varthabharthi

ರಾಷ್ಟ್ರೀಯ

ಉದ್ಯೋಗ ನಷ್ಟ, ಉದ್ಯಮಗಳು ಮುಚ್ಚುತ್ತಿರುವುದನ್ನು ಒಪ್ಪಿಕೊಳ್ಳಿ: ಕೇಂದ್ರದ ವಿರುದ್ಧ ಉದ್ಧವ್ ಠಾಕ್ರೆ ಆಕ್ರೋಶ

ವಾರ್ತಾ ಭಾರತಿ : 8 Oct, 2019

  ಮುಂಬೈ, ಅ. 8: ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಮಂಗಳವಾರ ತೀವ್ರ ವಾಗ್ದಾಳಿ ನಡೆಸಿರುವ ಶಿವಸೇನೆ ವರಿಷ್ಠ ಉದ್ಧವ್ ಠಾಕ್ರೆ, ದೇಶದ ಪ್ರಸಕ್ತ ಆರ್ಥಿಕತೆ ನಿಧಾನಗತಿಯಲ್ಲಿ ಸಾಗುತ್ತಿದೆಯೋ, ಇಲ್ಲವೋ ಎಂಬುದನ್ನು ಆಮೇಲೆ ನೋಡೋಣ. ಆದರೆ, ಉದ್ಯಮಗಳು ಮುಚ್ಚುತ್ತಿರುವುದು ಹಾಗೂ ಉದ್ಯೋಗ ನಷ್ಟವಾಗುತ್ತಿರುವುದು ನಮಗೆ ಕಾಣುತ್ತಿದೆ. ಅದನ್ನು ನಾವು ಒಪ್ಪಿಕೊಳ್ಳೋಣ ಎಂದಿದ್ದಾರೆ.

‘ಸಾಮ್ನಾ’ದ ಸಂಪಾದಕ ಹಾಗೂ ಸೇನಾ ನಾಯಕ ಸಂಜಯ್ ರಾವತ್ ಅವರಿಗೆ ನೀಡಿದ ಎರಡನೆಯ ಹಾಗೂ ಅಂತಿಮ ಸಂದರ್ಶನದಲ್ಲಿ ಉದ್ಧವ್ ಠಾಕ್ರೆ ವಿವಿಧ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

ಮುಂಬೈ ಮೆಟ್ರೊ ಕಾಮಗಾರಿಗಾಗಿ ಆರೆ ಪ್ರದೇಶದಲ್ಲಿ ಮರಗಳನ್ನು ನಾಶ ಮಾಡುತ್ತಿರುವ ರಾಜ್ಯ ಸರಕಾರದ ಕ್ರಮವನ್ನು ಖಂಡಿಸಿರುವ ಠಾಕ್ರೆ, ಮರಗಳನ್ನು ನಾಶ ಮಾಡಿರುವುದಕ್ಕಾಗಿ ಅಧಿಕಾರಿಗಳು ಬೆಲೆ ತೆರಬೇಕಾಗುತ್ತದೆ ಎಂದರು.

ಇದೇ ವೇಳೆ ದ್ವೇಷ ರಾಜಕಾರಣ ಖಂಡಿಸಿದ ಠಾಕ್ರೆ, ರಾಜಕೀಯ ನಾಯಕರ ವಿರುದ್ಧ ಹಗೆತನ ಸಾಧಿಸಲು ಜಾರಿ ನಿರ್ದೇಶನಾಲಯ ಹಾಗೂ ಸಿಬಿಐಯನ್ನು ಬಳಸಬಾರದು ಎಂದರು.

ಎನ್‌ಸಿ ಪಕ್ಷದ ವರಿಷ್ಠ ಶರದ್ ಪವಾರ್ ಹಾಗೂ ಅವರ ಅಳಿಯ ಅಜಿತ್ ಪವಾರ್ ವಿರುದ್ಧ ಜಾರಿ ನಿರ್ದೇಶನಾಲಯದ ಕ್ರಮ ಉಲ್ಲೇಖಿಸಿದ ಠಾಕ್ರೆ, ಮಹಾರಾಷ್ಟ್ರದಲ್ಲಿ ದ್ವೇಷ ರಾಜಕಾರಣಕ್ಕೆ ಅವಕಾಶ ಇಲ್ಲ ಎಂದರು.

 ಸರಕಾರ ಪ್ರತೀಕಾರ ಹಾಗೂ ಹಗೆತನದ ಮನಸ್ಥಿತಿ ಹೊಂದಿದ್ದರೆ, ಅಧಿಕಾರ ಹಾಗೂ ಹಕ್ಕುಗಳನ್ನು ದುರುಪಯೋಗ ಮಾಡಿಕೊಳ್ಳಬಾರದು. ಯಾರೊಬ್ಬರೂ ಹಗೆತನದ ರಾಜಕಾರಣ ಮಾಡಬಾರದು. ಚುನಾವಣೆಗೆ ಮುನ್ನ ಈ ರೀತಿ ಯಾವುದನ್ನೂ ಮಾಡಬಾರದು ಎಂದು ಠಾಕ್ರೆ ಹೇಳಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)