varthabharthi

ಸಂಪಾದಕೀಯ

ವರ್ತಮಾನದ ರಾಜಕೀಯದಲ್ಲಿ ಪುರಾಣ ಪಾತ್ರಗಳ ಹಸ್ತಕ್ಷೇಪ

ವಾರ್ತಾ ಭಾರತಿ : 6 Oct, 2019

ಭಾರತದಕ್ಕೆ ವಿದೇಶಿಯರು ಆಗಮಿಸುವ ಮೊದಲು ಇತಿಹಾಸವನ್ನು ದಾಖಲಿಸುವ ಪರಂಪರೆ ಇದ್ದಿರಲಿಲ್ಲ. ಈ ಕಾರಣದಿಂದಲೇ ಈ ದೇಶದಲ್ಲಿ ‘ಇತಿಹಾಸ’ದ ಕಾರಣಕ್ಕಾಗಿಯೇ ಆಗಾಗ ಸಂಘರ್ಷಗಳು ನಡೆಯುತ್ತವೆ. ಈ ದೇಶದ ಇತಿಹಾಸ ಯಾವುದು? ಇದನ್ನು ಯಾರು ಬರೆಯಬೇಕು? ಯಾರು ಖಳರು? ಯಾರು ನಾಯಕರು? ಎನ್ನುವುದರ ಕುರಿತಂತೆ ಇನ್ನೂ ಸ್ಪಷ್ಟತೆಯಿಲ್ಲ. ಮೊಗಲರ ಕಾಲದಲ್ಲಿ ದಾಖಲಾದ ಇತಿಹಾಸ ಸಹಜವಾಗಿಯೇ ಆ ರಾಜರಿಗೆ ಪೂರಕವಾಗಿರುತ್ತದೆ. ಇದೇ ಸಂದರ್ಭದಲ್ಲಿ, ಬ್ರಿಟಿಷರು ತಮ್ಮನ್ನು ವಿರೋಧಿಸಿದ ಅರಸರ ಇತಿಹಾಸವನ್ನು ಬರೆಯುವಾಗ ಪೂರ್ವಾಗ್ರಹ ನೀತಿಯನ್ನು ಅನುಸರಿಸಿದರು. ಇದೀಗ ಆರೆಸ್ಸೆಸ್‌ನಂತಹ ಸಂಘಟನೆಗಳು ಈ ಗೊಂದಲವನ್ನು ದುರುಪಯೋಗಪಡಿಸಿಕೊಂಡು, ತನ್ನ ಮೂಗಿನ ನೇರಕ್ಕೆ ಇತಿಹಾಸವನ್ನು ದಾಖಲಿಸುವ ಪ್ರಯತ್ನ ನಡೆಸುತ್ತಿದೆ. ಪರಿಣಾಮವಾಗಿ ಈ ದೇಶದ ಶೋಷಿತ ಸಮುದಾಯ ತಮ್ಮನ್ನು ಶೋಷಿಸಿದವರನ್ನೇ ಆರಾಧಿಸುವಂತಹ, ಅವರಿಗೆ ಜೈಕಾರ ಕೂಗುವಂತಹ ಸನ್ನಿವೇಶ ಸೃಷ್ಟಿಯಾಗುತ್ತಿದೆ. ಆ ತಿರುಚಿದ ಇತಿಹಾಸವನ್ನು ಪ್ರಶ್ನಿಸಿದವರನ್ನು ದಬ್ಬಾಳಿಕೆಯ ಮೂಲಕ ಬಾಯಿಮುಚ್ಚಿಸುವ ಕೆಲಸವೂ ನಡೆಯುತ್ತಿದೆ.

ವಿದೇಶಿಯರು ಆಗಮಿಸುವ ಮೊದಲು ಈ ದೇಶದಲ್ಲಿ ಇತಿಹಾಸಗಳು ‘ಪುರಾಣ ಕತೆಗಳೊಳಗೆ’ ಕಲಬೆರಕೆಯಾಗಿ ಹೋಗಿದ್ದವು. ಆರ್ಯ-ದ್ರಾವಿಡ ಸಂಘರ್ಷವನ್ನು ದೇವತೆಗಳು-ರಾಕ್ಷಸರ ನಡುವಿನ ಕದನವಾಗಿ ಪುರಾಣಗಳಲ್ಲಿ ಕಟ್ಟಿ ಕೊಡಲಾಯಿತು. ಶೋಷಿತ ಸಮುದಾಯ ಅಕ್ಷರವಂಚಿತವಾಗಿದ್ದುದರಿಂದ ಮತ್ತು ಪುರಾಣಗಳನ್ನು ಬರೆದವರ ಹಿಂದೆ ಆರ್ಯ ಸಮುದಾಯದ ಜನರಿದ್ದುದರಿಂದ, ರಾಕ್ಷಸರು ಅಥವಾ ದ್ರಾವಿಡರು ತಲೆತಲಾಂತರದಿಂದ ಖಳನಾಯಕರಾಗಿ ಬಿಂಬಿತರಾಗುತ್ತಾ ಬಂದಿದ್ದಾರೆ. ಪುರಾಣ ಕತೆಗಳ ರೂಪಕಗಳನ್ನು ಒಡೆಯುವ ಕೆಲಸವನ್ನು ಹಲವು ಚಿಂತಕರು, ಇತಿಹಾಸ ತಜ್ಞರು ಮಾಡಿದ್ದಾರೆ. ಶ್ರೀರಾಮನನ್ನು ಇತಿಹಾಸ ವ್ಯಕ್ತಿಯಾಗಿ ಚಿತ್ರಿಸಿ, ಆತ ಹುಟ್ಟಿದ ಜಾಗಕ್ಕಾಗಿ ಹೋರಾಟ ನಡೆಸುವ ಆರೆಸ್ಸೆಸ್, ಇದೇ ಸಂದರ್ಭದಲ್ಲಿ ಮಹಿಷ ರಾಜನ ಇತಿಹಾಸದ ಮೂಲವನ್ನು ಶೋಷಿತ ಸಮುದಾಯ ಗುರುತಿಸಿ ಆತನನ್ನು ಆರಾಧಿಸುವ ಪ್ರಯತ್ನ ನಡೆಸುವಾಗ ಮಾತ್ರ ವಿರೋಧಿಸುತ್ತದೆ.

ರಾವಣನಾಗಲಿ, ಮಹಿಷಾಸುರನಾಗಲಿ ಕೋರೆಹಲ್ಲುಗಳುಳ್ಳ, ನರಮಾಂಸ ಭಕ್ಷಿಸುವ ರಾಕ್ಷಸರಲ್ಲ ಎನ್ನುವುದಕ್ಕೆ ಮುಖ್ಯ ಸಾಕ್ಷಿ, ರಾವಣನನ್ನು ಉತ್ತರ ಭಾರತದ ಕೆಲವು ಬುಡಕಟ್ಟು ಸಮುದಾಯ ಇಂದಿಗೂ ದೇವರಾಗಿ ಆರಾಧಿಸುತ್ತಿರುವುದು. ಇದೇ ಸಂದರ್ಭದಲ್ಲಿ ದೇಶದ ವಿವಿಧೆಡೆಗಳಲ್ಲಿ ಮಹಿಷಾಸುರನಿಗೆ ಪೂಜೆ ಸಲ್ಲಿಕೆಯಾಗುತ್ತದೆ. ಅಷ್ಟೇ ಏಕೆ, ಕೇರಳದಲ್ಲಿ ಮಹಾಬಲಿ ಚಕ್ರವರ್ತಿ ವರ್ಷಕ್ಕೊಮ್ಮೆ ತಮ್ಮ ನೆಲಕ್ಕೆ ಭೇಟಿ ನೀಡುವ ದಿನವನ್ನು ಸಂಭ್ರಮದಿಂದ ‘ಓಣಂ’ ಎಂದು ಕರೆದು ಆಚರಿಸುತ್ತಾರೆ. ವೈದಿಕರಿಗೆ ವಾಮನ ದೇವರಾದರೆ, ಕೇರಳಿಯರಿಗೆ ಈ ಬಲಿಚಕ್ರವರ್ತಿ ಮುಖ್ಯವಾಗುತ್ತಾನೆ. ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ವಾಹನಗಳಲ್ಲಿ ‘ಸ್ವಾಮಿ ಕೊರಗಜ್ಜ’ನ ಹೆಸರಿದೆ. ಕೊರಗಜ್ಜ ಐತಿಹಾಸಿಕ ವ್ಯಕ್ತಿ. ಅಸ್ಪಶ್ಯತೆಯ ವಿರುದ್ಧ ಪ್ರತಿಭಟಿಸಿದಾತ. ದೇವಸ್ಥಾನವನ್ನು ಸ್ಪರ್ಷಿಸಿದ ಕಾರಣಕ್ಕೆ ಈತನನ್ನು ‘ಮಾಯ’ ಮಾಡಲಾಗುತ್ತದೆ. ವಿಪರ್ಯಾಸವೆಂದರೆ, ಇಂದು ದಕ್ಷಿಣ ಕನ್ನಡದ ಬಹುತೇಕ ಜನರಿಗೆ ಕೊರಗಜ್ಜ ಪ್ರತಿರೋಧದ ಧ್ವನಿ ಮರೆತು ಹೋಗಿದೆ.

‘ಮಾಯ’ ಮಾಡಿದವರೇ ಮತ್ತೆ ಕೊರಗಜ್ಜನ ದೈವಸ್ಥಾನಗಳನ್ನು ಆಕ್ರಮಿಸಿದ್ದಾರೆ. ಕೊರಗಜ್ಜನ ತಲೆಯ ಮೇಲೆ ವೈದಿಕ ಶಕ್ತಿಗಳು ತಮ್ಮ ದೇವರನ್ನು ಕೂರಿಸಿದ್ದಾರೆ. ಬಲಿ ಚಕ್ರವರ್ತಿ ಶ್ರೇಷ್ಠ ರಾಜನಾಗಿದ್ದ ಎನ್ನುವುದನ್ನು ಸ್ವತಃ ವೈದಿಕ ಸಮುದಾಯವೇ ಒಪ್ಪುತ್ತದೆ. ವಾಮನ ಎನ್ನುವ ಬ್ರಾಹ್ಮಣನ ಮೂಲಕ ಆತನ ರಾಜ್ಯವನ್ನು ಕಬಳಿಸಲಾಗುತ್ತದೆ. ಅಷ್ಟೇ ಅಲ್ಲ, ಆತನನ್ನು ಪಾತಾಳ ಅಂದರೆ ಮೇಲಿನಿಂದ ಕೆಳಗೆ, ಇದನ್ನು ಇನ್ನಷ್ಟು ಸ್ಪಷ್ಟವಾಗಿ ಹೇಳುವುದಾದರೆ ಆತನ ರಾಜ್ಯವನ್ನು ಕಿತ್ತು ಉತ್ತರದಿಂದ ದಕ್ಷಿಣಕ್ಕೆ ಗಡಿಪಾರು ಮಾಡಲಾಗುತ್ತದೆ. ಜನರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದಾಗ, ಬಲಿ ಚಕ್ರವರ್ತಿಗೆ ವರ್ಷಕ್ಕೊಮ್ಮೆ ತನ್ನ ನಾಡಿಗೆ ಬರುವ ಅವಕಾಶ ನೀಡಲಾಗುತ್ತದೆ. ಈ ದಿನಕ್ಕಾಗಿ ಜನಸಾಮಾನ್ಯರು ಕಾಯುತ್ತಿರುತ್ತಾರೆ. ಓಣಂ ದಿನ, ಬಲಿಚಕ್ರವರ್ತಿ ತನ್ನ ನಾಡಿಗೆ ಆಗಮಿಸಿ ಜನಸಾಮಾನ್ಯರ ಯೋಗಕ್ಷೇಮ ವಿಚಾರಿಸುತ್ತಾನೆ. ಆ ಕಾರಣಕ್ಕಾಗಿಯೇ ಜನರಿಗೆ ಆ ದಿನ ಹಬ್ಬ.

ವಿಪರ್ಯಾಸವೆಂದರೆ, ಉತ್ತರ ಭಾರತದ ಅಮಿತ್ ಶಾರಿಗೆ ಬಲಿಚಕ್ರವರ್ತಿಯ ಹೆಸರಿನಲ್ಲಿ ಜನರು ಹಬ್ಬ ಆಚರಿಸುವುದು ಇರಿಸು ಮುರಿಸು ತರುತ್ತದೆ. ಅದಕ್ಕಾಗಿಯೇ ಕಳೆದ ವರ್ಷ ಓಣಂ ದಿನ ‘ಕೇರಳೀಯರಿಗೆ ವಾಮನ ಜಯಂತಿ ಶುಭಾಶಯಗಳು’ ಎಂಬ ಜಾಹೀರಾತೊಂದನ್ನು ಪತ್ರಿಕೆಯಲ್ಲಿ ನೀಡಿದರು. ಇದು ಕೇರಳೀಯರಲ್ಲಿ ಭಾರೀ ಆಕ್ರೋಶವನ್ನು ಸೃಷ್ಟಿಸಿತು ಮಾತ್ರವಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ಅಮಿತ್ ಶಾ ವಿರುದ್ಧ ಟೀಕೆಯ ಸುರಿಮಳೆಯೇ ಹರಿಯಿತು. ಈ ದೇಶದ ಇತಿಹಾಸವನ್ನು ವೈದಿಕರು ಬರೆದರೆ ಅವರಿಗೆ ವಾಮನ ನಾಯಕನಾಗುತ್ತಾನೆ, ಇದೇ ಸಂದರ್ಭದಲ್ಲಿ ಇತಿಹಾಸವನ್ನು ದ್ರಾವಿಡರು, ಆದಿವಾಸಿಗಳು, ದಲಿತರು, ಮೂಲನಿವಾಸಿಗಳು ಬರೆದರೆ ಅಲ್ಲಿ ಬಲಿ ಚಕ್ರವರ್ತಿಯೇ ಆರಾಧ್ಯನಾಗುತ್ತಾನೆ ಎನ್ನುವ ಅಂಶವನ್ನು ಅಮಿತ್ ಶಾಗೆ ಕೇರಳೀಯರು ಮನವರಿಕೆ ಮಾಡಿಸಿದರು. ಪರಿಣಾಮವಾಗಿ, ಈ ಬಾರಿ ‘ಓಣಂ’ ಸಂದರ್ಭದಲ್ಲಿ ಅಮಿತ್ ಶಾ ವೌನವಹಿಸಿದ್ದಾರೆ.

 ಟಿಪ್ಪು ಇತಿಹಾಸವನ್ನು ತಿರುಚುವವರ ದುರುದ್ದೇಶವನ್ನೂ ನಾವು ಗಮನಿಸಬೇಕಾಗಿದೆ. ಟಿಪ್ಪು ತನ್ನ ಬದುಕನ್ನು ಬ್ರಿಟಿಷರ ವಿರುದ್ಧ ಯುದ್ಧ ಮಾಡುತ್ತಲೇ ಕಳೆದ. ರಣರಂಗದಲ್ಲೇ ಹುತಾತ್ಮನಾದ. ಬ್ರಿಟಿಷರು ಆತನನ್ನು ದ್ವೇಷಿಸುವುದು ಸಹಜ. ಆದರೆ ಇದೇ ಸಂದರ್ಭದಲ್ಲಿ ಸಂಘಪರಿವಾರವೂ ಟಿಪ್ಪುವನ್ನು ದ್ವೇಷಿಸುವ ಕೆಲಸವನ್ನು ಮಾಡುತ್ತಿದೆ. ಟಿಪ್ಪು ದಲಿತರಿಗೆ ಭೂಮಿಯನ್ನು ಕೊಟ್ಟ. ಜಮೀನ್ದಾರರ ವಿರುದ್ಧ ಕಠಿಣ ನಿಲುವನ್ನು ತಳೆದ. ರೈತರಿಗೆ ಉಪಕಾರಿಯಾದ. ದಲಿತ ಮಹಿಳೆಯರು ರವಿಕೆ ಧರಿಸಲು ತೆರಿಗೆ ಕಟ್ಟಬೇಕಾದ ಸ್ಥಿತಿಯನ್ನು ಅಳಿಸಿದ. ಇವೆಲ್ಲವೂ ಅಂದಿನ ಮೇಲ್ಜಾತಿಯ ಜನರಿಗೆ ಸಹಜವಾಗಿಯೇ ಟಿಪ್ಪುವನ್ನು ದ್ವೇಷಿಸಲು ಇರುವ ಕಾರಣಗಳಾಗಿವೆ. ಜೊತೆಗೆ ಸಂಘಪರಿವಾರ ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಿರಲಿಲ್ಲ. ಬ್ರಿಟಿಷರ ಪರವಾಗಿ ಕೆಲಸ ಮಾಡಿದ ಇತಿಹಾಸ ಅವರಿಗಿದೆ. ಶಿವಾಜಿಯ ಇತಿಹಾಸವನ್ನೇ ಗಮನಿಸಿ. ಈ ದೇಶದ ದಲಿತರು ಮತ್ತು ಮುಸ್ಲಿಮರ ಬೆಂಬಲವನ್ನು ಪಡೆದುಕೊಂಡು ಶಿವಾಜಿಯು ಮೊಗಲರನ್ನು ಎದುರಿಸಿದ. ಶಿವಾಜಿಯ ಅಂಗರಕ್ಷಕರು ಮುಸ್ಲಿಮರು ಮತ್ತು ದಲಿತರೇ ಆಗಿದ್ದರು. ಆತನ 11 ಪ್ರಮುಖ ದಂಡನಾಯಕರು ಮುಸ್ಲಿಮರಾಗಿದ್ದರು.

ಇದೇ ಸಂದರ್ಭದಲ್ಲಿ ಮೊಗಲ್ ಪರವಾಗಿ ರಜಪೂತರು ಶಿವಾಜಿಯ ವಿರುದ್ಧ ಹೋರಾಡಿದರು. ಶಿವಾಜಿ ಸೋಲುವುದಕ್ಕಾಗಿ ವೈದಿಕರು 50 ದಿನಗಳ ಮಹಾ ಯಾಗವೊಂದನ್ನು ಮಾಡಿದ್ದರು. ಶೂದ್ರ ಎನ್ನುವ ಕಾರಣಕ್ಕಾಗಿ ಶಿವಾಜಿಯ ಪಟ್ಟಾಭಿಷೇಕಕ್ಕೆ ಅಡ್ಡಿಪಡಿಸಿದರು. ಅಂತಿಮವಾಗಿ ಗಾಗಾಭಟ್ಟ ಎನ್ನುವ ಕಾಶಿಯ ಬ್ರಾಹ್ಮಣನ ನೇತೃತ್ವದಲ್ಲಿ ಪಟ್ಟಾಭಿಷೇಕ ನಡೆಯಿತಾದರೂ, ಆತನ ಹಣೆಗೆ ತನ್ನ ಎಡಗಾಲಿನ ಹೆಬ್ಬೆಟ್ಟಿನ ಮೂಲಕ ತಿಲಕ ಇಡುತ್ತಾನೆ ಎಂದು ಇತಿಹಾಸ ಹೇಳುತ್ತದೆ. ಮೊದಲ ಪಟ್ಟಾಭಿಷೇಕ ಸರಿಯಿಲ್ಲವೆಂದರು, ಎರಡನೆ ಬಾರಿ ಪಟ್ಟಾಭಿಷೇಕ ನಡೆಯಬೇಕಾದ ಸ್ಥಿತಿ ನಿರ್ಮಾಣವಾಯಿತು. ಆದರೆ ಅದೇ ಸಂಘಪರಿವಾರ ಮೊಗಲರ ವಿರುದ್ಧ ಹೋರಾಡಿದ್ದ ಎನ್ನುವ ಒಂದು ಉದಾಹರಣೆಯನ್ನು ಮುಂದಿಟ್ಟು ಶಿವಾಜಿಯನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟುತ್ತಿದೆ. ಶಿವಾಜಿಯ ಜೊತೆಗಿದ್ದವರು ಯಾರು, ಶಿವಾಜಿಯ ವಿರುದ್ಧ ಸಂಚು ಮಾಡಿದವರು ಯಾರು? ಆತನ ವಂಶಸ್ಥರಿಂದ ರಾಜ್ಯವನ್ನು ಕಿತ್ತುಕೊಂಡವರು ಯಾರು? ಎನ್ನುವ ಇತಿಹಾಸವನ್ನು ಪ್ರಚಾರ ಪಡಿಸಿದರೆ ಮಾತ್ರ, ಸಂಘಪರಿವಾರದ ಸಂಚನ್ನು ತಡೆಯಬಹುದು.

ಇದೀಗ ಮಹಿಷ ದಸರಾ ಮೈಸೂರಿನಲ್ಲಿ ಸುದ್ದಿಯಾಗುತ್ತಿದೆ. ಮಹಿಷ ದಸರಾ ಆಚರಿಸಲು ಮುಂದಾದ ದಲಿತರನ್ನು, ಮೂಲನಿವಾಸಿಗಳನ್ನು ಪೊಲೀಸರು ಬಂಧಿಸುತ್ತಿದ್ದಾರೆ. ಇದು ಹಿಂದೂಗಳ ಭಾವನೆಗಳಿಗೆ ಧಕ್ಕೆ ಮಾಡುತ್ತದೆ ಎನ್ನುವುದು ಇವರ ವಾದ. ಈ ದಲಿತರು, ಮೂಲನಿವಾಸಿಗಳು ಹಾಗಾದರೆ ಹಿಂದೂಗಳು ಅಲ್ಲವೇ? ಅವರ ಭಾವನೆಗಳಿಗೆ ಧಕ್ಕೆಯಾದರೆ ತೊಂದರೆಯಿಲ್ಲವೇ? ಈ ದೇಶದ ಬಹುಸಂಖ್ಯಾತರು ಗೋಮಾಂಸ ಸೇವನೆ ಮಾಡುತ್ತಿದ್ದರೂ, ಕೆಲವೇ ಕೆಲವು ಹಿತಾಸಕ್ತಿಗಳ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು ಗೋಮಾಂಸವನ್ನು ನಿಷೇಧಿಸಿದಂತೆಯೇ ಇದು ಕೂಡ. ಗೋವು ದೇವರು ಎನ್ನುವುದು ಕೆಲವರ ನಂಬಿಕೆ. ಗೋವು ಎಲ್ಲ ಪ್ರಾಣಿಗಳಂತೆ ಒಂದು ಪ್ರಾಣಿ ಎನ್ನುವುದು ಇನ್ನೂ ಹಲವರ ನಂಬಿಕೆ.

ಈ ಕಾರಣದಿಂದಲೇ, ಬಿಜೆಪಿ ಈಶಾನ್ಯ ಭಾರತ, ಕೇರಳ, ಗೋವಾದಲ್ಲಿ ಗೋವಿನ ಕುರಿತಂತೆ ಇಬ್ಬಗೆಯ ನೀತಿಯನ್ನು ಅನುಸರಿಸುತ್ತಿದೆ. ಇದು ವೈವಿಧ್ಯಮಯ ದೇಶ. ಇಲ್ಲಿ ವೈವಿಧ್ಯಮಯ ನಂಬಿಕೆಗಳಿವೆ. ಆಹಾರ ಪದ್ಧತಿಗಳಿವೆ. ಅದುವೇ ಈ ದೇಶದ ಹೆಗ್ಗಳಿಕೆ. ಒಬ್ಬರ ನಂಬಿಕೆಗಾಗಿ ಇನ್ನೊಬ್ಬರು ತಮ್ಮ ನಂಬಿಕೆಯನ್ನೋ, ಆಹಾರವನ್ನೋ ತ್ಯಜಿಸುವುದು ಸಂವಿಧಾನಕ್ಕೆ ವಿರುದ್ಧವಾಗಿದೆ. ಶೋಷಕರು ಬರೆದ ಇತಿಹಾಸ, ಪುರಾಣಗಳಿಗೆ ಶೋಷಿತರು ತಲೆಬಾಗಬೇಕು ಎನ್ನುವುದು ಪ್ರಜಾಸತ್ತೆಗೆ ವಿರೋಧಿಯಾದ ನಿಲುವಾಗಿದೆ. ದಸರಾವಂತೂ ರಾಜಪ್ರಭುತ್ವವನ್ನು ವೈಭವೀಕರಿಸುವ ಹಬ್ಬ. ಈ ಹಬ್ಬದ ಹೆಸರಿನಲ್ಲಿ ದಲಿತರನ್ನು, ಮೂಲನಿವಾಸಿಗಳನ್ನು ಬಂಧಿಸುವುದು, ಅವರ ಮೇಲೆ ದಬ್ಬಾಳಿಕೆ ನಡೆಸುವುದು ಪ್ರಜಾಪ್ರಭುತ್ವಕ್ಕೆ ಮಾಡುವ ಅವಮಾನವಾಗಿದೆ. ಅಂತಹ ಘಟನೆಗಳು ದಸರಾದ ನಿಜವಾದ ವೌಲ್ಯಗಳನ್ನೇ ಸಂಶಯಿಸುವಂತೆ ಮಾಡುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)