಗತಿಯಲ್ಲಿಯೂ ಸುಮ್ಮನೆ ಕುಳಿತುಕೊಳ್ಳಲಾಗದೇ ಏನೇನೋ ನೆಪಗಳಿಂದ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಓಡಾಡುವುದು. ಪೆನ್ಸಿಲ್ ಮೊನಚು ಮಾಡಿದ್ದೇನೆ ಅದರ ಕಸ ಕಸದ ಬುಟ್ಟಿಗೆ ಹಾಕಬೇಕು ಎಂದೋ, ಪೇಪರ್ ಹರಿದಿದ್ದೇನೆ ಅದನ್ನು ಎಸೆಯಬೇಕು ಎಂದೋ, ಶೌಚಾಲಯಕ್ಕೆ ಹೋಗಬೇಕು ಎಂದೋ ಸುಮ್ಮನೆ ಎದ್ದು ಓಡಾಡುತ್ತಿರುವುದು.

6.ಸಾವಧಾನವಾಗಿ ಆಡಲಾಗದು: ಯಾವುದೇ ಆಟವನ್ನು, ಚಟುವ ಟಿಕೆಯನ್ನು, ಕೆಲಸವನ್ನು ಇತರರೊಂದಿಗೆ ಸಹಕಾರದಿಂದ, ಹಂತಹಂತವಾಗಿ ಮಾಡಲು ಸಾಧ್ಯವಾಗದೇ ಅಸಮಾಧಾನ ದಿಂದ ಕೊನೆಯ ಫಲಿತಾಂಶವನ್ನು ನಿರೀಕ್ಷಿಸುವುದು. ಕ್ರಮವಾದ ಮಾರ್ಗ ಕ್ರಮಿಸದೇ ಇರುವುದರಿಂದ ನಿರೀಕ್ಷಿತ ಫಲಿತಾಂಶ ದೊರಕದೇ ಹೋದರೆ ಮತ್ತಷ್ಟು ಕ್ಷೋಭೆಗೊಳ್ಳುವುದು.

7.ಅಪೂರ್ಣ ಕೆಲಸಗಳು: ಈ ಸಮಸ್ಯೆ ಇರುವ ಮಕ್ಕಳು ಅಥವಾ ದೊಡ್ಡವರು ತಮ್ಮ ಕೆಲಸಗಳನ್ನು ಪೂರ್ಣಗೊಳಿಸುವುದಿಲ್ಲ. ಅರ್ಧಕ್ಕೆ ಕೆಲಸವನ್ನು ಬಿಟ್ಟುಬಿಡುವುದು. ಕೆಲಸ ಪೂರ್ಣ ವಾಗಲು ಬೇಕಾಗುವ ಸಮಯವನ್ನು ಸಾಕ್ಷೀಕರಿಸುವ ತಾಳ್ಮೆ ಇಲ್ಲ ದಿರುವುದು ಒಂದು ಪ್ರಮುಖ ಲಕ್ಷಣ. ಪಾಠ ಯೋಜನೆಗಳು, ಹೋಂ ವರ್ಕ್ ಗಳು, ಪ್ರಾರಂಭಿಸಿದ ಚಿತ್ರ ಅಥವಾ ಬಣ್ಣ ಬಳಿಯುವಿಕೆ; ಯಾವುದನ್ನೇ ಆದರೂ ಪ್ರಾರಂಭಿಸಿದರೂ ನಂತರ ಬೇರೊಂದು ಕಡೆ ಅವರ ಗಮನ ಅಥವಾ ಆಸಕ್ತಿ ಸೆಳೆದರೆ ಕೂಡಲೇ ಇದನ್ನು ಬಿಟ್ಟು ಅಲ್ಲಿಗೆ ಹೋಗುವುದು. ಅದರಿಂದ ಇದು ಪೂರ್ಣವಾಗುವುದಿಲ್ಲ. ಆ ಕೆಲಸವೂ ಪೂರ್ಣವಾಗುವುದಿಲ್ಲವೆಂದು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.

8.ಏಕಾಗ್ರತೆ ಇಲ್ಲದಿರುವುದು: ನಾವೇನಾದರೂ ಅವರಿಗೆ ಹೇಳಿದರೆ ಕೇಳಿಸಿಕೊಂಡೆವು ಎನ್ನುತ್ತಾರೆ. ಆದರೆ ಅವರಿಗೆ ಪುನರಾವರ್ತನೆ ಮಾಡೆಂದರೆ ನಾವು ಹೇಳಿದ್ದನ್ನು ಅವರಿಗೆ ಹೇಳಲಾಗುವುದಿಲ್ಲ. ಏಕೆಂದರೆ ನಾವು ಹೇಳುವ ಮಾತಿನ ಮೇಲೆ ಅವರಿಗೆ ಗಮನ ಇರುವುದಿಲ್ಲ. ಹೂಂ ಎಂದು ತಲೆಯಾಡಿಸುತ್ತಾರೆ. ಆದರೆ ಅವರಿಗೆ ತಿಳುವಿಗೆ ಮುಟ್ಟುವುದಿರಲಿ, ಕಿವಿಗೇ ಬಿದ್ದಿರುವುದಿಲ್ಲ.
9.ಕೆಲಸದಿಂದ ತಪ್ಪಿಸಿಕೊಳ್ಳುವುದು: ಯಾವ ಕೆಲಸಕ್ಕೆ ಹೆಚ್ಚಿನ ಗಮನ ಮತ್ತು ತಾಳ್ಮೆ ಬೇಕಾಗುತ್ತದೆಯೋ ಅಂತಹ ಕೆಲಸಗಳಿಂದ ತಪ್ಪಿಸಿಕೊಳ್ಳುವುದು. ಮನಸಿನ ಪಾತ್ರ ಪ್ರಮುಖ ವಾಗುವ ಕೆಲಸಗಳಿಗೆ ಒಲ್ಲೆ ಎನ್ನುವುದು. ಅದನ್ನು ಮಾಡುವ ಅಗತ್ಯವಿದ್ದರೂ ಬೇರೆ ಏನೋ ಯಾಂತ್ರಿಕವಾದ ಕೆಲಸಗಳನ್ನು ಮಾಡುತ್ತಾ ಗಮನ ಕೊಡಬೇಕಾದ ಕೆಲಸಕ್ಕೆ ಸಮಯವನ್ನು ಒದಗಿಸಿಕೊಳ್ಳದಿರುವುದು.

10.ಕೆಲಸಗಳನ್ನು ತಪ್ಪಾಗಿ ಮಾಡುವುದು: ಈ ಮಕ್ಕಳು ತಪ್ಪು ಕೆಲಸವನ್ನು ಮಾಡುತ್ತಾರೋ ಇಲ್ಲವೋ ಅದು ಬೇರೆ ಚರ್ಚೆ. ಆದರೆ ನಿಯೋಜಿಸುವ ಕೆಲಸವನ್ನು ತಪ್ಪಾಗಿ ಮಾಡು ತ್ತಾರೆ. ಉದಾಸೀನವಾಗಿ, ನಿರ್ಲಕ್ಷದಿಂದ ತಪ್ಪುಗಳನ್ನು ಮಾಡು ವುದು ಅಭ್ಯಾಸವೇ ಆಗಿರುತ್ತದೆ. ಆದರೆ ಇದು ಸೋಮಾರಿ ತನದಿಂದಲೋ ಅಥವಾ ಬುದ್ಧಿಮತ್ತೆಯ ಕೊರತೆಯಿಂದಾ ಗುವುದೋ ಏನೋ ಅಲ್ಲ. ಇದು ಬರಿಯ ನಿರ್ಲಕ್ಷ ಅಥವಾ ಅಲಕ್ಷದಿಂದ ಆಗುವ ತಪ್ಪುಗಳು.
11.ಹಗಲುಗನಸು ಕಾಣುವುದು: ಹಾಗಂತ ಈ ಮಕ್ಕಳು ಸದಾ ಗಡಿಬಿಡಿಯಲ್ಲಿ, ಚಡಪಡಿಕೆಯಲ್ಲೇ ಇರುತ್ತಾರೆಂದೇನಲ್ಲ. ಯಾವುದರಲ್ಲೂ ಭಾಗವಹಿಸದೇ ಹಗಲುಗನಸು ಕಾಣುತ್ತಾ ಮಾಡಬೇಕಾದ ಕೆಲಸದಲ್ಲಿ ತೊಡಗದೇ ಇರುವುದೂ ಕೂಡಾ ಒಂದು ಲಕ್ಷಣವೇ. ತಮ್ಮ ಸುತ್ತ ಏನಾಗುತ್ತಿದೆ ಎಂಬುದನ್ನು ಗಮನಿಸದೇ, ಲಕ್ಷಿಸದೇ ಉದಾಸೀನವಾಗಿರುವುದೂ ಉಂಟು. 12.ಕ್ರಮ ಪಾಲಿಸುವುದರಲ್ಲಿ ಸಮಸ್ಯೆ: 
ಅವರದೇ ಕೆಲಸಗಳನ್ನು ಕ್ರಮಬದ್ಧವಾಗಿ ಮಾಡಲಾರರು. ಯಾವುದೇ ಆಗಲಿ, ಅದಕ್ಕೆ ಇರುವಂತಹ ರೀತಿ, ನೀತಿ, ಕ್ರಮಗಳನ್ನು ಗಾಳಿಗೆ ತೂರಿಬಿಡುವರು.

13.ಮರೆವು: ದಿನನಿತ್ಯದ ವಿಷಯಗಳನ್ನೇ ಮರೆತುಹೋಗುವುದು. ಅಗತ್ಯದ ವಿಷಯಗಳನ್ನು ಮರೆಯುವುದು. ಒಯ್ಯಲೇ ಬೇಕಾದ ವಸ್ತುಗಳನ್ನು ಒಯ್ಯದಿರುವುದು. ಯೂನಿಫಾಂ ಧರಿಸಿದ ಮೇಲೆ ಟೈ ಕಟ್ಟಿಕೊಳ್ಳದಿರುವುದು. ತೆಗೆದುಕೊಂಡು ಹೋಗಲೇ ಬೇಕಾದ ಪುಸ್ತಕ, ಪರೀಕ್ಷೆಯಾದರೆ ಪ್ರವೇಶಪತ್ರ ಅಥವಾ ಇನ್ನಾವುದೇ ಮುಖ್ಯವಸ್ತುವನ್ನು ತೆಗೆದುಕೊಂಡು ಹೋಗದಿರುವುದು.
14.ಹಲವು ವಿಷಯಗಳನ್ನು ಒಟ್ಟಿಗೆ ನಿಭಾಯಿಸಲಾಗದಿರುವುದು: ಶಾಲೆ, ಆಟ, ವೈಯಕ್ತಿಕ, ಮನೆ; ಇತ್ಯಾದಿಗಳಲ್ಲಿ ತಮ್ಮ ಪಾಲಿಗಿ ರುವ ಕೆಲಸಗಳನ್ನು ಒಟ್ಟಾಗಿ, ಸಮಯವನ್ನು ಹಂಚಿಕೊಂಡು, ಗಮನದಲ್ಲಿಟ್ಟು ಮಾಡಲಾಗದು. ಹೀಗೆ ಹಲವು ಲಕ್ಷಣಗಳನ್ನು ತೋರುವ ಇದಕ್ಕೆ ಚಿಕಿತ್ಸೆ ಇದೆಯೇ? ಇದನ್ನು ನಿಭಾಯಿಸಲಾಗುವುದೇ? ಒಂದು ವೇಳೆ ನಿರ್ಲಕ್ಷಿಸಿದರೆ, ಲಕ್ಷಿಸಿಯೂ ನಿಭಾಯಿಸಲಾಗದಿದ್ದರೆ ಎಂತಹ ತೊಂದರೆಗಳನ್ನು ಮುಂದೆ ಎದುರಿಸಬೇಕಾಗುವುದು? ಮುಂದೆ ನೋಡೋಣ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)