varthabharthi


ವೈವಿಧ್ಯ

ಸಾಹಿತಿಯ ಅಳಲೂ- ಅಳಲೊಲ್ಲದ ಸಾಹಿತಿಯೂ

ವಾರ್ತಾ ಭಾರತಿ : 7 Oct, 2019
ನಾ ದಿವಾಕರ

ವೈಚಾರಿಕತೆಯ ಮೂಲ ಇರುವುದು ಮನುಜ ಸಂವೇದನೆಯಲ್ಲಿ, ವಿಚಾರವಾದದ ಉಸಿರು ಇರುವುದು ಮನುಕುಲದ ಮುನ್ನಡೆಯಲ್ಲಿ. ಈ ಎರಡೂ ಹೆಜ್ಜೆಗಳ ನಡುವೆ ಇರುವ ಮುಳ್ಳಿನ ಬೇಲಿಗಳನ್ನು ಕಿತ್ತೊಗೆಯುವುದು ಪ್ರಬುದ್ಧ ಮನಸ್ಸುಗಳ ಆದ್ಯತೆಯಾಗಬೇಕಿದೆ.

ನ್ನಡ ಸಾಹಿತ್ಯ ಲೋಕದ ಸಂಕಥನಗಳಲ್ಲಿ ಸಾಹಿತ್ಯ ಮತ್ತು ನಾಸ್ತಿಕತೆ ವೈಚಾರಿಕ ನೆಲೆಯಲ್ಲಿ ಮಾತ್ರ ಚರ್ಚೆಗೊಳಗಾಗಿದೆ. ಆದರೆ ವ್ಯಕ್ತಿಗತವಾಗಿ ಸಾಹಿತಿಯ ನಾಸ್ತಿಕತೆ ಮತ್ತು ಅವರ ಸಾಹಿತ್ಯ ಚರ್ಚೆಯ ವಿಷಯವಾಗಿಲ್ಲ. ಈ ಪ್ರಶ್ನೆ ಇಂದು ಪುನಃ ಮುನ್ನೆಲೆಗೆ ಬಂದಿದ್ದರೆ ಅದಕ್ಕೆ ಕಾರಣ ಖ್ಯಾತ ಸಾಹಿತಿ ಎಸ್.ಎಲ್. ಭೈರಪ್ಪನವರು ದಸರಾ ಉದ್ಘಾಟನೆಯ ಸಂದರ್ಭದಲ್ಲಿ ಆಡಿದ ಕೆಲವು ಮಾತುಗಳು. ವೈಚಾರಿಕತೆ ಎಂದರೆ ಕೇವಲ ನಾಸ್ತಿಕತೆ ಮಾತ್ರವೇ ಅಲ್ಲ. ಅದೊಂದು ಬೌದ್ಧಿಕ ಮಾನದಂಡವಷ್ಟೆ ಅಥವಾ ನಾಸ್ತಿಕರಾದವರೆಲ್ಲರೂ ಪರಿಪೂರ್ಣ ವಿಚಾರವಾದಿಗಳಾಗಿರುತ್ತಾರೆ ಎಂದೂ ನಿಖರವಾಗಿ ಹೇಳಲಾಗುವುದಿಲ್ಲ. ದೈವತ್ವದಲ್ಲಿ ನಂಬಿಕೆ ಇಲ್ಲದವರು ಸಾಹಿತಿಯೇ ಅಲ್ಲ ಎಂದೋ ಅಥವಾ ಸಾಹಿತಿಯಾದವರಿಗೆ ದೈವತ್ವದಲ್ಲಿ ನಂಬಿಕೆ ಇರಕೂಡದು ಎಂದೋ ಯಾವುದೇ ಸಂದರ್ಭದಲ್ಲೂ ಸಹ ಸಂವಾದ ಏರ್ಪಟ್ಟಿಲ್ಲ. ಕನ್ನಡ ಸಾಹಿತ್ಯ ಲೋಕದ ಇತಿಹಾಸವನ್ನು ರನ್ನ ಪಂಪರ ಕಾಲದಿಂದ ಸಮಕಾಲೀನ ಘಟ್ಟದವರೆಗೂ ಸಿಗಿದು ನೋಡಿದರೂ ಈ ರೀತಿಯ ಅಭಿಪ್ರಾಯ ಎಲ್ಲಿಯೂ ದಾಖಲಾಗಿಲ್ಲ. ಆದರೆ ಕೆಲವು ಸಾಹಿತ್ಯ ಕೃತಿಗಳಲ್ಲಿ ವ್ಯಕ್ತವಾಗಿರುವ ಸಾಹಿತಿಯ ದೈವತ್ವದ ಕಲ್ಪನೆ ಮತ್ತು ನಿರೂಪಣೆ ಚರ್ಚೆಗೊಳಗಾಗಿರುವುದು ಸತ್ಯ.

ಸಾಹಿತ್ಯವನ್ನು ಜನಸಾಮಾನ್ಯರ ನಿತ್ಯ ಬದುಕಿನ ಆವರಣದಿಂದ ಹೊರಗಿಟ್ಟು ಕೇವಲ ಸಾರಸ್ವತ ವೌಲ್ಯಗಳಿಗೇ ಸೀಮಿತಗೊಳಿಸುವ ಒಂದು ಪರಂಪರೆಯಂತೂ ಕನ್ನಡ ಸಾಹಿತ್ಯದ ಪಯಣದಲ್ಲಿ ನಿರಂತರವಾಗಿ ಹರಿದುಬಂದಿದೆ. ಈ ಪರಂಪರೆಯೇ ಕನ್ನಡ ಸಾಹಿತ್ಯವನ್ನು ತಳಸಮುದಾಯಗಳಿಂದ ದೂರ ಇರಿಸುವುದಕ್ಕೂ ಕಾರಣವಾಗಿದೆ. ಈ ವಿವಾದಾಸ್ಪದ ವಿಚಾರವನ್ನು ಬದಿಗಿಟ್ಟು ನೋಡಿದಾಗಲೂ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ನಾಸ್ತಿಕತೆಯ ನೆಲೆಯಲ್ಲೇ ಸೃಷ್ಟಿಯಾಗಿರುವ ಸಾಹಿತ್ಯ ವಿಪುಲವಾಗೇನೂ ಕಂಡುಬರುವುದಿಲ್ಲ. ಆದರೆ ವೈಚಾರಿಕ ನೆಲೆಯಲ್ಲಿ ಕನ್ನಡ ಸಾಹಿತ್ಯದ ಸಾಗರವನ್ನೇ ಕಾಣಬಹುದು. ದೈವತ್ವವನ್ನು ನಿರಾಕರಿಸದೆಯೇ ಅಥವಾ ದೇವರ ಇರುವಿಕೆಯನ್ನು ಪ್ರಶ್ನಿಸದೆಯೇ ಸಾಮಾಜಿಕ ನ್ಯಾಯ, ಸ್ತ್ರೀವಾದ, ಮಹಿಳಾ ಅಸ್ಮಿತೆ, ಜಾತಿ ಶೋಷಣೆ, ಸ್ತ್ರೀ ಶೋಷಣೆ ಈ ಜ್ವಲಂತ ಸಮಸ್ಯೆಗಳನ್ನು ವೈಚಾರಿಕ ನೆಲೆಗಟ್ಟಿನಲ್ಲಿ ಬಿಂಬಿಸುವ ಸಾಹಿತ್ಯವನ್ನೂ ನಾವು ಗುರುತಿಸಬಹುದು.

ಭಾರತೀಯ ಸಮಾಜದಲ್ಲಿ ಅಂತರ್ಗತವಾಗಿರುವ ಜಾತಿ ವ್ಯವಸ್ಥೆ, ವೌಢ್ಯ, ಅಸ್ಪಶ್ಯತೆ, ಸ್ತ್ರೀ ಶೋಷಣೆ ಮತ್ತು ಅಸಮಾನತೆಯನ್ನು ವೈಚಾರಿಕ ನೆಲೆಯಲ್ಲಿ ಪ್ರಶ್ನಿಸಿರುವ ಸಾಹಿತಿಗಳೂ ನಮ್ಮ ನಡುವೆ ಇದ್ದರು, ಇದ್ದಾರೆ. ತಮ್ಮ ವ್ಯಕ್ತಿಗತ ಆಸ್ತಿಕತೆಯ ಹೊರತಾಗಿಯೂ ದೈವ ಕಲ್ಪನೆಯನ್ನು ಸಾಹಿತ್ಯಿಕ ಅಭಿವ್ಯಕ್ತಿಯ ಮೂಲಕ ಒರೆ ಹಚ್ಚಿ ನೋಡುವುದಷ್ಟೇ ಅಲ್ಲದೆ ಇದರಿಂದ ಸಮಾಜದ ಮೇಲೆ ಉಂಟಾಗಿರುವ ನೇತ್ಯಾತ್ಮಕ ಪರಿಣಾಮಗಳನ್ನು ಕುರಿತು ರಚಿಸಲಾಗಿರುವ ಸಾಹಿತ್ಯವೂ ನಮ್ಮ ನಡುವೆ ಇದೆ. ಹಾಗಾಗಿ ಇಲ್ಲಿ ವೈಚಾರಿಕತೆ ಎಂದ ಕೂಡಲೇ ಎಡಪಂಥೀಯವೆಂದೋ, ಅತೀತ ಶಕ್ತಿಯೊಂದರ ಅಸ್ತಿತ್ವವನ್ನು ಪ್ರಶ್ನಿಸುವ ಧೋರಣೆ ಎಂದೋ ಏಕಮುಖಿಯಾಗಿ ಪರಿಭಾವಿಸಲಾಗುವುದಿಲ್ಲ. ಆದರೆ ವೈಚಾರಿಕತೆ, ವಿಚಾರವಾದವನ್ನು ಎಡಪಂಥೀಯ ಚಿಂತನಾವಾಹಿನಿಯಲ್ಲಿ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಬಿಂಬಿಸಲಾಗುತ್ತದೆ ಎನ್ನುವುದು ಸತ್ಯ. ಇದೇನೂ ಮಹಾಪರಾಧವಲ್ಲ ಅಲ್ಲವೇ ? ವೈಚಾರಿಕತೆಗೆ ಒಂದು ವಿಶಾಲ ತಳಹದಿ ಇದೆ. ಸಮಾಜೋ ಸಾಂಸ್ಕೃತಿಕ ಆಯಾಮವಿದೆ, ವೈಜ್ಞಾನಿಕ ಭೌತವಾದಿ ಆಯಾಮವೂ ಇದೆ. ಇದನ್ನು ನಿರ್ದಿಷ್ಟ ಚೌಕಟ್ಟಿನಲ್ಲಿ ಬಂಧಿಸಿಟ್ಟು ನೋಡಿದಾಗ ಭೈರಪ್ಪನವರ ಮನಸ್ಸಿನಲ್ಲಿ ಉದ್ಭವಿಸಿದ ಪ್ರಶ್ನೆಗಳು ಸಹಜ ಎನಿಸುತ್ತದೆ. ವಿಚಾರವಂತರೆಲ್ಲರೂ ದೈವ ವಿರೋಧಿಗಳೂ ಆಗಿರುವುದಿಲ್ಲ ದೈವ ನಿಂದಕರೂ ಆಗಿರುವುದಿಲ್ಲ. ಆದರೆ ದೈವಾರಾಧನೆಯ ವಿರೋಧಿಗಳಾಗಿರಬಹುದು. ದೈವಭಕ್ತಿ ಎನ್ನುವ ಆಡಂಬರವನ್ನು ವಿರೋಧಿಸಬಹುದು. ದೇವೋಪಾಸನೆಯನ್ನು ವಿರೋಧಿಸಬಹುದು.

ದೈವಭಕ್ತಿ, ದೈವಾರಾಧನೆ ಮತ್ತು ದೇವೋಪಾಸನೆಯ ನಡುವೆ ಇರುವ ಸೂಕ್ಷ್ಮ ಸಂಬಂಧ ಮತ್ತು ವ್ಯತ್ಯಾಸವನ್ನು ಅರಿತಿದ್ದರೆ ಇಂತಹ ಅಪ್ರಬುದ್ಧ ಪ್ರಶ್ನೆಗಳೇ ಉದ್ಭವಿಸುವುದಿಲ್ಲ. 21ನೆಯ ಶತಮಾನದ ಭಾರತದ ಸಾರ್ವಜನಿಕ ಜೀವನದಲ್ಲಿ ನಾವು ಕಾಣುತ್ತಿರುವುದು ದೈವಾರಾಧನೆಯ ಪರಾಕಾಷ್ಠೆ ಮತ್ತು ದೈವಭಕ್ತಿಯ ಭಂಡ ಪ್ರದರ್ಶನವಷ್ಟೇ. ಉಪಾಸಕರು ಬಹುಶಃ ಇಲ್ಲವೇ ಇಲ್ಲ ಎನ್ನಬಹುದು. ಈ ದೈವಭಕ್ತಿ ಮತ್ತು ಆರಾಧನೆಯ ಹಿಂದೆ ಶ್ರದ್ಧೆ ನಂಬಿಕೆಗಳಿಗಿಂತಲೂ ಮತಧಾರ್ಮಿಕ ಹಿತಾಸಕ್ತಿಗಳು ಹೆಚ್ಚು ಸಕ್ರಿಯವಾಗಿರುವುದನ್ನೂ ಕಾಣುತ್ತಿದ್ದೇವೆ. ಹಾಗಾಗಿಯೇ ರಾಮನೂ ಆರಾಧನೆಗೊಳಗಾಗುತ್ತಾನೆ, ಚಾಮುಂಡೇಶ್ವರಿಯೂ ಮನೆಮನೆಯ ದೇವತೆಯಾಗುತ್ತಾಳೆ. ಕೆಲವೇ ಮನೆಗಳಲ್ಲಿ ನಡೆಯುತ್ತಿದ್ದ ವರಮಹಾಲಕ್ಷ್ಮಿ ಹಬ್ಬ, ಮಾರುಕಟ್ಟೆಗೆ ಸ್ಪಂದಿಸುವ ರೀತಿಯಲ್ಲಿ ಅದ್ದೂರಿಯಾಗಿ ಮನೆಮನೆಗಳನ್ನು ತಲುಪುತ್ತಿದೆ. ಇದು ಸರಿ ತಪ್ಪು ಎನ್ನುವುದು ಇಲ್ಲಿನ ಪ್ರಶ್ನೆಯಲ್ಲ, ಇಲ್ಲಿ ಪ್ರಶ್ನೆ ಇರುವುದು ನಮ್ಮ ಗ್ರಹೀತಗಳ ಬಗ್ಗೆ. ಈ ಪೂಜೆ ಅಥವಾ ಆರಾಧನೆಯಲ್ಲಿ ತೊಡಗುವ ಅನೇಕರು ಸಾಮಾಜಿಕ ಪ್ರಶ್ನೆ ಮುನ್ನೆಲೆಗೆ ಬಂದಾಗ, ಜಾತಿ ದೌರ್ಜನ್ಯ ಅಥವಾ ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಶ್ನೆ ಎದುರಾದಾಗ ವೈಚಾರಿಕ ನಿಲುವು ತಾಳುವುದನ್ನು ಅಲ್ಲಗಳೆಯಲಾಗುವುದಿಲ್ಲ. ಇಲ್ಲಿ ಸಾಮಾಜಿಕ ನೆಲೆಯಲ್ಲಿ ಮಾತ್ರವೇ ವೈಚಾರಿಕತೆ ವ್ಯಕ್ತವಾಗುತ್ತದೆ. ಇದು ಭಾರತೀಯ ಸಮಾಜದ ಒಂದು ವೈಶಿಷ್ಟವೆಂದೂ ಹೇಳಬಹುದು.

ಕನ್ನಡ ಸಾಹಿತ್ಯ ಪರಂಪರೆಯನ್ನೇ ನೋಡಿದರೆ ಸಾಹಿತಿಯ ಆಸ್ತಿಕತೆ ಸಾಹಿತ್ಯ ಕೃತಿಯಲ್ಲಿ ಕಾಣಿಸಿಕೊಳ್ಳದೆ ಇರುವುದನ್ನೂ ಕಂಡಿದ್ದೇವೆ. ಸಂಪ್ರದಾಯಸ್ಥ ಕುಟುಂಬದಿಂದ ಬಂದಿರುವ ಸಾಹಿತಿಗಳು ತಮ್ಮ ಸಂಪ್ರದಾಯಗಳನ್ನು ಉಳಿಸಿಕೊಂಡೇ ವಿಚಾರವಾದಿ ನಿಲುವುಗಳನ್ನು ತಮ್ಮ ಸಾಹಿತ್ಯದಲ್ಲಿ ವ್ಯಕ್ತಪಡಿಸಿದ್ದಿದೆ. ಹಾಗೆಯೇ ವೈಜ್ಞಾನಿಕ ನೆಲೆಯಲ್ಲಿ ದೇವರ ಅಸ್ತಿತ್ವವನ್ನೇ ನಿರಾಕರಿಸುತ್ತಾ ತಮ್ಮ ಸಾಹಿತ್ಯ ಕೃತಿಗಳಲ್ಲಿ ವೈಚಾರಿಕತೆಯನ್ನು ಬಿಂಬಿಸಿದ ಸಾಹಿತಿಗಳೂ ನಮ್ಮಾಡನಿದ್ದಾರೆ, ಇದ್ದರು. ಇಲ್ಲಿ ವೈಚಾರಿಕತೆಯನ್ನು ಸಾಪೇಕ್ಷ ನೆಲೆಯಲ್ಲಿ ಕಾಣಬೇಕಾಗುತ್ತದೆ. ದೈವ ನಿಂದನೆಯೇ ವೈಚಾರಿಕತೆ ಎಂದು ಭಾವಿಸುವ ಕೆಲವೇ ಸಾಹಿತಿಗಳ ಅಬ್ಬರಗಳನ್ನು ಎಲ್ಲ ವಿಚಾರವಾದಿಗಳಿಗೂ ಅನ್ವಯಿಸುವುದು ಸೂಕ್ಷ್ಮ ಗ್ರಹಿಕೆಯ ಕೊರತೆಯಿಂದ ಎಂದು ಹೇಳದೆ ವಿಧಿಯಿಲ್ಲ. ವೈಜ್ಞಾನಿಕ ವಿಚಾರವಾದಿಗಳಿಗೆ ದೈವಾರಾಧನೆ ಎಷ್ಟು ಅಪಥ್ಯವೋ ದೈವನಿಂದನೆಯೂ ಅಷ್ಟೇ ಅಪಥ್ಯವಾಗಿರುತ್ತದೆ. ಏಕೆಂದರೆ ಅಲ್ಲಿ ದೈವತ್ವದ ಕಲ್ಪನೆಗೇ ಸ್ಥಾನ ಇರುವುದಿಲ್ಲ. ಅತೀತ ಶಕ್ತಿಯನ್ನು ಸ್ವೀಕರಿಸುವ ಮನಸ್ಥಿತಿ ಇರುವುದಿಲ್ಲ. ಇದು ಅಪರಾಧ ಎಂದಾದರೆ ನಾವು ಬೌದ್ಧಿಕವಾಗಿ ಅಸ್ವಸ್ಥರಾಗಿದ್ದೇವೆ ಎಂದೇ ಭಾವಿಸಬೇಕಾಗುತ್ತದೆ.

ದೇವರಿಲ್ಲ ಎನ್ನುವುದು ದಾರ್ಷ್ಟದ ಮಾತಾಗುತ್ತದೆ ಎಂಬ ಎಸ್.ಎಲ್. ಭೈರಪ್ಪನವರ ಹೇಳಿಕೆಯನ್ನು ಈ ಹಿನ್ನೆಲೆಯಲ್ಲೇ ನೋಡಬೇಕಾಗುತ್ತದೆ. ಭೈರಪ್ಪನವರ ಮಾತು ನಿಜವೇ ಎನ್ನುವುದಾದರೆ ಕನ್ನಡ ಸಾಹಿತ್ಯ ಲೋಕದಲ್ಲೇ ಇಂತಹ ದಾರ್ಷ್ಟವನ್ನು ಮೆರೆದ ಸಾಹಿತಿಗಳು ಹೇರಳವಾಗಿದ್ದಾರೆ, ವಿಪುಲ ಸಾಹಿತ್ಯವನ್ನೂ ರಚಿಸಿದ್ದಾರೆ. ಎ.ಎನ್. ಮೂರ್ತಿರಾವ್, ಜಿ.ಟಿ. ನಾರಾಯಣ ರಾವ್, ಕುವೆಂಪು, ನಿರಂಜನ, ಗೌರೀಶ್ ಕಾಯ್ಕಿಣಿ, ಜೆ.ಆರ್. ಲಕ್ಷ್ಮಣರಾವ್ ಇನ್ನೂ ಹಲವರಿದ್ದಾರೆ. ಸಾಮಾಜಿಕ ಜೀವನವನ್ನೇ ತಮ್ಮ ಕಥಾವಸ್ತುಗಳನ್ನಾಗಿಸಿ ಅತ್ಯುತ್ತಮ ಕಾದಂಬರಿಗಳನ್ನು ರಚಿಸಿದ ತ್ರಿವೇಣಿಯವರ ಸಾಹಿತ್ಯವನ್ನು ಓದಿ ಅವರ ಆಸ್ತಿಕತೆಯನ್ನಾಗಲೀ, ದೈವಭಕ್ತಿಯನ್ನಾಗಲೀ ಅಳೆಯಲಾದೀತೇ? ಬದಲಾಗಿ ಅವರಲ್ಲಿದ್ದ ವೈಚಾರಿಕತೆ, ಸ್ತ್ರೀ ಸಂವೇದನೆಯನ್ನು ಸುಲಭವಾಗಿ ಗ್ರಹಿಸಬಹುದಲ್ಲವೇ? ಇದು ಸಾಹಿತ್ಯವನ್ನು ನೋಡಬೇಕಾದ ವಿಧಾನ. ಸಂಪ್ರದಾಯಸ್ಥರಾಗಿಯೇ ಬದುಕು ಸವೆಸಿದ ಬೇಂದ್ರೆ ಅವರ ಸಾಹಿತ್ಯದಲ್ಲಿ ವೈಚಾರಿಕತೆಯನ್ನು ಗುರುತಿಸದಿರಲು ಸಾಧ್ಯವೇ? ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕಥೆಗಳಲ್ಲಿ ಸಾಮಾಜಿಕ ಕಾಳಜಿ ಮತ್ತು ವೈಚಾರಿಕ ನಿಲುವುಗಳನ್ನು ಗುರುತಿಸಲು ಸಾಧ್ಯ ಅಲ್ಲವೇ? ಅವರೇನೂ ನಾಸ್ತಿಕರಾಗಿರಲಿಲ್ಲ. ದೇವರ ಅಸ್ತಿತ್ವವನ್ನು ನಿರಾಕರಿಸುವುದು, ಸ್ವೀಕರಿಸುವುದೂ ಬೌದ್ಧಿಕ ಚಿಂತನೆಗೆ ಸಂಬಂಧಿಸಿದ್ದು. ಭಾರತದ ಇತಿಹಾಸದಲ್ಲಿ ಚಾರ್ವಾಕನಿಂದ ಇಂದಿನವರೆಗೂ ವೈಜ್ಞಾನಿಕ ವೈಚಾರಿಕತೆ, ನಾಸ್ತಿಕತೆ ಮತ್ತು ಆಸ್ತಿಕ ಮನಸ್ಥಿತಿಯ ನಡುವೆಯೇ ಸಾಹಿತ್ಯ ಲೋಕ ಬೆಳೆದುಬಂದಿದೆ. ಇದರಲ್ಲಿ ದಾರ್ಷ್ಟವನ್ನು ಗುರುತಿಸುವುದು ಬೌದ್ಧಿಕ ದಬ್ಬಾಳಿಕೆಯ ಮನಸ್ಥಿತಿಯಷ್ಟೇ.

ಈ ಬೌದ್ಧಿಕ ದಬ್ಬಾಳಿಕೆಯ ಮನಸ್ಥಿತಿಯೇ ಮುಟ್ಟಾದ ಮಹಿಳೆಯರ ಮೇಲಿನ ನಿರ್ಬಂಧಗಳ ಜೀವ ಕೋಶಗಳಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಶಬರಿಮಲೆ ಘಟನೆಯ ನಂತರ ನೋಡುತ್ತಿದ್ದೇವೆ. ಋತುಸ್ರಾವದ ಸಂದರ್ಭದಲ್ಲಿ ಮಹಿಳೆಯರು ಆಫೀಸಿಗೆ ಹೋಗುವುದು ಬೇರೆ ದೇವಸ್ಥಾನಕ್ಕೆ ಹೋಗುವುದು ಬೇರೆ ಎಂಬ ಭೈರಪ್ಪನವರ ಹೇಳಿಕೆಯನ್ನು ಗಮನಿಸಿದಾಗ ಭಾರತದ ಸಾಂಪ್ರದಾಯಿಕ ಮನಸ್ಸುಗಳು ಇನ್ನೂ ಒಂದು ಶತಮಾನದಷ್ಟು ಹಿಂದಿವೆ ಎನ್ನುವುದು ಸ್ಪಷ್ಟವಾಗುತ್ತದೆ. ನಾಲ್ಕೈದು ದಶಕಗಳ ಹಿಂದೆ ಮುಟ್ಟಾದ ಮಹಿಳೆಯರು ಕಚೇರಿಗೂ ಹೋಗುತ್ತಿರಲಿಲ್ಲ ಎನ್ನುವುದೂ ಸತ್ಯ ಅಲ್ಲವೇ? ಈಗಲೂ ಕೆಲವು ಮಹಿಳೆಯರು ತಮ್ಮ ಗಂಡನ ಅಥವಾ ಗಂಡನ ಕುಟುಂಬದವರ ಒತ್ತಡಕ್ಕೆ ಮಣಿದು ಆ ಮೂರು ದಿನಗಳು ಕಚೇರಿಗೆ ರಜೆ ಹಾಕುವುದನ್ನು ನಾನೇ ಕಂಡಿದ್ದೇನೆ. ಆದರೆ ಭಾರತದ ಮಹಿಳೆ ಮುನ್ನಡೆದಿದ್ದಾಳೆ. ಸ್ತ್ರೀ ಸಂವೇದನೆ ತನ್ನದೇ ಆದ ನೆಲೆಯನ್ನು ಸ್ಥಾಪಿಸಿದೆ. ಶಬರಿಮಲೆ ಈ ಸಾಂಸ್ಕೃತಿಕ ಅಸ್ಪಶ್ಯತೆಯನ್ನು ಧಿಕ್ಕರಿಸಲು ದೊರೆತ ಒಂದು ಅವಕಾಶ ಎಂದಷ್ಟೇ ಹೇಳಬಹುದು. ಆದರೆ ಈ ಒಂದು ಅವಕಾಶ ಸಂಪ್ರದಾಯದ ಬೇರುಗಳನ್ನು ಈ ಮಟ್ಟಿಗೆ ಅಲುಗಾಡಿಸಿದೆ ಎನ್ನುವುದು ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ವ್ಯಕ್ತವಾಗಿರುವುದು ವಿಡಂಬನೆಯೇ ಸರಿ.

ಕೊನೆಯದಾಗಿ ಹೇಳಲೇಬೇಕಾದ ಮಾತೊಂದಿದೆ. ಇಂತಹ ಸಂವಾದಗಳನ್ನು ಸ್ವಾಗತಿಸುವ ಮನೋಭಾವ ನಮ್ಮ ಸಾರ್ವಜನಿಕ ಜೀವನದಲ್ಲಿ ಕ್ರಮೇಣ ಮರೆಯಾಗುತ್ತಿದೆ. ಒಂದು ಪ್ರಬಲ ವರ್ಗ ಅಥವಾ ಸಾಂಸ್ಕೃತಿಕ ಆಧಿಪತ್ಯಕ್ಕಾಗಿ ಹೆಣಗಾಡುತ್ತಿರುವ ಒಂದು ಸಮಾಜ ವ್ಯಕ್ತಪಡಿಸುವ ಅಭಿಪ್ರಾಯವನ್ನು ವಿರೋಧಿಸುವುದಿರಲಿ, ಚರ್ಚೆಗೊಳಪಡಿಸುವುದೂ ಅಪರಾಧ ಎನ್ನುವಂತಹ ವಿಕೃತ ಮನಸ್ಥಿತಿ ಎದುರಾಗುತ್ತಿದೆ. ನಾಗರಿಕ ಸಂವೇದನೆಯನ್ನೇ ನಿರಾಕರಿಸುವ ಮಾತುಗಳನ್ನೂ ಪ್ರತಿರೋಧವಿಲ್ಲದೆ ಸ್ವೀಕರಿಸಬೇಕು ಎನ್ನುವ ದಾರ್ಷ್ಟ ಹೆಚ್ಚಾಗುತ್ತಿದೆ. ಈ ದಾರ್ಷ್ಟದ ಕುರಿತು ಇಂದು ಸಂವಾದ ಮುಂದುವರಿಯಬೇಕಿದೆ. ಇದು ಮತಧಾರ್ಮಿಕ ನಂಬಿಕೆಗಳು ಮತ್ತು ಮತೀಯವಾದದ ಬೇರುಗಳು ಗಟ್ಟಿಯಾಗುತ್ತಿರುವುದರ ಸಂಕೇತ ಎನ್ನುವುದನ್ನೂ ಮನಗಾಣಬೇಕಿದೆ. ಇದು ಕೇವಲ ಹಿಂದೂ ಮತೀಯವಾದಿಗಳಿಗೆ ಸೀಮಿತವಾಗಿಲ್ಲ. ಮುಸ್ಲಿಂ ಮತ್ತು ಕ್ರೈಸ್ತರಲ್ಲಿ ಈ ದಾರ್ಷ್ಟ ಮೊದಲಿನಿಂದಲೂ ಇದ್ದೇ ಇದೆ. ಭಾರತ ನಡೆಯುತ್ತಿರುವ ಹಾದಿಯಲ್ಲಿ ಈ ತಡೆಗೋಡೆಗಳನ್ನು ನಿರ್ನಾಮ ಮಾಡದಿದ್ದಲ್ಲಿ ಇಲ್ಲಿ ವಿಚಾರವಾದಿಗಳು ಮಾತ್ರ ಸಾಯುವುದಲ್ಲ, ವೈಚಾರಿಕ ನೆಲೆಯೂ ಛಿದ್ರವಾಗುತ್ತದೆ. ವೈಚಾರಿಕತೆಯ ಮೂಲ ಇರುವುದು ಮನುಜ ಸಂವೇದನೆಯಲ್ಲಿ, ವಿಚಾರವಾದದ ಉಸಿರು ಇರುವುದು ಮನುಕುಲದ ಮುನ್ನಡೆಯಲ್ಲಿ. ಈ ಎರಡೂ ಹೆಜ್ಜೆಗಳ ನಡುವೆ ಇರುವ ಮುಳ್ಳಿನ ಬೇಲಿಗಳನ್ನು ಕಿತ್ತೊಗೆಯುವುದು ಪ್ರಬುದ್ಧ ಮನಸ್ಸುಗಳ ಆದ್ಯತೆಯಾಗಬೇಕಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)