varthabharthi

ರಾಷ್ಟ್ರೀಯ

ಬ್ರೆಡ್ ಖರೀದಿಸಲು ಹೊರಬಂದ ಕಾಶ್ಮೀರಿ ಬಾಲಕನನ್ನು ಥಳಿಸಿ ಲಾಕಪ್ ನಲ್ಲಿಟ್ಟ ಪೊಲೀಸರು: ಆರೋಪ

ವಾರ್ತಾ ಭಾರತಿ : 8 Oct, 2019

ಶ್ರೀನಗರ, ಅ.8: ಬ್ರೆಡ್ ಖರೀದಿಸಲು ಅಂಗಡಿಗೆ ತೆರಳಿದ್ದ 9 ವರ್ಷದ ಬಾಲಕನಿಗೆ ಪೊಲೀಸರು ಅಮಾನುಷವಾಗಿ ಥಳಿಸಿ ಎರಡು ದಿನ ಲಾಕಪ್‌ನಲ್ಲಿ ಚಿತ್ರಹಿಂಸೆ ನೀಡಿದ್ದು ಈಗ ಬಾಲಕ ಖಿನ್ನತೆಗೆ ಒಳಗಾಗಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ. ಈ ಬಗ್ಗೆ telegraphindia.com ವರದಿ ಮಾಡಿದೆ.

4ನೇ ತರಗತಿ ವಿದ್ಯಾರ್ಥಿಯಾಗಿರುವ ಈತನ ತಾಯಿ ಮೃತಪಟ್ಟಿದ್ದು ತಂದೆ ತೊರೆದು ಹೋಗಿದ್ದಾನೆ. ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದ ಬಳಿಕ ನಿರ್ಬಂಧ ವಿಧಿಸಲಾಗಿದೆ. ಈ ಅವಧಿಯಲ್ಲಿ ಕನಿಷ್ಟ 144 ಅಪ್ರಾಪ್ತ ವಯಸ್ಸಿನವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಪೋಷಕರು ಆರೋಪಿದ್ದಾರೆ.

 ಆಗಸ್ಟ್ 7ರಂದು ಅಂಗಡಿಗೆ ತೆರಳಿ ಬ್ರೆಡ್ ತರುವಂತೆ ಬಾಲಕನ ಅಜ್ಜಿ ತಿಳಿಸಿದ ಕಾರಣ ಬಾಲಕ ಮನೆಯಿಂದ ಹೊರಬಿದ್ದಿದ್ದಾನೆ. ಈ ಸಂದರ್ಭ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು ಭದ್ರತಾ ಪಡೆಗಳ ಹಾಗೂ ಪ್ರತಿಭಟನಾಕಾರರ ಮಧ್ಯೆ ಸಂಘರ್ಷ ನಡೆದಿದೆ. ಆಗ ಪ್ರತಿಭಟನಾಕಾರರ ಜೊತೆ ತನ್ನನ್ನೂ ಪೊಲೀಸರು ಬಂಧಿಸಿದ್ದಾರೆ ಎಂದು ಬಾಲಕ ಹೇಳಿದ್ದಾನೆ.

ಬಂಧಿಸುವ ಮೊದಲು ತನ್ನ ಕೆನ್ನೆಗೆ ಪೊಲೀಸರು ಬಾರಿಸಿದಾಗ ರಕ್ತ ಸುರಿದಿದೆ. ಆದರೂ ಕರುಣೆ ತೋರದೆ ಸ್ಟೇಷನ್‌ಗೆ ಎಳೆದೊಯ್ದು ಎರಡು ದಿನ ಬಂಧಿಸಿಟ್ಟಿದ್ದಾರೆ ಎಂದು ಬಾಲಕ ದೂರಿದ್ದಾನೆ. ಮೊಮ್ಮಗ ಮನೆಯಿಂದ ಹೊರಹೋಗಲು ಕೇಳುತ್ತಿರಲಿಲ್ಲ. ಆದರೆ ಹಸಿವು ತಾಳಲಾರದೆ ಒಂದಿಷ್ಟು ಬ್ರೆಡ್ ತರುವಂತೆ ತಾನೇ ಒತ್ತಾಯ ಮಾಡಿ ಕಳಿಸಿದ್ದೆ ಎಂದು ಬಾಲಕನ ಅಜ್ಜಿ ತಿಳಿಸಿದ್ದಾರೆ. ಬಾಲಕನನ್ನು ಲಾಕಪ್‌ನಲ್ಲಿ ಕೂಡಿ ಹಾಕಿದ ವಿಷಯ ತಿಳಿಯುತ್ತಿದ್ದಂತೆಯೇ ಪತಿಯೊಂದಿಗೆ ಠಾಣೆಗೆ ತೆರಳಿದೆವು. ಆದರೆ ನಮ್ಮ ಮಾತನ್ನೇ ಕಿವಿಗೆ ಹಾಕಿಕೊಳ್ಳಲಿಲ್ಲ. ಠಾಣೆಯ ಹೊರಗೆ ರಾತ್ರಿ 2.30ರವರೆಗೂ ಕುಳಿತು ವಾಪಸಾದೆವು. ಮರುದಿನ ಮತ್ತೆ ಠಾಣೆಗೆ ಹೋದಾಗ , ಪ್ರತೀ ದಿನ ಬೆಳಿಗ್ಗೆ ಬಾಲಕನನ್ನು ಠಾಣೆಗೆ ಹಾಜರುಪಡಿಸಿ ಕರೆದೊಯ್ಯುವಂತೆ ಪೊಲೀಸರು ತಿಳಿಸಿದರು. ಆದರೆ ಆತ ಇನ್ನೂ ಚಿಕ್ಕವನೆಂದು ಹೇಳಿದಾಗ, 15 ಮಂದಿ ಸಾಕ್ಷಿಗಳನ್ನು ಕರೆತಂದು ಬಾಂಡ್ ಪೇಪರ್‌ಗೆ ಸಹಿ ಹಾಕುವಂತೆ ಸೂಚಿಸಿದರು. 20 ಸಾಕ್ಷಿಗಳನ್ನು ಹಾಜರುಪಡಿಸಿದಾಗ ಮೊಮ್ಮಗನನ್ನು ಬಂಧಮುಕ್ತಗೊಳಿಸಿದ್ದಾರೆ. ಆದರೆ ಅಂದಿನಿಂದ ಆತ ಯಾವುದರಲ್ಲೂ ಆಸಕ್ತಿ ಇಲ್ಲದವನಂತೆ ಖಿನ್ನತೆಗೆ ಜಾರಿದ್ದಾನೆ ಎಂದು ಬಾಲಕನ ಅಜ್ಜಿ ಹೇಳಿದ್ದಾರೆ.

ಆದರೆ ಇದನ್ನು ನಿರಾಕರಿಸಿರುವ ಪೊಲೀಸರು, ಕಾನೂನಿನೊಂದಿಗೆ ಹೋರಾಟಕ್ಕಿಳಿದಿರುವ ಯಾವುದೇ ಬಾಲಕನನ್ನೂ ಪೊಲೀಸರು ಬಂಧಿಸಿಲ್ಲ. ಒಂದು ವೇಳೆ ಬಂಧಿಸಿದ್ದರೂ ಅಂತವರನ್ನು ಸಂಬಂಧಿಸಿದ ಬಾಲ ನ್ಯಾಯಮಂಡಳಿಯ ಆದೇಶದನ್ವಯ ವೀಕ್ಷಣಾ ಗೃಹದಲ್ಲಿಡಲಾಗುತ್ತದೆ ಎಂದಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)