varthabharthi

ಅಂತಾರಾಷ್ಟ್ರೀಯ

ಫುಟ್ಬಾಲ್ ತಾರೆ ಮುಹಮ್ಮದ್ ಸಲಾಹ್ ಪ್ರಭಾವ: ಇಸ್ಲಾಂ ಸ್ವೀಕರಿಸಿದ ಇಸ್ಲಾಂ ದ್ವೇಷಿ

ವಾರ್ತಾ ಭಾರತಿ : 8 Oct, 2019

ಒಂದು ಕಾಲದಲ್ಲಿ ಇಸ್ಲಾಂ ದ್ವೇಷಿಯಾಗಿದ್ದ ಇಂಗ್ಲೆಂಡ್ ಪ್ರಜೆ, ನಾಟಿಂಗ್‍ ಹ್ಯಾಮ್ ಫಾರೆಸ್ಟ್ ಫುಟ್ಬಾಲ್ ತಂಡದ ಆಟಗಾರ ಬೆನ್ ಬರ್ಡ್, ತಾನು ಈಜಿಪ್ಟ್ ದೇಶದ ಫುಟ್ಬಾಲ್ ತಾರೆ ಮುಹಮ್ಮದ್ ಸಲಾಹ್ ಅವರಿಂದ ಪ್ರೇರಿತನಾಗಿ ಇಸ್ಲಾಂ ಧರ್ಮ ಸ್ವೀಕರಿಸಿದ್ದಾಗಿ ಹೇಳಿದ್ದಾರೆ.

"ನಾನು ಇಸ್ಲಾಂ ಧರ್ಮಕ್ಕೆ ನಿಷ್ಠನಾಗಿರುವುದಾಗಿ ಹೇಳಿಕೊಂಡರೂ ನಾನು ನಾನಾಗಿಯೇ ಇರಬಲ್ಲೆ, ಇದು ನಾನು ಮುಹಮ್ಮದ್ ಸಲಾಹ್ ಅವರಿಂದ ಕಲಿತೆ. ಕೇವಲ ಅವರ ಕೈಕುಲುಕಲು ಹಾಗೂ 'ಚಿಯರ್ಸ್' ಅಥವಾ 'ಶುಕ್ರಾನ್' ಎಂದು ಹೇಳಲು ಅವರನ್ನು ಭೇಟಿಯಾಗಲು ಇಚ್ಛಿಸುತ್ತೇನೆ'' ಎಂದು ಬೆನ್ ಬರ್ಡ್ 'ದಿ ಗಾರ್ಡಿಯನ್' ಜತೆ ಮಾತನಾಡುತ್ತಾ ಹೇಳಿದ್ದಾರೆ.

"ನಾನು ಮುಸ್ಲಿಮನಾಗಿದ್ದೇನೆಂದು ನನ್ನ ಸಹ ಆಟಗಾರರು ನಂಬುತ್ತಾರೆಂದು ನನಗನಿಸುವುದಿಲ್ಲ. ಏಕೆಂದರೆ ನಾನು ನಿಜವಾಗಿಯೂ ಬದಲಾಗಿಲ್ಲ. ನನ್ನ ಹೃದಯ ಈಗ ಚೆನ್ನಾಗಿದೆ ಎಂದು ನಾನು ಅಂದುಕೊಂಡಿದ್ದೇನೆ. ಪಂದ್ಯದ ದಿನಗಳಲ್ಲಿ  ನಾನು ನಿಜವಾಗಿಯೂ ಬದಲಾಗಲು ಯತ್ನಿಸುತ್ತಿದ್ದೇನೆ" ಎಂದು ಅವರು ಹೇಳಿದ್ದಾರೆ.

PHOTO: www.theguardian.com

"ಇದನ್ನು ಹೇಳಲು ನನಗೆ ಮುಜುಗರವಾಗುತ್ತಿದೆ. ಇಸ್ಲಾಂ, ಅದರ ಸಂಸ್ಕೃತಿ ಹಾಗೂ ಜನರು ಹಿಂದುಳಿದವರು, ಅವರು ಎಲ್ಲರ  ಜತೆ ಬೆರೆಯುವುದಿಲ್ಲ ಹಾಗೂ ಎಲ್ಲರನ್ನೂ ತಮ್ಮ ವಶಕ್ಕೆ ಪಡೆದುಕೊಳ್ಳಲು ಬಯಸುತ್ತಿದ್ದಾರೆಂಬ ಅಭಿಪ್ರಾಯವನ್ನು ನಾನು ಹೊಂದಿದ್ದೆ. ನಾನು ಯಾವತ್ತೂ ಮುಸ್ಲಿಮರನ್ನು ಕೋಣೆಯೊಳಗಿನ ಆನೆಯಂತೆ ನೋಡುತ್ತಿದ್ದೆ. ನನಗೆ ಮುಸ್ಲಿಮರ ಬಗ್ಗೆ ದ್ವೇಷವಿತ್ತು, ನಾನು ಆರನೇ ಗ್ರೇಡ್ ನಲ್ಲಿದ್ದಾಗ ನನ್ನ ದುರಾದೃಷ್ಟಕ್ಕೆ ಯಾರನ್ನಾದರೂ ದೂರಬೇಕೆಂದೆನಿಸಿತ್ತು, ಆಗ ನಾನು ಬಲಪಂಥೀಯ ಮಾಧ್ಯಮ ಪುಟಗಳನ್ನು ಕಂಡು ಹಿಡಿದೆ ಹಾಗೂ ಅವರಿಂದ ನನಗೆ ಉದ್ದುದ್ದ ಪ್ರಚಾರ  ಮಾಹಿತಿಗಳು ದೊರೆಯುತ್ತಿದ್ದವು. ಇಸ್ಲಾಂ ಬಗ್ಗೆ ಕೆಟ್ಟ ಅಭಿಪ್ರಾಯಗಳಿದ್ದರೂ ಅವುಗಳ ಬಗ್ಗೆ ಮುಸ್ಲಿಮರಲ್ಲಿ  ಹೇಳಲಿಲ್ಲ. ಆದರೆ ನನಗೆ ಹೆಚ್ಚು ಮುಸ್ಲಿಮರ ಪರಿಚಯವಿರಲಿಲ್ಲ. ಆದರೆ ಯುನಿವರ್ಸಿಟಿ ಆಫ್ ಲೀಡ್ಸ್ ನಲ್ಲಿ ಮಿಡ್ಲ್ ಈಸ್ಟರ್ನ್ ಸ್ಟಡೀಸ್ ನಲ್ಲಿ ಪದವಿಗಾಗಿ ಶಿಕ್ಷಣ ಪಡೆಯುತ್ತಿರುವ ವೇಳೆ ನನ್ನ ಥೀಸಿಸ್ ಗೆ ಏನಾದರೂ ಭಿನ್ನವಾಗಿ ಮಾಡಬೇಕೆಂದು ಅಂದುಕೊಂಡೆ. ನನ್ನ  ಡಿಸ್ಲೆಕ್ಸಿಯಾ ಶಿಕ್ಷಕ 'ಮುಹಮ್ಮದ್ ಸಲಾಹ್ ಅವರ ಹಾಡು ಏಕಾಗಬಾರದು?' ಎಂದು ಹೇಳಿದ್ದು ನೆನಪಿದೆ. ನನಗೆ ಅದು ತಿಳಿದಿತ್ತು ಹಾಗೂ ಉತ್ತಮ ಐಡಿಯಾ ಎಂದು ಅಂದುಕೊಂಡೆ"ಎಂದವರು ಹೇಳುತ್ತಾರೆ.

ಬರ್ಡ್ ಅವರ ರಿಸರ್ಚ್ ಪ್ರಾಜೆಕ್ಟ್ ಹೆಸರು `ಮುಹಮ್ಮದ್ ಸಲಾಹ್, ಎ ಗಿಫ್ಟ್ ಫ್ರಮ್ ಅಲ್ಲಾಹ್' ಇದು ಲಿವರ್ ಪೂಲ್ ಅಭಿಮಾನಿಗಳು ಹಾಡುವ ಹಾಡಾಗಿತ್ತು. ತಮ್ಮ ಸಂಶೋಧನೆ ಅಂಗವಾಗಿ ಅವರು ಈಜಿಪ್ಟ್ ವಿದ್ಯಾರ್ಥಿಗಳನ್ನು ಭೇಟಿಯಾಗಿ ಅವರ ಅಭಿಪ್ರಾಯ ಸಂಗ್ರಹಿಸಿದಾಗ  ಬರ್ಡ್ ಅವರಿಗೆ ಸಲಾಹ್ ಮೇಲಿದ್ದ ಅಭಿಮಾನ ಹಾಗೂ ಪ್ರೀತಿ ಹೆಚ್ಚಾಗುತ್ತಾ ಹೋಯಿತು. "ಅವರೆಷ್ಟು ಮಹಾನ್ ವ್ಯಕ್ತಿ ಹಾಗೂ ತಮ್ಮ ದೇಶಕ್ಕೆ ಅವರೇನು ಮಾಡಿದ್ದಾರೆ ಎಂದು ವಿದ್ಯಾರ್ಥಿಗಳು ಗಂಟೆಗಟ್ಟಲೆ ಮಾತನಾಡಿದ್ದರು. ಒಂದು ಮಿಲಿಯನ್ ಈಜಿಪ್ಟಿಗರು ಕಳೆದ ವರ್ಷ ಸಲಾಹ್ ಅಧ್ಯಕ್ಷರಾಗಬೇಕೆಂದು ಅವರಿಗೆ ಮತ ಹಾಕಿದರು. ಮುಸ್ಲಿಮನೊಬ್ಬ ಹೇಗಿರಬೇಕೆಂದು ಇಸ್ಲಾಂ ಧರ್ಮವನ್ನು ಕ್ರಮವಾಗಿ ಅನುಸರಿಸಿ ಸಲಾಹ್ ತೋರಿಸಿ ಕೊಟ್ಟಿದ್ದಾರೆ ಹಾಗೂ ಜನರು ಮತ್ತೆ ಮುಸ್ಲಿಮರನ್ನು ಪ್ರೀತಿಸುವಂತಾಗಲು ಸಲಾಹ್ ಕೆಲಸ ಮಾಡುತ್ತಿದ್ದಾರೆ ಎಂದು ಒಬ್ಬ ವಿದ್ಯಾರ್ಥಿ ಹೇಳಿದ'' ಎಂದು ಬರ್ಡ್ ನೆನಪಿಸಿಕೊಂಡಿದ್ದಾರೆ.

"ಅದು ನಿಜವಾಗಿಯೂ ನನಗೆ  ನಾಟಿತು. ಸಲಾಹ್ ಸ್ಕೋರ್ ಮಾಡಿದಾಗ ಅವರು  ಧರ್ಮಕ್ಕೆ ಸ್ಕೋರ್ ಮಾಡುತ್ತಿದ್ದಾರೆಂದು ನನಗನಿಸಿತು. ಅವರು ಚಾಂಪಿಯನ್ಸ್ ಲೀಗ್ ಗೆದ್ದಾಗ ಅದು ಇಸ್ಲಾಂ ಧರ್ಮದ ವಿಜಯ ಎಂದು ನಾನು ನನ್ನ ಸ್ನೇಹಿತನಿಗೆ ಹೇಳಿದೆ. ಪ್ರತಿಯೊಂದು ಗೋಲ್ ಬಾರಿಸಿದ ನಂತರ ಸಲಾಹ್ ಅವರು ಸುಜೂದ್ ಮೂಲಕ ಇಸ್ಲಾಂ ಧರ್ಮದ ದ್ಯೋತಕವನ್ನು ಜಗತ್ತಿಗೆ ತೋರಿಸುತ್ತಾರೆ. ಎಷ್ಟು ಜನರು ಪ್ರತಿ ವಾರ ಪ್ರೀಮಿಯರ್ ಲೀಗ್ ನೋಡುತ್ತಾರೆ? ಜಗತ್ತಿನಾದ್ಯಂತ ಮಿಲಿಯಗಟ್ಟಲೆ ಜನರು'' ಎಂದು ಬೆನ್ ಬರ್ಡ್ ಹೇಳಿದ್ದಾರೆ.

"ಅವರೊಬ್ಬ ಮಹಾನ್ ಆಟಗಾರ, ಫುಟ್ಬಾಲ್ ಜಗತ್ತು ಅವರನ್ನು ಹಾಗೂ ಅವರ ರಾಜಕಾರಣವನ್ನು ಗೌರವಿಸುತ್ತದೆ. ನಾನು ಇಸ್ಲಾಂ ಧರ್ಮಕ್ಕೆ ಹೊಸಬ ಹಾಗೂ ಈಗಲೂ ಕಲಿಯುತ್ತಿದ್ದೇನೆ. ಇದು ಜೀವನಶೈಲಿಯ ಬದಲಾವಣೆ. ಫುಟ್ಬಾಲ್ ಪಂದ್ಯಕ್ಕೆ ಹೋಗಲು ಭಯಪಡಬೇಡಿ ಎಂದು ಮುಸ್ಲಿಂ ಮಕ್ಕಳಿಗೆ ಹೇಳಬಯಸುತ್ತೇನೆ. ನಾನು ಪ್ರತ್ಯೇಕಿಸಲ್ಪಡುತ್ತೇನೆಯೇ ಎಂಬ ಭಯವಿತ್ತು,  ನಾನು ನನ್ನ ತಂಡದ ಸದಸ್ಯರನ್ನು ನನ್ನ ಸಹೋದರರಂತೆ ಕಾಣುವುದರಿಂದ ಅವರನ್ನು ಕಳೆದುಕೊಳ್ಳಲು ಬಯಸುವುದಿಲ್ಲ, ಈಗ ಜಗತ್ತಿನ ಐದನೇ ಒಂದಂಶದಷ್ಟು ಜನಸಂಖ್ಯೆ ನನ್ನ ಸಹೋದರ ಸಹೋದರಿಯರಾಗಿದ್ದಾರೆ. ಈ ಸಮುದಾಯ ಇನ್ನಷ್ಟು ವಿಸ್ತರಿಸಬೇಕು, ಫುಟ್ಬಾಲ್ ಆಡಬೇಕು, ಫುಟ್ಬಾಲ್ ಪಂದ್ಯಕ್ಕೆ ಹೋಗಬೇಕು. ನಾವೆಲ್ಲರೂ ಜತೆಯಾಗಿದ್ದೇವೆ ಎಂದು ಅರಿಯುವುದು ನಮಗೆ ಬಿಟ್ಟಿದ್ದು. ಇದಕ್ಕೆ ಮುಹಮ್ಮದ್ ಸಲಾಹ್ ಅತ್ಯುತ್ತಮ ವಕ್ತಾರನಾಗಬಹುದು'' ಎಂದು ಬೆನ್ ಬರ್ಡ್ ಹೇಳುತ್ತಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)