varthabharthi

ರಾಷ್ಟ್ರೀಯ

ಬೈಕಿಗೆ ಕಾರು ಢಿಕ್ಕಿಯಾಗಿ ಮೂವರ ಸಾವು: ಉಮಾಭಾರತಿ ಸೋದರಳಿಯನ ವಿರುದ್ಧ ಪ್ರಕರಣ ದಾಖಲು

ವಾರ್ತಾ ಭಾರತಿ : 8 Oct, 2019

ಭೋಪಾಲ.ಅ.8: ಮಧ್ಯಪ್ರದೇಶದ ಬಿಜೆಪಿ ಶಾಸಕ ರಾಹುಲ್ ಸಿಂಗ್ ಲೋಧಿ ಅವರ ಕಾರು ಬೈಕಿಗೆ ಢಿಕ್ಕಿ ಹೊಡೆದು ಮೂವರು ಮೃತಪಟ್ಟಿರುವ ಘಟನೆ ಸೋಮವಾರ ತಿಕಮ್‌ಗಡ ಜಿಲ್ಲೆಯ ಪಪವಾನಿ ಗ್ರಾಮದ ಬಳಿ ನಡೆದಿದೆ. ಹಿರಿಯ ಬಿಜೆಪಿ ನಾಯಕಿ ಹಾಗೂ ಮಾಜಿ ಕೇಂದ್ರ ಸಚಿವೆ ಉಮಾ ಭಾರತಿಯವರ ಸೋದರಳಿಯನಾಗಿರುವ ಲೋಧಿ ವಿರುದ್ಧ ಪೊಲೀಸರು ಅತಿವೇಗ ಹಾಗೂ ಅಜಾಗ್ರತೆಯ ಚಾಲನೆಗಾಗಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಪ್ರತ್ಯಕ್ಷದರ್ಶಿಗಳು ಹೇಳಿರುವಂತೆ ಲೋಧಿ ಅವರ ಕಾರು ಬೈಕಿಗೆ ಡಿಕ್ಕಿ ಹೊಡೆದಿದ್ದು,ಮೂವರು ಮೃತಪಟ್ಟಿದ್ದಾರೆ ಎಂದು ತಿಕಮ್‌ಗಡ ಎಸ್‌ಪಿ ಅನುರಾಗ ಸುಜನಿಯಾ ಸುದ್ದಿಸಂಸ್ಥೆಗೆ ತಿಳಿಸಿದರು.

ಅಪಘಾತ ಸಂಭವಿಸಿದಾಗ ಲೋಧಿ ಕಾರಿನಲ್ಲಿದ್ದರೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಅಪಘಾತದ ಬಳಿಕ ಲೋಧಿ ಸ್ಥಳದಿಂದ ಪರಾರಿಯಾಗಿದ್ದರು ಎಂದು ಸ್ಥಳೀಯರು ಆರೋಪಿಸಿದ್ದು,ಅವರ ವಿರುದ್ಧ ಪ್ರಕರಣ ದಾಖಲಿಸಲು ಆಗ್ರಹಿಸಿದ್ದರು.

ತನ್ನ ವಾಹನವು ಅಪಘಾತವನ್ನುಂಟು ಮಾಡಿದ್ದನ್ನು ನಿರಾಕರಿಸಿರುವ ಲೋಧಿ,ಆ ಸಮಯದಲ್ಲಿ ತಾನು ಘಟನಾ ಸ್ಥಳದಿಂದ 20 ಕಿ.ಮೀ.ದೂರದ ಫುಟೇರ್ ಗ್ರಾಮದಲ್ಲಿದ್ದೆ. ತನ್ನನ್ನು ಕರೆದೊಯ್ಯಲು ಚಾಲಕ ಕಾರಿನೊಂದಿಗೆ ಬರುತ್ತಿದ್ದ ಮತ್ತು ಅಪಘಾತ ಸಂಭವಿಸಿದ ಸಂದರ್ಭ ಕಾರು ಆ ರಸ್ತೆಯಾಗಿ ಹಾದು ಹೋಗಿತ್ತು. ಎರಡು ರಿಕ್ಷಾಗಳು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ್ದನ್ನು ಚಾಲಕ ತನಗೆ ತಿಳಿಸಿದ್ದ ಮತ್ತು ತಾನು ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದೆ ಎಂದು ಹೇಳಿಕೊಂಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)