varthabharthi

ಅಂತಾರಾಷ್ಟ್ರೀಯ

ಅಧ್ಯಕ್ಷೀಯ ಚುನಾವಣೆಗೆ ಸಿರಿಸೇನಾ ಸ್ಪರ್ಧೆ ಇಲ್ಲ

ವಾರ್ತಾ ಭಾರತಿ : 6 Oct, 2019

ಕೊಲಂಬೊ, ಅ.6: ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ತಾನು ಸ್ಪರ್ಧಿಸುವ ಸಾಧ್ಯತೆಯನ್ನು ಶ್ರೀಲಂಕಾದ ಹಾಲಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ರವಿವಾರ ತಳ್ಳಿಹಾಕಿದ್ದಾರೆ.

ನವೆಂಬರ್ 16ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ಬೇಕಾದ ಠೇವಣಿಯನ್ನು ಸಿರಿಸೇನಾ ಸಲ್ಲಿಸದ ಕಾರಣ ಅವರು ಸ್ಪರ್ಧಾಕಣದಿಂದ ಹಿಂದೆ ಸರಿದಿರುವುದು ಖಚಿತಗೊಂಡಿದೆ. ಇಂದು ಮಧ್ಯಾಹ್ನ 12 ಗಂಟೆಯೊಳಗೆ ಅಧ್ಯಕ್ಷೀಯ ಅಭ್ಯರ್ಥಿಗಳು ಠೇವಣಿ ಸಲ್ಲಿಸಬೇಕಾಗಿತ್ತು. ಆದರೆ ಸಿರಿಸೇನಾ ಅವರನ್ನು ಹೊರತುಪಡಿಸಿ ಉಳಿದ 41 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಯ ಜೊತೆಗೆ ಠೇವಣಿಗಳನ್ನು ಪಾವತಿಸಿದ್ದಾರೆ.

ಶ್ರೀಲಂಕಾದ ಅಧ್ಯಕ್ಷೀಯ ಚುನಾವಣಾ ಇತಿಹಾಸದಲ್ಲೇ ಈ ಬಾರಿ ದಾಖಲೆಯ ಸಂಖ್ಯೆಯ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇದರ ಜೊತೆಗೆ 1982ರ ಬಳಿಕ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ, ಪ್ರಧಾನಿ ಅಥವಾ ಪ್ರತಿಪಕ್ಷ ನಾಯಕರು ಕಣದಲ್ಲಿಲ್ಲದಿರುವುದು ಇದೇ ಮೊದಲ ಸಲವಾಗಿದೆ.

ಈ ಸಲದ ಅಧ್ಯಕ್ಷೀಯ ಚುನಾವಣೆಯಲ್ಲಿ ವಿವಿಧ ಕಾರಣಗಳಿಂದಾಗಿ ಹಾಲಿ ಅಧ್ಯಕ್ಷ ಸಿರಿಸೇನಾ, ಪ್ರಧಾನಿ ರನಿಲ್ ವಿಕ್ರಮಸಿಂೆ ಹಾಗೂ ಪ್ರತಿಪಕ್ಷ ನಾಯಕ ಮಹಿಂದಾ ರಾಜಪಕ್ಷೆ ಸ್ಪರ್ಧಿಸುತ್ತಿಲ್ಲ.

ರಾಜಪಕ್ಷೆ ಜೊತೆಗೆ ಶನಿವಾರ ರಾತ್ರಿ ಮಹತ್ವದ ಮಾತುಕತೆಗಳನ್ನು ನಜೆಸಿದ ಸಿರಿಸೇನಾ ಅವರು ಆಡಳಿತಾರೂಢ ಯುಎನ್‌ಪಿ ಪಕ್ಷದ ಅಭ್ಯರ್ಥಿ ಸಜಿತ್ ಪ್ರೇಮದಾಸ ವಿರುದ್ಧ ಸ್ಪರ್ಧಿಸಿರುವ ಪ್ರತಿಪಕ್ಷ ಪೀಪಲ್ಸ್ ಪಾರ್ಟಿಯ ಅಭ್ಯರ್ಥಿ ಗೋತಾಭಯ ರಾಜಪಕ್ಷ ಅವರನ್ನು ಬೆಂಬಲಿಸಲು ನಿರ್ಧರಿಸಿದ್ದಾರೆಂದು ಮೂಲಗಳು ತಿಳಿಸಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)