varthabharthi

ಸಂಪಾದಕೀಯ

ಬಯಲು ಶೌಚ ಮುಕ್ತ ಭಾರತ: ಹೀಗೊಂದು ಅಣಕ

ವಾರ್ತಾ ಭಾರತಿ : 9 Oct, 2019

ಸ್ವಚ್ಛತಾ ಆಂದೋಲನಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಿದ ಸಂದರ್ಭದಲ್ಲಿ, ಗಾಂಧೀಜಿಯ 150ನೇ ಜಯಂತಿಯ ಹೊತ್ತಿಗೆ ದೇಶ ಬಯಲು ಶೌಚ ಮುಕ್ತವಾಗುತ್ತದೆ ಎಂದು ಘೋಷಿಸಿದ್ದರು. ಈ ಹಿಂದೆ ಯಾರೂ ಸ್ವಚ್ಛತೆಗೆ ಆದ್ಯತೆಯೇ ನೀಡಿಲ್ಲವೋ ಎಂಬಂತೆ ಅದ್ದೂರಿಯಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಸ್ವತಃ ಪ್ರಧಾನಿಯೇ ಕಸಬರಿಕೆ ಹಿಡಿದು ಬೀದಿ ಗುಡಿಸಿದರು. ್ರಪ್ರಥಮ ಬಾರಿಗೆ ಸ್ವಚ್ಛತಾ ಆಂದೋಲನದ ಹೆಸರಿನಲ್ಲಿ ತೆರಿಗೆ ವಸೂಲಿ ಮಾಡಲಾಯಿತು. ಶೌಚಾಲಯಗಳ ಅಂಕಿಸಂಖ್ಯೆಗಳನ್ನು ಆಗಾಗ ಕೇಂದ್ರ ಸಚಿವರು ಮಾಧ್ಯಮಗಳಲ್ಲಿ ಹರಿಯಬಿಟ್ಟರು. ಎಲ್ಲ ಸರಿಯಾಗಿದ್ದರೆ, ಕಳೆದ ಅಕ್ಟೋಬರ್ 2ರಂದು ಈ ದೇಶವನ್ನು ನರೇಂದ್ರ ಮೋದಿಯವರು ‘ಬಯಲು ಶೌಚ ಮುಕ್ತ ಭಾರತ’ ಎಂದು ಘೋಷಿಸಬೇಕಾಗಿತ್ತು. ಇಡೀ ದೇಶ ಈ ಘೋಷಣೆಯ ನಿರೀಕ್ಷೆಯಲ್ಲಿತ್ತು. ಆದರೆ ಗಾಂಧಿ ಜಯಂತಿಯ ದಿನ ಮೋದಿಯವರ ಹೇಳಿಕೆ ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತಿತ್ತು. ಅವರು ಅಧಿಕೃತವಾಗಿ ಶೌಚಮುಕ್ತ ಭಾರತವನ್ನು ಘೋಷಿಸಲಿಲ್ಲ. ಬದಲಿಗೆ ‘ಗ್ರಾಮೀಣ ಭಾರತ ಮತ್ತು ಅದರ ಗ್ರಾಮಗಳು ಸ್ವತಃ ಬಯಲು ಶೌಚ ಮುಕ್ತ ಎಂದು ಘೋಷಿಸಿಕೊಂಡಿವೆ’ ಎಂದು ಹೇಳಿದರು.

ಗ್ರಾಮಗಳು ಹಾಗೆ ಹೇಳಿಕೊಳ್ಳುತ್ತಿವೆ ಎಂದು ವಿದೇಶಗಳಲ್ಲಿ ಓಡಾಡುತ್ತಿರುವ ಪ್ರಧಾನಿ ಮೋದಿಯವರಿಗೆ ತಿಳಿದದ್ದು ಹೇಗೆ ಎನ್ನುವ ವಿವರ ಇನ್ನೂ ಬಹಿರಂಗವಾಗಿಲ್ಲ. ಗ್ರಾಮಗಳು ಸ್ವತಃ ಹೇಳಿಕೊಳ್ಳುತ್ತಿವೆ ಎನ್ನುವುದರ ಅರ್ಥವೇನು? ಸರಕಾರದ ಅಂಕಿಅಂಶಗಳು ಏನು ಹೇಳುತ್ತವೆ? ಎನ್ನುವುದನ್ನು ಅವರೇಕೆ ಬಹಿರಂಗ ಪಡಿಸಿಲ್ಲ? ಸ್ವಚ್ಛತಾ ಆಂದೋಲನದ ಹೆಸರಿನಲ್ಲಿ ಬಿಡುಗಡೆಗೊಂಡ ಸಾವಿರಾರು ಕೋಟಿ ರೂಪಾಯಿಗಳು ಎಲ್ಲಿ ಹೋದವು? ಎಲ್ಲವನ್ನೂ ಬರೀ ಜಾಹೀರಾತುಗಳಿಗಾಗಿಯೇ ವ್ಯಯ ಮಾಡಲಾಯಿತೇ? ಅಥವಾ ನಗರ, ಗ್ರಾಮಗಳನ್ನು ನಿಜವಾದ ಅರ್ಥದಲ್ಲಿ ಸ್ವಚ್ಛ ಮಾಡುವ ಪೌರ ಕಾರ್ಮಿಕರಿಗೆ ತಲುಪಬೇಕಾದ ನಿಧಿಯನ್ನು, ಅಧಿಕಾರಿಗಳು ಲಪಟಾಯಿಸಿದರೇ? ತನಿಖೆ ನಡೆದರೆ, ಈ ದೇಶದ ಸ್ವಚ್ಛತಾ ಆಂದೋಲನವೇ ಬಹುದೊಡ್ಡ ಹಗರಣವಾಗಿ ಗುರುತಿಸಲ್ಪಡುವ ಸಾಧ್ಯತೆಯಿದೆ.

ಮೋದಿಯವರ ಬಯಲು ಶೌಚ ಮುಕ್ತ ಆಂದೋಲನದ ಸಮಾರೋಪ ಅತ್ಯಂತ ಕ್ರೂರ ರೀತಿಯಲ್ಲಿ ಅಕ್ಟೋಬರ್ 3ರಂದು ನಡೆಯಿತು. ಗ್ರಾಮಗಳೆಲ್ಲ ಸ್ವತಃ ಬಯಲು ಶೌಚ ಮುಕ್ತವಾಗಿದೆ ಎಂದು ಮೋದಿ ಹೇಳಿದ ಮರುದಿನ, ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಬಯಲಿನಲ್ಲಿ ಶೌಚ ಮಾಡುತ್ತಿದ್ದ ಒಂದೂವರೆ ವರ್ಷದ ದಲಿತ ಮಗುವನ್ನು ಮೇಲ್ಜಾತಿಯ ಜನರು ಬರ್ಬರವಾಗಿ ಥಳಿಸಿ ಕೊಂದಿದ್ದಾರೆ. ಕಚ್ಚಾ ಗುಡಿಸಲೊಂದರಲ್ಲಿ ಆ ಮಗುವಿನ ಕುಟುಂಬ ಬದುಕುತ್ತಿತ್ತು. ಆ ಮಗುವಿನ ಮನೆಯಲ್ಲಿ ಶೌಚಾಲಯವೇ ಇದ್ದಿರಲಿಲ್ಲ. ಅಷ್ಟೇ ಅಲ್ಲ, ಆ ಗ್ರಾಮದಲ್ಲಿ ಬಹುತೇಕ ದಲಿತರ ಮನೆಗಳಲ್ಲಿ ಶೌಚಾಲಯಗಳಿಲ್ಲ. ಹಾಗಾದರೆ, ಮೋದಿ ಬಡವರಿಗಾಗಿ ಶೌಚಾಲಯಗಳಿಗೆ ಬಿಡುಗಡೆಯಾದ ಹಣ ಯಾರ ಜೇಬನ್ನು ಸೇರಿತು? ಮುಖ್ಯವಾಗಿ ವಾಸಿಸುವುದಕ್ಕೆ ಸರಿಯಾದ ಮನೆಗಳೇ ಇಲ್ಲದ ಜನರಲ್ಲಿ ಶೌಚಾಲಯಗಳನ್ನು ನಾವು ನಿರೀಕ್ಷಿಸುವುದಾದರೂ ಹೇಗೆ? ಅಂದಹಾಗೆ ದಲಿತ ಮಗುವಿನ ಹತ್ಯೆ ಒಂದು ಆಕಸ್ಮಿಕ ಖಂಡಿತ ಅಲ್ಲ. ಯಾಕೆಂದರೆ ಈ ಹಿಂದೆಯೂ ಇಂತಹದೇ ಘಟನೆಗಳು ಮಧ್ಯ ಪ್ರದೇಶದಲ್ಲಿ ನಡೆದಿವೆ. ಇಲ್ಲಿನ ಶಿವಪುರಿ ಜಿಲ್ಲೆಯ ಗ್ರಾಮವೊಂದರಲ್ಲಿ ಹತ್ತು ವರ್ಷ ವಯಸ್ಸಿನ ಇಬ್ಬರು ಮಕ್ಕಳನ್ನು ಬಯಲು ಶೌಚ ಮಾಡಿದ ಕಾರಣಕ್ಕಾಗಿ ಮೇಲ್ಜಾತಿಯ ಜನರು ಥಳಿಸಿ ಕೊಂದಿದ್ದಾರೆ. ಈ ಗ್ರಾಮದಲ್ಲೂ ಬಯಲು ಶೌಚ ಸಾಮಾನ್ಯವಾಗಿದೆ. ಈ ಘಟನೆ ಪ್ರಧಾನಿ ಮೋದಿಯ ಕಿವಿಗೆ ಬಿದ್ದಿದ್ದರೆ, ಅಥವಾ ಮಾಧ್ಯಮಗಳ ಮೂಲಕವಾದರೂ ತಿಳಿದುಕೊಂಡಿದ್ದಿದ್ದರೆ ಅಕ್ಟೋಬರ್ 2ರಂದು ‘ಶೌಚಮುಕ್ತ ಭಾರತ’ದ ಕುರಿತಂತೆ ಅವರು ಹೇಳಿಕೆಗಳನ್ನು ನೀಡುತ್ತಿರಲಿಲ್ಲವೇನೋ. ವಿಪರ್ಯಾಸವೆಂದರೆ, ಶೌಚದ ಹೆಸರಿನಲ್ಲಿ ಎರಡೆರಡು ಕಾರಣಗಳಿಗಾಗಿ ದಲಿತರು ಬಲಿಯಾಗುತ್ತಿರುವುದು. ದಲಿತರು ಮುಟ್ಟಿದರೇ ಮಲಿನವಾಗುತ್ತದೆ ಎಂದು ಭಾವಿಸುವವರು ‘ಮೇಲ್ವರ್ಣೀಯರು ಶೌಚ ಮಾಡುವ ಬಯಲ’ಲ್ಲಿ ದಲಿತರು ಶೌಚ ಮಾಡುವುದನ್ನು ಸಹಿಸುವುದು ಕಷ್ಟ. ಈ ಕಾರಣಕ್ಕಾಗಿಯೇ ಬಯಲು ಶೌಚದ ಕಾರಣಕ್ಕಾಗಿ ನಿರ್ದಿಷ್ಟವಾಗಿ ದಲಿತರ ಮೇಲೆಯೇ ದಾಳಿಗಳು ನಡೆಯುತ್ತಿರುವುದು.

ಬಹುಶಃ ಬಯಲು ಶೌಚ ಮುಕ್ತ ಭಾರತವೆಂದರೆ, ದಲಿತರನ್ನು ಮುಕ್ತರನ್ನಾಗಿಸುವುದು ಎಂದೇ ಪ್ರಧಾನಿಯ ಅನುಯಾಯಿಗಳು ಭಾವಿಸಿರಬೇಕು. ಇನ್ನೊಂದು ಅಂಶವನ್ನು ನಾವು ಗಮನಿಸಬೇಕು. ಇಂದು ಈ ದೇಶದ ಶುಚಿತ್ವ ಆಂದೋಲನದಲ್ಲಿ ದೊಡ್ಡ ಪಾಲಿರುವುದು ದಲಿತರದು. ಈ ದೇಶದ ಬೀದಿಗಳನ್ನು, ಚರಂಡಿಗಳನ್ನು, ಮಲದ ಗುಂಡಿಗಳನ್ನು ಶುಚಿಗೊಳಿಸಲು ಬಳಸುತ್ತಿರುವುದು ದಲಿತ ಸಮುದಾಯಕ್ಕೆ ಸೇರಿದ ಕಾರ್ಮಿಕರನ್ನು. ಪೌರಕಾರ್ಮಿಕರಲ್ಲಿ ಅತ್ಯಧಿಕ ಸಂಖ್ಯೆಯಲ್ಲಿರುವುದು ದಲಿತರೇ ಆಗಿದ್ದಾರೆ. ಮಲದ ಗುಂಡಿಗಳನ್ನು ಶುಚಿಗೊಳಿಸುವುದಕ್ಕಾಗಿಯೇ ಈ ದೇಶ ‘ಭಂಗಿ’ ಎನ್ನುವ ಜಾತಿಯನ್ನು ಸೃಷಿಸಲಾಗಿದೆ. ಒಂದೆಡೆ ದಲಿತರಿಗೆ ಈ ದೇಶದಲ್ಲಿ ಶೌಚ ಮಾಡುವ ಹಕ್ಕಿಲ್ಲ. ಹಾಗೇನಾದರೂ ತಪ್ಪಿ ಮಾಡಿದ್ದೇ ಆದರೆ ಅವರನ್ನು ಥಳಿಸಿ ಕೊಂದು ಹಾಕಲಾಗುತ್ತದೆ. ಇದೇ ಸಂದರ್ಭದಲ್ಲಿ ಇನ್ನೊಬ್ಬರ ಶೌಚಗಳನ್ನು ಶುಚಿ ಮಾಡಲು ಹೋಗಿ ಮಲದ ಗುಂಡಿಯಲ್ಲಿ ಅದೇ ದಲಿತರು ಸಾಯಬೇಕಾಗುತ್ತದೆ. ಇದು ಈ ದೇಶದ ವಿಪರ್ಯಾಸ. ಸುಪ್ರೀಂಕೋರ್ಟ್ ಮಲದ ಗುಂಡಿಗಳನ್ನು ‘ಗ್ಯಾಸ್ ಚೇಂಬರ್’ ಎಂದು ಕರೆದಿದೆ. ಮ್ಯಾನ್‌ಹೋಲ್‌ಗಳು ಮತ್ತು ಮಲಗುಂಡಿಗಳಲ್ಲಿ ವಿಷಾನಿಲಗಳು ಇರುತ್ತವೆ ಮತ್ತು ಅದರಿಂದಾಗಿ ಬಹಳಷ್ಟು ಸಾವುಗಳು ಸಂಭವಿಸಿವೆ ಎನ್ನುವುದು ಗೊತ್ತಿದ್ದೂ ಈ ದೇಶ ಮತ್ತೆ ಮತ್ತೆ ಮ್ಯಾನ್‌ಹೋಲ್‌ಗಳಿಗೆ ಯಾವ ರಕ್ಷಾ ಕವಚಗಳನ್ನೂ ಒದಗಿಸದೆ ದಲಿತ ಕಾರ್ಮಿಕರನ್ನು ಇಳಿಸುತ್ತದೆ ಎಂದರೆ, ಇದನ್ನು ‘ದಲಿತರ ಸಾಮೂಹಿಕ ಹತ್ಯಾಕಾಂಡ’ವೆಂದೇ ನಾವು ಭಾವಿಸಬೇಕಾಗುತ್ತದೆ.

ಮಲದ ಗುಡಿ ಮತ್ತು ಮ್ಯಾನ್‌ಹೋಲ್‌ಗಳು ಈ ದೇಶದ ದಲಿತರಿಗೆ ಮೋಕ್ಷವನ್ನು ನೀಡಲು ಶತಶತಮಾನಗಳಿಂದ ನಮ್ಮ ವ್ಯವಸ್ಥೆ ಸೃಷ್ಟಿಸಿದ ಗ್ಯಾಸ್ ಚೇಂಬರ್ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಈ ದೇಶ ಬಯಲು ಶೌಚ ಮುಕ್ತವಾಗಿದೆ ಎಂದು ಹೇಳುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಧ್ಯಪ್ರದೇಶದಲ್ಲಿ ಬಯಲು ಶೌಚ ಮಾಡಿದ ಕಾರಣಕ್ಕಾಗಿ ಮೃತಪಟ್ಟ ಮೂವರು ದಲಿತ ಮಕ್ಕಳ ಸಾವನ್ನು ಅಣಕ ಮಾಡಿದ್ದಾರೆ. ಜೊತೆಗೆ ಸ್ವಚ್ಛತಾ ಆಂದೋಲನದ ಸೋಲನ್ನು ಮುಚ್ಚಿ ಹಾಕುವ ಪ್ರಯತ್ನವನ್ನು ಮಾಡಿದ್ದಾರೆ. ಅಷ್ಟೇ ಅಲ್ಲ ಬಯಲು ಶೌಚ ಮುಕ್ತ ಗ್ರಾಮಗಳ ನಕಲಿ ಪಟ್ಟಿಗಳನ್ನು ಸೃಷ್ಟಿಸುವ ಪ್ರಯತ್ನವೂ ನಡೆಯುತ್ತಿರುವುದರ ಕುರಿತಂತೆ ಇತ್ತೀಚೆಗೆ ‘ದಿ ವೈರ್’ ವೆಬ್ ಸೈಟ್ ತನಿಖಾವರದಿಯೊಂದನ್ನು ಪ್ರಕಟಿಸಿತ್ತು. ಈ ದೇಶದ ಸ್ವಚ್ಛತಾ ಆಂದೋಲನದ ಒಳಗಿರುವ ಮಾಲಿನ್ಯಗಳು ಬಹಿರಂಗವಾಗಬೇಕಾದರೆ, ಈ ಬಗ್ಗೆ ಗಂಭೀರ ತನಿಖೆ ನಡೆಯಬೇಕಾಗಿದೆ. ಆದರೆ ಎಲ್ಲ ತನಿಖಾ ಸಂಸ್ಥೆಗಳೂ ಸರಕಾರ ತೋಡಿರುವ ಮಲದ ಗುಂಡಿಯಲ್ಲಿ ಬಿದ್ದು ಹೊರಳಾಡುತ್ತಿರುವಾಗ, ತನಿಖೆ ಸತ್ಯವನ್ನು ಬಹಿರಂಗ ಪಡಿಸಿ ಆರೋಪಿಗಳಿಗೆ ಶಿಕ್ಷೆ ನೀಡೀತು ಎಂದು ನಂಬುವುದು ಕಷ್ಟ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)